
ನುಗ್ಗೆಕಾಯಿ (Drumstick) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿರಬಹುದು. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಮಾತ್ರವಲ್ಲ, ಇದರಲ್ಲಿ ಹೇರಳವಾಗಿರುವ ಪೋಷಕಾಂಶಗಳು ಅನೇಕ ರೋಗಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ. ನುಗ್ಗೆಕಾಯಿಯಲ್ಲಿ ಪ್ರೋಟೀನ್, ವಿಟಮಿನ್ ಎ, ಸಿ, ಬಿ- ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ನಿಂದ ಸಮೃದ್ಧವಾಗಿದ್ದು ಇವೆಲ್ಲವೂ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ನಿಮಗೆ ಗೊತ್ತಿರಲಿ ಕೇವಲ ಈ ತರಕಾರಿ ಮಾತ್ರವಲ್ಲ, ನುಗ್ಗೆಕಾಯಿಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಆ ನೀರು ಅಥವಾ ರಸವನ್ನು ಕುಡಿಯುವುದರಿಂದಲೂ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದು. ಈ ನೀರು ನಿಮ್ಮ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ. ಒಂದು ರೀತಿ, ನುಗ್ಗೆಕಾಯಿ ಮರದ ಎಲ್ಲಾ ಭಾಗಗಳು ಕೂಡ ಆರೋಗ್ಯ ಪ್ರಯೋಜನಗಳಿಂದ ಹೇರಳವಾಗಿದೆ ಎಂದರೆ ತಪ್ಪಾಗಲಾರದು. ಹಾಗಾದರೆ ನುಗ್ಗೆಕಾಯಿ ನೀರನ್ನು ಕುಡಿಯುವುದರಿಂದಾಗುವ ಪ್ರಯೋಜನಗಳೇನು, ಯಾರಿಗೆಲ್ಲಾ ಒಳ್ಳೆಯದು, ಯಾಕೆ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.
ನುಗ್ಗೆಕಾಯಿ ನೀರು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್‌ಗಳು ದೇಹಕ್ಕೆ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಒದಗಿಸುತ್ತವೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ರೀತಿಯ ಕಾಯಿಲೆಗಳು ಬರುವುದನ್ನು ತಡೆದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.
ನುಗ್ಗೆಕಾಯಿ ನೀರು ಫೈಬರ್ ಮತ್ತು ಆಯುರ್ವೇದ ಗುಣಗಳನ್ನು ಹೊಂದಿರುತ್ತವೆ. ಅವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತವೆ. ಇದರ ನೀರು ಕರುಳಿನಲ್ಲಿರುವ ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮಾತ್ರವಲ್ಲ, ಮಲಬದ್ಧತೆಯ ಸಮಸ್ಯೆಯಿಂದಲೂ ಮುಕ್ತಿ ನೀಡುತ್ತದೆ. ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸಿ ಹೊಟ್ಟೆ ಹಗುರವಾಗುವಂತೆ ಮಾಡುತ್ತದೆ.
ಇದನ್ನೂ ಓದಿ: ಬೆಳಗಿನ ದಿನಚರಿಯಲ್ಲಿ ಈ ರೂಲ್ಸ್‌ಗಳನ್ನು ಪಾಲಿಸಿದ್ರೆ ನೀವು ಫಿಟ್ ಆ್ಯಂಡ್ ಹೆಲ್ತಿಯಾಗಿರಬಹುದು
ನುಗ್ಗೆಕಾಯಿ ನೀರಿಗೆ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುವ ಶಕ್ತಿ ಇರುವುದರಿಂದ ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿಯುವುದರಿಂದ ಬಹುಬೇಗ ತೂಕ ಕಡಿಮೆ ಮಾಡಿಕೊಳ್ಳಬಹುದು.
ನುಗ್ಗೆಕಾಯಿ ನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಗುಣಲಕ್ಷಣಗಳು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ ಇದು ಮಧುಮೇಹವನ್ನು ನಿಯಂತ್ರಿಸಲು ಕೂಡ ಸಹಕಾರಿಯಾಗಿದ್ದು ಪ್ರತಿದಿನ ಕುಡಿಯುವುದು ಬಹಳ ಪ್ರಯೋಜನಕಾರಿಯಾಗಿದೆ.
ನುಗ್ಗೆಕಾಯಿ ನೀರಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಈ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಚರ್ಮ ಮತ್ತು ಕೂದಲಿನ ಆರೋಗ್ಯ ಚೆನ್ನಾಗಿರುತ್ತದೆ. ಈ ನೀರು ಚರ್ಮದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುವುದಲ್ಲದೆ ಕೂದಲಿನ ಬೇರುಗಳನ್ನು ಚೆನ್ನಾಗಿ ಪೋಷಿಸುತ್ತದೆ. ಇದರ ನಿಯಮಿತ ಸೇವನೆಯು ನಿಮ್ಮ ಚರ್ಮದ ಹೊಳಪಿಗೆ ಮತ್ತು ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ.
3 ರಿಂದ 4 ತಾಜಾ ನುಗ್ಗೆ ದಂಟುಗಳನ್ನು ತೆಗದುಕೊಳ್ಳಿ. ಅದನ್ನು 2 ರಿಂದ 3 ಗ್ಲಾಸ್ ನೀರಿಗೆ ಹಾಕಿ10 ರಿಂದ 15 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿಕೊಳ್ಳಿ. ಬಳಿಕ ನೀರನ್ನು ಸೋಸಿ. ಬೆಳಿಗ್ಗೆ ಅಥವಾ ಸಂಜೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಸೇವಿಸಬಹುದು. ನುಗ್ಗೆಕಾಯಿ ನೀರು ನೈಸರ್ಗಿಕವಾಗಿದ್ದು ಆರೋಗ್ಯ ಸಮಸ್ಯೆಗಳಿಂದ ಸರಳವಾಗಿ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ