
ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ. ಅದಕ್ಕಾಗಿಯೇ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡು ಅನಾರೋಗ್ಯದಿಂದ ದೂರವಿರಲು ದಿನನಿತ್ಯ ಹಲವಾರು ರೀತಿಯ ಆಹಾರಗಳನ್ನು ಸೇವನೆ ಮಾಡುತ್ತೇವೆ. ಅವುಗಳಲ್ಲಿ ಅರಿಶಿನವು (Turmeric) ಒಂದು. ಇದನ್ನು ವ್ಯಾಪಕವಾಗಿ ಆಹಾರದಲ್ಲಿ ಬಳಕೆ ಮಾಡಲಾಗುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ (curcumin) ಅಂಶ ಅನೇಕ ರೀತಿಯ ರೋಗಗಳನ್ನು ಗುಣಪಡಿಸುತ್ತದೆ, ಅದಕ್ಕಾಗಿಯೇ ಇದನ್ನು ಚಿನ್ನದ ತೂಕವಿರುವ ಮಸಾಲೆ ಎನ್ನಲಾಗುತ್ತದೆ. ಆದರೆ ಕೆಲವರಿಗೆ ಈ ಅರಿಶಿನವನ್ನು ಯಾವ ರೀತಿ ಸೇವನೆ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಕೆಲವರು ಅರಿಶಿನವನ್ನು ಹಾಲಿನೊಂದಿಗೆ, ಇನ್ನು ಕೆಲವರು ನೀರಿನೊಂದಿಗೆ ಬೆರೆಸಿ ಕುಡಿಯುತ್ತಾರೆ. ಆದರೆ ಯಾವುದು ಹೆಚ್ಚು ಒಳ್ಳೆಯದು, ಇವುಗಳಿಂದ ಸಿಗುವ ಪ್ರಯೋಜನ, ಹೀಗೆ ಈ ಬಗೆಗಿನ ಮತ್ತಷ್ಟು ಮಾಹಿತಿ ಈ ಸ್ಟೋರಿಯಲ್ಲಿದೆ.
ಆರೋಗ್ಯ ತಜ್ಞರು ಹೇಳುವಂತೆ ಅಡುಗೆ ಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಅರಿಶಿನದಲ್ಲಿ ಹಲವಾರು ರೀತಿಯ ಆರೋಗ್ಯಕರ ಗುಣಗಳಿದ್ದು ಅನಾರೋಗ್ಯದಿಂದ ನಮ್ಮನ್ನು ದೂರವಿಡಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಹೃದಯವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಯಸ್ಸಾಗುವಿಕೆ ಮತ್ತು ಬೊಜ್ಜುತನಕ್ಕೆ ಸಂಬಂಧಿಸಿದ ಹೃದ್ರೋಗಗಳ ಅಪಾಯವನ್ನು ಕೂಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅನೇಕ ಅಧ್ಯಯನಗಳಿಂದಲೂ ಸಾಬೀತಾಗಿದೆ. ಹೆಚ್ಚುವರಿಯಾಗಿ, ಕರ್ಕ್ಯುಮಿನ್ ಮೆದುಳಿನ ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಉರಿಯೂತವನ್ನು ತಡೆಯುವುದಲ್ಲದೆ, ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಲ್ಲದೆ ರುಮಟಾಯ್ಡ್ ಸಂಧಿವಾತದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಆರೋಗ್ಯ ತಜ್ಞರ ಪ್ರಕಾರ ತೂಕ ಇಳಿಸಿಕೊಳ್ಳಲು ಬಯುಸುವವರಿಗೆ ಅರಿಶಿನ ಹಾಲು ಮತ್ತು ಅರಿಶಿನದ ನೀರು ಎರಡೂ ಕೂಡ ಪ್ರಯೋಜನಕಾರಿಯಾಗಿದೆ. ಆದರೆ ಅವುಗಳಿಂದ ಸಿಗುವ ಫಲಿತಾಂಶ ಮಾತ್ರ ವಿಭಿನ್ನವಾಗಿರುತ್ತದೆ.
ಅರಿಶಿನ ನೀರು: ನೀವು ತೂಕ ಇಳಿಸಿಕೊಳ್ಳಲು ಅಥವಾ ದೇಹದಿಂದ ವಿಷ ಹೊರಹಾಕಿ ನಿರ್ವಿಷಗೊಳಿಸಲು ಬಯಸಿದರೆ, ಅರಿಶಿನ ನೀರನ್ನು ಸೇವಿಸುವುದು ಉತ್ತಮ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿನ ನೀರನ್ನು ಕುಡಿಯುವುದು ದೇಹಕ್ಕೆ ಬಹಳ ಒಳ್ಳೆಯದು. ತಾಜಾ ಅರಿಶಿನವನ್ನು ನೀರಿಗೆ ಸೇರಿಸಿ, ಚೆನ್ನಾಗಿ ಕುದಿಸಿ, ನೀರು ಸ್ವಲ್ಪ ಬೆಚ್ಚಗಾದ ಮೇಲೆ ಕುಡಿಯಬಹುದು ಅಥವಾ ತಾಜಾ ಅರಿಶಿನ ತುಂಡುಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಆ ನೀರನ್ನು ಕೂಡ ಸೇವಿಸಬಹುದು.
ಅರಿಶಿನ ಹಾಲು: ಹಾಲಿನೊಂದಿಗೆ ಅರಿಶಿನ ಬೆರೆಸಿ ಸೇವಿಸಿದಾಗ, ಅದು ದೇಹಕ್ಕೆ ಬೇಗನೆ ಹೀರಿಕೊಳ್ಳುತ್ತದೆ. ಅದರಲ್ಲಿಯೂ ಹಾಲು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಬಿ 12 ನಂತಹ ಪೋಷಕಾಂಶಗಳನ್ನು ಇರುವುದರಿಂದ ಇದನ್ನು ಅರಿಶಿನದೊಂದಿಗೆ ಸೇರಿಸಿದಾಗ, ಹಾಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಶೀತ ಮತ್ತು ಕೆಮ್ಮಿನಿಂದ ಪರಿಹಾರ ನೀಡುತ್ತದೆ. ಇದಲ್ಲದೆ, ರಾತ್ರಿ ಸಮಯದಲ್ಲಿ ಹಾಲಿಗೆ ಅರಿಶಿನ ಹಾಕಿ ಕುಡಿಯುವುದು ಬಹಳ ಒಳ್ಳೆಯ ಆರೋಗ್ಯಕರ ಅಭ್ಯಾಸ. ಏಕೆಂದರೆ ಇದು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ, ಜೊತೆಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮೂಳೆ ಮತ್ತು ಸ್ನಾಯುಗಳ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇನ್ನು ಹಾಲಿನಲ್ಲಿರುವ ವಿಟಮಿನ್ ಬಿ 12 ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಖಾನಾ vs ಶೇಂಗಾ: ಇವೆರಡರಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಯಾವುದು ಉತ್ತಮ ಎಂಬುದನ್ನು ಸ್ಟೋರಿ ಮೂಲಕ ತಿಳಿಯಿರಿ
ಹಾಲು ಅಥವಾ ನೀರಿನಲ್ಲಿ ಬಳಸುವ ಅರಿಶಿನವು ಶುದ್ಧವಾಗಿರುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅರಿಶಿನವು ಹೆಚ್ಚುವರಿ ಬಣ್ಣಗಳನ್ನು ಹೊಂದಿರುತ್ತದೆ, ಇದು ಪ್ರಯೋಜನಕಾರಿಯಾಗುವ ಬದಲು ದೇಹಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ, ಅರಿಶಿನವನ್ನು ಮನೆಯಲ್ಲಿ ಪುಡಿಮಾಡಬೇಕು ಅಥವಾ ವಿಶ್ವಾಸಾರ್ಹ, ಪ್ರತಿಷ್ಠಿತ ಬ್ರ್ಯಾಂಡ್‌ನಿಂದ ಖರೀದಿಸಬೇಕು. ನಿಮ್ಮ ಆರೋಗ್ಯಕ್ಕೆ ಅನುಗುಣವಾಗಿ ನೀವು ಹಾಲು ಅಥವಾ ನೀರಿನೊಂದಿಗೆ ಅರಿಶಿನವನ್ನು ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಬೆಳಿಗ್ಗೆ ಅರಿಶಿನ ನೀರು ಸೂಕ್ತವಾಗಿದೆ, ಆದರೆ ಉತ್ತಮ ನಿದ್ರೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ರಾತ್ರಿ ಸಮಯದಲ್ಲಿ ಅರಿಶಿನದ ಹಾಲು ಅತ್ಯುತ್ತಮ ಆಯ್ಕೆಯಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ