ಕಲ್ಲಂಗಡಿ ಹಣ್ಣು ರಸಭರಿತ ಹಣ್ಣು ಎಂಬುದು ಎಲ್ಲರಿಗೂ ಗೊತ್ತಿದೆ. ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣನ್ನು ಜನರು ಹೆಚ್ಚು ಇಷ್ಟಪಟ್ಟು ಸೇವಿಸುತ್ತಾರೆ. ಹೆಚ್ಚು ಸಿಹಿಯಾಗಿರುವುದರ ಜತೆಗೆ ಆಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಜತೆಗೆ ಜೀವಸತ್ವಗಳು, ಖನಿಜಗಳು ಮತ್ತು ಇತರ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಕಲ್ಲಂಗಡಿ ಹಣ್ಣಿನಲ್ಲಿ ಕ್ಯಾಲೊರಿ ಕಡಿಮೆ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಎ ಅಂಶವಿರುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಂದ ಮಾತ್ರಕ್ಕೆ ಅತಿಯಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಯಾವುದೇ ಆಹಾರವಾಗಲಿ ಹಿತಮಿತವಾಗಿ ಬಳಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. ತಿನ್ನಲು ರುಚಿಯಾಗಿದೆ ಎಂದು ಅತಿಯಾಗಿ ತಿಂದರೆ ಆರೋಗ್ಯಕ್ಕೆ ಅನಾರೋಗ್ಯಗಳೇ ಹೆಚ್ಚು. ಅತಿಯಾಗಿ ತಿಂದರೆ ಅಮೃತವೂ ವಿಷ ಎಂಬ ಮಾತಿನಂತೆ ಆಹಾರವನ್ನು ನಿಯಮಿತವಾಗಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಇಷ್ಟಪಟ್ಟು ತಿನ್ನುತ್ತಾರೆ. ಹಾಗಿರುವಾಗ ನಾವು ಸೇವಿಸುತ್ತಿರುವ ತರಕಾರಿಗಳು ಮತ್ತು ಹಣ್ಣುಗಳಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದರ ಬಗ್ಗೆ ತಿಳಿದುಕೊಳ್ಳಲೇಬೇಕು. ಕಲ್ಲಂಗಡಿ ಹಣ್ಣಿನಿಂದ ಆರೋಗ್ಯಕ್ಕೆ ಎಷ್ಟು ಪ್ರಯೋಜನವಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಕಲ್ಲಂಗಡಿಯಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್ ಪ್ರಮಾಣವು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ಹೃದ್ರೋಗ ಸಮಸ್ಯೆಯನ್ನು ತಡೆಗಟ್ಟಲು ಸಹಾಯಕವಾಗಿದೆ.
ದೇಹವನ್ನು ಹೈಡ್ರೀಕರಿಸುತ್ತದೆ
ಕಲ್ಲಂಗಡಿಯಲ್ಲಿ ಶೇ.90ರಷ್ಟು ನೀರಿನ ಪ್ರಮಾಣ ಇರುವುದರಿಂದ ಇದು ನಿಮ್ಮ ದೇಹಕ್ಕೆ ನೀರಿನಾಂಶವನ್ನು ನೀಡುತ್ತದೆ. ಉಷ್ಣಾಂಶದಿಂದ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ಹೆಚ್ಚು ತಂಪಾಗಿರುವುದರಿಂದ ಮಳೆಗಾಲದ ಸಮಯದಲ್ಲಿ ಈ ಹಣ್ಣನ್ನು ಹೆಚ್ಚು ಸೇವಿಸುವುದಿಲ್ಲ.
ತೂಕನಷ್ಟಕ್ಕೆ ಸಹಾಯಕ
ಕಲ್ಲಂಗಡಿ ಸಿಹಿ ಮತ್ತು ರಸಭರಿತ ಹಣ್ಣು. ಇದರಲ್ಲಿ ಕ್ಯಾಲೊರಿ ಕಡಿಮೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಸಹಾಯಕವಾಗಿದೆ. ಕೊಬ್ಬಿನಾಂಶ ಹೆಚ್ಚಾಗಿ ಇಲ್ಲವಾದ್ದರಿಂದ ಯಾವ ವಯಸ್ಸಿನವರೂ ಸಹ ನಿಯಮಿತವಾಗಿ ಹಣ್ಣನ್ನು ಸೇವಿಸಬಹುದು.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಕಲ್ಲಂಗಡಿಯಲ್ಲಿ ಫೈಬರ್ ಅಂಶ ಕಂಡು ಬರುತ್ತದೆ. ಇದು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಸಹಾಯಕವಾಗಿದೆ. ಫೈಬರ್ಯುಕ್ತ ಹಣ್ಣುಗಳು ಮತ್ತು ತರಕಾರಿಗಳು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಜತೆಗೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯಕವಾಗಿದೆ.
ಇದನ್ನೂ ಓದಿ:
ಲಾಕ್ಡೌನ್ ಎಫೆಕ್ಟ್: ಮಾರಾಟವಾಗಲಿಲ್ಲ ಕಲ್ಲಂಗಡಿ ಹಣ್ಣು, ಸಾಲ ಮಾಡಿ ಬೆಳೆದ ಬೆಳೆಯನ್ನು ನಾಶ ಮಾಡಿದ ಬಡ ರೈತ