ಹೊರ ರಾಜ್ಯಕ್ಕೆ ಹೋಗುತ್ತಿದ್ದ ಕಲ್ಲಂಗಡಿ ಹಣ್ಣು ಸಂಪೂರ್ಣ ಹಾಳು; ಲಾಕ್​ಡೌನ್​ನಿಂದ ಕಣ್ಣೀರು ಹಾಕುತ್ತಿರುವ ದಾವಣಗೆರೆ ರೈತ

ಹೊರ ರಾಜ್ಯಕ್ಕೆ ಹೋಗುತ್ತಿದ್ದ ಕಲ್ಲಂಗಡಿ ಹಣ್ಣು ಸಂಪೂರ್ಣ ಹಾಳು; ಲಾಕ್​ಡೌನ್​ನಿಂದ  ಕಣ್ಣೀರು ಹಾಕುತ್ತಿರುವ ದಾವಣಗೆರೆ ರೈತ
ಹೊಲದಲ್ಲೇ ಬಾಡಿ ಹೋಗುತ್ತಿರುವ ಕಲ್ಲಂಗಡಿ ಹಣ್ಣು

ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ರೈತ ಕೆಎಂ ಮಂಜುನಾಥ್ ಬಾಬರ್ ತರಕಾರಿ ಬೆಳೆಗೆ ಪ್ರಸಿದ್ಧ ಹೆಸರು. ವಿಶೇಷವಾಗಿ ಹೊರ ರಾಜ್ಯಗಳಲ್ಲಿ ಸಹ ಇವರು ಬೆಳೆದ ತರಕಾರಿ ಪ್ರಸಿದ್ಧಿ ಪಡೆದಿದೆ. ಈ ಮಂಜುನಾಥ ಅವರು ವರ್ಷವಿಡಿ ತರಕಾರಿ ಬೆಳೆಯುತ್ತಾರೆ. ಯಾವ ಹಂಗಾಮಿನಲ್ಲಿ ಎನು ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೆಲೆ ಇರುತ್ತದೆ ಮತ್ತು ಹೇಗೆ ಬೆಳೆಯಬೇಕು, ಹೀಗೆ ಹತ್ತು ಹಲವಾರು ಪ್ರಕಾರ ಜ್ಞಾನ ಮಂಜುನಾಥ ಅವರಿಗೆ ಇದೆ.

preethi shettigar

|

Jun 01, 2021 | 8:03 AM

ದಾವಣಗೆರೆ: ಕೊರೊನಾ ಎರಡನೇ ಅಲೆ ತೀವ್ರತೆಯನ್ನು ಅರಿತ ರಾಜ್ಯ ಸರ್ಕಾರ ಲಾಕ್​ಡೌನ್​ ಘೋಷಣೆ ಮಾಡಿದೆ. ಆದರೆ ಈ ಲಾಕ್​ಡೌನ್​ನಿಂದಾಗಿ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಮತ್ತು ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ರೈತರು ಕಷ್ಟಪಟ್ಟು ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ, ಒಂದು ವೇಳೆ ಮಾರುಕಟ್ಟೆಗೆ ತಂದರು ವ್ಯಾಪಾರವಿಲ್ಲದೆ ಆತಂಕಕ್ಕೆ ಸಿಲುಕುವಂತಾಗಿದೆ. ಇಂತಹದ್ದೆ ಪರಿಸ್ಥಿತಿ ಸದ್ಯ ದಾವಣಗೆರೆ ರೈತರದ್ದಾಗಿದ್ದು, ಹೊರರಾಜ್ಯಗಳಲ್ಲೂ ಬೇಡಿಕೆಯಿದ್ದ ಕಲ್ಲಂಗಡಿ ಹಣ್ಣು ವ್ಯಾಪಾರವಾಗದೆ ಕಣ್ಣಿರಿನಲ್ಲಿ ಕೈ ತೊಳೆಯುವಂತಾಗಿದೆ.

ದಾವಣಗೆರೆ ಜಿಲ್ಲೆಗೆ ಮೆಕ್ಕೆ ಜೋಳದ ಮೆಕ್ಕಾ ಎನ್ನುತ್ತಾರೆ. ಮೆಕ್ಕೆ ಜೋಳ 1.35 ಲಕ್ಷ ಹೆಕ್ಟೇರ್ ಪ್ರದೇಶ, ಭತ್ತ 60 ಸಾವಿರ ಹೆಕ್ಟೇರ್ ಹಾಗೂ ಅಡಿಕೆ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ಈ ಮೂರು ಬೆಳೆಗಳನ್ನು ಸ್ವಲ್ಪ ದಿನ ಮನೆಯಲ್ಲಿಟ್ಟು ಮಾರಾಟ ಮಾಡಬಹುದು. ಆದರೆ ತರಕಾರಿಯನ್ನು ಅಥವಾ ಹಣ್ಣನ್ನು ಸ್ವಲ್ಪ ಸಮಯ ಇಟ್ಟು ನಂತರ ಮಾರಲು ಸಾಧ್ಯವಿಲ್ಲ. ಹೀಗಾಗಿ ಮಳೆ, ಬೆಳೆ, ಲಾಕ್​ಡೌನ್ ಜಂಜಾಟದಲ್ಲಿ ನಿಜಕ್ಕೂ ರೈತರು ಅತಂತ್ರರಾಗಿದ್ದಾರೆ. ಅದರಲ್ಲೂ ತರಕಾರಿ ಬೆಳೆಯೇ ನಂಬಿಕೊಂಡಿದ್ದ ರೈತ ಮಂಜುನಾಥ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ದಾವಣಗೆರೆ ತಾಲೂಕಿನ ಕೊಡಗನೂರು ಗ್ರಾಮದ ರೈತ ಕೆಎಂ ಮಂಜುನಾಥ್ ಬಾಬರ್ ತರಕಾರಿ ಬೆಳೆಗೆ ಪ್ರಸಿದ್ಧ ಹೆಸರು. ವಿಶೇಷವಾಗಿ ಹೊರ ರಾಜ್ಯಗಳಲ್ಲಿ ಸಹ ಇವರು ಬೆಳೆದ ತರಕಾರಿ ಪ್ರಸಿದ್ಧಿ ಪಡೆದಿದೆ. ಈ ಮಂಜುನಾಥ ಅವರು ವರ್ಷವಿಡಿ ತರಕಾರಿ ಬೆಳೆಯುತ್ತಾರೆ. ಯಾವ ಹಂಗಾಮಿನಲ್ಲಿ ಎನು ಬೆಳೆಯುತ್ತದೆ. ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೆಲೆ ಇರುತ್ತದೆ ಮತ್ತು ಹೇಗೆ ಬೆಳೆಯಬೇಕು, ಹೀಗೆ ಹತ್ತು ಹಲವಾರು ಪ್ರಕಾರ ಜ್ಞಾನ ಮಂಜುನಾಥ ಅವರಿಗೆ ಇದೆ.

ಮಂಜುನಾಥ ಅವರ ಪೂರ್ವಜರು ಈ ಹಿಂದೆ 500 ಎಕರೆ ಭೂಮಿ ಮಾಲೀಕರಾಗಿದ್ದರು. ಇವರ ಕುಟುಂಬದ ನಾಲ್ವರು ಸೈನ್ಯದಲ್ಲಿ ಇದ್ದರು. ಇದಕ್ಕಾಗಿ ಸರ್ಕಾರ ಇವರ ಕುಟುಂಬಕ್ಕೆ ಭೂಮಿ ನೀಡಿತ್ತು. ಮಂಜುನಾಥರ ತಾತ ಮೈಸೂರಿನ ಮಹಾರಾಜರ ಸಲಹೆಗಾರರ ತಂಡದಲ್ಲಿ ಇದ್ದರು. ಆದರೆ ಆ ಗತವೈಭವ ಹೋಗಿ ಈಗ ಅಲ್ಪ ಸ್ವಲ್ಪ ಜಮೀನು ಉಳಿದಿದೆ. ಇದರಲ್ಲಿ 20 ಎಕರೆ ಪ್ರದೇಶ ಮಾತ್ರ ಅಪ್ಪಟ ತರಕಾರಿ ಹಣ್ಣು ಬೆಳೆಯಲು ಬಿಟ್ಟಿದ್ದಾರೆ. ಇತ್ತೀಚಿಗೆ ತರಕಾರಿ ಮತ್ತು ಹಣ್ಣು ಕೈ ಕೊಡುತ್ತಿರುವುದನ್ನ ನೋಡಿ ತರಕಾರಿ ಬೆಳೆಯುವ ಪ್ರದೇಶದಲ್ಲಿ ಸಹ ಅಡಿಕೆ ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಹತ್ತಾರು ಟನ್ ಕಲ್ಲಂಗಡಿ ಜಮೀನಿನಲ್ಲಿಯೇ ಕೊಳೆಯುತ್ತಿರುವುದಾಗಿದೆ.

ಈ ಮೊದಲು ಮುಂಬಯಿ, ಗೋವಾ ಸೇರಿದಂತೆ ಬಹುತೇಕ ಕಡೆ ಮಂಜುನಾಥ್ ಬೆಳೆದ ತರಕಾರಿ ಹೋಗುತ್ತದೆ. ಅದರಲ್ಲೂ ಅವರು ಬೆಳೆಯುತ್ತಿದ್ದ ಎರಡು ಪ್ರಕಾರದ ಕಲ್ಲಂಗಡಿಯಲ್ಲಿ ಮೇಲೆ ಕಪ್ಪಗೆ ಕಾಣುವ ಕಲ್ಲಂಗಡಿ ಮಾತ್ರ ಬಾರಿ ಪ್ರಸಿದ್ಧ. ಮುಂಬಯಿನಲ್ಲಿ ಈ ಕಲ್ಲಂಗಡಿಗೆ ಸಕ್ಕರೆ ಹಾಕದೇ ಜ್ಯೂಸ್ ಮಾಡಿಕೊಡಲಾಗುತ್ತಿದೆ. ಅಂದರೆ ಅಷ್ಟು ಸಿಹಿಯಾದ ಹಣ್ಣನ್ನು ಮಂಜುನಾಥ್ ಬೆಳೆಯುತ್ತಿದ್ದರು. ಆದರೆ ಲಾಕ್​ಡೌನ್​ನಿಂದ ಈ ಯೋಜನೆಗಳೆಲ್ಲಾ ಉಲ್ಟಾ ಆಗಿವೆ.

ಈ ಕಲ್ಲಂಡಗಿ ಬೀಜ ಒಂದು ಕೆಜಿಗೆ 26ರಿಂದ 28 ಸಾವಿರ ರೂಪಾಯಿ ಇದೆ. ಸುಮಾರು 80 ಟನ್ ಕಲ್ಲಂಗಡಿ ಹಣ್ಣು ಜಮೀನಲ್ಲಿಯೇ ಕೊಳೆಯುತ್ತಿದೆ. ಇನ್ನೇನು ಮಾರಾಟ ಮಾಡಬೇಕು ಎನ್ನುವಾಗ ಲಾಕ್​ಡೌನ್ ಘೋಷಣೆ ಆಗಿದೆ. ಈಗ ಮತ್ತೆ ಲಾಕ್​ಡೌನ್ ಶುರುವಾಗಿದೆ. ಬೆಳಿ ಕಲ್ಲಂಗಡಿ, ಕಪ್ಪು ಕಲ್ಲಂಗಡಿ ಅಂತಾ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದು ಮಾರುಕಟ್ಟೆ ಇಲ್ಲದೆ ಸಂಪೂರ್ಣ ಹಾಳಾಗಿದೆ ಎಂದು ರೈತ ಮಂಜುನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ನಾಲ್ಕು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಉಳಿದ 16 ಎಕರೆ ಪ್ರದೇಶದಲ್ಲಿ ರೈತ ಮಂಜುನಾಥ ಬಾಬರ್ ಹೂವು ಕೋಸು, ಸಾಂಬಾರ್ ಸವತೆ, ಮೇಣಸಿನ ಕಾಯಿ ಟೊಮೆಟೊ ಹೀಗೆ ಹತ್ತು ಹಲವಾರು ತರಕಾರಿ ಬೆಳೆದಿದ್ದಾರೆ. ಆದರೆ ಎಲ್ಲವೂ ನಷ್ಟವಾಗಿದೆ. ಇನ್ನು ಸ್ವಲ್ಪ ದಿನಗಳಲ್ಲಿ ಲಾಕ್​ಡೌನ್​ ಸಡಿಲ ಮಾಡಿದರೆ ಸ್ವಲ್ಪಮಟ್ಟಿಗೆ ವ್ಯಾಪಾರ ಮಾಡಬಹುದು ಇಲ್ಲವಾದರೆ ಜೀವನ ಸಾಗಿಸುವುದು ಕಷ್ಟ ಎಂದು ರೈತ ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:

ಲಾಕ್​ಡೌನ್​ ಎಫೆಕ್ಟ್: ಐನೂರು ಎಕರೆ ಕಲ್ಲಂಗಡಿ ಬೆಳೆದ ಬಾಗಲಕೋಟೆ ರೈತರಿಗೆ ಸಂಕಷ್ಟ

ಚಿಕ್ಕಮಗಳೂರು ರೈತರಲ್ಲಿ ಆತಂಕ; ಲಾಕ್​ಡೌನ್ ಹಿನ್ನೆಲೆ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲು

Follow us on

Related Stories

Most Read Stories

Click on your DTH Provider to Add TV9 Kannada