ಲಾಕ್ಡೌನ್ ಎಫೆಕ್ಟ್: ಮಾರಾಟವಾಗಲಿಲ್ಲ ಕಲ್ಲಂಗಡಿ ಹಣ್ಣು, ಸಾಲ ಮಾಡಿ ಬೆಳೆದ ಬೆಳೆಯನ್ನು ನಾಶ ಮಾಡಿದ ಬಡ ರೈತ
ಸಾಲ ಮಾಡಿ 3 ಎಕರೆ ಜಾಗದಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣನ್ನು ಲಾಕ್ಡೌನ್ ಕಾರಣದಿಂದ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹೀಗೆ ರಾಶಿ ರಾಶಿ ಹಣ್ಣು ಮಾರಾಟವಾಗದೇ ಉಳಿದು ಹಾಳಾಗಲು ಆರಂಭಿಸಿದಾಗ ತಿಪ್ಪಣ್ಣ ಅವರಿಗಿದ್ದ ಭರವಸೆ ಕಮರಿ ಹೋಗಿದೆ.
ಬೀದರ್: ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಧನಿಕರಿಂದ ಹಿಡಿದು ಕೂಲಿ ಕಾರ್ಮಿಕರ ತನಕ ಎಲ್ಲರನ್ನೂ ಕಾಡಿರುವ ಕೊರೊನಾ ಒಂದಲ್ಲಾ ಒಂದು ರೀತಿಯ ಹೊಡೆತ ನೀಡಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಕೆಲಸಗಳಿಗೆ ಕೊಂಚ ವಿನಾಯಿತಿ ನೀಡಿದರೂ ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಸಿಗದ ಕಾರಣ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಅದರಲ್ಲೂ ಹೂವು, ಹಣ್ಣುಗಳನ್ನು ಹೆಚ್ಚು ಕಾಲ ಶೇಖರಿಸಿಡುವುದು ದೂರದ ಮಾತಾಗಿರುವುದರಿಂದ ಅವುಗಳನ್ನೇ ಆದಾಯದ ಮೂಲವಾಗಿ ನಂಬಿಕೊಂಡ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೀದರ್ ತಾಲೂಕಿನ ಅಣದೂರು ಗ್ರಾಮದಲ್ಲಿ 3 ಎಕರೆ ಜಾಗದಲ್ಲಿ ಕಲ್ಲಂಗಡಿ ಬೆಳೆದಿದ್ದ ರೈತರೊಬ್ಬರು ಹಣ್ಣುಗಳು ಮಾರಾಟವಾಗದೇ ಹಾಳಾಗುತ್ತಿದ್ದ ಕಾರಣ ಬೇಸತ್ತು ತಾವೇ ಮುಂದೆ ನಿಂತು ಅವುಗಳನ್ನು ನಾಶ ಮಾಡಿದ್ದಾರೆ.
ಬೀದರ್ ತಾಲೂಕಿನ ಅಣದೂರು ಗ್ರಾಮದ ತಿಪ್ಪಣ್ಣ ಎಂಬುವವರು 3 ಎಕರೆ ಜಾಗದಲ್ಲಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಅವರ ಶ್ರಮಕ್ಕೆ ತಕ್ಕಂತೆ ಉತ್ತಮ ಫಸಲು ಲಭ್ಯವಾಗಿತ್ತು. ಈ ಬಾರಿಯಾದರೂ ಕಲ್ಲಂಗಡಿಗೆ ಉತ್ತಮ ಮಾರುಕಟ್ಟೆ ಸಿಕ್ಕು ಒಂದಷ್ಟು ಆದಾಯ ಕೈ ಸೇರಬಹುದೆಂದು ಭಾರೀ ನಿರೀಕ್ಷೆಯಲ್ಲಿದ್ದ ತಿಪ್ಪಣ್ಣ ಅವರಿಗೆ ಲಾಕ್ಡೌನ್ ಅಕ್ಷರಶಃ ಬರೆಯನ್ನೇ ಎಳೆದಿದೆ.
ಸಾಲ ಮಾಡಿ 3 ಎಕರೆ ಜಾಗದಲ್ಲಿ ಬೆಳೆದಿದ್ದ ಕಲ್ಲಂಗಡಿ ಹಣ್ಣನ್ನು ಲಾಕ್ಡೌನ್ ಕಾರಣದಿಂದ ಮಾರಾಟ ಮಾಡಲು ಸಾಧ್ಯವಾಗಿಲ್ಲ. ಹೀಗೆ ರಾಶಿ ರಾಶಿ ಹಣ್ಣು ಮಾರಾಟವಾಗದೇ ಉಳಿದು ಹಾಳಾಗಲು ಆರಂಭಿಸಿದಾಗ ತಿಪ್ಪಣ್ಣ ಅವರಿಗಿದ್ದ ಭರವಸೆ ಕಮರಿ ಹೋಗಿದೆ. ಈ ಬಾರಿ ಹಣ್ಣಿಗೆ ಮಾರುಕಟ್ಟೆ ಸಿಗುವುದು ಅಸಾಧ್ಯ, ಅದರಿಂದ ಆದಾಯ ಗಳಿಸುವುದೂ ಕನಸಿನ ಮಾತು ಎನ್ನುವುದು ಅರಿವಾಗುತ್ತಿದ್ದಂತೆಯೇ ಬೇರೆ ದಾರಿಯಿಲ್ಲದೇ ತಾವು ಬೆಳೆದ ಕಲ್ಲಂಗಡಿಯನ್ನು ತಾವೇ ಮುಂದೆ ನಿಂತು ನಾಶ ಮಾಡಿದ್ದಾರೆ.
ಇದೀಗ ರೈತ ತಿಪ್ಪಣ್ಣ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದು, ಆದಾಯಕ್ಕೆ ಏನು ಮಾಡಬೇಕು? ಕಲ್ಲಂಗಡಿ ಬೆಳೆಯಲು ತೆಗೆದ ಸಾಲವನ್ನು ಹೇಗೆ ತೀರಿಸಬೇಕು? ಎಂದು ತೋಚದೇ ಕಂಗಾಲಾಗಿದ್ದಾರೆ. ಕೊರೊನಾ ಉಂಟು ಮಾಡಿದ ಸಂಕಷ್ಟ ಇಂತಹ ಅನೇಕ ರೈತರನ್ನು ಕಾಡಿದ್ದು, ತಾವು ಬೆಳೆದ ಬೆಳೆಯನ್ನೇ ಬದುಕಿನ ಆಧಾರವಾಗಿಸಿಕೊಂಡವರ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ. ಈ ತೆರನಾಗಿ ತೊಂದರೆಗೆ ಒಳಗಾದ ಕೃಷಿಕರ ಸಹಾಯಕ್ಕೆ ಸರ್ಕಾರ ಕೂಡಲೇ ಧಾವಿಸಬೇಕಾದ ಅಗತ್ಯವಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: ಲಾಕ್ಡೌನ್ ಎಫೆಕ್ಟ್: ಸೇವಂತಿ ಹೂವಿನ ಬೆಳೆ ನಾಶ ಮಾಡಿದ ಹಾವೇರಿ ರೈತ
ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು