ಇಂದಿನ ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಸ್ಥೂಲಕಾಯವೆಂಬುದು ಮಾಮೂಲಾಗಿಬಿಟ್ಟಿದೆ. ತೆಳ್ಳಗೆ, ಆರೋಗ್ಯವಂತವಾಗಿ ಕಾಣಿಸಿಕೊಳ್ಳಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ತೆಳ್ಳಗಾಗಬೇಕೆಂದು ಏನೇನೋ ಡಯಟ್, ವ್ಯಾಯಾಮ, ಜಿಮ್, ವಾಕಿಂಗ್ ಹೀಗೆ ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ, ನಮ್ಮ ತೂಕದ ಮೇಲೆ ನಿದ್ರೆ ಕೂಡ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಿದೆಯಾ? ನಿದ್ರೆ ಮಾಡುವಾಗ ನಮ್ಮ ತೂಕ ಹೆಚ್ಚಾಗುತ್ತದಾ? ಅಥವಾ ಕಡಿಮೆಯಾಗುತ್ತದಾ? ಇಲ್ಲಿದೆ ಅಚ್ಚರಿಯ ಮಾಹಿತಿ.
ನೀವು ತೂಕ ಇಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಯಾವುದೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ನಿದ್ರೆಯ ಸಮಸ್ಯೆಯೂ ಅದಕ್ಕೆ ಕಾರಣವಿರಬಹುದು. ನಿದ್ರೆ ಕೂಡ ನಿಮಗೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಿಮಗಿದನ್ನು ನಂಬಲು ಕಷ್ಟವಾದರೆ ರಾತ್ರಿ ಮಲಗುವ ಮುನ್ನ ನಿಮ್ಮ ತೂಕವನ್ನು ಅಳೆದುಕೊಳ್ಳಿ. ಬೆಳಿಗ್ಗೆ ಎದ್ದಾಗ ಮತ್ತೊಮ್ಮೆ ತೂಕವನ್ನು ಅಳೆಯಿರಿ. ಆಗ ನೀವು ರಾತ್ರಿಗಿಂತ ಬೆಳಿಗ್ಗೆ ಕಡಿಮೆ ತೂಕವನ್ನು ಹೊಂದಿರುವಿರಿ ಎಂದು ನಿಮಗೇ ಗೊತ್ತಾಗುತ್ತದೆ.
ಈ ರೀತಿ ಆಗುವುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ನಾವು ಮಲಗಿರುವಾಗ ಉಸಿರಾಟ ಮತ್ತು ಬೆವರುವಿಕೆಯಿಂದ ತೂಕವನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ, ನಿದ್ರೆಯ ಕೊರತೆಯು ತೂಕ ಹೆಚ್ಚಾಗಲು ಕಾರಣವಾಗಬಹುದು. ನಿದ್ರೆಯ ಸಮಸ್ಯೆಯು ನಾವು ತಿನ್ನುವ ಆಹಾರ, ಹೆಚ್ಚಿನ ಹಸಿವು ಮತ್ತು ಕ್ಯಾಲೋರಿ ಸೇವನೆ, ಕಡಿಮೆ ದೈಹಿಕ ಚಟುವಟಿಕೆ, ತೂಕ ಹೆಚ್ಚಳದೊಂದಿಗೆ ಸಂಬಂಧಿಸಿದೆ ಎಂದು ಅಧ್ಯಯನಗಳು ತಿಳಿಸಿವೆ.
ಚೆನ್ನಾಗಿ ನಿದ್ರೆ ಮಾಡುವುದರಿಂದ ಕ್ಯಾಲೋರಿ ಸೇವನೆಯ ಹೆಚ್ಚಳವನ್ನು ತಡೆಯಬಹುದು. ಸರಿಯಾದ ಎಂಟು ಗಂಟೆಗಳ ನಿದ್ರೆಯನ್ನು ಪಡೆಯುವುದು ಕ್ಯಾಲೋರಿ ಸೇವನೆ ಮತ್ತು ಹಸಿವು ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ನೀವು ನಿದ್ರೆಯಿಂದ ವಂಚಿತರಾದಾಗ ಸಂಭವಿಸುತ್ತದೆ. ಬೇಗ ಮಲಗುವುದರಿಂದ ತಡರಾತ್ರಿ ತಿಂಡಿಯನ್ನು ತಿನ್ನುವ ಅಭ್ಯಾಸವನ್ನು ತಡೆಯಬಹುದು. ಇದರಿಂದ ತೂಕ ಕಡಿಮೆಯಾಗುತ್ತದೆ. ನೀವು ಜಾಸ್ತಿ ಹೊತ್ತು ಎಚ್ಚರವಾಗಿದ್ದಷ್ಟೂ ಏನಾದರೂ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ. ದೈಹಿಕ ಚಟುವಟಿಕೆಯನ್ನು ಹೆಚ್ಚಿಸಿದರೆ ನಿದ್ರೆ ತಂತಾನೇ ಬರುತ್ತದೆ. ನಿಯಮಿತ ವ್ಯಾಯಾಮ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ. ಸಂಜೆ ದೈಹಿಕ ವ್ಯಾಯಾಮ ಮಾಡುವುದರಿಂದ ನಿಮ್ಮ ಚಯಾಪಚಯ ದರವನ್ನು 16 ಗಂಟೆಗಳವರೆಗೆ ಹೆಚ್ಚಿಸಬಹುದು.
ರಾತ್ರಿ ಕೊಬ್ಬಿನ ಅಂಶವಿರುವ ಆಹಾರಗಳನ್ನು ತಿಂದರೆ ಅದು ಜೀರ್ಣವಾಗಲು ನಮ್ಮ ದೇಹದೊಳಗೆ ಕೆಲಸಗಳು ನಡೆಯುತ್ತಿರುವುದರಿಂದ ಆರಾಮದಾಯಕ ನಿದ್ರೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಬೇಗ ಜೀರ್ಣವಾಗುವ ಆಹಾರವನ್ನು ಸೇವಿಸಿದರೆ ಜೀರ್ಣಕ್ರಿಯೆಯೂ ಸುಲಭವಾಗಿ, ಬೇಗ ನಿದ್ರೆ ಬರುತ್ತದೆ. ನಿದ್ರೆಯ ಸರಿಯಾಗದಿದ್ದರೆ ಅದು ನಿಮ್ಮ ಹಸಿವಿನ ಹಾರ್ಮೋನುಗಳನ್ನು ತೊಂದರೆಗೊಳಿಸುತ್ತದೆ. ಇದರಿಂದಾಗಿ ನೀವು ಜಂಕ್ ಫುಡ್ ತಿನ್ನುವ ಸಾಧ್ಯತೆ ಹೆಚ್ಚಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ತೂಕ ಹೆಚ್ಚಳ ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: Diabetes: ಟೈಪ್ 2 ಮಧುಮೇಹದ ಈ ಮುಖ್ಯ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!
Skin Care: ಆರೋಗ್ಯಕರ ಚರ್ಮವನ್ನು ಪಡೆಯಲು ವ್ಯಾಯಾಮ ಸಹಾಯಕವೇ? ತಜ್ಞರ ಸಲಹೆಗಳಿವು