ದೇಶದಲ್ಲಿ ಕೊರೊನಾ ಸೋಂಕು(Coronovirus) ಅಂತ್ಯವಾಗುವಂತೆ ಕಾಣುತ್ತಿಲ್ಲ, ಕೆಲವು ತಿಂಗಳ ಕಾಲ ಕಡಿಮೆಯಾಗಿದ್ದ ಸೋಂಕು ಮತ್ತೆ ವೇಗವಾಗಿ ಹರಡುತ್ತಿದೆ. ಡೆಲ್ಟಾ, ಓಮಿಕ್ರಾನ್ ನಂತರ ಈಗ ಹೊಸ ರೂಪಾಂತರವು ಜನ್ಮ ತಳೆದಿದೆ ಅದರ ಹೆಸರು ಆರ್ಕ್ಟರಸ್ (XBB.1.16) Arcturus. ಇದು ಓಮಿಕ್ರಾನ್ಗಿಂತ ಸಾಕಷ್ಟು ಭಿನ್ನವಾದ ಲಕ್ಷಣಗಳನ್ನು ಹೊಂದಿದೆ. ಇದು ಯುಎಸ್, ಸಿಂಗಾಪುರ್, ಆಸ್ಟ್ರೇಲಿಯಾದಂತಹ ಹಲವು ದೇಶಗಳಲ್ಲಿ ಕಂಡುಬಂದಿದೆ. ಇದು ಇಲ್ಲಿಯವರೆಗೆ ವೇಗವಾಗಿ ಹರಡುತ್ತಿರುವ ರೂಪಾಂತರವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ರೂಪಾಂತರಿಯು ವಿಪರೀತ ಜ್ವರ, ನೆಗಡಿ, ತುರಿಕೆ, ಕಣ್ಣು ಕೆಂಪಗಾಗುವುದು, ಕಿರಿಕಿರಿಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ ಕಮಿಟಿಯ ಡಾ. ವಿಪಿನ್ ಹೇಳಿದ್ದಾರೆ. ಈ ಹೊಸ ರೂಪಾಂತರವು ಇತರ ರೂಪಾಂತರಗಳಿಗಿಂತ 1.17 ರಿಂದ 1.27 ಪಟ್ಟು ವೇಗವಾಗಿ ಹರಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಮತ್ತೆ ಎಲ್ಲಾ ದೇಶಗಳಲ್ಲಿಯೂ ಕೊರೊನಾ ಸೋಂಕು ಹೆಚ್ಚಾಗಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.
ಮತ್ತಷ್ಟು ಓದಿ: India Covid Updates: ಭಾರತದಲ್ಲಿ ಹೊಸದಾಗಿ 10,158 ಮಂದಿಗೆ ಕೊರೊನಾ ಸೋಂಕು, ಪ್ರಕರಣಗಳು ನಿನ್ನೆಗಿಂತ ಶೇ.30ರಷ್ಟು ಹೆಚ್ಚಳ
ಭಾರತದಲ್ಲಿ ಏಪ್ರಿಲ್ 12ಕ್ಕೆ ಹೋಲಿಸಿದರೆ ಒಂದೇ ದಿನದಲ್ಲಿ 3 ಸಾವಿರಕ್ಕಿಂತ ಅಧಿಕ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ 10,150 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ.ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಸಕ್ರಿಯ ಸೋಂಕಿತರ ಸಂಖ್ಯೆ 44,998 ಇದೆ, ಬುಧವಾರ ದೇಶದಲ್ಲಿ 7,830 ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಮಂಗಳವಾರ 5,675 ಮಂದಿ ಸೋಂಕಿಗೆ ತುತ್ತಾಗಿದ್ದರು. ಇದೀಗ ಸೋಂಕು ಬಹುಬೇಗ ಎಲ್ಲ ಕಡೆ ಹರಡುತ್ತಿದೆ.
ದೈನಂದಿನ ಧನಾತ್ಮಕತೆಯ ದರ ಶೇ.4.42ರಷ್ಟಿದ್ದರೆ, ವಾರದ ಧನಾತ್ಮಕತೆಯ ದರ ಶೇ. 4.02ರಷ್ಟಿದೆ. ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ ಶೇ.0.10ಯಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ಚೇತರಿಕೆ ದರವು ಶೇ.98.71ರಷ್ಟಿದೆ, ಸಾವಿನ ಪ್ರಮಾಣ ಶೇ.1.19ರಷ್ಟಿದೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,42,10,127ಕ್ಕೆ ಏರಿಕೆಯಾಗಿದೆ.