
ಚಳಿಗಾಲದಲ್ಲಿ (Winter), ಕೆಲವರು ಸ್ವೇಟರ್, ಕ್ಯಾಪ್, ಸಾಕ್ಸ್ ಹೀಗೆ ಪೂರ್ತಿ ದೇಹವನ್ನು ಕವರ್ ಮಾಡಿಕೊಂಡಿರುತ್ತಾರೆ. ಆದರೆ ಕೆಲವರು ಕೇವಲ ಶರ್ಟ್ ಧರಿಸಿ ಹಾಯಾಗಿರುತ್ತಾರೆ. ಮತ್ತೊಂದಿಷ್ಟು ಜನ ಸ್ವಲ್ಪ ಬಿಸಿಲು ತಾಕಿದರೂ ಬೆವರುತ್ತಾರೆ, ಕೆಲವರು ಎಷ್ಟೇ ಬಿಸಿಲಿರಲಿ ಆರಾಮವಾಗಿರುತ್ತಾರೆ, ಯಾವುದೇ ರೀತಿಯ ವ್ಯತ್ಯಾಸ ಅವರಲ್ಲಿ ಕಂಡುಬರುವುದಿಲ್ಲ. ಇಷ್ಟೆಲ್ಲಾ ಪೀಠಿಕೆ ಹಾಕಿರುವುದಕ್ಕೆ ಕಾರಣವಿದೆ. ಆದರೆ ನೀವು ಎಂದಾದರೂ ಈ ವಿಷಯದ ಕುರಿತು ಆಳವಾದ ಚಿಂತನೆ ಮಾಡಿದ್ದೀರಾ ಅಥವಾ ಈ ರೀತಿ ಆಗುವುದಕ್ಕೆ ಕಾರಣವೇನು ಎಂದು ಯೋಚಿಸಿದ್ದೀರಾ… ಆರೋಗ್ಯ ತಜ್ಞರ ಪ್ರಕಾರ, ಈ ರೀತಿ ಆಗುವುದಕ್ಕೂ ಕಾರಣವಿದೆ. ಹೌದು, ವ್ಯಕ್ತಿಯ ಚಯಾಪಚಯ ಕ್ರಿಯೆ ಈ ರೀತಿ ಆಗುವುದಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಹಾಗಾದರೆ ಇವೆರಡಕ್ಕೂ ಇರುವ ಸಂಬಂಧವೇನು, ಈ ರೀತಿಯಾದಾಗ ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ಚಳಿಯಾಗದಿರುವುದು, ಬಿಸಿಲಿದ್ದರೂ ಬೆವರದಿರುವುದಕ್ಕೆ ದೇಹದ ಚಯಾಪಚಯ ಮತ್ತು ಸ್ನಾಯುಗಳೇ ಕಾರಣ. ವೇಗದ ಚಯಾಪಚಯ ಕ್ರಿಯೆ ಇದ್ದವರು ದೇಹದಲ್ಲಿ ಹೆಚ್ಚಿನ ಶಾಖವನ್ನು ಉತ್ಪಾದಿಸುತ್ತಾರೆ, ಅದಕ್ಕಾಗಿಯೇ ಅವರಿಗೆ ಚಳಿಯಾಗುವುದು ಬಹಳ ಕಡಿಮೆ. ಕಳಪೆ ಚಯಾಪಚಯ ಕ್ರಿಯೆ ಇರುವವರಲ್ಲಿ ಚಳಿ ತೀವ್ರವಾಗಿ ಕಂಡುಬರುತ್ತದೆ. ಚಯಾಪಚಯ ಕ್ರಿಯೆಯ ಜೊತೆಗೆ, ದೇಹದಲ್ಲಿ ರಕ್ತ ಹೇಗೆ ಪರಿಚಲನೆ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು.
ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿಲ್ಲದಿದ್ದರೆ, ಕೈಗಳು ಮತ್ತು ಪಾದಗಳು ತಣ್ಣಗಾಗುತ್ತವೆ. ಹಾಗಾಗಿ ಬೆಚ್ಚಗಿನ ವಾತಾವರಣದಲ್ಲಿಯೂ ಸಹ ವ್ಯಕ್ತಿಗೆ ಚಳಿಯಾದ ಅನುಭವವಾಗುತ್ತದೆ. ಮತ್ತೊಂದೆಡೆ, ಉತ್ತಮ ರಕ್ತ ಪರಿಚಲನೆ ಇರುವವರಿಗೆ ಚಳಿ ಅಷ್ಟಾಗಿ ಆಗುವುದಿಲ್ಲ. ಇದರ ಜೊತೆಗೆ ದೇಹದ ಆಕಾರ ಮತ್ತು ತೂಕ ಕೂಡ ವ್ಯಕ್ತಿಗೆ ಎಷ್ಟು ಚಳಿಯಾಗುತ್ತಿದೆ ಎಂಬುದನ್ನು ನಿರ್ಧರಿಸುತ್ತದೆ. ದೇಹದ ಗಾತ್ರ ದೊಡ್ಡಡಾಗಿದ್ದರೆ ಅಥವಾ ದೇಹದಲ್ಲಿ ಹೆಚ್ಚಿನ ಕೊಬ್ಬಿನ ಅಂಶ ಹೆಚ್ಚಾಗಿದ್ದರೆ ಚಳಿಯಾಗುವ ಪ್ರಮಾಣ ತೆಳ್ಳಗಿರುವವರಿಗೆ ಹೋಲಿಸಿದರೆ ಕಡಿಮೆಯಾಗಿರುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಇತರರಿಗಿಂತ ತುಸು ಹೆಚ್ಚೆ ನಿಮ್ಗೆ ಚಳಿಯಾಗುತ್ತಾ? ಇದಕ್ಕೆ ಈ ವಿಟಮಿನ್ ಕೊರತೆಯೇ ಕಾರಣ
ರಕ್ತದ ಕೊರತೆ ಇರುವವರು, ಅಂದರೆ ಹಿಮೋಗ್ಲೋಬಿನ್ ಅಂಶ ಕಡಿಮೆ ಇರುವವರಿಗೆ ಬೇಗ ಚಳಿಯಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಾಗಿ ಹಿಮೋಗ್ಲೋಬಿನ್ ಕಡಿಮೆ ಇರುವುದರಿಂದ ಪುರುಷರಿಗಿಂತ ಬೇಗ ಚಳಿಯಾಗುತ್ತದೆ. ಏಕೆಂದರೆ ಮಹಿಳೆಯರು ಮತ್ತು ಪುರುಷರ ದೇಹದ ರಚನೆಯಲ್ಲಿ ವ್ಯತ್ಯಾಸವಿದೆ. ಮಹಿಳೆಯರಿಗೆ ಸ್ನಾಯುವಿನ ದ್ರವ್ಯರಾಶಿ ಕಡಿಮೆ ಇರುತ್ತದೆ. ಇನ್ನು, ವಯಸ್ಸು ಮತ್ತು ಜೀವನಶೈಲಿ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಬಹುದು. ವಯಸ್ಸಾದಂತೆ, ಆಂತರಿಕ ತಾಪಮಾನವನ್ನು ನಿಯಂತ್ರಿಸುವ ದೇಹದ ಸಾಮರ್ಥ್ಯವು ಕಡಿಮೆಯಾಗುತ್ತದೆ. ಅದಕ್ಕಾಗಿಯೇ ವಯಸ್ಸಾದವರಿಗೆ ಬಹಳ ಬೇಗ ಚಳಿಯಾಗುತ್ತದೆ. ಇನ್ನು, ಜೀವನಶೈಲಿಯ ಬಗ್ಗೆ ಹೇಳುವುದಾದರೆ, ಕಡಿಮೆ ನೀರು ಕುಡಿಯುವುದು ಮತ್ತು ಹೆಚ್ಚು ಕೆಫೀನ್ ಸೇವನೆ ದೇಹದ ಉಷ್ಣತೆಯನ್ನು ನಿಯಂತ್ರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ