
ಮೆಂತ್ಯೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸುವ ಮಸಾಲೆಯಾಗಿದ್ದರೂ, ಇದರ ಆರೋಗ್ಯ ಪ್ರಯೋಜನಗಳು ಸಾಕಷ್ಟಿದೆ. ವಿಶೇಷವಾಗಿ ಮೊಳಕೆ ಬಂದ ಮೆಂತ್ಯೆ (Sprouted Fenugreek) ಕಾಳುಗಳು ಪೌಷ್ಟಿಕಾಂಶಗಳ ಉತ್ತಮ ಮೂಲವಾಗಿದ್ದು, ಜೀರ್ಣಕ್ರಿಯೆ ಸುಧಾರಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಅದರಲ್ಲಿಯೂ ಮೆಂತ್ಯೆ ಕಾಳುಗಳನ್ನು ಮೊಳಕೆ ಬರಿಸಿದಾಗ ಅವುಗಳಲ್ಲಿರುವ ಕೆಲವು ವಿಟಮಿನ್, ಖನಿಜಾಂಶಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ಸುಲಭವಾಗಿ ಹೀರಿಕೊಳ್ಳಲು ಸಹಾಯ ನಡುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತದೆ: ಮೆಂತ್ಯೆಯಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿದ್ದು, ಮಲಬದ್ಧತೆ, ಅಜೀರ್ಣ ಹಾಗೂ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿಯೂ ಇದು ನೆರವಾಗುತ್ತದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ: ಕೆಲವು ಅಧ್ಯಯನಗಳ ಪ್ರಕಾರ ಮೆಂತ್ಯೆಯಲ್ಲಿರುವ ಕರಗುವ ನಾರಿನ ಅಂಶ (Soluble Fiber) ಕಾರ್ಬೋಹೈಡ್ರೇಟ್‌ಗಳ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು. ಆದರೆ ಇದು ಮಧುಮೇಹದ ಔಷಧಿಗೆ ಪರ್ಯಾಯವಲ್ಲ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ: ನಿಯಮಿತ ಪ್ರಮಾಣದಲ್ಲಿ ಮೆಂತ್ಯೆ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು ಎಂದು ಕೆಲವು ಸಂಶೋಧನೆಗಳು ಸೂಚಿಸಿವೆ. ಇದರಿಂದ ಹೃದಯದ ಆರೋಗ್ಯಕ್ಕೂ ಪ್ರಯೋಜನವಾಗಬಹುದು.
ತೂಕ ಇಳಿಕೆಗೆ ನೆರವಾಗಬಹುದು: ಮೆಂತ್ಯೆಯಲ್ಲಿರುವ ಫೈಬರ್ ಹೆಚ್ಚು ಹೊತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗಬಹುದು ಮತ್ತು ತೂಕ ನಿಯಂತ್ರಣಕ್ಕೆ ಸಹಕಾರಿಯಾಗಬಹುದು.
ಚರ್ಮ ಮತ್ತು ಕೂದಲಿನ ಆರೋಗ್ಯ: ಮೆಂತ್ಯೆಯಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಾಂಶಗಳು ಚರ್ಮ ಹಾಗೂ ಕೂದಲಿನ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡಬಹುದು. ಫ್ರೀ ರ್ಯಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಕಾರಿ.
ಮಹಿಳೆಯರ ಆರೋಗ್ಯ: ಮೆಂತ್ಯೆಯಲ್ಲಿ ಇರುವ ಕೆಲವು ಸಸ್ಯ ಮೂಲದ ಸಂಯುಕ್ತಗಳು (Phytoestrogens) ಮಹಿಳೆಯರ ಹಾರ್ಮೋನ್ ಸಮತೋಲನಕ್ಕೆ ನೆರವಾಗಬಹುದು ಎಂಬುದು ಕೆಲವು ಅಧ್ಯಯನಗಳಿಂದ ತಿಳಿದು ಬಂದಿದೆ. ಆದರೆ PCOS, ಥೈರಾಯ್ಡ್ ಅಥವಾ ಇತರ ಹಾರ್ಮೋನ್ ಸಮಸ್ಯೆಗಗಳಿಗೆ ಇದನ್ನೇ ಅವಲಂಬಿಸುವುದು ಸರಿಯಲ್ಲ. ವೈದ್ಯರ ಸಲಹೆಯೊಂದಿಗೆ ಮಾತ್ರ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು.
ಇದನ್ನೂ ಓದಿ: ಮೊಳಕೆಯೊಡೆದ ಹೆಸರುಕಾಳು vs ಮೊಳಕೆ ಬಂದ ಕಪ್ಪು ಕಡಲೆ: ಯಾವುದು ನಿಜವಾದ ಸೂಪರ್‌ಫುಡ್ ತಿಳಿದುಕೊಳ್ಳಿ
ಮೆಂತ್ಯೆ ಆರೋಗ್ಯಕರ ಆಹಾರದ ಭಾಗವಾಗಬಹುದು. ಆದರೆ ಯಾವುದೇ ಒಂದು ಆಹಾರವೇ ಎಲ್ಲ ಕಾಯಿಲೆಗಳಿಗೆ ಪರಿಹಾರವಲ್ಲ. ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ವೈದ್ಯರ ಸಲಹೆ ಇವೆಲ್ಲವೂ ಉತ್ತಮ ಆರೋಗ್ಯಕ್ಕೆ ಅಗತ್ಯ.
ಸೂಚನೆ: ಈ ಲೇಖನವು ಆರೋಗ್ಯ ಮಾಹಿತಿಗಾಗಿ ಮಾತ್ರ. ಮಧುಮೇಹ, ಹಾರ್ಮೋನ್ ಸಮಸ್ಯೆಗಳು ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆ ಪಡೆದು ಆ ಬಳಿಕ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ