Winter Pregnancy Tips
ಇತ್ತೀಚಿನ ದಿನಗಳಲ್ಲಿ, ಚಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುದು ಸಾಮಾನ್ಯ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ, ಗರ್ಭಿಣಿಯರು (Pregnancy) ಹೆಚ್ಚಿನ ಕಾಳಜಿವಹಿಸುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಶೀತ ಹವಾಮಾನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ಶೀತ, ಸೋಂಕು ಮತ್ತು ಆಯಾಸದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ತಾಯಿ ಮತ್ತು ಹೊಟ್ಟೆಯಲ್ಲಿರುವ ಮಗು ಇಬ್ಬರಿಗೂ ಸುರಕ್ಷಿತವಲ್ಲ. ಹಾಗಾಗಿ ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಹೆಚ್ಚಿನ ಶಕ್ತಿ, ಪೋಷಣೆಯ ಅಗತ್ಯವಿರುತ್ತದೆ. ಇಲ್ಲವಾದಲ್ಲಿ ಕಡಿಮೆ ತಾಪಮಾನ ಕೈ ಮತ್ತು ಪಾದಗಳಲ್ಲಿ ಮರಗಟ್ಟುವಿಕೆ, ಕೀಲು ನೋವನ್ನು ಹೆಚ್ಚಿಸಬಹುದು. ಹಾಗಾಗಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಚಳಿಗಾಲದಲ್ಲಿ ಗರ್ಭಿಣಿಯರು ಅನುಸರಿಸಬೇಕಾದ ಸಲಹೆಗಳು:
- ಆರ್‌ಎಂಎಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, ಚಳಿಗಾಲದಲ್ಲಿ ಗರ್ಭಿಣಿಯರು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅವುಗಳಲ್ಲಿ ಮೊದಲನೇಯದು ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದು. ಚಳಿಗಾಲದಲ್ಲಿ ಸಾಮಾನ್ಯವಾಗಿ ಬಾಯಾರಿಕೆಯಾಗುವುದು ಬಹಳ ಕಡಿಮೆ. ಆದರೆ ಯಾವುದೇ ಕಾಲವಾಗಲಿ ದೇಹಕ್ಕೆ ಅಗತ್ಯವಿರುವಷ್ಟು ನೀರನ್ನು ಕುಡಿಯಲೇಬೇಕು ಎಂಬುದನ್ನು ಮರೆಯಬಾರದು.
- ಇನ್ನು, ಗರ್ಭಿಣಿಯರು ತಂಪಾದ ಜಾಗದಲ್ಲಿ ಅಥವಾ ಸ್ಥಳಗಳಲ್ಲಿ ಹೆಚ್ಚು ಹೊತ್ತು ಇರುವುದು ಅಥವಾ ಮೈ ಮುಚ್ಚುವಷ್ಟು ಬಟ್ಟೆಗಳನ್ನು ಧರಿಸದಿರುವುದು, ಶೀತ ಮತ್ತು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೊರಗೆ ಹೋಗುವಾಗ ಅಥವಾ ಮನೆಯಲ್ಲಿರುವ ಸಮಯದಲ್ಲಿ ಬೆಚ್ಚಗಿರುವ ಉಡುಪುಗಳನ್ನೇ ಧರಿಸಿ.
- ಅಷ್ಟು ಮಾತ್ರವಲ್ಲ, ಗರ್ಭಿಣಿಯರು ಹೊಟ್ಟೆ ಬಿರಿಯುವಷ್ಟು ಆಹಾರವನ್ನು ಒಮ್ಮೆಗೆ ಸೇವನೆ ಮಾಡಬಾರದು. ಅದರ ಜೊತೆಗೆ ಹುರಿದ ಆಹಾರದ ಸೇವನೆಯನ್ನು ಕೂಡ ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಅತಿಯಾಗಿ ತಿಂದರೆ, ಅನಿಲ, ಅಜೀರ್ಣ ಮತ್ತು ಆಲಸ್ಯಕ್ಕೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಸೂರ್ಯನ ಬೆಳಕು ಸಿಗದಿರುವುದು ವಿಟಮಿನ್ ಡಿ ಕೊರತೆಗೆ ಕಾರಣವಾಗಬಹುದು, ಇದು ಮೂಳೆಯ ಬಲ ಮತ್ತು ಮನಸ್ಥಿತಿ ಎರಡರ ಮೇಲೂ ಪರಿಣಾಮ ಬೀರುತ್ತದೆ.
- ಇದಲ್ಲದೆ, ಸಣ್ಣ ಪುಟ್ಟ ವ್ಯಾಯಾಮ ಮಾಡದಿರುವುದು ದೇಹದ ಬಿಗಿತವನ್ನು ಮತ್ತಷ್ಟು ಹೆಚ್ಚಿಸುತ್ತದೆ ಮತ್ತು ದೀರ್ಘಕಾಲ ಕುಳಿತುಕೊಳ್ಳುವುದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ