ಕೋವಿಡ್ ಸಂದರ್ಭದಲ್ಲಿ ಅರಿವಳಿಕೆ ತಜ್ಞರು ಜೀವವನ್ನೆ ಒತ್ತೆಯಾಗಿಟ್ಟು ರೋಗಿಗಳನ್ನು ಉಳಿಸಿರುವುದನ್ನು ಕೇಳಿರಬಹುದು ಕೆಲವರು ನೋಡಿರಲುಬಹುದು. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಅರಿವಳಿಕೆ ಶಾಸ್ತ್ರ ತಾನೂ ಬೆಳೆಯುವುದಲ್ಲದೆ ಎಲ್ಲಾ ಶಸ್ತ್ರಚಿಕಿತ್ಸಾ ವಿಭಾಗಗಳನ್ನು ಬೆಳೆಸುತ್ತಿದೆ. ಹಾಗಾಗಿ ಅವರು ಮಾಡುತ್ತಿರುವ ವೃತ್ತಿಯನ್ನು ಗೌರವಿಸಲು ಪ್ರತಿ ವರ್ಷ ಅಕ್ಟೋಬರ್ 16 ರಂದು, ಡಬ್ಲ್ಯೂಎಫ್ಎಸ್ಎ ಪ್ರಪಂಚದಾದ್ಯಂತದ ವಿಶ್ವ ಅರಿವಳಿಕೆ ದಿನ ಅಥವಾ ವಿಶ್ವ ಅನಸ್ತೇಶಿಯಾ ದಿನವನ್ನು ಆಚರಿಸುತ್ತಿದೆ. ಈ ದಿನದ ಇತಿಹಾಸವೇನು? ಆಚರಿಸುವ ಉದ್ದೇಶವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ವಿಶ್ವ ಅರಿವಳಿಕೆ ದಿನದ ಇತಿಹಾಸ;
1846ರ ಅಕ್ಟೋಬರ್ 16ರಂದು ಅಮೆರಿಕಾದ ಬೋಸ್ಟನ್ ನಗರದ ಮೆಸಚ್ಯುಸೆಟ್ಸ್ ಸಾರ್ವಜನಿಕ ಆಸ್ಪತ್ರೆಯ ಬುಲ್ಫಿಂಚ್ ಕಟ್ಟಡದ ಈಥರ್ ಡೋಂ ವಿಭಾಗದಲ್ಲಿ ವಿಲಿಯಂ ಥಾಮಸ್ ಗ್ರೀನ್ ಮಾರ್ಟನ್ ಎಂಬ ವೈದ್ಯರು, ಎಡ ಕುತ್ತಿಗೆಯ ರಕ್ತನಾಳದ ಗಂಟೊಂದರಿಂದ ನರಳುತ್ತಿದ್ದ ಎಡ್ವರ್ಡ್ ಗಿಲ್ಬೆರ್ಟ್ ಅಬಾಟ್ ಎಂಬವರಿಗೆ ಶಸ್ತ್ರಚಿಕಿತ್ಸೆ ಮಾಡಲು ಅರಿವಳಿಕೆ ನೀಡಿದ್ದರು. ಅಂದಿನಿಂದ ಆ ಸ್ಥಳಕ್ಕೆ ಅರಿವಳಿಕೆ ನೀಡಲು ಉಪಯೋಗಿಸಿದ್ದ ಈಥರ್(ಡೈ ಇಥೈಲ್ ಈಥರ್ ಔಷಧ) ಬಳಸಿದ ಕಾರಣ ಈಥರ್ ಡೋಂ ಎಂದು ಕರೆಯಲಾಯಿತು. ಇದರ ನೆನಪಿಗಾಗಿ ವಿಶ್ವ ಅರಿವಳಿಕೆ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಅರಿವಳಿಕೆ ದಿನದ ಮಹತ್ವ;
ಈಥರ್ ದಿನ ಎಂದು ಕರೆಯಲ್ಪಡುವ ವಿಶ್ವ ಅರಿವಳಿಕೆ ದಿನವು ವೈದ್ಯಕೀಯ ಇತಿಹಾಸದಲ್ಲಿ ಒಂದು ಮಹತ್ವದ ಕ್ಷಣವಾಗಿದೆ. ರೋಗಿಗಳಿಗೆ ಯಾವುದೇ ನೋವನ್ನು ಅನುಭವಿಸಲು ಬಿಡದೆ ಶಸ್ತ್ರಚಿಕಿತ್ಸೆ ನಡೆಸಲು ಅನುವು ಮಾಡಿಕೊಟ್ಟ ವೈಜ್ಞಾನಿಕ ಆವಿಷ್ಕಾರವನ್ನು ಈ ದಿನ ಗೌರವಿಸಲಾಗುತ್ತದೆ. ಅದಲ್ಲದೆ ಹೆಚ್ಚುವರಿಯಾಗಿ, ಸಮಕಾಲೀನ ಆರೋಗ್ಯ ರಕ್ಷಣೆಗೆ ಇರುವ ಇದರ ಬಗ್ಗೆ ಮಾಹಿತಿ ನೀಡುವುದು ಬಹಳ ಮುಖ್ಯವಾಗಿದೆ.
ಮತ್ತಷ್ಟು ಓದಿ: World Food Day 2024 : ನೀವು ಬಿಸಾಡುವ ಆಹಾರವು ಇನ್ನೊಬ್ಬರ ಹೊಟ್ಟೆ ತುಂಬಿಸಲಿ
ವಿಶ್ವ ಅರಿವಳಿಕೆ ದಿನದ ಉದ್ದೇಶ;
ಮಾನವನ ನೋವನ್ನು ನಿಗ್ರಹಿಸುವ, ಶಸ್ತ್ರಚಿಕಿತ್ಸೆಗಳಿಗೆ ಅರಿವಳಿಕೆ ನೀಡುವ ಕ್ರಮ ಆರಂಭವಾಗಿ ಇಂದಿಗೆ 175 ಕ್ಕೂ ಹೆಚ್ಚು ವರ್ಷ ಕಳೆದಿದ್ದರೂ, ಅದರ ನಂತರ ಈ ವಿಭಾಗದಲ್ಲಿಯೇ ಅಸಂಖ್ಯಾತ ಪ್ರಗತಿ ಕಂಡಿದ್ದರೂ ಸುಮಾರು 5 ಬಿಲಿಯನ್ ಜನರಿಗೆ ಸುರಕ್ಷಿತ ಅರಿವಳಿಕೆ ಅಭ್ಯಾಸಗಳ ಕುರಿತು ಸರಿಯಾದ ಮಾಹಿತಿ ಇಲ್ಲ ಎಂದು ಸಂಶೋಧನೆಗಳಿಂದ ಬಹಿರಂಗವಾಗಿದೆ. ನೋವಿಲ್ಲದೆ ಹೆರಿಗೆ, ಶ್ವಾಸಕೋಶ, ಎದೆಭಾಗದ ಶಸ್ತ್ರಚಿಕಿತ್ಸೆಗಳು, ಮೂಳೆ ಮುರಿತ, ಕಣ್ಣುಗಳು, ಗರ್ಭಕೋಶ ಮತ್ತಿತರ ಅಂಗಗಳ ಮೇಲಿನ ಶಸ್ತ್ರಚಿಕಿತ್ಸೆಯು ನೋವಿಲ್ಲದೆ ನಡೆಯುತ್ತಿದೆ. ಆದರೆ ಜನರಿಗೆ ಈ ಬಗ್ಗೆ ಮತ್ತಷ್ಟು ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಾಗಿದೆ. ಜೊತೆಗೆ ಸಮಾಜದ ಒಳಿತಿಗಾಗಿ ದುಡಿಯುತ್ತಿರುವ ಅರಿವಳಿಕೆ ತಜ್ಞರನ್ನು ಮನಸಾರೆ ಅಭಿನಂದಿಸಬೇಕಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ