ಸಾಮನ್ಯವಾಗಿ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ಮೊಟ್ಟೆ ಎಲ್ಲರಿಗೂ ಇಷ್ಟವಾಗುತ್ತದೆ. ಇದು ಮನುಷ್ಯನ ಆರೋಗ್ಯಕ್ಕೆ ಬಹಳ ಮುಖ್ಯವಾದದ್ದು. ತಜ್ಞರು ಕೂಡ ಇದನ್ನು ಪ್ರತಿನಿತ್ಯ ಸೇವಿಸಿ ಎಂದು ಹೇಳುತ್ತಾರೆ. ಪ್ರೋಟೀನ್‌ನ ಮೂಲವಾದ ಮೊಟ್ಟೆ ತಿನ್ನುವುದು ತುಂಬಾ ಒಳ್ಳೆಯದು. ಇಂತಹ ಮೊಟ್ಟೆಯ ಅಗತ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ವಿಶ್ವ ಮೊಟ್ಟೆಯ ದಿನವನ್ನು ಆಚರಿಸಲಾಗುತ್ತದೆ. ಅಂದರೆ ಈ ಬಾರಿ ಅಕ್ಟೋಬರ್ 11 ರಂದು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಮೊಟ್ಟೆಗಳು ಪ್ರೋಟೀನ್‌ನ ಉತ್ತಮ ಮೂಲವಾಗಿದ್ದು, ಇದನ್ನು ಮನುಷ್ಯ ಮೊದಲು ಸೇವಿಸಿದ್ದು, ಕ್ರಿ.ಪೂ 7500 ರಂದು ಎಂದು ಇತಿಹಾಸ ಹೇಳುತ್ತದೆ. ಆದರೆ ಮೊದಲು, ವಿಶ್ವ ಮೊಟ್ಟೆಯ ದಿನವನ್ನು ಅಂತರಾಷ್ಟ್ರೀಯ ಮೊಟ್ಟೆ ಆಯೋಗವು 1996 ರಲ್ಲಿ ಐಇಸಿ ವಿಯೆನ್ನಾದಲ್ಲಿ ಆಚರಿಸಿತು. ಆ ಬಳಿಕ ಈ ದಿನವನ್ನು ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತದ 40 ಕ್ಕೂ ಹೆಚ್ಚು ದೇಶಗಳಲ್ಲಿ ಅಕ್ಟೋಬರ್ ಎರಡನೇ ಶುಕ್ರವಾರದಂದು ಈ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ಮೊಟ್ಟೆ ದಿನವನ್ನು ಆಚರಿಸುವ ಉದ್ದೇಶ, ಜನರಲ್ಲಿ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಮೊಟ್ಟೆ ಹೃದಯಕ್ಕೆ ಒಳ್ಳೆಯದು. ಅವು ಪ್ರೋಟೀನ್‌ನ ಉತ್ತಮ ಮೂಲ ಮಾತ್ರವಲ್ಲದೇ, ಅಗತ್ಯ ವಿಟಮಿನ್ಗಳಾದ ಡಿ, ಬಿ 6, ಬಿ 12, ಮತ್ತು ಖನಿಜಗಳಾದ ಸತು, ತಾಮ್ರ ಮತ್ತು ಕಬ್ಬಿಣವನ್ನು ಸಹ ಒದಗಿಸುತ್ತವೆ ಜೊತೆಗೆ ಮೂಳೆಗಳಿಗೆ ಅಗತ್ಯವಾದ ರಂಜಕದಂತಹ ಎಲ್ಲಾ ಪೋಷಕಾಂಶಗಳಿವೆ. ಜೊತೆಗೆ ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳು ಸಹ ಇದರಲ್ಲಿ ಕಂಡು ಬರುತ್ತವೆ. ವಿಶೇಷವಾಗಿ ಹಳದಿ ಲೋಳೆಯು ಎ, ಡಿ, ಇ, ಮತ್ತು ಕೆ ನಂತಹ ವಿಟಮಿನ್, ಲೆಸಿಥಿನ್ ಕೂಡ ಸಮೃದ್ಧವಾಗಿದೆ. ಇಂತಹ ಮೊಟ್ಟೆಯ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಮೊಟ್ಟೆ ದಿನವನ್ನು ಆಚರಿಸಲಾಗುತ್ತದೆ.
ಚಿಕ್ಕ ಗಾತ್ರದ ಮೊಟ್ಟೆಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಒಂದು ಮೊಟ್ಟೆಯಲ್ಲಿ ಸರಿಸುಮಾರು 77 ಕ್ಯಾಲೋರಿಗಳನ್ನು ಹೊಂದಿರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ನಿಮ್ಮ ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ಸೇವಿಸಿ. ಇದು ದೇಹಕ್ಕೆ ಸಂಪೂರ್ಣ ಶಕ್ತಿಯನ್ನು ನೀಡುತ್ತದೆ. ಬೆಳಿಗ್ಗೆ ಮೊಟ್ಟೆಗಳನ್ನು ತಿನ್ನುವುದು ನಿಮ್ಮ ಜೀರ್ಣಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ. ಮೊಟ್ಟೆ ಮನುಷ್ಯನಿಗೆ ಪರಿಪೂರ್ಣ ಆಹಾರವಾಗಿದ್ದು ವಿಟಮಿನ್ ಸಿಹೊರತು ಪಡಿಸಿ ಬಹುತೇಕ ಎಲ್ಲಾ ಪೋಶಕಾಂಶ ಇದರಲ್ಲಿ ಸಿಗುತ್ತದೆ. ಇದರ ಸೇವನೆಯಿಂದ ದೇಹ ಬಲಿಷ್ಠ ಆಗುವ ಜೊತೆಗೆ ಸದೃಢ ಆಗುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿನಿತ್ಯ ಮೊಟ್ಟೆ ಸೇವನೆ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ