World Immunization Day 2024: ವಿಶ್ವ ರೋಗನಿರೋಧಕ ದಿನ ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ತಿಳಿಯಿರಿ

| Updated By: ಅಕ್ಷತಾ ವರ್ಕಾಡಿ

Updated on: Nov 10, 2024 | 10:10 AM

ಯಾವುದೇ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆ ಅಥವಾ ವ್ಯಾಕ್ಸಿನೇಷನ್‌ಗಳ ಪಾತ್ರ ಪ್ರಮುಖವಾಗಿದೆ. ಇದೇ ಕಾರಣದಿಂದ ಲಸಿಕೆಗಳನ್ನು ಪ್ರತಿಯೊಬ್ಬರೂ ಪಡೆಯಲೇಬೇಕು. ಹೌದು ಅಪಾಯಕಾರಿ ಕಾಯಿಲೆಗಳು ಬಾರದಂತೆ ತಡೆಯಲು ವ್ಯಾಕ್ಸಿನೇಷನ್‌ ಅತ್ಯಗತ್ಯ. ಹಾಗಾಗಿ ವ್ಯಾಕ್ಸಿನೇಷನ್‌ಗಳ ಪ್ರಾಮುಖ್ಯತೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಪ್ರತಿವರ್ಷ ನವೆಂಬರ್‌ 10 ರಂದು ವಿಶ್ವ ರೋಗನಿರೋಧಕ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.

World Immunization Day 2024: ವಿಶ್ವ ರೋಗನಿರೋಧಕ ದಿನ ಏಕೆ ಆಚರಿಸಲಾಗುತ್ತದೆ? ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆ ತಿಳಿಯಿರಿ
World Immunization Day
Follow us on

ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಲ್ಲಿ ಮತ್ತು ಸಾರ್ವಜನಿಕ ಆರೋಗ್ಯವನ್ನು ರಕ್ಷಿಸುವಲ್ಲಿ ಲಸಿಕೆ ಅಥವಾ ವ್ಯಾಕ್ಸಿನೇಷನ್‌ಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಲಸಿಕೆಗಳು ಆರೋಗ್ಯ ಹದಗೆಡಂತೆ ನೋಡಿಕೊಳ್ಳಲು ಹಾಗೂ ವೈರಸ್‌ಗಳು, ಬ್ಯಾಕ್ಟೀರಿಯಾಗಳನ್ನು ದೇಹದಿಂದ ಸಂಪೂರ್ಣವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೂಪರ್‌ ಹೀರೋ ಔಷಧಿಯಾಗಿ ಕಾರ್ಯನಿರ್ವಹಿಸುವ ಲಸಿಕೆಗಳ ಬಗ್ಗೆ ಅರಿವು ಮೂಡಿಸಲು ಮತ್ತು ಮಾರಣಾಂತಿಕ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜನರಿಗೆ ತಿಳಿಸಲು ಪ್ರಪಂಚದಾದ್ಯಂತ ಪ್ರತಿ ವರ್ಷ ನವೆಂಬರ್‌ 10 ರಂದು ವಿಶ್ವ ರೋಗನಿರೋಧಕ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ.

ವಿಶ್ವ ರೋಗನಿರೋಧಕ ದಿನದ ಇತಿಹಾಸ:

ಪ್ರಪಂಚದಾದ್ಯಂತ ವ್ಯಾಕ್ಸಿನೇಷನ್‌ಗಳ ಪ್ರಾಮುಖ್ಯತೆಯನ್ನು ವಿವರಿಸುವುದು ಮತ್ತು ಇದರ ಬಗ್ಗೆ ಪ್ರಚಾರ ಮಾಡುವುದು, ಮಾರಣಾಂತಿಕ ರೋಗಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳು ವಹಿಸುವ ಪ್ರಾತ್ರದ ಬಗ್ಗೆ ಸರ್ಕಾರಗಳು ಮತ್ತು ವ್ಯಕ್ತಿಗಳಿಗೆ ನೆನಪಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) 2012 ವಿಶ್ವ ರೋಗ ನಿರೋಧಕ ದಿನವನ್ನು ಆಚರಿಸಲು ಪ್ರಾರಂಭಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್‌ 10 ರಂದು ವಿಶ್ವ ರೋಗನಿರೋಧಕ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ರೋಗ ನಿರೋಧಕ ದಿನದ ಪ್ರಾಮುಖ್ಯತೆ:

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಪ್ರತಿವರ್ಷ ವ್ಯಾಕ್ಸಿನೇಷನ್‌ ಸುಮಾರು 2-3 ಮಿಲಿಯನ್‌ ಜನರ ಸಾವನ್ನು ತಡೆಯುತ್ತದೆ, ಇದರ ಜೊತೆಯಲ್ಲಿ ಇದು ದಡಾರ, ಪೊಲೀಯೊ ಮತ್ತು ಟೆಟನಸ್‌ ಸೇರಿದಂತೆ ಅಪಾಯಕಾರಿ ಕಾಯಿಲೆಗಳ ಸೋಂಕಿಗೆ ಮಕ್ಕಳನ್ನು ಒಳಗಾಗದಂತೆ ರಕ್ಷಿಸುತ್ತದೆ. ಲಕ್ಷಾಂತರ ಜೀವಗಳನ್ನು ಉಳಿಸುವ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಲಭ್ಯವಿರುವ ಅತ್ಯಂತ ಶಕ್ತಿಶಾಲಿ ಸಾಧನಗಳಲ್ಲಿ ಲಸಿಕೆಗಳು ಕೂಡಾ ಒಂದು. ಲಸಿಕೆಗಳು ಅವುಗಳನ್ನು ಸ್ವೀಕರಿಸುವ ವ್ಯಕ್ತಿಗಳನ್ನು ರಕ್ಷಿಸುವು ಮಾತ್ರವಲ್ಲದೆ ಸಮುದಾಯಗಳಲ್ಲಿ ರೋಗಗಳ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಮತ್ತು ಇದು ದೀರ್ಘಾವಧಿಯಲ್ಲಿ ಗಂಭೀರ ತೊಡಕುಗಳನ್ನು ಉಂಟುಮಾಡುವ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇಂತಹ ಲಸಿಕೆಗಳ ಪ್ರಾಮುಖ್ಯತೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ರೋಗನಿರೋಧಕ ದಿನವನ್ನು ಆಚರಿಸಲಾಗುತ್ತದೆ,

ರೋಗಗಳನ್ನು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ಲಸಿಕೆಗಳು:

ಲಸಿಕೆಗಳು ಸೂಪರ್‌ ಹೀರೋ ಔಷಧಿಯಂತೆ, ಅವುಗಳು ಎಷ್ಟು ಶಕ್ತಿಯುತವಾದವು ಎಂದರೆ ಇವು ಮನುಷ್ಯನಿಗೆ ಹರಡುವ ಹಲವು ಭಯಾನಕ ಕಾಯಿಲೆಗಳನ್ನು ಹೋಗಲಾಡಿಸುತ್ತವೆ. ಐತಿಹಾಸಿಕವಾಗಿ ವ್ಯಾಕ್ಸಿನೇಷನ್‌ಗಳು ಅನೇಕ ಮಾರಕ ರೋಗಗಳ ಸಂಭವವನ್ನು ಗಣನೀಯವಾಗಿ ಕಡಿಮೆ ಮಾಡಿದೆ. 18 ನೇ ಶತಮಾನದಲ್ಲಿ ಸಿಡುಬು ಲಸಿಕೆ ಅಭಿವೃದ್ಧಿಯು ಆ ರೋಗದ ನಿರ್ಮೂಲನೆಗೆ ಕಾರಣವಾಯಿತು. 20 ನೇ ಶತಮಾನದಲ್ಲಿ ಪೋಲಿಯೊ, ದಡಾರ ಇತ್ಯಾದಿ ಸೋಂಕುಗಳ ಲಸಿಕೆಗಳು, ಅಭಿಯಾನಗಳು ಜಾಗತಿಕ ರೋಗ ಮತ್ತು ಮರಣ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಗೆ ಕಾರಣವಾಯಿತು.

ಇದನ್ನೂ ಓದಿ: Health News: ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ತಲೆನೋವು ಕಾಡುತ್ತದೆಯೇ?

ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ಪ್ರಮಾಣದಲ್ಲಿ ಲಸಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಎಲ್ಲಾ ವಯೋಮಾನದವರಿಗೆ ಲಸಿಕೆ ಅಥವಾ ವ್ಯಾಕ್ಸಿನೇಷನ್‌ ಅವಶ್ಯಕ. ಅದರಲ್ಲೂ ನವಜಾತ ಶಿಶುಗಳು ಮತ್ತು ಸಣ್ಣ ಮಕ್ಕಳಿಗೆ ಇದು ತುಂಬಾನೇ ಅಗತ್ಯ. ಭವಿಷ್ಯದಲ್ಲಿ ಗಂಭೀರ ಕಾಯಿಲೆಗಳಿಂದ ಮಗುವನ್ನು ರಕ್ಷಿಸಲು, ರೊಟೊವೈರಸ್‌, ಹೆಪೆಟೈಟಿಸ್‌ ಮತ್ತು ಪೋಲಿಯೋದಂತಹ ಸೋಂಕಿಗೆ ಗುರಿಯಾಗುವುದನ್ನು ತಪ್ಪಿಸಲು ಹಾಗೂ ಮಗುವಿನ ದೇಹದಲ್ಲಿ ವೈರಸ್‌ಗಳ ವಿರುದ್ಧ ಹೋರಾಡುವ ರೋಗನಿರೋಧಕ ಸಾಮರ್ಥ್ಯವನ್ನು ಬೆಳೆಸಲು ವಿವಿಧ ರೀತಿಯ ಲಸಿಕೆಗಳನ್ನು ನೀಡಲಾಗುತ್ತದೆ. ಉದಾಹರಣೆಗೆ 5 ವರ್ಷದೊಳಗಿನ ಮಕ್ಕಳಿ ಪೋಲಿಯೋ ಎಂಬ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚು ಅದಕ್ಕಾಗಿಯೇ ಪ್ರತಿವರ್ಷ ಭಾರತದಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೊ ಲಸಿಕೆಗಳನ್ನು ನೀಡಲಾಗುತ್ತದೆ. ಇನ್ನೂ ಕೋವಿಡ್‌ ಮಹಾಮಾರಿಯ ಸಂದರ್ಭದಲ್ಲಿ ಕೋವಿಡ್-19‌ ಲಸಿಕೆಗಳು ಕೂಡಾ ವೈರಸ್‌ಗಳಿಂದ ಅದೆಷ್ಟೋ ಜೀವಗಳನ್ನು ಉಳಿಸಿವೆ. ಹೀಗೆ ಒಂದು ನಿರ್ಧಿಷ್ಟ ಲಸಿಕೆ ರೋಗಗಳನ್ನು ಮತ್ತು ಸೋಂಕುಗಳನ್ನು ತಡೆಗಟ್ಟುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ