ಮೇ 28 ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನದ (World Menstrual Hygiene Day) ಅಂಗವಾಗಿ, News9 ವಾಹಿನಿಯು ಭಾರತದ ಅತ್ಯಂತ ಪ್ರಭಾವಶಾಲಿ ಮಹಿಳೆಯರನ್ನು ಒಟ್ಟುಗೂಡಿಸಿ ‘ದಿ ಶಿ-ಕಾನಮಿ ಅಜೆಂಡಾ, ಪಿರಿಯಡ್ ಪವರ್’ (The SHEconomy Agenda, Period Power) ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಮುಟ್ಟಿನ ಬಡತನ (period poverty), ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಒಳಗೊಳ್ಳುವಿಕೆ, ಶೌಚಾಲಯದ ಮೂಲಸೌಕರ್ಯಗಳು ಮತ್ತು ಭಾರತಕ್ಕೆ ತುರ್ತಾಗಿ ಅಗತ್ಯವಿರುವ ಮುಟ್ಟಿನ ನೀತಿ ಸುಧಾರಣೆಗಳ ಕುರಿತು ಗಂಭೀರ ಚರ್ಚೆ ನಡೆಸಲಾಯಿತು.
ಸಂಶೋಧನೆಗಳ ಪ್ರಕಾರ, ಮುಟ್ಟಿನ ದಿನಗಳು ಮಹಿಳೆಯರ ಕೆಲಸದ ದಕ್ಷತೆಯ ಮೇಲೆ ಪರಿಣಾಮ ಬೀರುತ್ತವೆ. ಆದಾಗ್ಯೂ, ಭಾರತದ ಬಹುತೇಕ ಕಚೇರಿಗಳಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ಅಧಿಕೃತ ನೀತಿಗಳಿಲ್ಲ. ಇದು ಕೇವಲ ರಜೆ ನೀಡುವುದಕ್ಕೆ ಸೀಮಿತವಾಗಿರದೆ, ಸ್ವಚ್ಛವಾದ ಶೌಚಾಲಯಗಳು, ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಬಿನ್‌ಗಳು, ಕಚೇರಿ ಅವಧಿಯಲ್ಲಿ ಅಗತ್ಯ ವಿರಾಮಗಳು ಮತ್ತು ಮುಟ್ಟಿನ ನೋವಿನ ಬಗ್ಗೆ ಮುಕ್ತವಾಗಿ ಮಾತನಾಡುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಎಂಬಿತ್ಯಾದಿ ಅಭಿಪ್ರಾಯಗಳು ಈ ಚರ್ಚೆಯ ವೇಳೆ ಬಂದವು.
ಸುಲಭ್ ಇಂಟರ್ನ್ಯಾಷನಲ್ ಸಂಸ್ಥೆಯ ರಾಷ್ಟ್ರೀಯ ನಿರ್ದೇಶಕಿ ನಿರ್ಜಾ ಭಟ್ನಾಗರ್ ಅವರು, “ನಮ್ಮ ಕೆಲಸದ ಸಂಸ್ಕೃತಿ ಇನ್ನೂ ಪುರುಷ ಪ್ರಧಾನವಾಗಿದೆ. ಕಚೇರಿಗಳು ಲಿಂಗ-ಅಂತರ್ಗತವಾಗಿರಬೇಕು (gender-inclusive) ಮತ್ತು ಮುಟ್ಟಿನ ರಜೆಯಂತಹ (menstrual leave) ನೀತಿಗಳನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದರು.
ಇದನ್ನೂ ಓದಿ: ಪ್ರತಿದಿನ 1 ಕಿಲೋಮೀಟರ್ ನಡೆದರೆ ಎಷ್ಟು ಕ್ಯಾಲೊರಿ ಕರಗುತ್ತೆ ಗೊತ್ತಾ? ಇಲ್ಲಿದೆ ಆರೋಗ್ಯ ತಜ್ಞರು ನೀಡಿರುವ ಮಹತ್ವದ ಮಾಹಿತಿ
ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರಾದ ಗೀತಾ ಲುತ್ರಾ, “ಸ್ವಚ್ಛ ಮತ್ತು ಬಳಸಲು ಯೋಗ್ಯವಾದ ಶೌಚಾಲಯಗಳು ಮೊದಲ ಅವಶ್ಯಕತೆಯಾಗಿದೆ. ಇತರ ರಜೆಗಳಂತೆಯೇ ಮುಟ್ಟಿನ ರಜೆಗೂ ಕಚೇರಿಗಳಲ್ಲಿ ಅವಕಾಶವಿರಬೇಕು” ಎಂದು ಒತ್ತಾಯಿಸಿದರು.
ಮ್ಯಾಕ್ಸ್ ಹೆಲ್ತ್‌ಕೇರ್‌ನ ಐವಿಎಫ್ ವಿಭಾಗದ ಮುಖ್ಯಸ್ಥರಾದ ಡಾ. ಸುರ್ವೀನ್ ಘುಮನ್ ಸಿಂಧು ಮಾತನಾಡಿ, “ಮುಟ್ಟಿನ ರಜೆಯಂತಹ ಕ್ರಮಗಳ ಮೂಲಕ ಅಧಿಕೃತ ಮಾನ್ಯತೆ ಸಿಗುವವರೆಗೂ, ಜನರು ಮುಟ್ಟಿನ ಬಗ್ಗೆ ಬಹಿರಂಗವಾಗಿ ಮಾತನಾಡಲು ಹಿಂಜರಿಯುತ್ತಾರೆ. ಮುಟ್ಟು ಎಂಬುದು ಪ್ರಕೃತಿ ಸಹಜ ಪ್ರಕ್ರಿಯೆ ಎಂಬುದನ್ನು ನಾವು ಒಪ್ಪಿಕೊಂಡು, ಯಾವುದೇ ಪೂರ್ವಾಗ್ರಹವಿಲ್ಲದೆ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ” ಎಂದು ತಿಳಿಸಿದರು.
ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ನ್ಯೂಸ್9ನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅತಿಥಿಗಳು (Photo credit: News9)
ನೀತಿ ಆಯೋಗದ ಮಾಜಿ ನಿರ್ದೇಶಕಿ ಊರ್ವಶಿ ಪ್ರಸಾದ್ ಅವರು ನೀತಿಗಳನ್ನು ಅನುಷ್ಠಾನಕ್ಕೆ ತರಲು ಇರುವ ಸವಾಲುಗಳನ್ನು ಪ್ರಸ್ತಾಪಿಸಿದರು. “ಅನೇಕ ನೀತಿಗಳು ಕೇವಲ ಕಾಗದದ ಮೇಲಿರುತ್ತವೆಯೇ ಹೊರತು ಸರಿಯಾಗಿ ಅನುಷ್ಠಾನಕ್ಕೆ ಬರುವುದಿಲ್ಲ. ಮಹಿಳೆಯರಿಗಾಗಿ ತರುವ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳಬಹುದು ಎಂಬ ಮನಸ್ಥಿತಿ ಇಂದಿಗೂ ಇದೆ. ಈ ಮನಸ್ಥಿತಿ ಬದಲಾಗಬೇಕಿದೆ” ಎಂದರು ಊರ್ವಳಿ ಪ್ರಸಾದ್.
ಹ್ಯೂಮನ್ ಕ್ಯಾಪಿಟಲ್ ಕಂಪನಿಯ ಸಲಹೆಗಾರ್ತಿ ಡಾ. ಕಿರಣ್‌ಪ್ರೀತ್ ಕೌರ್ ಅವರೂ ಈ ಅಭಿಪ್ರಾಯಕ್ಕೆ ಧ್ವನಿಗೂಡಿಸಿದರು. ಅಲ್ಲದೆ, “ಮುಟ್ಟಿನ ಆರೋಗ್ಯ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: ಥೈರಾಯ್ಡ್‌ನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ; ಆಹಾರದಲ್ಲಿ ಈ ಬದಲಾವಣೆಯನ್ನು ಅಗತ್ಯವಾಗಿ ಮಾಡಿಕೊಳ್ಳಿ
ಹಿಮಾಲಯದಲ್ಲಿ ಎವರೆಸ್ಟ್ ಶಿಖರ ಏರಿದ ಮಹಿಳಾ ಸಾಹಸಿ ಸುನಿತಾ ಸಿಂಗ್ ಚೋಕನ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡು, ಪರ್ವತಾರೋಹಣದಲ್ಲಿ ಎದುರಾದ ಸವಾಲುಗಳನ್ನು ಪ್ರಸ್ತಾಪಿಸಿದರು. “ನಾನು ಎವರೆಸ್ಟ್ ಏರುವ ಸಮಯದಲ್ಲಿ ಮುಟ್ಟಾಗಿದ್ದೆ. ಆಮ್ಲಜನಕದ ಕೊರತೆ ಮತ್ತು ತೀವ್ರ ದೈಹಿಕ ಸವಾಲುಗಳ ನಡುವೆಯೂ ನಾನು ಮುನ್ನಡೆದು ಶಿಖರ ತಲುಪಿದೆ” ಎಂದರು. ಮಹಿಳೆಯರು ಯಾವುದೇ ಸೂಕ್ತ ಬೆಂಬಲ ಅಥವಾ ಮಾನ್ಯತೆ ಇಲ್ಲದಿದ್ದರೂ ಇಂತಹ ಕಠಿಣ ಪರಿಸ್ಥಿತಿಗಳಲ್ಲಿ ಅಸಾಧಾರಣ ಸಾಧನೆಗಳನ್ನು ಮಾಡುತ್ತಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಭಾರತದಲ್ಲಿ ಮಹಿಳೆಯರು ಸುರಕ್ಷಿತವಾಗಿ, ಗೌರವಯುತವಾಗಿ ಮತ್ತು ಖಾಸಗಿತನ ಕಾಯ್ದುಕೊಂಡು ಮುಟ್ಟನ್ನು ನಿರ್ವಹಿಸುವುದು ಇಂದಿಗೂ ಒಂದು ಸವಾಲಾಗಿದೆ. ಶಾಲೆಗಳಲ್ಲಿ ಶೌಚಾಲಯದ ಕೊರತೆಯಿಂದ ಹಿಡಿದು ಕಚೇರಿಗಳಲ್ಲಿ ಮುಟ್ಟಿನ ನೋವನ್ನು ನಿರ್ಲಕ್ಷಿಸುವವರೆಗೆ ಹಲವು ವ್ಯವಸ್ಥಿತ ಮತ್ತು ಸಾಂಸ್ಕೃತಿಕ ಅಡೆತಡೆಗಳಿವೆ. ಇವುಗಳನ್ನು ಹೋಗಲಾಡಿಸಲು ಕಟ್ಟುನಿಟ್ಟಿನ ನೀತಿಗಳು ಮತ್ತು ಸಮಾಜದ ಮನಸ್ಥಿತಿಯಲ್ಲಿ ಬದಲಾವಣೆ ಅತ್ಯಗತ್ಯ ಎಂದು ಈ ಸಂವಾದದಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ