World Osteoporosis Day 2023: ಭಾರತದ 5 ಮಹಿಳೆಯರಲ್ಲಿ ಒಬ್ಬರಿಗೆ ಆಸ್ಟಿಯೊಪೊರೋಸಿಸ್ ಸಮಸ್ಯೆ; ಏನಿದಕ್ಕೆ ಕಾರಣ?

|

Updated on: Oct 20, 2023 | 1:13 PM

ಎಷ್ಟೋ ಮಹಿಳೆಯರಿಗೆ ಆಸ್ಟಿಯೊಪೊರೋಸಿಸ್ ಸಮಸ್ಯೆ ಇರುವುದೇ ತಿಳಿದಿರುವುದಿಲ್ಲ. ಆಸ್ಟಿಯೊಪೊರೋಸಿಸ್‌ನ ಆರಂಭಿಕ ಹಂತವು ಮೂಳೆ ಮುರಿಯುವವರೆಗೂ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಅದನ್ನು ತಡೆಗಟ್ಟುವಿಕೆ ಬಹಳ ಅಗತ್ಯ.

World Osteoporosis Day 2023: ಭಾರತದ 5 ಮಹಿಳೆಯರಲ್ಲಿ ಒಬ್ಬರಿಗೆ ಆಸ್ಟಿಯೊಪೊರೋಸಿಸ್ ಸಮಸ್ಯೆ; ಏನಿದಕ್ಕೆ ಕಾರಣ?
ಮೂಳೆಯ ಆರೋಗ್ಯ
Image Credit source: iStock
Follow us on

ನವದೆಹಲಿ: ಆಸ್ಟಿಯೊಪೊರೋಸಿಸ್ ಎಂಬುದು ಮೂಳೆಗಳಿಗೆ ಸಂಬಂಧಿಸಿದ ಒಂದು ರೋಗ. ಇದರಿಂದ ಮೂಳೆ ಸವೆಯತೊಡಗುತ್ತದೆ ಮತ್ತು ಮುರಿಯಲಾರಂಭಿಸುತ್ತದೆ. ಋತುಬಂಧದ ನಂತರ ಮಹಿಳೆಯರಲ್ಲಿ ಮೂಳೆ ಸಾಂದ್ರತೆಯು ಬಹಳ ಕಡಿಮೆಯಾಗುತ್ತದೆ ಎಂದು ಸಾಬೀತಾಗಿದೆ. ಋತುಬಂಧದ ಬಳಿಕ ಮಹಿಳೆಯರ ಮೂಳೆ ದ್ರವ್ಯರಾಶಿಯ ಸುಮಾರು ಶೇ. 10ರಷ್ಟು ನಷ್ಟವಾಗುತ್ತದೆ. ಇದು ಮುಖ್ಯವಾಗಿ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುವ ಈಸ್ಟ್ರೊಜೆನ್ ರೀತಿಯ ಸಂತಾನೋತ್ಪತ್ತಿ ಹಾರ್ಮೋನ್​ಗಳ ಕುಸಿತದಿಂದಾಗಿ ಸಂಭವಿಸುತ್ತದೆ.

ವಸಂತ್‌ ಕುಂಜ್‌ನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸೆ ವಿಭಾಗದ ಪ್ರಧಾನ ನಿರ್ದೇಶಕ ಡಾ. ಗುರಿಂದರ್‌ ಬೇಡಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದಲ್ಲಿ 5ರಲ್ಲಿ ಒಬ್ಬರು ಮಹಿಳೆ ಆಸ್ಟಿಯೊಪೊರೋಸಿಸ್‌ಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಅವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಪಾಶ್ಚಿಮಾತ್ಯ ಜನಸಂಖ್ಯೆಯಲ್ಲಿ ಇದೇ ವಯಸ್ಸಿನ ಪ್ರಮಾಣಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಭಯಾನಕ ಕಾಯಿಲೆಯ ಸಾಧ್ಯತೆ ತುಂಬಾ ಹೆಚ್ಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Bone Health: ನೈಸರ್ಗಿಕವಾಗಿ ಮೂಳೆಗಳನ್ನು ಸದೃಢಗೊಳಿಸುವುದು ಹೇಗೆ?

ಮಹಿಳೆಯರಲ್ಲಿ ಮೂಳೆ ಸವಕಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಹೆಚ್ಚು ಕ್ಯಾಲ್ಸಿಯಂ ತಿನ್ನಬೇಕು ಅಥವಾ ಕ್ಯಾಲ್ಸಿಯಂ ಸಮೃದ್ಧ ಆಹಾರವನ್ನು ತೆಗೆದುಕೊಳ್ಳಬೇಕು. ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ ಎಂಬುದರಲ್ಲಿ ಸಂದೇಹವಿಲ್ಲ. ಕ್ಯಾಲ್ಸಿಯಂ ಬದುಕುಳಿಯಲು ಅಗತ್ಯವಾದ ಖನಿಜವಾಗಿದೆ. ನಾವು 24 ಗಂಟೆಗೆ ಕನಿಷ್ಠ 1300 ಮಿಗ್ರಾಂ ಕ್ಯಾಲ್ಸಿಯಂ ಅನ್ನು ತಿನ್ನಲು ಪ್ರಯತ್ನಿಸಬೇಕು. ಅಂದರೆ ಹಾಲು, ಮೊಸರು, ಪನೀರ್, ಮಜ್ಜಿಗೆ, ಪಾಲಕ್, ಕೋಸುಗಡ್ಡೆ, ರಾಗಿ, ಮೊಗ್ಗುಗಳು, ಬಾದಾಮಿ, ಕಡಲೆಕಾಯಿ, ಎಳ್ಳು ಮುಂತಾದ ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇವಿಸಬೇಕು. ನಮ್ಮ ದಿನನಿತ್ಯದ ಆಹಾರದಲ್ಲಿ ನಟ್ಸ್​, ಸೋಯಾಬೀನ್, ಕಡಲೆ, ಹೆಸರುಕಾಳು, ಬಕ್ವೀಟ್, ಪಿಸ್ತಾವನ್ನು ಸೇರಿಸಿಕೊಳ್ಳಬೇಕು ಎಂದು ತಜ್ಞರು ಹೇಳಿದ್ದಾರೆ.

ಎಷ್ಟೋ ಮಹಿಳೆಯರಿಗೆ ಆಸ್ಟಿಯೊಪೊರೋಸಿಸ್ ಸಮಸ್ಯೆ ಇರುವುದೇ ತಿಳಿದಿರುವುದಿಲ್ಲ. ಆಸ್ಟಿಯೊಪೊರೋಸಿಸ್‌ನ ಆರಂಭಿಕ ಹಂತವು ಮೂಳೆ ಮುರಿಯುವವರೆಗೂ ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಅದನ್ನು ತಡೆಗಟ್ಟುವಿಕೆ ಬಹಳ ಅಗತ್ಯ. ಋತುಬಂಧದ ವಯಸ್ಸನ್ನು ಸಮೀಪಿಸುತ್ತಿರುವ ಮಹಿಳೆಯರಲ್ಲಿ ಮೂಳೆಯ ದ್ರವ್ಯರಾಶಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆದರೆ, ಈ ಪ್ರಯಾಣವು ಜೀವನದಲ್ಲಿ ಬಹಳ ಬೇಗನೆ ಪ್ರಾರಂಭವಾಗಬೇಕು. ಹೆಣ್ಣು ಮಗುವನ್ನು ದೈಹಿಕವಾಗಿ ಹೆಚ್ಚು ಕ್ರಿಯಾಶೀಲವಾಗಿರುವಂತೆ ನಾವು ನೋಡಿಕೊಳ್ಳಬೇಕು. ಕ್ರೀಡೆಗಳನ್ನು ಆಡುವುದು, ಓಡುವುದು, ಮೆಟ್ಟಿಲುಗಳನ್ನು ಬಳಸುವುದು ಹೀಗೆ ಮಹಿಳೆಯರು ಹೆಚ್ಚು ಆ್ಯಕ್ಟಿವ್ ಆಗಿರಬೇಕು. ಉತ್ತಮ ಮೂಳೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹಕ್ಕೆ ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಗತ್ಯವಿದೆ.

ಇದನ್ನೂ ಓದಿ: World Spine Day: ಬೆನ್ನುನೋವು ಕಾಡುತ್ತಿದೆಯೇ? ಬೆನ್ನುಮೂಳೆಯ ಆರೈಕೆಗೆ 8 ಸಲಹೆಗಳು ಇಲ್ಲಿವೆ

ಆಸ್ಟಿಯೋಪೊರೊಸಿಸ್ ಅಂದರೆ ಮೂಳೆಗಳಲ್ಲಿ ಉಂಟಾಗುವ ರಂಧ್ರಗಳು ಹಾಗೂ ಅದರಿಂದ ಉಂಟಾಗುವ ಅಸ್ಥಿರತೆಯ ಸಮಸ್ಯೆ. ಇದರ ಪರಿಣಾಮವಾಗಿ ಮೂಳೆಗಳು ಸಂಪೂರ್ಣವಾಗಿ ದೃಢತೆಯನ್ನು ಕಳೆದುಕೊಳ್ಳುತ್ತವೆ. ಹೀಗಾದಾಗ ಮನೆಯಲ್ಲಿರುವ ವೃದ್ಧರು ಕೆಳಗೆ ಬಿದ್ದರೆ ಕೂಡಲೇ ಸೊಂಟ, ಮಣಿಕಟ್ಟು, ಬೆನ್ನು ಹುರಿ, ತಲೆಗೆ ಗಾಯಗಳಾಗುವುದು ಅಥವಾ ಮೂಳೆ ಮುರಿತ ಉಂಟಾಗುವುದು ಸಾಮಾನ್ಯ. ಈ ಗಾಯಗಳು ಜೀವನಪೂರ್ತಿ ಮಹಿಳೆಯರಲ್ಲಿ ಶೇ.17.5ರಷ್ಟು ಮತ್ತು ಪುರುಷರಲ್ಲಿ ಶೇ.6.1ರಷ್ಟು ಕಾಡುತ್ತಲೇ ಇರುತ್ತವೆ. ಜಗತ್ತಿನಾದ್ಯಂತ ಈ ರೀತಿಯ ಗಾಯಗಳು 2050ಕ್ಕೆ 6 ಮಿಲಿಯನ್ ಜನರಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ