ಮಹಿಳೆಯರು ಗರ್ಭಿಣಿಯಾದಾಗ ಮತ್ತು ಹೆರಿಗೆಯ ನಂತರ ಅವರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತದೆ. ರಾತ್ರಿ ನಿದ್ದೆ ಬಾರದೆ ಇರುವುದು, ಒತ್ತಡ, ಹೊಟ್ಟೆಯಲ್ಲಿ ಮೇಲೆ ಕಾಣಿಸುವ ನೆರಿಗೆಯ ಕಲೆ, ಮಾನಸಿಕವಾಗಿ ಕುಗ್ಗವುದು, ದೇಹದ ತೂಕ ಹೆಚ್ಚಾಗುವುದು, ಈ ರೀತಿಯ ನಾನಾ ಸಮಸ್ಯೆಗಳು ಕಾಡುತ್ತದೆ. ಅದರಲ್ಲೂ ದೇಹದ ತೂಕ ಹೆಚ್ಚಾಗುವುದು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಒಂದು ವಿಷಯ. ಹೆರಿಗೆಯ ನಂತರದಲ್ಲಿ ತೂಕ ಇಳಿಸಲು ಅತಿ ಹೆಚ್ಚು ಪ್ರಯತ್ನಪಟ್ಟರೆ ಅದು ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ ಎನ್ನುವ ಆತಂಕ, ತೂಕ ಹೆಚ್ಚಾಗಿರುವ ಬಗ್ಗೆ ಬೇಸರ ಇದು ಮಹಿಳೆಯನ್ನು ಹೈರಾಣು ಮಾಡುತ್ತದೆ. ಚಿಂತೆ ಪಡುವುದು ಬೇಡ ಹೇರಿಗೆಯ ನಂತರ ತೂಕ ಇಳಿಸಿಕೊಳ್ಳಲು ಈ ಸರಳ ಮಾರ್ಗವನ್ನು ಅನುಸರಿಸಿ.
1. ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ
ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ಅಲ್ಲದೇ ನೀರು ಹೆಚ್ಚು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ನೀರು ದೇಹಕ್ಕೆ ತುಂಬಾ ಮುಖ್ಯ. ದೇಹದಲ್ಲಿನ ಅನಗತ್ಯ ಕೊಬ್ಬಿನಾಂಶವನ್ನು ಕಡಿಮೆ ಮಾಡಿ, ಹೆಚ್ಚು ಆರೋಗ್ಯಯುತವಾಗಿರನ್ನು ಸಹಾಯ ಮಾಡುತ್ತದೆ. ಆ ಮೂಲಕ ದೇಹದ ತೂಕವು ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚು ನೀರು ಕುಡಿಯಿರಿ ಮತ್ತು ಅದೇ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯನ್ನು ಮಾಡಿ.
2. ವ್ಯಾಯಾಮಾ
ಹೆರಿಗೆಯ ನಂತರದಲ್ಲಿ ತೂಕ ಇಳಿಸಲು ಕೆಲವೊಂದು ಆಹಾರ ಕ್ರಮಗಳನ್ನು ಅನುಸರಿಸಬೇಕು. ಜತೆಗೆ ದೇಹದ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮವನ್ನು ಮಾಡಬೇಕು. ವ್ಯಾಯಾಮವು ನಮ್ಮ ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆ ಮಾಡಲು, ಸ್ನಾಯು ಮತ್ತು ಮೂಳೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹೆರಿಗೆಯ ನಂತರ ಸಮಯ ಸಿಕ್ಕರೆ ಏರೋಬಿಕ್ ಕ್ಲಾಸ್ ಅಥವಾ ಯೋಗ ತರಬೇತಿ ಕೇಂದ್ರಕ್ಕೆ ಹೋಗುವುದು ಉತ್ತಮ. ವ್ಯಾಯಾಮವು ತೂಕ ಇಳಿಸುವ ಜತೆಗೆ ಒತ್ತಡವನ್ನು ನಿವಾರಿಸುತ್ತದೆ ಮತ್ತು ನೆಮ್ಮದಿಯ ನಿದ್ರೆಗೆ ದಾರಿ ಮಾಡಿಕೊಡುತ್ತದೆ.
3. ನಿದ್ರೆಯನ್ನು ಚೆನ್ನಾಗಿ ಮಾಡಿ
ಹೆರಿಗೆಯ ನಂತರ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳಲ್ಲಿ ನಿದ್ರಾಹೀನತೆಯೂ ಒಂದು. ಇದಕ್ಕೆ ಕಾರಣ ಮಗು ರಾತ್ರಿ ವೇಳೆಯಲ್ಲಿ ಆಗಾಗೆ ಏಳುವುದು ಕೂಡ ಆಗಿರುತ್ತದೆ. ಆದರೆ ಈ ಬಗ್ಗೆ ಎಚ್ಚರ ವಹಿಸಿ. ನಿದ್ರಾಹೀನತೆಯು ದೇಹದ ತೂಕವನ್ನು ಹೆಚ್ಚಿಸುತ್ತದೆ. ನಿದ್ರೆ ಇಲ್ಲದ ಕಾರಣ ದೇಹವು ಕಾರ್ಟಿಸೋಲ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಅತಿಯಾಗಿ ಹಸಿವಾಗುವ ಸಾಧ್ಯತೆ ಇದೆ.
4. ವಾಸ್ತವದ ಬಗ್ಗೆ ಗಮನಹರಿಸಿ
ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಹೆರಿಗೆಯ ನಂತರ ತೂಕ ಇಳಿಸುವ ಪ್ರಕ್ರಿಯೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ. ಆದರೆ ಈ ರೀತಿಯ ಪೋಸ್ಟ್ಗಳು 100ಕ್ಕೆ ನೂರು ನಿಜವಾಗಿರುವುದಿಲ್ಲ. ಹೀಗಾಗಿ ಇವುಗಳ ಬಗ್ಗೆ ಎಚ್ಚರಿಕೆ ಅಗತ್ಯ. ಹೆರಿಗೆಯ ನಂತರ ತೂಕ ಇಳಿಸಲು ಒಂದು ವರ್ಷ ಸಮಯ ಬೇಕಾಗುತ್ತದೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ.
5. ಆಹಾರ ಸೇವಿಸುವ ಕ್ರಮದಲ್ಲಿ ಬದಲಾವಣೆ
ಮಗುವಿಗೆ ಹಾಲೂಣಿಸುವುದರಿಂದ ಉತ್ತಮ ಆಹಾರ ಸೇವಿಸುವುದು ಅಗತ್ಯ. ಹೀಗಾಗಿ ಡಯಟ್ ಮಾಡುವ ಕ್ರಿಯೆಯ ಬಗ್ಗೆ ಹೆಚ್ಚು ಗಮನಹರಿಸುವುದು ಸೂಕ್ತ. ತರಕಾರಿ, ಹಣ್ಣು, ಮೊಸರು, ನಟ್ಸ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಇದು ಪೋಷಕಾಂಶಭರಿತವಾಗಿದ್ದು, ತೂಕ ಹೆಚ್ಚಳದಿಂದ ದೂರ ಇರಿಸುತ್ತದೆ.
ಇದನ್ನೂ ಓದಿ:
Pregnancy Care: ಕೊವಿಡ್ ಸಮಯದಲ್ಲಿ ಗರ್ಭಿಣಿಯರಿಗಾಗಿ ಆರೋಗ್ಯ ಸಲಹೆಗಳು; ಆರೋಗ್ಯವನ್ನು ಕಾಳಜಿಯಿಂದ ನೋಡಿಕೊಳ್ಳಿ
ಗರ್ಭಿಣಿಯರು ಕೊರೊನಾ ಲಸಿಕೆ ಪಡೆಯಬಹುದು: ಕೇಂದ್ರ ಆರೋಗ್ಯ ಇಲಾಖೆ ನಿರ್ಧಾರ