Weekly Horoscope: ವಾರ ಭವಿಷ್ಯ: ಏಪ್ರಿಲ್ 14 ರಿಂದ 21 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು (Weekly Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯೂ ಇದೆ. ಏಪ್ರಿಲ್ 14 ರಿಂದ 21 ರವರೆಗೆ ಯಾವ ರಾಶಿಯವರಿಗೆ ಯಾವ ಫಲ ಇದೆ? ಶುಭ-ಅಶುಭ ಇದೆಯಾ? ಎಂಬಿದ್ಯಾತಿ ಮಾಹಿತಿಯನ್ನು ತಿಳಿದುಕೊಳ್ಳಿ.
ಏಪ್ರಿಲ್ ತಿಂಗಳ ಮೂರನೇ ವಾರ ಅಂದರೆ ಏಪ್ರಿಲ್ 14 ರಿಂದ 21 ರವರೆಗೆ ಗ್ರಹಗಳ ಪರಿವರ್ತನೆಗಳು ವಿಶೇಷ ಪರಿಣಾಮವನ್ನು ಉಂಟುಮಾಡುತ್ತವೆ. ಈ ವಾರ ಪರಿವರ್ತನೆಯಾಗುವ ಗ್ರಹಗಳು ಸೂರ್ಯ. ಮೀನದಿಂದ ಮೇಷರಾಶಿಗೆ ಪ್ರವೇಶ ಮಾಡಿದ್ದಾನೆ. ಮೇಷವು ಸೂರ್ಯನ ಉಚ್ಚಸ್ಥಾನ. ಅದರಲ್ಲಿಯೂ ಹತ್ತನೇ ಅಂಶವು ಅತಿಬಲನಾಗಿ ಪೂರ್ಣಫಲವನ್ನು ಕೊಡುತ್ತಾನೆ. ಇದರಿಂದ ಸರ್ಕಾರಕ್ಕೆ, ತಂದೆಗೆ ಹಾಗೂ ತನಗೆ ಸಂಬಂಧಿಸಿದ ಅನೇಕ ವಿಚಾರಗಳಿಗೆ ಆತ ಅನೂಲಕರನಾಗಿದ್ದಾನೆ. ಇದರ ಜೊತೆ ಗುರುವೂ ತನ್ನ ಸ್ಥಾನವನ್ನು ಬದಲಾಯಿಸಲಿದ್ದಾನೆ. ಮೇಷದಿಂದ ವೃಷಭ ರಾಶಿಗೆ ಹೋಗಲಿದ್ದು, ಕೆಲವು ಶುಭಾಶುಭಸೂಚನೆಗಳನ್ನು ಈಗಾಗಲೇ ಕೊಡಲು ಆರಂಭಿಸಿದ್ದಾನೆ. ಇದೆಲ್ಲದರ ಮಾಹಿತಿ ಇಲ್ಲಿದೆ. ಎಲ್ಲರಿಗೂ ಶುಭವಾಗಲಿ.
ಮೇಷ ರಾಶಿ : ಈ ತಿಂಗಳ ಮೂರನೇ ವಾರ ಶುಭದ ವಾರವೇ ಆಗಿದೆ. ಸೂರ್ಯನ ಉಚ್ಚ ರಾಶಿಗೆ ಬಂದಿದ್ದಾನೆ. ಅವನ ರಾಶಿಯೂ ನಿಮ್ಮ ರಾಶಿಯೂ ಒಂದೇ ಆಗಿರುವುದು ನೀವು ಮಾಡಬೇಕಾದ ಕಾರ್ಯಗಳಿಗೆ ಧೈರ್ಯವನ್ನು ಕೊಡುವನು. ಗುರುವು ದ್ವಿತೀಯಸ್ಥಾನಕ್ಕೆ ಹೋಗಲು ತಯಾರಿ ನಡೆಸುತ್ತಿದ್ದು, ನಿಮಗೆ ಸಂಪತ್ತಿನ ದಾರಿಯನ್ನು ತೋರಿಸುವನು. ದ್ವಾದಶದಲ್ಲಿ ಶುಕ್ರನೂ ರಾಹುವೂ ಇರುವುದರಿಂದ ಆದಾಯ ಖರ್ಚುಗಳು ಸಮಾನವಾಗಿಯೇ ಇರುತ್ತವೆ. ಯಾವುದಕ್ಕೆ ತಾಳ್ಮೆಯನ್ನು ಬಿಡದೇ ಮುಂದಡಿ ಇಡಿ. ಸುಬ್ರಹ್ಮಣ್ಯನ ಆರಾಧನೆಯಿಂದ ನಿಮಗೆ ಮಾರ್ಗವು ಸರಿಯಾಗಿ ಸಿಗುವುದು.
ವೃಷಭ ರಾಶಿ : ತಿಂಗಳ ಮೂರನೇ ವಾರವು ನಿಮಗೆ ಎಂದಿಗಿಂತ ಕಡಿಮೆ ಅಶುಭವು ಸಿಗುವ ವಾರವಾಗಿದೆ. ದ್ವಾದಶದ ಗುರುವಿನಿಂದ ಬಹಳ ಸಂಕಟವನ್ನು ಅನುಭವಿಸಿದರೂ ಮುಂದೆ ಅದೆಲ್ಲವೂ ಒಂದೊಂದಾಗಿ ಕಡಿಮೆಯಾಗಲಿದೆ. ಈ ವಾರ ರವಿಯು ದ್ವಾದಶಸ್ಥಾನಕ್ಕೆ ಬಂದಿರುವ ಕಾರಣ ಆತ್ಮಸಂತೋಷವು ಕಡಿಮೆ ಇರುವುದು. ತಂದೆಯ ಕಾರಣಕ್ಕೆ ಹಣವನ್ನು ಖರ್ಚುಮಾಡಬೇಕಾಗುವುದು. ಹೆಚ್ಚು ಒತ್ತಡಗಳು ಕಾಣಿಸಿಕೊಳ್ಳುವುದು. ಆರ್ಥಿಕತೆಯನ್ನು ಸುಧಾರಿಸಿಕೊಳ್ಳುವ ಅವಶ್ಯಕತೆ ಇರಲಿದೆ. ಮಾತಿನಿಂದ ನಿಮಗೆ ನೋವಾಗುವುದು. ತಡೆದುಕೊಳ್ಳುವ ಶಕ್ತಿಯು ಇಲ್ಲವಾಗುವುದು. ಜೀವನವು ಆಕಸ್ಮಿಕವಾದ ತಿರುವುಗಳನ್ನು ಈ ವಾರ ಪಡೆದುಕೊಳ್ಳುವುದು. ಮಹಾಲಕ್ಷ್ಮಿ ಅನುಗ್ರಹವನ್ನು ಪಡೆಯಿರಿ.
ಮಿಥುನ ರಾಶಿ : ಈ ರಾಶಿಯವರಿಗೆ ತಿಂಗಳ ಮೂರನೇ ವಾರದಲ್ಲಿ ಅಶುಭಗಳು ಬರುವ ಸೂಚನೆ ಇರಲಿದೆ. ಗುರುವು ಏಕಾದಶದಿಂದ ದ್ವಾದಶಕ್ಕೆ ಬರುವ ಕಾರಣ ಅಂದುಕೊಂಡ ವಿಚಾರಗಳು ಬುಡಮೇಲಾಗುವುದು. ಕಾರ್ಯದಲ್ಲಿ ಅನಾಸಕ್ತಿ ಹೆಚ್ಚಾಗುವುದು. ಯಾರೋ ನಿಮ್ಮನ್ನು ಪೀಡಿಸಬಹುದು. ಮಾನಸಿಕವಾಗಿ ಕುಗ್ಗುವಿರಿ. ಏಕಾದಶದಲ್ಲಿ ಸೂರ್ಯನಿರುವುದು ಸ್ವಲ್ಪ ಮಟ್ಟಿಗೆ ಅನುಕೂಲ. ತಂದೆಯಿಂದ ಏನನ್ನಾದರೂ ಬಯಸಿದರೆ ಸಿಗುವುದು. ಭೂಮಿಯ ಲಾಭವನ್ನೂ ಪಡೆದುಕೊಳ್ಳುವ ಸಾಧ್ಯತೆ ಇದೆ. ವಿವಾಹಕ್ಕೆ ಎಲ್ಲಿಂದಲೋ ತಡೆಯಾಗುವುದು. ಬೇಸರಿಸದೇ ಮುನ್ನಡೆಯುವುದು ಉತ್ತಮ. ಗುರುದರ್ಶನವನ್ನು ವಿಶೇಷ ವಾರದಂದು ಮಾಡಿ. ಆಶೀರ್ವಾದವನ್ನು ಪಡೆಯಿರಿ.
ಕಟಕ ರಾಶಿ : ಈ ತಿಂಗಳ ಮೂರನೇ ವಾರವು ಮುಂದೆ ಬರುವ ಶುಭದ ಸೂಚನೆಯನ್ನು ನೀಡುತ್ತದೆ. ದಶಮಸ್ಥಾನದಿಂದ ಏಕಾದಶಸ್ಥಾನಕ್ಕೆ ಗುರುವಿನ ಪ್ರವೇಶ ಆಗಲಿದೆ. ವಿವಾಹಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಬಹುದು. ನಿಮ್ಮ ಹಳೆಯ ಯೋಜನೆಗಳು ಪುನಃ ಆರಂಭವಾಗುವುದು. ಅದಕ್ಕೆ ಬೇಕಾದ ಸಹಕಾರವೂ ಆಪ್ತವಲಯದಿಂದ ಸಿಗಲಿದೆ. ದಶಮದಲ್ಲಿ ರವಿಯು ಇದ್ದು ಕೃಷಿಯಲ್ಲಿ ತೊಡಗಿದವರಿಗೆ ಅನುಕೂಲ ಮಾಡಿಕೊಡುವನು. ವಾಹನದಿಂದ ಆದಷ್ಟು ದೂರವಿರುವುದು ಒಳ್ಳೆಯದು. ಮೂರನೇ ವ್ಯಕ್ತಿಗಳಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಚಂದ್ರನು ಏಕಾದಶಕ್ಕೆ ಮತ್ತು ಸ್ವರಾಶಿಗೆ ಬಂದಾಗ ನಿಮಗೆ ನೆಮ್ಮದಿ ಇರುವುದು. ಕುಲದೇವರ ಆರಾಧನೆಯನ್ನು ಶ್ರದ್ಧೆಯಿಂದ ಮಾಡಿ.
ಸಿಂಹ ರಾಶಿ : ಈ ವಾರ ನೀವು ಹೆಚ್ಚು ಶುಭವನ್ನು ನಿರೀಕ್ಷಿಸದಿದ್ದರೂ ಅದು ಸುಗಲಿದೆ. ಗುರುವು ನವಮದಿಂದ ದಶಮಸ್ಥಾನಕ್ಕೆ ಹೋಗಲು ಸಿದ್ಧನಾಗಿದ್ದಾನೆ. ಉದ್ಯೋಗದಲ್ಲಿ ಉತ್ತಮ ಅವಕಾಶ, ಸ್ಥಾನಮಾನಗಳು ಸಿಗಲಿವೆ. ರವಿಯು ನವಮದಲ್ಲಿ ಇರುವುದರಿಂದ ತಂದೆಯ ಕಡೆಯಿಂದ ಲಾಭ. ಸರ್ಕಾರದಿಂದ ಸಿಗಬೇಕಾದ ಗೌರವ, ಸಂಪತ್ತುಗಳು ಸಿಗಲಿವೆ. ಆತ್ಮಸಂತೋಷದಿಂದ ಇರುವಿರಿ. ಸಂಗಾತಿಯ ಬಗ್ಗೆ ನಿಮಗೆ ಪೂರ್ವಾಗ್ರಹವಿರುವುದು. ಅದನ್ನು ಸರಿಮಾಡಿಕೊಂಡು ಹೋಗಬೇಕಾದ ಅನಿವಾರ್ಯತೆ ಇದ್ದೀತು. ಕೇತುವು ದ್ವಿತೀಯದಲ್ಲಿ ಇರುವುದು ನಿಮ್ಮ ಆರ್ಥಿಕತೆಗೆ ಸಣ್ಣ ಪೆಟ್ಟುಬೀಳುವುದು. ಆದಿತ್ಯಹೃದಯವನ್ನು ಪಠಿಸಿ, ಎದುರಾಗುವ ತೊಂದರೆಗಳನ್ನು ಎದುರಿಸುವ ಸಾಮರ್ಥ್ಯ ನಿಮ್ಮದಾಗುತ್ತದೆ.
ಕನ್ಯಾ ರಾಶಿ : ಏಪ್ರಿಲ್ ತಿಂಗಳ ಮೂರನೇ ವಾರ ಈ ರಾಶಿಯವರಿಗೆ ಮಿಶ್ರಫಲಗಳು ಪ್ರಾಪ್ತವಾಗಲಿವೆ. ಇಷ್ಟು ದಿನಗಳ ಕಾಲ ಇದ್ದು ನೋವೆಲ್ಲ ಕಡಿಮೆಯಾಗುತ್ತಾ ಅನುಕೂಲದ ಗಾಳಿಯು ನಿಮ್ಮತ್ತ ಬೀಸಿ ಬರಲಿದೆ. ಆರೋಗ್ಯವು ಸುಧಾರಣೆಯಾಗುವುದು. ಸ್ಥಾನಮಾನ ಪ್ರಾಪ್ತಿಗೆ ಇರುವ ಅಡೆತಡೆಗಳು ದೂರವಾಗಿ ಆರಾಮಾಗುವಿರಿ. ವಿವಾಹಕ್ಕೆ ಬೇಕಾದ ಪೂರಕ ಮನಃಸ್ಥಿತಿಯು ಬಾರದೇ ಇದ್ದೀತು. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ. ಸೂರ್ಯನು ಉಚ್ಚಸ್ಥಾನದಲ್ಲಿ ಇದ್ದರೂ ಅಷ್ಟಮದಲ್ಲಿ ಇರುವ ಕಾರಣ ಸರ್ಕಾರದ ಕೆಲಸದಲ್ಲಿ ಹಿನ್ನಡೆಯೇ ಹೆಚ್ಚು. ಸತ್ಯನಾರಾಯಣ ಪೂಜೆಯಿಂದ ಶ್ರೇಯಸ್ಸು ಪ್ರಾಪ್ತಿಯಾಗುವುದು.
ತುಲಾ ರಾಶಿ : ಇದು ಏಪ್ರಿಲ್ ತಿಂಗಳ ಮೂರನೇ ವಾರವಾಗಿದ್ದು ಗ್ರಹಗಳು ಬದಲಾವಣೆಯನ್ನು ಹೊಂದಿ ನಿಮ್ಮ ಮೇಲೆ ಶುಭ ಪರಿಣಾವನ್ನು ಉಂಟುಮಾಡಲಿದೆ. ರವಿಯು ಸಪ್ತಮಸ್ಥಾನಕ್ಕೆ ಪ್ರವೇಶಿಸುವ ಕಾರಣ ಸಂಗಾತಿಯ ಆರೋಗ್ಯವು ಕೆಡುವುದು. ನಿಮ್ಮ ದೈಹಿಕ ಆರೋಗ್ಯದ ಬಗ್ಗೆಯೂ ಅಧಿಕ ಗಮನವು ಅವಶ್ಯಕ. ವಾಹನ ಚಾಲನೆಯಲ್ಲಿ ಜಾಗರೂಕತೆ, ಸಾವಧಾನತೆ ಎರಡೂ ಮುಖ್ಯ. ಹಣವನ್ನು ಯಾವುದಕ್ಕಾದರೂ ಹಾಕಿ ಕಳೆದುಕೊಳ್ಳುವಿರಿ. ಹೂಡಿಕಯಿಂದ ದೂರವಿರುವುದು ಯೋಗ್ಯ. ಉದ್ಯೋದದ ಸ್ಥಳದಲ್ಲಿ ನಿಮಗೆ ಅಪಮಾನವಾಗುವ ಮಾತುಗಳು ಕೇಳಿಬರಬಹುದು. ಮನಸ್ಸನ್ನು ದುರ್ಬಲವಾಗಿಸಿಕೊಳ್ಳದೇ ಕಾರ್ಯವನ್ನು ಮಾಡಿ. ಮಹಾಗೌರಿಯ ಅನುಗ್ರಹದಿಂದ ನಿಮಗೆ ಬರುವ ಸಂಕಟವನ್ನು ದಾಟುವಿರಿ.
ವೃಶ್ಚಿಕ ರಾಶಿ : ಈ ರಾಶಿಯವರಿಗೆ ಈ ವಾರದಿಂದ ಸಂಕಟಮುಕ್ತವಾದ ವಾರವು ಆರಂಭವಾಗುವುದು. ಮುಖ್ಯವಾಗಿ ಗುರುವಿನ ಸ್ಥಾನವು ಬದಲಾವಣೆಯುವ ಹಂತದಲ್ಲಿ ಇದೆ. ಅದಕ್ಕಾಗಿ ನಿಮ್ಮ ಜೀವನಶೈಲಿಯೂ ಬದಲಾವಣೆ ಆಗುವುದು. ವಿವಾಹ ಕಾರ್ಯಗಳಿಗೆ ಅನುಕೂಲ ಸ್ಥಿತಿ, ಅವಿವಾಹಿತರಿಗೆ ಉತ್ತಮ ಸಂಗಾತಿಯು ದೊರೆಯುವುದು. ವಿವಾಹದ ಚಿಂತೆಯಲ್ಲಿ ಇರುವವರು ಅತ್ತ ಗಮನಹರಿಸಿದರೆ ಉತ್ತಮ. ಮಕ್ಕಳ ವಿಚಾರದಲ್ಲಿ ಮಿಶ್ರಭಾವವು ಇರಲಿದೆ. ಓದಿನ ಕಡೆಗೆ ಗಮನವು ಸದ್ಯ ಕಡಿಮೆಯಾಗುವುದು. ಕುಟುಂಬದಲ್ಲಿ ಹೊಂದಾಣಿಕೆಯು ಕಷ್ಟ ಎನಿಸುವಷ್ಟು ಸಂದರ್ಭಗಳು ಬರಬಹುದು. ತಾಳ್ಮೆಯೇ ಮುಖ್ಯವಾಗಿರುವುದು. ಕಾರ್ತಿಕೇಯನ ಸ್ತೋತ್ರವನ್ನು ಪಠಿಸಿ.
ಧನು ರಾಶಿ : ಈ ತಿಂಗಳ ಮೂರನೇ ವಾರದಲ್ಲಿ ಕೆಲವು ಗ್ರಹಗಳು ಬದಲಾವಣೆ ಹಾಗೂ ಇನ್ನೂ ಕೆಲವು ಗ್ರಹಗಳು ಬದಲಾಣೆಯಾಗುವ ಹಂತದಲ್ಲಿಯೂ ಇವೆ. ಇಷ್ಟು ದಿನ ಗುರು ನಿಮಗೆ ಪೂರಕವಾಗಿರುವ ಗುರು ಇನ್ನು ನಿಮಗೆ ನೆಮ್ಮದಿಯನ್ನು ಕೊಡದೇ ಇರಬಹುದು. ಅಪಮಾನವನ್ನು ಹೆಚ್ಚು ಎದುರಿಸಬೇಕಾಗಬಹುದು. ಕೆಲಸಗಳು ಪೂರ್ಣವಾಗದೇ ಇರಬಹುದು. ಶುಕ್ರನು ಚತುರ್ಥದಲ್ಲಿ ಇರುವುದರಿಂದ ಕರಕುಶಲ ಕಾರ್ಯದಲ್ಲಿ ಸಫಲತೆ, ಪ್ರಶಂಸೆಗಳು ಬರುವುದು. ಕುಜನು ತೃತೀಯದಲ್ಲಿ ಇದ್ದುದರಿಂದ ನಿಮಗೆ ತಕ್ಕ ಪ್ರತಿಫಲವು ಸಿಗದೇಹೋಗುವುದು. ಗುರುಚರಿತ್ರೆಯ ಪಾರಾಯಣವನ್ನು ಮಾಡಿ. ಗುರುವಿನ ಆಶೀರ್ವಾದವೂ ನಿಮಗೆ ಇರಲಿ.
ಮಕರ ರಾಶಿ : ಈ ರಾಶಿಯವರಿಗೆ ಇಷ್ಟು ದಿನಗಳ ಕಷ್ಟದ ದಿನಗಳು ಒಂದೊಂದಾಗಿಯೇ ಕಳಚಿಕೊಳ್ಳುವುದು. ಗುರುವು ಪಂಚಮಸ್ಥಾನಕ್ಕೆ ಚಲಿಸುತ್ತಿದ್ದು ಅದರ ಪರಿಣಾಮವನ್ನು ನೀವು ಅನುಭವಿಸಲು ಆರಂಭಿಸಿದ್ದೀರಿ. ಸೂರ್ಯನು ಈ ವಾರ ಚತುರ್ಥದಲ್ಲಿ ಇರುವುದರಿಂದ ತಾಯಿಯ ಆರೋಗ್ಯವನ್ನು ನೋಡಿಕೊಳ್ಳಬೇಕಾಗುವುದು. ಜ್ವರಾದಿಗಳು ಕಾಣಿಸಿಕೊಳ್ಳುವುದು. ತೃತೀಯದಲ್ಲಿ ರಾಹುವಿರುವುದು ಸಹೋದರ ಬಾಂಧವ್ಯವು ಕೆಡಬಹುದು. ದ್ವಿತೀಯದಲ್ಲಿ ಶನಿಯಿರುವುದು ಸಾಲದಬಹಣವು ನಿಮಗೆ ಬರುವ ಸಾಧ್ಯತೆ ಇದೆ. ಶಿವೋಪಾಸನೆಯ ಕಡೆ ಆಸಕ್ತಿ ಇರಲಿ. ಸಾಡೇಸಾಥ್ ನ ಕೊನೆಯ ಅವಧಿಯಲ್ಲಿ ನೀವಿರುವಿರಿ.
ಕುಂಭ ರಾಶಿ : ಈ ತಿಂಗಳ ಮೂರನೆ ವಾರವು ಗ್ರಹಗಳ ಚಲನೆಯಿಂದ ಮಧ್ಯಫಲವು ಸಿಗಲಿದೆ. ದ್ವಿತೀಯದಿಂದ ತೃತೀಯಕ್ಕೆ ರವಿಯು ಚಲಿಸಿದ್ದಾನೆ. ಇದು ಅವ ಉಚ್ಚಸ್ಥಾನವಾದ ಕಾರಣ ಪೂರ್ಣಫಲವನ್ನು ಕೊಡುತ್ತಾನೆ. ಆದ್ದರಿಂದ ನಿಮಗೆ ಬೇಕಾದ ಸಹಕಾರವು ಸರ್ಕಾರದ ಕಡೆಯಿಂದ ಸಿಗಲಿದೆ. ಅಧಿಕಾರಿಗಳಿಗೆ ನಿಮ್ಮ ಮೇಲೆ ನಂಬಿಕೆ ಬರಲಿದೆ. ಕುಜ ಹಾಗು ಶನಿಯರು ನಿಮ್ಮ ರಾಶಿಯಲ್ಲಿ ಇರುವ ಕಾರಣ ತಕ್ಕಮಟ್ಟಿಗೆ ದೇಹದಲ್ಲಿ ಅಸೌಖ್ಯವು ಕಾಣಿಸುವುದು. ಮತ್ತೆ ಮತ್ತೆ ದೇಹಾರೋಗ್ಯವು ಕೆಡುತ್ತಿರಬಹುದು. ಸುಬ್ರಹ್ಮಣ್ಯ ಪೂಜೆಯನ್ನು ಪ್ರಸಿದ್ಧ ಸ್ಥಳಗಳಿಗೆ ಹೋಗಿ ಮಾಡಿಸಿ.
ಮೀನ ರಾಶಿ : ಏಪ್ರಿಲ್ ತಿಂಗಳ ಮೂರನೇ ವಾರ ನಿಮಗೆ ಸಾಧಾರಣ ವಾರವಾಗಿರುವುದು. ದ್ವಿತೀಯದಲ್ಲಿ ಗುರುವಿದ್ದರೂ ತೃತೀಯಸ್ಥಾನಕ್ಕೆ ಹೋಗುವ ತಯಾರಿಯಲ್ಲಿ ಇದ್ದಾನೆ. ಸ್ವರಾಶಿಯ ಅಧಿಪತಿಯಾದ ಗುರುವು ನಿಮಗೆ ಪೂರಕನಾಗಿ ಇಲ್ಲ. ಸೂರ್ಯನು ದ್ವಿತೀಯಕ್ಕೆ ಬಂದ ಕಾರಣ ತಂದೆಯ ಕಡೆಯಿಂದ ಅಥವಾ ಸರ್ಕಾರದ ಕಡೆಯಿಂದ ಆಗುವ ಕೆಲಸವು ಆಗುವುದು. ರಾಹುವು ನಿಮ್ಮ ಮನೆಯಲ್ಲಿ ಇರುವುದರಿಂದ ದೇಹಾಲಸ್ಯವನ್ನು ಬುದ್ಧಿಪೂರ್ವಕವಾಗಿ ಕಡಿಮೆ ಮಾಡಿಕೊಳ್ಳಬೇಕು. ನಾಗಾರಾಧನೆಯನ್ನು ಮಾಡಿ.
-ಲೋಹಿತ ಹೆಬ್ಬಾರ್ – 8762924271 (what’s app only)