ರಾಶಿ ಚಕ್ರದ ಹನ್ನೊಂದನೆ ರಾಶಿಯವರಿಗೆ ಈ ವರ್ಷ ಮಿಶ್ರಫಲ. ಪಂಚಮಕ್ಕೆ ಹೋಗುವ ಗುರುವಿನ ಬಲ ಮತ್ತು ದೃಷ್ಟಿ ಎರಡೂ ಇರಲಿದೆ. ಸಾಡೆಸಾಥ್ ನ ಅಂತ್ಯ ಭಾಗ ಆರಂಭವಾಗಲಿದೆ. ಶನಿಯು ತನ್ನ ರಾಶಿಯನ್ನು ಬಿಟ್ಟು ದ್ವಿತೀಯ ಸ್ಥಾನಕ್ಕೆ ಹೋಗುವನು. ರಾಹುವು ನಿಮ್ಮ ರಾಶಿಗೆ ಬರಲಿದ್ದಾನೆ. ಕೇತುವು ಸಪ್ತಮಕ್ಕೆ ಹೋಗುವನು. ಆರ್ಥಿಕ ಹಾಗು ಆರೋಗ್ಯಕ್ಕೆ ಅಷ್ಟು ಪೂರಕವಾದುದಲ್ಲ. ಒಟ್ಟಾರೆ ನಿಮ್ಮ ವರ್ಷ ಸಂತೋಷಮಯವಾಗಿ ಇರಲಿದೆ.
ಈ ವರ್ಷ ನಿಮಗೆ ಆರೋಗ್ಯ ಬಗ್ಗೆ ಆರಂಭದ ದಿನಗಳಲ್ಲಿ ಗಮನ ಕೊಡದೇ ಇದ್ದರೂ ಅನಂತರ ಬೇಕು. ವಿಶೇಷವಾಗಿ ಮಾನಸಿಕ ಅರೋಗ್ಯ ಬಹಳ ಮುಖ್ಯ. ವಿವಿಧ ಕ್ಲೇಶವನ್ನು ಸಹಿಸುವ ಮನೋಧರ್ಮವಿರಬೇಕು. ರಾಹು ದಶೆಯಾದರೆ ಕಷ್ಟವಾಗುವುದು.
ಮೇ ತಿಂಗಳ ಅನಂತರ ವಿವಾಹವಾಗಲು ಯೋಜನೆ ಮಾಡಬಹುದು, ಗುರುಬಲವಿದೆ. ಪ್ರೇಮವು ನಿಮ್ಮನ್ನು ಗೊಂದಲಕ್ಕೆ ಒಯ್ಯುವುದು. ತೀರ್ಮಾನ ಕಷ್ಟ. ಅನೇಕ ಕಟ್ಟುಪಾಡುಗಳನ್ನು ಒಪ್ಪಬೇಕು. ರವಿದಶೆಯವರಿಗೆ ಅನುಕೂಲತೆ ಹೆಚ್ಚು. ದಾಂಪತ್ಯದಲ್ಲಿ ಅಸಮಾಧಾನ ಬರುವುದು, ಹಿರಿಯರ ಜೊತೆ ಕುಳಿತು ಮನಸ್ತಾಪವನ್ನು ಸರಿಮಾಡಿಕೊಳ್ಳಬಹುದು.
ಆರಂಭಿಕ ದಿನಗಳಲ್ಲಿ ಉದ್ಯೋಗದಲ್ಲಿ ಅಧಿಕ ಆದಾಯವನ್ನೋ ಅಥವಾ ಸ್ಥಾನಮಾನವನ್ನೋ ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಅನಂತರ ವೃದ್ಧಿಯನ್ನು ಕಾಣುವಿರಿ. ತಂತ್ರಜ್ಞ, ಯಂತ್ರಜ್ಞರಿಗೆ ಅನುಕೂಲಕರ ವರ್ಷ. ಆರ್ಥಿಕತೆ ಸುಧಾರಣೆ ಆಗಿಲಿದೆ. ಹಣದ ಹರಿವನ್ನು ನೀವು ಕಾಣಬಹುದು.
ಹಿರಿಯ ಮಾರ್ಗದರ್ಶನ ಸಿಗುವ ಕಾರಣ ನೀವು ಅತಿಯಾಗಿ ಏನನ್ನೂ ಮಾಡುವುದಾಗಲಿ, ಹೇಳುವುದಾಗಲಿ ಮಾಡಲಾರಿರಿ. ಆನಂದದ ವಾತಾವರಣ ಮನೆಯಲ್ಲಿ ಇರಲಿದೆ. ಅದನ್ನು ಅನುಭವಿಸಿ, ಪಾಠವನ್ನು ಕಲಿಯುವಿರಿ.
ಆರಂಭದಲ್ಲಿ ಶತ್ರುವಿನಿಂದ ತೊಂದರೆ. ಕುಜ ದಶೆಯವರಿಗೆ ಬೇರೆ ಬೇರೆ ರೀತಿಯಲ್ಲಿ ಶತ್ರುಗಳನ್ನು ಎದುರಿಸಬೇಕಾಗುವುದು. ಉದ್ಯೋಗ, ವ್ಯವಹಾರ, ಕುಟುಂಬ ಎಲ್ಲದರಲ್ಲೂ ಶತ್ರುತ್ವ ಕಷ್ಟವಾಗುವುದು. ಎಲ್ಲಿಯೂ ಯಾರೂ ಎದುರಿಂದ ಮಾಡಲಾರರು. ಪರೋಕ್ಷವಾಗಿ ನಿಮ್ಮ ಎಲ್ಲ ಕೆಲಸಕ್ಕೆ ವಿಘ್ನ.
ಎಂತಹ ಕಷ್ಟಗಳು ಬಂದರೂ ಅದಕ್ಕೆ ಬೇಕಾದ ದಾರಿ ಸಿಗುವುದೇ ಅದೃಷ್ಟ. ಅದರಿಂದ ನೀವು ಸುರಕ್ಷಿತವಾಗುವಿರಿ. ಯಾವುದಾದರೂ ಒಂದು ರೀತಿಯಲ್ಲಿ ನಿಮಗೆ ಸುಖದ ದಾರಿ ಕಾಣಿಸುವುದು. ಶುಕ್ರದಶೆಯವರಿಗೆ ಅದೃಷ್ಟದ ಪರಿಣಾಮ ಅರಿವಿಗೆ ಬರುವುದು.
ಹೀಗೆ ಈ ವರ್ಷ ನಿಮಗೆ ಅನೇಕ ಶುಭಗಳು ಇದ್ದರೂ ಅಶುಭವೂ ಕಾಣಿಸುವುದು. ಆದರೆ ಅದನ್ನು ದಾಟುವ ಮನಃಸ್ಥಿತಿ ನಿಮ್ಮದಾಗಲಿದೆ. ದೈವಾನುಗ್ರಹವೂ ನಿಮ್ಮ ಜೊತೆಗಿರಲು ಹನುಮಾನ್ ಚಾಲೀಸ್ ಪಠಣ, ಸುವಸ್ತುಗಳ ದಾನದಿಂದ ಸಾಧ್ಯ. ಮನಸ್ಸಿಗೆ ಅತಿಯಾಗಿ ಕಿರಿ ಕಿರಿ ಎನಿಸಿದರೆ ನಾಗದೇವರಿಗೆ ಪೂಜೆ ಸಲ್ಲಿಸಿ.
– ಲೋಹಿತ ಹೆಬ್ಬಾರ್, ಇಡುವಾಣಿ