Astrology: ಖರ್ಚಿನ ವಿಷಯದಲ್ಲಿ ಯಾವ ರಾಶಿಯ ಸ್ವಭಾವ ಹೇಗಿರುತ್ತದೆ ಗೊತ್ತಾ?

| Updated By: ಆಯೇಷಾ ಬಾನು

Updated on: Jul 06, 2021 | 6:57 AM

ಜ್ಯೋತಿಷದ ಆಧಾರದಲ್ಲಿ ಯಾವ ರಾಶಿಯವರ ಶಾಪಿಂಗ್, ಹಣಕಾಸಿನ ಖರ್ಚು ಸ್ವಭಾವ ಹೇಗಿರುತ್ತದೆ ಎಂಬ ಬಗ್ಗೆ ಇಲ್ಲಿ ಆಸಕ್ತಿಕರವಾದ ಮಾಹಿತಿ ಇದೆ.

Astrology: ಖರ್ಚಿನ ವಿಷಯದಲ್ಲಿ ಯಾವ ರಾಶಿಯ ಸ್ವಭಾವ ಹೇಗಿರುತ್ತದೆ ಗೊತ್ತಾ?
ರಾಶಿ ಚಕ್ರ
Follow us on

ಖರ್ಚಿನ ವಿಷಯಕ್ಕೆ ಬಂದರೆ ಒಬ್ಬೊಬ್ಬರದು ಒಂದೊಂದು ಸ್ವಭಾವ. ಜ್ಯೋತಿಷ ಅಂದಾಗ 12 ರೀತಿಯ, ಅಂದರೆ 12 ರಾಶಿಯ ಜನರು ಸಿಗುತ್ತಾರೆ. ಇವರು ಹೇಗೆ ಖರ್ಚಿನ ವಿಷಯದಲ್ಲಿ ಆಲೋಚನೆ ಮಾಡುತ್ತಾರೆ ಎಂಬುದರ ಬಗ್ಗೆ ಆಸಕ್ತಿಕರವಾದ ಮಾಹಿತಿಯು ದೊರೆಯುತ್ತದೆ. ನಿಮಗೆ ಈ ಬಗ್ಗೆ ಏನನಿಸುತ್ತದೆ ಅಂತ ಈ ಲೇಖನವನ್ನು ಓದಿದ ನಂತರ ಇನ್ನೊಮ್ಮೆ ಅವಲೋಕನ ಮಾಡಿಕೊಳ್ಳಿ. ಇವುಗಳಲ್ಲಿ ಕೆಲವು ಟಿಪ್ಸ್​ಗಳು ಇವೆ. ಅನುಸರಿಸಿದರೆ ಕೆಲವು ಸಮಸ್ಯೆಗಳು ಪರಿಹಾರ ಆಗುವ ಸಾಧ್ಯತೆಗಳಾದರೂ ಇರುತ್ತವೆ. ಇನ್ನೇಕೆ ತಡ, ಮುಂದೆ ಓದಿ.

ಮೇಷ
ಈ ರಾಶಿಯ ಜನರು ಹಠಾತ್ ನಿರ್ಧಾರಗಳನ್ನು ಕೈಗೊಳ್ಳುವ ಪ್ರವೃತ್ತಿಯವರು. ಎಚ್ಚರಿಕೆಯಿಂದ ಯೋಚಿಸದೆ ಇದ್ದಕ್ಕಿದ್ದಂತೆ ಕೆಲಸಗಳನ್ನು ಮಾಡುತ್ತಾರೆ. ಆ ಕ್ಷಣದ ವೇಗದಲ್ಲಿ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಯವರನ್ನು ಮಧ್ಯರಾತ್ರಿಯಲ್ಲಿ ನಿದ್ದೆಯಿಂದ ಎಬ್ಬಿಸಿದರೂ ಶಾಪಿಂಗ್ ಎಂಜಾಯ್ ಮಾಡುತ್ತಾರೆ. ಏನನ್ನಾದರೂ ಇಷ್ಟಪಟ್ಟರೆ ಅದರ ಬೆಲೆ ಟ್ಯಾಗ್ ಸಹ ನೋಡದೆ ಖರೀದಿಸುತ್ತಾರೆ. ಆದ್ದರಿಂದಲೇ ಮೇಷ ರಾಶಿಯವರರು ಉತ್ತಮ ಉಳಿತಾಯ ಮಾಡುವವರಲ್ಲ. ಆದ್ದರಿಂದ ಶಾಪಿಂಗ್‌ಗೆ ಹೋಗಬೇಕು ಅನಿಸಿದಾಗೆಲ್ಲ ಕನಿಷ್ಠ 24 ಗಂಟೆಗಳ ಕಾಲ ಮುಂದೂಡಲು ಪ್ರಯತ್ನಿಸಿ ಮತ್ತು ಟೀವಿಯಲ್ಲಿ ಕ್ರೀಡೆ, ಸಾಹಸದ ಆಟ ಅಥವಾ ವೈಲ್ಡ್ ಲೈಫ್ ಡಾಕ್ಯುಮೆಂಟರಿ ವೀಕ್ಷಿಸಲು ಪ್ರಾರಂಭಿಸಿ.

ವೃಷಭ
ಈ ರಾಶಿಯಲ್ಲಿ ಜನಿಸಿದವರು ಸ್ಥಿರ ವ್ಯಕ್ತಿತ್ವ ಹೊಂದಿದವರು. ತಮ್ಮ ಆದಾಯದ ಕನಿಷ್ಠ ಶೇ 20ರಷ್ಟಾದರೂ ಉಳಿಸುವ ಸೂಪರ್ ಸೇವರ್​ಗಳು. ಹೇಗಾದರೂ ಅಂಗಡಿಗಳಾದ್ಯಂತ ನಡೆದಾಗ, ಆ ಅಂಗಡಿಯಲ್ಲಿನ ಅತ್ಯಂತ ದುಬಾರಿ ವಸ್ತುವಿನ ಮೇಲೆ ಕಣ್ಣು ಹಾಕುತ್ತಾರೆ. ಈ ಜನರು ತಮ್ಮ ಹೆಚ್ಚಿನ ಉಳಿತಾಯವನ್ನು ಶಾಪಿಂಗ್‌ಗಾಗಿ ಖರ್ಚು ಮಾಡುತ್ತಾರೆ. ಇವರು ದೀರ್ಘಕಾಲೀನ ಗುರಿಗಳ ಪಟ್ಟಿಯನ್ನು ಮಾಡಬೇಕು. ಈ ಉಳಿತಾಯ ಯೋಜನೆಯು ಕನಸುಗಳನ್ನು ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.

ಮಿಥುನ
ಈ ರಾಶಿಯವರು ದ್ವಂದ್ವ ಸ್ವಭಾವಕ್ಕೆ ಹೆಸರುವಾಸಿ. ಶಾಪಿಂಗ್ ವಿಷಯಕ್ಕೆ ಬಂದಾಗ ದಿಢೀರ್​ ದಿಢೀರ್ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅನಗತ್ಯ ವಿಷಯಗಳಿಗೆ ಹಣವನ್ನು ಖರ್ಚು ಮಾಡುವ ಸ್ವಭಾವ ಇವರದು. ಈ ಕಾರಣಕ್ಕೆ ಜೀವನದ ಅವಶ್ಯಕತೆಗಳನ್ನು ನಿರ್ಲಕ್ಷಿಸುತ್ತಾರೆ. ಆದ್ದರಿಂದ ಮಾಸಿಕ ಆದಾಯದ ನಿಗದಿತ ಮೊತ್ತವನ್ನು ತಿಂಗಳ ಆರಂಭದಲ್ಲಿ ಉಳಿತಾಯ ಖಾತೆಗೆ ವರ್ಗಾಯಿಸುವುದು ಮತ್ತು ಉಳಿದ ಹಣದೊಂದಿಗೆ ವೈಯಕ್ತಿಕ, ಮನೆಯ ವೆಚ್ಚಗಳನ್ನು ನಿರ್ವಹಿಸಲು ಬಳಸುವುದು ಉತ್ತಮ.

ಕರ್ಕಾಟಕ
ಈ ರಾಶಿಯವರು ಭಾವನಾತ್ಮಕ ಜೀವಿಗಳು. ತಮ್ಮ ಕುಟುಂಬ ಸದಸ್ಯರ ಅಗತ್ಯಗಳನ್ನು ಪೂರೈಸಲು ಗರಿಷ್ಠ ಪ್ರಯತ್ನ ಮಾಡುತ್ತಾರೆ. ಏಕೆಂದರೆ ಕುಟುಂಬ ಸದಸ್ಯರ ವೈಯಕ್ತಿಕ ಭದ್ರತೆ ಮತ್ತು ಸೌಕರ್ಯ ಹೆಚ್ಚಿನ ಮಹತ್ವದ್ದಾಗಿರುತ್ತದೆ. ಇವರು ಹಣದ ಬಗ್ಗೆ ಕಾಳಜಿ ವಹಿಸುತ್ತಾರೆ ಮತ್ತು ಅದನ್ನು ನೀರಿನಂತೆ ಖರ್ಚು ಮಾಡುವುದಿಲ್ಲ. ಜನರು ತಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತೋರಿಸಲು ಅವರು ಆಗಾಗ ತಮ್ಮದೇ ದಾರಿಯನ್ನೂ ಮೀರಿ ಹೋಗುತ್ತಾರೆ. ಇವರ ಪ್ರೀತಿಪಾತ್ರರ ಅಗತ್ಯಗಳನ್ನು ಪೂರೈಸುವುದು ಒಳ್ಳೆಯದು. ಆದರೆ ತಮಗಾಗಿಯೂ ಹಣವನ್ನು ಖರ್ಚು ಮಾಡಬೇಕು.

ಸಿಂಹ
ಈ ಜನರು ಖರ್ಚು-ಆದಾಯದ ಸಮತೋಲನ ಮಾಡುವುದರಲ್ಲಿ ನಿಸ್ಸೀಮರು. ಸ್ನೇಹಿತರು, ಸಂಬಂಧಿಗಳ ವಿಷಯ ಬಂದಾಗ ಖರ್ಚಿನ ವಿಷಯದಲ್ಲಿ ಧಾರಾಳವಾದ ಜನರು ಇವರು. ಐಷಾರಾಮಿ ಮನೆ ನಿರ್ಮಿಸುವುದನ್ನು ಇಷ್ಟ ಪಡುತ್ತಾರೆ. ತಮ್ಮ ಪ್ರೇಮಿ ಅಥವಾ ಸ್ನೇಹಿತರಿಗಾಗಿ ದುಬಾರಿ ಉಡುಗೊರೆಗಳನ್ನು ಖರೀದಿಸುತ್ತಾರೆ. ಇವರು ತಮ್ಮ ಭವಿಷ್ಯಕ್ಕಾಗಿ ಹಣಕಾಸಿನ ಗುರಿಗಳನ್ನು ನಿಗದಿಪಡಿಸುವ ಮೂಲಕ ಯೋಜನೆಗಳನ್ನು ರೂಪಿಸಬೇಕು. ಪ್ರೀತಿಪಾತ್ರರಿಗೆ ಏನನ್ನಾದರೂ ಉಡುಗೊರೆಯಾಗಿ ವಿವೇಚನೆ ಇಟ್ಟುಕೊಂಡು ಆಲೋಚಿಸಬೇಕು.

ಕನ್ಯಾ
ಭವಿಷ್ಯಕ್ಕಾಗಿ ಹೇಗೆ ಉಳಿಸುವುದು ಎಂಬುದರ ಕುರಿತು ಯಾರಾದರೂ ಪಾಠಗಳನ್ನು ತೆಗೆದುಕೊಳ್ಳಲು ಬಯಸಿದರೆ ಈ ರಾಶಿಯವರು ಅತ್ಯುತ್ತಮ ಶಿಕ್ಷಕರು. ಕನ್ಯಾ ರಾಶಿಯವರು ಪರ್ಫೆಕ್ಷನಿಸ್ಟ್​ಗಳು. ಕಠಿಣ ಪರಿಶ್ರಮ ಮತ್ತು ಸೂಪರ್ ಸೇವರ್ ಎಂದು ಇವರನ್ನು ಕರೆಯಲಾಗುತ್ತದೆ. ಹಣಕಾಸಿನ ಯೋಜನೆಗೆ ಬಂದಾಗ, ತುಂಬಾ ಪ್ರಾಕ್ಟಿಕಲ್ ಹಾಗೂ ಅಲರ್ಟ್​ ಆಗಿರುತ್ತಾರೆ. ಇವರು ಸರಿಯಾದ ವಿಶ್ರಾಂತಿ ಪಡೆಯಲು ಕಲಿಯಬೇಕು ಮತ್ತು ಶಾಪಿಂಗ್ ಮಾಡಲು ಸ್ವಲ್ಪ ಸಮಯವನ್ನು ಮೀಸಲಿಡಬೇಕು.

ತುಲಾ
ಈ ರಾಶಿಯವರು ಖರ್ಚು ಮತ್ತು ಉಳಿತಾಯದ ನಡುವೆ ಪರಿಪೂರ್ಣ ಸಮತೋಲನ ಸಾಧಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಹಳ ಉದಾರವಾಗಿರುತ್ತಾರೆ, ವಿಶೇಷವಾಗಿ ಅಗತ್ಯವಿರುವ ಸಮಯದಲ್ಲಿ. ಅವರು ತಮ್ಮ ಹೆಚ್ಚಿನ ಹಣವನ್ನು ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಖರ್ಚು ಮಾಡುತ್ತಾರೆ. ಆದರೆ ಇವರು ತುಲಾ ತಮ್ಮ ಅಗತ್ಯಗಳನ್ನೇ ನಿರ್ಲಕ್ಷಿಸುತ್ತಾರೆ. ಯಾರಿಗಾದರೂ ಹಣಕಾಸಿನ ಸಹಾಯ ಬೇಕಾದಲ್ಲಿ ತಮ್ಮ ಉಳಿತಾಯದಲ್ಲೇ ನೀಡುತ್ತಾರೆ. ಇತರರು ಇವರ ಔದಾರ್ಯದ ಲಾಭವನ್ನು ಪಡೆದುಕೊಳ್ಳುತ್ತಾರೆ. ಆದ್ದರಿಂದ ಹೆಚ್ಚು ಹಣವನ್ನು ಉಳಿಸಲು ಪ್ರಾರಂಭಿಸಬೇಕು ಮತ್ತು ತಮಗಾಗಿ ಆದ್ಯತೆ ನೀಡಬೇಕು.

ವೃಶ್ಚಿಕ
ಈ ಜನರು ಸಾಕಷ್ಟು ರಹಸ್ಯವಾದವರು. ಭವಿಷ್ಯದ ಯೋಜನೆ ಮೇಲೆ ಪರಿಣಾಮ ಬೀರುವಂತಹ ಹಣದ ವಿಷಯಗಳನ್ನು ಮರೆ ಮಾಡಲು ಇಷ್ಟಪಡುತ್ತಾರೆ. ಅವರ ನಿಜವಾದ ಆರ್ಥಿಕ ಸ್ಥಿತಿಯ ಬಗ್ಗೆ ಯಾರಿಗೂ ಸಂಪೂರ್ಣವಾಗಿ ತಿಳಿದಿರುವುದಿಲ್ಲ ಎಂಬುದು ನಿಜ. ಆದರೆ ಇವರು ಅಲ್ಪಾವಧಿಯ ಹಣಕಾಸು ಯೋಜನೆಗಳನ್ನು ರೂಪಿಸುವಲ್ಲಿ ಉತ್ತಮರು. ದೀರ್ಘಾವಧಿಯ ಯೋಜನೆ ವಿಚಾರಕ್ಕೆ ಬಂದಾಗ ಇತರರ ಸಹಾಯ ಬೇಕಾಗುತ್ತದೆ. ಆದ್ದರಿಂದ ತಜ್ಞರೊಂದಿಗೆ ದೀರ್ಘಕಾಲೀನ ಹಣಕಾಸಿನ ಯೋಜನೆ ಬಗ್ಗೆ ಮಾತನಾಡಬೇಕು. ಸಲಹೆ ಪಡೆಯಬೇಕು.

ಧನು
ಈ ಜನರು ಹೆಚ್ಚು ಸಾಹಸಮಯರು. ಪ್ರಾಮಾಣಿಕ, ಸ್ಮಾರ್ಟ್ ಮತ್ತು ಸ್ವತಂತ್ರರು. ಹೆಚ್ಚಾಗಿ ಪ್ರಯಾಣ, ರಜಾದಿನಗಳು, ಪಾರ್ಟಿಗಳು ಇತ್ಯಾದಿಗಳಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ. ಒಂದೇ ಒಂದು ಅವಕಾಶವು ಅವರ ಬಾಗಿಲನ್ನು ತಟ್ಟಿದ ತಕ್ಷಣ ಇವರ ಹಣವು ಕಳೆದುಹೋಗುತ್ತದೆ. ತಮ್ಮ ಬಗ್ಗೆ ಜನರ ಮಧ್ಯೆ ನೆನಪುಗಳನ್ನು ಉಳಿಸಲು ಇವರು ಇಷ್ಟಪಡುತ್ತಾರೆ ಮತ್ತು ಅದಕ್ಕಾಗಿ ಬಹಳಷ್ಟು ಹಣವನ್ನು ಖರ್ಚು ಮಾಡಲು ಹಿಂದೆ ಮುಂದೆ ಆಲೋಚಿಸುವುದಿಲ್ಲ. ಇವರು ಖರ್ಚಿನ ಬಗ್ಗೆ ಜಾಗರೂಕರಾಗಿರಬೇಕು. ಗಳಿಕೆಯ ಕೆಲವು ಭಾಗವನ್ನು ಮಾಸಿಕ ಆಧಾರದ ಮೇಲೆ ಉಳಿಸಲು ಪ್ರಯತ್ನಿಸಬೇಕು. ಅದನ್ನು ರಜಾ ದಿನಗಳಿಗಾಗಿ ಉಳಿಸಲು ಪ್ರಾರಂಭಿಸಬೇಕು.

ಮಕರ
ಈ ಜನರು ಬಹಳ ಪ್ರಾಕ್ಟಿಕಲ್ ಆಗಿ ಆಲೋಚಿಸುವವರು. ವಾಸ್ತವವಾದಿಗಳು. ಹಣಕಾಸು ಉಳಿತಾಯವನ್ನು ಚೆನ್ನಾಗಿ ಮಾಡುತ್ತಾರೆ. ಅವರ ಮಿತಿಯಲ್ಲಿ ಉಳಿಯುತ್ತಾರೆ. ತಮ್ಮ ಹಣಕಾಸಿನ ಉದ್ದೇಶಗಳನ್ನು ಸಾಧಿಸುವ ಬಗ್ಗೆ ಎಷ್ಟು ಶಿಸ್ತುಬದ್ಧರಾಗಿ ಇರುತ್ತಾರೆಂದರೆ, ಕೆಲವೊಮ್ಮೆ ಜೀವನದ ಅವಶ್ಯಕತೆಗಳನ್ನು ಸಹ ನಿರ್ಲಕ್ಷಿಸುತ್ತಾರೆ. ಆರ್ಥಿಕ ಭದ್ರತೆ ಮುಖ್ಯ ಎಂಬುದು ನಿಜ. ಆದರೆ ಇದಕ್ಕಾಗಿ ಜೀವನವನ್ನು ಆನಂದಿಸುವುದನ್ನು ನಿಲ್ಲಿಸಬೇಕು ಎಂದಲ್ಲ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಕುಂಭ
ಇವರು ಅತ್ಯಂತ ಬುದ್ಧಿವಂತ ಮತ್ತು ಸಂವೇದನಾಶೀಲರು. ತುಂಬ ಕ್ಯಾಲ್ಕುಲೇಟೆಡ್ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅದೇ ಸಮಯದಲ್ಲಿ, ಅವರು ತಮ್ಮ ಖರ್ಚುಗಳನ್ನು ಎಚ್ಚರಿಕೆಯಿಂದ ಮಾಡುತ್ತಾರೆ. ತಕ್ಕ ಮಟ್ಟಿಗೆ ಹಣ ಉಳಿಸುತ್ತಾರೆ. ಅಲ್ಲದೆ, ಈ ಜನರು ತುಂಬಾ ಕರುಣಾಮಯಿ, ಸ್ನೇಹಪರರು ಮತ್ತು ಉದಾರರು. ಇತರರಿಗೆ ಸಹಾಯ ಮಾಡಲು ಇಷ್ಟಪಡುತ್ತಾರೆ. ಸ್ನೇಹಿತರು ಮತ್ತು ಕುಟುಂಬದವರ ಬಗ್ಗೆ ಉದಾರವಾಗಿರುವುದು ಒಳ್ಳೆಯದು. ಆದರೆ ಜನರು ಔದಾರ್ಯದ ಲಾಭವನ್ನು ಪಡೆಯಲು ಪ್ರಾರಂಭಿಸುವ ಮಟ್ಟಿಗೆ ಅಲ್ಲ. ಈ ವಿಚಾರದಲ್ಲಿ ಸ್ವಲ್ಪ ಪ್ರಾಕ್ಟಿಕಲ್ ಆಗಿರಬೇಕು.

ಮೀನ
ಈ ಜನರು ಹಗಲುಗನಸು ಕಾಣಿಸುವುದು ಹೆಚ್ಚು. ಇನ್ನೂ ತಮಗೆ ಬಾರದೆ ಇರುವ ಹಣಕ್ಕೂ ಖರ್ಚಿನ ಯೋಜನೆಗಳನ್ನು ಮಾಡುತ್ತಾರೆ. ಅಲಂಕಾರಿಕ ಮತ್ತು ಸುಂದರವಾದ ವಸ್ತುಗಳು ಹೆಚ್ಚು ಆಕರ್ಷಿಸುತ್ತವೆ. ಸ್ವಲ್ಪ ಹಣ ಬಂದರೂ ಅದನ್ನು ಅಲಂಕಾರಿಕ ವಿಷಯಗಳಿಗೆ ಖರ್ಚು ಮಾಡುತ್ತಾರೆ. iವರು ಉತ್ತಮ ಉಳಿತಾಯ ಸ್ವಭಾವದವರಲ್ಲ. ಗಾಳಿಗೋಪುರ ಕಟ್ಟುವುದನ್ನು ನಿಲ್ಲಿಸಬೇಕು. ಅನುಭವಗಳಿಂದ ಪಾಠಗಳನ್ನು ಕಲಿಯಬೇಕು. ಹಣದ ವಿಷಯಗಳಲ್ಲಿ ಪ್ರಾಕ್ಟಿಕಲ್ ಆಗಿ ಇರಬೇಕು. ಇನ್ನು ಸಂಪಾದನೆಯೇ ಆಗದ ಹಣದಲ್ಲಿ ಖರ್ಚು ಮಾಡುವುದು ಸರಿಯಲ್ಲ.

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

ಇದನ್ನೂ ಓದಿ: Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

( Spending habit of an individual on the basis of zodiac sign according to astrology)