ಎಂಥ ಬಂಡೆಗಲ್ಲಿನಂಥ ವ್ಯಕ್ತಿತ್ವ- ಹೀಗೆ ಕೆಲವರನ್ನು ನೋಡಿದ ತಕ್ಷಣ ಅನಿಸುತ್ತದೆ. ಎಂಥ ಸವಾಲಿನ ಸಂದರ್ಭಕ್ಕೂ ಅವರು ಎದೆಗುಂದುವುದಿಲ್ಲ. ಧೈರ್ಯಗೆಡುವುದಿಲ್ಲ. ಅಯ್ಯೋ, ಮುಂದೇನು ಎಂದು ಧೃತಿಗೆಡುವುದಿಲ್ಲ. ಹೀಗೆ ಇರುವುದಕ್ಕೂ ಜ್ಯೋತಿಷಕ್ಕೂ ಏನಾದರೂ ಸಂಬಂಧ ಇದೆಯಾ ಅಂತ ನೋಡಿದರೆ, ಹೌದು, ಖಂಡಿತಾ ಇದೆ. ಕೆಲವು ರಾಶಿಯವರಲ್ಲಿ ಮೂಲತಃ ಆ ಸ್ವಭಾವ ಇರುತ್ತದೆ. ನೀವು ಗಮನಿಸಿ ನೋಡಿ, ಎಂಥ ಸಂದಿಗ್ಧ ಸನ್ನಿವೇಶದಲ್ಲೂ ಒಂಚೂರು ಸಹ ವಿಚಲಿತರಾಗುವುದಿಲ್ಲ. ಬಡಪೆಟ್ಟಿಗೆ ಬಗ್ಗಲ್ಲ ಅಂತಾರಲ್ಲ ಹಾಗೆ. ಇವರನ್ನು ಬಗ್ಗಿಸುವುದು ಸಲೀಸಲ್ಲ. ಹೀಗೆ ನಾಲ್ಕು ರಾಶಿಗಳಂತೂ ಬಲು ಗಟ್ಟಿ. ಯಾವುವು ಆ ರಾಶಿಗಳು ಅಂತ ತಿಳಿಯುವುದಕ್ಕೆ ಮುಂದೆ ಓದಿ.
ವೃಷಭ
ಮಾನಸಿಕವಾಗಿ ವಿಪರೀತ ಎನಿಸುವಷ್ಟು ಗಟ್ಟಿ ಇವರು. ಏನನ್ನಾದರೂ ನಿರ್ಧಾರ ಮಾಡಿಬಿಟ್ಟರೆ ಆ ಕೆಲಸ ಪೂರ್ತಿ ಆಗುವ ತನಕ ಕೈ ಬಿಡುವವರಲ್ಲ. ಎಂಥ ಕಷ್ಟದ ಸನ್ನಿವೇಶದಲ್ಲೂ ಗುರಿಯತ್ತ ನೆಟ್ಟ ಕಣ್ಣನ್ನು ಆಚೀಚೆ ಮಾಡುವವರಲ್ಲ. ಕಾದಾಟ ಎಂದು ಬಂದುಬಿಟ್ಟರೆ ಸುಲಭಕ್ಕೆ ಸೋಲುಪ್ಪುವ ಜಾಯಮಾನದವರಲ್ಲ. ತಾವು ಪ್ರಯತ್ನ ಪಡುತ್ತಿರುವ ಕೆಲಸದಲ್ಲಿ ಸವಾಲಿದೆ ಎನಿಸಿಬಿಟ್ಟರೆ ತಮ್ಮೆಲ್ಲ ಶಕ್ತಿಯನ್ನೂ ಅದರಲ್ಲೇ ತೊಡಗಿಸುತ್ತಾರೆ. ಇವರ ಆತ್ಮವಿಶ್ವಾಸ ಕಂಡು, ಇತರರು ಹೆದರುವಂತಾಗುತ್ತದೆ.
ಕುಂಭ
ಕುಂಭ ರಾಶಿಯ ಜಾತಕರು ಸಹ ಮಾನಸಿಕವಾಗಿ ಬಲು ಗಟ್ಟಿಗರು. ವ್ಯಕ್ತಿಗಳ ಸ್ವಭಾವವನ್ನು ಅರಿತುಕೊಳ್ಳುವ ಸಾಮರ್ಥ್ಯ ಇವರಲ್ಲಿ ಇರುತ್ತದೆ. ತಮ್ಮ ಹಿಂದಿನ ಸೋಲು, ಕೆಟ್ಟ ಅನುಭವಗಳಿಂದ ಬಹಳ ಬೇಗ ಹೊರಬರಬಲ್ಲಂಥ ಶಕ್ತಿ ಇವರಿಗೆ ಇರುತ್ತದೆ. ತಮ್ಮದೇ ದೌರ್ಬಲ್ಯಗಳ ವಿರುದ್ಧ ಕೂಡ ಭಾರೀ ಹೋರಾಟ ಮಾಡಿಯೇ ಹೊರಬರುತ್ತಾರೆ. ತಮ್ಮನ್ನು ಸದಾ ಅಪ್ಡೇಟ್ ಆಗಿಟ್ಟುಕೊಳ್ಳುವುದಕ್ಕೆ ಬಯಸುವ ಇವರು, ಸದಾ ಚೈತನ್ಯಪೂರ್ಣರಾಗಿ, ಚಿಂತನಶೀಲರಾಗಿ ಕಾಣಿಸಿಕೊಳ್ಳುತ್ತಾರೆ.
ವೃಶ್ಚಿಕ
ವೃಶ್ಚಿಕ ರಾಶಿಯವರು ಬಹಳ ಗುಟ್ಟಿನ ಜನರು. ತಮ್ಮ ಕಂಫರ್ಟ್ ಝೋನ್ನಿಂದ ಹೊರಬಂದು ನಿಜವಾದ ಭಾವನೆಗಳನ್ನು ತೋರಿಸಿಕೊಳ್ಳುವುದು ಬಹಳ ಅಪರೂಪ. ಕೆಲವು ಸಲವಂತೂ ಇವರೆಷ್ಟು ಹೃದಯಹೀನರು ಎಂಬಂತೆ ನಡೆದುಕೊಳ್ಳುತ್ತಾರೆ. ಯಾವ ಮುಲಾಜು ಸಹ ನೋಡದೆ ಎದುರುಎದುರಿಗೇ ಬೈದು ಬಿಡುತ್ತಾರೆ. ಇವೆಲ್ಲವೂ ತಮ್ಮ ಭಾವನೆಗಳನ್ನು ಮುಚ್ಚಿಡುವುದಕ್ಕೆ ಅವರು ಕಂಡುಕೊಳ್ಳುವ ಮಾರ್ಗವಾಗಿರುತ್ತದೆ. ನೋವಿನಲ್ಲೂ ಇವರಿಗೊಂದು ಸಮಾಧಾನ ಇರುತ್ತದೆ. ಇದು ಕೂಡ ಜೀವನದ ಪ್ರಮುಖವಾದ ಭಾಗ ಅಂತಲೇ ಭಾವಿಸುತ್ತಾರೆ.
ಸಿಂಹ
ಬದಲಾವಣೆಗೆ ಒಗ್ಗಿಕೊಳ್ಳುವುದರಲ್ಲಿ ಈ ರಾಶಿಯವರು ನಿಸ್ಸೀಮರು. ಅಚ್ಚರಿ ಹುಟ್ಟಿಸುವಷ್ಟು ಆತ್ಮವಿಶ್ವಾಸ ಇವರಲ್ಲಿ ಇರುತ್ತದೆ. ಕಷ್ಟಗಳು ಎದುರಾದಷ್ಟೂ ಹೆಚ್ಚೆಚ್ಚು ಗಟ್ಟಿಯಾಗುತ್ತಾ ಹೋಗುತ್ತಾರೆ. ಮಾನಸಿಕವಾಗಿ ಇನ್ನಷ್ಟು ದೃಢವಾಗುತ್ತಾರೆ. ಕಷ್ಟ ಎದುರಾದಾಗಲೇ ತರ್ಕಬದ್ಧವಾಗಿ ಆಲೋಚನೆ ಮಾಡುತ್ತಾರೆ. ತಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಧಿಸಿರುವ ಇವರು, ಅಪರೂಪಕ್ಕೆ ಎಂಬಂತೆ ಕುಸಿದಂತೆ ಕಾಣಸಿಗುತ್ತಾರೆ. ಇವರು ಒಂದು ಬಗೆಯಲ್ಲಿ ನೀರಿದ್ದಂತೆ. ಯಾವ ಪಾತ್ರೆಯಲ್ಲಿ ಹಾಕಿದರೂ ಅದಕ್ಕೆ ತಕ್ಕಂತೆ ಹೊಂದಾಣಿಕೆ ಆಗಿಬಿಡುತ್ತಾರೆ. ನಿಜವಾದ ಯೋಧನ ರೀತಿಯಲ್ಲಿ ಅದೆಂಥ ಕಷ್ಟದ ಯುದ್ಧವನ್ನಾದರೂ ಮಾನಸಿಕ ಸಮತೋಲನದಿಂದಲೇ ಅರ್ಧ ಗೆದ್ದುಬಿಡುತ್ತಾರೆ.
ಇದನ್ನೂ ಓದಿ: Numerology: ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ
(Here are the four zodiac signs, Taurus, Aquarius, Scorpio and Leo people have more will power and self confidence according to astrology)