ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 6ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮನಸಾರೆ ಯಾವುದೇ ಕೆಲಸ- ಕಾರ್ಯದಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಯಾರು ಪ್ರೀತಿ- ಪ್ರೇಮದಲ್ಲಿ ಇರುತ್ತೀರೋ ಅಂಥವರಿಗೆ ಬೇಸರವಾಗುವಂಥ ಸನ್ನಿವೇಶಗಳು ಉದ್ಭವ ಆಗಲಿವೆ. ನಿಮ್ಮ ಹಳೇ ವ್ಯವಹಾರಗಳು ಸಮಸ್ಯೆಗಳಾಗಿ ಕಾಣಿಸಿಕೊಳ್ಳಬಹುದು. ಜಿಎಸ್ ಟಿಗೆ ನೀಡಿದ ವಿಳಾಸವೋ ಅಥವಾ ಬೇರೆ ಯಾವುದೇ ಸರ್ಕಾರಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಮುಂಜಾಗ್ರತೆಯಿಂದ ಇರುವುದು ಮುಖ್ಯ. ನಿಮ್ಮಲ್ಲಿ ಯಾರು ಕಾಂಡಿಮೆಂಟ್ಸ್ ನಡೆಸುತ್ತಿದ್ದೀರೋ ಅಥವಾ ಜ್ಯೂಸ್ ಅಂಗಡಿ ಮಾಡುತ್ತಿರುವಿರೋ ಅಂಥವರಿಗೆ ರಸ್ತೆ ಅಗೆದು ಅಥವಾ ಮರ ಬಿದ್ದು, ನೀರು- ಕೇಬಲ್ ಹೀಗೆ ಯಾವುದಾದರೂ ಒಂದು ಕಾರಣಕ್ಕೆ ಜನರು ಅಂಗಡಿಗೆ ಬರಲು ಸಾಧ್ಯವಾಗದೆ, ಅಥವಾ ಕಡಿಮೆಯಾಗಿ ಆದಾಯದಲ್ಲಿ ಇಳಿಕೆಯಾಗಲಿದೆ. ಸಾಲಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಣ್ಣ- ಪುಟ್ಟ ಅಡೆತಡೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಇದೇ ಮೊದಲಿಗೆ ಅಂತ ಕೈಲಿರುವ ಹಣವನ್ನು ಹೂಡಿಕೆ ಮಾಡಿ, ವ್ಯಾಪಾರವನ್ನು ಶುರು ಮಾಡಿದ್ದೀರಿ ಅಂತಾದರೆ ಅದು ನೆಲೆ ಕಾಣುವ ಸಾಧ್ಯತೆಗಳು ಕಾಣಿಸಿಕೊಳ್ಳಲಿವೆ. ಆದಾಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕೆ ಒಂದರ ಜತೆಗೆ ಇನ್ನೊಂದು, ಮತ್ತೊಂದು ಎಂದು ಹೊಸ ವ್ಯಾಪಾರಗಳು ಶುರು ಆರಂಭಿಸುವ ಬಗ್ಗೆ ಕೆಲವರ ಜೊತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಸೈಟು ಖರೀದಿ ಅಥವಾ ಮನೆ ಖರೀದಿಗಾಗಿ ಸಾಲ ಪಡೆಯುವುದರ ಕುರಿತು ಚಿಂತನೆ ಮಾಡುತ್ತಿರುವವರು ತಮ್ಮ ನಿರ್ಧಾರವನ್ನು ಮುಂದಕ್ಕೆ ಹಾಕುವ ಸಾಧ್ಯತೆಗಳಿವೆ. ನಿಮ್ಮ ಬಳಿ ಈಗಾಗಲೇ ಇರುವಂಥ ವಾಹನವನ್ನು ಮಾರಿಯೋ ಅಥವಾ ವಿನಿಮಯ ಮಾಡಿಕೊಂಡು ಹೊಸ ವಾಹನವನ್ನು ಖರೀದಿಸುವುದಕ್ಕೆ ಅಡ್ವಾನ್ಸ್ ನೀಡುವ ಅವಕಾಶಗಳಿವೆ. ಚೀಟಿ ವ್ಯವಹಾರದಲ್ಲಿ ಹಣ ಹಾಕಿರುವವರು ಅದನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಳ್ಳಲಿದ್ದೀರಿ. ಬೆನ್ನು ನೋವು ಕಾಡುತ್ತಿದ್ದಲ್ಲಿ ಎಚ್ಚರಿಕೆಯಿಂದ ಇರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಮನೆಯ ಕಿರಿಯ ಸದಸ್ಯರು ತಮ್ಮ ವಯಸ್ಸಿಗೆ ಮೀರಿದ ಮಾತುಗಳನ್ನು ಆಡುವುದರಿಂದ ಆತಂಕ, ಕೋಪಕ್ಕೆ ಕಾರಣವಾಗಲಿದೆ. ನಿಮ್ಮ ಜೊತೆಗೆ ಚೆನ್ನಾಗಿ ಮಾತನಾಡಿಕೊಂಡು, ನಿಮ್ಮಿಂದಲೇ ಅನುಕೂಲ ಪಡೆದುಕೊಂಡವರು ಕೆಲವು ಕೆಲಸ- ಕಾರ್ಯಗಳಲ್ಲಿ ತೊಡರುಗಾಲು ಹಾಕುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ಸಾಮಾನ್ಯವಾಗಿ ಇಂಥ ಕೆಲಸಕ್ಕೆ ಇಷ್ಟು ಬಜೆಟ್ ಅಂದುಕೊಂಡು ವ್ಯವಹಾರ ಮಾಡಿಕೊಂಡು ಬರುತ್ತಿರುವವರಿಗೆ ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆ ಆಗಬಹುದು. ದಯಾ- ದಾಕ್ಷಿಣ್ಯ ನೋಡುತ್ತಾ ಕೂತರೆ ಯಾವ ಕೆಲಸವೂ ಕೈ ಹಿಡಿಯಲ್ಲ ಎಂಬುದು ನಿಮ್ಮಲ್ಲಿ ಕೆಲವರಿಗೆ ಮನಸ್ಸಿಗೆ ಅನಿಸಲಿದೆ. ಈ ವ್ಯಕ್ತಿ ಹೀಗೆ ಮಾತನಾಡಿದನಾ ಎಂದುಕೊಳ್ಳುವ ರೀತಿ ಒಬ್ಬರು ದಬಾಯಿಸಿ ಮಾತನಾಡಿ, ಮನಸ್ಸಿಗೆ ನೋವು ಮಾಡಲಿದ್ದಾರೆ. ಕಷ್ಟ ಕಾಲಕ್ಕೆ ಎಂದಿಟ್ಟುಕೊಂಡಿದ್ದ ನಿಮ್ಮ ಉಳಿತಾಯದ ಹಣವನ್ನು ಇನ್ನೊಬ್ಬರಿಗೆ ಕೊಡಬೇಕಾಗುತ್ತದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಇಂಟೀರಿಯರ್ ಡಿಸೈನಿಂಗ್, ಆರ್ಟ್ ವರ್ಕ್, ಹೋಮ್ ಥಿಯೇಟರ್ ಗಳನ್ನು ಸಿದ್ಧಪಡಿಸಿಕೊಡುವಂಥ ವ್ಯವಹಾರದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ದೀರ್ಘಕಾಲದ ಯೋಜನೆಗಳು ನಿಮಗೆ ದೊರೆಯಬಹುದು ಅಥವಾ ತಮ್ಮ ವೃತ್ತಿಯಲ್ಲಿ ತುಂಬ ದೊಡ್ಡ ಹೆಸರು ಇರುವಂಥವರು ತಮಗೆ ಬಂದಂಥ ಕೆಲಸಗಳನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವುದಾಗಿ ಹೇಳುವ ಸಾಧ್ಯತೆಗಳಿವೆ. ಒಂದು ವೇಳೆ ಇಂಥ ಸಹಯೋಗಗಳ ಬಗ್ಗೆ ನಿಮಗೇನಾದರೂ ಹಿಂಜರಿಕೆ ಕಾಡುತ್ತಿದ್ದಲ್ಲಿ ಅಂಥದ್ದರಿಂದ ಹೊರಬರುವುದು ಬಹಳ ಮುಖ್ಯವಾಗುತ್ತದೆ. ಒಂದು ವಿಚಾರವನ್ನು “ಇಲ್ಲ” ಎಂದು ಹೇಳಿದ ನಂತರವೂ ವ್ಯಕ್ತಿಯೊಬ್ಬರು ಪದೇಪದೇ ಹುಡುಕಿಕೊಂಡು ಬರುತ್ತಿದ್ದಲ್ಲಿ ಅಂಥವರಿಂದ ಎಚ್ಚರಿಕೆ ವಹಿಸುವುದು ಮುಖ್ಯವಾಗುತ್ತದೆ. ಯಾಕೆಂದರೆ ಒಂದು ಕ್ಷಣದಲ್ಲಿ ನೀವು ಮನಸ್ಸು ಬದಲಾವಣೆ ಮಾಡಿಕೊಂಡು, ಹೌದು ಎಂದೇನಾದರೂ ಹೇಳಿದಲ್ಲಿ ನಂತರ ಪರಿತಪಿಸಬೇಕಾಗುತ್ತದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಒಂದು ಬಗೆಯ ಪ್ರತೀಕಾರದ ಮನೋಭಾವ ನಿಮ್ಮಲ್ಲಿ ಮೂಡಲಿದೆ. ಯಾವ ಕೆಲಸ- ಕಾರ್ಯಗಳನ್ನು ಬಹು ದಿನಗಳಿಂದ ಬಾಕಿ ಉಳಿಸಿಕೊಂಡು ಬಂದಿರುತ್ತೀರೋ ಅವುಗಳನ್ನು ಒಂದೊಂದಾಗಿ ಪೂರ್ಣಗೊಳಿಸಿ ಬಿಡುವ ಸಂಕಲ್ಪ ಮಾಡಲಿದ್ದೀರಿ. ಇನ್ನು ಮುಂದೆ ಎಂಥ ಕಷ್ಟದ ಸಮಯದಲ್ಲೂ ಇನ್ನೊಬ್ಬರ ಬಳಿ ಯಾವುದೇ ರೀತಿಯ ನೆರವು ಕೇಳಬಾರದು ಎಂದೆನಿಸುವ ಮಟ್ಟಿಗೆ ಈ ದಿನ ಕೆಲವು ಬೆಳವಣಿಗೆಗಳು ಆಗಲಿವೆ. ದಿನದ ದ್ವಿತೀಯಾರ್ಧದಲ್ಲಿ ಹಲವು ಸಕಾರಾತ್ಮಕ ಬೆಳವಣಿಗೆಗಳು ಆಗುವ ಸಾಧ್ಯತೆಗಳಿವೆ. ಸರ್ಕಾರದಿಂದ ಆಗಬೇಕಾದ ಭೂಮಿ- ಜಮೀನು, ಮನೆಗೆ ಸಂಬಂಧಿಸಿದ ದಾಖಲಾತಿ ಕೆಲಸಗಳು ಸಲೀಸಾಗಿ ಮುಗಿಯವ ಅವಕಾಶಗಳು ತೆರೆದುಕೊಳ್ಳಲಿವೆ. ಯುವತಿಯರು ಸಣ್ಣ- ಸಣ್ಣ ಕಿವಿಯೋಲೆ, ಫ್ಯಾಷನ್ ಒಡವೆಗಳನ್ನು ಖರೀದಿಸುವ ಯೋಗ ಇದೆ. ನಿಮ್ಮ ಮನಸ್ಸಿಗೆ ಒಪ್ಪುವ ರೆಸ್ಟೋರೆಂಟ್ ಅಥವಾ ಹೋಟೆಲ್ ನಲ್ಲಿ ಊಟ- ತಿಂಡಿಯನ್ನು, ನೀವು ಮೆಚ್ಚುವ ವ್ಯಕ್ತಿಗಳ ಜೊತೆ ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಭರವಸೆ ಇಟ್ಟುಕೊಂಡು ಬಹಳ ದೂರಕ್ಕೆ ಸಾಗಿದ ಕೆಲಸವೊಂದರಿಂದ ವಾಪಸ್ ಆಗಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಅದೇನು ನೀವೇ ಸರಿಯಾಗಿ ಕೇಳಿಸಿಕೊಂಡಿರುವುದಿಲ್ಲವೋ ಅಥವಾ ನಿಮಗೆ ಹೇಳಿದವರೇ ಸರಿಯಾಗಿ ಹೇಳಿರುವುದಿಲ್ಲವೋ ಸಂವಹನದಲ್ಲಿ, ಅಂದರೆ ಕಮ್ಯುನಿಕೇಷನ್ ಗ್ಯಾಪ್ ಅಂತಾರಲ್ಲ ಅದು ಆಗಲಿದೆ. ಕೆಲವು ಬೆಳವಣಿಗೆಗಳಿಂದ ಆತ್ಮವಿಶ್ವಾಸವೇ ಕುಗ್ಗಿಹೋಗುವಂತೆ ಆಗುತ್ತದೆ. ಬಹಳ ಉತ್ಸಾಹದಿಂದ ಜವಾಬ್ದಾರಿ ವಹಿಸಿಕೊಂಡು ಸಂಘಟನಾ ಚಟುವಟಿಕೆಗಳಲ್ಲೂ ನಿರೀಕ್ಷಿತ ಬೆಳವಣಿಗೆ ಕಂಡುಬರುವುದಿಲ್ಲ. ಯಾರು ರಾಜಕಾರಣದಲ್ಲಿ ಇರುತ್ತೀರೋ ಅಂಥವರಿಗೆ ಸುತ್ತಮುತ್ತಲ ಜನರಿಂದ ಅವಮಾನ, ನಿಂದನೆ, ಆಕ್ಷೇಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಾನು ಅಂದುಕೊಂಡ ಪರಿಸರ ಇದಲ್ಲ ಎಂದು ಹಲವು ಸಲ ನಿಮಗೆ ಅನಿಸಲಿದೆ. ನಿಮ್ಮಲ್ಲಿ ಕೆಲವರು ಪದಾಧಿಕಾರಿ ಹುದ್ದೆಗಳು ಇದ್ದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಯೋಗವಿದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ನೀವು ಬಹಳ ಇಷ್ಟ ಪಡುವ ವ್ಯಕ್ತಿಗಳು, ಚಟುವಟಿಕೆಗಳು ಅಥವಾ ಪರಿಸರದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ದಿಢೀರ್ ಜನಪ್ರಿಯತೆ ಸಿಗುವ ಅವಕಾಶಗಳು ಹೆಚ್ಚಿವೆ. ಪೊಲೀಸ್ ಇಲಾಖೆ, ಸೈನ್ಯ ಇಂಥ ಕಡೆಗಳಲ್ಲಿ ಕಾರ್ಯ ನಿರ್ವಹಿಸುವ ನಿಮ್ಮಲ್ಲಿ ಕೆಲವರಿಗೆ ಬಡ್ತಿ ದೊರೆಯುವ ಬಗ್ಗೆ ಸೂಚನೆಗಳು ದೊರೆಯಬಹುದು. ನಿಮಗೆ ಹಲವು ರೀತಿಯಲ್ಲಿ ಸಹಾಯ ಮಾಡಿದಂಥ ವ್ಯಕ್ತಿಯೊಬ್ಬರು ಕಷ್ಟದಲ್ಲಿ ಇರುವಾಗ ಅವರಿಗೆ ನೆರವು ನೀಡುವುದಕ್ಕೆ ಮುಂದಾಗಲಿದ್ದೀರಿ. ಬ್ಯೂಟಿ ಪಾರ್ಲರ್, ಸಲೂನ್ ಗಳಿಗೆ ತೆರಳುವಂಥವರು ಈ ದಿನ ಚರ್ಮದ ಆರೈಕೆ ಕಡೆಗೆ ಗಮನ ನೀಡಿ. ಇಲ್ಲದಿದ್ದಲ್ಲಿ ಚರ್ಮದ ಅಲರ್ಜಿ ಕಾಡುವಂಥ ಸಾಧ್ಯತೆಗಳಿವೆ, ಜಾಗ್ರತೆಯಿಂದ ಇರಿ. ನೀವು ಬಳಸುವ ಕ್ರೀಮ್, ಲೋಷನ್ ಇತ್ಯಾದಿಗಳ ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳಬೇಡಿ. ಸಾಕುಪ್ರಾಣಿಗಳನ್ನು ಮನೆಗೆ ತರುವ ಸಾಧ್ಯತೆ ಇದ್ದು, ಅವುಗಳ ಆರೈಕೆಗಾಗಿ ನಿಮಗೆ ಹೆಚ್ಚಿನ ಖರ್ಚು ಆಗಲಿದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ತಲೆ ಕೂದಲು, ಚರ್ಮದ ಆರೋಗ್ಯ ಸಮಸ್ಯೆ ಇರುವವರಿಗೆ ಅದು ಉಲ್ಬಣ ಆಗಲಿದೆ. ಸೂಕ್ತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ. ಬ್ರ್ಯಾಂಡೆಡ್ ಬಟ್ಟೆ, ವಾಚ್, ಶೂ ಇತ್ಯಾದಿಗಳನ್ನು ಖರೀದಿ ಮಾಡುವುದಕ್ಕೆ ಕ್ರೆಡಿಟ್ ಕಾರ್ಡ್ ಬಳಸುವುದಕ್ಕೆ ಮುಂದಾಗಲಿದ್ದೀರಿ. ರೆಸಾರ್ಟ್- ಹೋಮ್ ಸ್ಟೇ ಇಂಥವನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಇಳಿಕೆ ಕಂಡುಬರಲಿದ್ದು, ಒತ್ತಡ ಬಿದ್ದಂತೆ ಆಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ವರ್ಕಿಂಗ್ ಕ್ಯಾಪಿಟಲ್ ಅಗತ್ಯಗಳಿಗಾಗಿ ಹಣವನ್ನು ಸಾಲ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ಸೋದರ ಸಂಬಂಧಿಗಳಿಗೆ ನಿಮ್ಮ ಸಹಾಯದ ಅಗತ್ಯ ಬೀಳಲಿದ್ದು, ಅವರ ಸಲುವಾಗಿ ನೀವು ಹೆಚ್ಚೆಚ್ಚು ಓಡಾಟ ನಡೆಸಬೇಕಾದ ಸಂದರ್ಭ ಬರಲಿದೆ. ಸರ್ಕಾರಿ ಅಧಿಕಾರಿಗಳಾಗಿ ಇರುವವರಿಗೆ ಹೆಚ್ಚುವರಿ ಹೊಣೆಗಾರಿಕೆಗಳು ಹೆಗಲೇರಲಿದ್ದು, ಇದರಿಂದ ಮಾನಸಿಕವಾಗಿ ಒತ್ತಡ ಸೃಷ್ಟಿ ಆಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ವೃತ್ತಿಪರರಿಗೆ ಸನ್ಮಾನಗಳು ಆಗುವ ಯೋಗವಿದೆ. ಶಾಲೆ- ಕಾಲೇಜುಗಳ ಆಡಳಿತ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ಆಗುವ ಸುಳಿವು ದೊರೆಯಲಿದೆ. ಬ್ಯಾಂಕ್ ಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಪಟ್ಟು, ಅದು ನಾನಾ ಕಾರಣಗಳಿಗೆ ವಿಳಂಬ ಆಗುತ್ತಾ ಬಂದಿದ್ದಲ್ಲಿ ಅದು ಇಂದು ಒಂದು ಹಂತಕ್ಕೆ ಮಂಜೂರಾಗುವುದಕ್ಕೆ ಬರಲಿದೆ. ಪುಸ್ತಕ ಪ್ರಕಾಶಕರು, ಮುದ್ರಕರು, ಡಿಜಿಟಲ್ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಇರುವಂಥವರಿಗೆ ಆದಾಯದ ಮೂಲದಲ್ಲಿ ಹೆಚ್ಚಳ ಆಗಲಿದೆ. ಇನ್ನು ನಲವತ್ತು ವರ್ಷ ಮೇಲ್ಪಟ್ಟವರು ಆರೋಗ್ಯ ಕಾಳಜಿಯಿಂದ ಜಿಮ್, ಯೋಗ ಇಂಥದ್ದಕ್ಕೆ ಸೇರ್ಪಡೆ ಆಗುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಇನ್ನು ರಿಟೈರ್ ಮೆಂಟ್ ಉದ್ದೇಶದಿಂದ ಉಳಿತಾಯ ಯೋಜನೆಗಳಿಗೆ ಹಣ ತೊಡಗಿಸುವುದಕ್ಕೆ ಶುರು ಮಾಡುವ ಸಾಧ್ಯತೆಗಳಿವೆ. ಪಶುಸಾಕಣೆ ವ್ಯವಹಾರದಲ್ಲಿ ಇರುವವರು ಅದನ್ನು ವಿಸ್ತರಣೆಗೆ ತೀರ್ಮಾನ ಮಾಡುವ ಸಾಧ್ಯತೆಗಳಿವೆ.