ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಕರ್ಕಾಟಕ ರಾಶಿ ಭವಿಷ್ಯ: ಏಪ್ರಿಲ್ 2026 ರಲ್ಲಿ ಕರ್ಕಾಟಕ ರಾಶಿಯವರ ಜೀವನದಲ್ಲಿ ಗ್ರಹಗಳ ಪ್ರಭಾವದಿಂದ ವಿಶೇಷ ಬದಲಾವಣೆಗಳಾಗಲಿವೆ. ವೃತ್ತಿ ಜೀವನದಲ್ಲಿ ಪ್ರಗತಿ, ಹಳೆಯ ಹೂಡಿಕೆಗಳಿಂದ ಆರ್ಥಿಕ ಲಾಭ ಹಾಗೂ ಕುಟುಂಬದಲ್ಲಿ ಶುಭ ಕಾರ್ಯಗಳು ಜರುಗುವ ಸಂಭವವಿದೆ. ವಿದೇಶ ಪ್ರಯಾಣದ ಯೋಗವಿದ್ದು, ಸಾಲದ ಬಾಧೆ ಕಡಿಮೆಯಾಗಲಿದೆ. ಮಾನಸಿಕ ಒತ್ತಡ ನಿವಾರಣೆಗೆ ಶಿವನ ಆರಾಧನೆ ಸೂಕ್ತ.

ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ
ಸಾಂದರ್ಭಿಕ ಚಿತ್ರ
Edited By:

Updated on: Mar 31, 2026 | 6:54 PM

ಕರ್ಕಾಟಕ ರಾಶಿಯವರಿಗೆ 2026 ಏಪ್ರಿಲ್ ನಲ್ಲಿ ಗ್ರಹಗತಿಗಳ ದೃಷ್ಟಿಯಿಂದ ಮತ್ತು ಸಂಚಾರದಿಂದ ವಿಶೇಷ ಬದಲಾವಣೆಯಾಗಲಿದೆ. ಈ ತಿಂಗಳು ನಿಮ್ಮ ರಾಶ್ಯಾಧಿಪತಿ ಚಂದ್ರನ ಸಂಚಾರದೊಂದಿಗೆ, ಗುರುವಿನಿಂದ ದ್ವಿತೀಯ, ಶುಕ್ರನಿಂದ ತೃತೀಯ, ಸೂರ್ಯ ಮತ್ತು ಬುಧನಿಂದ ಚತುರ್ಥ, ಮಂಗಳ ಹಾಗೂ ಶನಿಯಿಂದ ಪಂಚಮದಲ್ಲಿರುವ ಕಾರಣ ಎಲ್ಲ ಗ್ರಹರ ಪ್ರಭಾವವೂ ಈ ರಾಶಿಯ ಮೇಲೆ ಇರಲಿದೆ. ಮಾನಸಿಕ ಒತ್ತಡವನ್ನು ಎಲ್ಲ ಕಾರ್ಯದಲ್ಲಿಯೂ ಅನುಭವಿಸಬೇಕಾಗುವುದು.

ಉದ್ಯೋಗ ಮತ್ತು ವೃತ್ತಿ ಜೀವನ:

​ಉದ್ಯೋಗಿಗಳಿಗೆ ಈ ತಿಂಗಳು ಪ್ರಗತಿದಾಯಕವಾಗಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ವರ್ಗಾವಣೆ ಅಥವಾ ಬಡ್ತಿಯ ನಿರೀಕ್ಷೆಯಲ್ಲಿದ್ದವರಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ. ಅತಿಯಾದ ಆತ್ಮವಿಶ್ವಾಸದಿಂದ ಸಹೋದ್ಯೋಗಿಗಳೊಂದಿಗೆ ಘರ್ಷಣೆ ಮಾಡಿಕೊಳ್ಳಬೇಡಿ. ಸಮಾಧಾನದಿಂದ ಕೆಲಸ ನಿರ್ವಹಿಸುವುದು ಉತ್ತಮ.

ವಿದ್ಯಾಭ್ಯಾಸ:

​ವಿದ್ಯಾರ್ಥಿಗಳಿಗೆ ಈ ತಿಂಗಳು ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರಂಭದಲ್ಲಿ ಸ್ವಲ್ಪ ಗಮನ ಹರಿಯುವ ಸಾಧ್ಯತೆ ಇದ್ದರೂ, ದ್ವಿತೀಯಾರ್ಧದಲ್ಲಿ ಪಠ್ಯದ ಮೇಲೆ ಹಿಡಿತ ಸಾಧಿಸುವಿರಿ. ಉನ್ನತ ವ್ಯಾಸಂಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಮಾರ್ಗದರ್ಶನ ಸಿಗಲಿದೆ. ನಿರಂತರ ಅಭ್ಯಾಸವೊಂದೇ ನಿಮ್ಮ ಯಶಸ್ಸಿನ ಸೂತ್ರ.

ಹಣಕಾಸು ಸ್ಥಿತಿ:

​ಆರ್ಥಿಕವಾಗಿ ಈ ತಿಂಗಳು ಸಬಲರಾಗುವಿರಿ. ಹಳೆಯ ಹೂಡಿಕೆಗಳಿಂದ ಲಾಭ ಬರುವ ಸಾಧ್ಯತೆ ಇದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಭೂಮಿ ಅಥವಾ ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಇದು ಸಕಾಲ. ಹಣದ ಹರಿವು ಚೆನ್ನಾಗಿದ್ದರೂ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದು ಅನಿವಾರ್ಯ.

ವಿವಾಹ ಮತ್ತು ಕೌಟುಂಬಿಕ ಜೀವನ:

​ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವ ಸೂಚನೆ ಇದೆ. ಕಂಕಣ ಬಲ ಕೂಡಿ ಬರಲಿದೆ. ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ.

ವಿದೇಶ ಪ್ರವಾಸ:

​ವಿದೇಶಕ್ಕೆ ಹೋಗುವ ಹಂಬಲ ಇರುವವರಿಗೆ ಈ ತಿಂಗಳು ಶುಭ ಸುದ್ದಿಯೊಂದು ಕಾಯುತ್ತಿದೆ. ತಾಂತ್ರಿಕ ಕಾರಣಗಳಿಂದ ನಿಂತುಹೋಗಿದ್ದ ವೀಸಾ ಅಥವಾ ಪಾಸ್‌ಪೋರ್ಟ್ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಉದ್ಯೋಗದ ನಿಮಿತ್ತ ಅಲ್ಪಾವಧಿಯ ವಿದೇಶ ಪ್ರವಾಸದ ಯೋಗವಿದೆ.

ಸಾಲದ ಬಾಧೆ:

​ಸಾಲದ ಸುಳಿಯಲ್ಲಿ ಸಿಲುಕಿರುವವರಿಗೆ ಸ್ವಲ್ಪ ಸಮಾಧಾನಕರ ಸುದ್ದಿ ಸಿಗಲಿದೆ. ಆದಾಯ ಹೆಚ್ಚಾಗುವುದರಿಂದ ಹಳೆಯ ಸಾಲಗಳನ್ನು ತೀರಿಸಲು ಯೋಜನೆ ರೂಪಿಸುವಿರಿ. ಸದ್ಯಕ್ಕೆ ಹೊಸದಾಗಿ ದೊಡ್ಡ ಮೊತ್ತದ ಸಾಲ ಮಾಡುವುದು ಬೇಡ. ಜಾಮಿನು ಹಾಕುವ ಮುನ್ನ ಎಚ್ಚರಿಕೆ ವಹಿಸಿ.

​ಈ ತಿಂಗಳು ನೀವು ಮಾನಸಿಕ ಶಾಂತಿಗಾಗಿ ಶಿವನ ಆರಾಧನೆ ಅಥವಾ ನಮಃ ಶಿವಾಯ ಮಂತ್ರ ಜಪ ಮಾಡುವುದು ಉತ್ತಮ. ಸೋಮವಾರದಂದು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ಶುಭ ಫಲಗಳು ಹೆಚ್ಚಾಗಲಿವೆ.

– ಲೋಹಿತ ಹೆಬ್ಬಾರ್

Follow Us