ಕಳೆದ ವರ್ಷ ಶುಭಾಶುಭ ಫಲಗಳಿಂದ ಇದ್ದು ಈ ವರ್ಷ ಇನ್ನಷ್ಟು ಕಷ್ಟವಾಗಲಿದೆ. ಸಾಡೇಸಾಥ್ ಶನಿಯಿಂದ ಮುಕ್ತಿ ಸಿಗಲಿದೆ. ಹಾಗೆಯೇ ಗುರುವೂ ಷಷ್ಠಕ್ಕೆ ಹೋಗಲಿದ್ದು ಗುರುಬಲವು ಇಲ್ಲದಂತೆ ಆಗುವುದು. ಯಾವ ಫಲವನ್ನು ಅನುಭವಿಸಲಾಗದು. ಇನ್ನು ದ್ವಿತೀಯದಲ್ಲಿ ರಾಹು ಹಾಗೂ ಅಷ್ಟಮದಲ್ಲಿ ಕೇತುವು ಇರುವ ಕಾರಣ ಆರ್ಥಿಕ ಹಾಗೂ ಆರೋಗ್ಯದ ವಿಚಾರದಲ್ಲಿ ಇರಿಸುಮುರಿಸು ಇರಲಿದೆ. ವರ್ಷದ ಆರಂಭದಲ್ಲಿ ಕುಜನು ನೀಚನಾಗಿ ನಿಮ್ಮ ರಾಶಿಯನ್ನು ನೋಡುವನು. ಒಟ್ಟಾರೆಯಾಗಿ ಈ ವರ್ಷ ದುಡುಕಿ ಯಾವುದೇ ನಿರ್ಧಾರ ಮಾಡುವುದು ಬೇಡ. ವಿಳಂಬವಾದರೂ ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಿ.
ಈ ವಿಚಾರಕ್ಕೆ ಬಂದರೆ ಅನಾರೋಗ್ಯದ ಬಗ್ಗೆ ತಾತ್ಸಾರ ಭಾವ ಬರುವುದು. ಸಣ್ಣ ಆರೋಗ್ಯದ ವ್ಯತ್ಯಾಸವನ್ನು ನೀವು ಅದರದ್ದೇ ಆದ ಪ್ರಮಾಣದಲ್ಲಿ ಗಂಭೀರವಾಗಿ ನೋಡಬೇಕು. ಇಲ್ಲವಾದರೆ ಅದು ಅತಿಯಾಗಿ ಸ್ವರೂಪವನ್ನು ಬದಲಿಸುವುದು. ಬುಧ ಅಥವಾ ಗುರುದಶೆಯವರು ಜಾಗರೂಕರಾಗಿರಿ.
ವಿವಾಹವೇನೇ ಇದ್ದರೂ ಮಾರ್ಚ್ ಒಳಗೇ ಮುಗಿಸಿಕೊಳ್ಳಿ, ಅನಂತರ ಬೇಡ. ಆದರೆ ವಿವಾಹದಲ್ಲಿ ಸಂಗಾತಿಯ ಬಗ್ಗೆ ಸರಿಯಾದ ವಿವರ ಪಡೆದು ಆಗುವುದು ಒಳ್ಳೆಯದು. ಪರಿಹಾರವನ್ನು ಮಾಡಿಕೊಳ್ಳುವ ಕಡೆ ಗಮನಬೇಕು. ಮೌಢ್ಯವೆಂದುಕೊಂಡು ಸಂಗಾತಿಯನ್ನು ಕಳೆದುಕೊಳ್ಳುವ ಸ್ಥಿತಿ ಅಥವಾ ವಿವಾಹದ ಅನಂತರ ದುಃಖ, ಕೋರ್ಟ್ ಗೆ ಅಲೆದಾಡುವ ಸ್ಥಿತಿ ಬರಬಹುದು.
ಔದ್ಯೋಗಿಕ ವಿಚಾರಕ್ಕೆ ಬಂದರೆ ಈ ವರ್ಷದಲ್ಲಿ ಅಥವಾ ಆರಂಭದಲ್ಲಿ ಉತ್ತಮ ಆದಾಯ, ವಿಸ್ತಾರವನ್ನು ಮಾಡಿಕೊಳ್ಳುವಿರಿ. ಅನಂತರ ಇದು ಶ್ರಮಕ್ಕೆ ತಕ್ಕ ಫಲ ನೀಡದು. ಹಿನ್ನಡೆ ಆದಂತಹ ಅನುಭವಕ್ಕೆ ಬರಬಹುದು. ತಾಳ್ಮೆ ಕೌಶಲಗಳಿಂದ ಅದನ್ನು ನಿಭಾಯಿಸುಬಹುದು.
ದ್ವಿತೀಯದ ಶನಿಯು ತನ್ನ ಸ್ಥಾನವನ್ನು ಬದಲಿಸುವ ತನಕ ನೆಮ್ಮದಿ. ಅನಂತರ ಬರುವ ರಾಹುವು ಕಲಹವನ್ನು, ಮಾತಿಗೆ ಅಗೌರವ, ಅಪನಂಬಿಕೆ ಬರುವಂತೆ ಮಾಡುವನು. ರಾಹು ದಶೆಯಾದರೆ ಇನ್ನೂ ಸಂಕಷ್ಟ. ಮಾನಸಿಕ ಒತ್ತಡದಿಂದ ಬಿಡುಗಡೆ ಪಡೆಯಬೇಕು.
ಸಜ್ಜನರನ್ನೇ ವಿರೋಧಿಸುವ ಸ್ವಭಾವ ಬರುವುದು. ಅಥವಾ ಅವರ ಸಹವಾಸಕ್ಕೆ ನಿಮ್ಮ ಮನಸ್ಸು ಒಪ್ಪದು. ಅವರಿಂದ ದೂರವೇ ಉಳಿಯುವಿರಿ. ವರ್ಷಾರಂಭದಲ್ಲಿ ಶತ್ರುವಿನಿಂದ ಗೆಲ್ಲಲು ಹಣವನ್ನು ಖರ್ಚುಮಾಡುವಿರಿ.
ಸದ್ಯ ಅದೃಷ್ಟ ಕೈಕೊಡಲಿದ್ದು ಯಾವ ಕ್ಷೇತ್ರದಲ್ಲಿಯೂ ಎಣಿಸುವ ಫಲವನ್ನು ಪಡೆಯಲಾಗದು. ಫೆಬ್ರವರಿಯ ಅನಂತರ ಕೆಲವು ಸಂತೋಷಕರ ಸಂಗತಿಗಳು ನಿಮ್ಮ ಪಾಲಿಗೆ ಇವೆ.
ಶನಿಯಿಂದ ಮುಕ್ತಿಪಡೆದ ಸಂತೋಷವಿದ್ದರೂ ಬೇರೆ ರೀತಿಯಲ್ಲಿ ನಿಮಗೆ ದುಃಖಗಳು ಬರಲಿವೆ. ಹಾಗಾಗಿ ನಿಶ್ಚಿಂತೆ ಎಂದು ಯಾವುದನ್ನೂ ಭಾವಿಸದೇ ನಿರಂತರ ಯಾವುದಾದರೂ ಒಳ್ಳೆಯ ಕಾರ್ಯದಲ್ಲಿ ಮಗ್ನರಾಗಿ. ಪುರಾಣ ಪ್ರಸಿದ್ಧ ಕ್ಷೇತ್ರಗಳಿಗೆ ಹೋಗಿ ಶಿವನಿಗೆ ಅಭಿಷೇಕ ಮಾಡಿ ಪ್ರಸಾದವನ್ನು ಪಡೆಯಿರಿ. ಪ್ರತಿನಿತ್ಯ ಶಿವನ ಸ್ತೋತ್ರವನ್ನು ಪಠಿಸಿ. ಶನಿ ದಶೆಯವರಿಗೆ ಅದು ಅತಿ ಅವಶ್ಯಕ.
ಲೋಹಿತ ಹೆಬ್ಬಾರ್, ಇಡುವಾಣಿ