Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 8ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 8ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜೂನ್ 8ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ರಮೇಶ್ ಬಿ. ಜವಳಗೇರಾ

Updated on: Jun 07, 2024 | 8:20 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜೂನ್ 8ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ದುಬಾರಿ ಮೊಬೈಲ್ ಫೋನ್ ಅಥವಾ ಲ್ಯಾಪ್ ಟಾಪ್ ಹೀಗೆ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ನೀವು ಹಣಕಾಸಿನ ಸಾಲಕ್ಕಾಗಿ ಸ್ನೇಹಿತರು- ಸಂಬಂಧಿಕರ ಬಳಿ ಪ್ರಯತ್ನ ಮಾಡಿದಲ್ಲಿ ಅದು ಸುಲಭಕ್ಕೆ ದೊರೆಯುವ ಸಾಧ್ಯತೆಗಳಿವೆ. ಇದೇ ಮಾತು ಬ್ಯಾಂಕ್ ಅಥವಾ ಬ್ಯಾಂಕಿಂಗೇತರ ಸಂಸ್ಥೆಗಳಿಗೂ ಅನ್ವಯಿಸಲಿದೆ. ವೃತ್ತಿ -ಉದ್ಯೋಗಕ್ಕೆ ನೆರವಾಗುವಂಥ ಕಾಂಟ್ಯಾಕ್ಟ್ ನಿಮಗೆ ದೊರೆಯುವ ಸಾಧ್ಯತೆ ಹೆಚ್ಚಿದೆ. ಪಾರ್ಟಿ ಅಥವಾ ಗೆಟ್ ಟು ಗೆದರ್ ಗೆ ನಿಮಗೆ ಆಹ್ವಾನ ಬಂದಲ್ಲಿ ಕಡ್ಡಾಯವಾಗಿ ಅಲ್ಲಿಗೆ ಹೋಗುವುದಕ್ಕೆ ಪ್ರಯತ್ನಿಸಿ, ಇದರಿಂದಲೇ ನಿಮಗೆ ಭವಿಷ್ಯದಲ್ಲಿ ಅನುಕೂಲ ಮಾಡಿಕೊಡುವಂಥವರು ಪರಿಚಿತರು, ಸ್ನೇಹಿತರು ಅಥವಾ ಆಪ್ತರೇ ಆಗಬಹುದು. ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ದೊರೆಯಬಹುದು ಅಥವಾ ಆ ಬಗ್ಗೆ ಸೂಚನೆಯಾದರೂ ದೊರೆಯುತ್ತದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನೀವು ಆ ಸ್ಥಳದಲ್ಲಿ ಇದ್ದೀರಿ ಎಂಬುದನ್ನು ತಿಳಿದೇ ಹಾಗೂ ಆಡುವ ಮಾತುಗಳಿಂದ ನಿಮಗೆ ಬೇಸರ ಆಗುತ್ತದೆ ಎಂಬುದು ಗೊತ್ತಿದ್ದೂ ಕೆಲವರು ನಿಮಗೆ ಬೇಜಾರು ಆಗುವಂತೆ ಮಾತನಾಡಲಿದ್ದಾರೆ. ಅವರ ಉದ್ದೇಶ ನಿಮ್ಮ ಆತ್ಮಸ್ಥೈರ್ಯ ಕುಗ್ಗಿಸುವುದು, ಕೋಪ ಬರುವಂತೆ ಮಾಡುವುದು ಆಗಿರುತ್ತದೆ. ಆದ್ದರಿಂದ ಅಂಥ ಯಾವ ಮಾತುಗಳಿಗೂ ಪ್ರತಿಕ್ರಿಯಿಸುವುದಕ್ಕೆ ಹೋಗಬೇಡಿ. ಒಂದು ವೇಳೆ ನಿಮಗೆ ಅಂಥವರಿಗೆ ಉತ್ತರ ಕೊಡಲೇಬೇಕು ಎಂದೆನಿಸಿದರೆ, ಅವರನ್ನು ತುಂಬ ಚೆನ್ನಾಗಿ ಮಾತನಾಡಿಸಿ ಬಿಡಿ. ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈ ದಿನ ಯಾವುದಾದರೂ ಮನೆ ತುಂಬ ಇಷ್ಟವಾದರೂ ತಕ್ಷಣ ಅಭಿಪ್ರಾಯ ಹೇಳುವುದಕ್ಕೆ ಹೋಗಬೇಡಿ. ಒಂದೆರಡು ದಿನದ ಮಟ್ಟಿಗೆ ಸಮಯವನ್ನು ತೆಗೆದುಕೊಳ್ಳಿ. ಬೆಂಕಿ ಮುಂದೆ ನಿಂತು ಕೆಲಸ ಮಾಡುವಂಥವರಿಗೆ ಈ ದಿನ ಸಣ್ಣದಾದರೂ ಅಪಘಾತ ಅಥವಾ ಗಾಯವಾಗುವಂಥ ಸಾಧ್ಯತೆಗಳಿವೆ, ಎಚ್ಚರಿಕೆಯಿಂದ ಇರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಯಾವ ವಿಚಾರವು ನಿಮ್ಮ ಕುಟುಂಬ ಸದಸ್ಯರಿಗೆ, ಆಪ್ತರಿಗೆ, ಗೆಳೆಯ- ಗೆಳತಿಯರಿಗೆ ಗೊತ್ತಾಗಬಾರದು ಎಂದು ಇಷ್ಟು ಸಮಯ ಬಹಳ ರಹಸ್ಯವಾಗಿ ಕಾಪಾಡಿಕೊಂಡು ಬಂದಿರುತ್ತೀರೋ ಅಂಥ ವಿಚಾರ ಎಲ್ಲರಿಗೂ ತಿಳಿದುಹೋಗಲಿದೆ. ಇಷ್ಟು ಸಮಯ ಯಾರು ನಿಮಗೆ ಬಹಳ ಗೌರವ ಕೊಟ್ಟು ಮಾತನಾಡುತ್ತಿದ್ದರೋ ಅವರೆಲ್ಲ ಹೀಯಾಳಿಸಿ ಮಾತನಾಡುವುದಕ್ಕೆ ಆರಂಭಿಸುತ್ತಾರೆ. ನೀವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಹಣವೊಂದು ನಿಮ್ಮ ಕೈ ಸೇರದೆ ಆತಂಕಕ್ಕೆ ಕಾರಣ ಆಗಲಿದೆ. ಈ ದಿನ ಅದೇನೇ ಆಗಲಿ ನಿಮಗೆ ಹಣ ಕೊಟ್ಟೇ ಕೊಡುತ್ತೇನೆ ಎಂದು ಯಾರಾದರೂ ಹೇಳಿದ್ದರೂ ಅದನ್ನು ನೆಚ್ಚಿಕೊಂಡು ಯಾವುದೇ ಕೆಲಸವನ್ನು ಮಾಡುವುದಕ್ಕೆ ಹೋಗಬೇಡಿ. ವಿದ್ಯಾರ್ಥಿಗಳಿಗೆ ಹೊಟ್ಟೆ ಸಮಸ್ಯೆ ಆಗಬಹುದು ಅಥವಾ ಫುಡ್ ಪಾಯಿಸನ್ ಅಂಥದ್ದು ಆಗಬಹುದು. ಮನೆಯಿಂದ ಹೊರಗೆ ಇದ್ದು ಹಾಸ್ಟೆಲ್ ಗಳು, ಪಿಜಿಗಳಲ್ಲಿ ವಾಸ ಇರುವವರು ತುಂಬ ಎಚ್ಚರಿಕೆಯಿಂದ ಇರಬೇಕು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ನಿಮ್ಮಲ್ಲೊಂದು ಆತ್ಮವಿಶ್ವಾಸ ಇರುತ್ತದೆ. ಯಾವುದೇ ಸನ್ನಿವೇಶವನ್ನಾದರೂ ಎದುರಿಸಬಲ್ಲೆ ಎಂಬ ಧೈರ್ಯ ಅದಾಗಿರುತ್ತದೆ. ಬಹಳ ಸಮಯದಿಂದ ನಡೆಯುತ್ತಿದ್ದ ವ್ಯಾಜ್ಯವೊಂದನ್ನು ಬಗೆಹರಿಸಿಕೊಳ್ಳುವುದಕ್ಕೆ ವ್ಯಕ್ತಿಯೊಬ್ಬರು ಸಹಾಯ ಮಾಡಲಿದ್ದಾರೆ. ಹಣ ಕಾಸಿನ ವಿಚಾರದಲ್ಲಿ ಒಂದು ಬಗೆಯ ಶಿಸ್ತನ್ನು ಅಳವಡಿಸಿಕೊಳ್ಳಲಿದ್ದೀರಿ. ನಿಮ್ಮಿಂದ ಮಾಡಲಿಕ್ಕೆ ಆಗದು ಎಂದು ನಿಮಗೇ ಅನಿಸಿದ್ದ ಸಂಗತಿಗಳನ್ನು ಮಾಡಿ ಮುಗಿಸುವುದಕ್ಕೆ ವೇದಿಕೆ ದೊರೆಯಲಿದೆ. ನಿಮ್ಮೆದುರು ಬಹಳ ಚೆನ್ನಾಗಿದ್ದು, ನಿಮ್ಮ ಬೆನ್ನ ಹಿಂದೆ ಕೇಡು ಬಯಸುತ್ತಿರುವ ಹಿತಶತ್ರುಗಳು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೆ ಯಶಸ್ವಿ ಆಗಲಿದ್ದೀರಿ. ವಿದೇಶ ಪ್ರಯಾಣಕ್ಕೆ ತೆರಳಬೇಕು ಎಂದು ಸಿದ್ಧತೆ ನಡೆಸುತ್ತಿದ್ದು, ಬಹಳ ಸಮಯದಿಂದ ಅಡೆತಡೆಗಳು ಕಾಡುತ್ತಿದೆ ಎಂದಾದಲ್ಲಿ ಅವುಗಳನ್ನು ನಿವಾರಣೆ ಮಾಡಿಕೊಳ್ಳಲಿದ್ದೀರಿ. ಮನೆ ದೇವರ ಆರಾಧನೆ ಮಾಡಿದಲ್ಲಿ ಇನ್ನೂ ಉತ್ತಮ ಫಲಿತಾಂಶ ಕಾಣಬಹುದು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ನಂಬಿದ ಸಂಗತಿಗಳು ಈ ದಿನ ಕೈ ಹಿಡಿಯುತ್ತವೆ. ಸ್ನೇಹಿತರ ಸಲುವಾಗಿ ಕೆಲವು ಕೆಲಸಗಳನ್ನು ನೀವು ಮಾಡಿ ಮುಗಿಸಲಿದ್ದೀರಿ. ಒಂದು ವೇಳೆ ನಿಮ್ಮ ಸ್ನೇಹಿತರು ಮನೆಯನ್ನು ಖರೀದಿಗೋ ಅಥವಾ ಬಾಡಿಗೆಗೋ ಹುಡುಕಾಡುತ್ತಿದ್ದಲ್ಲಿ ಅವರ ಪರವಾಗಿ ನೀವು ನೋಡಿಕೊಂಡು ಬರುವಂಥ ಯೋಗ ಇದೆ. ಇದೇ ಮೊದಲ ಬಾರಿಗೆ ಎಂಬಂತೆ ನೀವು ಕೈಗೊಂಡ ಕೆಲಸಗಳು ಅದ್ಭುತವಾದ ಯಶಸ್ಸು ಕಾಣಲಿವೆ. ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿ ಮಾಡಬೇಕು ಎಂದು ಹುಡುಕಾಡುತ್ತಿರುವವರಿಗೆ ಮನಸ್ಸಿಗೆ ಮೆಚ್ಚುವಂಥದ್ದು ದೊರೆಯುವ ಯೋಗ ಇದೆ. ಸ್ವಂತ ಉದ್ಯಮ, ವ್ಯವಹಾರ, ವ್ಯಾಪಾರ ಮಾಡುತ್ತಿದ್ದು, ಅದನ್ನು ವಿಸ್ತರಣೆ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಈ ವಿಚಾರದಲ್ಲಿ ಬಹಳ ಉತ್ತಮವಾದ ಪ್ರಗತಿಯನ್ನು ಕಾಣಬಹುದು. ಇನ್ನು ಕುಟುಂಬ ಸದಸ್ಯರು, ಸಂಬಂಧಿಕರು ಕೂಡ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಈ ದಿನ ನಿಮ್ಮ ಕಾಲು, ಬೆನ್ನು ಹಾಗೂ ಸೊಂಟದ ಭಾಗಕ್ಕೆ ಪೆಟ್ಟಾಗುವಂಥ ಸಾಧ್ಯತೆಗಳಿವೆ. ಹೀಗಾಗುವುದಕ್ಕೆ ನಿಮ್ಮಿಂದಲೇ ಏನಾದರೂ ತಪ್ಪುಗಳಾಗಬೇಕು ಎಂದೇನೂ ಇಲ್ಲ. ಇತರರು ಮಾಡಿದಂಥ ತಪ್ಪುಗಳಿಂದ ನಿಮಗೆ ಸಮಸ್ಯೆ ಆಗಬಹುದು. ನಿಮ್ಮ ಕುಟುಂಬದಲ್ಲೇ ಹಣಕಾಸಿನ ವಿಚಾರಕ್ಕೆ ಕೆಲವು ಆಕ್ಷೇಪಗಳು ವ್ಯಕ್ತ ಆಗಲಿವೆ. ನೀವು ಕೊಟ್ಟಿರುವ ಲೆಕ್ಕದಲ್ಲಿ ತಪ್ಪುಗಳಾಗಬಹುದು ಅಥವಾ ನಿಮ್ಮ ಅರಿವಿಗೆ ಬಾರದಂತೆ ಏನನ್ನಾದರೂ ಮರೆತು ಅಥವಾ ಸೇರಿಸಿ ಲೆಕ್ಕ ಹೇಳಿರುವ ಅವಕಾಶಗಳಿವೆ. ಹೀಗೆ ಸಣ್ಣ ತಪ್ಪಿನಿಂದಾಗಿ ಇಷ್ಟು ಸಮಯ ನಿಮ್ಮ ಮೇಲೆ ಇದ್ದ ವಿಶ್ವಾಸ ಹಾಗೂ ನಂಬಿಕೆಗೆ ಪೆಟ್ಟು ಬೀಳುವಂಥ ಸಾಧ್ಯತೆಗಳಿವೆ. ಒಂದು ಕಾರ್ಯ ಮಾಡಿದಾಗ ಕೆಲವರಿಗೆ ಅದು ಇಷ್ಟವಾಗಬಹುದು ಮತ್ತು ಕೆಲವರಿಗೆ ಇಷ್ಟವಾಗದಿರಬಹುದು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಎಲ್ಲರ ಬಳಿಯೂ ಒಳ್ಳೆಯವರು ಎನಿಸಿಕೊಳ್ಳುವ ಪ್ರಯತ್ನ ಮಾಡಲಿಕ್ಕೆ ಹೋಗಬೇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಯಾರದೋ ಬಲವಂತಕ್ಕೆ ನೀವು ಸಮಸ್ಯೆಗಳನ್ನು ಮಾಡಿಕೊಳ್ಳಲಿದ್ದೀರಿ. ಈ ಹಿಂದೆ ಯಾವಾಗಲೋ ಸಹಾಯ ಮಾಡಿದ್ದರು, ಅವರ ಮಾತನ್ನು ತೆಗೆದುಹಾಕುವುದಕ್ಕೆ ಸಾಧ್ಯವಿಲ್ಲ ಎಂದು ನಿಮಗೆ ನೀವೇ ಅಂದುಕೊಂಡು, ತೊಂದರೆಯನ್ನು ಮಾಡಿಕೊಳ್ಳಲಿದ್ದೀರಿ. ನಿಧಾನಕ್ಕೆ, ಸಮಾಧಾನವಾಗಿ ಮಾಡಿದರಾಯಿತು ಎಂದುಕೊಂಡಿದ್ದ ಕೆಲಸವೊಂದನ್ನು ಅದನ್ನು ನಿಮಗೆ ಯಾರು ಒಪ್ಪಿಸಿದ್ದರೋ ಅವರೇ ಈ ದಿನ ಬೇರೆಯವರಿಗೆ ಒಪ್ಪಿಸುವ ಸಾಧ್ಯತೆಗಳಿವೆ. ಇದರಿಂದ ನಿಮಗೆ ಬೇಸರವಾಗಬಹುದು. ಯಾವುದೇ ವಿಚಾರದಲ್ಲಿ ನಿಮಗೆ ಆಸಕ್ತಿ ಕುದುರುತ್ತಿಲ್ಲ ಅಥವಾ ಯಾವುದಾದರೂ ವ್ಯಕ್ತಿಯ ಜತೆಗೆ ಮಾತನಾಡುವುದು ಬೇಡ ಎಂದೆನಿಸಿದಲ್ಲಿ ಅದರಂತೆಯೇ ನಡೆದುಕೊಳ್ಳಿ. ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ನಿಮಗೆ ಬರಬೇಕಾದ ಹುದ್ದೆ, ಬಡ್ತಿ ಅಥವಾ ವೇತನ ಹೆಚ್ಚಳ ಬೇರೆಯವರ ಪಾಲಾಗುವ ಅವಕಾಶಗಳಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮಗೆ ಏನಾದರೂ ಕೌಟುಂಬಿಕ ಸಮಸ್ಯೆಗಳು ಇದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ಮನೆಯಲ್ಲಿನ ಹಿರಿಯರಿಗೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿದ್ದಲ್ಲಿ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ದೇಹದ ತೂಕ ಸೇರಿದಂತೆ ಇತರ ಆರೋಗ್ಯದ ವಿಚಾರಗಳ ಬಗ್ಗೆ ತೀರಾ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಜಿಮ್, ಯೋಗ, ಪ್ರಾಣಾಯಾಮ ಇಂಥದ್ದು ಯಾವುದಕ್ಕಾದರೂ ಸೇರ್ಪಡೆ ಆಗುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಮಾತು ಪ್ರಧಾನ ಆದ ಹಾಗೂ ನಿಮ್ಮ ಸಂವಹನವು ಪ್ರಮುಖ ಪಾತ್ರ ವಹಿಸುವಂಥ ಕೆಲಸಗಳನ್ನು ಮಾಡುತ್ತಿರುವವರಿಗೆ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಮಾರ್ಗ ಗೋಚರ ಆಗಲಿದೆ. ಅಥವಾ ಈ ಹಿಂದೆ ನೀವೇ ನಿಲ್ಲಿಸಿದ್ದ ಕೆಲವು ಕೆಲಸವನ್ನು ಮತ್ತೆ ಆರಂಭಿಸುವುದಾಗಿ ಸಂಬಂಧ ಪಟ್ಟವರಿಗೆ ತಿಳಿಸಲಿದ್ದೀರಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮಗೆ ಯಾರೋ ಸಹಾಯ ಮಾಡುತ್ತಾರೆ, ಅದರಿಂದ ಇರುವ ಸಮಸ್ಯೆಗಳು ಬಗೆಹರಿದು ಬಿಡುತ್ತದೆ ಎಂದೆಲ್ಲ ಆಲೋಚನೆ ಮಾಡುವುದಕ್ಕೆ ಹೋಗಬೇಡಿ. ಯಾಕೆಂದರೆ ನೀವಂದುಕೊಂಡಂತೆ ಯಾರಿಂದಲೂ ಈ ದಿನ ನೆರವು ಸಿಗುವುದಿಲ್ಲ. ಇನ್ನು ನಿಮ್ಮ ಸ್ನೇಹಿತರಿಗೆ, ಆಪ್ತರಿಗೆ ಹೇಳಿದಂತಹ ಕೆಲವು ಸಂಗತಿಗಳು ವಿವಾದಕ್ಕೆ, ಆಕ್ಷೇಪಕ್ಕೆ ಕಾರಣ ಆಗಬಹುದು. ಇತರರ ವೈಯಕ್ತಿಕ ವಿಚಾರಗಳನ್ನು ಯಾವುದೇ ಕಾರಣಕ್ಕೂ ಹಾಗೂ ಯಾವುದೇ ಸ್ಥಳದಲ್ಲೂ ಮಾತನಾಡುವುದಕ್ಕೆ ಹೋಗಬೇಡಿ. ಕೃಷಿಕರಾಗಿದ್ದಲ್ಲಿ ಮನೆಗೆ ರಾಸುಗಳನ್ನು ತರುವ ಬಗ್ಗೆ ಅಥವಾ ಈಗಿರುವುದಕ್ಕಿಂತ ದೊಡ್ಡದಾದ ಕೊಟ್ಟಿಗೆ ಅಥವಾ ಮೇವು ಸಂಗ್ರಹಿಸುವಂಥ ಸ್ಥಳವನ್ನು ವ್ಯವಸ್ಥೆ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವಂಥವರಿಗೆ ಈ ದಿನ ಒಂದು ಬಗೆಯ ಒತ್ತಡ ಅನುಭವಕ್ಕೆ ಬರಲಿದೆ. ಇದರಿಂದ ನಿಮ್ಮ ಮಾನಸಿಕ ನೆಮ್ಮದಿ ಸಹ ಹಾಳಾಗಬಹುದು.

ಲೇಖನ- ಎನ್‌.ಕೆ.ಸ್ವಾತಿ