Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಮಾರ್ಚ್ 2ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 2ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಮಾರ್ಚ್ 2ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕೆಲವು ನಿರ್ಧಾರಗಳನ್ನು ಬೇಕೆಂತಲೇ ತೆಗೆದುಕೊಳ್ಳದೆ ಸುಮ್ಮನಿದ್ದದ್ದು ಒಳ್ಳೆಯದಾಯಿತು ಎಂದು ಈ ದಿನ ನಿಮಗೆ ಅನಿಸಲಿದೆ. ಇಎಂಐನಲ್ಲಿ ಸೈಟು ತೆಗೆದುಕೊಳ್ಳುವ ವಿಚಾರ, ನೆಟ್ ವರ್ಕ್ ಮಾರ್ಕೆಟಿಂಗ್, ಚೀಟಿ ವ್ಯವಹಾರ ಇಂಥದ್ದರಲ್ಲಿ ಸಂಭವನೀಯ ನಷ್ಟವನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಲಿದೆ. ಆಟೋ ಚಾಲಕರಾಗಿ ಕೆಲಸ ಮಾಡುತ್ತಿರುವವರು, ಸ್ವಂತ ಕಾರು ಅಥವಾ ಟೆಂಪೋ ಟ್ರಾವಲರ್ ಇಟ್ಟುಕೊಂಡಂಥವರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅವಕಾಶಗಳು ತೆರೆದುಕೊಳ್ಳಲಿವೆ. ಅಥವಾ ಈಗ ಇರುವ ವಾಹನಗಳ ಜತೆಗೆ ಹೊಸದಾಗಿ ಇನ್ನಷ್ಟು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಪ್ರಯಾಣ ಅನಿವಾರ್ಯ ಅಂತಲ್ಲವಾದಲ್ಲಿ ಈ ದಿನದ ಮಟ್ಟಿಗೆ ಸಾಧ್ಯವಾದಷ್ಟೂ ಮುಂದೂಡುವುದಕ್ಕೆ ಪ್ರಯತ್ನಿಸಿ. ಇತರರ ಒತ್ತಡಕ್ಕೆ ಮಣಿದು, ಪೂರ್ವಸಿದ್ಧತೆ ಇಲ್ಲದ ಪ್ರಯಾಣ ಮಾಡಿದಲ್ಲಿ ವಿಪರೀತ ದಣಿವು, ದೇಹಾಯಾಸ, ಸುಸ್ತು ಅನುಭವಿಸಬೇಕಾಗುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಇತರರ ವೈಯಕ್ತಿಕ ಅಗತ್ಯಗಳಿಗೆ ದೊಡ್ಡ ಮಟ್ಟದ ಸಹಾಯವನ್ನು ಮಾಡಲಿದ್ದೀರಿ. ಇದೇ ಮೊದಲಿಗೆ ಎಂಬಂತೆ ಪ್ರಯತ್ನಿಸಿದ ಹೂಡಿಕೆಗಳಲ್ಲಿ ದೊಡ್ಡ ಮಟ್ಟದ ಲಾಭ ದೊರೆಯುವ ಸೂಚನೆ ದೊರೆಯಲಿದೆ. ಹಣ ದೊರೆಯದಿದ್ದರೂ ಬೇಡ ಅಂದುಕೊಂಡು ನೀವು ಮಾಡಿಕೊಟ್ಟ ಕೆಲಸಗಳಿಂದಾಗಿ ನಿಮ್ಮ ವರ್ಚಸ್ಸು ಜಾಸ್ತಿ ಆಗುವುದಲ್ಲದೆ, ಇನ್ನಷ್ಟು ಹೊಸ ಕೆಲಸಗಳು ಹುಡುಕಿಕೊಂಡು ಬರಲಿವೆ. ತಂದೆ- ತಾಯಿಯ ತೀರ್ಥ ಯಾತ್ರೆ, ಪ್ರವಾಸಕ್ಕಾಗಿ ಹಣವನ್ನು ಖರ್ಚು ಮಾಡುವಂಥ ಅವಕಾಶ ನಿಮಗೆ ದೊರೆಯಲಿದ್ದು, ಹೀಗೆ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ನೇರವಾಗಿ ಮಾತನಾಡಿದ್ದರಿಂದಾಗಿ ಕೆಲವು ಸಂಬಂಧಗಳಿಗೆ, ಸ್ನೇಹಕ್ಕೆ ಧಕ್ಕೆ ಬಂದಿರಬಹುದು ಎಂದು ಗೊಂದಲಕ್ಕೆ ಒಳಗಾಗಿದ್ದಲ್ಲಿ ಅದು ಈ ದಿನ ನಿವಾರಣೆ ಆಗಲಿದೆ. ಮುಂಚಿನಂತೆಯೇ ಸಂತೋಷದಿಂದ ಸಮಯ ಕಳೆಯುವಂಥ ಯೋಗ ನಿಮ್ಮ ಪಾಲಿದೆ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಣ್ಣ ಕಾರಣಗಳಿಗೆ ಮನಸ್ಸಿಗೆ ಬೇಸರ ಆಗಲಿದೆ. ತಮಾಷೆಗೆಂದು ನೀವು ಆಡಿದ ಮಾತುಗಳನ್ನೇ ಮುಂದೆ ಮಾಡಿ, ನಿಮ್ಮ ನಡವಳಿಕೆ ಬಗ್ಗೆಯೇ ತಪ್ಪು ಅಭಿಪ್ರಾಯ ಮೂಡಿಸುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಯಾರದೋ ತಪ್ಪಿನ ಕಾರಣಕ್ಕೆ ನೀವು ಬೆಲೆ ತೆರಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯರಾಗಬೇಕು ಎಂದೇನಾದರೂ ಈ ದಿನ ಪ್ರಯತ್ನ ಪಟ್ಟರೆ ನಿಮಗೆ ಸ್ವಾರ್ಥಿ ಎಂಬ ಹಣೆಪಟ್ಟಿಯನ್ನು ಕಟ್ಟಲಿದ್ದಾರೆ. ಪಾರ್ಟಿ ಅಥವಾ ಔತಣ ಕೂಟದಲ್ಲಿ ಭಾಗವಹಿಸುವಂತೆ ಆಹ್ವಾನ ಬರಲಿದೆ. ಇಂಥ ಕಡೆಗಳಲ್ಲಿ ಭಾಗೀ ಆಗಲಿದ್ದೀರಿ ಅಂತಾದರೆ ಮಾತಿನ ಮೇಲೆ ನಿಗಾ ಇರಿಸಿಕೊಳ್ಳುವುದು ಮುಖ್ಯ. ನಿಮಗೆ ಗೊತ್ತಿಲ್ಲದ ವ್ಯಕ್ತಿ ಅಥವಾ ಸಂಗತಿಗಳ ಬಗ್ಗೆ ಹಗುರವಾಗಿ ಮಾತನಾಡಿದಲ್ಲಿ ನಿಮ್ಮ ಇಮೇಜಿಗೆ ಧಕ್ಕೆ ಆಗುವ ಸಾಧ್ಯತೆಗಳಿವೆ. ಪ್ರಯಾಣ ಮಾಡುವುದಿದ್ದಲ್ಲಿ ರಾತ್ರಿ ವೇಳೆ ವಾಹನ ಚಾಲನೆಯನ್ನು ಮಾಡಬೇಡಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀವು ಒಪ್ಪಿಕೊಳ್ಳಲಿ, ಬಿಡಲಿ ಕೆಲವು ತಪ್ಪು ನಿರ್ಧಾರಗಳು ಆಗಿವೆ ಎಂಬುದನ್ನು ಇತರರು ಹೇಳುವುದಕ್ಕೆ ಶುರು ಮಾಡುತ್ತಾರೆ. ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ನಿಮ್ಮ ಆಪ್ತರ ಸಲುವಾಗಿ ಯಾವುದನ್ನು ನೀವು ಬಹಳ ಆಲೋಚಿಸಿ, ನಿರ್ಧಾರ ಮಾಡಿರುತ್ತೀರಿ ಆ ವಿಚಾರಗಳು ಅಂದುಕೊಂಡಂತೆ ಆಗುವುದಿಲ್ಲ. ದೈಹಿಕವಾಗಿ ಬಹಳ ದಣಿದವರಂತೆ ಆಗುತ್ತೀರಿ. ತುಂಬ ಉತ್ಸಾಹದಿಂದ ಏನನ್ನೂ ಮಾಡುವುದಕ್ಕೆ ತೋಚುವುದಿಲ್ಲ. ಹಳೇ ಸಂಬಂಧ, ಸ್ನೇಹದಲ್ಲಿ ಆದ ಸಮಸ್ಯೆಗಳು ನೆನಪಿಗೆ ಬರುತ್ತವೆ. ಆಗ ಏನಾಯಿತು ಮತ್ತು ಹಾಗೆ ಏಕಾಯಿತು ಎಂದು ಪರಾಮರ್ಶೆ ಮಾಡುವುದಕ್ಕೆ ಅಂತಲೇ ಹೆಚ್ಚಿನ ಸಮಯ ಹೋಗುತ್ತದೆ. ಒಂದು ವೇಳೆ ದೇವತಾ ಕಾರ್ಯಗಳು ಬಾಕಿ ಉಳಿಸಿಕೊಂಡಿದ್ದಲ್ಲಿ ಅದನ್ನು ಶೀಘ್ರವಾಗಿ ಮಾಡುವುದಕ್ಕೆ ಹಣಕಾಸು ಇತರೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಇಡೀ ದಿನ ಒಂದು ಬಗೆಯಲ್ಲಿ ಸಕಾರಾತ್ಮಕವಾಗಿ ಕಳೆಯಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸದಾಗಿ ಅವಕಾಶಗಳು ತೆರೆದುಕೊಳ್ಳಲಿವೆ. ಇತರರ ಆಲೋಚನೆಗಳು, ಲೆಕ್ಕಾಚಾರಗಳು ನಿಮಗೆ ಬಹಳ ಚೆನ್ನಾಗಿ ಗೊತ್ತಾಗಲಿವೆ. ಈ ದಿನ ನಿಮಗೆ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ಆಹ್ವಾನ ಬರಲಿದೆ. ಅದರಲ್ಲಿ ಪಾಲ್ಗೊಳ್ಳುವುದರಿಂದ ಸೋಷಿಯಲ್ ಕಾಂಟ್ಯಾಕ್ಟ್ ವಿಸ್ತರಣೆ ಆಗಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಸ್ವಂತ ಕ್ಲಿನಿಕ್ ಆರಂಭಿಸುವ ಅಥವಾ ಹೊಸ ಆಸ್ಪತ್ರೆಯನ್ನು ಆರಂಭಿಸುವ ಆಲೋಚನೆ ಬರಬಹುದು. ನಿಮ್ಮ ಜತೆಗೆ ಕೆಲಸ ಮಾಡುವವರು ಅಥವಾ ಆಪ್ತ ಸ್ನೇಹಿತರು ತೆಗೆದುಕೊಂಡು ಬರುವಂಥ ಆಫರ್ ಗಳ ಬಗ್ಗೆ ಮುಕ್ತವಾಗಿ ಆಲೋಚನೆ ಮಾಡುವುದು ಮುಖ್ಯವಾಗುತ್ತದೆ. ನಿಮ್ಮ ಪ್ರತಿಕ್ರಿಯೆ ಕ್ಷಿಪ್ರವಾಗಿ ಇರಲಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನನಗೆ ಹೀಗೆ ಮಾಡಿದರಾ ಅಥವಾ ನನ್ನ ಜತೆಗೆ ಹೀಗೆ ನಡೆದುಕೊಂಡರಾ ಎಂದು ಕೆಲವು ವ್ಯಕ್ತಿಗಳ ಬಗ್ಗೆ ಬಹಳ ಬೇಸರ ಕಾಡಲಿದೆ. ನಿಮ್ಮ ನಿರೀಕ್ಷೆಯೇ ಭಾರವಾಗಿ ಪರಿಣಮಿಸಲಿದೆ. ಅದೇ ಕಾರಣಕ್ಕೆ ಕೆಲವರ ಜತೆಗೆ ಜಗಳ ಸಹ ಆಗಬಹುದು. ಭಾವನಾತ್ಮಕವಾಗಿ ಬಹಳ ಕಠಿಣವಾದ ದಿನ ಇದಾಗಿರುತ್ತದೆ. ಏನು ಹೇಳಬೇಕು, ಹೇಗೆ ಮಾತನಾಡಬೇಕು ಎಂಬುದು ಒಂದು ಗೊಂದಲ ಎಂಬಂತೆ ಕಾಡುತ್ತದೆ. ಯಾರು ಹಸಿರಿನ ಮಧ್ಯೆ ದಿನ ಕಳೆಯಬೇಕು ಎಂದು ಮನೆಯಿಂದ ದೂರ ಪ್ರಯಾಣ ಮಾಡಿರುತ್ತೀರೋ ಅಂಥವರಿಗೆ ಅದರಿಂದ ಕೂಡ ನೆಮ್ಮದಿ ಸಿಗುವುದಿಲ್ಲ. ಈ ದಿನ ಸಾಧ್ಯವಾದಷ್ಟೂ ಒಂದಿಲ್ಲೊಂದು ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗುವುದಕ್ಕೆ ಪ್ರಯತ್ನಿಸಿ. ನಿಮಗೇ ಖಾತ್ರಿ ಆಗುವಂತೆ ಅನಗತ್ಯ ಎಂದೆನಿಸುವ ಸಂಗತಿಗಳಿಗೆ ಹಾಗೂ ವ್ಯಕ್ತಿಗಳಿಗೆ ಪ್ರಾಶಸ್ತ್ಯ ನೀಡಲು ಹೋಗಬೇಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಎಲ್ಲ ಆಗಿದೆ, ಇನ್ನೊಂದು ವಿಚಾರದಲ್ಲಿ ತಡ ಆಗುತ್ತಿದೆ ಎಂಬಂಥ ಪರಿಸ್ಥಿತಿ ನಿಮ್ಮದಾಗಲಿದೆ. ಅಂದರೆ ಹಣಕಾಸಿನ ವಿಚಾರ ಇರಬಹುದು, ಉದ್ಯೋಗಕ್ಕೆ ಸಂಬಂಧಿಸಿದ್ದು ಆಗಿರಬಹುದು. ಎಲ್ಲ ಆಯಿತು ಎಂದುಕೊಳ್ಳುವ ಮಟ್ಟಿಗೆ ಕೆಲಸ ಆಗಿ, ಕೊನೆ ಕ್ಷಣದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ನಿಮ್ಮಿಂದ ಎಲ್ಲಾದರೂ ಶಿಫಾರಸು ಮಾಡಿಸುವುದಕ್ಕೆ ಸಾಧ್ಯ ಎಂದಾದಲ್ಲಿ ಮಾಡಿಸುವುದು ಉತ್ತಮ. ಮನೆಯ ಮಟ್ಟಿಗೆ ಒಂದು ಸಣ್ಣ ಕಾರ್ಯಕ್ರಮ ಮಾಡೋಣ ಎಂದುಕೊಂಡು ಕಡಿಮೆ ಬಜೆಟ್ ನಲ್ಲಿ ಶುರು ಮಾಡಿದ್ದು ನಿಮ್ಮ ಕೈ ಮೀರಿ ಖರ್ಚು ಆಗುವಂಥ ಸಾಧ್ಯತೆ ಇದೆ. ಭರವಸೆ ಇಟ್ಟುಕೊಂಡು ಇತರರ ಬಳಿ ಹೇಳಿದಂಥ ಸಂಗತಿ ನಿಮಗೆ ಮುಳ್ಳಾಗಿ ಪರಿಣಮಿಸಲಿದೆ. ಪ್ರೀತಿ- ಪ್ರೇಮ ಅಥವಾ ರಹಸ್ಯವಾದ ಯಾವುದೇ ವಿಚಾರವನ್ನು ಇತರರ ಜತೆ ಹಂಚಿಕೊಳ್ಳಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಸುಮ್ಮನೆ ನೀವೇ ಕೆಲವು ರಂಕಲುಗಳನ್ನು ಮೈ ಮೇಲೆ ಎಳೆದುಕೊಳ್ಳಲಿದ್ದೀರಿ. ಎಲ್ಲ ತಮಾಷೆಗೆ ಎಂದು ಆರಂಭದಲ್ಲಿ ಅನಿಸಿದರೂ ದಿನದ ಕೊನೆಗೆ ನಿಮ್ಮ ಕೈಯಿಂದ ದೊಡ್ಡ ಮೊತ್ತ ಕಳೆಯುವಂತೆ ಆಗುತ್ತದೆ. ಎಲ್ಲ ವಿಷಯಗಳಿಗೂ ನಿಮ್ಮದೊಂದು ಅಭಿಪ್ರಾಯ ಇರಲಿ ಎಂಬಂತೆ ಯೋಚಿಸುವುದಕ್ಕೆ ಹೋಗಬೇಡಿ. ತುಟಿ ಎರಡು ಮಾಡದೆ ಸುಮ್ಮನಿದ್ದರೂ ಕೆಲವು ಸನ್ನಿವೇಶದಲ್ಲಿ ನೆಮ್ಮದಿ ಸಾಧ್ಯ ಇದೆ ಎಂಬುದು ಮನಗಂಡರೆ ಒಳ್ಳೆಯದು. ದೊಡ್ಡ ಮೊತ್ತದ, ಮಟ್ಟದ ಪ್ರಾಜೆಕ್ಟ್ ಗಳ ಬಗ್ಗೆ ಅನಿವಾರ್ಯ ಅಲ್ಲ ಎಂದಾದರೆ ಈ ದಿನ ಯಾವುದೇ ಅಂತಿಮ ತೀರ್ಮಾನಕ್ಕೆ ಬಾರದಿದ್ದರೆ ಒಳ್ಳೆಯದು. ನಿಮ್ಮ ಗೆಳೆಯ/ಗೆಳತಿಯರು ಯಾರೋ ಏನೋ ಮಾಡಿದರು ಅಂದಾಕ್ಷಣ ಅದನ್ನು ನೀವೂ ಮಾಡಬೇಕು ಅಂತೇನಿಲ್ಲ. ಆದ್ದರಿಂದ ಈ ದಿನ ಮೌನವಾಗಿರಿ, ಧ್ಯಾನ ಮಾಡಿ ಹಾಗೂ ನಿಧಾನ ಮಾಡಿರಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಇನ್ನು ಬಾರದು ಎಂದು ನಿಮಗೆ ನೀವೇ ಅಂದುಕೊಂಡು ಆಸೆಯನ್ನೇ ಬಿಟ್ಟಿದ್ದ ಸಾಲದ ಬಾಕಿ ಮೊತ್ತವೊಂದು ಮತ್ತೆ ನಿಮ್ಮ ಕೈ ಸೇರುವುದಕ್ಕೆ ಬೇಕಾದ ಮಾರ್ಗೋಪಾಯ ಹೊಳೆಯಲಿದೆ. ಪ್ರಭಾವಿಗಳು ಎನಿಸಿಕೊಂಡವರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ದುಡ್ಡಿನ ವಿಚಾರಕ್ಕೆ ಈ ಹಿಂದೆ ಏನಾದರೂ ಮನಸ್ತಾಪಗಳು ಆಗಿದ್ದಲ್ಲಿ ಅದು ನಿವಾರಿಸಿಕೊಳ್ಳಲು ಸಾಧ್ಯ ಆಗಲಿದೆ. ಈಗಾಗಲೇ ಯಾವುದಾದರೂ ಆಸ್ತಿ ಖರೀದಿಗೆ ಅಂತ ಹಣ ನೀಡಿ, ಆ ವ್ಯವಹಾರ ಏನಾದರೂ ಅರ್ಧಕ್ಕೆ ನಿಂತು ಹೋಗಿದ್ದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಮನಸ್ಸಿನಲ್ಲಿ ಶಂಕೆ- ಸಂದೇಹ ಇರಿಸಿಕೊಳ್ಳಬೇಡಿ. ಯಾರು ನಿಮಗೆ ಸಹಾಯ ಮಾಡಬಲ್ಲರು ಎಂಬುದನ್ನು ಸರಿಯಾಗಿ ಗುರುತಿಸಿದಲ್ಲಿ ಅದರಿಂದ ಯಶಸ್ಸು ನಿಮ್ಮದಾಗಲಿದೆ.
ಲೇಖನ- ಎನ್.ಕೆ.ಸ್ವಾತಿ