Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 10ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 10ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ನಿಮ್ಮ ನಿರ್ಧಾರ ಹಾಗೂ ತೀರ್ಮಾನಗಳಿಗೆ ಇತರರಿಂದ ಗೌರವ ದೊರೆಯಲಿವೆ. ಉದ್ಯೋಗಸ್ಥರಿಗೆ ಪ್ರಮುಖ ಜವಾಬ್ದಾರಿಗಳನ್ನು ವಹಿಸಲಿದ್ದಾರೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುವುದರಿಂದ ಉದ್ಯೋಗದಲ್ಲಿ ಹೆಚ್ಚು ತೊಡಗಿಕೊಳ್ಳಲು ಸಾಧ್ಯವಾಗಲಿದೆ. ಹಣಕಾಸು ವ್ಯವಹಾರಗಳಲ್ಲಿ ದಿಟ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು ಯಾವುದೇ ಕಾರಣಕ್ಕೂ ಅತಿಯಾದ ವಿಶ್ವಾಸವನ್ನು ಯಾವುದರಲ್ಲಿಯೂ ಇಡುವುದಕ್ಕೆ ಹೋಗಬೇಡಿ. ವ್ಯವಹಾರ- ವೃತ್ತಿ ಬದುಕಿನಲ್ಲಿ ತೀವ್ರ ಸ್ಪರ್ಧೆ ಎದುರಾಗಬಹುದು. ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಅದನ್ನು ಮೀರುವುದಕ್ಕೆ ಸಾಧ್ಯವಿದೆ. ಕುಟುಂಬದಲ್ಲಿ ಇರುವ ಕಿರಿಯ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ಆಯಾ ಋತುವಿನಲ್ಲಿ ಕಾಡುವಂಥ ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದು ಕ್ಷೇಮ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ನಿಮ್ಮ ಭಾವುಕತೆ ಹಾಗೂ ಎಲ್ಲವನ್ನೂ ಸೂಕ್ಷ್ಮವಾಗಿ ಪರಿಶೀಲಿಸುವ ಮನಸ್ಸಿನಿಂದಾಗಿ ಕೆಲವು ಅನುಕೂಲಗಳು ಆಗಲಿವೆ. ಉದ್ಯೋಗ ಸ್ಥಳದಲ್ಲಿ ಸಮನ್ವಯತೆ ಬಹಳ ಮುಖ್ಯ. ಇದರಿಂದಾಗಿ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚಿರುತ್ತದೆ. ಇನ್ನು ಇದೇ ವೇಳೆ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳಿಂದ ಉತ್ತಮ ಸಹಕಾರ ದೊರೆತು, ಕೆಲಸ- ಕಾರ್ಯಗಳು ಸಲೀಸಾಗಿ ಆಗಲಿವೆ. ಅನವಶ್ಯಕ ಖರ್ಚುಗಳನ್ನು ತಪ್ಪಿಸುವುದು ಮುಖ್ಯ. ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಇನ್ನು ವೈಯಕ್ತಿಕ ಸಂಬಂಧದಲ್ಲಿ ನಂಬಿಕೆ ಗಟ್ಟಿಯಾಗುವಂಥ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಊಟ- ತಿಂಡಿ, ನಿದ್ರೆಗೆ ಸಮಯವನ್ನು ಮೀಸಲಿಡಿ. ಕೆಲಸದ ಒತ್ತಡ ಎಂಬ ಕಾರಣಕ್ಕೆ ವೈಯಕ್ತಿಕ ಜೀವನವನ್ನು ನಿರ್ಲಕ್ಷ್ಯ ಮಾಡಬೇಡಿ. ಧ್ಯಾನ, ಸಂಗೀತದಿಂದ ಹಾಗೂ ಸ್ನೇಹಿತರ ಜೊತೆಗೆ ಸಮಯ ಕಳೆಯುವುದರಿಂದ ಸಂಭ್ರಮ ಹೆಚ್ಚುತ್ತದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ಹೊಸ ಪ್ರಾಜೆಕ್ಟ್ ಗಳಲ್ಲಿ ತೊಡಗಿಕೊಳ್ಳಲಿದ್ದೀರಿ. ಟ್ರೇನಿಂಗ್ ಸೆಷನ್ ಗಳನ್ನು ಕೂಡ ತೆಗೆದುಕೊಳ್ಳುವ ಅವಕಾಶಗಳಿವೆ. ಒಟ್ಟಿನಲ್ಲಿ ಹೊಸ ವಿಚಾರಗಳನ್ನು ಈ ದಿನ ಕಲಿತುಕೊಳ್ಳಲಿದ್ದೀರಿ. ಮಾತು ಪ್ರಧಾನವಾದ ವೃತ್ತಿಯಲ್ಲಿ ಇರುವವರಿಗೆ ಯಶಸ್ಸು ದೊರೆಯಲಿದೆ. ಇನ್ನು ಮೇಲಧಿಕಾರಿಗಳ ಜೊತೆಗಿನ ನಿಮ್ಮ ಕಮ್ಯುನಿಕೇಷನ್ ಸಹ ಪರಿಣಾಮಕಾರಿಯಾಗಿ ಇರಲಿದೆ. ವರದಿಗಳು ಸಿದ್ಧಪಡಿಸುವುದಕ್ಕೆ ನಿಮಗೆ ಸೂಚಿಸಿದ್ದಲ್ಲಿ ನಿಮ್ಮ ಕ್ರಿಯೇಟಿವಿಟಿ ಸಾಬೀತುಪಡಿಸುವುದಕ್ಕೆ ಅವಕಾಶ ದೊರೆಯುತ್ತದೆ. ಹಣದ ಹೂಡಿಕೆ ನಿರ್ಧಾರಗಳಿಗೆ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ವ್ಯವಹಾರದಲ್ಲಿ ಇರುವವೆಇಗೆ ಹೊಸ ಸಂಪರ್ಕಗಳಿಂದ ವಿಸ್ತರಣೆ ಅವಕಾಶಗಳು ತೆರೆದುಕೊಳ್ಳುತ್ತವೆ. ಶಿಕ್ಷಣ, ಆಡಳಿತ, ಕಾನೂನು, ಮಾಧ್ಯಮ, ಅಧ್ಯಾಪನ ಕ್ಷೇತ್ರದಲ್ಲಿ ಇರುವವರಿಗೆ ಬೆಳವಣಿಗೆ ಸಾಧ್ಯತೆಗಳಿವೆ. ಮನಸ್ತಾಪಗಳು ಇದ್ದಲ್ಲಿ ಈ ದಿನ ಬಗೆಹರಿಸಿಕೊಳ್ಳುವಿರಿ. ತಲೆ, ಕತ್ತು, ಹೊಟ್ಟೆ ಭಾಗಗಳಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಎಲ್ಲ ಕೆಲಸ- ಕಾರ್ಯಗಳಲ್ಲೂ ಒಪ್ಪ-ಓರಣ ಹಾಗೂ ಕ್ರಮಬದ್ಧತೆ- ಕ್ರಿಯಾಶೀಲತೆ ಎದ್ದುಕಾಣುತ್ತದೆ. ಬಹಳ ಸಂಕೀರ್ಣವಾದ ಕೆಲಸ, ಅದನ್ನು ಮಾಡುವುದಕ್ಕೆ ಕಷ್ಟ ಎಂದು ಇತರರು ಕೈಬಿಟ್ಟಂಥದ್ದನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಶ್ರಮ ಹೆಚ್ಚಿರುತ್ತದೆ, ಆದರೆ ಫಲಿತಾಂಶ ತೃಪ್ತಿದಾಯಕವಾಗಿ ಇರುತ್ತದೆ. ಕುಟುಂಬದಲ್ಲಿ ಇರುವಂಥ ಸಣ್ಣ- ಪುಟ್ಟ ಗೊಂದಲಗಳನ್ನು ಬಗೆಹರಿಸಿಕೊಳ್ಳುವಿರಿ. ಇತರರಿಗೆ ಸಾಲ ನೀಡುವುದೋ ಅಥವಾ ದೊಡ್ಡ ಮೊತ್ತದ ಹೂಡಿಕೆಯೋ ಇದ್ದಲ್ಲಿ ಅಂಥದ್ದನ್ನು ಸಾಧ್ಯವಾದಷ್ಟೂ ಮುಂದಕ್ಕೆ ಹಾಕಿ. ನಿಮಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡುತ್ತೇನೆ ಎಂಬ ಗುಣವನ್ನು ಈ ದಿನ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ವೈಯಕ್ತಿಕ ಸಂಬಂಧದಲ್ಲಿ ನಿಷ್ಠೆ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯ. ಗ್ಯಾಸ್ಟ್ರಿಕ್ ಸಮಸ್ಯೆ ಇರುವಂಥವರು ಅಗತ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ನೀವು ಅಂದುಕೊಂಡ ಗುರಿ ತಲುಪುವುದಕ್ಕೆ ಸಹನೆ- ಪರಿಶ್ರಮ ಎರಡೂ ಮುಖ್ಯ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ಚುರುಕಾಗಿ, ಬಹಳ ಚಟುವಟಿಕೆಯಿಂದ ಇರುತ್ತೀರಿ. ಹೊಸ ಸಂಪರ್ಕಗಳು ಹಾಗೂ ವ್ಯವಹಾರದಲ್ಲಿ ಇರುವವರು ಕೈಗೊಳ್ಳುವ ತೀರ್ಮಾನಗಳು ಲಾಭದಾಯವಾಗಿ ಇರಲಿವೆ. ಒಂದು ಕೆಲಸ ಮಾಡಿಸುವಲ್ಲಿ ಅನುಸರಿಸುವ ತಂತ್ರ ಚೆನ್ನಾಗಿ ಫಲ ನೀಡುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಯಾಣದ ಸೂಚನೆ ಇದೆ. ಮಾರಾಟ, ಮಾಧ್ಯಮ, ಮಾರ್ಕೆಟಿಂಗ್, ಪ್ರವಾಸ, ಟೆಕ್ನಾಲಜಿ, ಸಂವಹನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಲಾಭದ ಪ್ರಮಾಣ ಹೆಚ್ಚಾಗಲಿದೆ. ಇನ್ನು ಸಂಬಂಧಗಳಲ್ಲಿ ಭಾವನಾತ್ಮಕ ಸಂಗತಿಗಳು ಏರಿಳಿತ ಉಂಟು ಮಾಡುತ್ತವೆ. ಕುಟುಂಬ ಸದಸ್ಯರ ಜತೆಗೆ ಅನವಶ್ಯಕ ವಾದ- ವಾಗ್ವಾದ ಮಾಡಿಕೊಳ್ಳಬೇಡಿ. ಹೊಟ್ಟೆಯುಬ್ಬರ, ಹುಳಿತೇಗು ಈ ರೀತಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ದಿನ ಹತ್ತು ನಿಮಿಷವಾದರೂ ಧ್ಯಾನ ಮಾಡುವುದಕ್ಕೆ ಅಂತ ಸಮಯವನ್ನು ಮೀಸಲಿಡಿ. ಇನ್ನು ಪ್ಲಾನಿಂಗ್ ಬಹಳ ಮುಖ್ಯವಾಗಿರುತ್ತದೆ. ಹೊಸ ವಿಷಯಗಳ ಬಗ್ಗೆ ಕಲಿಕೆ ಆಸಕ್ತಿಯನ್ನು ಉಳಿಸಿಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕಲೆಯಲ್ಲಿ ಆಸಕ್ತಿ, ಪ್ರೀತಿಯ ಕ್ಷಣಗಳು, ಸೌಂದರ್ಯದಿಂದ ತುಂಬಿರುವ ಸ್ಥಳದಲ್ಲಿ ಸಮಯ ಕಳೆಯುವಂಥ ಯೋಗ ನಿಮ್ಮದಾಗಿರುತ್ತದೆ. ಇನ್ನು ಹಲವು ಸಂಗತಿಗಳನ್ನು ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುತ್ತೀರಿ. ಉದ್ಯೋಗಸ್ಥರು ಪರಸ್ಪರ ಸಹಕಾರ, ಗೌರವದಿಂದ ನೆಮ್ಮದಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಮಾತನಾಡುವಾಗ ಬಳಸುವ ಪದಗಳು ಹಾಗೂ ಅದನ್ನು ಹೇಳುವ ಧ್ವನಿಯನ್ನು ಸರಿಯಾಗಿ ಗಮನಿಸಿಕೊಳ್ಳಿ. ಹೆಚ್ಚಿನ ಲಾಭ ಬಂತು ಎಂಬ ಕಾರಣಕ್ಕೆ ಹೆಚ್ಚು ಖರ್ಚು ಮಾಡುವುದಕ್ಕೆ ಹೋಗಬೇಡಿ. ವೈಯಕ್ತಿಕ ಜೀವನವು ಉಲ್ಲಾಸದಿಂದ ಕೂಡಿರುತ್ತದೆ. ಪ್ರಣಯ ಜೀವನ ಚೆನ್ನಾಗಿರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯಗಳು ಆಯೋಜನೆ ಮಾಡುವ ಹೊಣೆಯನ್ನು ಹೊರಬೇಕಾಗುತ್ತದೆ. ಮನೆಯ ರೆನೊವೇಷನ್ ಮಾಡಿಸುವ ಆಲೋಚನೆ ಸಹ ಬರಲಿದೆ. ಕಾನೂನು, ಹೋಟೆಲ್, ಇಂಟೀರಿಯರ್ ಡಿಸೈನಿಂಗ್, ಜ್ಯುವೆಲ್ಲರಿ ಮತ್ತು ಫ್ಯಾಷನ್ ಕ್ಷೇತ್ರದಲ್ಲಿ ಇರುವವರಿಗೆ ವಿಶೇಷ ಲಾಭ. ಕಣ್ಣಿನ ಆರೈಕೆ ಕಡೆಗೆ ಹೆಚ್ಚಿನ ಲಕ್ಷ್ಯ ನೀಡಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ನಿಮ್ಮ ಜ್ಞಾನದ ಬಗ್ಗೆ ಹೆಮ್ಮೆ, ಚಿಂತನೆ ಕುರಿತು ಮೆಚ್ಚುಗೆ ಹಾಗೂ ಸಂಶೋಧನೆಗೆ ಪ್ರಾಮುಖ್ಯ ನೀಡುವ ದಿನ ಇದಾಗಿರುತ್ತದೆ. ಅಧ್ಯಾತ್ಮದ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನೀವು ಮಾಡುವಂಥ ವಿಶ್ಲೇಷಣೆ ಹಾಗೂ ಯೋಜನೆಗಳು ಕಾರ್ಯದ ಯಶಸ್ಸಿಗೆ ನೆರವಾಗುತ್ತವೆ. ಆದರೆ ಎಲ್ಲವನ್ನೂ ನಾನೇ ಮಾಡುತ್ತೇನೆ ಎಂದು ಹೊರಡಬೇಡಿ. ಒಂದು ತಂಡವಾಗಿ ಕೆಲಸ ಮಾಡುವುದು ಅತ್ಯಗತ್ಯ. ಹಣದ ಆದಾಯ- ಖರ್ಚಿನ ವಿಚಾರದಲ್ಲಿ ಸೂಕ್ಷ್ಮವಾಗಿ ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ನಾನಾ ಸಂಶಯಗಳು ಹುಟ್ಟಿಕೊಳ್ಳಲಿವೆ. ವ್ಯವಹಾರದಲ್ಲಿ ಇರುವವರು ತೆಗೆದುಕೊಳ್ಳುವ ನಿರ್ಧಾರ ದೀರ್ಘಾವಧಿಯಲ್ಲಿ ಅನುಕೂಲ ತಂದುಕೊಡುತ್ತದೆ. ಏಕಾಂತದಲ್ಲಿ ಹೆಚ್ಚಿನ ಸಮಯ ಕಳೆಯಬೇಕು ಎಂದೆನಿಸಿದರೂ ಎಲ್ಲರಿಂದ ದೂರ ಇದ್ದುಬಿಡುವುದು ಅಥವಾ ಮೌನವಾಗಿ ಇರುವುದು ಒಳ್ಳೆ ನಿರ್ಧಾರವಲ್ಲ. ನಿಮ್ಮ ಮನಸ್ಸಿನಲ್ಲಿ ಇರುವ ಸಂಗತಿಗಳನ್ನು ಹೇಳಿಕೊಳ್ಳಿ. ಸೈನಸ್, ನಿದ್ರಾಹೀನತೆ ನಿಮ್ಮನ್ನು ಕಾಡುತ್ತದೆ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಕೆಲಸದ ಒತ್ತಡ, ಜವಾಬ್ದಾರಿಗಳು ಹಾಗೂ ಬದಲಾವಣೆ ಆಗಿರುವ ನಿಯಮಗಳನ್ನು ತಿಳಿದುಕೊಳ್ಳುವುದು ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವುದಕ್ಕೆ ಅಂತಲೇ ನಿಮ್ಮ ಹೆಚ್ಚಿನ ಸಮಯ ಹೋಗಲಿದೆ. ಉದ್ಯೋಗಸ್ಥರು ಕಚೇರಿಯಲ್ಲಿ ಪಾಲನೆ ಮಾಡಿಕೊಂಡು ಬಂದಿರುವ ಕ್ರಮಬದ್ಧತೆ, ಲೆಕ್ಕಪತ್ರ ನಿರ್ವಹಣೆ ಮತ್ತು ಶಿಸ್ತು ಈ ಎಲ್ಲ ಕಾರಣಗಳಿಗೆ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆದುಕೊಳ್ಳುವಿರಿ. ವ್ಯಾಪಾರವೋ ವ್ಯವಹಾರವೋ ಮಾಡುತ್ತಿರುವವರಿಗೆ ನಿಮಗೆ ಬರಬೇಕಾದ ಲಾಭ ಬಂದೇ ಬರುತ್ತದೆ, ಆದರೆ ನಿಧಾನ ಆಗಬಹುದು ಅಷ್ಟೇ. ಸಾಲ ಮತ್ತು ಕಾನೂನು ವಿಚಾರಗಳು ಈ ದಿನ ಇದ್ದಲ್ಲಿ ಜೋಪಾನವಾಗಿ ಇರಬೇಕು. ಇನ್ನು ನೀವೇನಾದರೂ ಹೊಸ ಒಪ್ಪಂದಗಳು ಮಾಡಿಕೊಳ್ಳಬೇಕು ಎಂದೇನಾದರೂ ಇದ್ದಲ್ಲಿ ಅಂದುಕೊಂಡಂಥ ಅಂಶಗಳನ್ನು ಅದರಲ್ಲಿ ಸೇರಿಸುವುದು ಸಾಧ್ಯವಾಗಲಿಕ್ಕಿಲ್ಲ. ವೈಯಕ್ತಿಕ ಸಂಬಂಧಗಳಲ್ಲಿ ಕಠಿಣ ನಿರ್ಧಾರ ಬೇಡ. ಮೂಳೆ ಗಂಟು ನೋವು ಕಾಡಬಹುದು, ಸೂಕ್ತ ಔಷಧೋಪಚಾರ ಮಾಡಿಕೊಳ್ಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ನಿಮ್ಮ ಶಕ್ತಿ, ಧೈರ್ಯ ಹಾಗೂ ನಾಯಕತ್ವ ಗುಣದ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವ ದಿನ ಇದಾಗಿರುತ್ತದೆ. ಆಯ್ಕೆಯ ವಿಚಾರಗಳು ಬಂದಾಗ ಆಲೋಚನೆ ಮಾಡುವುದಕ್ಕೆ ಅಂತಲೇ ಬಹಳ ಸಮಯ ಇಡಬೇಡಿ. ಹೀಗೆ ಮಾಡುವುದರಿಂದ ಯಶಸ್ಸು ಸಿಗದೇ ಹೋಗಬಹುದು ಅಥವಾ ತಡವಾಗುತ್ತದೆ. ಇದೇ ವೇಳೆ ಸಹನೆ ಬಹಳ ಮುಖ್ಯ. ಉದ್ಯೋಗ ಸ್ಥಳದಲ್ಲಿ ನಿಮ್ಮ ಕಾರ್ಯಕ್ರಮತೆ ಹೆಚ್ಚಾಗುತ್ತದೆ. ಸಿಟ್ಟನ್ನು ಹಾಗೂ ಇತರರ ಕೆಲಸಗಳಲ್ಲಿ ತಪ್ಪನ್ನು ಹುಡುಕಲೇಬೇಕು ಎಂದು ಹೊರಡುವುದು ಈ ಎರಡನ್ನೂ ನಿಯಂತ್ರಿಸಬೇಕು. ಯಾರದೋ ಮೇಲಿನ ಸಿಟ್ಟಿಗೋ ಅಥವಾ ಪ್ರತಿಷ್ಠೆಗೋ ಖರ್ಚು ಮಾಡುವುದು ಬೇಡ. ಇನ್ನು ವ್ಯಾಪಾರ- ವ್ಯವಹಾರ ಮಾಡುವವರಿಗೆ ಪ್ರಾಮಾಣಿಕತೆಯೇ ಗೆಲುವಿನ ಮಂತ್ರ. ನೀವು ಬಹಳ ಇಷ್ಟಪಡುವ ವ್ಯಕ್ತಿಗಳ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ಪ್ರಯತ್ನ ಮಾಡಬೇಡಿ. ಕೋಪ- ಹಠ ಮಾಡಿದಲ್ಲಿ ಅಂತರ ಬೆಳೆಯುತ್ತದೆ. ಜ್ವರ, ರಕ್ತದ ಒತ್ತಡ, ಪಿತ್ತದ ಸಮಸ್ಯೆ ಕಾಣಿಸಿಕೊಳ್ಳಬಹುದು, ಜಾಗ್ರತೆ.
ಲೇಖನ- ಎನ್.ಕೆ.ಸ್ವಾತಿ




