Leo Yearly Horoscope 2026: 2026 ಸಿಂಹ ರಾಶಿಯವರಿಗೆ ಹೇಗಿರಲಿದೆ? ಶುಭ -ಅಶುಭ ಫಲಗಳ ಮಾಹಿತಿ ಇಲ್ಲಿದೆ
ಸಿಂಹ ರಾಶಿ ವರ್ಷ ಭವಿಷ್ಯ 2026: 2026ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕದ ಸಿಂಹ ರಾಶಿಯ ವರ್ಷ ಭವಿಷ್ಯದ ವಿವರ ಇಲ್ಲಿದೆ. ಈ ಭವಿಷ್ಯವನ್ನು ಗ್ರಹಗಳ ಗೋಚಾರದ ಆಧಾರದಲ್ಲಿ ತಿಳಿಸಲಾಗಿದೆ. ದೀರ್ಘ ಸಮಯದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಗ್ರಹಗಳಾದ ಶನಿ, ರಾಹು-ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಈ ವರ್ಷಭವಿಷ್ಯಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕಾಲಪುರುಷನ ಚಕ್ರದಲ್ಲಿ ಐದನೇ ರಾಶಿ ಎನಿಸಿದ ಸಿಂಹ ರಾಶಿಯವರಿಗೆ 2026ನೇ ಇಸವಿಯಲ್ಲಿ ಶುಭಾಶುಭ ಫಲಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ 8ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ 11ನೇ ಮನೆ, ಅಂದರೆ ಲಾಭ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ವ್ಯಯ ಸ್ಥಾನ, ಅಂದರೆ ಹನ್ನೆರಡನೇ ಮನೆಯಾದ ಕರ್ಕಾಟಕ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು ನಿಮ್ಮದೇ ಜನ್ಮ ರಾಶಿಯಲ್ಲಿ, ಅಂದರೆ 1ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 7ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು ಜನ್ಮ ಸ್ಥಾನವಾದ 1ನೇ ಮನೆ, ಅಂದರೆ ನಿಮ್ಮದೇ ರಾಶಿಯಲ್ಲಿ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಆರನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮ ರಾಶಿಗೆ ಹನ್ನೆರಡನೇ ಮನೆಗೂ ಪ್ರವೇಶಿಸುತ್ತದೆ.
ಮಖಾ ನಕ್ಷತ್ರದ ನಾಲ್ಕೂ ಪಾದ, ಪುಬ್ಬಾ ಅಥವಾ ಪೂರ್ವಫಲ್ಗುಣಿ ನಕ್ಷತ್ರದ ನಾಲ್ಕೂ ಪಾದ ಹಾಗೂ ಉತ್ತರಾ ಫಲ್ಗುಣಿ ನಕ್ಷತ್ರದ ಒಂದನೇ ಪಾದ ಸೇರಿ ಸಿಂಹ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ರವಿ.
ಸಿಂಹ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:
ಶನಿ ಗೋಚಾರ:
ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗುತ್ತದೆ. ಆಯುಷ್ಯದ ಸ್ಥಾನವಾದ ಇಲ್ಲಿ ಶನೈಶ್ಚರ ಗ್ರಹದ ಸಂಚಾರ ಶುಭ ಫಲ ನೀಡುವುದಿಲ್ಲ. ಇನ್ನು ಸಿಂಹ ರಾಶಿಗೆ ಆರು ಮತ್ತು ಏಳನೇ ಮನೆಯ ಅಧಿಪತಿಯಾದ ಶನಿಯು ಈ ಸ್ಥಾನದಲ್ಲಿ ಸಂಚರಿಸುವುದು ದಂಪತಿ ಮಧ್ಯೆ, ಪ್ರೇಮಿಗಳ ನಡುವೆ ಹೆಚ್ಚು ನಕಾರಾತ್ಮಕ ಪ್ರಭಾವ ಬೀರಲಿದೆ. ಸಣ್ಣ- ಪುಟ್ಟ ಕಲಹಗಳು ಸಹ ವಿಕೋಪಕ್ಕೆ ಹೋಗಿ, ಡೈವೋರ್ಸ್ ತನಕ ಎಳೆದುಕೊಂಡು ಹೋಗಬಹುದು. ಇನ್ನು ಪ್ರೀತಿಯಲ್ಲಿ ಇರುವವರು ದೂರ ಆಗಿಬಿಡಬಹುದು. ಇನ್ನು ವಿವಾಹ ನಿಶ್ಚಯ ಆಗಿದೆ ಎಂದಾದಲ್ಲಿ ಮಾತುಕತೆ ಆಡುವಾಗ ಎಚ್ಚರಿಕೆ ವಹಿಸಿ ಹಾಗೂ ಮೂರನೇ ವ್ಯಕ್ತಿಗಳ ಹೇಳಿಕೆ ಮಾತುಗಳನ್ನು ಕೇಳಬೇಡಿ. ಯಾವುದೇ ಕಾರಣಕ್ಕೂ ಈ ಅವಧಿಯಲ್ಲಿ ಉದ್ಯೋಗ ಬಿಡುವ ನಿರ್ಧಾರಕ್ಕೆ ಬರಬಾರದು. ಇನ್ನೊಂದು ಕೆಲಸ ಸಿಗುವ ತನಕ ಇರುವ ಕೆಲಸವನ್ನು ಬಿಡದಿರುವುದು ಕ್ಷೇಮ ಹಾಗೂ ಉತ್ತಮ. ಹಣಕಾಸಿನ ಹರಿವಿನಲ್ಲಿ ಭಾರೀ ಪ್ರಮಾಣದ ಇಳಿಕೆ ಆಗುವುದು, ಸಾಲ ಪಡೆದುಕೊಂಡವರು ಒತ್ತಡದ ಸನ್ನಿವೇಶ ಎದುರಿಸಬೇಕಾಗುತ್ತದೆ. ಹೊಸದಾಗಿ ಯಾವುದೇ ಸಾಲ ಪಡೆಯಬೇಡಿ. ಇನ್ನು ನಿಮ್ಮ ಸಂಬಂಧಿಗಳಿಂದ- ಸ್ನೇಹಿತರಿಂದ ಅವಮಾನ ಎದುರಿಸುವಂತೆ ಆಗುತ್ತದೆ. ಅಷ್ಟಮ ಶನಿಯ ಪ್ರಭಾವ ಕ್ರೂರವಾಗಿ ಇರುತ್ತದೆ. ಈ ಅವಧಿಯಲ್ಲಿ ವಾಹನ ಚಾಲನೆಯಲ್ಲೂ ಆರೋಗ್ಯ ವಿಚಾರಗಳಲ್ಲೂ ಹಾಗೂ ಆರ್ಥಿಕ- ಸಾಂಸಾರಿಕ ವಿಷಯಗಳಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ.
ಗುರು ಗ್ರಹ ಗೋಚಾರ:
ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ಗುರು ಗ್ರಹವು ಹನ್ನೊಂದನೇ ಮನೆಯಲ್ಲಿ ಸಂಚರಿಸುತ್ತದೆ. ಇದು ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ನೀಡುವ ಅವಧಿ ಆಗಿರುತ್ತದೆ. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ವ್ಯವಹಾರ-ವ್ಯಾಪಾರ ಮಾಡುತ್ತಿರುವವರಿಗೆ ಸಹ ಲಾಭದ ಪ್ರಮಾಣದಲ್ಲಿ ಏರಿಕೆ ಆಗಲಿದೆ. ಕಾರು- ಸ್ಕೂಟರ್, ಸೈಟು, ಫ್ಲ್ಯಾಟ್, ಕಟ್ಟಿರುವ ಮನೆ ಖರೀದಿ, ಈಗಾಗಲೇ ಸೈಟು ಇದ್ದಲ್ಲಿ ಅಲ್ಲಿ ಮನೆ ನಿರ್ಮಾಣ ಹೀಗೆ ಹಲವು ಶುಭ ಫಲಗಳು ಅನುಭವಕ್ಕೆ ಬರಲಿದೆ. ಇನ್ನು ಪಿತ್ರಾರ್ಜಿತ ಆಸ್ತಿ ವಿಚಾರಗಳು ಇದ್ದಲ್ಲಿ ಈ ಅವಧಿಯಲ್ಲಿ ಅದನ್ನು ಬಗೆಹರಿಸಿಕೊಳ್ಳುವುದು ಸಾಧ‌್ಯವಾಗಲಿದೆ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾವಕಾಶ ದೊರೆಯಲಿದೆ. ವ್ಯಾಸಂಗ- ಮದುವೆ, ಉನ್ನತ ವಿದ್ಯಾಭ್ಯಾಸ ಇವುಗಳಲ್ಲಿ ಅದೃಷ್ಟ ಕೈ ಹಿಡಿಯಲಿದೆ. ಜೂನ್ ನಿಂದ ಅಕ್ಟೋಬರ್ ಕೊನೆ ತನಕ ಹನ್ನೆರಡನೇ ಮನೆಯಾದ ವ್ಯಯ ಸ್ಥಾನದಲ್ಲಿ ಸಂಚರಿಸುವಾಗ ಅತಿ ಬುದ್ಧಿವಂತಿಕೆ ಮಾಡಿ ಹಣ ಕಳೆದುಕೊಳ್ಳುವಂತೆ ಆಗಲಿದೆ, ನಷ್ಟವನ್ನು ಕಾಣುತ್ತೀರಿ. ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದು ಬಹಳ ಮುಖ್ಯ. ನವೆಂಬರ್- ಡಿಸೆಂಬರ್ ತಿಂಗಳಲ್ಲಿ ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಿ. ಮಕ್ಕಳ ಬಗ್ಗೆ ಚಿಂತೆ, ಕೌಟುಂಬಿಕ ಜೀವನದಲ್ಲಿ ಕಿರಿಕಿರಿ, ಹೂಡಿಕೆಯಲ್ಲಿ ನಷ್ಟ ಮೊದಲಾದ ಫಲಗಳನ್ನು ಕಾಣುತ್ತೀರಿ.
ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ
ರಾಹು-ಕೇತು ಗೋಚಾರ:
ಏಳನೇ ಮನೆಯಲ್ಲಿ ರಾಹು ಸಂಚಾರದಿಂದ ದಂಪತಿ- ಪ್ರೇಮಿಗಳ ಮಧ್ಯೆ ಜಗಳ- ಮನಸ್ತಾಪ, ಒಂದಲ್ಲ ಒಂದು ಕಾರಣಕ್ಕೆ ಅನುಮಾನಗಳು ಉದ್ಭವಿಸುವುದು ಈ ಎಲ್ಲ ಫಲಗಳನ್ನು ಕಾಣುವಂತೆ ಆಗಲಿದೆ. ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರು ಕಾಗದ- ಪತ್ರ, ಲೆಕ್ಕಾಚಾರಗಳನ್ನು ಸರಿಯಾಗಿ ನೋಡಿಕೊಳ್ಳಿ. ನೀವು ಹುಟ್ಟಿದ ಸ್ಥಳದಿಂದ ಪರವೂರಿನಲ್ಲಿ, ಪರ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ನಾನಾ ರೀತಿಯ ಕಿರಿಕಿರಿ ಆಗಲಿದೆ. ನಿಮ್ಮಲ್ಲಿ ಕೆಲವರು ವಾಪಸ್ ಬಂದುಬಿಡುವ ಸಾಧ್ಯತೆ ಸಹ ಇದೆ. ವಿವಾಹಿತರು ಮದುವೆ ಆಚೆಗಿನ ಸಂಬಂಧಗಳ ಕಡೆಗೆ ನೋಡಬೇಡಿ. ಇದರಿಂದ ಸಿಕ್ಕಾಪಟ್ಟೆ ಹಿಂಸೆ ಅನುಭವಿಸುತ್ತೀರಿ. ಮದುವೆ ಪ್ರಯತ್ನಕ್ಕೆ ಜೂನ್ ತಿಂಗಳ ನಂತರದಲ್ಲಿ ಒಂದಲ್ಲ ಒಂದು ಬಗೆಯಲ್ಲಿ ಅಡೆತಡೆ ಕಾಡಲಿದೆ. ಅತ್ಯುತ್ಸಾಹವೂ ಒಳ್ಳೆಯದಲ್ಲ, ಅದೇ ರೀತಿ ವೈರಾಗ್ಯವೂ ಸರಿಹೊಂದಲ್ಲ. ಈ ಎರಡೂ ನಿಮ್ಮ ಪಾಲಿಗೆ ಬಹುವಾಗಿ ಕಾಡಲಿವೆ. ಜನ್ಮ ರಾಶಿಯಲ್ಲಿಯೇ ಸಂಚರಿಸುವ ಕೇತುವಿನಿಂದ ಮಾನಸಿಕ ಖಿನ್ನತೆ ಬಹಳ ಕಾಡುತ್ತದೆ. ದೇವತಾ ಆರಾಧನೆಯಲ್ಲಿ ಮನಸ್ಸು ಲಗತ್ತಾಗಿ ನೆಡುವುದಕ್ಕೆ ಸಾಧ್ಯವಾಗುವುದಿಲ್ಲ. ಮರೆವಿನ ಸಮಸ್ಯೆ ವಿಪರೀತ ಕಾಡಲಿದೆ. ಪಾಪ ಕರ್ಮಾಸಕ್ತಿ ಹಾಗೂ ಪಾಪ ಭೀತಿ ಎರಡೂ ಕಾಡುತ್ತದೆ.
ಪರಿಹಾರ:
ಶನಿ ಹಾಗೂ ಗುರು ಆರಾಧನೆ, ದುರ್ಗಾ ಮತ್ತು ಗಣಪತಿ ಆರಾಧನೆಯನ್ನು ಮಾಡಿಕೊಳ್ಳಿ. ಅನುಕೂಲವಿದ್ದಲ್ಲಿ ಒಮ್ಮೆ ನವಗ್ರಹ ಶಾಂತಿಯನ್ನು ಮಾಡಿಸಿಕೊಳ್ಳುವುದು ಕ್ಷೇಮ.
ಲೇಖನ- ಸ್ವಾತಿ ಎನ್.ಕೆ.




