AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gemini Yearly Horoscope 2026: 2026ನೇ ಹೊಸ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?

2026ನೇ ಇಸವಿಯ ಜನವರಿಯಿಂದ ಡಿಸೆಂಬರ್ ತನಕದ ಕರ್ಕಾಟಕ ರಾಶಿಯ ವರ್ಷ ಭವಿಷ್ಯದ ವಿವರ ಇಲ್ಲಿದೆ. ಈ ಭವಿಷ್ಯವನ್ನು ಗ್ರಹಗಳ ಗೋಚಾರದ ಆಧಾರದಲ್ಲಿ ತಿಳಿಸಲಾಗಿದೆ. ದೀರ್ಘ ಸಮಯದ ತನಕ ಒಂದೇ ರಾಶಿಯಲ್ಲಿ ಸಂಚರಿಸುವಂಥ ಗ್ರಹಗಳಾದ ಶನಿ, ರಾಹು-ಕೇತು ಹಾಗೂ ಗುರು ಗ್ರಹದ ಸಂಚಾರವನ್ನು ಈ ವರ್ಷಭವಿಷ್ಯಕ್ಕಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಕಾಲಪುರುಷನ ಚಕ್ರದಲ್ಲಿ ನಾಲ್ಕನೇ ರಾಶಿ ಎನಿಸಿದ ಕರ್ಕಾಟಕ ರಾಶಿಯವರಿಗೆ 2026ನೇ ಇಸವಿಯಲ್ಲಿ ಶುಭಾಶುಭ ಫಲಗಳು ಹೇಗಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Gemini Yearly Horoscope 2026: 2026ನೇ ಹೊಸ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ಕರ್ಕಾಟಕ ರಾಶಿಯ ವರ್ಷ ಭವಿಷ್ಯ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Dec 09, 2025 | 2:15 PM

Share

2026ನೇ ಇಸವಿಯಲ್ಲಿ ಇಡೀ ವರ್ಷ ಶನಿ ಗ್ರಹ 9ನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇನ್ನು ಗುರು ಗ್ರಹವು ಜನವರಿಯಿಂದ ಜೂನ್ ಒಂದನೇ ತಾರೀಕಿನ ತನಕ ವ್ಯಯ ಸ್ಥಾನದಲ್ಲಿ, ಅಂದರೆ 12ನೇ ಸ್ಥಾನದಲ್ಲಿ ಇರುತ್ತದೆ. ಆ ನಂತರ ಅಕ್ಟೋಬರ್ 31ನೇ ತಾರೀಕಿನವರೆಗೆ ಜನ್ಮ ಸ್ಥಾನದಲ್ಲಿ, ಅಂದರೆ ನಿಮ್ಮದೇ ರಾಶಿಯಲ್ಲಿ ಸಂಚರಿಸುತ್ತದೆ. ನವೆಂಬರ್ ಹಾಗೂ ಡಿಸೆಂಬರ್ ಈ ಎರಡೂ ತಿಂಗಳು ಸಿಂಹ ರಾಶಿಯಲ್ಲಿ, ಅಂದರೆ 2ನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇನ್ನು ಬಹುತೇಕ ಇಡೀ ವರ್ಷ ರಾಹು ಗ್ರಹವು ನಿಮ್ಮ ರಾಶಿಗೆ 8ನೇ ಮನೆ ಆಗುವಂಥ ಕುಂಭದಲ್ಲಿಯೂ ಹಾಗೂ ಕೇತು ಗ್ರಹವು 2ನೇ ಸ್ಥಾನ ಆದಂಥ ಸಿಂಹ ರಾಶಿಯಲ್ಲಿಯೂ ಸಂಚರಿಸುತ್ತದೆ. 2026ನೇ ಇಸವಿಯ ಡಿಸೆಂಬರ್ 5ನೇ ತಾರೀಕಿಗೆ ರಾಹು ಗ್ರಹವು ಏಳನೇ ಮನೆಯಾದ ಮಕರ ರಾಶಿಗೂ ಹಾಗೂ ಕೇತು ಗ್ರಹ ನಿಮ್ಮದೇ ಜನ್ಮ ರಾಶಿಗೂ ಪ್ರವೇಶಿಸುತ್ತದೆ.

ಪುನರ್ವಸು ನಕ್ಷತ್ರದ ನಾಲ್ಕನೇ ಪಾದ, ಆಶ್ಲೇಷಾ ಹಾಗೂ ಪುಷ್ಯ ನಕ್ಷತ್ರದ ನಾಲ್ಕೂ ಪಾದ ಸೇರಿ ಕರ್ಕಾಟಕ ರಾಶಿ ಆಗುತ್ತದೆ. ಈ ರಾಶಿಯ ಅಧಿಪತಿ ಚಂದ್ರ.

ಕರ್ಕಾಟಕ ರಾಶಿಯವರಿಗೆ 2026ರ ವರ್ಷ ಭವಿಷ್ಯ ಹೀಗಿದೆ:

ಶನಿ ಗೋಚಾರ:

ಒಂದು ಕೆಲಸವನ್ನು ಶುರು ಮಾಡಿದಲ್ಲಿ ಅದನ್ನು ಪೂರ್ಣಗೊಳಿಸುವುದರಲ್ಲಿ ಹೈರಾಣಾಗುವಂತೆ ಮಾಡುತ್ತದೆ. ಆಗಬೇಕಾದ ಕೆಲಸ- ಕಾರ್ಯಗಳು ಅಂದುಕೊಂಡ ಸಮಯಕ್ಕೆ ಮುಗಿಯುವುದಿಲ್ಲ. ಅದರಲ್ಲೂ ಮದುವೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಒಂದಲ್ಲ ಒಂದು ಅಡಚಣೆಗಳು- ಗೊಂದಲಗಳು ಎದುರಾಗುತ್ತವೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸುವುದು ಮುಖ್ಯ. ಉನ್ನತ ಹುದ್ದೆಯಲ್ಲಿ ಇರುವಂಥವರಿಗೆ ನಿಮ್ಮ ಕೈ ಕೆಳಗೆ ಕೆಲಸ ಮಾಡುವಂಥ ವ್ಯಕ್ತಿಗಳಿಂದ ಸಮಸ್ಯೆಗಳು ಎದುರಾಗುತ್ತವೆ. ಸರಿ- ತಪ್ಪುಗಳ ಬಗ್ಗೆ ಎಚ್ಚರಿಕೆ ಮತ್ತು ವಿವೇಚನೆ ಎರಡೂ ಇರಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ ಆಮೇಲೆ ಹೋದರಾಯಿತು ಎಂದುಕೊಂಡು ವೈದ್ಯರ ಬಳಿ ತೆರಳದೆ, ಮುಂದಕ್ಕೆ ಹಾಕುತ್ತಾ ಹೋಗಬೇಡಿ. ಇನ್ನು ಈ ಹಿಂದೆ ಪಡೆದುಕೊಂಡ ಚಿಕಿತ್ಸೆ ಅಥವಾ ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯ ಫಾಲೋಅಪ್ ಚೆಕಪ್ ಇದ್ದಲ್ಲಿ ಅದನ್ನು ತಪ್ಪಿಸಬೇಡಿ. ಪಿತ್ರಾರ್ಜಿತವಾಗಿ ಬರಬೇಕಾದ ಆಸ್ತಿ, ಹಣ, ಒಡವೆ ಇತ್ಯಾದಿಗಳು ಇದ್ದಲ್ಲಿ ಆ ಪ್ರಕ್ರಿಯೆ ಬಹಳ ಎಳೆದುಕೊಂಡು ಹೋಗುತ್ತದೆ. ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ಮೂರನೇ ವ್ಯಕ್ತಿ ಪ್ರವೇಶ ಆಗಿ, ಅವರು ಹೇಳುವ ಚಾಡಿ ಮಾತು, ಸಲಹೆಗಳಿಂದ ಸಂಬಂಧವು ಮಧುರ ಭಾವನೆ ಕಳೆದುಕೊಳ್ಳುವಂಥ ಸಾಧ್ಯತೆ ಇರುತ್ತದೆ. ಇಂಥ ವ್ಯಕ್ತಿಗಳಿಂದ ದೂರ ಇರುವುದು ಮುಖ್ಯ.

ಗುರು ಗ್ರಹ ಗೋಚಾರ:

ಜನವರಿಯಿಂದ ಮೇ ತಿಂಗಳು ಮುಗಿಯುವ ತನಕ ನಿಮಗೆ ಖರ್ಚು ವಿಪರೀತ ಇರುತ್ತದೆ. ಅದರಲ್ಲೂ ನಿಮ್ಮ ಮೇಲೆ ಯಾರಾದರೂ ಕೋರ್ಟ್- ಕಚೇರಿ ಎಂದು ಪ್ರಕರಣಗಳು ದಾಖಲಿಸಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ಹಣ ಖರ್ಚಾಗುತ್ತದೆ. ದೇಹದ ತೂಕ ನಿಯಂತ್ರಣಕ್ಕೆ, ಮಧುಮೇಹ, ಕೊಲೆಸ್ಟ್ರಾಲ್ ಈ ರೀತಿ ತೊಂದರೆಗಳಿಂದ ಹೊರಬರುವುದಕ್ಕೆ ತೆಗೆದುಕೊಳ್ಳುವ ಚಿಕಿತ್ಸೆಗಳಿಗೂ ಹೆಚ್ಚಿನ ಖರ್ಚು ಆಗಲಿದೆ. ಸಾಲಗಾರರಿಂದ ಮಾನಸಿಕ ಒತ್ತಡ ಸಿಕ್ಕಾಪಟ್ಟೆ ಬೀಳುತ್ತದೆ. ಇಂಥ ಸಮಯಕ್ಕೆ ಹಣ ಹಿಂತಿರುಗಿಸುವ ಮಾತು ನೀಡುವುದಕ್ಕೂ ಮೊದಲು ಅದನ್ನು ಉಳಿಸಿಕೊಳ್ಳಲು ಸಾಧ್ಯವಾ ಎಂಬ ಬಗ್ಗೆ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಈ ಅವಧಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಡಿ. ಹಿರಿಯರ ಸಲಹೆಗಳನ್ನು ಕೇಳಿಸಿಕೊಳ್ಳಿ. ಅನುಸರಿಸಿ. ಜೂನ್ ನಿಂದ ಅಕ್ಟೋಬರ್ ತನಕ ನಿಮ್ಮ ಸಮಸ್ಯೆಗಳು ವಿಪರೀತಕ್ಕೆ ಹೋಗುತ್ತವೆ. ನಿಮ್ಮ ನಿರ್ಧಾರಗಳು ಸಮಸ್ಯೆಗಳನ್ನೇ ತಂದೊಡ್ಡುತ್ತವೆ. ಮನಸೋ ಇಚ್ಛೆ ತೀರ್ಮಾನಗಳನ್ನು ಮಾಡುವುದರಿಂದ ನಿಮ್ಮ ಬಗ್ಗೆ ಇರುವ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಆಗಲಿದೆ. ನವೆಂಬರ್- ಡಿಸೆಂಬರ್ ತಿಂಗಳು ಉತ್ತಮವಾದ ಸಮಯ ಆಗಿರುತ್ತದೆ. ಮದುವೆಗೆ ಪ್ರಯತ್ನ ಮಾಡುತ್ತಿರುವವರಿಗೆ ಉತ್ತಮ ಬೆಳವಣಿಗೆಗಳು ಆಗಲಿವೆ. ಹಣಕಾಸಿನ ಹರಿವು ಸರಾಗವಾಗಿ ಆಗಲಿವೆ. ದಂಪತಿ ಹಾಗೂ ಪ್ರೇಮಿಗಳ ಮಧ್ಯೆ ಇರುವಂಥ ಮನಸ್ತಾಪ ದೂರವಾಗಿ ಉತ್ತಮವಾದ ಸಮಯವನ್ನು ಕಳೆಯಲಿದ್ದೀರಿ. ಅದೃಷ್ಟ ನಿಮ್ಮ ಪರವಾಗಿ ಕೆಲಸ ಮಾಡುತ್ತದೆ.

ಇದನ್ನೂ ಓದಿ: 2026ನೇ ಹೊಸ ವರ್ಷ ಮಿಥುನ ರಾಶಿಯವರಿಗೆ ಹೇಗಿರಲಿದೆ? ವರ್ಷ ಭವಿಷ್ಯ ಇಲ್ಲಿದೆ

ರಾಹು-ಕೇತು ಗೋಚಾರ:

ಎಂಟನೇ ಮನೆಯಲ್ಲಿ ರಾಹು ಸಂಚಾರ ಇರುತ್ತದೆ. ಚರ್ಮಕ್ಕೆ ಸಂಬಂಧಿಸಿದ ವ್ಯಾಧಿಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಅಂಥ ಸಮಸ್ಯೆ ಇದೆ ಎಂದಾದಲ್ಲಿ ಅದು ಉಲ್ಬಣ ಆಗಬಹುದು. ಹಣಕಾಸಿನ ವಿಚಾರದಲ್ಲಿ ಬೇರೆಯವರು ಒಡ್ಡುವ ಆಮಿಷಕ್ಕೆ ಪಿಗ್ಗಿ ಬೀಳಬೇಡಿ. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಮಾಡಿಸಿಕೊಡುವುದಾಗಿ ಕೆಲವರು ಹೇಳುವ ಬಣ್ಣದ ಮಾತಿಗೆ ಮರುಳಾಗಿ ಹಣ ಕಳೆದುಕೊಳ್ಳುವಂತೆ ಆಗಲಿದೆ. ಷೇರುಮಾರುಕಟ್ಟೆ, ಕಮಾಡಿಟಿ ಎಕ್ಸ್ ಚೇಂಜ್ ಇಂಥ ಕಡೆಗಳಲ್ಲಿ ಟ್ರೇಡಿಂಗ್ ಮಾಡುತ್ತಿರುವವರು ಮನಸ್ಸನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದು ಬಹಳ ಮುಖ್ಯ. ಹೆಚ್ಚಿನ ಆಸೆಗೆ ಬಿದ್ದು, ಹಣ ಕಳೆದುಕೊಳ್ಳುವಂತೆ ಆಗಲಿದೆ. ಸುಸ್ತು, ತ್ರಾಣ ಇಲ್ಲದಿರುವುದು ಈ ರೀತಿಯಾದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳಲಿವೆ. ಉದ್ಯೋಗ- ವೃತ್ತಿ- ವ್ಯಾಪಾರ- ಭೂಮಿ ವ್ಯವಹಾರ ಹೀಗೆ ಯಾವುದರಲ್ಲೂ ಆತುರದ ತೀರ್ಮಾನ ತೆಗೆದುಕೊಳ್ಳಬೇಡಿ. ಇನ್ನು ಸಾಂಸಾರಿಕವಾಗಿ ಅನುಮಾನಗಳು ಹೆಚ್ಚು ಕಾಡುತ್ತವೆ. ನಿಮ್ಮಿಂದ ದೈವನಿಂದನೆ, ದೇವತಾ ಕಾರ್ಯಗಳಲ್ಲಿ ನಿರ್ಲಕ್ಷ್ಯ, ಹಿರಿಯರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದು ಇಂಥದ್ದು ಆಗುತ್ತದೆ. ಇದರಿಂದ ನಿಮ್ಮದೇ ಮಾನಸಿಕ ನೆಮ್ಮದಿ ಕಳೆದುಹೋಗುತ್ತದೆ. ಭ್ರಮೆ ಹಾಗೂ ಹಗಲುಗನಸಿನಲ್ಲಿ ಮುಳುಗಿ ನಷ್ಟ ಅನುಭವಿಸುವ ಸಾಧ್ಯತೆ ಇರುತ್ತದೆ.

ಪರಿಹಾರ:

ಶನಿವಾರದಂದು ದುರ್ಗಾ ದೇವಿ ಹಾಗೂ ಮಂಗಳವಾರದಂದು ಗಣಪತಿ ಆರಾಧನೆಯನ್ನು ಮಾಡಿಕೊಳ್ಳಬೇಕು. ಗುರುವಾರದಂದು ರಾಘವೇಂದ್ರ ಸ್ವಾಮಿ ಮಠ ಅಥವಾ ಸಾಯಿಬಾಬ ದೇವಸ್ಥಾನಗಳಿಗೆ ತೆರಳಿ ದರ್ಶನ ಪಡೆದುಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.