Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 12ರ ದಿನಭವಿಷ್ಯ
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 12ರ ಶುಕ್ವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಜೀವನದ ಸವಾಲುಗಳನ್ನು ಎದುರಿಸಲು ಈ ಭವಿಷ್ಯ ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ಇತರರ ಕಷ್ಟಗಳಿಗೆ ಭಾವನಾತ್ಮಕವಾಗಿ ಸ್ಪಂದಿಸುವಿರಿ. ಮುಖ್ಯವಾಗಿ ಬೇರೆಯವರ ಅಗತ್ಯ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮಿಂದ ಸಹಾಯ ಕೇಳಿಕೊಂಡು ಬರುವವರ ನೆರವಿಗೆ ನಿಲ್ಲಲಿದ್ದೀರಿ. ಈಗ ನಿಮಗೆ ಬರುತ್ತಿರುವ ಆದಾಯಕ್ಕಿಂತ ಹೆಚ್ಚು ಮೊತ್ತ ನಿಗದಿತವಾಗಿ ನಿಮ್ಮ ಕೈ ಸೇರಲಿದೆ ಎಂಬ ಖಾತ್ರಿಯೇ ಇದ್ದರೂ ಅದಕ್ಕೆ ಒಂದು ಖರ್ಚನ್ನು ತಗುಲಿ ಹಾಕಿಕೊಳ್ಳಬೇಡಿ. ಹೂಡಿಕೆ ವಿಚಾರವಾಗಿ ಹೆಚ್ಚೆಚ್ಚು ಆಲೋಚನೆ ಮಾಡಲಿದ್ದೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಒಂದು ವೇಳೆ ಕುಟುಂಬ ಸದಸ್ಯರ ಜತೆಗೆ ಮನಸ್ತಾಪ ಇದ್ದಲ್ಲಿ ಅದು ನಿವಾರಣೆ ಮಾಡಿಕೊಳ್ಳಲು ಸಾಧ್ಯ ಆಗಲಿದೆ. ಸಂಬಂಧಗಳಲ್ಲಿ ಕೆಲವು ರಾಜೀ- ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಬಹಳ ಹೊತ್ತು ಮೊಬೈಲ್ ಸ್ಕ್ರೀನ್ ನೋಡುವಂಥವರಿಗೆ ಕಣ್ಣಿಗೆ ಸಂಬಂಧಿಸಿದ ಕೆಲವು ತೊಂದರೆಗಳು ಕಾಣಿಸಿಕೊಳ್ಳಲಿವೆ. ಇಷ್ಟು ದಿನ ನಿಧಾನ ಗತಿಯಲ್ಲಿ ಸಾಗುತ್ತಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಯಾವುದೇ ಕೆಲಸ- ಕಾರ್ಯಗಳಲ್ಲಿ ಚಂಚಲತೆ ಕಾಡಲಿದೆ. ಕುತೂಹಲದ ಕಾರಣಕ್ಕೆ ವಹಿಸಿಕೊಂಡ ಜವಾಬ್ದಾರಿಯನ್ನು ಪೂರ್ಣ ಮಾಡುವುದಕ್ಕೆ ಹೆಚ್ಚು ಶ್ರಮ ಆಗುತ್ತದೆ. ಆಮೇಲೆ ಮಾಡಿದರೆ ಆಯಿತು ಎಂದುಕೊಳ್ಳಬೇಡಿ ಪ್ರಯಾಣದಿಂದ ನಿಮ್ಮ ಆದಾಯ ಹೆಚ್ಚಳ ಆಗುವ ಅವಕಾಶಗಳು ತೆರೆದುಕೊಳ್ಳಲಿವೆ. ಅಂದುಕೊಳ್ಳದ ರೀತಿಯಲ್ಲಿ ಮನೆಗೆ ಬರುವಂಥ ಅತಿಥಿಗಳ ಕಾರಣಕ್ಕೆ ಸಂತೋಷದ ಸಮಯ ಕಳೆಯಲಿದ್ದೀರಿ. ಖರ್ಚು ಎಷ್ಟಾಗಲಿದೆ ಎಂಬ ಬಗ್ಗೆ ಗಮನ ನೀಡುವುದು ಮುಖ್ಯ. ಪ್ರೀತಿಯಲ್ಲಿ ಇರುವವರು ಉಲ್ಲಾಸದಿಂದ ಸಮಯವನ್ನು ಕಳೆಯುವಂಥ ಯೋಗ ಇದೆ. ಅಸ್ಥಿರತೆ ಬಗ್ಗೆ ವಿಪರೀತ ಚಿಂತೆ ಕಾಡುತ್ತಾ ಇರುವವರಿಗೆ ಅದಕ್ಕೊಂದು ಪರಿಹಾರ ದೊರೆಯಲಿದೆ. ಗಂಟಲಿನ ನೋವು ಏನಾದರೂ ಈ ದಿನ ಕಾಡಿದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳಲು ಪ್ರಯತ್ನಿಸಿ. ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಸ್ನೇಹಿತರ ಜೊತೆಗೆ ಕಿರು ಪ್ರವಾಸ ತೆರಳುವ ಯೋಗ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ವಿವೇಕಯುತ ಆಲೋಚನೆ ನಿಮಗೆ ಹಲವು ರೀತಿಯಲ್ಲಿ ಅನುಕೂಲ ಮಾಡಿಕೊಡಲಿದೆ. ಮೇಲ್ನೋಟದ ವಿಷಯವನ್ನು ನೆಚ್ಚಿಕೊಂಡು ಮುಂದುವರಿಯದೆ ಆಳವಾದ ಚಿಂತನೆ- ಆಲೋಚನೆ ಮೂಲಕ ತೊಡಗಿಕೊಳ್ಳಿ. ಇತರರ ಮೇಲೆ ನೀವು ನಿಯಂತ್ರಣ ಸಾಧಿಸುವುದಕ್ಕೆ ಪ್ರಯತ್ನಿಸುತ್ತಾ ಇದ್ದೀರಿ ಎಂಬ ಆಕ್ಷೇಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಯಾವುದೇ ಸಣ್ಣ- ಪುಟ್ಟ ವಿಚಾರವನ್ನೂ ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಆಪ್ತರ ಜೊತೆಗೆ ಮಾತು ಬಿಡುವುದು, ಫೋನ್ ಕಾಲ್ ಬಂದಾಗ ರಿಸೀವ್ ಮಾಡದೆ ಇರುವುದು ಇಂಥವೆಲ್ಲ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಇನ್ನು ನಿಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಈಗ ಕಾಡುತ್ತಿರುವ ಸಂಗತಿ ಏನು ಎಂಬುದನ್ನು ಹೇಳಿಕೊಳ್ಳುವುದು ಒಳ್ಳೆಯದು. ಡೆಡ್ ಲೈನ್ ಒಳಗಾಗಿ ಮಾಡಿ ಮುಗಿಸಬೇಕಾದ ಕೆಲವು ಕೆಲಸಗಳು ನಿಮ್ಮನ್ನು ಒತ್ತಡಕ್ಕೆ ದೂಡುತ್ತವೆ. ಸ್ವಂತ ಉದ್ಯೋಗ ಮಾಡುವವರಿಗೆ ಹೊಸ ಕೆಲಸಗಳು ಹುಡುಕಿಕೊಂಡು ಬರಲಿವೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ನೀವು ಒಂದು ಮಾತು ಹೇಳಿದರೆ, ಶಿಫಾರಸು ಮಾಡಿದರೆ ಸಹಾಯ ಆಗುತ್ತದೆ ಎಂದು ಕೆಲವರು ಕೇಳಿಕೊಂಡು ಬರಲಿದ್ದಾರೆ. ನಿಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿ. ಭವಿಷ್ಯದಲ್ಲಿ ನಿಮಗೆ ಕೆಲವು ಅನುಕೂಲಗಳು ಆಗಲಿವೆ. ಉನ್ನತ ವಿದ್ಯಾಬ್ಯಾಸಕ್ಕಾಗಿ ಹಣಕಾಸು ಹೊಂದಿಸುವುದಕ್ಕೆ ಪ್ರಯತ್ನ ಮಾಡುತ್ತಾ ಇರುವವರಿಗೆ ಅದು ಸಾಧ್ಯವಾಗಲಿದೆ. ಸ್ನೇಹಿತರಿಂದ ಕೆಲವು ಸಹಾಯ ಸಿಗಲಿದೆ. ಸ್ಕಾಲರ್ ಷಿಪ್ ಪಡೆಯುವ ಯೋಗ ಸಹ ಇದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿಕೊಟ್ಟ ಕೆಲಸವೊಂದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬರು ದೊಡ್ಡ ಸಹಾಯ ಒಂದನ್ನು ನಿಮಗೆ ಮಾಡುತ್ತಾರೆ. ಇಬ್ಬರು ಮಾಡುವಂಥ ಕೆಲಸಗಳನ್ನು ನೀವು ಒಬ್ಬರೇ ಮಾಡಬೇಕಾದ ಸನ್ನಿವೇಶ ಉದ್ಭವಿಸುತ್ತದೆ. ದೈಹಿಕ- ಮಾನಸಿಕ ದಣಿವು ಆದರೂ ಅದರಿಂದ ಒಂದು ಬಗೆಯ ಸಮಾಧಾನ ನಿಮಗೆ ಆಗಲಿದೆ. ಧಾರ್ಮಿಕ ಕೇಂದ್ರಗಳಲ್ಲಿ ನಿಮ್ಮಿಂದ ಸಾಧ್ಯವಾಗುವ ಯಾವುದಾದರೂ ಸೇವೆಯನ್ನು ಈ ದಿನ ಮಾಡಿದಲ್ಲಿ ಒಳ್ಳೆಯದು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಾನು ಹೇಳಿದಂತೆಯೇ ನಡೆದುಕೊಳ್ಳಬೇಕು, ನನ್ನ ಮಾತನ್ನೇ ಕೇಳಬೇಕು ಎಂದು ಯಾರ ಮೇಲೂ ಒತ್ತಡ ಹೇರುವುದಕ್ಕೆ ಹೋಗಬೇಡಿ. ಉದ್ಯೋಗ ಸ್ಥಳದಲ್ಲಿ ಕೂಡ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರಿಗೆ ವಹಿಸುವ ಜವಾಬ್ದಾರಿಯನ್ನು ಎಷ್ಟು ಸಮಯದೊಳಗೆ ಮುಗಿಸಲು ಸಾಧ‌್ಯ ಎಂಬುದನ್ನು ಮುಂಚಿತವಾಗಿಯೇ ಕೇಳಿಕೊಂಡು, ಆ ನಂತರ ಕೆಲಸವನ್ನು ವಹಿಸಿ. ವಿಪರೀತ ನಿರೀಕ್ಷೆ ಈ ದಿನ ನಿಮಗೆ ನಾನಾ ರೀತಿಯಲ್ಲಿ ಕಿರಿಕಿರಿ ಮಾಡುತ್ತದೆ. ಹಣ್ಣುಗಳ ಸೇವನೆ ಮಾಡುವಾಗ ನಿಮ್ಮ ದೇಹಕ್ಕೆ ಒಗ್ಗುವುದನ್ನು ಮಾತ್ರ ತೆಗೆದುಕೊಳ್ಳಿ. ಏಕೆಂದರೆ ಅಲರ್ಜಿ, ಆರೋಗ್ಯ ಸಮಸ್ಯೆಗಳು ಇದೇ ಕಾರಣದಿಂದಲೇ ಆಗುವಂಥ ಸಾಧ್ಯತೆಗಳು ಹೆಚ್ಚಿಗೆ ಇವು. ಸಾರ್ವಜನಿಕ ಸಾರಿಗೆಯಲ್ಲಿ ಸಂಚಾರ ಮಾಡುವವರು ಬೆಲೆ ಬಾಳುವ ವಸ್ತುಗಳ ಕಡೆಗೆ ನಿಗಾ ಮಾಡಿ. ವಸ್ತುವೊಂದು ಕಳುವಾಗುವ ಅಥವಾ ನಿಮ್ಮದೇ ಅಜಾಗರೂಕತೆ ಕಾರಣಕ್ಕೆ ಕಳೆದುಹೋಗುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ನಿಮ್ಮ ಜೊತೆಗೆ ಕೆಲಸ ಮಾಡಿದ್ದವರು ಆಕರ್ಷಕವಾದ ಆಫರ್ ಗಳನ್ನು ತರಲಿದ್ದಾರೆ. ಅದು ಉದ್ಯೋಗಕ್ಕೆ ಸಂಬಂಧಿಸಿದ್ದಿರಬಹದು. ಅಥವಾ ವ್ಯವಹಾರ- ವ್ಯಾಪಾರಕ್ಕೆ ಸಂಬಂಧಪಟ್ಟಂಥ ವಿಚಾರ ಆಗಿರಬಹುದು. ಮುಕ್ತ ಮನಸ್ಸಿನಿಂದ ಆಲೋಚನೆ ಮಾಡುವುದು ತುಂಬ ಮುಖ್ಯ. ಬಹಳ ಹಿಂದೆ ಹೂಡಿಕೆ ಮಾಡಿದ್ದ ಹಣವೊಂದನ್ನು ಹಿಂತೆಗೆದುಕೊಳ್ಳಬೇಕು ಎಂಬ ಆಲೋಚನೆ ಬರಲಿದೆ. ಕೊಬ್ಬರಿ ಎಣ್ಣೆ, ಕಡ್ಲೇಕಾಯಿ ಎಣ್ಣೆ ಇಂಥವುಗಳ ಮಾರಾಟದಲ್ಲಿ ತೊಡಗಿಕೊಂಡವರಿಗೆ ಆದಾಯ ಹಾಗೂ ಲಾಭದ ಪ್ರಮಾಣದಲ್ಲಿ ಹೆಚ್ಚಳ ಆಗಲಿದೆ. ಹೊಸ ಕ್ಲೈಂಟ್ ಗಳು ಸಿಗಲಿದ್ದಾರೆ. ವಿವಾಹಿತರಿಗೆ ಸಂಗಾತಿ ಕಡೆಯಿಂದ ಉಡುಗೊರೆ ದೊರೆಯುವ ಯೋಗ ಇದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ಸಾಮಾನ್ಯ ದಿನಕ್ಕಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಿ. ಬೆಂಕಿಯಿಂದ ಅವಘಡ ಸಂಭವಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):
ಸ್ನೇಹಿತರು- ಸಂಬಂಧಿಗಳ ಮೂಲಕ ಬರುವ ಕೆಲಸದ ರೆಫರೆನ್ಸ್ ಗಳನ್ನು ಗಂಭೀರವಾಗಿ ಪರಿಗಣನೆಗೆ ತೆಗೆದುಕೊಳ್ಳಿ. ಇದೊಂದು ದಿನ ಸ್ವಲ್ಪ ಬಿಡುವಾಗಿ ಇದ್ದು ಬಿಡೋಣ, ವಿಶ್ರಾಂತಿ ತೆಗೆದುಕೊಳ್ಳೋಣ ಅಂತೆಲ್ಲ ಯೋಚಿಸಬೇಡಿ. ಏಕೆಂದರೆ ಬಹಳ ದೊಡ್ಡ ಬದಲಾವಣೆ, ಅದರಲ್ಲೂ ಸಕಾರಾತ್ಮಕವಾದ ಬೆಳವಣಿಗೆ ಈ ದಿನ ನಿಮ್ಮ ಬದುಕಿನಲ್ಲಿ ನಡೆಯಲಿದೆ. ಆದ್ದರಿಂದ ಮುಖ್ಯ ವ್ಯಕ್ತಿಗಳ ಭೇಟಿಯನ್ನು ಮುಂದಕ್ಕೆ ಹಾಕಬೇಡಿ. ಫ್ರೀಲ್ಯಾನ್ಸರ್ ಗಳಾಗಿ ಕೆಲಸ ಮಾಡುತ್ತಿರುವವರಿಗೆ ಆದಾಯ ಮೂಲವನ್ನು ಹೆಚ್ಚು ಮಾಡಿಕೊಳ್ಳುವ ಅವಕಾಶ ದೊರೆಯಲಿದೆ. ಈ ಹಿಂದೆ ನೀವು ಮಾಡಿಕೊಟ್ಟಿದ್ದ ಕೆಲಸದಿಂದ ಸಂತೃಪ್ತರಾದವರು ಮತ್ತೆ ಹುಡುಕಿಕೊಂಡು ಬರಲಿದ್ದಾರೆ. ಇನ್ನು ಸಂಗಾತಿ- ಮಕ್ಕಳ ಸಲುವಾಗಿ ಹೆಚ್ಚಿನ ಖರ್ಚನ್ನು ಮಾಡಲಿದ್ದೀರಿ. ಇದರಿಂದ ಮನೆಯಲ್ಲಿ ಸಂತೋಷವಾದ ವಾತಾವರಣ ಇರಲಿದೆ. ನಿಮಗೂ ಸಮಾಧಾನ ದೊರೆಯುತ್ತದೆ. ಈ ದಿನ ದುರ್ಗಾ ದೇವಿ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):
ಈ ದಿನ ನಿಮಗೆ ಸಿಗುವಂಥ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ. ಅತ್ಯಂತ ಖುಷಿಯಾದ ಕ್ಷಣಗಳನ್ನು ಸ್ನೇಹಿತರ ಜತೆಗೆ ಕಳೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ. ನಿಮ್ಮ ಜೊತೆಗೆ ಹಲವು ಕಾಲದಿಂದ ಗೆಳೆಯ ಅಥವಾ ಗೆಳತಿ ಆಗಿರುವವರು ಪ್ರೇಮ ನಿವೇದನೆ ಮಾಡುವ/ ಮದುವೆ ಆಗುವ ಪ್ರಸ್ತಾವವನ್ನು ಮುಂದಿಡಬಹುದು. ಮನೆಯ ರಿನೊವೇಷನ್ ಅಥವಾ ಪೇಂಟಿಂಗ್ ಮಾಡಿಸುವುದಕ್ಕೆ ಸಂಬಂಧಪಟ್ಟವರನ್ನು ಕರೆಸಿ, ಮಾತುಕತೆ ಆಡಲಿದ್ದೀರಿ. ಕುಟುಂಬ ಸದಸ್ಯರು ತಾವಾಗಿಯೇ ಮಾಡಿಕೊಂಡ ತೀರ್ಮಾನವನ್ನು ನಿಮ್ಮ ಮುಂದೆ ಹೇಳಿ, ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಡುವುದಕ್ಕೆ ಕೇಳಿಕೊಳ್ಳಿಲಿದ್ದಾರೆ. ಸರ್ಕಾರಿ ಕೆಲಸಗಳನ್ನು ಗುತ್ತಿಗೆಗೆ ಪಡೆಯುವಂಥವರಿಗೆ ದೊಡ್ಡ ಮೊತ್ತದ ಕಾಂಟ್ರಾಕ್ಟ್ ದೊರೆಯುವಂಥ ಯೋಗ ಇದೆ. ಪ್ರಭಾವಿಗಳೊಬ್ಬರು ನಿಮ್ಮ ನೆರವಿಗೆ ನಿಂತು, ಇದು ಸಿಗುವಂತೆ ಮಾಡಲಿದ್ದಾರೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):
ಸುಸ್ತು, ಆಯಾಸ ಹಾಗೂ ಒಂದು ಬಗೆಯ ನಿರಾಸಕ್ತಿ ನಿಮ್ಮನ್ನು ಕಾಡಲಿದೆ. ಬೇಡ ಅಂದುಕೊಂಡಿದ್ದ ಕೆಲಸ- ಕಾರ್ಯಗಳನ್ನೇ ಮಾಡಬೇಕಾದ ಸನ್ನಿವೇಶ ಬರಲಿದೆ. ನಿಮ್ಮ ಉದ್ಯೋಗ- ವೃತ್ತಿಗೆ ಅನುಕೂಲ ಆಗುವಂಥ ಕೆಲವು ಗ್ಯಾಜೆಟ್ ಅಥವಾ ಉಪಕರಣಗಳನ್ನು ಖರೀದಿ ಮಾಡಲಿದ್ದೀರಿ. ಕೃಷಿಕರಿಗೆ ಈಗಿರುವ ಭೂಮಿ ಜೊತೆಗೆ ಸ್ವಲ್ಪ ಪ್ರಮಾಣದಲ್ಲಿಯಾದರೂ ಬೇರೆ ಭೂಮಿ ಗುತ್ತಿಗೆಗೆ ಅಥವಾ ಖರೀದಿಗೆ ಪಡೆದುಕೊಳ್ಳುವುದಕ್ಕೆ ಈ ದಿನ ಪ್ರಯತ್ನ ಮಾಡುವಂಥ ಯೋಗ ಇದೆ. ಶಿಕ್ಷಣದ ಸಲುವಾಗಿ ಮನೆಯಿಂದ ದೂರ ಇದ್ದು, ಓದುತ್ತಿರುವ ವಿದ್ಯಾರ್ಥಿಗಳು ಆರೋಗ್ಯ ಸಮಸ್ಯೆಯಿಂದ ವಾಪಸ್ ಮನೆಗೆ ಹಿಂತಿರುಗುವಂತೆ ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡಿ. ಅಂಥದ್ದೊಂದು ಸಂದರ್ಭ ಎದುರಾದಲ್ಲಿ ಮೌನವಾಗಿ ಇದ್ದುಬಿಡುವುದು ಒಳ್ಳೆಯದು. ದಿನದ ಕೊನೆಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ




