Guru Chandal Yoga: ಮೇಷದಲ್ಲಿ ಗುರು ಚಂಡಾಲ ಯೋಗ; ಹನ್ನೆರಡು ರಾಶಿಯವರಿಗೆ ಮುನ್ನೆಚ್ಚರಿಕೆಗಳು ಇಲ್ಲಿವೆ

| Updated By: Digi Tech Desk

Updated on: Aug 07, 2023 | 5:54 PM

ಗುರು ಚಂಡಾಲ ಯೋಗವು ಈ ವರ್ಷ ಅಕ್ಟೋಬರ್ ಮೂವತ್ತೊಂದನೇ ತಾರೀಕು ಕಳೆಯುವ ತನಕ, ಅಂದರೆ ರಾಹು ಮೇಷದಿಂದ ಮೀನಕ್ಕೆ ತೆರಳುವ ತನಕ ದ್ವಾದಶ ರಾಶಿಗಳವರು ತೆಗೆದುಕೊಳ್ಳಬೇಕಾದ ಕ್ರಮಗಳು ಏನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

Guru Chandal Yoga: ಮೇಷದಲ್ಲಿ ಗುರು ಚಂಡಾಲ ಯೋಗ; ಹನ್ನೆರಡು ರಾಶಿಯವರಿಗೆ ಮುನ್ನೆಚ್ಚರಿಕೆಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಸದ್ಯಕ್ಕೆ ಮೇಷ ರಾಶಿಯಲ್ಲಿ ಗುರುವಿನ ಜತೆಗೆ ರಾಹು ಗ್ರಹ ಇದೆ. ಕಳೆದ ಏಪ್ರಿಲ್ ಇಪ್ಪತ್ತೆರಡನೇ ತಾರೀಕಿನಿಂದ ಗುರು ಗ್ರಹ ಮೇಷ ರಾಶಿಯನ್ನು ಪ್ರವೇಶ ಮಾಡಿತು. ಅದಾಗಲೇ ಮೇಷದಲ್ಲೇ ಇದ್ದ ರಾಹುವಿನ ಜತೆ ಸಂಯೋಗ ಆಗಿದ್ದು, ಇಂಥ ಗ್ರಹ ಸ್ಥಿತಿಯನ್ನು ಗುರು- ಚಂಡಾಲ ಯೋಗ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಗುರು ಗ್ರಹ ಗೋಚಾರದಲ್ಲಿ ಎರಡು, ಐದು, ಏಳು, ಒಂಬತ್ತು, ಹನ್ನೊಂದನೇ ಮನೆಯಲ್ಲಿ ಸಂಚರಿಸುವಾಗ ಶುಭ ಫಲಗಳನ್ನು ನೀಡುತ್ತದೆ. ಇನ್ನು ರಾಹು ಗೋಚಾರದಲ್ಲಿ ಮೂರು, ಆರು, ಹನ್ನೊಂದನೇ ಮನೆಯಲ್ಲಿ ಸಂಚರಿಸುವಾಗ ಶುಭ ಫಲ ಹೇಳಬಹುದು. ಆದರೆ ರಾಹುವಿನ ಜತೆಗೆ ಗುರು ಇರುವುದರಿಂದ ಹನ್ನೆರಡು ರಾಶಿಯವರಿಗೂ ಇದು ಉತ್ತಮ ಸಮಯ ಅಲ್ಲ. ಅಂದರೆ ಮಿಥುನ ರಾಶಿಯೊಂದನ್ನು ಹೊರತುಪಡಿಸಿದಂತೆ ಉಳಿದ ಹನ್ನೊಂದು ರಾಶಿಯವರಿಗೂ ಎಚ್ಚರಿಕೆಗಳನ್ನು ಹೇಳಬೇಕಾಗುತ್ತದೆ. ಹಾಗಂತ ಮಿಥುನ ರಾಶಿಗೆ ಬಹಳ ಚೆನ್ನಾಗಿದೆಯಾ? ಇಲ್ಲ ಅವರಿಗೂ ಸಮಸ್ಯೆ ಇದೆ. ಬರೀ ಸಮಸ್ಯೆ ಮಾತ್ರ ಅಲ್ಲದೆ, ಇಂಥ ಸನ್ನಿವೇಶದಲ್ಲಿ ಏನು ಮಾಡಬೇಕು ಎಂಬ ಪರಿಹಾರವನ್ನೂ ಈ ಲೇಖನದಲ್ಲಿ ತಿಳಿಸಲಾಗಿದೆ. ಇಲ್ಲಿ ಸೂಚಿಸಿರುವ ಎಚ್ಚರಿಕೆಗಳನ್ನು ಪಾಲಿಸಿದಲ್ಲಿ ಅಷ್ಟರ ಮಟ್ಟಿಗೆ ಸಮಸ್ಯೆಗಳಿಂದ ದೂರ ಇರುವುದಕ್ಕೆ ಸಾಧ್ಯವಿದೆ. ಇಂಥ ಗ್ರಹ ಸ್ಥಿತಿ ಈ ವರ್ಷ ಅಕ್ಟೋಬರ್ ಮೂವತ್ತೊಂದನೇ ತಾರೀಕು ಕಳೆಯುವ ತನಕ, ಅಂದರೆ ರಾಹು ಮೇಷದಿಂದ ಮೀನಕ್ಕೆ ತೆರಳುವ ತನಕ ದ್ವಾದಶ ರಾಶಿಗಳವರು ತೆಗೆದುಕೊಳ್ಳಬೇಕಾದ ಕ್ರಮಗಳು ಏನು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಮೇಷ
ನಿಮಗೆ ಜನ್ಮ ರಾಶಿಯಲ್ಲೇ ಗುರು- ರಾಹು ಇರುವುದರಿಂದ ಆರೋಗ್ಯ ವಿಚಾರದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೂ. ನಿಮ್ಮ ಆತ್ಮವಿಶ್ವಾಸ ನೆಲಕ್ಕೆ ಇಳಿದುಬಿಡುತ್ತದೆ, ಆ ರೀತಿಯಲ್ಲಿ ಸಮಸ್ಯೆಗೆ ಕಾರಣಗಳೇ ಗೊತ್ತಾಗಲ್ಲ. ನಾನಾ ಬಗೆಯಲ್ಲಿ ದುಃಖ. ನಿಮಗೆ ಆಗುತ್ತಿರುವ ಒಳ್ಳೆಯದರಲ್ಲೂ ಕೆಟ್ಟದ್ದೇ ಅನುಭವಿಸಬೇಕಾದಂಥ ಸನ್ನಿವೇಶ ಎದುರಾಗುತ್ತದೆ. ಆಸ್ತಿ ಮಾರಾಟ ಆಯಿತು, ಸಾಲ ತೀರಿಸಿ ನೆಮ್ಮದಿ ಆಗಿರಬಹುದು ಅಂದುಕೊಂಡರೆ, ಅದರ ಸೆಟ್ಲ್ ಮೆಂಟ್ ಸರಿಯಾಗಿ ಆಗಲ್ಲ. ಯಾವುದೇ ನಂಬಿಕೆ ಆಧಾರದ ವ್ಯವಹಾರಗಳಿಂದ ದೂರ ಇದ್ದುಬಿಡುವುದು ಕ್ಷೇಮ ಹಾಗೂ ಉತ್ತಮ. ಇನ್ನು ಮೂರು- ಮೂರೂವರೆ ತಿಂಗಳು ಸಣ್ಣ- ಪುಟ್ಟದ್ದು ಅಂತಲೂ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಚರ್ಮ, ರಕ್ತಕ್ಕೆ ಸಂಬಂಧಿಸಿದ ಅಲರ್ಜಿ, ತೂಕ ಹೆಚ್ಚಾಗುವುದು ಇಂಥದ್ದರ ಬಗ್ಗೆ ಔಷಧೋಪಚಾರದ ಮೂಲಕ ಮಾಮೂಲಿಗಿಂತ ಜಾಸ್ತಿ ಗಮನ ಕೊಡಿ.

ವೃಷಭ
ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಗುರು- ರಾಹು ಇರುವುದರಿಂದ ಖರ್ಚಿನ ಬಗ್ಗೆ ನಿಗಾ ವಹಿಸಬೇಕು. ಅದರಲ್ಲೂ ಎಲ್ಲೋ ಇನ್ವೆಸ್ಟ್ ಮಾಡಿದರೆ ತಿಂಗಳುಗಳಲ್ಲೇ ಬಹಳ ದೊಡ್ಡ ಮೊತ್ತದ ಲಾಭ ಬರುತ್ತದೆ ಎಂದು ಆಶ್ವಾಸನೆ ನೀಡಿದರೆ, ಆ ಹಣಕ್ಕೆ ನಾನು ಗ್ಯಾರಂಟಿ ಕೊಡ್ತೀನಿ ಅನ್ನೋ ಹಾಗೆ ಯಾರಾದರೂ ಮಾತನಾಡಿದರೆ ನಂಬಿಬಿಟ್ಟು, ಹಣ ಹಾಕುವುದಕ್ಕೆ ಹೋಗಬೇಡಿ. ಕಾಸಿಗೆ ಕಾಸು ಹಾಳು, ತಲೆಯೂ ಬೋಳು ಎಂಬಂತೆ ಪರಿಸ್ಥಿತಿ ಆಗುತ್ತದೆ. ನೀವಾಗಿಯೇ ಕೋರ್ಟ್- ಕಚೇರಿಗಳಿಗೆ ಕೇಸು ಎಂದು ಹಾಕಿದಲ್ಲಿ ಅದರಿಂದಲೂ ನೆಮ್ಮದಿ ಹಾಳು. ಮುಖ್ಯವಾಗಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವುದನ್ನು ತಪ್ಪಿಸುವುದು ಅಸಾಧ್ಯ. ಅತಿಯಾದ ಆತ್ಮವಿಶ್ವಾಸ, ಇತರರ ಮೇಲೆ ಅತಿಯಾದ ನಂಬಿಕೆ ಖಂಡಿತಾ ಒಳ್ಳೆಯದಲ್ಲ.

ಇದನ್ನೂ ಓದಿ: ಈ ಯೋಗಗಳು ನಿಮ್ಮ ಜಾತಕದಲ್ಲಿಯೂ ಇರಬಹುದು, ನೋಡಿಕೊಳ್ಳಿ

ಮಿಥುನ
ಆರಂಭದಲ್ಲೇ ಹೇಳಿದಂತೆ ಮಿಥುನ ರಾಶಿಯವರಿಗೆ ಗುರು- ರಾಹು ಸಂಯೋಗದ ನಕಾರಾತ್ಮಕ ಪರಿಣಾಮ ಕಡಿಮೆ ಇರುತ್ತದೆ. ಆದರೆ ಸಿಗಬೇಕಾದ ಸ್ಥಾನ-ಮಾನ, ಗೌರವ, ಹಣ ಇವೆಲ್ಲವೂ ಬರುವುದು ತಡವಾಗುತ್ತಾ ಹೋಗುತ್ತದೆ. ಕೆಲವರಿಗೆ ಅದರ ಪ್ರಮಾಣ ಸಹ ಕಡಿಮೆ ಆಗಬಹುದು. ವಿದೇಶ ಪ್ರಯಾಣ, ಐಷಾರಾಮಿ ವಾಹನಗಳು, ಹೊಸ ಮನೆ ಹೀಗೆ ಏನೇ ಬಂದರೂ ಇದ್ದರೂ ಅದನ್ನು ಅನುಭವಿಸುವ ಪರಿಸ್ಥಿತಿ ಇರುವುದಿಲ್ಲ. ಏನೋ ಒಂದು ಬಗೆಯ ಚಿಂತೆ ಕಾಡುತ್ತದೆ.

ಕರ್ಕಾಟಕ
ನಿಮ್ಮ ರಾಶಿಗೆ ಕರ್ಮ ಸ್ಥಾನದಲ್ಲಿ ಗುರು- ರಾಹು ಸಂಚಾರ ಆಗುತ್ತಿದೆ. ಇದರಿಂದ ಉದ್ಯೋಗ ಸ್ಥಳದಲ್ಲಿ ನಾನಾ ರೀತಿಯ ಕಿರಿಕಿರಿ, ಮುಜುಗರ ಇರುತ್ತದೆ. ಅಷ್ಟೇ ಅಲ್ಲ, ನಿಮ್ಮ ಆಪ್ತರು ಹಾಗೂ ಬಹಳ ಪ್ರೀತಿಯಿಂದ ಇದ್ದ ವ್ಯಕ್ತಿಗಳು ದೂರ ಆಗುತ್ತಾರೆ. ಒಂದೋ ನೀವೇ ನಿರ್ಧರಿಸುತ್ತೀರೋ ಅಥವಾ ಅದಾಗಲೇ ತೀರ್ಮಾನ ಆಗಿರುತ್ತದೋ ಉದ್ಯೋಗ, ವೃತ್ತಿಯಲ್ಲಿ ನಿಮ್ಮ ವಿರುದ್ಧ ಮಸಲತ್ತುಗಳು ಆಗುತ್ತವೆ. ನಿಮ್ಮ ಮಾತಿನಲ್ಲಿ ತಪ್ಪುಗಳನ್ನು ಕಂಡುಹಿಡಿಯಲಾಗುತ್ತದೆ. ಆ ಸ್ಥಳದಿಂದ ಬಿಟ್ಟು ನಿಮ್ಮನ್ನು ಹೊರಗೆ ಕಳುಹಿಸುವ ಪಿತೂರಿ ನಡೆಯುತ್ತದೆ.

ಇದನ್ನೂ ಓದಿ: ಜ್ಯೋತಿಷ್ಯದ ಪ್ರಕಾರ ಈ 3 ರಾಶಿಯ ಜೋಡಿಗಳು ಸದಾ ಸಂತೋಷವಾಗಿರುತ್ತಾರೆ

ಸಿಂಹ
ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಗುರು- ರಾಹು ಸಂಯೋಗ ಇರುವುದರಿಂದ ಪಿತ್ರಾರ್ಜಿತ ಆಸ್ತಿಗಳು ಬರಬೇಕಿದ್ದಲ್ಲಿ ತಡವಾಗುತ್ತದೆ. ಅಥವಾ ವ್ಯಾಜ್ಯಗಳು ಕೋರ್ಟ್ ಮೆಟ್ಟಿಲೇರಬಹುದು. ಯಾವುದೋ ಒಂದು ಹಂತದಲ್ಲಿ ಕೆಲಸಕ್ಕೆ ಕೊಕ್ಕೆ ಬಿದ್ದು, ಅಲ್ಲಿಂದ ಮುಂದೆ ಸಾಗದೆ ನಿಂತು ಬಿಡಬಹುದು. ಇನ್ನು ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲೂ ಪ್ರಯಾಣಕ್ಕೆ ತೆರಳುತ್ತಿದ್ದೀರಿ ಅಂತಾದಲ್ಲಿ ಇನ್ನೂ ಹೆಚ್ಚು ಜಾಗ್ರತೆ ವಹಿಸಬೇಕು. ಕೆಲಸ- ಕಾರ್ಯದಲ್ಲಿ ಬಡ್ತಿ ಸಿಕ್ಕರೂ ತಕ್ಷಣಕ್ಕೆ ಅದರ ಆದೇಶ ಸಿಗದೇ ಹೋಗಬಹುದು. ಯಾವುದೇ ಕಾರಣಕ್ಕೂ ಜಗಳ, ಕೂಗಾಟ ಅಂತ ಮಾಡುವುದಕ್ಕೆ ಹೋಗದಿರಿ. ನಿಮ್ಮ ಪಾಲಿಗೆ ಬರಬೇಕಾದ ಭಾಗ್ಯಗಳಿಗೆ ಇವೆಲ್ಲ ತಡೆಗಳಾಗುತ್ತವೆ.

ಕನ್ಯಾ
ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಗುರು- ರಾಹು ಇರುವುದರಿಂದ ಯಾವುದರಲ್ಲಿ ಪ್ರಯತ್ನ ಪಟ್ಟರೂ ನಷ್ಟ ನಷ್ಟ ನಷ್ಟ. ತುಂಬ ಒಳ್ಳೆ ಕೆಲಸಗಾರನಿಗೆ ಕೆಲಸ ವಹಿಸಿದರೂ ಅದರಿಂದಲೂ ಹಣ ಕಳೆದುಕೊಳ್ಳುವಂಥ ಸನ್ನಿವೇಶ. ನಿಮ್ಮ ಯಾವುದೇ ಪ್ಲ್ಯಾನಿಂಗ್, ಅದರ ಜಾರಿ, ಅದಕ್ಕಾಗಿ ನೀವು ಹಾಕುವ ಶ್ರಮ ಕೆಲಸ ಮಾಡುವುದಿಲ್ಲ. ಇದರ ಜತೆಗೆ ಕೈಯಿಂದ ಹಣವನ್ನು ಸಹ ಕಳೆದುಕೊಳ್ಳಬೇಕಾಗುತ್ತದೆ. ಇನ್ನು ಈಗಾಗಲೇ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಲ್ಲಿ ಚಿಕಿತ್ಸಾ ವಿಧಾನ ಅಥವಾ ಔಷಧಿಗಳನ್ನು ಬದಲಾಯಿಸಿಕೊಳ್ಳುವ ಮುಂಚೆ ಸರಿಯಾಗಿ ಆಲೋಚನೆ ಮಾಡಬೇಕಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಆರೋಪ, ನಿಂದೆಗಳು ಕೇಳಬೇಕಾಗುತ್ತದೆ.

ತುಲಾ
ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಗುರು- ರಾಹು ಇರುವುದರಿಂದ ಪಾಪಕರ್ಮಾಸಕ್ತಿಗಳು ಹೆಚ್ಚಾಗುತ್ತವೆ. ತಪ್ಪು ಎಂದು ಗೊತ್ತಿದ್ದರೂ ಇದೊಂದು ಸಲ, ಇಷ್ಟು ಮಾತ್ರ ಎಂದು ನಿಮಗೆ ನೀವೇ ಸಮಜಾಯಿಷಿ ಕೊಟ್ಟುಕೊಂಡು ಸಮಸ್ಯೆಗಳನ್ನು ತಲೆ ಮೇಲೆ ಹಾಕಿಕೊಳ್ಳುತ್ತೀರಿ. ಒಂದೋ ಸಂಗಾತಿಯ ಮೇಲೆ ನಂಬಿಕೆಯಿಂದ ಮಾಡಿದ್ದ ವ್ಯವಹಾರಗಳು ಭಾರೀ ಮಟ್ಟದಲ್ಲಿ ನಷ್ಟ ತರುತ್ತವೆ, ವ್ಯಾಜ್ಯ- ಸಮಸ್ಯೆಗಳು ಕಾಣಿಸಿಕೊಳ್ಳುವಂತೆ ಮಾಡುತ್ತವೆ. ಅಥವಾ ವಿವಾಹಿತರಿಗೆ ಅದರ ಆಚೆಗೆ ಸಂಬಂಧಗಳ ಸೆಳೆತ ಬಂದು, ನೆಮ್ಮದಿ ಹಾಳಾಗುತ್ತದೆ, ಅವಮಾನಗಳಾಗುತ್ತವೆ. ದೈವ ಭಕ್ತಿ ಹಾಗೂ ಪಾಪಭೀತಿ ಇದ್ದಲ್ಲಿ ತಪ್ಪುಗಳು ಆಗದಂತೆ ವಿವೇಚನೆಯು ನೆರವಿಗೆ ಬರುತ್ತದೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಿನವರೆಗೆ ಗಜಲಕ್ಷ್ಮಿ ಯೋಗ, ಈ ಮೂರು ರಾಶಿಯವರಿಗೆ ಚಿನ್ನದಂತಹ ಅದೃಷ್ಟ

ವೃಶ್ಚಿಕ
ಆರನೇ ಮನೆಯಲ್ಲಿ ನಿಮಗೆ ಗುರು- ರಾಹು ಸಂಚಾರ ಇದೆ. ಯಾವುದೋ ಆಸ್ತಿ ಮಾರಾಟದ ಹಣವೋ ಅಥವಾ ಮ್ಯೂಚುವಲ್ ಫಂಡ್, ಷೇರುಗಳಲ್ಲಿ ತೊಡಗಿಸಿದ್ದ ಹಣವೋ ಅಥವಾ ಕೆಲ ಸಮಯ ನಿಮ್ಮ ಬಳಿ ಇಟ್ಟುಕೊಳ್ಳುವಂತೆ ಹೇಳಿದ ಮೊತ್ತವನ್ನೋ ಜೋಪಾನವಾಗಿ ಇರಿಸಿಕೊಳ್ಳುವುದು ಮುಖ್ಯ. ಮುಂದೆ ಬೇರೆ ಯಾವುದೋ ದುಡ್ಡು ಬರುತ್ತದೆ, ಆಗ ಇದಕ್ಕೆ ಹಾಕುತ್ತೇನೆ ಎಂದುಕೊಂಡು ಖರ್ಚು ಮಾಡಿಕೊಂಡಲ್ಲಿ ನಂತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶತ್ರುಗಳ ಕಾಟ ಜಾಸ್ತಿ ಆಗುತ್ತದೆ. ನಿಮ್ಮದಲ್ಲದ ಹಣವನ್ನು ಹ್ಯಾಂಡಲ್ ಮಾಡುತ್ತಿರುವವರು ಎಚ್ಚರಿಕೆಯಿಂದ ಇರಬೇಕು.

ಧನುಸ್ಸು
ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಗುರು- ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯ ವಿಚಾರವು ಆತಂಕಕ್ಕೆ ಕಾರಣ ಆಗುತ್ತದೆ. ಜತೆಗೆ ವಿಪರೀತ ಕೆಲಸದ ಕಾರಣಕ್ಕೆ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಸರ್ಕಾರಕ್ಕೆ ಕಟ್ಟಬೇಕಾದ ತೆರಿಗೆಯ ಹಳೇ ಬಾಕಿ, ಈ ಹಿಂದೆ ನೀವು ಪಾವತಿಸಬೇಕಾಗಿದ್ದ ಮೊತ್ತ ಈಗಿಂದ ಈಗಲೇ ಕಟ್ಟುವಂತೆ ಒತ್ತಡ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಅಹಂಕಾರಿ ಎಂಬ ಹಣೆಪಟ್ಟಿ ಬೀಳಲಿದೆ. ಬಹಳ ಶ್ರಮ, ಸಮಯ, ಬುದ್ಧಿ ಎಲ್ಲ ವಿನಿಯೋಗಿಸಿ ಮಾಡಿದ್ದ ಕೆಲಸವು ಅಂದುಕೊಂಡಂತೆ ಪೂರ್ಣ ಪ್ರಮಾಣದ ಫಲಿತಾಂಶವನ್ನು ನೀಡುವುದಿಲ್ಲ.

ಮಕರ
ನಿಮ್ಮ ರಾಶಿಯಿಂದ ನಾಲ್ಕನೇ ಮನೆಯಲ್ಲಿ ಗುರು- ರಾಹು ಸಂಚಾರದಿಂದ ವಾಹನ, ವಸ್ತುಗಳ ದುರಸ್ತಿಗಾಗಿ ವಿಪರೀತ ಖರ್ಚುಗಳನ್ನು ಮಾಡಲಿದ್ದೀರಿ. ತಾಯಿ ಅಥವಾ ತಾಯಿಗೆ ಸಮಾನರಾದವರ ಆರೋಗ್ಯದಲ್ಲಿನ ಏರುಪೇರು ಒತ್ತಡವನ್ನು ಸೃಷ್ಟಿಸುತ್ತದೆ. ನಿಮ್ಮ ಮಾತಿನಿಂದ ನಾನಾ ಬಗೆಯಲ್ಲಿ ಜನರ ವಿರೋಧವನ್ನು ಕಟ್ಟಿಕೊಳ್ಳಬೇಕಾಗುತ್ತದೆ. ಕೆಲಸದಲ್ಲಿ ಆಲಸ್ಯ ತೋರಿಸುವುದರಿಂದ ಅಥವಾ ಗುಣಮಟ್ಟ ಹಾಳಾಗುವುದರಿಂದ ಮುಂದೆ ಬರಬೇಕಾದ ಕೆಲಸಗಳು ಬಾರದಂತೆ ಆಗಬಹುದು ಹಾಗೂ ಈಗ ಮಾಡಿಕೊಟ್ಟಂಥ ಕೆಲಸಗಳಿಗೆ ಪೂರ್ತಿ ಹಣವನ್ನು ನೀಡದಂತೆ ಆಗಬಹುದು. ಸ್ನೇಹಿತರ ಜತೆಗೆ ವಾದ- ವಾಗ್ವಾದ ಮಾಡಿಕೊಂಡು ಅವರಿಂದ ದೂರ ಆಗುವ ಯೋಗ ಸಹ ಇದೆ. ಹೀಗಾಗದಂತೆ ಎಚ್ಚರಿಕೆ ವಹಿಸಿ.

ಇದನ್ನೂ ಓದಿ: ಈ 5 ರಾಶಿಯ ಮಹಿಳೆಯರು ತಮ್ಮ ಪ್ರೀತಿ ಪಾತ್ರರನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ

ಕುಂಭ
ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಗುರು- ರಾಹು ಇರುವುದರಿಂದ ಸೋದರ- ಸೋದರಿಯರ ಜತೆಗೆ ಬಾಂಧವ್ಯಕ್ಕೆ ಧಕ್ಕೆ ಬರಬಹುದು. ನೀವಾಡಿದ ಮಾತನ್ನೇ ಬೇರೆ ರೀತಿ ವ್ಯಾಖ್ಯಾನಿಸಿ, ನಿಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದು. ದುಡ್ಡು ಎಂಬ ವಿಚಾರ ಬಂದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳಿ. ಹಣಕಾಸಿನ ಜವಾಬ್ದಾರಿ ನಿಮ್ಮ ಮೇಲಿರುವಾಗ ಕಾಗದ- ಪತ್ರಗಳನ್ನು, ರಸೀದಿಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಒಟ್ಟಾರೆ ನಿಮ್ಮ ಮೇಲೆ ಅನುಮಾನ ಮೂಡದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಿ.

ಮೀನ
ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಗುರು- ರಾಹು ಇರುವುದರಿಂದ ಸಂಸಾರ ವಿಚಾರ, ಹಣಕಾಸು ಸಂಗತಿ, ನಿಮ್ಮ ಮಾತು ಇವುಗಳೆಲ್ಲದರ ಬಗ್ಗೆಯೂ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಯಾರಿಗೇ ಆದರೂ ಮಾತು ನೀಡುವ ಮುಂಚೆ ಹಾಗೆ ನಡೆದುಕೊಳ್ಳುವುದಕ್ಕೆ ಸಾಧ್ಯವಾ ಎಂಬುದರ ಬಗ್ಗೆ ಆಲೋಚನೆಯನ್ನು ಮಾಡಿ. ಸಾಲ ಪಡೆಯುವುದು, ಸಾಲ ಕೊಡುವುದು ಎರಡೂ ಸಹ ಸವಾಲೇ ಆಗಿರುತ್ತದೆ. ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿ ಹಣ ಇದೆ ಅಂತಾದರೂ ಅದನ್ನು ಅಕ್ಟೋಬರ್ ಕೊನೆ ತನಕ ಹಿಂತೆಗೆದುಕೊಳ್ಳಲು ಆಗದಿರುವಂತೆ ಎಫ್ ಡಿ ಮಾಡಿಸುವುದು ಕ್ಷೇಮ. ಮಾತಿನ ಮೂಲಕವೂ ಸಮಸ್ಯೆ ಮಾಡಿಕೊಳ್ಳುತ್ತೀರಿ. ಆದ್ದರಿಂದ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ.

ಪರಿಹಾರ
ಈ ಮೇಲ್ಕಂಡ ಸಮಸ್ಯೆಗಳಿಗೆ ಪರಿಹಾರ ಏನೆಂದರೆ, ರಾಹು- ಗುರುವಿನ ಆರಾಧನೆ ಮಾಡುವುದು. ಸ್ತೋತ್ರ ಪಠಣ, ಶ್ರವಣ, ಗಣಪತಿ ಆರಾಧನೆ, ಸಾಯಿಬಾಬ, ರಾಘವೇಂದ್ರ ಸ್ವಾಮಿ ಮೊದಲಾದ ಗುರುಗಳ ಆಲಯಕ್ಕೆ ಭೇಟಿ ನೀಡುವುದು, ವಸ್ತ್ರ ಸಮರ್ಪಣೆ ಹೀಗೆ ಯಾವುದೋ ಸಾಧ್ಯವೋ ಅದನ್ನು ಮಾಡುವುದು ಉತ್ತಮ. ಇನ್ನು ಆಯಾ ಕೆಲಸಗಳನ್ನು ಮಾಡುವ ಮುಂಚೆ ಸೂಕ್ತ ಮುಂಜಾಗ್ರತೆ ಸಹ ವಹಿಸಿ

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:49 pm, Mon, 7 August 23