ಈ ವರ್ಷ ಆರಂಭವಾಗುವುದೇ ಬುಧವಾರದಿಂದ. ಬುಧನು ನೀತಿಜ್ಞ, ಕಾರ್ಯಕುಶಲ ಎಲ್ಲವೂ ಹೌದು. ಚಂದ್ರನನ್ನು ಬಿಟ್ಟು ಉಳಿದವರಾರು ಶತ್ರುಗಳಿಲ್ಲ. ಚಂದ್ರ ಬುಧನ ತಾಯಿ. ಚಂದ್ರನಿಗೆ ಬುಧನ ಮೇಲೆ ದ್ವೇಷವಿಲ್ಲ, ಆದರೆ ಬುಧನಿಗೆ ಇದೆ. ಇನ್ನು ಬುಧನು ಶುಭರ ಜೊತೆ ಸೇರಿದರೆ ಶುಭವನ್ನು ಉಂಟುಮಾಡುವನು. ಅಶುಭರ ಜೊತೆ ಸೇರಿ ಅಶುಭವನ್ನು ಕೊಡುವನು. ಹಾಗಾಗಿ ಎಂತಹ ಒಳ್ಳೆಯ ವ್ಯಕ್ತಿಗಳೂ ದುಷ್ಟರ ಶಿಷ್ಟರ ಸಹವಾಸವನ್ನು ಹೆಚ್ಚು ಮಾಡುತ್ತಾರೆ. ಇನ್ನು ಒಂದೇ ರಾಶಿಗಳ ಫಲವನ್ನು ನೋಡೋಣ.
ಮೇಷ ರಾಶಿ: ಈ ರಾಶಿವರಿಗೆ 2025 ಶುಭದಾಯಕವಲ್ಲ. ಏಕೆಂದರೆ ಗುರುಬಲವು ವರ್ಷದ ಮಧ್ಯಾವಧಿಯಲ್ಲಿ ಕಡಿಮೆಯಾಗುತ್ತದೆ. ದ್ವಿತೀಯದಲ್ಲಿ ಇದ್ದ ಗುರು ತೃತೀಯ ಸ್ಥಾನಕ್ಕೆ ಹೋಗಲಿದ್ದಾನೆ ಮತ್ತು ಸಾಡೇ ಸಾಥ್ ಶನಿಯ ಪ್ರಭಾವ ಆರಂಭವಾಗುವುದು. ಇನ್ನು ರಾಹುವು ಏಕಾದಶ ಸ್ಥಾನಕ್ಕೆ ಬರುವನು. ಕೇತುವೂ ಪಂಚಮ ರಾಶಿಗೆ ಬರಲಿದ್ದಾನೆ.
ಆರ್ಥಿಕತೆ: ಸುಭದ್ರತೆಯಲ್ಲಿ ಹಣಕಾಸಿನ ವ್ಯವಸ್ಥೆ ಇದ್ದರೂ ಆರೋಗ್ಯದ ವಿಚಾರಕ್ಕೆ ಖರ್ಚುಮಾಡುವ ಸಂದರ್ಭ ಬರುತ್ತದೆ. ಆದರೂ ಅದಕ್ಕೆ ಚಿಂತೆ ಮಾಡದೇ ಆದಾಯವನ್ನೂ ನೀವು ಪಡೆಯುವಿರಿ.
ವಿವಾಹ: ಈ ವರ್ಷ ನಿಮಗೆ ವಿವಾಹಕ್ಕೆ ಯೋಗ್ಯವಾದ ಕಾಲವಲ್ಲ. ಗುರುಬಲವು ಇಲ್ಲದ ಕಾರಣ ಏಪ್ರಿಲ್ ಅನಂತರ ವಿವಾಹ ಕಾರ್ಯಕ್ಕೆ ಮುನ್ನಡೆಯುವುದು ಬೇಡ. ಪ್ರೇಮವನ್ನು ಯಥಾಸ್ಥಿತಿಯಲ್ಲಿ ಇಟ್ಟು ಕಾಪಾಡಿಕೊಳ್ಳಿ.
ಉದ್ಯೋಗ: ಹಲವಾರು ಗೊಂದಲಗಳಿಂದ ಉದ್ಯೋಗದಲ್ಲಿ ಪೂರ್ಣಪ್ರಮಾಣದ ಯಶಸ್ಸು ಸಿಗದು. ಒಲ್ಲದ ಮನಸ್ಸಿನಿಂದ ಉದ್ಯೋಗವನ್ನು ಮಾಡುವಿರಿ.
ವೃಷಭ ರಾಶಿ: ಈ ರಾಶಿಯವರಿಗೆ ಈ ವರ್ಷ ಶುಭ. ಗುರುವು ದ್ವಿತೀಯ ಸ್ಥಾನಕ್ಕೆ ಪ್ರವೇಶ ಪಡೆಯುವನು. ಶನಿಯು ಏಕಾದಶಕ್ಕೂ ರಾಹುವು ದಶಮ ಹಾಗೂ ಕೇತುವು ಚತುರ್ಥದಲ್ಲಿ ಇರುವುದು ವಿಶೇಷ ಬದಲಾವಣೆಗಳಲ್ಲೊಂದು.
ಆರ್ಥಿಕತೆ: ನಿಮಗೆ ಆರ್ಥಿಕತೆಯಲ್ಲಿ ಉತ್ತಮ ಲಾಭ. ಹಿರಿಯರಿಂದ ನಿಮಗೆ ಸಂಪತ್ತು ಪ್ರಾಪ್ತಿಯಾಗಲಿದೆ. ಏಕಾದಶದಲ್ಲಿ ಶನಿಯಿರುವ ಕಾರಣ ವಿಳಂಬವನ್ನು ಉಂಟುಮಾಡುವನು. ತಾಳ್ಮೆಯಿಂದ ಕೆಲಸ ಸಾಧ್ಯವಾಗುವುದು.
ವಿವಾಹ: ವಿವಾಹಕ್ಕೆ ಈ ವರ್ಷ ಉತ್ತಮ ಕಾಲವಾಗಿದ್ದು ಏಪ್ರಿಲ್ ಅನಂತರ ಇದರ ಬಗ್ಗೆ ಯೋಚಿಸಿ, ಒಂದು ನಿರ್ಧಾರಕ್ಕೆ ಬರುವುದು ಸೂಕ್ತ.
ಉದ್ಯೋಗ: ದಶಮದಲ್ಲಿ ರಾಹುವು ಔದ್ಯೋಗಿಕ ಕಿರಿಕಿರಿಯನ್ನು ತರಿಸುವನು. ಬೇಸರವಾಗುವಷ್ಟು, ನೀವೇ ಉದ್ಯೋಗವನ್ನು ಬಿಡಬೇಕು ಎನ್ನುವವರೆಗೆ ಮಾಡಿಸುವನು. ದೈವೋಪಾಸನೆಯಿಂದ ಆಪತ್ತು ಶಮನವಾಗಲಿದೆ.
ಮಿಥುನ: 2025 ರಲ್ಲಿ ನಿಮಗೆ ಮಿಶ್ರಫಲವಿರಲಿದೆ. ನಿಮ್ಮ ರಾಶಿಗೆ ಗುರುವಿನ ಪ್ರವೇಶವಾಗಲಿದೆ. ಶನಿಯು ದಶಮದಲ್ಲಿ ರಾಹು ಕೇತುಗಳು ನವಮ ಹಾಗೂ ತೃತೀಯದಲ್ಲಿ ಇರುವರು. ಇವರ ಪ್ರಭಾವವು ವಿಶೇಷವಾಗಿ ಇರುವುದು.
ಆರ್ಥಿಕತೆ: ಈ ರಾಶಿಯವರಿಗೆ ಹಣಕಾಸಿನ ತೊಂದರೆ ಕಾಣಿಸದಿದ್ದರೂ ಯಾವದೂ ಉನ್ನತಿ ಅವನತಿಗಳು ವಿಶೇವಾಗಿ ಇರದು. ಯಥಾಸ್ಥಿತಿಯಲ್ಲಿ ತಮ್ಮನ್ನು ಕಾಪಾಡಿಕೊಂಡು ಜೀವನ ನಡೆಸಬೇಕಾಗುವುದು.
ವಿವಾಹ: ಗುರುಬಲವು ಪೂರ್ಣವಾಗಿ ಈ ರಾಶಿಯವರಿಗೆ ಇಲ್ಲ. ಹಾಗಾಗಿ ಅಂತಹ ಅನಿವಾರ್ಯತೆ ಕಂಡರೆ ಶಾಂತಿಗಳ ಮೂಲಕ ಮಾಡಿಕೊಳ್ಳಬಹುದು. ಅದೂ ಏಪ್ರಿಲ್ ಅನಂತರ. ಅದಕ್ಕಿಂತ ಮೊದಲಲ್ಲ.
ಉದ್ಯೋಗ: ಹಳೆಯ ಉದ್ಯೋಗಿಗಳಿಗೆ ಮಾನಸಿಕ ಕಿರಿಕಿರಿ, ಉದ್ಯೋಗದಲ್ಲಿ ಭಡ್ತಿ ಇವು ಕಷ್ಟಸಾಧ್ಯ. ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಅಲೆದಾಟ ಹೆಚ್ಚು. ಬೌದ್ಧಿಕ ಕೆಲಸಗಳನ್ನು ಮಾಡುವಂತಹವರಿಗೆ ಸುಲಭಕ್ಕೆ ಉದ್ಯೋಗ ಸಿಗದು.
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಈ ವರ್ಷದಂತೆ ಎಲ್ಲವೂ ಇದ್ದರೂ ಅಲ್ಪ ಬದಲಾವಣೆ ಕಾಣಿಸಿಕೊಳ್ಳುವುದು. ಗುರುವು ಏಪ್ರಿಲ್ ನ ಅನಂತರ ನಿಮಗೆ ಬಲಹೀನನಾಗುವ ಕಾರಣ ಯಾವುದೇ ಹೊಸ ಕೆಲಸಗಳನ್ನು ಮಾಡಲು ಆಗದೇ ಹೋಗಬಹುದು.
ಆರ್ಥಿಕತೆ: ನಿಮ್ಮ ದ್ವಿತೀಯ ಸ್ಥಾನಕ್ಕೆ ಕೇತುವು ಏಪ್ರಿಲ್ ಅನಂತರ ಬರಲಿದ್ದಾನೆ. ಯಾವುದೋ ಮಾರ್ಗದಲ್ಲಿ ನಿಮಗೆ ಹಣ ಬಂದು ಸೇರುತ್ತದೆ. ಆದರೆ ಅದನ್ನು ನಿರ್ವಹಿಸಲು, ಉಳಿಸಿಕೊಳ್ಳಲು ಕಷ್ಟವಾಗುವುದು.
ವಿವಾಹ: ವಿವಾಹವು ನಿಶ್ಚಿತವಾಗಿದ್ದರೆ ಏಪ್ರಿಲ್ ಒಳಗೆ ಮುಗಿಸಿಕೊಳ್ಳಿ. ಇಲ್ಲವಾದರೆ ವರ್ಷ ಕಾಯಬೇಕು. ವೈವಾಹಿಕ ವಿಚಾರವನ್ನು ಸಂಗಾತಿಗಳು ಹೇಳಿಕೊಳ್ಳುವುದು ಉತ್ತಮ.
ಉದ್ಯೋಗ: ಉದ್ಯೋಗದಲ್ಲಿ ಉತ್ಸಾಹ ಕಡಿಮೆಯಾಗಿ, ಬೇರೆ ಏನನ್ನಾದರೂ ಮಾಡುವ ಯೋಚನೆ ಬರುವುದು. ಅಥವಾ ಹೊಸತನ್ನು ಮಾಡಬೇಕು ಎನ್ನುವ ಆಲೋಚನೆ ಯಾರಿಂದಲಾದರೂ ಸಿಗುವುದು.
ಸಿಂಹ ರಾಶಿ: ಈ ರಾಶಿಯವರಿಗೆ 2025 ಮಿಶ್ರಫಲವನ್ನು ಕೊಡುತ್ತದೆ. ಗುರು ಏಕಾದಶ ಸ್ಥಾನಕ್ಕೆ ಬಂದರೂ ಶನಿಯು ಅಷ್ಟಮಕ್ಕೆ ಪ್ರವೇಶ ಮಾಡುವನು. ಹಾಗಯೇ ಕೇತುವು ನಿಮ್ಮ ರಾಶಿಗೆ, ರಾಹುವು ಸಪ್ತಮಸ್ಥಾನಕ್ಕೆ ಬರುವ ಕಾರಣ ಶುಭಕ್ಕೆ ಅವಕಾಶವಿದ್ದರೂ ಅದು ಅಶುಭದಲ್ಲಿ ಮರೆಯಾಗುವುದು.
ಆರ್ಥಿಕತೆ: ಈ ವರ್ಷ ಆರ್ಥಿಕತೆಗೆ ಸಂಬಂಧಿಸಿದಂತೆ ಜೂನ್ ತಿಂಗಳ ಅನಂತರ ನಿಮ್ಮ ಗಮನಕ್ಕೆ ಬರಲಿದೆ. ಅದರಲ್ಲಿಯೂ ಬೋಧನಾ ವರ್ಗಕ್ಕೆ ಆದಾಯದ ಹರಿವು ಅಧಿಕವಾಗುವುದು.
ವಿವಾಹ: ವೈವಾಹಿಕ ಮಾತುಕತೆಗಳು ವರ್ಷದ ಆರಂಭದಲ್ಲಿ ನಡೆದರೂ ಅದು ಮುಂದುವರಿಯದು. ವರ್ಷದ ಕೊನೆಗೆ ಸಪ್ಟೆಂಬರ್ ತಿಂಗಳಲ್ಲಿ ಸಂಬಂಧವು ಕೂಡಿಬರುವುದು.
ಉದ್ಯೋಗ: ವರ್ಷದ ಆರಂಭದಲ್ಲಿ ಉದ್ಯೋಗಕ್ಕೆ ಯಾವುದೇ ಅಪಾಯ ಕಾಣಿಸದು. ವರ್ಷಾಂತ್ಯದಲ್ಲಿ ಅನನುಕೂಲತೆಯು ಒಂದೊಂದಾಗಿಯೇ ಸೃಷ್ಟಿಯಾಗಲಿದೆ. ಅದನ್ನು ಅತಿರೇಕವಾಗಿ ಸ್ವೀಕರಿಸದೆ ತಾಳ್ಮೆಯಿಂದ ನಿಭಾಯಿಸುವ ಚಾಣಾಕ್ಷತೆ ಬೇಕು.
ಕನ್ಯಾ ರಾಶಿ: ಕಳೆದ ವರ್ಷ ಸಿಹಿಯನ್ನೇ ಉಂಡ ನಿಮಗೆ ಈ ವರ್ಷ ಕೆಲವು ಕಹಿಯೂ ಸಿಗಲಿದೆ. ಅದನ್ನು ಪಡೆಯಲು ಸಿದ್ಧರಾಗಬೇಕು. ಗುರುಬಲವು ಕ್ಷೀಣಿಸಲಿದೆ. ಶನಿಯು ಸಪ್ತಮಕ್ಕೆ ಬರುವನು. ನಿಮ್ಮ ರಾಶಿಯ ಕೇತು ದ್ವಾದಶಕ್ಕೂ ರಾಹುವು ಷಷ್ಠಕ್ಕೂ ಬರುವನು.
ಆರ್ಥಿಕತೆ: ದ್ವಾದಶದಲ್ಲಿ ಕೇತುವು ಅನವಶ್ಯಕ ಖರ್ಚು, ಪಾಪ ಕಾರ್ಯಗಳಿಗೆ ಪ್ರೇರಣೆ ನೀಡಿ ಹಣವನ್ನು ಖಾಲಿ ಮಾಡಿಸುವನು. ಮೇ ತಿಂಗಳಿನಿಂದ ಆಗಷ್ಟ್ ವರೆಗೆ ಆದಾಯ ಪ್ರಮಾಣ ಚೆನ್ನಾಗಿರುವುದು. ಅನಂತರ ವ್ಯತ್ಯಾಸವನ್ನು ಕಾಣಬೇಕಾಗುವುದು.
ವಿವಾಹ: ವಿವಾಹಕ್ಕೆ ಮೇ ತಿಂಗಳ ಒಳಗೇ ಸೂಕ್ತ ಕಾಲವಿದೆ. ಆದಷ್ಟು ಆಗಲೇ ಆದರೆ ಉತ್ತಮ. ಅನಂತರ ವಿವಾಹವಾದರೆ ಕೆಲವು ಬಾಧಕಗಳನ್ನು ಎದುರಿಸಬೇಕಾದೀತು. ಸಂಗಾತಿಯ ಕಡೆಯಿಂದ ಕಟು ಮಾತುಗಳು ಕೇಳಿಬರುವುದು.
ಉದ್ಯೋಗ: ಉದ್ಯೋಗವನ್ನು ಬದಲಿಸವ ಮನಸ್ಸಿದ್ದರೆ ಜೂನ್ ನಲ್ಲಿ ಬದಲಿಸಬಹುದು. ನಿಮಗೆ ಹೆಚ್ಚು ಆಯ್ಕೆಗಳೂ ಸಿಗುತ್ತವೆ. ಒಳ್ಳೆಯ ಆದಾಯದ ಉದ್ಯೋಗಕ್ಕೆ ಅವಕಾಶ ಸಿಗುವುದು.
ತುಲಾ ರಾಶಿ: ಈ ರಾಶಿಗೆ ಈ ವರ್ಷದ ಶುಭ. ಅಷ್ಟಮದಲ್ಲಿ ಗುರು ಹಾಗೂ ಪಂಚಮದಲ್ಲಿ ಶನಿ ಇದ್ದು ಅನೇಕ ತೊಂದರೆ ಅಪಮಾನಗಳನ್ನು ಕಂಡಿದ್ದೀರಿ. ಇದೆಲ್ಲವೂ ದೂರವಾಗಿ ನೆಮ್ಮದಿಯ ಗಾಳಿ ಬೀಸುವ ಕಾಲ. ಮೇ ತಿಂಗಳ ರಾಹುವು ಪಂಚಮಕ್ಕೂ ಕೇತುವು ಏಕಾದಶಕ್ಕೂ ಬರುವರು. ಎರಡು ಶುಭ ಸ್ಥಾನದಲ್ಲಿ ಅಶುಭ ಗ್ರಹಗಳ ಪ್ರವೇಶ.
ಆರ್ಥಿಕತೆ: ನಿಮ್ಮ ಆದಾಯದ ಮೂಲ ಸರಿಯಾಗಿರಲಿ. ಹಣ ಸಿಗುತ್ತದೆ ಎಂದು ಯಾವುದಾದರೂ ಕೆಲಸಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳಬೇಕಾಗಬಹುದು. ಒಳ ಹರಿವು ಈ ವರ್ಷ ಚನ್ನಾಗಿ ಇರಲಿದೆ.
ವಿವಾಹ: ವಿವಾಹವಾಗದೇ ಸಂಕಟದಲ್ಲಿ ಇರುವವರಿಗೆ ವಿವಾಹಕ್ಕೆ ಅವಕಾಶವಿದೆ. ಪ್ರೇಮವಿವಾಹವು ಆಗಲಿದೆ. ಏಪ್ರಿಲ್ ಅನಂತರ ಇದರ ಬಗ್ಗೆ ಆಲೋಚಿಸಿ.
ಉದ್ಯೋಗ: ಉದ್ಯೋಗದಲ್ಲಿ ಉನ್ನತಿಯನ್ನು ಕಾಣಲು ಸ್ವಲ್ಪ ಸಮಯ ಬೇಕು. ಅಭಿವೃದ್ಧಿಯನ್ನು ಒಮ್ಮೆಲೆ ನಿರೀಕ್ಷಿಸುವುದು ಕಷ್ಟ. ದಿಢೀರ್ ಬೆಳವಣಿಗೆಯಿಂದ ಅಪಾಯವೂ ಪಕ್ಕದಲ್ಲಿ ಇರುವುದು.
ವೃಶ್ಚಿಕ ರಾಶಿ: ಕಳೆದ ವರ್ಷ ಸುಖಿಗಳಾಗಿದ್ದು ಕುಟುಂಬ, ಉದ್ಯೋಗದಲ್ಲಿ ಅಂದುಕೊಂಡಿದ್ದನ್ನು ಸಾಧಿಸಿದ್ದೀರಿ. ಆದರೆ ಈ ವರ್ಷ ಕಷ್ಟವಾಗುವುದು. ಗುರುವು ಅಷ್ಟಮಸ್ಥಾನಕ್ಕೆ ಹೋಗವನು. ಗುರುಬಲವಿಲ್ಲದೇ ಎಲ್ಲ ನಕಾರಾತ್ಮಕ ಅಂಶಗಳಾಗಿ ಬರಲಿದೆ. ಶನಿಯು ಪಂಚಮ ಶನಿಯಾಗುವನು. ಕೇತುವು ದಶಮಕ್ಕೆ ಹಾಗೂ ರಾಹುವು ಚತುರ್ಥಕ್ಕೂ ಬರಲಿದ್ದಾನೆ.
ಆರ್ಥಿಕತೆ: ನಷ್ಟವು ಈ ಬಾರಿ ನಿಮಗೆ ತಲೆ ನೋವಾಗಬಹುದು. ಯಾವ ಕಡೆಯಿಂದ ತೊಂದರೆ ಬರುತ್ತದೆ ಎಂದು ಊಹಿಸಲಾಗದು. ಅನಾರೋಗ್ಯದಿಂದಾಗಿಯೂ ನಷ್ಟ ಮಾಡಿಕೊಳ್ಳುವಿರಿ.
ವಿವಾಹ: ಏಪ್ರಿಲ್ ತಿಂಗಳ ಒಳಗೆ ವಿವಾಹ ಕಾರ್ಯವನ್ನು ಮುಗಿಸಿ. ಅನಂತರ ಗುರುಬಲವಿರದು. ಆತುರದಲ್ಲಿ ಏನನ್ನೂ ಮಾಡದೇ ಸಮಾಧಾನದಿಂದ ಇದ್ದರೆ ನಿಮಗೇ ಒಳ್ಳೆಯದು.
ಉದ್ಯೋಗ: ಉದ್ಯಮ ಅಥವಾ ಉದ್ಯೋಗದಲ್ಲಿ ಹಿನ್ನಡೆ. ಆದಾಯ ಕುಂಠಿತವಾಗಿ ಚಿಂತೆಗೆ ಒಳಗಾಗುವ ಸ್ಥಿತಿ ಬರಲಿದೆ. ಉದ್ಯೋಗದಲ್ಲಿ ಸ್ಥಾನಭ್ರಷ್ಟರಾಗಬಹುದು. ನಿಮ್ಮ ಕಾರ್ಯದಲ್ಲಿ ದಕ್ಷತೆ ಕಡಿಮೆಯಾದಂತೆ ತೋರುವುದು.
ಧನು ರಾಶಿ: ಈ ವರ್ಷ ನಿಮಗೆ ಕಳೆದ ವರ್ಷಕ್ಕಿಂತ ಶುಭವು ಅಧಿಕವೇ. ಮಾನಸಿಕ ಹಿಂಸೆಗಳು ವರ್ಷದ ಮಧ್ಯಾವಧಿಯಿಂದ ದೂರಾಗಲಿದೆ. ಗುರುವು ಸಪ್ತಮ ರಾಶಿಗೆ ಹೋಗುತ್ತಾನೆ ಮತ್ತು ನಿಮ್ಮ ರಾಶಿಯನ್ನು ನೋಡುವ ಕಾರಣ ಗುರುವಿನ ಅನುಗ್ರಹವನ್ನು ಪ್ರತ್ಯಕ್ಷವಾಗಿಯೂ ಪಡೆಯಬಹುದಾಗಿದೆ. ಶನಿಯು ಚತುರ್ಥಕ್ಕೆ ಹೋಗಲಿದ್ದು ಕುಟುಂಬದಲ್ಲಿ ಬೆರೆಯುವ ಉತ್ಸಾಹವಿರದು.
ಆರ್ಥಿಕತೆ: ಇಡೀ ವರ್ಷ ಆರ್ಥಿಕ ದೃಷ್ಟಿಯಿಂದ ಗಣನೀಯ ವ್ಯತ್ಯಾಸ ಕಾಣಿಸದು. ಆದರೂ ಸಂತೋಷಕ್ಕೆ ಯಾವುದೇ ತೊಂದರೆ ಇರದು. ಹಣಕಾಸಿನ ಚಿಂತೆ ಕಾಡದು. ವರ್ಷದ ಅಂತ್ಯಕ್ಕೆ ಆದಾಯದ ಮೂಲವು ಹೆಚ್ಚಾದಂತೆ ಕಾಣಿಸುತ್ತದೆ. ಒಳ್ಳೆಯ ಉದ್ಯೋಗಕ್ಕೆ ಬದಲಾಗುವಿರಿ.
ವಿವಾಹ: ವಿವಾಹಕ್ಕೆ ಉತ್ತಮ ಕಾಲ ಕೂಡಿಬಂದಿದ್ದು ಜೂನ್ ಅನಂತರ ನಿಮ್ಮ ವಿವಾಹ ನೆರವೇರುವುದು. ಒಳ್ಳೆಯ ಕುಲದ ಸುಶಿಕ್ಷಿತ ಸಂಗಾತಿಯನ್ನು ನೀವು ವರಿಸುವಿರಿ. ವಿವಾಹ ಜೀವನದಲ್ಲಿ ನೆಮ್ಮದಿ ಇರುವುದು.
ಉದ್ಯೋಗ: ಸಪ್ಟೆಂಬರ್ ನಲ್ಲಿ ನಿಮ್ಮ ಉದ್ಯೋಗದಲ್ಲಿ ಒತ್ತಡ ಕಾಣಿಸುವುದು. ಉದ್ಯೋಗವನ್ನು ಬಿಡುವ ಮನಸ್ಸೂ ಮಾಡುವಿರಿ. ತಾಳ್ಮೆಯಿಂದ ಇದ್ದರೆ ಒತ್ತಡವು ಕಡಿಮೆಯಾಗಿ ಯಥಾಸ್ಥಿತಿಯಲ್ಲಿ ಇರಲು ಸಾಧ್ಯ.
ಮಕರ ರಾಶಿ: ನಿಮ್ಮ ಆಸೆಗಳನ್ನು ಪೂರೈಸಿಕೊಂಡು ಸಂತೋಷದಿಂದ ಇರುವ ನಿಮಗೆ ಈ ವರ್ಷ ಒತ್ತಡ ಅಧಿಕ. ಶತ್ರುಗಳು, ಹಿರಿಯರ ದ್ವೇಷ, ಆರೋಗ್ಯದ ಹಾನಿ ಎಲ್ಲವೂ ನಿಮಗೆ ಕಿರಿ ತರುವುದು. ಒಂದು ಲಾಭವೆಂದರೆ ಸಾಡೇಸಾಥ್ ಶನಿಯಿಂದ ಮುಕ್ತಿಯನ್ನು ಪಡೆಯುವಿರಿ.
ಆರ್ಥಿಕತೆ: ನಿಮಗೆ ಬರಬೇಕಾದ ಹಣ ಬರಲಿದೆ. ಅಥವಾ ಯಾವುದಾದರೂ ಬೇರೆ ಕಾರ್ಯಗಳಿಂದ ಆದಾಯವನ್ನು ಪಡೆಯುವಿರಿ. ಅತಿಯಾಗಿ ಹೋದರೆ ಆಪತ್ತು ನಿಮ್ಮದಾಗಬಹುದು. ಎಚ್ಚರಿಕೆಯಿಂದ ಇರುವುದು ಉತ್ತಮ.
ವಿವಾಹ: ಏಪ್ರಿಲ್ ಒಳಗೆ ವಿವಾಹ ಶುಭಕಾರ್ಯವನ್ನು ಮಾಡಿಕೊಳ್ಳಿ. ಅನಂತರ ಶುಭ ಸಮಯವಿಲ್ಲ. ಅಕಸ್ಮಾತ್ ಉಂಟಾದ ಪ್ರೇಮವು ಬೇಸರದಲ್ಲಿ ಕೊನೆಯಾಗುವುದು.
ಉದ್ಯೋಗ: ನವೆಂಬರ್ ತಿಂಗಳಲ್ಲಿ ಉದ್ಯಮದಲ್ಲಿ ಇಳಿಮುಖ ಕಾಣಿಸುವುದು. ಆದರೆ ಇದರ ಆದಾಯವನ್ನು ಮೊದಲೇ ಪಡೆದ ಕಾರಣ ಚಿಂತೆ ಇದ್ದರೂ ಸಮಾಧಾನ ಕಾಣಿಸುವುದು.
ಕುಂಭ ರಾಶಿ: ಗುರುಬಲವು ಈ ವರ್ಷ ಅಧಿಕವಾಗಿ ಇರುವುದು. ನಿಮ್ಮ ರಾಶಿಯಲ್ಲಿ ಇದ್ದ ಶನಿ ಮೇ ತಿಂಗಳಲ್ಲಿ ಬದಲಾಗುವನು. ಸಾಡೇಸಾಥ್ ನ ಅರ್ಧ ಭಾಗ ಕಳೆದಂತಾಗಲಿದೆ. ಆದರೆ ರಾಹುವು ನಿಮ್ಮ ರಾಶಿಯನ್ನು ಪ್ರವೇಶ ಮಾಡುವನು. ಕೇತುವು ಸಪ್ತಮದಲ್ಲಿ ಇರಲಿದ್ದಾನೆ.
ಆರ್ಥಿಕತೆ: ನಿಮ್ಮ ಆರ್ಥಿಕ ವಿಚಾರದಲ್ಲಿ ಈ ವರ್ಷ ಮಂದಗತಿ ಕಾಣಿಸುವುದು. ಸತತ ಪ್ರಯತ್ನದ ಫಲವಾಗಿ ಅಂತೂ ನಿಮಗೆ ಬರಬೇಕಾದ ಹಣವು ಸಿಗಲಿದೆ. ನೆಮ್ಮದಿ ಪಡೆಯುವಿರಿ.
ವಿವಾಹ: ಏಪ್ರಿಲ್ ತಿಂಗಳಲ್ಲಿ ನಿಮಗೆ ವಿವಾಹ ಭಾಗ್ಯ ಕೂಡಿಬರಲಿದ್ದು ಜೂನ್ ಅನಂತರ ವಿವಾಹಕ್ಕೆ ನಿರ್ಧಾರ ಮಾಡಬಹುದು. ತಂದೆಯು ನಿಮ್ಮ ವಿವಾಹದ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಉದ್ಯೋಗ: ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಮಾರ್ಚ್ ನಿಂದ ಏಪ್ರಿಲ್ ಒಳಗೆ ಮುಂದುವರಿದರೆ ಮುಖ್ಯ ಕಾರ್ಯಗಳು ಮುಕ್ತಾಯವಾಗಲಿದೆ. ಅನಂತರ ಶೇಷಕರ್ಮವನ್ನು ಮಾಡಬಹುದು.
ಮೀನ ರಾಶಿ: ಎಲ್ಲ ಕಾರ್ಯದಿಂದ ಬೇಸರಗೊಂಡ ನಿಮಗೆ ಈ ವರ್ಷ ಹೊಸ ಬೆಳಕು ಅಲ್ಪವಾಗಿ ಕಾಣಿಸಲಿದೆ. ಗುರುವು ಚತುರ್ಥ ಸ್ಥಾನಕ್ಕೆ ಹೋಗಲಿದ್ದಾನೆ. ಸಾಡೇಸಾಥ್ ಶನಿಯು ಮಧ್ಯಭಾಗದಲ್ಲಿ ನೀವು ಇದ್ದೀರಿ. ರಾಹುವು ದ್ವಾದಶ ಹಾಗೂ ಕೇತು ಷಷ್ಠದಲ್ಲಿ ಇರುವರು.
ಆರ್ಥಿಕತೆ: ವರ್ಷಾರಂಭದ ಕೆಲವು ತಿಂಗಳು ಆರ್ಥಿಕತೆಯಲ್ಲಿ ಯಾವ ನಿರೀಕ್ಷೆಯೂ ಬೇಡ. ವರ್ಷ ಮಧ್ಯದಲ್ಲಿ ಕುಂಟುತ್ತ ಸಾಗುವ ಆರ್ಥಿಕ ಸ್ಥಿತಿ, ಅಂತ್ಯದಲ್ಲಿ ಎಂದು ಹಂತವನ್ನು ತಲುಪಿ, ನೆಮ್ಮದಿಯನ್ನು ನೀಡಲಿದೆ.
ವಿವಾಹ: ವಿವಾಹಕ್ಕೆ ಸದ್ಯ ಯಾವುದೇ ಪ್ರಯತ್ನ ಬೇಡ. ಮಾಡಿದರೂ ನಿಷ್ಪ್ರಯೋಜಕವಾದೀತು. ಜೂನ್ ಅನಂತರ ಸಪ್ಟೆಂಬರ್ ನಲ್ಲಿ ವಿವಾಹಕ್ಕೆ ಯೋಚಿಸಬಹುದು.
ಉದ್ಯೋಗ: ಮನೆಯ ಸಮೀಪದಲ್ಲಿ ಉದ್ಯೋಗ ಪ್ರಾಪ್ತಿ. ಲೆಕ್ಕ ಪತ್ರ ವಿಭಾಗದವರಿಗೆ ಒಳ್ಳೆಯ ಕೆಲಸ ಸಿಗಲಿದೆ. ಶಿಕ್ಷಣ ಕ್ಷೇತ್ರದವರೂ ಸ್ಥಾನಮಾನದೊಂದಿಗೆ ವ್ಯವಸ್ಥಿತ ಉದ್ಯೋಗದಲ್ಲಿ ಸಂತೋಷದಿಂದ ಇರುವಿರಿ.
ಲೋಹಿತ ಹೆಬ್ಬಾರ್, ಇಡುವಾಣಿ