ಮೇಷ ರಾಶಿ : ಜನವರಿ ತಿಂಗಳಲ್ಲಿ ಮೊದಲ ರಾಶಿಯವರಿಗೆ ಮಿಶ್ರಫಲ. ರಾಶಿಯ ಅಧಿಪತಿ ನೀಚನಾಗಿ ಸುಖವನ್ನು, ಧೈರ್ಯವನ್ನು ಕೊಡಲಾರ. ದ್ವಾದಶದಲ್ಲಿ ಶುಕ್ರನು ಬೇಡದ ಕಾರ್ಯಕ್ಕೆ ಹಣವನ್ನು ಖಾಲಿ ಮಾಡಿಸುವನು. ಗುರುವು ದ್ವಿತೀಯದಲ್ಲಿ ಇದ್ದು ಮತ್ತಾವುದೋ ಮೂಲದಿಂದ ಹಣದ ಹರಿವಿಗೆ ದಾರಿ ಮಾಡುವನು. ಸೂರ್ಯ ಮತ್ತು ಬುಧರು ದಶಮದಲ್ಲಿ ನಿಮ್ಮ ವೃತ್ತಿಯಲ್ಲಿ ಉನ್ನತ ಸ್ಥಾನ ಸಿಗಲಿದೆ. ವಿದೇಶ ಪ್ರವಾಸವು ರದ್ದಾಗಿದ್ದು ಅಪಮಾನದಂತೆ ಆಗುವುದು. ಕಾರ್ತಿಕೇಯನ ಸ್ತೋತ್ರದಿಂದ ಎಲ್ಲದಕ್ಕೂ ಪುಷ್ಟಿ ಕೊಡುವನು.
ವೃಷಭ ರಾಶಿ : ಈ ರಾಶಿಯವರಿಗೆ ಜನವರಿ ತಿಂಗಳಲ್ಲಿ ಶುಭ. ಗುರುವು ನಿಮ್ಮ ರಾಶಿಯಲ್ಲಿ ಇದ್ದರೂ ಪೂರ್ಣ ಬಲವಿಲ್ಲ. ಆದರೂ ಯಾವುದೇ ತೊಂದರೆ ಆಗದು. ರಾಶಿಯ ಅಧಿಪತಿ ಶುಕ್ರ ಏಕಾದಶದಲ್ಲಿ ಇದ್ದು ಆದಾಯದ ಮೂಲವನ್ನು ಹೆಚ್ಚಿಸುವನು. ಇದು ಶ್ರಮದಿಂದ ಸಾಧ್ಯವಾಗುವುದು. ಬುಧ ಹಾಗು ಸೂರ್ಯರು ನವಮದಲ್ಲಿ ನಿಮಗೆ ಗೌರವ ತಂದೆಯಿಂದ ಪ್ರೀತಿಯನ್ನು, ಬಂಧುಗಳ ಸಹಕಾರವನ್ನು ಮಾಡಿಸುವರು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಕಷ್ಟ. ಗಣಪತಿಯ ಉಪಾಸನೆಯಿಂದ ಅಭೀಷ್ಟಸಿದ್ಧಿ.
ಮಿಥುನ ರಾಶಿ :ಮೊದಲ ಮಾಸದಲ್ಲಿ ನಿಮಗೆ ಅಶುಭ ಫಲ. ಗುರುವಿನ ಬಲವಿಲ್ಲದೇ ಎಲ್ಲವೂ ಅತಂತ್ರ, ಸಮಾಧಾನ. ಶುಕ್ರನು ದಶಮಕ್ಕೆ ಬಂದರೂ ರಾಹುವಿನ ಜೊತೆ ಇರುವ ಕಾರಣ ಉದ್ಯೋಗದಲ್ಲಿ ಸಂಪತ್ತು ಸಿಕ್ಕರೂ ನೆಮ್ಮದಿ ಸಿಗದು. ಅಷ್ಟಮದಲ್ಲಿ ಬುಧ ಹಾಗೂ ಸೂರ್ಯರಿಂದ ಅನಾರೋಗ್ಯ ಹೆಚ್ಚಾಗಿ ಮತ್ತೆ ಕ್ಷೀಣಿಸುವುದು. ದ್ವಿತೀಯದಲ್ಲಿ ಕುಜನು ನಿಸ್ಸತ್ತ್ವನಾಗಿ ಯಾವುದರಲ್ಲಿಯೂ ಉತ್ಸಾಹ ಇಲ್ಲದಂತೆ ಮಾಡುವನು. ಕೌಟುಂಬಿಕ ವಿರಸವನ್ನು ಹೇಳಿಕೊಳ್ಳಲಾಗದು. ಲಕ್ಷ್ಮೀನಾರಾಯಣ ಹೃದಯವನ್ನು ಪಠಿಸಿ.
ಕರ್ಕಾಟಕ ರಾಶಿ :ನಾಲ್ಕನೇ ರಾಶಿಯವರಿಗೆ ಜನವರಿ ತಿಂಗಳು ಶುಭ. ಗುರುವು ಏಕಾದಶದಲ್ಲಿ ಹಾಗೂ ಶುಕ್ರನು ನವಮದಲ್ಲಿ ಇರುವುದು ಪ್ರಶಸ್ತವಾಗಿದೆ. ಭಾಗ್ಯದಾಯಕನಾಗಿ ಅಂದುಕೊಂಡಿದ್ದು ನೆರವೇರುವಂತೆ ಮಾಡುವನು. ಭೋಗಕ್ಕೆ ಬೇಕಾದ ವಸ್ತುಗಳನ್ನು ಪಡೆಯಲು ಸಂಪತ್ತು ನೀಡುವನು. ಸೂರ್ಯ ಹಾಗೂ ಬುಧರು ಸಪ್ತಮದಲ್ಲಿ ಇದ್ದಾರೆ. ಸಂಗಾತಿಯ ಬಗ್ಗೆ ವಿಶೇಷ ಕಾಳಜಿ ಬೇಕು. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದು. ಕುಜನು ನಿಮ್ಮ ರಾಶಿಯಲ್ಲಿ ಇದ್ದು ಧೈರ್ಯ ಮಾಡಲು ಅವಕಾಶ ಕೊಡನು. ಸುಬ್ರಹ್ಮಣ್ಯನ ಉಪಾಸನೆಯು ಖಿನ್ನತೆಯಿಂದ ಹೊರಬರಲು ಸಾಧ್ಯ.
ಸಿಂಹ ರಾಶಿ : ಹೊಸ ವರ್ಷದ ಮೊದಲ ತಿಂಗಳಲ್ಲಿ ನಿಮಗೆ ಶುಭಾಶುಭ. ರಾಶಿಯ ಅಧಿಪತಿ ಶತ್ರುವಿನ ರಾಶಿಯಲ್ಲಿ ಇದ್ದಾನೆ. ಬುಧನೂ ಜೊತೆಗಿದ್ದು ನಿಮಗಿಂತ ಸಣ್ಣವರ ಬಳಿ ತಿಳಿವಳಿಕೆಯನ್ನು ಪಡೆಯಬೇಕಾಗುವುದು. ದ್ವಿತೀಯದಲ್ಲಿ ಹಾಗೂ ವ್ಯಯದಲ್ಲಿ ಅಶುಭ ಗ್ರಹರೇ ಇದ್ದು ಆರ್ಥಿಕ ಸ್ಥಿತಿಯು ಕಷ್ಟವೆನಿಸುವಂತೆ ಆಗಬಹುದು. ಶುಕ್ರನು ಅಷ್ಟಮದಲ್ಲಿ ರಾಹುವಿನ ಜೊತೆ ಇದ್ದು ಸಂಗಾತಿಯಿಂದ ನೋವು ಕೊಡಿಸುವನು. ಭೋಗ ವಸ್ತುಗಳಿಂದ ದೂರವಿರಬೇಕಾದ ಸ್ಥಿತಿ ಬರುವುದು. ದಶಮದಲ್ಲಿ ಗುರುವು ಬೋಧಕ ವೃಂದಕ್ಕೆ ಅನುಕೂಲ ಮಾಡಿಕೊಡುವನು. ಪ್ರಾತಃಕಾಲದಲ್ಲಿ ಸೂರ್ಯೋಪಾಸನೆಯನ್ನು ಅವಶ್ಯ ಮಾಡಿ.
ಕನ್ಯಾ ರಾಶಿ :ಜನವರಿ ತಿಂಗಳಲ್ಲಿ ರಾಶಿ ಚಕ್ರದ ಆರನೇ ರಾಶಿಯವರಿಗೆ ಶುಭ. ಗುರು ಬಲ ಹಾಗೂ ಗುರು ದೃಷ್ಟಿ ಎರಡೂ ಇದೆ. ರಾಶಿಯ ಅಧಿಪತಿ ಪಂಚಮದಲ್ಲಿ ಸೂರ್ಯನ ಜೊತೆ ಇದ್ದಾನೆ. ಬೌದ್ಧಿಕ ವಿಚಾರದಲ್ಲಿ ನಿಮಗೆ ಯಶಸ್ಸು. ಸರಿಯಾದ ತೀರ್ಮಾನವನ್ನು ಕಾಲಕ್ಕೆ ಸರಿಯಾಗಿ, ಯೋಗ್ಯವಾದುದನ್ನೇ ತೆಗೆದುಕೊಳ್ಳುವಿರಿ. ಶುಕ್ರನು ರಾಹುವಿನ ಜೊತೆ ಇದ್ದು ಸಂಗಾತಿಯ ನಡುವೆ ವೈಮನಸ್ಯ ಬರುವಂತೆ ಮಾಡುವನು. ಕೇತುವು ನಿಮ್ಮ ರಾಶಿಯಲ್ಲಿ ಇರುವುದರಿಂದ ಸಂಗಾತಿಯ ಬಗ್ಗೆ ಸಂದೇಹಗಳೂ ಬರುತ್ತವೆ. ಕುಜನು ಏಕಾದಶದಲ್ಲಿ ನೀಚನಾಗಿದ್ದಾನೆ. ಆದಾಯದ ವಿಚಾರದಲ್ಲಿ ಗಲಾಟೆಗಳು ನಡೆಯುವುದು. ಮಹಾವಿಷ್ಣುವಿನ ಸ್ತೋತ್ರ ಮಾಡಿ.
ತುಲಾ ರಾಶಿ : ರಾಶಿ ಚಕ್ರದ ಏಳನೇ ರಾಶಿಯವರಿಗೆ ಜನವರಿ ತಿಂಗಳಲ್ಲಿ ಅಶುಭ. ರಾಶಿಯ ಅಧಿಪತಿ ಶುಕ್ರನು ಈ ತಿಂಗಳ ಅಂತ್ಯದಲ್ಲಿ ಷಷ್ಠ ಸ್ಥಾನವನ್ನು ಪ್ರವೇಶಿಸುವ ಕಾರಣ ಉತ್ತಮಕುಲದ ಸ್ತ್ರೀಯಿಂದ ಅಪವಾದ, ಅವರ ವಿರೋಧ ಕಟ್ಟಿಕೊಳ್ಳಬೇಕಾಗುವುದು. ಸಂಪತ್ತನ್ನು ಅಪ್ರಯೋಜಕ ಕಾರ್ಯಕ್ಕೆ ವಿನಿಯೋಗಿಸಿ ಕಳೆದುಕೊಳ್ಳುವ ಸ್ಥಿತಿ. ದುರಭ್ಯಾಸದಿಂದ ಹಣವು ನಷ್ಟವಾಗಲಿದೆ. ಚತುರ್ಥದಲ್ಲಿ ಸೂರ್ಯ ಹಾಗೂ ಬುಧರ ಯೋಗ. ಶನಿಯ ರಾಶಿಯಲ್ಲಿ ಸೂರ್ಯನ ಪ್ರವೇಶ ಶುಭವಲ್ಲ. ಅಂತಃಕಲಹ ಹೆಚ್ಚಾಗುವುದು. ಆದರೆ ಬಂಧುಗಳ ಮಧ್ಯಪ್ರವೇಶದಿಂದ ಅದನ್ನು ಸರಿಮಾಡಲು ಅವಕಾಶವಿದೆ. ಚಾಮುಂಡೇಶ್ವರಿಯ ಪೂಜೆಯನ್ನು ಮಂಗಳ ಹಾಗೂ ಶುಕ್ರವಾರದಂದು ಮಾಡಿ.
ವೃಶ್ಚಿಕ ರಾಶಿ : ಜನವರಿ ತಿಂಗಳಲ್ಲಿ ನಿಮಗೆ ಶುಭ ಫಲ. ರಾಶಿಯ ಅಧಿಪತಿ ನೀಚನಾಗಿದ್ದರೂ ನಿಮ್ಮ ಮೇಲೆ ಇರುವ ಗುರುದೃಷ್ಟಿಯ ಕಾರಣ ಬರುವ ತೊಂದರೆಗಳು ದೂರವಾಗಲಿವೆ. ಈ ತಿಂಗಳು ನಿಮಗೆ ಗುರುವು ಅನುಕೂಲನಾಗಿಯೇ ಇರುವನು. ತೃತೀಯದಲ್ಲಿ ಸೂರ್ಯ ಹಾಗೂ ಬುಧರ ಸಂಯೋಗದಿಂದ ನಿಮ್ಮ ಪ್ರಭಾವವನ್ನು ತಿಳಿಸಲು ಸಾಧ್ಯವಾಗುವುದು. ಶುಕ್ರನು ಉಚ್ಚಗತನಾಗಿ ರಾಹುವಿನ ಜೊತೆ ಇರುವನು. ಆದ ಕಾರಣ ಶುಕ್ರನಿಂದ ಪೂರ್ಣಫಲ ಸಿಗದೇ ಎಲ್ಲವೂ ಮೂಗಿನ ತುದಿಗೆ ಹಚ್ಚಿದ ಜೇನುತುಪ್ಪದಂತೆ ಆಗುವುದು. ಸಂಗಾತಿಯ ಜೊತೆ ಸಮ್ಮಿಶ್ರಭಾವ ಉಂಟಾಗುವುದು. ನಾಗಾರಾಧನೆಯಿಂದ ಶ್ರೇಯಃಪ್ರಾಪ್ತಿ.
ಧನು ರಾಶಿ : ಇದು ರಾಶಿ ಚಕ್ರದ ಒಂಭತ್ತನೇ ರಾಶಿಯಾಗಿದ್ದು ವರ್ಷದ ಹೊಸ ತಿಂಗಳಲ್ಲಿ ನಿಮಗೆ ಅಶುಭ. ರಾಶಿಯ ಅಧಿಪತಿ ಷಷ್ಠದಲ್ಲಿ ಇದ್ದು ಒಳ್ಳೆಯವ ವೈರ ಮಾಡಿಕೊಳ್ಳುವಿರಿ. ಅವರ ಮಾತಿಗೆ ಬೆಲೆ ಇಲ್ಲದಂತಾಗುವುದು. ದ್ವಿತೀಯದಲ್ಲಿ ಸೂರ್ಯ ಬುಧರು ಕುಟುಂಬ ಸೌಖ್ಯವನ್ನು ತಕ್ಕಮಟ್ಟಿಗೆ ನೀಡುವರು. ಚತುರ್ಥದಲ್ಲಿ ಶುಕ್ರನು ವಾಹನ ಇತ್ಯಾದಿ ಸುಖವನ್ನು ಕೊಡುವನಾದರೂ ಅದನ್ನು ಅನುಭವಿಸಲು ಸರಿಯಾದ ಅವಕಾಶ ಸಿಗದೇಹೋಗುವುದು. ದಶಮದಲ್ಲಿ ಕೇತುವು ಉದ್ಯೋಗದಲ್ಲಿ ಅಸಮಾಧಾನ ತರುವನು. ಗುರುವಾರದಂದು ಗುರುಸನ್ನಿಧಿಗೆ ಪೂಜೆಯನ್ನು ಸಮರ್ಪಿಸಿ.
ಮಕರ ರಾಶಿ : ಜನವರಿ ತಿಂಗಳಲ್ಲಿ ನಿಮಗೆ ಶುಭಾಶುಭ ಫಲ. ರಾಶಿಯ ಅಧಿಪತಿ ದ್ವಿತೀಯ ಹಾಗೂ ಸ್ವರಾಶಿಯಲ್ಲಿ ಸೂರ್ಯ ಬುಧ ಮತ್ತು ತೃತೀಯದಲ್ಲಿ ರಾಹುವಿನ ಜೊತೆ ಶುಕ್ರ. ಶುಕ್ರನಿಂದ ನಿಮಗೆ ಶುಭವು ಸಿಕ್ಕರೂ ಅದರ ಪರಿಣಾಮ ಬೇರೆಯಾಗಬಹುದು. ಸಹೋದರಿಯರ ಸಂಬಂಧ ಚೆನ್ನಾಗಿದ್ದರೂ ಕಿವಿ ಚುಚ್ಚಿ ಅದು ಇನ್ನೊಂದು ರೂಪಕ್ಕೆ ಬರುವುದು. ಬುದ್ಧಿಯಲ್ಲಿ ಸ್ತಿಮಿತತೆ ಇರದು. ಮನಸ್ಸು ಗೊಂದಲದಿಂದ ಯಾವ ತೀರ್ಮಾನಕ್ಕೆ ಬರಲಾಗದು. ಗುರುಬಲ ಹಾಗೂ ಗುರುವಿನ ದೃಷ್ಟಿ ನಿಮಗೆ ಅನುಕೂಲತೆಯನ್ನು ಸೃಷ್ಟಿಸಿಕೊಡುವುದು. ಕುಜನು ಸಪ್ತಮದಲ್ಲಿ ಇದ್ದು ಸಂಗಾತಿಯ ಜೊತೆ ವಿರಸ ಹೆಚ್ಚಾಗುವುದು. ಲಕ್ಷ್ಮೀನಾರಾಯಣರ ಉಪಾಸನೆ ಮುಖ್ಯ.
ಕುಂಭ ರಾಶಿ :ಹೊಸ ವರ್ಷದ ಮೊದಲ ತಿಂಗಳಲ್ಲಿ ನಿಮಗೆ ಮಿಶ್ರಫಲ. ರಾಶಿಯ ಅಧಿಪತಿ ತನ್ನ ರಾಶಿಯಲ್ಲಿ ಇದ್ದು ಮನೋಬಲವನ್ನು ಹೆಚ್ಚಿಸುವನು. ಕಷ್ಟಗಳನ್ನು ದಾಟಲು ಸಹಾಯಕ. ದ್ವಿತೀಯದಲ್ಲಿ ರಾಹು ಸಹಿತನಾಗಿ ಶುಕ್ರನು ಇದ್ದು ಬರುವ ಹಣಕ್ಕೆ ವಿಘ್ನಗಳು. ಕುಟುಂಬದಲ್ಲಿ ಸ್ತ್ರೀಯರಿಂದ ಕಿರಿಕಿರಿ ಬರುವ ಸಂಭವವಿದೆ. ಇನ್ನು ದ್ವಾದಶದಲ್ಲಿ ಸೂರ್ಯ ಹಾಗೂ ಬುಧರ ಯೋಗವಿರಲಿದ್ದು ತಂದೆಯ ಜೊತೆ ವೈರ ಬರಬಹುದು. ವಿವಾದ ಮಾಡಿಕೊಳ್ಳುವ ಸಂದರ್ಭ ಬರಲಿದೆ. ಬಂಧುಗಳ ಜೊತೆ ಸಖ್ಯವಿದ್ದು ಮಾತಿಗೆ ತಪ್ಪುವಿರಿ. ಗುರು ಅಥವಾ ಗುರುಸಮಾನರ ಮೂಲಕ ವಿವಾದಕ್ಕೆ ತೆರೆ ಬರುವುದು. ಶನೈಶ್ಚರನಿಗೆ ಶನಿವಾರ ಅಭೀಷ್ಟವನ್ನು ಪ್ರಾರ್ಥಿಸಿ ಎಳ್ಳಿನ ದೀಪ ಬೆಳಗಿ.
ಮೀನ ರಾಶಿ : ವರ್ಷದ ಮೊದಲ ತಿಂಗಳಲ್ಲಿ ನಿಮಗೆ ಶುಭ. ಶುಕ್ರನು ನಿಮ್ಮ ರಾಶಿಯನ್ನು ಪ್ರವೇಶಿಸುವನು. ಇದು ಶುಕ್ರನ ಉಚ್ಚಸ್ಥಾನವಾಗುದ್ದು ಭೋಗದಲ್ಲಿ ಹೆಚ್ಚು ಆಸಕ್ತಿ ಬರುವಂತೆ ಮಾಡುವನು. ಆದರೆ ಜೊತೆ ರಾಹುವಿರುವ ಕಾರಣ ದುಶ್ಚಟಕ್ಕೆ ಬೀಳುವ ಸಂಭವವಿದೆ ಅಥವಾ ಭೋಗದಲ್ಲಿ ಸಂತೋಷವು ಸಿಗದೇ ಬೇಸರವೇ ಆಗಬಹುದು. ಇನ್ನು ಏಕಾದಶದಲ್ಲಿ ಸೂರ್ಯ ಹಾಗೂ ಬುಧರ ಸಮಾಗಮವಾಗಲಿದೆ. ವೈದ್ಯ ವೃತ್ತಿ ಅಥವಾ ಸಂಶೋಧಕರಿಗೆ ಪ್ರಗತಿ. ಆದಾಯ ಬರುವ ಯೋಜನೆ ನಿಮ್ಮ ಪಾಲಿಗೆ ಸಿಗಲಿದೆ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದು ಅಲ್ಪ ಹಿನ್ನಡೆ ತರುವನು. ಧೈರ್ಯವನ್ನು ಮಾಡಿ ಮುನ್ನಡೆಯಿರಿ. ಸುಬ್ರಹ್ಮಣನ ಉಪಾಸನೆಗೆ ಹೆಚ್ಚು ಒತ್ತು ಕೊಡಿ.
-ಲೋಹಿತ ಹೆಬ್ಬಾರ್, ಇಡುವಾಣಿ – 8762924271 (what’s app only)