ಸಾಮಾನ್ಯವಾಗಿ ತಮ್ಮದು ಯಾವ ರಾಶಿ ಅಂತ ನೋಡಿಕೊಂಡು, ಚಂದ್ರ ರಾಶಿಯಿಂದ ಗುರುವು ಗೋಚಾರದಲ್ಲಿ ಎಲ್ಲಿದ್ದಾನೆ ಎಂದು ಲೆಕ್ಕ ಹಾಕಿಕೊಂಡು, ಓಹ್, ಇದು ನಮಗೆ ಒಳ್ಳೆ ಕಾಲ, ಅಯ್ಯೋ ನಮಗೆ ಸಮಸ್ಯೆ ಬರುತ್ತದೆ ಅಂತ ಆತಂಕಗೊಳ್ಳುವುದು ಉಂಟು. ಈ ದಿನ ಗುರು ಸಂಚಾರ ವಿಚಾರವಾಗಿಯೇ ಒಂದು ಆಸಕ್ತಿಕರ ಸಂಗತಿ, ಅದರಲ್ಲೂ ಎಚ್ಚರಿಕೆಯನ್ನು ಹೇಳುವುದಕ್ಕಾಗಿ ಈ ಲೇಖನವನ್ನು ನಿಮ್ಮೆದುರು ತರಲಾಗಿದೆ. ಆದರೆ ಇದರ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಅರ್ಥ ಆಗಬೇಕು ಅಂತಾದರೆ, ನಿಮ್ಮ ಜಾತಕವನ್ನು ಕೈಯಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಆಗ ವಿವರಿಸುವ ಮಾಹಿತಿ ಸ್ಪಷ್ಟವಾಗಿ ಅರ್ಥವಾಗುತ್ತದೆ.
ಯಾರದೇ ಜನ್ಮ ಕುಂಡಲಿಯಲ್ಲಿ ಲಗ್ನ ಎಂದು ದಾಖಲಿಸಲಾಗಿರುತ್ತದೆ. ಆ ಲಗ್ನದಿಂದ ಗಡಿಯಾರದ ಮುಳ್ಳು ಚಲಿಸುವ ರೀತಿ (ಕ್ಲಾಕ್ ವೈಸ್) ಒಂದು, ಎರಡು ಎಂದು ಎಣಿಸುತ್ತಾ ಬಂದಲ್ಲಿ ಈಗ ಗೋಚಾರದಲ್ಲಿ (ಸದ್ಯ ಮೇಷ ರಾಶಿಯಲ್ಲಿ ಗುರು ಗ್ರಹ ಇದೆ) ಗುರು ಎಷ್ಟನೇ ಸ್ಥಾನ ಆಗುತ್ತದೆ ಎಂಬುದನ್ನು ನೋಡಬೇಕು. ನೆನಪಿಡಿ, ಜನ್ಮ ಲಗ್ನಕ್ಕೆ ಅಷ್ಟಮದಲ್ಲಿ ಗುರು ಸಂಚಾರ ಮಾಡುವುದು ಶುಭ ಫಲವನ್ನು ನೀಡುವುದಿಲ್ಲ.
ಅದೇ ರೀತಿ ಗೋಚಾರದಲ್ಲಿ ಗುರು ಯಾವ ರಾಶಿಯಲ್ಲಿ ಇರುತ್ತಾನೋ ಅಲ್ಲಿ ಐದು, ಏಳು ಹಾಗೂ ಒಂಬತ್ತನೇ ಸ್ಥಾನದ ವೀಕ್ಷಣೆ ಮಾಡುತ್ತದೆ. ಆದ್ದರಿಂದ ನಿಮ್ಮ ಜನ್ಮ ಲಗ್ನಕ್ಕೆ ಎಂಟನೇ ಮನೆಗೆ ಗುರು ಬಂದಾಗ, ನಿಮ್ಮ ಲಗ್ನಕ್ಕೆ ಏಳನೇ ಮನೆ ಆಗುವಂಥ ಸ್ಥಾನದಿಂದ ಎಂಟನೇ ಸ್ಥಾನ ಆಗುವ ಮನೆಯನ್ನು ಗುರುವು ವೀಕ್ಷಿಸುತ್ತಾನೆ. ಈಗಿನ ಉದಾಹರಣೆನ್ನು ಗಮನಿಸಿ: ಸದ್ಯಕ್ಕೆ ಕನ್ಯಾ ಲಗ್ನಕ್ಕೆ ಎಂಟನೇ ಮನೆಯಲ್ಲಿ ಮೇಷದಲ್ಲಿ ಗುರು ಇದೆ. ಕನ್ಯಾಗೆ ಸಪ್ತಮ ಸ್ಥಾನ ಅಂದರೆ ಮೀನ ರಾಶಿ ಆಗುತ್ತದೆ. ಆ ಮೀನದಿಂದ ಎಂಟನೇ ಮನೆ ಅಂದರೆ ತುಲಾ ರಾಶಿ ಆಗುತ್ತದೆ. ಅಲ್ಲಿಗೆ ಮೇಷದ ಗುರುವಿನ ಸಪ್ತಮದ ಪೂರ್ಣ ದೃಷ್ಟಿ ಇರುತ್ತದೆ.
ಹೀಗೆ ಬಂದರೆ ಏನು? ಆ ವ್ಯಕ್ತಿಯ ಸಂಗಾತಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ವ್ಯವಹಾರಗಳಲ್ಲಿ ನಷ್ಟ ಸಂಭವಿಸುತ್ತದೆ. ಒಂದು ವೇಳೆ ಅದೇ ಸಪ್ತಮ ಸ್ಥಾನದಿಂದ ಲೆಕ್ಕ ಹಾಕಿದ ಅಷ್ಟಮ ಸ್ಥಾನವನ್ನು ಕುಜ ಗ್ರಹವೂ ವೀಕ್ಷಣೆ ಮಾಡಿದರೆ ಸಮಸ್ಯೆಯ ಯೋಗ ಮತ್ತೂ ಬಲಿಷ್ಠ ಆಗುತ್ತದೆ. ಅದೇ ರೀತಿ ಜನ್ಮ ಲಗ್ನದ ನಾಲ್ಕನೇ ಮನೆಯನ್ನೂ ವೀಕ್ಷಿಸುವುದರಿಂದ ಆ ವ್ಯಕ್ತಿಯ ತಾಯಿಗೂ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ಹೇಳಬೇಕಾಗುತ್ತದೆ.
ಇದನ್ನೂ ಓದಿ:Jupiter Transit 2023: ಮೇಷ ರಾಶಿಗೆ ಗುರು ಗ್ರಹ ಪ್ರವೇಶ: ದ್ವಾದಶ ರಾಶಿಗಳ ಶುಭಾಶುಭ ಫಲಗಳು ಹೀಗಿವೆ
ಸದ್ಯದ ಪರಿಸ್ಥಿತಿಯಲ್ಲಿ ಕನ್ಯಾ ಲಗ್ನಕ್ಕೆ ಎಂಟನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತಿದೆ. ಕನ್ಯಾಗೆ ಮಹಾಬಾಧಾ ರಾಶಿ ವೃಶ್ಚಿಕವಾಗಿ, ಅಲ್ಲಿಯೇ ಚಂದ್ರನಿದ್ದರೆ, ಅಂದರೆ ಆ ವ್ಯಕ್ತಿಯದು ವೃಶ್ಚಿಕ ರಾಶಿಯಾಗಿದ್ದಲ್ಲಿ, ಆಗ ಸಹ ಚಂದ್ರ ಇರುವ ರಾಶಿಯ ಏಳನೇ ಮನೆಯಿಂದ ಲೆಕ್ಕ ಹಾಕುವಾಗ ಎಂಟನೇ ಸ್ಥಾನಕ್ಕೆ (ವೃಶ್ಚಿಕದಿಂದ ಏಳನೇ ಮನೆ ವೃಷಭ. ಅಲ್ಲಿಂದ ಎಂಟನೇ ಮನೆ ಧನುಸ್ಸು. ಅಲ್ಲಿಗೆ ಮೇಷದ ಗುರುವಿನ ಒಂಬತ್ತನೇ ಮನೆಯ ದೃಷ್ಟಿ) ಗುರು ದೃಷ್ಟಿ ಆಗುತ್ತದೆ. ಆಗಲೂ ಹೆಂಡತಿಯ ಆರೋಗ್ಯದ ಸಮಸ್ಯೆ ಜಾಸ್ತಿ ಆಗುತ್ತದೆ.
ಏಳನೇ ಮನೆ ಅಂದರೆ ವ್ಯವಹಾರ, ಉದ್ಯಮ, ಹೆಂಡತಿ ಇತ್ಯಾದಿಯನ್ನು ಸೂಚಿಸುತ್ತದೆ. ಇನ್ನು ವೃಶ್ಚಿಕ ರಾಶಿಗೆ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಆಗುತ್ತಿದೆ. ಇದು ತುಂಬ ಅಪಾಯಕಾರಿ ಅನ್ನೋದು ಹೌದು. ಆದ್ದರಿಂದ ಯಾರ ಜಾತಕ ಹೀಗಿದೆಯೋ ಅಂಥವರು ಮಹಾಮೃತ್ಯುಂಜಯ ಯಾಗ ಮಾಡಿಸಿದರೆ ದುಷ್ಫಲ ಕಡಿಮೆ ಆಗುತ್ತದೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿಗಳು, ಕಾಪು (ಉಡುಪಿ)
ರಾಶಿಭವಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ