
ನವಗ್ರಹಗಳ ಪೈಕಿ ದೀರ್ಘಾವಧಿ ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಪ್ರಮುಖ ಗ್ರಹಗಳಲ್ಲಿ ಗುರು ಸಹ ಒಂದು. ಒಂದು ರಾಶಿಯಲ್ಲಿ ಗುರು ಗ್ರಹ ಒಂದು ವರ್ಷಗಳ ಕಾಲ ಇರುತ್ತದೆ. ಈ ಬಾರಿ ಮೇಷದಿಂದ ವೃಷಭ ರಾಶಿಗೆ ಮೇ ಒಂದನೇ ತಾರೀಕಿಗೆ ಗುರು ಪಥ ಬದಲಾವಣೆ ಮಾಡುತ್ತಾನೆ. ಇದರರ್ಥ, ವೃಷಭ ರಾಶಿಯಲ್ಲಿ ಗುರು ಉದಯ ಆಗುತ್ತಾನೆ ಎಂದರ್ಥ. ಸಾಮಾನ್ಯವಾಗಿ ಎಲ್ಲರಿಗೂ ಈ ವರ್ಷ ತಮಗೆ ಹೇಗಿದೆ ಎಂದು ತಿಳಿಯುವ ಕುತೂಹಲ ಇರುತ್ತದೆ. ಅದು ತಮಗೆ ಒಳ್ಳೆಯದ್ದೋ ಅಥವಾ ಕೆಟ್ಟದ್ದೋ ಎಂಬ ಕುತೂಹಲವದು. ಆಗ ಇನ್ನೊಂದು ಪ್ರಶ್ನೆಯನ್ನು ನಾವೇ ಕೇಳಬೇಕಾಗುತ್ತದೆ. ಅದೇನೆಂದರೆ ಇದು ಯಾವುದಕ್ಕೆ ಒಳ್ಳೆಯದು, ಯಾವುದಕ್ಕೆ ಕೆಟ್ಟದ್ದು? ಯಾವ ವಿಚಾರಕ್ಕೆ ಎಂಬ ಸಂಗತಿಯನ್ನು ತಿಳಿಯಬೇಕು.
ಇದೇ ವಿಷಯನ್ನು ಇನ್ನಷ್ಟು ವಿಸ್ತೃತವಾಗಿ ತಿಳಿಸಬೇಕು ಅಂತಾದಲ್ಲಿ ಮೇಷಾದಿ ದ್ವಾದಶ ರಾಶಿಗಳಿಗೆ ದ್ವಾದಶ ಭಾವಗಳಿರುತ್ತದೆ. ಅದರಲ್ಲಿ ಯಾವ ಭಾವಕ್ಕೆ ಉತ್ತಮ ಎಂದು ಹೇಳಬೇಕು. ಈ ಸನ್ನಿವೇಶದಲ್ಲಿ ಕೇವಲ ರಾಶಿಯಷ್ಟೇ ಸಾಕಾಗುವುದಿಲ್ಲ. ಆಯಾ ವ್ಯಕ್ತಿಯ ಲಗ್ನವೂ ಪ್ರಾಮುಖ್ಯವಾಗುತ್ತದೆ. ಆದ್ದರಿಂದ ಯಾವುದೇ ಪ್ರಮುಖ ವಿಚಾರ ಇದ್ದು, ಅದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳಬೇಕು ಎಂದಿದ್ದರೆ ಜ್ಯೋತಿಷ್ಯರ ಬಳಿ ಹೋಗಿ ವೈಯಕ್ತಿಕವಾಗಿ ಚಿಂತನೆ ಮಾಡಬೇಕಾಗುತ್ತದೆ. ಅಂದ ಹಾಗೆ ಇಲ್ಲಿ ಕೇವಲ ರಾಶಿ ಭವಿಷ್ಯ ಮಾತ್ರ ತಿಳಿಸುವುದಷ್ಟೆ. ಅದರಲ್ಲೂ ಗುರುವು ಭಾವ ಫಲಗಳ ನಿರ್ಣಯ ಕಾರಕ ಆಗಿರುವುದರಿಂದ ಇದು ಬಹಳ ಪ್ರಾಮುಖ್ಯ. ಒಂದು ವರ್ಷ ಪರ್ಯಂತ ಒಂದು ರಾಶಿಯಲ್ಲಿ ಇರುವಂಥ ಗುರುವು ಏನು ಫಲ ನೀಡುತ್ತಾನೆ ಎಂಬ ಚಿಂತನೆ ಇಲ್ಲಿದೆ.
ಇದೇ ಮೇ 1ರಂದು, ಅಂದರೆ 1-5-2024ರಂದು ಗುರು ಗ್ರಹವು ವೃಷಭ ರಾಶಿಗೆ ಪ್ರವೇಶ ಮಾಡಿದರೆ ಮುಂದಿನ ವರ್ಷ, ಅಂದರೆ 15-5-2025ರ ವರೆಗೆ ವೃಷಭದಲ್ಲೇ ಇರುತ್ತದೆ. ಯಾವುದೇ ರಾಶಿಗೆ ಜನ್ಮಾದಿ ದ್ವಾದಶ ಭಾವಗಳ ವಿಚಾರ ತಿಳಿಯಲೇಬೇಕು. ವೃಷಭ ಗುರುವಿನದು ಜನ್ಮ(ವೃಷಭ), ಪಂಚಮ (ಕನ್ಯಾ), ಸಪ್ತಮ (ವೃಶ್ಚಿಕ), ನವಮ (ಮಕರ)ಕ್ಕೆ ಪೂರ್ಣ ದೃಷ್ಟಿ ಇರುತ್ತದೆ. ಆ ಭಾವಗಳ ಫಲ ವೃದ್ಧಿಯಾಗುತ್ತದೆ.
ವೃಷಭ ರಾಶಿಗೆ ಗುರುವಿನ ಪ್ರವೇಶ ಆಗುವುದರಿಂದ ಭಾರತ ದೇಶವನ್ನು ಪ್ರತಿನಿಧಿಸುವ ನಾಯಕರ ಮೇಲೆ ಆಗುವ ಪರಿಣಾಮವನ್ನು ತಿಳಿಸಿಬಿಡುತ್ತೇನೆ. ದೇಶದ ನಾಯಕ ಅಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಪರಿಗಣಿಸಬೇಕು. ಅವರದು ವೃಶ್ಚಿಕ ರಾಶಿ. ಮೇ ತಿಂಗಳಿನ ತನಕ ವೃಶ್ಚಿಕ ರಾಶಿಗೆ ಷಷ್ಟ ಭಾವದಲ್ಲಿ ಗುರು ಇರಲಿದ್ದು, ಅಲ್ಲಿಂದ ವೃಶ್ಚಿಕ ರಾಶಿಯ ವ್ಯಯ ಭಾವವಾದ ತುಲಾ ರಾಶಿಯ ವೀಕ್ಷಣೆ ಮಾಡುವುದರಿಂದ ಏಪ್ರಿಲ್ ತಿಂಗಳ ಕೊನೆಯ ತನಕ (ಏಪ್ರಿಲ್ ಮೂವತ್ತನೇ ತಾರೀಕಿನ ತನಕ) ನಷ್ಟ- ನಿಷ್ಠುರಗಳೇ ಹೆಚ್ಚು.
ಮೇಷದಲ್ಲಿನ ಆ ಗುರುವು ವೃಶ್ಚಿಕದ ಕರ್ಮಭಾವ ನೋಡುವುದರಿಂದ ಕೇವಲ ಕರ್ಮ ವೃದ್ಧಿಯೇ ಹೊರತು ಫಲ ನೀಡುವ ಕಾಲ ಇದಲ್ಲ. ಇನ್ನು ಮೇಷದಲ್ಲಿ ಇರುವ ಗುರುವಿನದು ನವಮದ ಮೇಲೆಯೂ ದೃಷ್ಟಿ ಇರುತ್ತದೆ. ಧನು ರಾಶಿಯು ವೃಶ್ಚಿಕದ ದ್ವಿತೀಯ ಭಾವ ವೀಕ್ಷಿಸುವುದರಿಂದ ಮೋದಿಯವರು ಪ್ರತಿನಿಧಿಸುವಂಥ ರಾಜಕೀಯ ಪಕ್ಷಕ್ಕೆ ಬಲ, ಹಣಕಾಸು ವ್ಯವಸ್ಥೆ ಉತ್ತಮವಾಗಿರುತ್ತದೆ.
ಇನ್ನು ಭಾರತ ದೇಶದ ಭವಿಷ್ಯ ನೋಡಿದರೆ, ದೇಶವು ಸ್ವಾತಂತ್ರ್ಯ ಪಡೆದ ಅವಧಿಯ ರಾಶಿ ಕುಂಡಲಿ ಪ್ರಕಾರ ಕರ್ಕಾಟಕ ರಾಶಿ ಆಗುತ್ತದೆ. ಆ ಜಾತಕದ ಪ್ರಕಾರವಾಗಿಯೂ ಮೇ ಒಂದನೇ ತಾರೀಕಿ ವರೆಗೆ ಕೆಲಸ,ಅಭಿವೃದ್ಧಿಯಲ್ಲದೆ ಫಲ ನೀಡುವ ಸಮಯವಲ್ಲ. ಮೇ ಒಂದನೇ ತಾರೀಕು ಗುರು ಗ್ರಹ ವೃಷಭ ರಾಶಿಯನ್ನು ಪ್ರವೇಶಿಸಿದಾಗ ದೇಶದ ಕೀರ್ತಿ ಉತ್ತುಂಗಕ್ಕೆ ಏರಲಿದೆ. ಸಾಧನೆಗಳು ಅಗಾಧವಾಗಿ ಆಗಲಿವೆ. ವಿದೇಶೀ ಕಲಹಗಳಲ್ಲಿ ಮಧ್ಯಪ್ರವೇಶ ಅನಿವಾರ್ಯವೂ ಆಗಿ, ರಾಜಿ- ಇತ್ಯರ್ಥವನ್ನೂ ಈ ದೇಶದ ಆಡಳಿತ ಚುಕ್ಕಾಣಿ ಹಿಡಿಯುವ ನಾಯಕ ಮಾಡುತ್ತಾರೆ.
ಕರ್ಕಾಟಕ ರಾಶಿಯ ತ್ರಿಕೋಣದಲ್ಲೇ (ಐದನೇ ಮನೆ) ಭಾರತದ ನಾಯಕ ಸ್ಥಾನದಲ್ಲಿ ನರೇಂದ್ರ ಮೋದಿ ಅವರ ರಾಶಿ ವೃಶ್ಚಿಕ ಇರುವುದರಿಂದ ಮತ್ತೊಮ್ಮೆ ಮೋದಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಜ್ಯೋತಿಷ ರೀತಿಯಾಗಿ ಹೇಳಬಹುದು. ಅದು ಹೇಗೆಂದರೆ ನರೇಂದ್ರ ಮೋದಿ ಅವರ ವೃಶ್ಚಿಕ ರಾಶಿಯ ಲಾಭ ಸ್ಥಾನವನ್ನು ದೇಶದ (ಕರ್ಕರಾಶಿ) ಲಾಭ ರಾಶಿ ವೃಷಭದಿಂದ ವೀಕ್ಷಣೆ ಮಾಡುವುದರಿಂದ ಗ್ರಹರು ನರೇಂದ್ರ ಮೋದಿಯವರನ್ನೇ ಗದ್ದುಗೆಗೆ ಆಹ್ವಾನಿಸುತ್ತದೆ.
ಹಾಗೆಂದು ರಾಹುಲ್ ಗಾಂಧಿ ಅವರದ್ದೂ ವೃಶ್ಚಿಕ ರಾಶಿಯೇ. ಅವರಿಗೂ ಉತ್ತಮವಲ್ಲವೇ ಎಂದು ಕೇಳಬಹುದು. ಹೌದು, ಅವರಿಗೂ ಉತ್ತಮವೇ. ಆದರೆ ಕರ್ಕ ಲಗ್ನಕ್ಕೆ ಅಷ್ಟಮ ಶನಿಯು ಪತನ ಮಾಡಿಯಾನು, ಹಿನ್ನಡೆ ತಂದಾನು. ಮೋದಿಯವರದ್ದು ಹೇಗೆ ಬಲಿಷ್ಟ ಎಂದರೆ ರಾಶಿ, ಲಗ್ನ, ಲಗ್ನಾಧಿಪರಿರುವುದೇ ವೃಶ್ಚಿಕದಲ್ಲಿ. ಹಾಗಾಗಿ ಇಲ್ಲಿ ಹಿನ್ನಡೆ ಹೇಳುವುದಕ್ಕೆ ಕಾರಣಗಳಿಲ್ಲ. ಒಟ್ಟಿನಲ್ಲಿ ದೇಶಕ್ಕೆ ಅಷ್ಟಮ ಶನಿಯು ಆತಂಕ ತರಬಹುದು. ಅದನ್ನೆಲ್ಲ ನಿವಾರಿಸುವ ತಾಕತ್ತು ನರೇಂದ್ರ ಮೋದಿಯವರ ಗೋಚರ ಫಲದಲ್ಲಿ ಇರುವುದರಿಂದ ಅವರಿಗೂ ದೇಶಕ್ಕೂ ಉತ್ತಮ ಫಲದಾಯಕ ಎನ್ನಬಹುದು.
ಮೇಷ: ಈ ರಾಶಿಯವರಿಗೆ ಎರಡನೇ ಮನೆಯಲ್ಲಿ ಗುರುವಿನ ಸಂಚಾರ ಆಗುತ್ತದೆ. ಹೀಗೆ ದ್ವಿತೀಯದಲ್ಲಿ ಇರುವಂಥ ಗುರು ಗ್ರಹವು ಲಾಭ, ಋಣ (ಆರನೆಯ ಮನೆ) ಕ್ಷೇತ್ರಗಳ ವೀಕ್ಷಣೆ ಮಾಡುತ್ತದೆ. ಆದ್ದರಿಂದ ಸಾಲ- ಸೋಲ, ಆರೋಗ್ಯ ಹಾನಿ, ಮೃತ್ಯು ಭಯ, ಉದ್ಯೋಗ ಅರಸುವವರಿಗೆ ಉದ್ಯೋಗ ಅಥವಾ ಬದಲಾವಣೆ ಬಯಸುವವರಿಗೆ ಬದಲಾವಣೆಗಳಾಗುತ್ತವೆ. ಇನ್ನು ಇದೇ ವೇಳೆ ಶತ್ರು ಕಾಟವೂ ಇರುತ್ತದೆ
ವೃಷಭ: ಈ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಗುರು ಇರುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಂತಾನಾಕಾಂಕ್ಷಿಗಳಿಗೆ ಸಂತಾನ ಯೋಗ. ಅವಿವಾಹಿತರಿಗೆ ಕಂಕಣ ಯೋಗ ಇದೆ. ಧರ್ಮ ಕರ್ಮಾದಿಗಳನ್ನು ನೆರವೇರಿಸುವ ಯೋಗ. ಇನ್ನು ಉತ್ತಮ ಸಂಪಾದನೆಯೂ ಇದೆ. ಧರ್ಮ- ಧಾನ, ಕರ್ಮಾದಿಗಳಲ್ಲಿ ಆಸಕ್ತಿ ಹೊಂದುವ ವರ್ಷವಿದು. ಮಕ್ಕಳ ಸಾಧನೆಯಲ್ಲಿ ಸಂತೋಷಗೊಳ್ಳುವಿರಿ ಅಥವಾ ಅದಕ್ಕೆ ಸಹಕಾರ ಕೊಡುವ ಕಾಲವಿದು.
ಮಿಥುನ: ಈ ರಾಶಿಯವರಿಗೆ ವ್ಯಯ ಸ್ಥಾನವಾದ ಹನ್ನೆರಡನೇ ಮನೆಯಲ್ಲಿ ಸಂಚರಿಸುತ್ತದೆ. ಗೃಹ- ವಾಹನ ಯೋಗ ಇದೆ. ಗೃಹ ನವೀಕರಣ, ಅಧುನೀಕರಣಕ್ಕೆ ಖರ್ಚು ಮಾಡಲಿದ್ದೀರಿ. ಋಣ ಬಾಧೆ, ಕೋರ್ಟು ಕಚೇರಿಗೆ ಹೋಗುವ ಯೋಗವಿದೆ. ನಷ್ಟ, ವ್ಯಯ, ಮರಣ ಭಯ ಇರುತ್ತದೆ. ಆದರೆ ಈ ಫಲಗಳಿಂದ ಭಯ ಪಡಬೇಕಾಗಿಲ್ಲ. ತಜ್ಞರೊಂದಿಗೆ ವ್ಯವಹರಿಸಿಯೇ ಪರಿಹಾರ ಮಾಡಿಕೊಳ್ಳಿ. ಭೂಮಿ- ವಾಹನ ಕ್ರಯ ವಿಕ್ರಯ ಯೋಗವಿದೆ. ಅವುಗಳಲ್ಲಿ ವ್ಯವಹಾರ ಮಾಡುವವರಿಗೂ ಲಾಭದಾಯಕ ಆಗಿರುತ್ತದೆ.
ಕರ್ಕಾಟಕ: ಈ ರಾಶಿಯವರಿಗೆ ಲಾಭ ಸ್ಥಾನವಾದ ಹನ್ನೊಂದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಒಂದೆಡೆ ಅಷ್ಟಮ ಶನಿಯಿಂದ ಮರಣ ಸಮಾನ ಅಪವಾದ ಭಯ ಇದ್ದರೂ ಮತ್ತೊಂಡೆ ಕೀರ್ತಿ ಲಾಭವೂ ಇದೆ. ಕೌಟುಂಬಿಕ ದೈವ- ದೇವರುಗಳ ಪ್ರತಿಷ್ಠೆ, ಜೀರ್ಣೋದ್ಧಾರ ಇತ್ಯಾದಿ ಕೆಲಸಕ್ಕಾಗಿ ಖರ್ಚು ಹೆಚ್ಚಾದೀತು.ಅವಿವಾಹಿತರಿಗೆ ವಿವಾಹ ಯೋಗ ಪ್ರಾಪ್ತಿ, ಗೌರವಾದರಗಳ ಯೋಗವೂ ಇದೆ. ಒಂದು ವೇಳೆ ಈ ರಾಶಿಯವರು ಚುನಾವಣೆಗಳಲ್ಲಿ ಅಭ್ಯರ್ಥಿ ಆದಲ್ಲಿ ಗೆಲುವು ನಿರೀಕ್ಷಿಸಬಹುದು.
ಸಿಂಹ: ಈ ರಾಶಿಯವರಿಗೆ ಹತ್ತನೇ ಸ್ಥಾನವಾದ ಕರ್ಮ ಸ್ಥಾನದಲ್ಲಿ ಗುರು ಸಂಚಾರ ಆಗುತ್ತದೆ. ಹೊಸ ಹೊಸ ಪ್ರಾಜೆಕ್ಟ್, ಕರ್ಮ ಬದಲಾವಣೆ ನಿರೀಕ್ಷೆ ಮಾಡಬಹುದು. ಹಾಗೆಯೇ ಕುಟುಂಬದೊಳಗೆ ಆಶೌಚವೂ ಬರಬಹುದು. ಗುರು ಗ್ರಹವು ವೃಷಭದಲ್ಲಿ ನಿಂತು, ಐದನೇ ಮನೆಯಾದ ಕನ್ಯಾ ರಾಶಿ, ಅಂದರೆ ಸಿಂಹ ರಾಶಿಯ ದ್ವಿತೀಯ ಸ್ಥಾನ ವೀಕ್ಷಣೆಯಿಂದ ಧನಾಗಮನ, ಭೂಮಿ- ವಾಹನ ಕ್ರಯ- ವಿಕ್ರಯಾದಿ ಯೋಗ ಇದೆ. ಗುರು ಗ್ರಹವು ಋಣ ಸ್ಥಾನ ವೀಕ್ಷಣೆಯಿಂದಾಗಿ ಸಾಲ, ಕೋರ್ಟು, ಶತ್ರುಕಾಟ ಇತ್ಯಾದಿಗಳೂ ಇವೆ.
ಕನ್ಯಾ: ಈ ರಾಶಿಯವರಿಗೆ ಒಂಬತ್ತನೇ ಮನೆಗೆ ಗುರು ಸಂಚಾರ ಆಗುತ್ತದೆ. ಕನ್ಯಾ ರಾಶಿಯವರಿಗೆ ಕಳೆದ ಒಂದು ವರ್ಷದಿಂದ ನಷ್ಟ, ಭಯ, ರೋಗ ಭಯ ಎಲ್ಲ ಕಾಡುತ್ತಿತ್ತು. ಆದರೆ ಈಗ ಗುರು ವೃಷಭಕ್ಕೆ ಬಂದಾಗ ಅವೆಲ್ಲವೂ ದೂರವಾಗಿ ಭಾಗ್ಯ ಪ್ರಾಪ್ತಿಯಾಗುತ್ತದೆ. ಆದರೂ ರಾಶಿ ವೀಕ್ಷಣೆ ಮಾಡುವುದರಿಂದ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ರಾಶಿಯ ತೃತೀಯ ವೀಕ್ಷಣೆ ಮಾಡುವುದರಿಂದ ಸಾಧನೆಗಳು ಮರುಜೀವ ಪಡೆಯುತ್ತವೆ. ಸಹೋದರ ವಿಚಾರದಲ್ಲಿ ಹೆಚ್ಚು ಆಸಕ್ತಿ ಉಂಟಾದೀತು. ಪಂಚಮ ವೀಕ್ಷಣೆ ಇರುವುದರಿಂದ ಸಂತಾನಾಪೇಕ್ಷಿಗಳಿಗೆ ಸಂತಾನ ಭಾಗ್ಯವೂ ಇದೆ. ಮಕ್ಕಳ ಉನ್ನತ ವಿದ್ಯಾಭ್ಯಾಸದ ಚಿಂತೆಯೂ ಅದರ ವ್ಯವಸ್ಥೆಯೂ ನಿಮ್ಮ ಕೈಯಲ್ಲಿ ನೆರವೇರಲಿದೆ.
ತುಲಾ: ಈ ರಾಶಿಯವರಿಗೆ ಗುರು ಗ್ರಹವು ಅಷ್ಟಮ ಸ್ಥಾನದಲ್ಲಿ ಸಂಚಾರವನ್ನು ಮಾಡುತ್ತದೆ. ಮರಣ (ನಷ್ಟ, ಸೋಲು ಇತ್ಯಾದಿ) ಭಯ, ಅಧಿಕ ಖರ್ಚು ಇವುಗಳೆಲ್ಲ ಫಲಗಳಾಗಿ ಕಾಣಲಿದ್ದೀರಿ. ಇದೇ ವೇಳೆ ಕಾಣಬಹುದು ಇತರ ಫಲಗಳು ಯಾವುದೆಂದರೆ, ದೇವತಾ ಆರಾಧನೆಯಲ್ಲಿ ಉತ್ಸಾಹದಿಂದ ಭಾಗೀ ಆಗುವುದು, ಕುಟುಂಬದಲ್ಲಿ ಶುದ್ಧೀಕರಣ, ವಿದ್ಯಾರ್ಥಿಗಳಿಗೆ ಹೆಚ್ಚಿನ ಓದಿಗಾಗಿ ಅಥವಾ ಉನ್ನತ ವ್ಯಾಸಂಗಕ್ಕಾಗಿ ಖರ್ಚು ಮತ್ತು ವಿದೇಶ ಪ್ರಯಾಣವೂ ಇರುತ್ತದೆ.
ವೃಶ್ಚಿಕ: ಈ ರಾಶಿಯವರಿಗೆ ಸಪ್ತಮ ಸ್ಥಾನ ಅಥವಾ ಕಳತ್ರ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಆದ್ದರಿಂದ ಯಾರೂ ವಿವಾಹ ವಯಸ್ಕ ಅವಿವಾಹಿತ ಯುವಕ- ಯುವತಿಯರು ಇದ್ದಾರೋ ಅಂಥವರಿಗೆ ವಿವಾಹ ಯೋಗ, ಸಮಾಜ, ಸಂಘ- ಸಂಸ್ಥೆ, ಸರ್ಕಾರಗಳಿಂದ ಪ್ರಶಸ್ತಿ, ಸನ್ಮಾನ ಯೋಗ, ಸಹೋದರರ ವಿಚಾರದಲ್ಲಿ ಚಿಂತೆಯೋ ಚಿಂತನೆಯೋ ಉಂಟಾದೀತು. ಪತ್ನಿಯ ವಿಚಾರದಲ್ಲಿ ಹೆಚ್ಚು ಕಾಳಜಿ ಇರಬೇಕು. ಪತ್ನಿಯ ಆರೋಗ್ಯದ ಬಗ್ಗೆ ಎಚ್ಚರ ಇರಲಿ. ಗೌರವಾದರಗಳ ಯೋಗವೂ ಇದೆ. ಒಂದು ವೇಳೆ ಚುನಾವಣೆ ಅಭ್ಯರ್ಥಿ ಆಗಿದ್ದರೆ ಗೆಲುವು ದೊರೆಯಲಿದೆ.
ಧನುಸ್ಸು: ಈ ರಾಶಿಯವರಿಗೆ ಆರನೇ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ವೃಷಭ ರಾಶಿಯಲ್ಲಿ ಇರುವಂಥ ಗುರುವು ವ್ಯಯ ಸ್ಥಾನವಾದ ವೃಶ್ಚಿಕ ರಾಶಿಯ ವೀಕ್ಷಣೆ ಮಾಡುವುದರಿಂದ ವೃಥಾ ಅಪವಾದ, ಪೊಲೀಸ್ ಠಾಣೆ ಅಲೆದಾಟ, ಕೇಸುಗಳು ಬೀಳುವುದು, ಕೋರ್ಟು ವ್ಯವಹಾರ, ಅಧಿಕ ವ್ಯಯ, ಕರ್ಮ ಬದಲಾವಣೆಯಂಥ ಫಲಗಳನ್ನು ಕಾಣಬೇಕಾಗುತ್ತದೆ. ಇನ್ನು ಉದ್ಯೋಗಿಗಳಿಗೆ ವರ್ಗಾವಣೆ ನಿರೀಕ್ಷೆ ಮಾಡಬಹುದು. ಹೀಗಿದ್ದರೂ ಇವರಿಗೆ ಹಣಕ್ಕೆ ಕೊರತೆ ಇರುವುದಿಲ್ಲ.ಸಹೋದರರಿಗೆ ಭೂಮಿ- ವಾಹನ ಕೊಡಿಸುವ ಜವಬ್ದಾರಿ ನಿಮ್ಮ ಮೇಲೆ ಬರಲಿದೆ. ಮಕ್ಕಳಿಗೂ ವಿಶೇಷ ಸೌಲಭ್ಯ ಕಲ್ಪಿಸುವ ಮನಸ್ಸು ಮಾಡಲಿದ್ದೀರಿ. ಆ ಪ್ರಯತ್ನದಲ್ಲಿ ಎಲ್ಲವೂ ಕೈಗೂಡುತ್ತದೆ.
ಮಕರ: ಈ ರಾಶಿಯವರಿಗೆ ಐದನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ವೃಷಭ ರಾಶಿಯಲ್ಲಿ ಇರುವಂಥ ಗುರುವಿನ ನವಮ ದೃಷ್ಟಿಯು ಮಕರದ ಮೇಲೆ ಇರುತ್ತದೆ. ಆದ್ದರಿಂದ ಈ ರಾಶಿಯವರು ಆರೋಗ್ಯದ ಬಗ್ಗೆ ಎಚ್ಚರವಾಗಿ ಇರಬೇಕಾಗುತ್ತದೆ. ಹಾಗಾದರೆ ಆರೋಗ್ಯದ ಬಗ್ಗೆ ಅಂದರೆ ನರಗಳ ಸಮಸ್ಯೆ ಕಾಡಬಹುದು. ಜತೆಗೆ ಶುಭ ಫಲ ಅಂದರೆ ಭಾಗ್ಯ ಪ್ರಾಪ್ತಿ ಇದೆ. ಪುಣ್ಯ ಕ್ಷೇತ್ರ ದರ್ಶನವಾಗಲಿದೆ. ವಿದ್ಯಾಸಕ್ತರಿಗೆ ಹೆಚ್ಚಿನ ಓದಿಗಾಗಿ ಖರ್ಚು, ವಿದೇಶಕ್ಕೆ ವಿದ್ಯಾಸಕ್ತರಾಗಿ ಹೋಗುವ ಯೋಗವಿದೆ. ಇದರ ಮದ್ಯೆ ಸಮಾಜದಲ್ಲಿ ಉತ್ತಮ ಸ್ಥಾನ- ಮಾನ, ಪ್ರಶಸ್ತಿ, ಗೌರವಾದರಗಳ ಯೋಗವೂ ಇದೆ. ಈ ರಾಶಿಯವರು ಚುನಾವಣೆ ಅಭ್ಯರ್ಥಿಯಾಗಿದ್ದರೆ ಗೆಲುವು ನಿರೀಕ್ಷಿಸಬಹುದು.
ಕುಂಭ: ಈ ರಾಶಿಯವರಿಗೆ ನಾಲ್ಕನೇ ಮನೆಯಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಇದರಿಂದ ಕ್ಷೇತ್ರಾಭಿವೃದ್ಧಿ, ಭೂಮಿ- ವಾಹನ ಕ್ರಯ ವಿಕ್ರಯ ಯೋಗ ಮತ್ತು ಅದರಿಂದ ಲಾಭವೂ ಇದೆ. ಇನ್ನು ಯಾರು ಭೂಮಿ- ವಾಹನಗಳ ಕ್ರಯ- ವಿಕ್ರಯವನ್ನೇ ಆದಾಯದ ದಾರಿ ಮಾಡಿಕೊಂಡವರು ಅಥವಾ ಇನ್ನು ಮುಂದೆ ಈ ವ್ಯವಹಾರದಲ್ಲಿ ಮುಂದುವರಿಯಬೇಕು ಅಂತ ಇರುವವರು ಧಾರಾಳವಾಗಿ ಮುಂದುವರಿಯಿರಿ. ಇದರಿಂದ ನಿಮಗೆ ಲಾಭ ಇದೆ. ನಿಮ್ಮಲ್ಲಿ ಕೆಲವರಿಗೆ ಕುಟುಂಬದದಲ್ಲಿ ಹಿರಿಯರ ಸಾವಿನ ವಾರ್ತೆ ಕೇಳಿಬರಲಿದೆ. ನಷ್ಟ, ಮರಣ, ವ್ಯಯಗಳ ಚಿಂತೆ, ಭಯಗಳು ಹೆಚ್ಚಾದೀತು. ಉದ್ಯೋಗಿಗಳಿಗೆ ಉದ್ಯೋಗ ಪರಿವರ್ತನೆಗಳು ಆದೀತು.
ಮೀನ: ಈ ರಾಶಿಯವರಿಗೆ ಮೂರನೇ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗುತ್ತದೆ. ಒಂದೆಡೆ ಆತಂಕ- ಭಯಗಳು ಉಂಟಾದೀತು. ಮತ್ತೊಂದೆಡೆ ವಿವಾಹ ವಯಸ್ಕ ಅವಿವಾಹಿತರಿಗೆ ವಿವಾಹ ಯೋಗ ಇದ್ದು, ಗೌರವಾದರಗಳ ಯೋಗವೂ ಇದೆ. ಈ ರಾಶಿಯವರು ಚುನಾವಣೆ ಅಭ್ಯರ್ಥಿ ಆಗಿದ್ದರೆ ಗೆಲುವು ನಿರೀಕ್ಷೆ ಮಾಡಬಹುದು. ಧರ್ಮ ಕ್ಷೇತ್ರಗಳ, ತೀರ್ಥಯಾತ್ರೆಗಳ ಯೋಗವೂ ಇದೆ. ಇನ್ನು ಮೀನ ರಾಶಿಯ ಐದನೇ ಮನೆಯಿಂದ ಲೆಕ್ಕ ಹಾಕಿದರೆ ಐದನೇ ಮನೆ ಆಗುವ ಧನು ರಾಶಿಯ ಮೇಲೆ ಗುರು ದೃಷ್ಟಿ ಇರುತ್ತದೆ. ಆದ್ದರಿಂದ ಹಿರಿಯರಿಗೆ ಪ್ರಪೌತ್ರ (ಮೊಮ್ಮಕ್ಕಳು) ಆಗುವ ಯೋಗವೂ ಇದೆ.
ಇದನ್ನೂ ಓದಿ: ನಿಮ್ಮ ಆಸೆಗಳು ಈಡೇರಲು ಪ್ರದೋಷ ವ್ರತದಂದು ಈ ರೀತಿ ಮಾಡಿ
ಅನುಕೂಲ, ಅನನುಕೂಲಗಳ ಪ್ರಾಯಶ್ಚಿತ್ತ ಪ್ರೀತ್ಯರ್ಥ ಪರಿಹಾರವೆಂದರೆ ನಿತ್ಯವೂ ವಿಷ್ಣು ಸಹಸ್ರನಾಮ, ಶಿವಾಷ್ಟೋತ್ತರ, ದುರ್ಗಾ ಅಷ್ಟೋತ್ತರ, ಸುಬ್ರಹ್ಮಣ್ಯ- ನಾಗ ಸೇವೆ- ಸ್ಮರಣೆಗಳಿಂದ ದುಷ್ಫಲಗಳು ಅನುಭವಕ್ಕೆ ಬಾರದೆ, ಸತ್ಫಲಗಳ ವೃದ್ಧಿಯೂ ಆಗುತ್ತದೆ.
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ (ಕಾಪು, ಉಡುಪಿ ಜಿಲ್ಲೆ)
Published On - 7:08 am, Sat, 20 April 24