Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನಿಮ್ಮ ಆಗಸ್ಟ್ ತಿಂಗಳ ಭವಿಷ್ಯ ಇಲ್ಲಿದೆ
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಆಗಸ್ಟ್ ತಿಂಗಳು ಹೇಗಿರಲಿದೆ? ವ್ಯಾಪಾರ, ಸಾಮಾಜಿಕ ಮತ್ತು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಯಾವ ಫಲಗಳು ಸಿಗಲಿವೆ ಎಂಬುದರ ಆಗಸ್ಟ್ ತಿಂಗಳ ಸಂಖ್ಯಾಶಾಸ್ತ್ರದ ಭವಿಷ್ಯ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ಮಾಸ ಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಆಗಸ್ಟ್ ಮಾಸಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಈ ತಿಂಗಳು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಅದರಲ್ಲೂ ವಿಶೇಷವಾಗಿನ ಗಮನ ಕೊಡಬೇಕಾದದ್ದು ಏನೆಂದರೆ, ನಿಮ್ಮಲ್ಲಿ ಕೆಲವರಿಗೆ ಕಫ, ಕೆಮ್ಮು, ಶೀತದ ಸಮಸ್ಯೆಗಳು ತೀವ್ರವಾಗಲಿವೆ. ಈಗಾಗಲೇ ಚರ್ಮರೋಗ ಇದೆ ಎಂದಾದಲ್ಲಿ ಅದು ಉಲ್ಬಣ ಕೂಡ ಆಗಬಹುದು. ವೈದ್ಯರ ಬಳಿ ಫಾಲೋ ಅಪ್ ಚೆಕಪ್ ಗಳು ಇವೆ ಎಂದಾದಲ್ಲಿ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ಇನ್ನೂ ವೈದ್ಯರ ಬಳಿ ತೆರಳಿಲ್ಲ ಎನ್ನುವವರು ಕಡ್ಡಾಯವಾಗಿ ತೋರಿಸಿಕೊಳ್ಳುವುದು ಮುಖ್ಯ. ಮೊಬೈಲ್ ಫೋನ್ ಸೇರಿದಂತೆ ಒಡವೆ ವಸ್ತ್ರಗಳು ಅಥವಾ ಇನ್ಯಾವುದೇ ವಸ್ತುಗಳನ್ನು ಖರೀದಿ ಮಾಡುತ್ತಿದ್ದೀರಿ ಎಂದಾದಲ್ಲಿ ಗುಣಮಟ್ಟದ ಕಡೆಗೆ ಹೆಚ್ಚಿನ ಲಕ್ಷ್ಯ ಕೊಡಿ. ಇಲ್ಲದಿದ್ದಲ್ಲಿ ನಿಮಗೆ ಮೋಸವಾಗುವ ಸಾಧ್ಯತೆಗಳಿವೆ. ದ್ವಿಚಕ್ರ ವಾಹನಗಳನ್ನು ಓಡಿಸುವಂಥವರು ದೂರದ ಸ್ಥಳಗಳಿಗೆ ತೆರಳದಿರುವುದು ಕ್ಷೇಮ. ಒಂದು ವೇಳೆ ಹಾಗೆ ಪ್ರಯಾಣ ತೆರಳುವುದು ಅನಿವಾರ್ಯ ಅಂತಾದಲ್ಲಿ ಹಾಗೂ ನಿಮ್ಮದೇ ಸ್ವಂತ ವಾಹನವೋ ಅಥವಾ ಸ್ನೇಹಿತರಿಂದ ಪಡೆದುಕೊಂಡು ಹೋಗೋಣ ಎಂದುಕೊಳ್ಳುತ್ತೀರೋ ಒಟ್ಟಿನಲ್ಲಿ ನೀವು ಚಾಲನೆ ಮಾಡುವಂಥ ವಾಹನದ ಸರ್ವೀಸ್ ಆಗಿದೆಯೇ ಹಾಗೂ ಅದು ಸುಸ್ಥಿತಿಯಲ್ಲಿ ಇದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಮನೆಯ ಹೊರಗೋ ಒಳಗೋ ಕೆಲವರು ನಿಮಗೆ ಬೇಕಂತಲೇ ಸಿಟ್ಟು ಬರಿಸುವುದಕ್ಕೆ ಪ್ರಯತ್ನಿಸಲಿದ್ದಾರೆ. ನೀವು ಇತರರು ಆಡುವ ಎಲ್ಲ ಮಾತುಗಳಿಗೂ ಉತ್ತರಿಸಲೇಬೇಕು ಎಂದೇನೂ ಇಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಮನೆ ಕಟ್ಟಿದ್ದೀರೋ ಇಲ್ಲವೋ ನಿಮ್ಮ ಬಳಿ ಒಡವೆ ವಸ್ತ್ರಗಳು ಇವೆಯೋ ಇಲ್ಲವೋ ಇಂಥ ಚರ್ಚೆಗಳು ಎಲ್ಲಾದರೂ ಆಗುತ್ತಿದೆ ಎಂದಾದರೆ ಅಲ್ಲಿ ತುಂಬಾ ಹೊತ್ತು ನಿಲ್ಲಲು ಹೋಗಬೇಡಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಅಥವಾ ಆದಾಯದ ಮೂಲಗಳನ್ನೇ ಜಾಸ್ತಿ ಮಾಡಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ಶ್ರಮ ಹಾಕಲಿದ್ದೀರಿ. ಅಡುಗೆ ಕಾಂಟ್ರಾಕ್ಟ್ ತೆಗೆದುಕೊಳ್ಳುವವರು ಹಾಗೂ ಈವೆಂಟ್ ಮ್ಯಾನೇಜ್ ಮೆಂಟ್ ವಹಿಸಿಕೊಳ್ಳುವಂತಹವರು ಹಾಗೂ ಟೂರಿಸ್ಟ್ ಆಪರೇಟರ್ ಗಳಿಗೆ ಸವಾಲಿನ ತಿಂಗಳು ಇದಾಗಿರಲಿದೆ. ಸ್ವಂತ ವ್ಯವಹಾರ ಮಾಡುತ್ತಿರುವವರು ಅಥವಾ ವೃತ್ತಿ ಮಾಡುತ್ತಿರುವವರು ಈಗಿರುವ ಸ್ಥಳದಿಂದ ಹೊಸ ಕಚೇರಿಗೆ ಬದಲಾವಣೆ ಮಾಡುವ ಸಾಧ್ಯತೆಗಳು ಸಹ ಇವೆ. ಆದರೆ ನಿಮ್ಮ ಪಾಲಿಗೆ ಎಚ್ಚರಿಕೆ ಏನೆಂದರೆ ನೀವಾಗಿಯೇ ವಹಿಸಿಕೊಂಡ ಕೆಲಸವೊಂದನ್ನು ಆಲಸ್ಯದ ಕಾರಣಕ್ಕಾಗಿ ತಡ ಮಾಡಿ, ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಪ್ಪಿಕೊಂಡ ಕೆಲಸ ಹೇಳಿದ ಸಮಯದೊಳಗೆ ಮುಗಿಸುವುದಕ್ಕೆ ಪ್ರಯತ್ನವನ್ನು ಮಾಡಿ. ನಿಮ್ಮ ಆದಾಯಕ್ಕೆ ಮೀರಿದ ಅಥವಾ ಶಕ್ತಿಗೆ ಮೀರಿದ ಸಾಲವನ್ನು ಮಾಡಲಿಕ್ಕೆ ಈ ತಿಂಗಳು ಹೋಗಬೇಡಿ. ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಅಂತಲೋ ಅಥವಾ ಇಎಂಐನಲ್ಲಿ ಹಿಂತಿರುಗಿಸಬಹುದು ಎಂಬ ಕಾರಣಕ್ಕೋ ನಿಮಗೆ ಅಗತ್ಯ ಇಲ್ಲದಿರುವ ವಸ್ತುಗಳನ್ನು ಸಹ ಖರೀದಿಸುವುದಕ್ಕೆ ಮುಂದಾಗಬೇಡಿ. ನಿಮ್ಮ ಹತ್ತಿರದ ಸಂಬಂಧಿಕರಿಗೆ ಅಥವಾ ಆಪ್ತ ಸ್ನೇಹಿತರಿಗೆ ಈ ಹಿಂದೆ ಯಾವಾಗಲೋ ಕೊಟ್ಟಿದ್ದ ಮಾತಿನಂತೆ ನಡೆದುಕೊಳ್ಳಬೇಕಾಗುವ ಸಂದರ್ಭ ಎದುರಾಗಿ, ಹಣಕಾಸಿನ ವಿಚಾರದಲ್ಲಿ ಇಕ್ಕಟ್ಟಿಗೆ ಸಿಲುಕಿಕೊಳ್ಳಲಿದ್ದೀರಿ. ಒಟ್ಟಾರೆ ಹೇಳಬೇಕೆಂದರೆ ಆರೋಗ್ಯ ಹಾಗೂ ಆರ್ಥಿಕ ವಿಚಾರಗಳು ಆದ್ಯತೆ ಪಡೆದುಕೊಳ್ಳುತ್ತವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸಮಯ ಕಳೆಯಲಿ ಅಂತಲೋ ಅಥವಾ ಹವ್ಯಾಸ ಹಾಗೇ ಬಿಟ್ಟು ಹೋಗಬಾರದು ಎಂಬ ಕಾರಣಕ್ಕೋ ನೀವು ತುಂಬ ಸಣ್ಣದಾಗಿ ಆರಂಭಿಸಿದ ಯೋಜನೆ ಅಥವಾ ಆಲೋಚನೆ ಅಥವಾ ಒಂದು ಪ್ರಾಜೆಕ್ಟ್ ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಡಲಿದೆ. ನೀವು ಬಹಳ ಸಮಯದಿಂದ ಅಂದುಕೊಳ್ಳುತ್ತಿದ್ದ ರೀತಿಯಲ್ಲಿ ಮನೆಗೆ ದೊಡ್ಡ ಅಳತೆಯ ಟಿವಿ, ಹೋಂ ಥಿಯೇಟರ್, ಪ್ರೊಜೆಕ್ಟರ್, ಫ್ರಿಡ್ಜ್ ಅಥವಾ ವಾಷಿಂಗ್ ಮಷೀನ್ ಖರೀದಿ ಮಾಡುವಂತಹ ಯೋಗ ಇದೆ. ನಿಮ್ಮ ಪರಿಚಿತರು ಅಥವಾ ಸ್ನೇಹಿತರ ಮೂಲಕವಾಗಿ ಆಫರ್ ಗಳು ದೊರೆಯುವ ಅವಕಾಶಗಳು ಸಹ ಕಂಡುಬರುತ್ತಿವೆ. ಮಕ್ಕಳ ಭವಿಷ್ಯವನ್ನೇ ಗಮನದಲ್ಲಿ ಇಟ್ಟುಕೊಂಡು, ಶಿಕ್ಷಣ, ಮದುವೆ ಮೊದಲಾದ ಕಾರಣಗಳ ಸಲುವಾಗಿ ಸೈಟು ಅಥವಾ ಕಟ್ಟಿರುವ ಮನೆಯನ್ನು ಖರೀದಿ ಮಾಡುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಬ್ಯಾಂಕ್ ಅಥವಾ ನೀವು ಉದ್ಯೋಗ ಮಾಡುತ್ತಿರುವ ಸ್ಥಳದಲ್ಲಿಯೇ ಸ್ವಲ್ಪ ಮಟ್ಟಿಗೆ ಸಾಲ ಮಾಡುವ ಸಾಧ್ಯತೆ ಸಹ ಇದೆ. ನಿಮಗೆ ಬರಬೇಕಾದ ಹಳೆ ಸಾಲ ಬಾಕಿ ಇದ್ದಲ್ಲಿ ಈ ತಿಂಗಳು ಗಟ್ಟಿಯಾಗಿ ಪ್ರಯತ್ನಿಸಿ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ನೀವು ಈ ಹಿಂದೆ ಮಾಡಿದ ಕೆಲಸವನ್ನು ಮೆಚ್ಚಿಕೊಂಡು, ಕೆಲವರು ಈಗ ಹೊಸದಾಗಿ ಮತ್ತೆ ಕೆಲಸವನ್ನು ವಹಿಸುವ ಯೋಗ ಕಂಡುಬರುತ್ತಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿಗೆ ಮಾತನಾಡಿಕೊಂಡು ಬಿಡುವುದು ಉತ್ತಮ. ಇಲ್ಲದಿದ್ದರೆ ಆ ನಂತರ ಕಡಿಮೆ ಹಣ ಬಂತು ಎಂದು ಪರಿತಪಿಸುವಂತೆ ಆಗುತ್ತದೆ, ನೆನಪಿನಲ್ಲಿಡಿ. ಮನೆ ದೇವರ ಆರಾಧನೆಗಾಗಿ ನಿಮ್ಮ ಹಣ, ಸಮಯ, ವಸ್ತುಗಳು, ಸ್ಥಳ ಸದ್ವಿನಿಯೋಗ ಆಗುವಂಥ ಯೋಗ ಇದೆ. ನೀವಾಯಿತು ನಿಮ್ಮ ಕೆಲಸ ಆಯಿತು ಎಂಬಂತೆಯೇ ಇದ್ದರೂ ಹೆಸರು ಗಳಿಸುವಂಥ ಯೋಗ ಇದೆ. ಸ್ವಭಾವತಃ ತುಂಬ ಸಾಧುವಾಗಿರುವವರು ಸಹ ಈ ತಿಂಗಳ ದ್ವಿತೀಯಾರ್ಧದಲ್ಲಿ ಸ್ವಲ್ಪ ಮಟ್ಟಿಗಾದರೂ ಧ್ವನಿ ಎತ್ತರಿಸಿ ಮಾತನಾಡಬೇಕಾದೀತು. ಯಾರು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ, ಅದರಲ್ಲೂ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮೀಡಿಯಾದಲ್ಲಿ ಇದ್ದೀರಿ ಅಂಥವರಿಗೆ ಸನ್ಮಾನ- ಕೀರ್ತಿ ಪಡೆಯುವಂಥ ಯೋಗ ಇದೆ. ಇನ್ನು ನಿಮ್ಮ ಪ್ರೀತಿಪಾತ್ರರ ಜತೆಗೆ ಉತ್ತಮವಾದ ಸಮಯ ಕಳೆಯುವಂಥ ಯೋಗ ಇದೆ. ಬ್ಯಾಂಕಿಂಗ್ ಕೆಲಸಗಳು ಆಗಬೇಕಿದ್ದಲ್ಲಿ ಅದು ಪೂರ್ಣಗೊಳಿಸುವಂಥ ಸಾಧ್ಯತೆಗಳಿವೆ. ಹಳೇ ಪ್ರೇಮ ಪ್ರಕರಣಗಳು ಮತ್ತೆ ಜೀವ ಪಡೆದುಕೊಳ್ಳಬಹುದು. ಅಭಿಪ್ರಾಯ ಭೇದದಿಂದ ಏನಾದರೂ ದೂರವಾಗಿರುವ ಪ್ರೇಮಿಗಳು ಇದ್ದಲ್ಲಿ ಮತ್ತೆ ಒಂದಾಗುವಂಥ ಯೋಗ ಇದೆ. ಇನ್ನು ವಿವಾಹಿತ ಸ್ತ್ರೀಯರಿಗೆ ತವರು ಮನೆಗೆ ಭೇಟಿ ನೀಡುವಂಥ ಯೋಗ ಇದ್ದು, ಅಣ್ಣನಿಂದ ಉಡುಗೊರೆಗಳನ್ನು ಪಡೆಯುವಂಥ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಬಹಳ ಸಮಯದಿಂದ ಕಾಡುತ್ತಿದ್ದ ಸಂದೇಹ ಅನುಮಾನಗಳು ಬಗೆಹರಿಯಲಿವೆ. ರಾಜಕೀಯ ಕ್ಷೇತ್ರದಲ್ಲಿ ಇದ್ದಲ್ಲಿ ನಿಮ್ಮ ಯಶಸ್ಸು ಧೈರ್ಯದ ಮೇಲೆ ನಿರ್ಧಾರವಾಗುತ್ತದೆ. ಸ್ವಲ್ಪ ಮಟ್ಟಿಗೆ ರಿಸ್ಕ್ ಇದೆ ಎಂದಾದರೂ ನಿಮ್ಮ ಕ್ಷೇತ್ರದ ಸವಾಲನ್ನು ಸ್ವೀಕರಿಸಿ, ಹೆದರದೆ ಮುಂದುವರಿದಲ್ಲಿ ಗೆಲುವು ನಿಮ್ಮದಾಗಲಿದೆ. ಕಾರ್ಪೆಂಟರ್ ಆಗಿ ಇರುವವರಿಗೆ ಏನೂ ಉಪಯೋಗ ಆಗಲಾರದು, ಹಣವನ್ನು ಸಹ ನಿರೀಕ್ಷೆ ಮಾಡುವಂತಿಲ್ಲ ಎಂದು ಆಸೆಯನ್ನೇ ಕೈ ಬಿಟ್ಟಿದ್ದ ಪ್ರಾಜೆಕ್ಟ್ ವೊಂದರಿಂದ ಅನಿರೀಕ್ಷಿತವಾಗಿ ಧನಾಗಮ ಆಗಲಿದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಆದಾಯದ ವಿಚಾರದಲ್ಲಿ ಒಂದು ವೇಳೆ ಆತಂಕ ಕಾಡುತ್ತಿದ್ದಲ್ಲಿ ಅದು ನಿವಾರಣೆ ಆಗುವಂಥ ಸಮಯ ಇದಾಗಿರುತ್ತದೆ. ಏಕೆಂದರೆ ಒಂದಕ್ಕಿಂತ ಹೆಚ್ಚು ಮೂಲಗಳಿಂದ ಹಣದ ಹರಿವು ಆಗುವುದಕ್ಕೆ ಶುರುವಾಗುತ್ತದೆ. ಇನ್ನು ನಿಮ್ಮಲ್ಲಿ ಯಾರು ಕ್ಯಾಟರಿಂಗ್ ವ್ಯವಹಾರವನ್ನು ಮಾಡುತ್ತಿರುವಿರೋ ಅಂಥವರಿಗೆ ಈ ತಿಂಗಳು ಆದಾಯದ ಪ್ರಮಾಣದಲ್ಲಿ ಜಾಸ್ತಿ ಆಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿ ಏನಾದರೂ ವ್ಯಾಜ್ಯಗಳು ಇದ್ದಲ್ಲಿ ಅದನ್ನು ನಿವಾರಿಸಿಕೊಳ್ಳುವ ಮಾರ್ಗಗಳು ಗೋಚರ ಆಗಲಿವೆ. ನಿಮ್ಮ ಸ್ನೇಹಿತರಯ ತರುವಂಥ ಆಫರ್ ಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮಗೆ ಲಾಭ ಆಗುತ್ತದೆ ಎಂಬ ಖಾತ್ರಿ ಇದ್ದರಂತೂ ಧೈರ್ಯವಾಗಿ ಅದರಲ್ಲಿ ಮುಂದುವರಿಯಬಹುದು. ಇನ್ನು ನೀವು ಗಮನಿಸಬೇಕಾದದ್ದು ಏನೆಂದರೆ, ಮನೆಗೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳುವ ತೀರ್ಮಾನಗಳಿಂದ ತಂದೆ ತಾಯಿಗೆ ಬೇಸರ ಆಗಬಹುದು. ಆದ್ದರಿಂದ ಯಾವುದೇ ಅಂತಿಮ ತೀರ್ಮಾನ ಎಂದು ತೆಗೆದುಕೊಳ್ಳುವ ಮುನ್ನ ಅವರೊಂದಿಗೆ ಚರ್ಚಿಸಿ, ಆ ನಂತರ ಮುಂದುವರಿಯಿರಿ. ಸ್ಕೂಟರ್ ಅಥವಾ ಕಾರು ಖರೀದಿ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಬಾಡಿಗೆ ಮನೆಗಳಿಂದ ಆದಾಯ ಪಡೆಯುತ್ತಿರುವವರು ಆ ಮನೆಗಳ ದುರಸ್ತಿ, ಸುಣ್ಣ- ಬಣ್ಣ ಮಾಡಿಸುವುದಕ್ಕಾಗಿ ಸಂಬಂಧಪಟ್ಟವರನ್ನು ಕರೆಸಿ ಅಥವಾ ಫೋನ್ ಮೂಲಕ ಮಾತುಕತೆ ಆಡಲಿದ್ದೀರಿ. ಇನ್ನು ಯಾರು ಸ್ವಂತ ವ್ಯವಹಾರ ಅಥವಾ ಸ್ವಂತ ಉದ್ಯೋಗ ಮಾಡಿಕೊಂಡಿದ್ದೀರೋ ಅಂತಹವರಿಗೆ ಆದಾಯದ ಮೂಲಗಳು ಜಾಸ್ತಿ ಆಗುವ ಸೂಚನೆಗಳು ಕಂಡು ಬರಲಿವೆ. ವಿದೇಶದಲ್ಲಿ ಉನ್ನತ ವ್ಯಾಸಂಗ ಪಡೆಯಬೇಕು ಹಾಗೂ ವಿದೇಶದಲ್ಲಿ ಉದ್ಯೋಗಕ್ಕಾಗಿ ಎಂದು ಪ್ರಯತ್ನ ಮಾಡುತ್ತಿರುವವರಿಗೆ ಈ ತನಕ ಏನಾದರೂ ಅಡೆತಡೆಗಳು ಕಾಡುತ್ತಿದ್ದಲ್ಲಿ ಅವು ನಿವಾರಣೆಯಾಗಲಿವೆ. ಹೊಸ ದ್ವಿಚಕ್ರ ವಾಹನಗಳ ಮಾರಾಟ ಅಥವಾ ಸೆಕೆಂಡ್ ವಾಹನಗಳ ಮಾರಾಟ ಇಂಥದ್ದನ್ನು ಮಾಡುತ್ತಿರುವವರಿಗೆ ಹೊಸದಾಗಿ ಬಂಡವಾಳವನ್ನು ಹೂಡಿ, ವ್ಯವಹಾರವನ್ನು ಇನ್ನಷ್ಟು ವಿಸ್ತರಣೆ ಮಾಡಿಕೊಳ್ಳಬೇಕು ಎಂಬ ಆಲೋಚನೆ ಮೂಡಲಿದೆ. ಇದಕ್ಕೆ ಪೂರಕವಾಗಿ ಬೇಕಾದಂಥ ಸ್ಥಳ, ಹಣಕಾಸಿನ ವ್ಯವಸ್ಥೆ ಆಗಲಿದ್ದು, ಮನಸ್ಸಿಗೆ ಸಮಾಧಾನ ಆಗಲಿದೆ. ನಿಮ್ಮಲ್ಲಿ ಯಾರು ಸಂತಾನ ನಿರೀಕ್ಷೆಯಲ್ಲಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಶುಭ ಸುದ್ದಿ ಕೇಳಿ ಬರಲಿದೆ. ಈ ತಿಂಗಳು ನಿಮ್ಮ ಪಾಲಿಗೆ ಎಚ್ಚರಿಕೆ ಏನೆಂದರೆ, ಇತರರ ವೈಯಕ್ತಿಕ ವಿಚಾರಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ಅವರಾಗಿಯೇ ಬಂದು ನಿಮ್ಮನ್ನು ಸಲಹೆ ನೀಡುವಂತೆ ಕೇಳಿಕೊಂಡರೂ ಯಾವುದೇ ಅಭಿಪ್ರಾಯ ಹೇಳದೆ ಸುಮ್ಮನಿರುವುದು ಉತ್ತಮ. ನೀವು ಇತರರಿಗೆ ಈ ಹಿಂದೆ ನೀಡಿದ್ದ ಸಲಹೆಯಿಂದ ತುಂಬಾ ದೊಡ್ಡ ಮಟ್ಟದ ಅನುಕೂಲ, ಲಾಭ ಆಗಲಿದೆ. ಆ ಉಪಕಾರ ಸ್ಮರಣೆ ಎಂಬಂತೆ ನಿಮಗೆ ಏನಾದರೂ ನೆರವು ನೀಡಬೇಕು ಎಂದು ಅಂದುಕೊಳ್ಳುವ ಅವಕಾಶಗಳಿವೆ. ಖಾಸಗಿ ಕಂಪನಿಗಳಲ್ಲಿ ಯಾರು ಕಾರ್ಯ ನಿರ್ವಹಿಸುತ್ತಿದ್ದೀರೋ ಅಂಥವರು ಈ ತಿಂಗಳ ಮೂರನೇ ವಾರದ ಹೊತ್ತಿಗೆ ನಿಮ್ಮ ತಲೆಯಲ್ಲಿ ಆಲೋಚನೆಯ ಮಟ್ಟದಲ್ಲಿ ಇರುವಂಥದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ನಿಮಗೆ ಸಿಗಬೇಕಾದ ಯಶಸ್ಸಿನ ಪಾಲು ಇತರರಿಗೆ ಸಂದಾಯ ಆಗಲಿದೆ. ಭೂಮಿ ಖರೀದಿ- ಮಾರಾಟಕ್ಕೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರು ರಹಸ್ಯಗಳನ್ನು ಕಾಪಾಡಿಕೊಳ್ಳಿ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಆತ್ಮಸ್ಥೈರ್ಯ ಕುಗ್ಗುವಂಥ ಕೆಲವು ಬೆಳವಣಿಗೆಗಳು ಆಗಲಿವೆ. ಮುಖ್ಯವಾಗಿ ನಿಮ್ಮ ಹಣಕಾಸಿನ ಸಮಸ್ಯೆಗಳು ಹೆಚ್ಚಾಗಲಿವೆ. ಯಾವಾಗಲೂ ಆಗುವ ರೀತಿಯಲ್ಲಿ ಸಲೀಸಾಗಿ ಆಗುತ್ತದೆ, ಎಲ್ಲವೂ ಹೇಗೋ ಹೊಂದಾಣಿಕೆ ಆಗುತ್ತಿತ್ತು ಎಂಬಂಥ ಸ್ಥಿತಿ ಇದ್ದದ್ದು ಈ ತಿಂಗಳಲ್ಲಿ ಕಷ್ಟ ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ಸ್ನೇಹಿತರು- ಸಂಬಂಧಿಕರಿಂದ ಅವಮಾನಗಳು ಆಗಬಹುದು. ಅದೇ ರೀತಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಅಥವಾ ಸಾಲ ಮರುಪಾವತಿ ವಿಚಾರಗಳು ನಿಮ್ಮಲ್ಲಿ ಆತಂಕವನ್ನು ಉಂಟು ಮಾಡಲಿವೆ. ಒತ್ತಡದ ಕಾರಣಕ್ಕೆ ಕೆಲವು ಮುಖ್ಯ ಸಂಗತಿಗಳನ್ನು ಮರೆಯುವಂಥ ಸಾಧ್ಯತೆಗಳಿವೆ. ಯಾವುದೋ ಒಂದು ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡುವ ಪ್ರಯತ್ನದಲ್ಲಿ ಕೆಲವು ಡೆಡ್ ಲೈನ್ ಗಳನ್ನು ಮೀರಿ ಹೋಗಬಹುದು. ಉದ್ಯಮ- ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸದಾಗಿ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡು, ಹೆಚ್ಚಿನ ಹೂಡಿಕೆ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನಿಮ್ಮ ಅಭಿಪ್ರಾಯಕ್ಕೆ ಇತರರು ಅಸಮ್ಮತಿ ಸೂಚಿಸಬಹುದು, ಅಥವಾ ಈ ಸದ್ಯಕ್ಕೆ ಏನೂ ಮಾಡವುದು ಬೇಡ ಅಂತ ಒತ್ತಡ ಕೂಡ ಹಾಕುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮಲ್ಲಿ ಯಾರು ಲೇವಾದೇವಿ- ಬಡ್ಡಿ ವ್ಯವಹಾರವನ್ನು ಮಾಡುತ್ತಿರುವಿರೋ ಅಂಥವರು ಒಂದಿಷ್ಟು ಮೊತ್ತವನ್ನು ವಾಪಸ್ ಪಡೆದು, ಸುರಕ್ಷಿತವಾದ ವಿಧಾನದಲ್ಲಿ ಹೂಡಿಕೆ ಅಥವಾ ಉಳಿತಾಯ ಮಾಡುವುದು ಒಳಿತು. ನಿಮ್ಮಲ್ಲಿ ಯಾರು ಹೋಟೆಲ್ ವ್ಯವಹಾರ ಅಥವಾ ಹೋಲ್ ಸೇಲ್ ದಿನಸಿ ವ್ಯಾಪಾರ ಮಾಡುತ್ತಿದ್ದೀರೋ ಅಂಥವರಿಗೆ ಬಹಳ ನಂಬಿಕೆ ಇಟ್ಟಿದ್ದ ವ್ಯಕ್ತಿಯು ದೂರವಾಗುವಂಥ ಸಾಧ್ಯತೆಗಳಿವೆ. ಸ್ನೇಹಿತರು- ಸಂಬಂಧಿಕರು ಗುಂಪುಗೂಡಿರುವಾಗ ಅವರ ಮಧ್ಯೆ ನೀವು ತಮಾಷೆಗೆ ಎಂದು ಹೇಳಿದ ವಿಚಾರವೋ ಅಥವಾ ಮಾತೋ ಗಂಭೀರವಾದ ಸ್ವರೂಪ ಪಡೆದುಕೊಂಡು, ದೊಡ್ಡ ಮಟ್ಟದ ಜಗಳಕ್ಕೆ ಕಾರಣ ಆಗುವ ಸಾಧ್ಯತೆಗಳಿವೆ. ಆದ್ದರಿಂದ ಸನ್ನಿವೇಶ ಹಾಗೂ ಪರಿಸ್ಥಿತಿಯನ್ನು ಒಮ್ಮೆ ಅವಲೋಕಿಸಿ ಆ ನಂತರ ಮಾತನಾಡುವುದು ಕ್ಷೇಮ. ಬಹಳ ಇಷ್ಟಪಟ್ಟು ಮನೆಗೆ ತಂದಿದ್ದ ಎಲೆಕ್ಟ್ರಾನಿಕ್ ಅಥವಾ ಎಲೆಕ್ಟ್ರಿಕಲ್ ಉಪಕರಣಗಳನ್ನು ಹಿಂತಿರುಗಿಸಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಆದ್ದರಿಂದ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡದಿದ್ದರೆ ಒಳ್ಳೆಯದು. ಒಂದು ವೇಳೆ ಹೊಸತನ್ನೇ ಖರೀದಿ ಮಾಡಿದರೂ ಅದರ ಕಾರ್ಯ ನಿರ್ವಹಣೆ ಇತ್ಯಾದಿಗಳನ್ನು ಸರಿಯಾಗಿ ಪರಿಶೀಲಿಸಿಕೊಂಡ ನಂತರವಷ್ಟೇ ಮುಂದುವರಿಯಿರಿ. ಒಂದು ವೇಳೆ ಆಸ್ತಿ ಮಾರಾಟಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅಂದುಕೊಂಡ ಅಥವಾ ನೀವು ಗಡುವನ್ನು ಹಾಕಿಕೊಂಡ ಅವಧಿಯೊಳಗಾಗಿ ಮಾರಾಟ ಮಾಡುವುದು ಕಷ್ಟ ಆಗಬಹುದು. ಅಥವಾ ಈಗಾಗಲೇ ಅಡ್ವಾನ್ಸ್ ತೆಗೆದುಕೊಂಡಿದ್ದೀರಿ ಅಂತಾದಲ್ಲಿ ವ್ಯವಹಾರವು ತುಂಬ ಸಮಯ ಎಳೆದಾಡಲಿದೆ. ಇಂಥ ಸನ್ನಿವೇಶದಲ್ಲಿ ನರಸಿಂಹ ದೇವರ ಆರಾಧನೆಯನ್ನು ಮಾಡಿ, ಸಾಧ್ಯವಾದಲ್ಲಿ ಮಂಗಳವಾರದಂದು ತೈಲಾಭಿಷೇಕ ಮಾಡಿಸಿ. ಈ ತಿಂಗಳ ಕೊನೆಯ ಹೊತ್ತಿಗೆ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಬಹುದಾದ ವ್ಯಕ್ತಿ ಒಬ್ಬರನ್ನು ಭೇಟಿ ಆಗುವ ಯೋಗ ಇದ್ದು, ಅವರಿಂದ ನಿಮಗೆ ದೊಡ್ಡ ಮಟ್ಟದ ಅನುಕೂಲ ದೊರೆಯುವ ಸಾಧ್ಯತೆ ಇದೆ. ಇನ್ನು ಅಷ್ಟೇನೂ ಗಂಭೀರವಾಗಿ ತೆಗೆದುಕೊಳ್ಳದೆ ಮಾಡಿದಂತಹ ಕೆಲಸವೊಂದರಿಂದ ದೊಡ್ಡ ಲಾಭ ದೊರೆಯುವ ಅವಕಾಶಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಈ ಹಿಂದಿನ ಅನುಭವಗಳು ನೆರವಿಗೆ ಬರಲಿವೆ. ಹಿಂದೆ ತೆಗೆದುಕೊಂಡಿದ್ದ ತಪ್ಪು ನಿರ್ಧಾರಗಳು ಈಗ ಆಗಬಾರದು ಎಂಬುದಕ್ಕೆ ಬಹಳ ಎಚ್ಚರಿಕೆಯನ್ನು ವಹಿಸಲಿದ್ದೀರಿ. ಅದೇ ರೀತಿ ಈ ಹಿಂದೆ ಅರ್ಧಕ್ಕೆ ನಿಂತುಹೋಗಿದ್ದ ಎಲ್ಲ ಕೆಲಸವನ್ನೂ ಸರಿಯಾಗಿ ಯೋಜನೆ ಮಾಡಿಕೊಂಡು, ಅದರಲ್ಲೂ ಹಣಕಾಸಿನ ವಿಚಾರದಲ್ಲಿ ಗುರಿ ಇಟ್ಟುಕೊಂಡು ಕೆಲಸ ಆರಂಭಿಸುವ ಸಾಧ್ಯತೆಗಳಿವೆ. ಇದರಿಂದಾಗಿ ನಿಮ್ಮಲ್ಲೊಂದು ಆತ್ಮವಿಶ್ವಾಸ ಮೂಡಲಿದೆ. ವಿವಾಹಿತ ದಂಪತಿ ಮಧ್ಯೆ ಲೈಂಗಿಕ ವಿಚಾರಕ್ಕೆ ಮನಸ್ತಾಪಗಳು ಎದುರಾಗಬಹುದು. ಈ ವಿಚಾರಕ್ಕೆ ಮಾತು ಬಿಡುವಂಥ, ದೊಡ್ಡ ದನಿಯಲ್ಲಿ ಜಗಳವಾಡುವಂಥ ಸಾಧ್ಯತೆಗಳು ಸಹ ಇವೆ. ಇಂಥ ಸನ್ನಿವೇಶಗಳನ್ನು ಜಾಗ್ರತೆಯಿಂದ ನಿರ್ವಹಿಸಿ. ಯಾರು ವೃತ್ತಿನಿರತರು ಇದ್ದೀರಿ ಅಂಥವರಿಗೆ ಕುಟುಂಬದ ಸದಸ್ಯರೊಬ್ಬರಿಗೆ ಸಹಾಯ ಮಾಡಲೇಬೇಕು ಎಂಬ ಸ್ಥಿತಿ ಉದ್ಭವಿಸಲಿದೆ. ಈ ಹಿಂದೆ ನೀವೇ ಮರೆತು ಸುಮ್ಮನಾದಂಥ ಹಣವೊಂದು ಈ ತಿಂಗಳು ಬರುವಂತಹ ಸಾಧ್ಯತೆಗಳಿವೆ. ಹಾಗೇ ನಿಮ್ಮಲ್ಲಿ ಕೆಲವರು ಎಲೆಕ್ಟ್ರಿಕ್ ಸ್ಕೂಟರ್ ಅಥವಾ ವಾಹನ ಖರೀದಿ ಮಾಡುವ ಯೋಗ ಇದೆ. ಅದೇ ರೀತಿ ಚಿನ್ನ- ಬೆಳ್ಳಿ ಆಭರಣಗಳನ್ನು ಸಹ ಖರೀದಿಸುವ ಸಾಧ್ಯತೆಗಳಿವೆ. ನೀವು ಈ ತಿಂಗಳಲ್ಲಿ ಮುಖ್ಯವಾಗಿ ಒಂದು ವಿಷಯ ಗಮನದಲ್ಲಿ ಇಟ್ಟುಕೊಳ್ಳಿ, ಇತರರ ಖಾಸಗಿ ವಿಷಯಗಳನ್ನು ಮಾತನಾಡದಿರುವುದು ಒಳ್ಳೆಯದು. ಅದರಲ್ಲೂ ಇತರರ ಮನೆಯ ಸಾಂಸಾರಿಕ ವಿಷಯಗಳ ಬಗ್ಗೆಯಂತೂ ಯಾವುದೂ ಕಾರಣಕ್ಕೂ ಮೂಗು ತೂರಿಸುವುದಕ್ಕೆ ಹೋಗಬೇಡಿ. ಮಹಿಳೆಯರಿಗೆ ವರ್ಚಸ್ಸಿಗೆ ಧಕ್ಕೆ ಮಾಡಬೇಕು ಎಂದು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬರಲಿದೆ. ನಿಮ್ಮ ಇನ್ ಟ್ಯೂಷನ್ ಬಹಳ ಜಾಗೃತವಾಗಿರುತ್ತದೆ. ಯಾವ ವ್ಯಕ್ತಿ ಜತೆಗೆ ವ್ಯವಹರಿಸುತ್ತಿದ್ದೀರಿ ಎಂಬ ಬಗ್ಗೆ ನಿಮ್ಮ ಮನಸ್ಸಿನ ಮಾತನ್ನು ಕೇಳಿ, ತೀರ್ಮಾನವನ್ನು ಕೈಗೊಳ್ಳಿ. ಗೆಳೆಯರೋ ಅಥವಾ ಸಂಬಂಧಿಕರೋ ಹೀಗೆ ಮೇಲಿಂದ ಮೇಲೆ ತಮ್ಮ ಮನೆಗೆ ಊಟವೋ ತಿಂಡಿಗಾಗಿಯೋ ಆಹ್ವಾನ ನೀಡಲಿದ್ದಾರೆ. ಸಣ್ಣದಾಗಿ ಆರಂಭಿಸುವ ವ್ಯವಹಾರದ ಬಗೆಗಿನ ಮಾತು ದೊಡ್ಡ ಮಟ್ಟದಲ್ಲಿ ತಿರುವು ಪಡೆದುಕೊಂಡು, ಭವಿಷ್ಯದಲ್ಲಿ ಅನುಕೂಲವಾಗಿ ಮಾರ್ಪಡಬಹುದು. ಆನ್ ಲೈನ್ ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವಂಥವರು ಲಾಗಿನ್ ಐಡಿ, ಪಾಸ್ ವರ್ಡ್ ಜೋಪಾನವಾಗಿ ಇರಿಸಿಕೊಳ್ಳಿ. ಕೆಲಸ ಮಾಡುವ ಸಂಸ್ಥೆಯವರು, ಕಂಪನಿಯ ಟಾಪ್ ಮ್ಯಾನೇಜ್ ಮೆಂಟ್ ನವರು ನಿಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಅಗಾಧವಾದದ್ದು ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ನೀವು ಶಿಫಾರಸು ಅಥವಾ ರೆಫರೆನ್ಸ್ ಮೂಲಕವಾಗಿ ಇತರರಿಗೆ ಕೆಲಸ ಕೊಡಿಸುವಂಥ ಸಾಧ್ಯತೆಗಳಿವೆ. ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮಗೆ ನೀವೇ ಇದು ಸಾಮಾನ್ಯವಾದ ಸಮಸ್ಯೆ ಎಂದೇನಾದರೂ ನಿರ್ಲಕ್ಷ್ಯ ಮಾಡಿದಲ್ಲಿ ದೊಡ್ಡ ಬೆಲೆ ತೆರಬೇಕಾದೀತು. ದೈಹಿಕವಾಗಿ ಒತ್ತಡ ಎನಿಸುವಂಥ ಕೆಲಸಗಳನ್ನು ಮಾಡದಿರುವುದು ಉತ್ತಮ. ವಿವಾಹ ವಯಸ್ಕರು ಮನಸ್ಸಿನಲ್ಲಿ ಇರುವ ಪ್ರೇಮ ವಿಚಾರವನ್ನು ನಿವೇದನೆ ಮಾಡಬೇಕು ಅಂದುಕೊಳ್ಳುತ್ತಿರುವವರು ಕೊನೆ ಕ್ಷಣದಲ್ಲಿ ಗೊಂದಲಕ್ಕೆ ಬೀಳುತ್ತೀರಿ. ಈ ವ್ಯಕ್ತಿ ಸೂಕ್ತವೇ ಎಂಬ ಪ್ರಶ್ನೆ ಮೂಡಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹಳೇ ಮನಸ್ತಾಪ, ಅಭಿಪ್ರಾಯ ಭೇದಗಳು ದೂರವಾಗುವಂಥ ಸಮಯವಿದು. ಇನ್ನು ಯಾರು ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದೀರಿ, ಅಂಥವರು ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಉತ್ತಮ ಫಲಿತಾಂಶವನ್ನು ನಿರೀಕ್ಷೆ ಮಾಡಬಹುದು. ಇದೇ ವೇಳೆ ಮನೆಯಲ್ಲಿ ಸಕಾರಾತ್ಮಕವಾದ ವಾತಾವರಣ ಇರಲಿದೆ. ಸಾಮಾಜಿಕವಾಗಿ ನಿಮಗೆ ಸಿಗಬೇಕಾದ ಮನ್ನಣೆ ದೊರೆತು, ನಿಮ್ಮಲ್ಲಿ ಒಂದು ಸಾಧನೆ ಮಾಡಿದಂಥ ಸಮಾಧನ ಇರಲಿದೆ. ಇನ್ನು ದಿಢೀರನೇ ನೀವು ಅಂದುಕೊಂಡಂತೆಯೇ ಹಲವು ಬದಲಾವಣೆಗಳು, ಬೆಳವಣಿಗೆಗಳು ಕಂಡುಬರಲಿವೆ. ಕೋರ್ಟ್ ವ್ಯಾಜ್ಯಗಳು ನಡೆಯುತ್ತಿದ್ದಲ್ಲಿ ಕೆಲವರಿಗೆ ರಾಜೀ- ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೆ ಅವಕಾಶಗಳು ದೊರೆಯಲಿವೆ. ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಕೆಲವು ಅನುಕೂಲಗಳು ದೊರೆಯುವ ಸಾಧ್ಯತೆ ಇದೆ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಮುಗಿಸಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ಸ್ವಂತ ವ್ಯವಹಾರ ಮಾಡುತ್ತಿರುವವರು ವ್ಯಾಪಾರ ವಿಸ್ತರಣೆಗಾಗಿ ಯೋಜನೆಯನ್ನು ರೂಪಿಸಲಿದ್ದೀರಿ. ಇದಕ್ಕಾಗಿ ಸಾಲ ಪಡೆಯುವುದರ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಎಲ್ಲ ಕೆಲಸವನ್ನು ಒಬ್ಬರೇ ಮಾಡುವುದಕ್ಕೆ ಹೊರಡಬೇಡಿ. ಇತರರ ಸಹಾಯದ ಅಗತ್ಯ ಕಂಡುಬಂದಲ್ಲಿ ಪಡೆದುಕೊಳ್ಳಿ. ಯಾರಿಗೆ ಕಾಲು ನೋವಿನ ಸಮಸ್ಯೆ ಈಗಾಗಲೇ ಅನುಭವಿಸುತ್ತಿದ್ದಲ್ಲಿ ಅದು ಉಲ್ಬಣ ಆಗುವಂತಹ ಸಾಧ್ಯತೆಗಳಿವೆ. ಆ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಯಾರು ಸರ್ಕಾರಿ ಉದ್ಯೋಗಿಗಳು ಇದ್ದೀರಿ ಅಂಥವರು ಆರಂಭಿಸಿದ ಕೆಲಸಗಳು ಸಲೀಸಾಗಿ ಮುಗಿಯುವುದಕ್ಕೆ ಬೇಕಾದ ವೇದಿಕೆ ಸಿದ್ಧವಾಗಲಿದೆ. ಯಾರು ಸ್ವಂತ ಉದ್ಯಮ ಅಥವಾ ವ್ಯವಹಾರವನ್ನು ಆರಂಭಿಸಬೇಕು ಎಂದಿದ್ದೀರಿ ಅಂಥವರಿಗೆ ಸ್ನೇಹಿತರ ಬಳಿ ನಿಮಗೆ ಬೇಕಾದ ಪದಾರ್ಥಗಳು ಇದೆ ಎಂದು ಗೊತ್ತಾದಲ್ಲಿ, ಅವರಿಂದ ಸಹಾಯ ಕೂಡ ದೊರೆಯಬಹುದು ಎಂದಾದಲ್ಲಿ ಕೇಳಿ ಪಡೆದುಕೊಳ್ಳುವುದಕ್ಕೆ ಸಂಕೋಚ ಪಡದಿರಿ. ಯಾರು ಮ್ಯಾನೇಜರ್ ಅಥವಾ ಅದಕ್ಕಿಂತ ಮೇಲಿನ ಹಂತದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೀರಿ ಅಂಥವರರಿಗೆ ಅನಿರೀಕ್ಷಿತವಾಗಿ ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿಗಳನ್ನು ವಹಿಸುವಂಥ ಸಾಧ್ಯತೆ ಇದೆ. ಹೀಗಾಗುವುದರಿಂದ ನಿಮ್ಮ ಆರೋಗ್ಯದ ಮೇಲೆ ಗಮನ ತೆಗೆದುಕೊಳ್ಳುವುದು ಸ್ವಲ್ಪ ಮಟ್ಟಿಗೆ ಕಷ್ಟ ಎನಿಸಬಹುದು. ಆದರೆ ನೀವು ಹಾಕುವ ಶ್ರಮಕ್ಕೆ ತಕ್ಕಂಥ ಪ್ರತಿಫಲ ಖಂಡಿತಾ ದೊರೆಯಲಿದೆ. ಪೌರೋಹಿತ್ಯ, ಜ್ಯೋತಿಷ ಅಥವಾ ದೇವಾಲಯದ ಪಾರುಪತ್ಯೆ ವಹಿಸಿಕೊಂಡಂಥವರಿಗೆ ದೇವತಾ ಕಾರ್ಯಗಳಿಗೆ ಆಹ್ವಾನ ಬರುವಂಥ ಯೋಗ ಇದ್ದು, ಬಂಧುಗಳು ಹಾಗೂ ಸ್ನೇಹಿತರ ಜತೆಗೂಡಿ ರುಚಿಕಟ್ಟಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ಮಹಿಳೆಯರು ತಾವು ಮಾಡಿದ ಉಳಿತಾಯದ ಹಣವನ್ನು ತೆಗೆದುಕೊಂಡು, ಹೊಸ ವಸ್ತ್ರಾಭರಣಗಳನ್ನು ಸಹ ಖರೀದಿಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಉದ್ಯೋಗದ ವಿಚಾರವೇ ಇರಬಹುದು ಅಥವಾ ಮನೆ ನಿರ್ಮಾಣ, ನವೀಕರಣ ಅಥವಾ ಮತ್ಯಾವುದೇ ಮುಖ್ಯ ಕೆಲಸ ಇರಬಹುದು, ನೀವು ಅವುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು ಮುಖ್ಯವಾಗುತ್ತದೆ. ಅದರಲ್ಲೂ ಈ ತಿಂಗಳು ಅದೃಷ್ಟ ನಿಮ್ಮ ಪಾಲಿಗೆ ಬಹಳ ಮುಖ್ಯವಾಗುತ್ತದೆ. ನಿಮಗೆ ಎಷ್ಟೇ ಹತ್ತಿರದವರು ಹೇಳಿದರೂ ಯಾವುದೇ ಕಾರಣಕ್ಕೂ ಹೇಳಿಕೆ ಮಾತುಗಳನ್ನು ಕೇಳಬೇಡಿ. ನಿಮ್ಮ ಮೂಲಕ ಇತರರು ತಮ್ಮ ಗುರಿ ಸಾಧನೆ ಮಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ. ನಿಮ್ಮ ಹೆಸರು, ವರ್ಚಸ್ಸು ದುರುಪಯೋಗ ಆಗದಂತೆ ನೋಡಿಕೊಳ್ಳಿ. ನಿಮ್ಮ ಕೆಲಸ ಆಗಬೇಕು ಎಂಬ ಕಾರಣಕ್ಕೆ ಕೆಲವು ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮದು ಎಂಬಂಥ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನೀವಾಗಿಯೇ ಮಾತು ಕೊಟ್ಟು ಅಸಾಧ್ಯ ಎನಿಸುವಂಥ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳದಿರಿ. ನಿಮ್ಮಲ್ಲಿ ಕೆಲವರಿಗೆ ಸಾಂಸಾರಿಕ ವಿಚಾರದಲ್ಲಿ ಚಿಂತೆ ಕಾಡಬಹುದು. ಹಾಗಂತ ಅದರ ಬಗ್ಗೆ ತಲೆ ಕೆಡಿಸಿಕೊಂಡು, ಉಳಿದಿದ್ದರ ಬಗ್ಗೆ ನಿರ್ಲಕ್ಷ್ಯವನ್ನು ಮಾಡಬೇಡಿ. ಅದರಲ್ಲೂ ತಿಂಡಿ, ಊಟ, ನಿದ್ರೆಯನ್ನು ಸರಿಯಾದ ಸಮಯಕ್ಕೆ ಮಾಡುವುದರ ಕಡೆಗೆ ಲಕ್ಷ್ಯ ನೀಡಿ. ನಿಮ್ಮಲ್ಲಿ ಯಾರು ಕಾನೂನು ವಿಚಾರಕ್ಕೆ ಸಂಬಂಧಿಸಿದ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳು ಇದ್ದೀರೋ ಅಂಥವರಿಗೆ ಈ ತಿಂಗಳು ಉತ್ತಮ ಸಮಯವಾಗಿದೆ. ದ್ವಿಚಕ್ರ ವಾಹನ ಅಥವಾ ಕಾರು ಖರೀದಿಸುವ ಯೋಗಬಿದೆ. ಯಾರು ಗುತ್ತಿಗೆದಾರರಿಗಿದ್ದೀರಿ, ಸರ್ಕಾರಿ ಟೆಂಡರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸುವಂಥವರು ಇದ್ದೀರಿ ಅಂಥವರಿಗೆ ಒತ್ತಡದ ಸನ್ನಿವೇಶ ಎದುರಾಗಲಿದೆ. ರಂಗಭೂಮಿ, ಸ್ಟ್ಯಾಂಡ್ ಅಪ್ ಕಾಮಿಡಿ, ಸಿನಿಮಾ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಪ್ರಾಜೆಕ್ಟ್ ಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ. ನಿಮ್ಮ ಆದಾಯದಲ್ಲಿ ದಿಢೀರನೇ ಹೆಚ್ಚಳ ಆಗಲಿದೆ. ಆದರೆ ನಂಬಿಕೊಂಡು ಹೊಸದಾಗಿ ಯಾವುದೇ ಸಾಲ ತೆಗೆದುಕೊಳ್ಳುವುದೋ ಅಥವಾ ಹಣಕಾಸಿನ ಜವಾಬ್ದಾರಿಯನ್ನು ಮೈ ಮೇಲೆ ಹಾಕಿಕೊಳ್ಳುವುದೋ ಮಾಡಬೇಡಿ. ಸ್ವಂತ ವಿಚಾರದಲ್ಲಿ ಯಾರಾದರೂ ಸಲಹೆ ನೀಡಿದಲ್ಲಿ ಅದನ್ನು ಸರಿಯಾಗಿ ಕೇಳಿಸಿಕೊಳ್ಳಿ. ಹಾಗೂ ಅದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಸರಿಯಾದ ಯೋಜನೆ ರೂಪಿಸುವುದು ಮುಖ್ಯ. ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂತಾದಲ್ಲಿ ಇದರಿಂದ ನಿಮಗೆ ಅನುಕೂಲ ಆಗಲಿದೆ. ರಿಯಲ್ ಎಸ್ಟೇಟ್ ಉದ್ದೇಶದಿಂದ ಜಮೀನು- ಆಸ್ತಿ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ದೊರೆಯಬಹುದಾದ ದೊಡ್ಡ ಜವಾಬ್ದಾರಿ ಬಗ್ಗೆ ಸುಳಿವು ದೊರೆಯಲಿದೆ. ಇನ್ನು ವೇತನ ಹೆಚ್ಚಳದ ಬಗ್ಗೆ ಸುಳಿವು ಸಹ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಬೆಳ್ಳಿ ತಟ್ಟೆ, ಲೋಟ ಹೀಗೆ ಮೊದಲಾದ ಬೆಳ್ಳಿಯ ವಸ್ತುಗಳನ್ನು ಖರೀದಿ ಮಾಡುವಂತಹ ಯೋಗ ಇದೆ. ಇನ್ನು ಯಾರು ತಮ್ಮ ಮಕ್ಕಳಿಗಾಗಿ ವಿವಾಹ ಪ್ರಯತ್ನಗಳನ್ನು ಮಾಡುತ್ತಿದ್ದಲ್ಲಿ ಅಂಥವರಿಗೆ ಸೂಕ್ತ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಆದರೆ ನೆನಪಿನಲ್ಲಿಡಿ, ಇನ್ನೂ ಪೂರ್ತಿಯಾಗದ ಅಥವಾ ರಹಸ್ಯಗಳನ್ನು ಒಳಗೊಂಡ ವಿಚಾರಗಳನ್ನು ಯಾರ ಜೊತೆಗೂ ಹಂಚಿಕೊಳ್ಳಬೇಡಿ. ನಿಮ್ಮಲ್ಲಿ ಕೆಲವರು ದೇವರ ಆರಾಧನೆಯನ್ನು ಆಯೋಜನೆ ಮಾಡುವ ಯೋಗ ಇದ್ದು, ಈ ವೇಳೆ ದಾನ- ಧರ್ಮ ಕಾರ್ಯಗಳನ್ನು ಮಾಡಲಿದ್ದೀರಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚು ಸಕಾರಾತ್ಮಕ ಬೆಳವಣಿಗೆಗಳು ಆಗಲಿವೆ. ಒಂದು ವೇಳೆ ಇಲ್ಲಿಯ ತನಕ ನಿಮ್ಮ ಕೆಲವು ಕೆಲಸಗಳು ಏನು ಮಾಡಿದರೂ ತುದಿ ಮುಟ್ಟುತ್ತಿಲ್ಲ ಎಂದೆನಿಸುತ್ತಿರುವುದು ಈ ತಿಂಗಳಲ್ಲಿ ಒಂದೊಂದಾಗಿ ಮುಗಿಯುತ್ತಾ ಬರಲಿದೆ. ಮುಖ್ಯವಾಗಿ ನಿಮ್ಮ ಏಕಾಗ್ರತೆ ಒಂದೇ ಕಡೆ ಸ್ಥಿರವಾಗಿ ಅವುಗಳನ್ನು ಪೂರ್ಣಗೊಳಿಸುವುದಕ್ಕೆ ಸಹಕಾರಿ ಆಗಲಿದೆ. ಇಷ್ಟು ಸಮಯ ನಿಮಗೆ ಹಣಕಾಸಿನ ಕಾರಣಕ್ಕೋ ಅಥವಾ ಸಮಯ ಹೊಂದಾಣಿಕೆ ಆಗದೆಯೇ ಮಾಡಲಿಕ್ಕೆ ಸಾಧ್ಯವಾಗದೇ ಉಳಿದ ವೃತ್ತಿಪರವಾದ ಕೋರ್ಸ್ ಗಳು ಅಥವಾ ಉದ್ಯೋಗಕ್ಕೆ ಸಹಾಯ ಆಗುವಂತಹ ಯಾವುದಾದರೂ ತಾಂತ್ರಿಕ ಕೌಶಲ ಕಾರ್ಯಕ್ರಮಗಳಲ್ಲಿ ನೀವು ತೊಡಗಿಸಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಯಾರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಶೀನ್ ಲರ್ನಿಂಗ್, ಡೇಟಾ ಅನಲಿಟಿಕ್ಸ್ ಇಂಥ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಅಂತಹವರು ಅಲ್ಪ ಸಮಯಕ್ಕಾದರೂ ವಿದೇಶಕ್ಕೆ ತೆರಳಬೇಕಾದ ಸುಳಿವು ದೊರೆಯಲಿದೆ ಅಥವಾ ನಿಮ್ಮಲ್ಲಿ ಕೆಲವರು ಹೋಗಲೂ ಬಹುದು. ಪರ್ಫಾರ್ಮೆನ್ಸ್ ಲಿಂಕ್ಡ್ ಬೋನಸ್ ಕೂಡ ನಿರೀಕ್ಷೆ ಮಾಡಬಹುದು. ಇನ್ನು ಸಿವಿಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರು, ಮನೆ ನಿರ್ಮಾಣ ಕಾಂಟ್ರ್ಯಾಕ್ಟ್ ಗಳನ್ನು ಪಡೆಯುವಂಥವರಿಗೆ ದೊಡ್ಡ ಕಾಂಟ್ರ್ಯಾಕ್ಟ್ ದೊರೆಯುವಂಥ ಯೋಗ ಇದೆ. ಒಂದು ವೇಳೆ ಆರೇಳು ತಿಂಗಳ ಹಿಂದೆ ಒಂದು ಪ್ರಾಜೆಕ್ಟ್ ಬಗ್ಗೆ ಚರ್ಚೆ ನಡೆಸಿದ್ದಿರಿ, ಆ ನಂತರ ಅದರ ಬಗ್ಗೆ ಯಾವುದೇ ಬೆಳವಣಿಗೆ ಆಗಿರಲಿಲ್ಲ ಎಂದಿದ್ದರೂ ಸಹ ಈ ತಿಂಗಳು ಅವರು ಮತ್ತೆ ನಿಮ್ಮನ್ನು ಹುಡುಕಿಕೊಂಡು ಬರಬಹುದು. ಹೈನುಗಾರಿಕೆ ಮಾಡುತ್ತಿರುವವರು, ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಬಿಡುವಿಲ್ಲದಷ್ಟು ಕೆಲಸಗಳು ಮೈ ಮೇಲೆ ಬೀಳಲಿವೆ. ಯಾರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಇದ್ದೀರಿ ಅಂಥವರು ಹೆಚ್ಚಿನ ಲಾಭ ಅಥವಾ ಆದಾಯವನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸಿ. ಚರ್ಮ ಸಿಪ್ಪೆ ಸಿಪ್ಪೆಯಾಗಿ ಬಿಡಿಸುವಂತೆ ಆಗುವುದು, ಚರ್ಮದ ಬಣ್ಣವೇ ಬದಲಾಗುವುದು, ಕಪ್ಪು ಬಣ್ಣಕ್ಕೆ ತಿರುಗುವುದು ಈ ರೀತಿ ಆಗಿ, ಆತಂಕಕ್ಕೆ ಕಾರಣ ಆಗಬಹುದು. ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವ ಕಡೆಗೆ ಗಮನ ನೀಡಿ. ಮನೆಯಿಂದ ದೂರ ಇದ್ದುಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಆಹಾರದಲ್ಲಿ ಸಮಸ್ಯೆಯಾಗಿ, ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವಾಗಿ ವ್ಯಾಸಂಗದಲ್ಲಿ ಹಿನ್ನಡೆ ಆಗಬಹುದು. ಅಥವಾ ಯಾರಿಗೆ ಪೂರ್ವಸಿದ್ಧತಾ ಪರೀಕ್ಷೆಗಳು ಅಥವಾ ಪ್ರವೇಶ ಪರೀಕ್ಷೆಗಳು ಇವೆಯೋ ಅಂಥವರಿಗೆ ಅದರಲ್ಲಿ ಹೇಳಿಕೊಳ್ಳುವಂಥ ಯಶಸ್ಸು ಸಿಗದೆ ಹೋಗಬಹುದು. ಇಂಥ ಸಂದರ್ಭದಲ್ಲಿ ಯಾರ ಜತೆಗೂ ನಿಮ್ಮನ್ನು ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಆಗಿರುತ್ತದೆ. ಪೊಲೀಸ್ ಇಲಾಖೆಯಲ್ಲಿ ಇರುವಂಥ ಮಹಿಳೆಯರಿಗೆ ಕೆಲಸದಲ್ಲಿ ಒತ್ತಡ ಜಾಸ್ತಿ ಆಗಲಿದೆ. ನಿಮಗೆ ಬೇಡದ ಅಥವಾ ಹಿಂಸೆ ಎನಿಸುವಂಥ ಕೆಲವು ಜವಾಬ್ದಾರಿಗಳನ್ನು ಹೆಚ್ಚುವರಿಯಾಗಿ ನಿರ್ವಹಿಸಲೇ ಬೇಕಾದಂಥ ಅನಿವಾರ್ಯ ಸೃಷ್ಟಿ ಆಗಲಿದೆ. ಸಣ್ಣ ಸಣ್ಣ ಒಡವೆಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗುವಾಗ ಅಥವಾ ಯಾರಿಗಾದರೂ ಅದನ್ನು ತೋರಿಸುತ್ತಿದ್ದೀರಿ ಅಂತಾದಲ್ಲಿ ಜೋಪಾನವಾಗಿ ಇರಬೇಕು. ಇಲ್ಲದಿದ್ದಲ್ಲಿ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ದಾಕ್ಷಿಣ್ಯಕ್ಕೆ ಸಿಕ್ಕಿಕೊಂಡೋ ಅಥವಾ ನಿಮ್ಮ ಎದುರಿಗೆ ವ್ಯಕ್ತಿಗಳೇ ಅರ್ಥ ಮಾಡಿಕೊಂಡು ನಿಮಗೆ ಸೇರಬೇಕಾದ್ದನ್ನು ಕೊಡುತ್ತಾರೆ ಅಂತಲೋ ಅಂದುಕೊಂಡರೆ ನಿಮ್ಮದೇ ತಪ್ಪಾದೀತು. ಏಕೆಂದರೆ ಎಲ್ಲ ಬಾರಿಯೂ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ಸಾಧ್ಯತೆಯೇನೂ ಇರುವುದಿಲ್ಲ. ಕೆಲವು ಬಾರಿ ನಾವೇ ಕೇಳಿ ಪಡೆದುಕೊಳ್ಳಬೇಕಾಗುತ್ತದೆ. ಈ ತಿಂಗಳು ಅಂಥದ್ದೇ ಪರಿಸ್ಥಿತಿ ಇರುತ್ತದೆ. ನಿಮಗೆ ಸಿಗಬೇಕಾದದ್ದನ್ನು ಕೇಳಿ ಪಡೆಯಬೇಕು. ಮೇಲಧಿಕಾರಿಗಳು ನಿಮಗೆ ಹೇಳುವ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ಅದೇ ರೀತಿಯಾಗಿ ಉದ್ಯೋಗ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಅತಿ ಮುಖ್ಯವಾದ ವಿಚಾರಗಳು ಏನಾದರೂ ಇದ್ದಲ್ಲಿ ಅದನ್ನು ನೀವು ಮೇಲಿನವರಿಗೆ ಮುಟ್ಟಿಸಿದ್ದೀರಿ ಎಂಬುದಕ್ಕೆ ದಾಖಲೆಗಳನ್ನು ಇಟ್ಟುಕೊಳ್ಳಿ. ಈಗಾಗಲೇ ನಿರ್ಧಾರವಾದಂಥ ಪ್ರಯಾಣವೋ ಹೂಡಿಕೆ ತೀರ್ಮಾನವನ್ನೋ ಬದಲಿಸಬೇಕಾದಂಥ ಅನಿವಾರ್ಯ ಸೃಷ್ಟಿ ಆಗಲಿದೆ. ಆದರೆ ಇದಕ್ಕಾಗಿ ಬೇಸರ ಮಾಡಿಕೊಳ್ಳಬೇಡಿ. ಇನ್ನು ನೀವು ಇತರರನ್ನು ನಂಬಿ, ಒಪ್ಪಿಸಿದಂಥ ಕೆಲಸವು ಅಂದುಕೊಂಡಂತೆ ಪೂರ್ತಿ ಆಗದೆ ಬೇಸರ ಆಗಲಿದೆ. ಬ್ಯೂಟಿಪಾರ್ಲರ್ ನಡೆಸುತ್ತಿರುವವರಿಗೆ ಆದಾಯದಲ್ಲಿ ಇಳಿಕೆ ಕಂಡುಬಂದು, ಆತಂಕಕ್ಕೆ ಕಾರಣ ಆಗಬಹುದು. ಆದರೆ ಇದು ತಾತ್ಕಾಲಿಕ ಅಷ್ಟೇ ಎಂಬುದು ಗಮನದಲ್ಲಿ ಇರಲಿ. ವ್ಯಾಪಾರ- ವ್ಯವಹಾರ ಮಾಡುವವರಾಗಿದ್ದಲ್ಲಿ ನೀವು ಯಾವ ಕೆಲದ ಸಲೀಸಾಗಿ ಆಗಬಹುದು ಎಂದು ನಿರೀಕ್ಷೆ ಮಾಡಿರುತ್ತೀರೋ ಆ ಕೆಲಸದಲ್ಲೂ ದೈಹಿಕ ಪರಿಶ್ರಮ ಹೆಚ್ಚಾಗಲಿದೆ. ಆದ್ದರಿಂದ ಯಾವುದೇ ಕೆಲಸ ಮಾಡುವ ಮುಂಚೆ ಸರಿಯಾದ ಯೋಜನೆಯನ್ನು ಮಾಡುವುದು ಮುಖ್ಯ. ಎದುರಿಗಿರುವ ವ್ಯಕ್ತಿಯ ಸಾಮರ್ಥ್ಯವನ್ನು ತಿಳಿದುಕೊಳ್ಳದೆ ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳದಿರಿ. ವಾಹನಗಳು ಇದ್ದಲ್ಲಿ ದುರಸ್ತಿಗಾಗಿ ಹಣ ಖರ್ಚಾಗುವಂಥ ಯೋಗ ಇದೆ. ಯಾರು ಸಹಕಾರ ಸಂಘಗಳು ಅಥವಾ ಕೋ ಆಪರೇಟಿವ್ ಸೊಸೈಟಿಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ ಹಾಗೂ ಸಣ್ಣ-ಪುಟ್ಟ ಕಾರಣಗಳಿಂದ ನಿಮ್ಮ ಕೆಲಸ ನಿಧಾನವಾಗುತ್ತಿದೆ ಎಂದೆನಿಸುತ್ತಿದ್ದಲ್ಲಿ ಅಂಥವರಿಗೆ ಇತರರಿಂದ ಶಿಫಾರಸು ಮಾಡಿಸುವ ಮೂಲಕ ಕೆಲಸಗಳು ವೇಗವಾಗಿ ಆಗಲಿವೆ. ಕುಟುಂಬದಲ್ಲಿ ಪಾರದರ್ಶಕವಾಗಿ ನಡೆದುಕೊಳ್ಳುವುದು ಮುಖ್ಯವಾಗುತ್ತದೆ. ಅದರಲ್ಲೂ ಸಂಗಾತಿ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳು ನಿಮ್ಮ ಗುಣ- ಸ್ವಭಾವದಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದು ಬಲವಾಗಿ ಅನಿಸಲು ಶುರುವಾಗಲಿದೆ. ಇನ್ನೂ ಹೆಚ್ಚಿನ ಶ್ರಮ ಹಾಕಬೇಕು, ಏಕಾಗ್ರತೆ ಸಾಧಿಸಬೇಕು, ಆಲಸ್ಯವನ್ನು ಬಿಡಬೇಕು ಎಂದು ಸಂಕಲ್ಪ ಮಾಡಲಿದ್ದೀರಿ. ಕೃಷಿ ವೃತ್ತಿಯಲ್ಲಿ ಇರುವಂಥವರು ಆದಾಯ ಮೂಲ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ತೀವ್ರಗೊಳಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಸ್ನೇಹಿತರು ಕೇಳಿದರು ಎಂಬ ಕಾರಣಕ್ಕೆ ಅವರಿಗಾಗಿ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ ಅವರ ಮನೆಗೆ ಅಗತ್ಯ ಇರುವಂಥ ವಸ್ತುಗಳನ್ನು ಖರೀದಿ ಮಾಡುವುದಕ್ಕೆ ನೆರವು ನೀಡಲಿದ್ದೀರಿ. ನಿಮ್ಮ ಸೋದರ ಸಂಬಂಧಿಗಳ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕಾಗಿ ಹಣಕಾಸಿನ ನೆರವನ್ನು ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರು ಈಗಿರುವ ಮನೆಯ ಬದಲಾವಣೆಗಾಗಿ ಕುಟುಂಬದ ಸದಸ್ಯರ ಜತೆಗೆ ಚರ್ಚೆ ನಡೆಸಲಿದ್ದೀರಿ. ಪ್ರೇಮಿಗಳಿಗೆ, ನವ ವಿವಾಹಿತರಿಗೆ ವಿರಹ ವೇದನೆ ಅನುಭವಿಸುವ ಯೋಗ ಇದೆ.
ಲೇಖನ- ಎನ್.ಕೆ. ಸ್ವಾತಿ