Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 18ರ ದಿನಭವಿಷ್ಯ
ಈ ಲೇಖನವು ನವೆಂಬರ್ 18ರ ಜನ್ಮಸಂಖ್ಯೆ ಆಧಾರಿತ ಸಂಖ್ಯಾಶಾಸ್ತ್ರ ದಿನಭವಿಷ್ಯವನ್ನು ಒಳಗೊಂಡಿದೆ. ನಿಮ್ಮ ಹುಟ್ಟಿದ ದಿನಾಂಕದ ಪ್ರಕಾರ ಜನ್ಮಸಂಖ್ಯೆಯನ್ನು ಹೇಗೆ ಲೆಕ್ಕ ಹಾಕಬೇಕು ಎಂಬ ಮಾಹಿತಿಯೂ ಇದೆ. ಪ್ರತಿ ಜನ್ಮಸಂಖ್ಯೆಗೆ (1-9) ಆರೋಗ್ಯ, ಉದ್ಯೋಗ, ಹಣಕಾಸು ಮತ್ತು ವೈಯಕ್ತಿಕ ಜೀವನದ ಬಗ್ಗೆ ವಿವರವಾದ ಭವಿಷ್ಯಗಳನ್ನು ನೀಡಲಾಗಿದೆ. ಈ ದಿನ ನಿಮಗೆ ಶುಭವಾಗಲಿದೆಯೇ ಅಥವಾ ಸವಾಲುಗಳಿವೆಯೇ ಎಂದು ತಿಳಿದುಕೊಳ್ಳಿ.

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 18ರ ಮಂಗಳವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಮಕ್ಕಳ ಅನಾರೋಗ್ಯ ಸಮಸ್ಯೆ ನಿಮಗೆ ಚಿಂತೆಗೆ ಕಾರಣ ಆಗಬಹುದು. ಅಥವಾ ಮನೆಯ ಕಿರಿಯ ಸದಸ್ಯರು ಯಾರಿದ್ದಾರೆ ಅವರಿಗೆ ಶೀತ, ಕಫ, ಕೆಮ್ಮು ಇಂಥವುಗಳು ಹೆಚ್ಚಾಗಿ, ವೈದ್ಯರ ಬಳಿ ತೆರಳಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸ್ವಲ್ಪ ಕೂಡ ಇಷ್ಟ ಇಲ್ಲದ ವ್ಯಕ್ತಿಯ ಜೊತೆಯಾಗಿ ಅಥವಾ ಕೈ ಕೆಳಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಬರಲಿದೆ. ಇದರಿಂದ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಂತಾಗಲಿದೆ. ಇನ್ನು ನಿಮ್ಮಲ್ಲಿ ಯಾರು ಬಟ್ಟೆ ವ್ಯಾಪಾರ ಮಾಡುತ್ತಾ ಇದ್ದೀರಿ ಅಂಥವರಿಗೆ ಈಗಾಗಲೇ ಕೊಟ್ಟಿರುವಂಥ ಸಾಲದ ವಸೂಲಾತಿ ಕಷ್ಟ ಎನಿಸಲಿದ್ದು, ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್ ಗೆ ಈ ಬಗ್ಗೆ ದೂರು ನೀಡುವ ಬಗ್ಗೆ ಆಲೋಚನೆ ಸಹ ಮಾಡಲಿದ್ದೀರಿ. ಅನಿರೀಕ್ಷಿತ ಪ್ರಯಾಣ ಮಾಡಬೇಕು ಎಂಬಂತೆ ಆಗಲಿದ್ದು, ಕೆಲವು ಗೊಂದಲಗಳನ್ನು ಮನಸ್ಸಲ್ಲಿಯೇ ಇಟ್ಟುಕೊಂಡು ಮನೆಯಿಂದ ಹೊರಡುವಂತೆ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಮಕ್ಕಳಿಗಾಗಿ ಈ ದಿನ ಒಂದಲ್ಲಾ ಒಂದು ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಅವರು ಕೇಳಿದ್ದ ಗ್ಯಾಜೆಟ್, ಸೈಕಲ್, ಕನಿಷ್ಠ ವಾಟರ್ ಕ್ಯಾನ್ ಹೀಗೆ ಯಾವುದಕ್ಕಾದರೂ ಬಜೆಟ್ ಗಿಂತ ಹೆಚ್ಚು ಖರ್ಚು ಮಾಡಲಿದ್ದೀರಿ. ಉದ್ಯೋಗಸ್ಥರು ತಮ್ಮ ಬೆಳವಣಿಗೆ ಬಗ್ಗೆ ಬೇಸರಪಟ್ಟು, ಈಗಿರುವ ವಿಭಾಗ ಅಥವಾ ಪ್ರಾಜೆಕ್ಟ್ ನಿಂದ ಬೇರೆಡೆ ವರ್ಗಾವಣೆ ಮಾಡುವಂತೆ ತಮ್ಮ ಮೇಲಧಿಕಾರಿಗಳ ಜೊತೆ ಮಾತುಕಡೆ ನಡೆಸುವ ಸಾಧ್ಯತೆ ಇದೆ. ಸಣ್ಣ ಅಜಾಗರೂಕತೆಯೊಂದು ದೊಡ್ಡ ಬೆಲೆ ತೆರುವಂತೆ ಮಾಡಬಹುದು. ಆದ್ದರಿಂದ ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾಯಿಸಬೇಡಿ. ಹಾಗೂ ಒಂದು ವೇಳೆ ಅನಿವಾರ್ಯ ಎಂಬ ಪರಿಸ್ಥಿತಿ ನಿರ್ಮಾಣ ಆದಲ್ಲಿ ಒಮ್ಮೆ ಕೂಲಂಕಷವಾಗಿ ನೀವು ಪರಿಶೀಲನೆ ಮಾಡುವುದು ಕ್ಷೇಮ ಹಾಗೂ ಉತ್ತಮ. ಯುಪಿಐ ಪಾವತಿ ಮಾಡುವವರು ಒಂದಕ್ಕೆ ನಾಲ್ಕು ಬಾರಿ ಪರಿಶೀಲಿಸಿ, ವ್ಯವಹಾರ ಮಾಡುವುದು ಒಳ್ಳೆಯದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಈ ಹಿಂದೆ ನಿಮಗೆ ಯಾರು ಸಮಸ್ಯೆ ಮಾಡಿದ್ದರೋ ಅವರಿಗೆ ಇನ್ನಿಲ್ಲದಂತೆ ಕಾಡುವ ಮನಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಇರಲಿದೆ. ಹೆಜ್ಜೆಹೆಜ್ಜೆಗೆ ಕಿರಿಕಿರಿ ಮಾಡುತ್ತಾ ಇದ್ದವರ ಕೆಲವು ತಪ್ಪುಗಳು ನಿಮ್ಮ ಕಣ್ಣಿಗೆ ಬಿದ್ದು, ಅದರಿಂದ ಎಷ್ಟು ಗೋಳು ಬರಿಸಬಹುದೋ ಅಷ್ಟು ಕಿರುಕುಳ ನೀಡುವುದಕ್ಕೆ ಮುಂದಾಗಲಿದ್ದೀರಿ. ನಿಮಗೆ ನೆನಪಿರಬೇಕಾದ ಸಂಗತಿ ಏನೆಂದರೆ, ಇದು ಇಲ್ಲಿಗೇ ಮುಗಿಯುವುದಿಲ್ಲ. ಅನುಭವದ ಆಧಾರದಲ್ಲಿ ನೀವು ತೆಗೆದುಕೊಂಡಿದ್ದ ತೀರ್ಮಾನಗಳು ಒಳ್ಳೆ ಫಲ ನೀಡಲಿದೆ. ಅದರ ಫಲಿತಾಂಶ ಎಂಬಂತೆ ನಿಮಗೆ ದೊಡ್ಡ ದೊಡ್ಡ ಜವಾಬ್ದಾರಿ ವಹಿಸಬಹುದು ಹಾಗೂ ಆ ಮೂಲಕ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ಮಾತ್ರೆ- ಔಷಧಗಳನ್ನು ತೆಗೆದುಕೊಳ್ಳುವಾಗ ಅಥವಾ ಖರೀದಿ ಮಾಡುವಾಗ ಎಕ್ಸ್ ಪೈರಿ ದಿನಾಂಕ ಗಮನಿಸಿ. ಒಂದು ವೇಳೆ ಔಷಧ ತೆಗೆದುಕೊಂಡ ತಕ್ಷಣ ಅಲರ್ಜಿ ಏನಾದರೂ ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರ ಬಳಿ ತೆರಳಿ.
ಇದನ್ನೂ ಓದಿ: ವಿಭೂತಿ ನಾಮಗಳ ಧಾರಣೆಯ ಅದ್ಯಾತ್ಮಿಕ ರಹಸ್ಯವೇನು ಗೊತ್ತಾ?
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನನಗೊಂದು ನ್ಯಾಯ- ಇನ್ನೊಬ್ಬರಿಗೊಂದು ನ್ಯಾಯ ಯಾಕೆ ಎಂದು ಪ್ರಶ್ನೆ ಮಾಡುವ ಮನಸ್ಥಿತಿಯಲ್ಲಿ ಈ ದಿನ ನೀವು ಇರುತ್ತೀರಿ. ವಿದ್ಯಾರ್ಥಿಗಳೇ ಇರಬಹುದು, ಉದ್ಯೋಗಿಗಳು ಇರುಬಹುದು ಅಥವಾ ವೃತ್ತಿಪರರು ಇರಬಹುದು. ನಿಮ್ಮ ಜೊತೆಗೆ ಇತರರು ನಡೆದುಕೊಂಡ ರೀತಿಗೆ ಸಿಟ್ಟಿಗೆ ತುತ್ತಾಗುತ್ತೀರಿ. ನಿಮ್ಮಲ್ಲಿ ಯಾರಿಗೆ ನಲವತ್ತು ವರ್ಷದ ಮೇಲೆ ವಯಸ್ಸಾಗಿರುತ್ತದೆ ಅಂಥವರು ನಿಮಗೆ ಈಗಾಗಲೇ ಕಾಡುತ್ತಿರುವ ನೋವು ಅಥವಾ ಅನಾರೋಗ್ಯ ಸಮಸ್ಯೆ ಬಗ್ಗೆ ಸೂಕ್ತ ವೈದ್ಯೋಪಚಾರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಬೇಕು. ಸುಲಭವಾಗಿ ಆಗಬೇಕಾದ ಕೆಲಸ- ಕಾರ್ಯಗಳಿಗೆ ವಿಪರೀತ ಓಡಾಟ ಆಗುತ್ತಿದೆ ಎಂಬ ಕಾರಣಕ್ಕೆ ಆಸಕ್ತಿಯನ್ನು ಕಳೆದುಕೊಳ್ಳಬೇಡಿ. ಸ್ನೇಹಿತರೋ ಸಂಬಂಧಿಗಳೋ ಸಹಾಯ ಮಾಡುವುದಾಗಿ ತಾವಾಗಿಯೇ ಮುಂದೆ ಬಂದಲ್ಲಿ ಅವರ ನೆರವು ಪಡೆದುಕೊಂಡು, ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ಹಣಕಾಸಿನ ಹರಿವು ಸರಾಗವಾಗಿ ಆಗಲಿದೆ. ತಂದೆ- ತಾಯಿಯ ಸಲುವಾಗಿ ನೀವು ಮಾಡಬೇಕು ಅಂದುಕೊಂಡ ಹಣ ಸಹಾಯ, ಔಷಧ ಮೊದಲಾದವುಗಳ ಖರೀದಿ ಇಂಥವುಗಳಿಗೆ ನಿಮ್ಮ ಸೋದರ- ಸೋದರಿಯರು ಸಹ ಕೈ ಜೋಡಿಸುವ ಸಾಧ್ಯತೆ ಇದೆ. ದೀರ್ಘ ಕಾಲದಿಂದ ನೀವು ತೆರಳಬೇಕು ಎಂದುಕೊಳ್ಳುತ್ತಿದ್ದ ಸ್ಥಳವೊಂದಕ್ಕೆ ಹೋಗಲು ಬೇಕಾದ ಎಲ್ಲ ಸಿದ್ಧತೆ ಆರಂಭ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಚೀಟಿ ಕಟ್ಟುತ್ತಿದ್ದೀರಿ, ಅದು ಹಣದ್ದೇ ಆಗಿರಬಹುದು ಅಥವಾ ಚಿನ್ನದ್ದೇ ಆಗಿರಬಹುದು; ಅದರ ಬಗ್ಗೆ ಒಂದು ಗುಮಾನಿ ನಿಮ್ಮನ್ನು ಈ ದಿನ ಕಾಡಲಿದೆ. ಆದ್ದರಿಂದ ವಾಪಸ್ ಪಡೆದುಕೊಳ್ಳಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಪಿಆರ್ಒ ಆಗಿ ಸಂಘ- ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ. ಮೇಲಧಿಕಾರಿಗಳು- ಸಂಬಂಧ ಪಟ್ಟ ವ್ಯಕ್ತಿಗಳು ನಿಮ್ಮ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಹೇಗೋ ಹೊಂದಿಕೊಂಡು ಹೋಗೋಣ ಎಂದು ಯಾವ ವಿಷಯ ಅಥವಾ ವಿಚಾರ/ವ್ಯಕ್ತಿ ಬಗ್ಗೆ ಆಲೋಚನೆ ಮಾಡಿದ್ದರೋ ಅದರ ಕಡೆಗೆ ನಿಮಗೆ ವೈರತ್ವ ಮೂಡುವಂತೆ ಆಗಲಿದೆ. ಏಕಕಾಲಕ್ಕೆ ಎರಡು ಕಡೆ ಕೆಲಸವನ್ನು ಒಪ್ಪಿಕೊಂಡು, ಯಶಸ್ವಿಯಾಗಿ ಮಾಡಿ ಮುಗಿಸಲಿದ್ದೀರಿ. ಸ್ವಂತ ವ್ಯವಹಾರ- ವ್ಯಾಪಾರ ಆರಂಭಿಸಲು ಬೇಕಾದ ಹಣಕಾಸಿನ ಸಂಪನ್ಮೂಲಕ್ಕೆ ಪ್ರಯತ್ನ ಪಡುತ್ತಾ ಇರುತ್ತೀರೋ ಅದು ಸಾಧ್ಯವಾಗಲಿದೆ. ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಸ್ನೇಹಿತರ ಪೈಕಿ ಕೆಲವರು ತಮ್ಮ ಕಾಂಟ್ಯಾಕ್ಟ್ ನಲ್ಲಿ ಇರುವಂಥವರನ್ನು ನಿಮಗೆ ಪರಿಚಯಿಸಲಿದ್ದು, ಅದರಿಂದಾಗಿ ಕೂಡ ಹಲವು ಅನುಕೂಲ ನಿಮಗೆ ಒದಗಿ ಬರಲಿದೆ. ಕಟ್ಟಡ ನಿರ್ಮಾಣ, ಇಂಟೀರಿಯರ್ ಡೆಕೊರೇಷನ್ ಇಂಥವುಗಳಲ್ಲಿ ತೊಡಗಿಕೊಂಡವರಿಗೆ ದೊಡ್ಡ ಕಾಂಟ್ರಾಕ್ಟ್ ಹುಡುಕಿಕೊಂಡು ಬರಲಿದೆ. ಆ ಕೆಲಸಗಳಿಗೆ ಅಡ್ವಾನ್ಸ್ ಕೂಡ ಪಡೆಯುವಂಥ ಯೋಗ ನಿಮ್ಮ ಪಾಲಿಗೆ ಇದೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಯಾಕಾದರೂ ಈ ಕೆಲಸ ಒಪ್ಪಿಕೊಂಡೆನೋ ಎಂಬಷ್ಟು ರೇಜಿಗೆ ಈ ದಿನ ನಿಮಗೆ ಆಗಲಿದೆ. ಒಬ್ಬೊಬ್ಬರು ಒಂದು ರೀತಿ ಹೇಳುತ್ತಾ, ಒಂದು ಕೆಲಸವನ್ನು ನಾಲ್ಕೈದು ಬಾರಿ, ನಾಲ್ಕೈದು ರೀತಿಯಲ್ಲಿ ಮಾಡುವಂತೆ ಆಗಲಿದೆ. ಎಲ್ಲರಿಗೂ ಒಳ್ಳೆಯವರಾಗಿರಬೇಕು ಎಂಬ ಆಲೋಚನೆಯನ್ನು ಬಿಟ್ಟು, ಹೊರಗೆ ಬನ್ನಿ. ನೀವು ಹೇಳಬೇಕು ಅಂದುಕೊಂಡ ವಿಚಾರವನ್ನು ನೇರವಾಗಿ ಹೇಳುವುದಕ್ಕೆ ಪ್ರಯತ್ನಿಸಿ. ಹಣಕಾಸು ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರ ಆಕ್ಷೇಪಕ್ಕೆ ಹಾಗೂ ನಿಂದನೆಗೆ ಗುರಿ ಆಗಲಿದೆ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಇಂಥವುಗಳಿಗೆ ಹೂಡಿಕೆ ಮಾಡಬೇಕು ಎಂದಿರುವವರು ಒಂದಕ್ಕೆ ನಾಲ್ಕು ಬಾರಿ ಆಲೋಚನೆ ಮಾಡಿ, ಮುಂದಕ್ಕೆ ಹೆಜ್ಜೆ ಇಡಿ. ಅತಿಯಾದ ಆತ್ಮವಿಶ್ವಾಸದಿಂದ ನೀವು ಕೈಗೊಂಡ ಕೆಲಸಗಳಿಂದ ನಷ್ಟವನ್ನು ಅನುಭವಿಸುವಂತೆ ಆಗಲಿದೆ, ಎಚ್ಚರಿಕೆ ವಹಿಸಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ನಿಮ್ಮ ಬೆಳವಣಿಗೆ ಕಂಡು ಮತ್ಸರ ಪಡುವವರು ಯಾರು ಎಂಬುದು ಈ ದಿನ ನಿಮ್ಮ ಗಮನಕ್ಕೆ ಬರಲಿದೆ. ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿ ಇರುವವರು, ದೊಡ್ಡ ಗುಂಪನ್ನು ಮುನ್ನಡೆಸುವ ನಾಯಕತ್ವ ಸ್ಥಾನದಲ್ಲಿ ಇರುವವರು ನಿಮ್ಮ ಗಮನಕ್ಕೆ ಬಂದ ಸಂಗತಿಯನ್ನು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ತಲೆಕೂದಲು- ಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಈಗಾಗಲೇ ಇವೆ ಎಂದಾದರೆ ಅವು ಉಲ್ಬಣ ಆಗುವಂಥ ಸಾಧ್ಯತೆ ಇದೆ. ಇನ್ನು ರಾಜಕಾರಣದಲ್ಲಿ ಇರುವಂಥವರು ಯಾರ ಜೊತೆಗೆ ಗುರುತಿಸಿಕೊಂಡಿದ್ದೀರಿ ಎಂಬುದನ್ನು ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡದಿರುವುದು ಕ್ಷೇಮ. ಎಲ್ಲರಿಗೂ ಅನ್ವಯಿಸುವ ಮಾತು ಏನೆಂದರೆ, ನಿಮ್ಮ ವರ್ಚಸ್ಸಿಗೆ ಧಕ್ಕೆ ಆಗುವಂಥ ಸಾಧ್ಯತೆ ಇದ್ದು, ಸಂಪೂರ್ಣ ಮಾಹಿತಿ ಇಲ್ಲದ ವಿಷಯಗಳ ಬಗ್ಗೆ ಮಾತೇ ಆಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನೀವು ಗುಟ್ಟು ಬಿಟ್ಟುಕೊಡದೆ ಮಾಡಿದ ಕೆಲಸಗಳ ಸಕಾರಾತ್ಮಕ ಫಲಗಳನ್ನು ಕಾಣುವುದಕ್ಕೆ ಶುರು ಆಗುತ್ತದೆ. ಅನಿರೀಕ್ಷಿತವಾಗಿ ನಿಮ್ಮಲ್ಲಿ ಕೆಲವರ ಆದಾಯದಲ್ಲಿ ಏರಿಕೆ ಕಾಣಿಸಿಕೊಳ್ಳುತ್ತದೆ. ಕುಟುಂಬ ಸದಸ್ಯರ ಮಧ್ಯೆ ಇರುವ ವಿರಸ- ಭಿನ್ನಾಭಿಪ್ರಾಯಗಳು ಬಗೆಹರಿಯುತ್ತವೆ. ಬಹಳ ಕಾಲದಿಂದ ಬಾಕಿ ಉಳಿದುಹೋಗಿದ್ದ ಮನೆ, ಸೈಟು ಅಥವಾ ಜಮೀನಿನ ಕಾಗದ- ಪತ್ರ, ದಾಖಲೆಗಳ ಸಮಸ್ಯೆ ಬಗೆಹರಿಸುವುದಕ್ಕೆ ನಿಮ್ಮ ಸ್ನೇಹಿತರು ನೆರವು ನೀಡಲಿದ್ದಾರೆ. ಸೋದರ ಸಂಬಂಧಿಗಳ ಕಷ್ಟಕ್ಕೆ ನೀವು ಸಹಾಯ ಮಾಡಲಿದ್ದೀರಿ. ನಿಮ್ಮ ಮನೆಯಲ್ಲಿ ಇರುವಂಥ ಮಂಚ, ಸೋಫಾ, ದೀವಾನ ಇಂಥ ಹಳೆ ಪೀಠೋಪಕರಣಗಳ ಮಾರಾಟ ಮಾಡುವ ನಿರ್ಧಾರ ಕೈಗೊಳ್ಳಲಿದ್ದೀರಿ. ಲೇವಾದೇವಿ ವ್ಯವಹಾರ ಮಾಡುತ್ತಾ ಇರುವವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಕೆಲವು ವ್ಯಕ್ತಿಗಳಿಂದ ತತ್ ಕ್ಷಣವೇ ವಸೂಲಿ ಮಾಡುವುದರಿಂದ ರಿಸ್ಕ್ ಕಡಿಮೆ ಆಗುತ್ತದೆ ಎಂಬುದನ್ನು ಗಮನಿಸಬೇಕು.
ಲೇಖನ- ಎನ್.ಕೆ.ಸ್ವಾತಿ
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




