ಜನ್ಮಸಂಖ್ಯೆ 2 ಯಾರದು ಅಂದರೆ, ವರ್ಷದ ಯಾವುದೇ ತಿಂಗಳಿನ 2, 11, 20, 29 ನೇ ತಾರೀಕು ಹುಟ್ಟಿರುತ್ತಾರೋ ಅಂಥವರ ಜನ್ಮಸಂಖ್ಯೆ 2 ಎಂದಾಗುತ್ತದೆ. ಅವರಿಗೆ 2025ರ ವರ್ಷ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುವುದು.
ಗುಣ-ಸ್ವಭಾವ
ಈ ದಿನಾಂಕಗಳಲ್ಲಿ ಹುಟ್ಟಿದವರಿಗೆ ಮೂಡ್ ಸ್ವಿಂಗ್ ಗಳು ಇರುತ್ತವೆ. ಹದಿನೈದು ದಿವಸ ಒಂದು ಥರ, ಇನ್ನೊಂದು ಹದಿನೈದು ದಿನ ಇನ್ನೊಂದು ಥರ ಮನಸ್ಥಿತಿ ಇರುತ್ತದೆ. ಪ್ರೀತಿಯೋ ದ್ವೇಷವೋ ಅಥವಾ ಕೋಪವೋ ಪ್ರತಿಯೊಂದರಲ್ಲೂ ಅತಿಯಾಗಿ ಮಾಡುತ್ತಾರೆ. ಸ್ವತಂತ್ರ ನಿರ್ಧಾರ ಮಾಡುವುದರಲ್ಲಿ ಹಿಂಜರಿಕೆ ಅಥವಾ ವೈಫಲ್ಯ ಅನುಭವಿಸಿದ ನೆನಪುಗಳು ಕಾಲಿಗೆ ಕಟ್ಟಿದ ದೊಡ್ಡ ಸೈಜಿನ ಗುಂಡುಗಳಂತೆ ಕಾಡುತ್ತವೆ. ಆದರೆ ಈ ದಿನಾಂಕಗಳಲ್ಲಿ ಹುಟ್ಟಿ, ಸಂಖ್ಯೆ ಎರಡರಲ್ಲಿ ಬರುವವರಿಗೆ ಮಾತೃ ಹೃದಯವೂ ಇರುತ್ತದೆ. ಇವರ ಸುತ್ತ ಇರುವವರಿಗೆ, ಇದೇನಪ್ಪಾ ಈ ವ್ಯಕ್ತಿ ಒಂದೊಂದು ಸಲ ಇರುತ್ತಾರೆ ಎಂದೆನಿಸುತ್ತದೆ. ಕೆಲವು ಸಲವಂತೂ ಮಾಡು ಎಂದ ಕೆಲಸವನ್ನು ಮಾಡದಿರುವುದು, ಅದೇ ರೀತಿ ಮಾಡಲೇಬೇಕಾದ ಕೆಲಸ- ಕಾರ್ಯಗಳನ್ನು ಒಂದು ವೇಳೆ ಬೇರೆಯವರು ಅದನ್ನು ಕೂಡಲೇ ಮಾಡಿ ಮುಗಿಸಬೇಕು ಎಂದು ಒತ್ತಡ ಹಾಕಿದರೆ ಶತಾಯಗತಾಯ ತಿರುಗಿಯೂ ಸಹ ನೋಡದಂಥ ಆಲೋಚನೆ ಇರುವವರು ಈ ಸಲ ಹಾಗೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಈ ಸಂಖ್ಯೆಯಲ್ಲಿ ಹುಟ್ಟಿದವರಿಗೆ ಸಣ್ಣ- ಪುಟ್ಟ ವಿಚಾರಗಳು ಒತ್ತಡವಾಗಿ ಮಾರ್ಪಡಾಗುತ್ತದೆ.
ಸಾಮಾನ್ಯ ಸಂಗತಿಗಳು
ಒಂದೇ ಕೆಲಸಕ್ಕೆ ಹಲವು ಸಲ ಅಲೆದಾಡುವಂಥ ಸನ್ನಿವೇಶ ಎದುರಾಗುತ್ತದೆ. ನೀವೇ ಕೊಟ್ಟ ಮಾತಿನಂತೆ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ಮುಖ್ಯವಾಗಿ ನಿಮ್ಮ ಬಗ್ಗೆ ನಿಮಗೇ ಒಂದು ಬಗೆಯ ಅಸಮಾಧಾನ ಹಾಗೂ ನಂಬಿಕೆಯ ಕೊರತೆ ಆಗುವಂಥ ಸಮಯ ಇದಾಗಿರಲಿದೆ. ವರ್ಷದ ಮೊದಲ ನಾಲ್ಕು ತಿಂಗಳು ಸ್ವಲ್ಪ ಮಟ್ಟಿಗೆ ಹಣಕಾಸಿನ ಹರಿವಿಗೆ ಅಡ್ಡಿ ಇರುವುದಿಲ್ಲ. ಆದರೆ ನಂತರದಲ್ಲಿ ಹಣಕಾಸಿಗೆ ಒತ್ತಡ ಸೃಷ್ಟಿಯಾಗಲಿದೆ. ಸ್ನೇಹಿತರೋ ಸಂಬಂಧಿಗಳೋ ಕಾರು ಖರೀದಿಸಿದರು, ಮನೆ- ಸೈಟು ಕೊಂಡರು ಎಂಬ ಕಾರಣಕ್ಕೆ ನೀವು ಹಠಕ್ಕೆ ಬಿದ್ದು, ಸಾಲ- ಸೋಲ ಮಾಡಿಯಾದರೂ ಖರೀದಿಸುತ್ತೇನೆ ಎಂದು ಹೊರಡಬೇಡಿ. ಶಿಫಾರಸು ಮಾಡಿಸಿದಲ್ಲಿ ಕೆಲಸ- ಕಾರ್ಯಗಳು ಆಗುತ್ತವೆ ಎಂಬ ಸುಳಿವು ದೊರೆತಲ್ಲಿ ಹಾಗೂ ಹಾಗೆ ಶಿಫಾರಸು ಮಾಡಿಸುವುದಕ್ಕೆ ನಿಮಗೆ ಪ್ರಭಾವಿಗಳ ಪರಿಚಯವೂ ಇದೆ ಎಂದಾದಲ್ಲಿ ಅವಕಾಶದ ಸದುಪಯೋಗ ಮಾಡಿಕೊಳ್ಳಿ. ವಿದ್ಯಾರ್ಥಿಗಳು ಪೋಷಕರು ನೀಡುವಂಥ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ. ನಿಮಗೆ ಗೊತ್ತಿದ್ದೂ ತಪ್ಪುಗಳನ್ನು ಮಾಡುವುದು ದೊಡ್ಡ ಸಮಸ್ಯೆಗೆ ಗುರಿ ಮಾಡಲಿದೆ. ಈ ಹಿಂದೆ ಹಾಗೆ ಮಾಡಿದ್ದೆ ಏನೂ ಸಮಸ್ಯೆ ಆಗಿಲ್ಲ ಅಂತಲೋ ಅಥವಾ ಇಷ್ಟು ಸಣ್ಣ ತಪ್ಪನ್ನು ಯಾರೂ ಗಂಭೀರವಾಗಿ ಪರಿಗಣಿಸಲ್ಲ ಅಂತಲೋ ಹಗುರವಾಗಿ ಪರಿಗಣಿಸಬೇಡಿ.
ಆರೋಗ್ಯ
ಈ ವರೆಗೆ ಅಂದರೆ, ಈ ಹಿಂದಿನ ವರ್ಷ ನಿಮಗೆ ಕಾಡಿದ ಅನಾರೋಗ್ಯ ಸಮಸ್ಯೆಗಳು, ಮಾನಸಿಕ ಹಿಂಸೆ ಹಾಗೂ ಅದಕ್ಕೇನಾದರೂ ಮಾನಸಿಕ ವೈದ್ಯರ ಬಳಿ ಚಿಕಿತ್ಸೆಯನ್ನು ಪಡೆಯುತ್ತಿದ್ದಲ್ಲಿ ಫಾಲೋ ಅಪ್ ಚೆಕಪ್ ಗಳ ಬಗ್ಗೆ ಗಮನವನ್ನು ನೀಡಿ. ಏಕಾಏಕಿ ನಿರ್ಧಾರ ಮಾಡುವ ಸಾಮರ್ಥ್ಯವು ಕಡಿಮೆ ಆಗುತ್ತಾ ಬರುತ್ತಿದೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಉಪವಾಸ ಇದ್ದುದರಿಂದ ಅಥವಾ ಈಗ ಉಪವಾಸ ಮಾಡುತ್ತಾ ಇದ್ದಲ್ಲಿ ವಿವಿಧ ಬಗೆ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ದಿಢೀರ್ ಅಂತ ದೇಹದ ತೂಕ ಹೆಚ್ಚಾಗುವುದು, ಅಥವಾ ತಲೆಸುತ್ತು- ಕಣ್ಣು ಕತ್ತಲೆ ಬರುವುದು ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಕಾಣಲಿದ್ದೀರಿ. ನಿಮ್ಮಲ್ಲಿ ಯಾರು ನಿಂತು ಮಾಡುವ ಕೆಲಸವನ್ನೇ ವರ್ಷಗಳಿಗೆ ಮಾಡುತ್ತಾ ಇದ್ದಲ್ಲಿ ಅಂಥವರಿಗೆ ವೆರಿಕೋಸ್ ನಂಥ ತೊಂದರೆಗಳನ್ನು ಅನುಭವಿಸುವಂತೆ ಆಗುತ್ತದೆ. ನಿಮ್ಮಲ್ಲಿ ಯಾರಿಗೆ ತಲೆಹೊಟ್ಟಿನ ಸಮಸ್ಯೆ ಇದೆಯೋ ಅಂಥವರು ಕೂಡಲೇ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಆದ್ಯತೆಯನ್ನು ನೀಡಿ.
ಆಸ್ತಿ-ಹಣ- ಹೂಡಿಕೆ
ನಿಮ್ಮಲ್ಲಿ ಕೆಲವರು ಈಗಿರುವ ಆಸ್ತಿಗಳ ಮಾರಾಟ ಮಾಡಬೇಕು ಎಂಬ ತೀರ್ಮಾನವನ್ನು ಮಾಡಲಿದ್ದೀರಿ. ಇನ್ನು ಯಾರು ಫ್ಲ್ಯಾಟ್ ಗಳಲ್ಲಿ ವಾಸ ಮಾಡುತ್ತಾ ಇದ್ದೀರೋ ಅಂಥವರು ಹಣದ ಅಗತ್ಯ ತೀವ್ರವಾಗಿ, ಅದನ್ನು ಮಾರಾಟ ಮಾಡಬಹುದು ಅಥವಾ ಆ ಸ್ಥಳದಿಂದ ನೀವು ಬಾಡಿಗೆ ಆದಾಯವನ್ನು ಮಾತ್ರ ಬರುವಂತೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ರಿಯಲ್ ಎಸ್ಟೇಟ್ ಉದ್ದೇಶದಿಂದ ಹೊಸದಾಗಿ ಹೂಡಿಕೆ ಮಾಡುವುದಕ್ಕೆ ಮುಂದಾದಲ್ಲಿ ನಷ್ಟ ಅನುಭವಿಸುವಂತೆ ಆಗಲಿದೆ. ಷೇರು ಮಾರುಕಟ್ಟೆಯಲ್ಲಿ ಲಾಭ ಬಂತು ಎಂಬ ಕಾರಣಕ್ಕೆ ಸಾಲವನ್ನು ತಂದು ಹಣ ಹಾಕುವುದಕ್ಕೆ ಆರಂಭಿಸಿದಲ್ಲಿ ಭಾರೀ ಮಟ್ಟದಲ್ಲಿ ಸಿಲುಕಿಕೊಳ್ಳಲಿದ್ದೀರಿ.
ಪ್ರೇಮ-ಮದುವೆ ಇತ್ಯಾದಿ
ಪ್ರೀತಿ- ಮದುವೆಗೆ ಪ್ರಯತ್ನಿಸುತ್ತಿರುವವರಿಗೆ ಖರ್ಚು ಹೆಚ್ಚಾಗಲಿದೆ. ಮ್ಯಾಟ್ರಿಮೋನಿ ವೆಬ್ ಸೈಟ್ ಸೇರಿದಂತೆ ಮದುವೆಗೆ ಸಂಬಂದಿಸಿದಂತೆ ಮಾಡುವ ಪ್ರಯತ್ನಗಳಲ್ಲಿಯೇ ಹಣವನ್ನು ಕೈಯಿಂದ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ನೀವು ಎಲ್ಲಿ, ಯಾವುದಕ್ಕೆ ಹಣ ಖರ್ಚು ಮಾಡುತ್ತಿದ್ದೀರಿ ಎಂಬ ಬಗ್ಗೆ ನಿಗಾ ಕೂಡ ಇಡಬೇಕು. ನಿಮ್ಮಲ್ಲಿ ಕೆಲವರಿಗೆ ವಯಸ್ಸಿನಲ್ಲಿ ಬಹಳ ಅಂತರ ಇರುವವರ ಮೇಲೆ ಪ್ರೀತಿ ಮೂಡಲಿದೆ. ಇದೇ ಕಾರಣದಿಂದ ನೆಮ್ಮದಿ ಕಳೆದುಕೊಳ್ಳುವಂತೆ ಆಗುವ ಸಾಧ್ಯತೆ ಹೆಚ್ಚಿದೆ.
ಉದ್ಯೋಗ- ವೃತ್ತಿ
ವೃತ್ತಿನಿರತರಿಗೆ ದೊಡ್ಡ ಪ್ರಾಜೆಕ್ಟ್ ಗಳು ಆರಂಭವಾದಂತೆಯೇ ಆಗಿ, ಮಧ್ಯದಲ್ಲಿ ನಿಂತುಬಿಡಬಹುದು. ಆದ್ದರಿಂದ ಆದಾಯ ಅಥವಾ ಲಾಭ ಪೂರ್ಣ ಪ್ರಮಾಣದಲ್ಲಿ ಕೈ ಸೇರುವ ತನಕ ಅಡ್ವಾನ್ಸ್ ನೀಡುವುದೋ ಅಥವಾ ಸಾಲ ಮಾಡಿ ದೊಡ್ಡ ದೊಡ್ಡ ಹೂಡಿಕೆ ಮಾಡುವಂಥ ನಿರ್ಧಾರಗಳು ಬೇಡ. ಕನ್ಸಲ್ಟೆನ್ಸಿಗಳ ಮೂಲಕ ವಿದೇಶಗಳಲ್ಲಿ ಉದ್ಯೋಗ- ವ್ಯಾಸಂಗಕ್ಕೆ ಪ್ರಯತ್ನ ಮಾಡುತ್ತಿರುವವರು ಅಥವಾ ಇನ್ನು ಮುಂದೆ ಮಾಡುವವರು ಯಾರೋ ಒಬ್ಬ ವ್ಯಕ್ತಿಯನ್ನು ವಿಪರೀತ ನಂಬಿಕೊಳ್ಳುವುದು ಸಮಸ್ಯೆಗೆ ಕಾರಣ ಆಗಬಹುದು.
-ಸ್ವಾತಿ ಎನ್.ಕೆ
Published On - 8:42 am, Sat, 28 December 24