Numerology: ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?

| Updated By: Skanda

Updated on: Jun 30, 2021 | 6:46 AM

ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಜನ್ಮ ಸಂಖ್ಯೆ 3 ಆಗುತ್ತದೆ. ಆ ಮೂಲಕ ಇವರ ಅಧಿಪತಿ ಗುರು ಗ್ರಹ ಆಗುತ್ತದೆ. ಈ ತಾರೀಕಿನಂದು ಹುಟ್ಟಿದವರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು.

Numerology: ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ?
ಗುರು ಗ್ರಹ (ಸಾಂದರ್ಭಿಕ ಚಿತ್ರ)
Follow us on

ಯಾವುದೇ ತಿಂಗಳ 3, 12, 21 ಅಥವಾ 30ನೇ ತಾರೀಕಿನಂದು ಹುಟ್ಟಿದವರ ಬಗ್ಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುವುದು. ಈ ದಿನಾಂಕಗಳಲ್ಲಿ ಹುಟ್ಟಿದವರ ಜನ್ಮ ಸಂಖ್ಯೆ 3 ಆಗುತ್ತದೆ. ಆ ಮೂಲಕ ಇವರ ಅಧಿಪತಿ ಗುರು ಗ್ರಹ ಆಗುತ್ತದೆ. ಈ ದಿನಗಳ ಪೈಕಿ 3 ಹಾಗೂ 30ನೇ ತಾರೀಕಿನಂದು ಹುಟ್ಟಿದವರ ಮೇಲೆ ಪೂರ್ಣವಾದ ಗುರುವಿನ ಪ್ರಭಾವ ಇದ್ದರೆ, 12 ಅಥವಾ 21ನೇ ತಾರೀಕಿನಂದು ಹುಟ್ಟಿದವರಿಗೆ ರವಿ-ಚಂದ್ರ-ಗುರು ಹೀಗೆ ಮೂರು ಗ್ರಹದ ಪ್ರಭಾವ ಇರುತ್ತದೆ. ಗುರು ಅಂದರೆ ಬೃಹಸ್ಪತಿ. ದೇವತೆಗಳ ಗುರು. ಜ್ಞಾನ, ಬುದ್ಧಿ, ನಿಸ್ವಾರ್ಥತೆ, ಸೇವೆ ಹಾಗೂ ತ್ಯಾಗ ಗುಣವನ್ನು ಈ ಗ್ರಹವು ಸೂಚಿಸುತ್ತದೆ. ಹಲವು ದೇಶಭಕ್ತರು, ಮಹಾನ್ ತ್ಯಾಗಿಗಳು, ನೌಕಾಸೇನೆ ಮತ್ತು ವಾಯುಸೇನೆಯಲ್ಲಿನ ಶಿಸ್ತುಬದ್ಧ ನಾಯಕರು ಇದೇ ಗುರುವಿನ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಒಂದು ವೇಳೆ ಜನ್ಮಸಂಖ್ಯೆ 3 ಏನಾದರೂ ಲೈಫ್ ನಂಬರ್ ಅಥವಾ ಹೆಸರಿನ ಸಂಖ್ಯೆಯಲ್ಲಿ ದುರ್ಬಲವಾದರೆ ಅಂಥವರು ಗುಮಾಸ್ತೆ, ಅಕೌಂಟೆಂಟ್ ಇಂಥ ಹುದ್ದೆಯಲ್ಲಿರುತ್ತಾರೆ.

ಈ ಸಂಖ್ಯೆಯವರು ಬಹಳ ಬುದ್ಧಿವಂತರಾಗಿರುತ್ತಾರೆ. ಶ್ರಮಜೀವಿಗಳಾಗಿರುತ್ತಾರೆ. ಯಾವುದೇ ವ್ಯವಹಾರದಲ್ಲಿ ನೇರವಂತರು ಮತ್ತು ಪ್ರಾಮಾಣಿಕರಾಗಿರುತ್ತಾರೆ. ತಮ್ಮ ಮೇಲಧಿಕಾರಿಗಳ ಮಾತನ್ನು ಶ್ರದ್ಧೆಯಿಂದ ಪಾಲಿಸುತ್ತಾರೆ. ಅಂದಹಾಗೆ ತಮ್ಮ ಸಹೋದ್ಯೋಗಿಗಳಿಂದಲೂ ಶಿಸ್ತು, ವಿಧೇಯತೆ ಹಾಗೂ ಸಮಯಪಾಲನೆಯನ್ನು ನಿರೀಕ್ಷೆ ಮಾಡುತ್ತಾರೆ. ಮೇಲ್ನೋಟಕ್ಕೆ ಬಹಳ ಗಟ್ಟಿಗರಂತೆ ಕಂಡಂರೂ ಹೃದಯದಿಂದ ತುಂಬ ಮೃದುವಾಗಿರುತ್ತಾರೆ. ಯಾವುದು ಸರಿ ಹಾಗೂ ಯಾವುದು ತಪ್ಪು ಎಂಬ ಬಗ್ಗೆ ವಿವೇಚನೆ ಉತ್ತಮವಾಗಿರುತ್ತದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇತರರಿಗೆ ನೆರವು ನೀಡುತ್ತಾರೆ.

ಧಾರ್ಮಿಕ ಮನೋಭಾವದ ಇವರಲ್ಲಿ ಬಹುತೇಕರು ಶ್ರದ್ಧಾ- ಭಕ್ತಿಯಿಂದ ಧಾರ್ಮಿಕ ಆಚರಣೆಗಳ ಪಾಲನೆ ಮಾಡುತ್ತಾರೆ. ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಡುತ್ತಾರೆ. ಇತರರಿಂದ ನೆರವು ಕೇಳುವುದು ಅಂದರೆ, ಸಂಕೋಚದ ಮುದ್ದೆಯಾಗುತ್ತಾರೆ. ಈ ಜನ್ಮಸಂಖ್ಯೆಯಲ್ಲಿ ಹುಟ್ಟಿದವರು ಜೂಜಾಟಕ್ಕೆ ದಾಸರಾಗುವ ಸಾಧ್ಯತೆ ಇದೆ. ತಪ್ಪು ಕೆಲಸಗಳನ್ನು ಗೊತ್ತಿದ್ದೂ ಮಾಡುತ್ತಾರೆ. ಇನ್ನೂ ಕೆಲವು ಸಲ ಸರ್ವಾಧಿಕಾರಿ ಧೋರಣೆ ಬರುತ್ತದೆ. ಜತೆಗೆ ವಿಪರೀತ ಲೈಂಗಿಕ ಆಸಕ್ತಿ, ಹೆಚ್ಚು ಸಾಲ ಮಾಡುವುದು ಹಾಗೂ ಅದನ್ನು ವಾಪಸ್​ ನೀಡುವುದಕ್ಕೆ ಸಾಧ್ಯವಿಲ್ಲದಿರುವುದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡು ಕೋರ್ಟ್- ಕಚೇರಿ ಮೆಟ್ಟಿಲು ಏರುವಂತಾಗುತ್ತದೆ.

ಇದನ್ನೂ ಓದಿ: Numerology: ಯಾವುದೇ ತಿಂಗಳಿನ 8, 17, 26ನೇ ತಾರೀಕಿನಂದು ಹುಟ್ಟಿದವರು ಬಹಳ ವಿಶೇಷ ಏಕೆ ಗೊತ್ತಾ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: Car number astrology: ವಾಹನ ಖರೀದಿಸಬೇಕು ಅಂತಿದ್ದೀರಾ? ನಿಮ್ಮ ಅದೃಷ್ಟ ಸಂಖ್ಯೆ ಯಾವುದೆಂದು ತಿಳಿದುಕೊಳ್ಳಿ

(Any month 3rd, 12th, 21st and 30th born people nature, characteristics according to numerology explained here)