
ಮೇಲಿಂದ ಮೇಲೆ ಭಾವನಾತ್ಮಕವಾಗಿ ಭಾರವಾದ ಮಾತುಗಳನ್ನು ಕೇಳಿಸಿಕೊಳ್ಳುವ ಸನ್ನಿವೇಶಗಳು ಉದ್ಭವ ಆಗಲಿವೆ. ನಾಲ್ಕು ಗೋಡೆಯ ಮಧ್ಯೆ ಮಾತನಾಡಿ ಮುಗಿಸಿಕೊಳ್ಳಬೇಕಾದ ವಿಷಯಗಳನ್ನು ಅದೇ ರೀತಿ ಮಾತಾಡಿ ಮುಗಿಸಿಕೊಳ್ಳಿ. ಹೆಚ್ಚು ಕಷ್ಟ ಆಗಬಹುದಾದಂಥ ವಿಷಯಗಳು ಅಥವಾ ವಿಚಾರಗಳನ್ನು ಪ್ರಭಾವ ಬಳಸಿಕೊಂಡು ಪೂರ್ಣ ಮಾಡುವ ಕುರಿತು ತೀರ್ಮಾನ ಮಾಡಲಿದ್ದೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದೇನಾದರೂ ಪ್ರಯತ್ನ ಮಾಡುತ್ತಾ ಇರುವವರಿಗೆ ನಿರೀಕ್ಷೆ ಕೂಡ ಮಾಡಿರದಂಥ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಈ ಹಿಂದೆ ಹೂಡಿಕೆ ಮಾಡಿದಂಥ ಹಣದ ಪೈಕಿ ಸ್ವಲ್ಪ ಮೊತ್ತವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಲೋಚನೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರು ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ, ಇದಕ್ಕಾಗಿ ಹಣವನ್ನು ಅಡ್ವಾನ್ಸ್ ನೀಡುವ ಸಾಧ್ಯತೆ ಸಹ ಇದೆ. ಮುಖ್ಯವಾದ ಕೆಲಸಕ್ಕೆ ಹೊರಡುವಾಗ ಸ್ವಲ್ಪ ಮುಂಚಿತವಾಗಿ ಅಲ್ಲಿರುವಂತೆ ಪ್ಲಾನ್ ಮಾಡಿಕೊಳ್ಳಿ.
ಗೆಳೆತನದಲ್ಲಿ ಯಾವುದೆಲ್ಲ ಸಹಜ ಎಂದು ಭಾವಿಸಿದ್ದಿರೋ ಅದು ಹಾಗಲ್ಲ ಎಂದೆನಿಸಲಿದೆ. ಅಂತರಂಗದ ವಿಚಾರಗಳನ್ನು ಸಲುಗೆಯ ಕಾರಣಕ್ಕೆ ಹಂಚಿಕೊಳ್ಳಬಾರದು ಎಂಬ ಸಲಹೆಯನ್ನು ಕುಟುಂಬ ಸದಸ್ಯರು ನೀಡಲಿದ್ದು, ಇದು ನಿಮಗೂ ಸರಿ ಎನಿಸಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಮಕ್ಕಳ ಶಿಕ್ಷಣಕ್ಕೆ ಅಗತ್ಯವಾದ ಹಣಕಾಸನ್ನು ಹೊಂದಾಣಿಕೆ ಮಾಡುವ ಬಗ್ಗೆ ಸಂಗಾತಿ ಜೊತೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ದಿನ ಭಾರವಾದ ವಸ್ತುಗಳನ್ನು ಎತ್ತುವಾಗ ಎಚ್ಚರಿಕೆಯನ್ನು ವಹಿಸಿ. ಇಲ್ಲದಿದ್ದರೆ ಬೆನ್ನು ಹಿಡಿದುಕೊಳ್ಳುವಂತೆ ಆಗುವುದು ಅಥವಾ ಉಳುಕುವುದು ಈ ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಬಾಡಿಗೆ ಮನೆಯಲ್ಲಿದ್ದು, ಅದರ ಬದಲಾವಣೆಗಾಗಿ ಪ್ರಯತ್ನಿಸುತ್ತಾ ಇರುವವರಿಗೆ ಮನಸ್ಸಿಗೆ ಹಿಡಿಸುವಂಥ ಮನೆ ದೊರೆಯಲಿದೆ.
ನಿತ್ಯವೂ ಕಾಣುವ ವಿಚಾರಗಳಲ್ಲಿಯೇ ಏನೋ ಬದಲಾವಣೆಗಳು ಆಗುತ್ತಿವೆ ಎಂಬುದು ಗಟ್ಟಿಯಾಗಿ ನಿಮ್ಮ ಮನಸ್ಸಿನಲ್ಲಿ ಬೇರೂರಲಿದೆ. ಮದುವೆಗೆ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧ ದೊರೆಯುವ ಸಾಧ್ಯತೆಗಳು ಇವೆ. ದೂರದ ಊರುಗಳಲ್ಲಿ ಇರುವ ಸಂಬಂಧಿಕರು ಕೆಲವು ವಿಚಾರಗಳಲ್ಲಿ ಸಹಾಯ ಮಾಡುವಂತೆ ನಿಮ್ಮನ್ನು ಕೇಳಿಕೊಳ್ಳಬಹುದು. ನಿಮ್ಮಿಂದ ಅದು ಮಾಡಲಿಕ್ಕೆ ಸಾಧ್ಯವೇ ಎಂಬುದರ ಬಗ್ಗೆ ಆಲೋಚಿಸಿದ ನಂತರವಷ್ಟೇ ಉತ್ತರವನ್ನು ಹೇಳಿ. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ನಿಯೋಜನೆ ಮೇಲೆ ಹೆಚ್ಚುವರಿಯಾಗಿ ಜವಾಬ್ದಾರಿಗಳನ್ನು ವಹಿಸುವ ಬಗ್ಗೆ ನಿಮಗೆ ಸೂಚನೆ ಬರಬಹುದು. ಆಹಾರ ಪಥ್ಯವನ್ನು ಪಾಲನೆ ಮಾಡುವ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. ಮನೆಗೆ ಪೀಠೋಪಕರಣಗಳನ್ನು ಖರೀದಿಸಿ ತರುವುದಕ್ಕೆ ನಿಮ್ಮಲ್ಲಿ ಕೆಲವರು ಕ್ರೆಡಿಟ್ ಕಾರ್ಡ್ ಬಳಸುವ ಯೋಗ ಇದೆ.
ಕೆಮ್ಮು, ಕಫ, ಗಂಟಲು ನೋವು ಇಂಥ ಆರೋಗ್ಯ ಸಮಸ್ಯೆಗಳು ನಿಮ್ಮಲ್ಲಿ ಕೆಲವರನ್ನು ಕಾಡಬಹುದು. ದಿಢೀರ್ ಅಂತ ದೂರ ಪ್ರಯಾಣ ಮಾಡುವ ಅನಿವಾರ್ಯ ಸೃಷ್ಟಿ ಆಗಲಿದೆ. ದೈಹಿಕ ಆಯಾಸ, ದಣಿವು ಕಾಡುವುದರಿಂದ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿರುವವರಿಗೆ ಅಗತ್ಯ ಇರುವ ಪುಸ್ತಕಗಳು, ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್ ಇಂಥವುಗಳ ಖರೀದಿಗಾಗಿ ಖರ್ಚು ಮಾಡುವ ಯೋಗ ಇದೆ. ಸರ್ಕಾರದಿಂದ ಬರಬೇಕಾದ ಟ್ಯಾಕ್ಸ್ ರೀಫಂಡ್ ಸೇರಿದಂತೆ ಇತರ ಯಾವುದೇ ಬಾಕಿ ಇದ್ದರೂ ಅದು ಯಾವಾಗ ಬರಬಹುದು ಎಂಬ ಸುಳಿವು ದೊರೆಯಲಿದೆ. ಗಾಜಿನ ವಸ್ತುಗಳು ಅಥವಾ ಚೂಪಾದ ವಸ್ತುಗಳನ್ನು ಬಳಕೆ ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಜಾಗ್ರತೆಯನ್ನು ವಹಿಸಬೇಕು. ಹೋಟೆಲ್ ವ್ಯವಹಾರ ನಡೆಸುತ್ತಿರುವವರಿಗೆ ಹಣಕಾಸಿನ ಒತ್ತಡ ಕಾಣಿಸಿಕೊಳ್ಳಬಹುದು.
ಎಲ್ಲರ ಬಳಿ ಹೇಳಿಕೊಂಡು ಬಂದಾಗಿದೆ ಎಂಬ ಕಾರಣಕ್ಕಾಗಿಯೇ ಕೆಲವು ಕೆಲಸಗಳನ್ನು ಪೂರ್ಣ ಮಾಡಲೇಬೇಕಾದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ದಾಕ್ಷಿಣ್ಯಕ್ಕೆ ಸಿಕ್ಕಿಬೀಳದೆ ಒಂದು ವೇಳೆ ಬೇಡ ಎನಿಸಿದ್ದನ್ನು ಈಗಿರುವ ಸ್ಥಿತಿಯಲ್ಲೇ ಬಿಟ್ಟು ಬಿಡುವುದು ನಿಮಗೆ ಹೆಚ್ಚು ನಷ್ಟವಾಗದಂತೆ ತಡೆಯಲಿದೆ. ಇನ್ನು ನಿಮ್ಮಲ್ಲಿ ಯಾರಿಗೆ ಚರ್ಮ, ಕೂದಲಿಗೆ ಸಂಬಂಧಿಸಿದಂತೆ ಸಣ್ಣ- ಪುಟ್ಟ ಅನಾರೋಗ್ಯ ಸಮಸ್ಯೆಗಳು ಇದೆ ಎಂದಾಗಿದ್ದಲ್ಲಿ ಸೂಕ್ತ ವೈದ್ಯೋಪಚಾರ ಪಡೆದುಕೊಳ್ಳುವುದಕ್ಕೆ ಗಮನವನ್ನು ನೀಡಿ. ಸ್ವಂತ ವ್ಯವಹಾರ- ವ್ಯಾಪಾರ ಆರಂಭ ಮಾಡಬೇಕು ಎಂದು ಹಣಕಾಸು ವ್ಯವಸ್ಥೆ ಮಾಡುತ್ತಿದ್ದೀರಿ ಎಂದಲ್ಲಿ ಅದು ಸಾಧ್ಯವಾಗಲಿದೆ. ವಾಹನ ಖರೀದಿ ಮಾಡುವುದಕ್ಕಾಗಿ ಬ್ಯಾಂಕ್- ಬ್ಯಾಂಕೇತರ ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ಸಿಗುವ ಬಗ್ಗೆ ಖಾತ್ರಿ ದೊರೆಯಲಿದೆ. ಈ ಬಗ್ಗೆ ನಿಮಗೆ ಕಾಡುತ್ತಿರುವ ಆತಂಕ ದೂರವಾಗಲಿದೆ.
ನಿಮ್ಮಲ್ಲಿ ಕೆಲವರು ಈಗ ಮನೆಯಲ್ಲಿ ಇರುವಂಥ ಹಳೇ ವಸ್ತುಗಳು ಅಥವಾ ನಿರುಪಯುಕ್ತ ಆದಂಥ ವಸ್ತುಗಳನ್ನು ಮಾರಾಟ ಮಾಡುವುದಕ್ಕೋ ಅಥವಾ ಯಾರಿಗಾದರೂ ಕೊಟ್ಟುಬಿಡುವುದಕ್ಕೆ ನಿರ್ಧಾರ ಕೈಗೊಳ್ಳಲಿದ್ದೀರಿ. ದೇವತಾ ಕಾರ್ಯಗಳನ್ನು ಆಯೋಜನೆ ಮಾಡುವ ಸಲುವಾಗಿ ಸಿದ್ಧತೆಗಳನ್ನು ಆರಂಭಿಸುವ ಯೋಗ ಇದ್ದು, ನಿಮ್ಮ ಸಂಬಂಧಿಕರು- ಸ್ನೇಹಿತರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ಸಹ ನೀವು ಓಡಾಟ ಮಾಡಬೇಕಾಗಬಹುದು. ವೃತ್ತಿಪರರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಬಹುದು. ಈ ಹಿಂದೆ ನೀವಾಗಿಯೇ ಬೇಡ ಎಂದುಕೊಂಡು ಮುರಿದುಕೊಂಡ ಒಪ್ಪಂದಗಳನ್ನು ಮತ್ತೆ ಮುಂದುವರಿಸುವಂತೆ ಸಂಬಂಧಿಸಿದವರು ನಿಮ್ಮನ್ನು ಕೇಳಿಕೊಳ್ಳಬಹುದು. ಯಾವುದನ್ನು ಇನ್ನು ಮುಂದೆ ಕಷ್ಟ ಆಗಬಹುದು ಎಂದುಕೊಂಡಿರುತ್ತೀರೋ ಅದರಿಂದ ಹೊರಬರುವ ಮಾರ್ಗೋಪಾಯಗಳು ಗೋಚರ ಆಗಲಿವೆ.
ನಿಮ್ಮಲ್ಲಿ ಕೆಲವರು ಈಗಾಗಲೇ ಪಡೆದಂಥ ಸಾಲಗಳನ್ನು ತೀರಿಸುವ ಕುರಿತು ಆಲೋಚನೆ ಮಾಡಲಿದ್ದೀರಿ. ಅದಕ್ಕಾಗಿ ನೀವು ಮಾಡಿದಂಥ ಉಳಿತಾಯ, ಹೂಡಿಕೆ ಹಣವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆಸಲಿದ್ದೀರಿ. ಯಾರು ಮನೆಯಿಂದ ದೂರದ ಪ್ರದೇಶದಲ್ಲಿ ವ್ಯಾಸಂಗ, ಉದ್ಯೋಗ ಮಾಡುತ್ತಾ ಇರುವಿರೋ ಅಂಥವರಿಗೆ ಮನೆಯ, ಕುಟುಂಬದ ನೆನಪು ವಿಪರೀತವಾಗಿ ಕಾಡಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮ ಕಾಳಜಿ ಹೆಚ್ಚಾಗುವ ಅವಕಾಶಗಳು ಇದ್ದು, ಅದಕ್ಕೆ ಸಂಬಂಧಿಸಿದಂತೆ ಉಪಕರಣಗಳನ್ನು ಖರೀದಿ ಮಾಡುವುದಕ್ಕೆ ಮುಂದಾಗಲಿದ್ದೀರಿ. ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡುವುದಕ್ಕೆ ಶುರು ಮಾಡಲಿದ್ದೀರಿ. ಅಗತ್ಯಕ್ಕಿಂತ ತುಂಬ ಚಿಂತೆ ಮಾಡುತ್ತಿದ್ದೀರಿ ಎಂದು ನಿಮ್ಮ ಆಪ್ತರೇ ಹೇಳಲಿದ್ದು, ಒಂದು ಹಂತಕ್ಕೆ ಇದೇ ಭಾವನೆ ನಿಮ್ಮಲ್ಲೂ ಮೂಡಲಿದೆ.
ಮನೆಗೆ ಟೀವಿ, ಫ್ರಿಜ್ ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿ ಮಾಡುವಂಥ ಯೋಗ ಇದೆ. ನಿಮಗೆ ಅಗತ್ಯ ಇದ್ದಾಗ ನೆರವು ನೀಡುವುದಾಗಿ ಮಾತು ನೀಡಿದ್ದವರಿಂದ ನೆರವು ಪಡೆಯುವ ಕುರಿತು ನಿಮ್ಮಲ್ಲಿ ಕೆಲವರು ಆಲೋಚನೆ ಮಾಡಲಿದ್ದೀರಿ. ವ್ಯಾಪಾರ- ವ್ಯವಹಾರ ಆರಂಭಿಸಬೇಕು ಎಂದಿರುವವರಿಗೆ ತಂದೆ ಅಥವಾ ತಂದೆ ಸಮಾನರಾದವರಿಂದ ನೆರವು ನೀಡುವ ಭರವಸೆ ದೊರೆಯಲಿದೆ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ನಿಮ್ಮ ಬಳಿ ಇರಿಸಿಕೊಳ್ಳುವಂತೆ ನೀಡಿದ ದಾಖಲೆ, ಕಾಗದ- ಪತ್ರಗಳನ್ನು ಜೋಪಾನವಾಗಿ ನೋಡಿಕೊಳ್ಳುವುದು ಈ ದಿನ ಮುಖ್ಯವಾಗಲಿದೆ. ಒಂದು ಸ್ಥಳದಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಲಕ್ಷ್ಯವನ್ನು ನೀಡುವುದು ಮುಖ್ಯವಾಗುತ್ತದೆ.
ನಿಮ್ಮ ಕೆಲಸ- ಕಾರ್ಯಗಳಲ್ಲಿಯೇ ಮುಳುಗಿ ಹೋಗುವಂತೆ ಆಗುತ್ತದೆ. ಕುಟುಂಬದ ಕಡೆಗೆ ಲಕ್ಷ್ಯ ನೀಡುತ್ತಿಲ್ಲ ಎಂದು ನಿಮ್ಮ ಬಗ್ಗೆ ಆಕ್ಷೇಪ ಕೇಳಬಹುದು. ಅಥವಾ ನಿಮಗೇ ಇನ್ನು ಹೀಗೇ ಇದ್ದರೆ ಆಗಲ್ಲ ಎಂಬ ಭಾವನೆಯೊಂದು ಮೂಡಬಹುದು. ಒಂದು ವೇಳೆ ನೀವೇನಾದರೂ ಮನೆ ನಿರ್ಮಾಣ, ನವೀಕರಣ ಇಂಥ ಕೆಲಸವನ್ನು ಹಿಡಿಸಿದ್ದಲ್ಲಿ ಅದು ನಿಧಾನ ಆಗುತ್ತಿದೆ, ಅಂದುಕೊಂಡಿದ್ದಕ್ಕಿಂತ ಹೆಚ್ಚು ಖರ್ಚು ಆಗುತ್ತಿದೆ ಎಂದು ಬಲವಾಗಿ ಅನಿಸಲಿದೆ. ವಾಸ್ತವವನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ ನಿಮ್ಮಲ್ಲಿ ಕೆಲವರು ಕುಟುಂಬ ಸದಸ್ಯರ ಜೊತೆಗೆ ಜಗಳ- ಕಲಹ ಮಾಡಿಕೊಳ್ಳಬಹುದು. ಇತರರ ವೈಯಕ್ತಿಕ ನಿರ್ಧಾರಗಳಲ್ಲಿ ತುಂಬ ಮೂಗು ತೂರಿಸುವುದಕ್ಕೆ ಹೋಗಬೇಡಿ. ಅದೇ ರೀತಿ ಅತಿ ಉತ್ಸಾಹದಿಂದ ತಮಾಷೆಗೆ ಆಡಿದ ಮಾತುಗಳೇ ಇತರರನ್ನು ಘಾಸಿ ಮಾಡಬಹುದು. ಆದ್ದರಿಂದ ಆ ಕಡೆಗೂ ಲಕ್ಷ್ಯವನ್ನು ನೀಡಿ. ಮಾತಾಡುವಾಗ ಬಳಸುವ ಪದಗಳ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಿ.
ಲೇಖನ- ಎನ್.ಕೆ.ಸ್ವಾತಿ