Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರಿಂದ 7ರ ತನಕ ವಾರಭವಿಷ್ಯ  

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 1ರಿಂದ 7ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 1ರಿಂದ 7ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಸುಷ್ಮಾ ಚಕ್ರೆ

Updated on: Dec 01, 2024 | 3:55 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 1ರಿಂದ 7ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಫಲಿತಾಂಶಗಳು ನಿಮಗೆ ಸಮಾಧಾನ ತರುವುದಿಲ್ಲ. ಎಲ್ಲವೂ ಲೆಕ್ಕಾಚಾರದಂತೆಯೂ ನಡೆದುಕೊಂಡಾಗಲೂ ಹೀಗೆ ಯಾಕೆ ಆಗುತ್ತಿದೆ ಎಂಬ ಸಂಗತಿ ನಿಮ್ಮ ಸುತ್ತಮುತ್ತಲೂ ಇರುವವರಲ್ಲಿ ಆತ್ಮವಿಶ್ವಾಸ ಕಡಿಮೆ ಮಾಡುತ್ತಿದೆ ಎಂಬುದು ಗಮನಕ್ಕೆ ಬರಲಿದೆ. ಆಗ ನೀವು ನಿರೀಕ್ಷೆ ಮಾಡಿದಂತೆ ಯಾವುದೂ ನಡೆಯುತ್ತಿಲ್ಲ ಎಂದಾಗ ಎಲ್ಲಿ ತಪ್ಪಾಗುತ್ತಿದೆ ಎಂಬುದನ್ನು ಅವಲೋಕಿಸುವುದಕ್ಕೆ ಶುರು ಮಾಡಲಿದ್ದೀರಿ. ಅದರ ಪರಿಣಾಮ ಎಂಬಂತೆ ವ್ಯಕ್ತಿಗಳು, ವ್ಯವಸ್ಥೆ ಹಾಗೂ ನಿಮ್ಮದೇ ಸುತ್ತಮುತ್ತಲೂ ಇರುವಂಥವರು ಬಗ್ಗೆ ಒಂದು ಬಗೆಯಲ್ಲಿ ಬೇಸರ ಕಾಡಲಿದೆ. ಇದೇ ವೇಳೆ ಯಾರು- ಯಾವ ಉದ್ದೇಶದಿಂದ ನಿಮ್ಮ ಮೇಲೆ ಬಹಳ ಪ್ರೀತಿ ಇರುವಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಸಂಗತಿ ಈ ವಾರ ನಿಮಗೆ ಗೊತ್ತಾಗಲಿದೆ. ಇದರಿಂದ ಸ್ವಲ್ಪ ಮಟ್ಟಿಗೆ ಮಾನಸಿಕವಾಗಿ ಕುಗ್ಗಲಿದ್ದೀರಿ. ನಿಮ್ಮಿಂದ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು, ಅದನ್ನು ನಿಮ್ಮೆದುರು ಪದೇಪದೇ ಹೇಳುವವರ ನಡವಳಿಕೆಯು ಬೇಸರ ಮೂಡಿಸಲಿದೆ. ಮುಖ್ಯವಾಗಿ ನಿಮ್ಮ ಹೆಸರು, ಹುದ್ದೆ, ಅಧಿಕಾರದ ಕಾರಣಕ್ಕೆ ಹತ್ತಿರ ಆದವರು ಯಾರು ಎಂಬುದನ್ನು ಈಗ ಗುರುತಿಸಲಿದ್ದೀರಿ. ನಿಮ್ಮಲ್ಲಿ ಕೆಲವರು ಆಯುರ್ವೇದ ಚಿಕಿತ್ಸೆಯನ್ನು ಪಡೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಆಕರ್ಷಣೆ ಹೆಚ್ಚಾಗಬಹುದು. ಅಥವಾ ವಿವಾಹಿತರ ಕಡೆಗೆ ಮೋಹ ಸೆಳೆಯಬಹುದು. ಇಂಥ ವಿಚಾರಗಳಲ್ಲಿ ಬಹಳ ಎಚ್ಚರಿಕೆಯನ್ನು ವಹಿಸಿ. ನೀವು ಅಂದುಕೊಂಡಂತೆಯೇ ಔದ್ಯೋಗಿಕ ವಿಚಾರದಲ್ಲಿ ಬೆಳವಣಿಗೆಗಳು ಆಗಲಿವೆ. ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಇವುಗಳನ್ನು ಪೂರ್ಣಗೊಳಿಸಲು ಬೇಕಾದಷ್ಟು ಸಮಯವನ್ನು ಮೀಸಲಿಡುವುದು ಕಷ್ಟ ಎನಿಸಲಿದೆ. ಕೃಷಿಕರಾಗಿದ್ದಲ್ಲಿ ಮಕ್ಕಳ ಶಿಕ್ಷಣದ ಸಲುವಾಗಿ ಹೆಚ್ಚಿನ ಖರ್ಚುಗಳನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಸಾಲ ಮಾಡಬೇಕಾಗಬಹುದು. ಸ್ವಲ್ಪ ಪ್ರಮಾಣದ ಭೂಮಿಯೋ ರಾಸುಗಳನ್ನೋ ಮಾರಾಟ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಬೆನ್ನು ನೋವು ವಿಪರೀತ ಕಾಡಲಿದೆ. ಸಣ್ಣ- ಪುಟ್ಟ ಆಪರೇಷನ್ ಆದರೂ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ವೈದ್ಯರು ಹೇಳುವ ಸಾಧ್ಯತೆಗಳಿವೆ. ವೃತ್ತಿನಿರತರಿಗೆ ಸ್ಪರ್ಧೆ ಜಾಸ್ತಿ ಆಗಲಿದೆ. ನಿಮಗಿಂತ ಕಡಿಮೆ ಮೊತ್ತಕ್ಕೆ ಕೆಲಸ ಒಪ್ಪಿಕೊಂಡು ಮಾಡುವಂಥವರ ಸ್ಪರ್ಧೆಯನ್ನು ತಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಸ್ನೇಹಿತರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ನೀರಿನಿಂದ ದೂರ ಇರುವುದು ಉತ್ತಮ. ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಮಾಡುವ ಕಡೆಗೆ ಲಕ್ಷ್ಯ ಕೊಡಿ. ಮಹಿಳೆಯರಿಗೆ ಇತರರ ಸಲುವಾಗಿ, ಇತರರ ಕೆಲಸಕ್ಕಾಗಿ ಓಡಾಟ ನಡೆಸಬೇಕಾಗಬಹುದು. ಹಾಗೆ ನೀವು ಶ್ರಮಪಟ್ಟು ಕೆಲಸ- ಕಾರ್ಯಗಳನ್ನು ಮಾಡಿದ ನಂತರವೂ ಆಕ್ಷೇಪದ ಧ್ವನಿಯಲ್ಲಿ ಕೆಲವು ಮಾತುಗಳನ್ನು ಕೇಳಿಸಿಕೊಳ್ಳುವಂತಾಗುತ್ತದೆ. ಇನ್ನು ಮಾತ್ರೆ-ಔಷಧಗಳಲ್ಲಿ ಏರುಪೇರಾಗಬಹುದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ಹಿಂದೆ ನೀವು ನೀಡಿದ ಸಲಹೆ- ಸೂಚನೆಗಳನ್ನು ಯಾರ್ಯಾರು ನಿರಾಕರಿಸಿದ್ದರೋ ಅಥವಾ ನಿರ್ಲಕ್ಷ್ಯ ಮಾಡಿದ್ದರೋ ಅವರಿಗೆ ಈಗ ಅದರ ಮೌಲ್ಯ ತಿಳಿದುಬರಲಿದೆ. ಆ ಸಮಯದಲ್ಲಿ ನಿಮಗೆ ಆದಂಥ ಬೇಸರ ಮರೆಸುವಂಥ ಸನ್ನಿವೇಶಗಳು ಸೃಷ್ಟಿ ಆಗಲಿವೆ. ಸಂಘ ಸಂಸ್ಥೆಗಳನ್ನು ಮುನ್ನಡೆಸುತ್ತಿರುವವರು, ಸಮುದಾಯಗಳ ಮುಖಂಡರಾದವರಿಗೆ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆಗಳು ಆಗಲಿವೆ. ಒಮ್ಮತದಿಂದ ಕೆಲವು ಕೆಲಸಗಳನ್ನು ಮಾಡಬೇಕು ಎಂದು ಹಲವು ಸಮಯದಿಂದ ಅಂದುಕೊಳ್ಳುತ್ತಿದ್ದಲ್ಲಿ ಅದು ಸಾಧ್ಯವಾಗಲಿದೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ವೇತನ ಸಹ ದೊಡ್ಡ ಪ್ರಮಾಣದಲ್ಲಿಯೇ ಇರುವಂಥ ಸಾಧ್ಯತೆಗಳು ಹೆಚ್ಚಿವೆ. ಇನ್ನು ಮುಖ್ಯವಾಗಿ ನಿಮಗೆ ಗೊತ್ತಾಗಬೇಕಾದ್ದು ಏನೆಂದರೆ, ಈ ವಾರ ಯಾವ ಅವಕಾಶವೇ ನಿಮ್ಮ ಎದುರು ತೆರೆದುಕೊಳ್ಳಲಿದೆ. ಅದನ್ನು ಬಳಸಿಕೊಳ್ಳುವುದು ಹೇಗೆ ಎಂದು ಚಿಂತಿಸಿ. ಏಕೆಂದರೆ ಬಹಳ ಅಚ್ಚರಿಯಿಂದ ಕೂಡಿದ ಬೆಳವಣಿಗೆಗಳು ನಡೆಯಲಿವೆ. ಮುಂದೆ ಸಕಾರಾತ್ಮಕವಾಗಿ ನಡೆಯಬಹುದಾದ ಘಟನೆಗಳ ಬಗ್ಗೆ ಸುಳಿವು ದೊರೆಯಲಿದೆ. ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಮಾನಸಿಕ ಒತ್ತಡ ಅನುಭವಿಸುತ್ತಿರುವವರಿಗೆ ಒಂದು ಬಗೆಯಲ್ಲಿ ಸಮಾಧಾನ ದೊರೆಯಲಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯಿಂದಾಗಿ ಹೆಮ್ಮೆ ಮೂಡಲಿದೆ. ಏಕ ಕಾಲಕ್ಕೆ ಎರಡ್ಮೂರು ಕೆಲಸಗಳನ್ನು ಮಾಡಲಿಕ್ಕೆ ಸಾಧ್ಯವಾಗಲಿದೆ. ಸ್ವಂತ ವ್ಯಾಪಾರ ವ್ಯವಹಾರ ಮಾಡಬೇಕು ಎಂದಿರುವವರಿಗೆ ಹಣಕಾಸಿನ ಅನುಕೂಲ ಒದಗಿಬರಲಿದೆ. ನೀವು ನಿರೀಕ್ಷೆಯೇ ಮಾಡದ ರೀತಿಯಲ್ಲಿ ಸಂಘ- ಸಂಸ್ಥೆಗಳಲ್ಲಿ ಸ್ಥಾನ, ಮಾನ ದೊರೆಯುವಂಥ ಸಾಧ್ಯತೆಗಳು ಇವೆ. ಕೃಷಿಕರಿಗೆ ಮನೆಯಲ್ಲಿ ಶುಭ ಕಾರ್ಯಗಳಿಗೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮನೆ ದುರಸ್ತಿ, ನವೀಕರಣ, ಸುಣ್ಣ- ಬಣ್ಣ ಮಾಡಿಸುವ ಬಗ್ಗೆ ಕುಟುಂಬ ಸದಸ್ಯರ ಜತೆಗೆ ಮಾತುಕತೆಯನ್ನು ನಡೆಸಲಿದ್ದೀರಿ. ಒಂದು ವೇಳೆ ಮನೆಯಿಂದ ಹೊರಗೆ ಸುತ್ತಾಟ ನಡೆಸುವುದು ಹೆಚ್ಚಾದಲ್ಲಿ ಹೋಟೆಲ್ ಊಟ- ತಿಂಡಿ ಮಾಡುವ ಬದಲು ಮನೆಯಿಂದಲೇ ತೆಗೆದುಕೊಂಡು ಹೋಗುವ ಕಡೆಗೆ ಗಮನ ನೀಡುವುದು ಮುಖ್ಯವಾಗುತ್ತದೆ. ನಾಲಗೆ ಮೇಲೆ ಹಿಡಿತವಿರಲಿ. ಮಸಾಲೆಯುಕ್ತ ಪದಾರ್ಥಗಳ ಸೇವನೆ ಬೇಡ. ವೃತ್ತಿನಿರತರಿಗೆ ಸರ್ಕಾರಿ ಕೆಲಸಗಳು ಇದ್ದಲ್ಲಿ ಸಲೀಸಾಗಿ ಮುಗಿಯುವ ಮಾರ್ಗಗಳು ಗೋಚರ ಆಗಲಿವೆ. ನೋಂದಣಿ, ಪರವಾನಗಿ ಇತ್ಯಾದಿಗಳನ್ನು ಮಾಡಿಸಿಕೊಡುವಂಥ ವೃತ್ತಿಯಲ್ಲಿ ಇರುವವರಿಗೆ ಆದಾಯದ ಹರಿವು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೂ ಮೀರಿ ಕುಟುಂಬದವರ ಬೆಂಬಲ ದೊರೆಯಲಿದೆ. ಮಹಿಳೆಯರು ವಸ್ತ್ರಾಭರಣ ಖರೀದಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ನಿಮ್ಮ ಬಳಿ ಇರುವಂಥ ಹಣದ ಜೊತೆಗೆ ಕ್ರೆಡಿಟ್ ಕಾರ್ಡ್ ಸಹ ಬಳಸಬೇಕಾಗಲಿದೆ. ನಿಮ್ಮಲ್ಲಿ ಕೆಲವರಿಗೆ ಉಡುಗೊರೆ ದೊರೆಯುವಂಥ ಯೋಗ ಇದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಏನನ್ನು ಬಾಯಿಬಿಟ್ಟು ಹೇಳಬಾರದು ಎಂದುಕೊಂಡಿರುವಿರೋ ಅದನ್ನು ನೇರಾನೇರ ಹೇಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಇದೇ ವೇಳೆ ನಿಮಗೆ ಮುಜುಗರ ತರುವಂಥ, ಕಿರಿಕಿರಿ ಎನಿಸುವಂಥವರ ಜೊತೆಗೆ ಇರಬೇಕಲ್ಲ ಎಂಬ ಚಿಂತೆ ಸಹ ನಿಮ್ಮನ್ನು ಕುಗ್ಗಿಸಬಹುದು. ಅದರಲ್ಲೂ ಕೆಲವು ವ್ಯಕ್ತಿಗಳ ಜತೆಗೆ ಒಟ್ಟಿಗೆ ಸಮಯ ಕಳೆಯಬೇಕಲ್ಲಾ, ಅದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂದು ಆಲೋಚಿಸುವುದಕ್ಕೆ ಹೆಚ್ಚು ಸಮಯ ಹೋಗುತ್ತದೆ. ಬಡ್ತಿ ಅಥವಾ ದೊಡ್ಡ ಹುದ್ದೆಯ ನಿರೀಕ್ಷೆಯಲ್ಲಿ ಇರುವಂಥವರಿಗೆ ನಿರಾಸೆ ಕಾಡಬಹುದು. ಮುಖ್ಯವಾಗಿ ನಿಮಗೆ ಈ ಹಿಂದೆ ಭರವಸೆ ನೀಡಿದ್ದವರು ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳಬಹುದು. ಈ ಕಾರಣಕ್ಕಾಗಿ ನೀವು ಹಾಕುವ ಪ್ರಯತ್ನಕ್ಕೆ ತಕ್ಕಂತೆ ಪ್ರತಿಫಲ ದೊರೆಯುತ್ತಿಲ್ಲವೇನೋ ಎಂಬ ಅನುಮಾನ ಕಾಡಲಿದೆ. ಆದ್ದರಿಂದ ಸಹೋದ್ಯೋಗಿಗಳು ಸೇರಿದಂತೆ ಇತರರು ನಿಮ್ಮ ಬಗ್ಗೆ ಹೇಳುವಂಥ ಸಂಗತಿಗಳು ಬಹಳ ಮುಖ್ಯ ಎಂದೆನಿಸುತ್ತದೆ. ಇತರರು ಹೇಳಿದ ವಿಚಾರಕ್ಕೆ ಅನುಗುಣವಾಗಿ ಸ್ವಭಾವ, ನಿರ್ಧಾರ ತೆಗೆದುಕೊಳ್ಳುವುದಲ್ಲಿ ಹಾಗೂ ಆಲೋಚನೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಗಂಭೀರವಾದ ಆಲೋಚನೆ ಮಾಡಲಿದ್ದೀರಿ. ತಂದೆ- ತಾಯಿಯ ಆರೋಗ್ಯ, ಪ್ರಯಾಣ, ಪ್ರವಾಸ ಇತ್ಯಾದಿ ಕಾರಣಗಳಿಗಾಗಿ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಕೆಲವು ಕೆಲಸಗಳು ಅರ್ಧದಷ್ಟು ಈಗಾಗಲೇ ಮುಗಿಸಿದ್ದರೂ ಮೊದಲಿಂದ ಮಾಡಬೇಕಾದ ಸನ್ನಿವೇಶ ಎದುರಾಗಲಿದೆ. ನಿಮ್ಮ ಪಾಲಿಗೆ ಬರಬೇಕಾದ ಅವಕಾಶವೊಂದು ಇತರರಿಗೆ ದೊರೆಯಬಹುದು. ಒಂದಿಷ್ಟು ಶ್ರಮ ಹಾಕಿದಲ್ಲಿ ಆ ಅವಕಾಶ ನಿಮಗೇ ದೊರೆಯುವಂಥ ಸಾಧ್ಯತೆಗಳಿವೆ. ಕೃಷಿಕರಿಗೆ ನಿಮ್ಮದೇ ನಿರ್ಲಕ್ಷ್ಯದ ಕಾರಣಕ್ಕೆ ಕೆಲವು ಆರ್ಥಿಕ ಸಮಸ್ಯೆಗಳು ಆಗಬಹುದು. ಇನ್ನು ಬೆಳೆ ನಷ್ಟ ಆಗಬಹುದು ಅಥವಾ ಡೇರಿ ವ್ಯವಹಾರ, ಪಶು ಸಾಕಣೆಯಂಥ ವ್ಯವಹಾರ ಮಾಡುತ್ತಿದ್ದಲ್ಲಿ ನಿರೀಕ್ಷೆ ಮಾಡಿದ್ದಕ್ಕಿಂತ ಅಥವಾ ಸಾಮಾನ್ಯವಾಗಿ ಆಗುವುದಕ್ಕಿಂತ ಹೆಚ್ಚಿನ ಖರ್ಚು ಆಗಲಿದೆ. ಸೋದರ- ಸೋದರಿಯರು ಅಥವಾ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಬಹುದು. ಕೆಲವರು ಭೂಮಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೋರ್ಟ್- ಕಚೇರಿ ಮೆಟ್ಟಿಲು ಹತ್ತುವಂಥ ಸಾಧ್ಯತೆ ಇದೆ. ವೃತ್ತಿನಿರತರಿಗೆ ವ್ಯವಹಾರ ವಿಸ್ತರಣೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣ ಆಗಲಿದೆ. ಹೊಸದಾಗಿ ಕೆಲಸಕ್ಕೆ ಜನರನ್ನು ತೆಗೆದುಕೊಳ್ಳಲಿದ್ದೀರಿ. ಜಾಹೀರಾತು, ಪ್ರಚಾರಕ್ಕಾಗಿಯೂ ಹೆಚ್ಚಿನ ಖರ್ಚು ಮಾಡಲಿದ್ದೀರಿ. ಇದಕ್ಕೆ ನಿಮ್ಮ ಸ್ನೇಹಿತರು- ಸಂಬಂಧಿಗಳು ಸಹ ಬೆಂಬಲ ನೀಡುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳು, ಅದರಲ್ಲೂ ಪ್ರೌಢಶಾಲೆ ವಿದ್ಯಾರ್ಥಿಗಳು ಇದ್ದಲ್ಲಿ ನೀವು ಯಾರ ಜತೆಗೆ ಸ್ನೇಹ ಮಾಡುತ್ತಿದ್ದೀರಿ ಎಂಬ ಬಗ್ಗೆ ಲಕ್ಷ್ಯ ವಹಿಸುವುದು ಮುಖ್ಯವಾಗುತ್ತದೆ. ನಿಮ್ಮ ನಡವಳಿಕೆ ಬಗ್ಗೆ ಕುಟುಂಬದಲ್ಲಿ ಹಾಗೂ ಸ್ನೇಹಿತರ ವಲಯದಲ್ಲಿ ಆಕ್ಷೇಪ ಕೇಳಿಬರಬಹುದು. ಮಹಿಳೆಯರು ಉದ್ಯೋಗಸ್ಥರಾಗಿದ್ದಲ್ಲಿ ಕೆಲಸ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇದಕ್ಕಾಗಿ ನಿಮ್ಮದೇ ಹಳೇ ಸ್ನೇಹಿತರ ಮೂಲಕ ಪ್ರಯತ್ನವನ್ನೂ ಮಾಡಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮಗೆ ಯಾವುದೇ ವಿಚಾರದಲ್ಲಿ ಹಿನ್ನಡೆ ಆದರೂ ಅದರಿಂದ ಮಾನಸಿಕವಾಗಿ ವಿಚಲಿತರಾಗದೆ ಉತ್ಸಾಹ ಉಳಿಸಿಕೊಳ್ಳುವುದು ಮುಖ್ಯವಾಗಲಿದೆ. ಇದು ಯಾಕೆ ಹೇಳಬೇಕಿದೆ ಅಂದರೆ, ನಿಮಗೆ ಕೆಲವು ವಿಚಾರಗಳು ಪ್ರತಿಷ್ಠೆ ಆಗಲಿವೆ. ಅದು ಕೆಲವರಿಗೆ ಕೆಲಸವನ್ನು ಕೊಡುವುದೇ ಇರಬಹುದು ಅಥವಾ ಕೆಲವರಿಗೆ ಕೆಲಸವನ್ನು ಕೊಡಿಸುವುದೇ ಇರಬಹುದು. ಇಂಥ ವಿಚಾರಕ್ಕೆ ಎಷ್ಟು ಹಣ, ಶ್ರಮ ಹಾಗೂ ಪ್ರಭಾವ ಬಳಸಿದರೂ ಸರಿ ಅಂದುಕೊಂಡಿದ್ದು ಆಗಲೇಬೇಕು ಎಂಬ ನಿರ್ಧಾರಕ್ಕೆ ಬರಲಿದ್ದೀರಿ. ಈ ಪ್ರಯತ್ನದಿಂದಾಗಿ ನೀವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅಂದುಕೊಂಡಿದ್ದನ್ನು ಸಾಧಿಸಿಕೊಳ್ಳಲಿದ್ದೀರಿ. ಅದರಲ್ಲೂ ನೀವೇನಾದರೂ ರಾಜಕಾರಣದಲ್ಲಿ ಇದ್ದು, ಪದೋನ್ನತಿ ನಿರೀಕ್ಷೆ ಮಾಡುತ್ತಿದ್ದಲ್ಲಿ ಶುಭ ಸುದ್ದಿ ಕೇಳಿಬರಲಿದೆ. ನಿಮ್ಮನ್ನು ವಿರೋಧಿಸುತ್ತಾ ಬಂದಿರುವವರ ವಿರುದ್ಧ ಭಾರೀ ಯಶಸ್ಸು ದೊರೆಯಲಿದೆ. ಈಗಾಗಲೇ ಖರೀದಿಸಿದ ಸೈಟು- ಜಮೀನಿಗೆ ಸಂಬಂಧಿಸಿದ ವಿಚಾರಗಳಲ್ಲಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ವಿಲಾಸಿ ಕಾರು ಖರೀದಿಸುವಂಥ ಯೋಗ ಇದ್ದು, ಬಹಳ ಆಪ್ತರಾದವರು ಉಡುಗೊರೆಗಳನ್ನು ನೀಡಲಿದ್ದಾರೆ. ಇನ್ನು ನಿಮ್ಮಲ್ಲಿ ಯಾರು ನಿವೃತ್ತಿಯ ಸಮೀಪದಲ್ಲಿ ಇದ್ದೀರಿ, ಅಂಥವರಿಗೆ ಈಗಾಗಲೇ ಸೈಟ್ ಇದ್ದು, ಮನೆ ಕಟ್ಟಿಸುವ ಬಗ್ಗೆ ಆಲೋಚನೆ ಮಾಡುತ್ತಿರುವವರು ಬ್ಯಾಂಕ್ ಗಳಲ್ಲಿ ಮಕ್ಕಳ ಹೆಸರಲ್ಲಿ ಸಾಲಕ್ಕಾಗಿ ಪ್ರಯತ್ನಿಸಲಿದ್ದೀರಿ. ಇದು ಸಲೀಸಾಗಿ ಸಿಗುವಂಥ ಯೋಗ ಸಹ ಇದೆ. ಹೊಸಬರ ಜತೆಗೆ ವ್ಯವಹಾರ ಮಾಡುವಾಗ ಮಾತ್ರ ಬಹಳ ಎಚ್ಚರಿಕೆಯನ್ನು ವಹಿಸಬೇಕು. ಮಾತನಾಡುವಾಗ ಅಂತರಂಗದ ವಿಚಾರಗಳನ್ನು ಹಂಚಿಕೊಳ್ಳಬಾರದು. ಕೃಷಿಕರಿಗೆ ಈ ಹಿಂದೆ ಅರ್ಜಿ ಹಾಕಿಕೊಂಡಿದ್ದ ಕೆಲಸಗಳು ವೇಗ ಪಡೆದುಕೊಳ್ಳಲಿವೆ. ಆರ್ಥಿಕವಾಗಿ ಸಬಲರಾಗುವುದಕ್ಕೆ ಮಾರ್ಗಗಳು ಗೋಚರ ಆಗಲಿವೆ. ಒಂದೆರಡು ಕಾಗದ- ದಾಖಲೆಗಳನ್ನು ಸಲ್ಲಿಸಿದರೆ ಕೆಲಸ ಮುಗಿಯಿತು ಎಂದಿರುವುದೆಲ್ಲ ಈ ವಾರ ಪೂರ್ಣಗೊಳಿಸುವುದಕ್ಕೆ ಸಾಧ್ಯವಾದೀತು. ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವವರಿಗೆ ಆದಾಯದಲ್ಲಿ ಭಾರೀ ಹೆಚ್ಚಳ ಆಗಲಿದೆ. ವೃತ್ತಿನಿರತರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇಷ್ಟು ಸಮಯ ನಿಮಗೆ ದೊರೆಯುತ್ತಿದ್ದ ಆದಾಯದಲ್ಲಿ ಹೆಚ್ಚಳ ಆಗುವಂತೆ ಕೆಲವು ಒಪ್ಪಂದಗಳು ಏರ್ಪಡಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಗಳು ವೃದ್ಧಿಸಲಿದ್ದು, ಅದರಿಂದಲೂ ಅನುಕೂಲಗಳು ಆಗಲಿವೆ. ವಿದ್ಯಾರ್ಥಿಗಳಿಗೆ ಹೊಸ ವಾಹನಗಳು ದೊರೆಯುವಂಥ ಯೋಗ ಇದೆ. ಬಹಳ ಸಮಯದಿಂದ ಕೇಳುತ್ತಾ ಬಂದು, ಪೋಷಕರು ಮುಂದಕ್ಕೆ ಹಾಕುತ್ತಾ ಬರುತ್ತಿದ್ದಲ್ಲಿ ಈಗ ವಾಹನಗಳು ದೊರೆಯಲಿವೆ. ಮಹಿಳೆಯರು ಉದ್ಯಮ- ವ್ಯವಹಾರ ಮಾಡುತ್ತಿದ್ದಲ್ಲಿ ಮತ್ತೂ ಒಂದು ಶಾಖೆ ತೆರೆಯುವ, ವ್ಯಾಪಾರವನ್ನು ವಿಸ್ತರಣೆ ಮಾಡುವಂಥ, ಹೊಸ ಹೂಡಿಕೆ ಮಾಡುವಂಥ ಯೋಗ ಇದೆ. ಬ್ಯಾಂಕ್ ಗಳು- ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದೀರಿ, ಸಣ್ಣ- ಪುಟ್ಟ ಕಾರಣಗಳಿಗೆ ಅದಕ್ಕೆ ತಡೆಯಾಗಿದೆ ಎಂದಿದ್ದಲ್ಲಿ ಅದು ನಿವಾರಣೆ ಆಗಲಿದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮ ಶ್ರಮ, ಸಾಮರ್ಥ್ಯ ಹಾಗೂ ಬುದ್ಧಿವಂತಿಕೆಯನ್ನು ನೆಚ್ಚಿಕೊಂಡು ಮಾಡುವ ಕೆಲಸಗಳ ಬಗ್ಗೆ ಮಾತ್ರ ಆದ್ಯತೆ ನೀಡಿ ಹಾಗೂ ಮಾಮೂಲಿಗಿಂತ ಹೆಚ್ಚು ಶ್ರಮವನ್ನು ಹಾಕಿ, ಪ್ರಯತ್ನಿಸಿ. ಆದರೆ ವಾರದ ಮಧ್ಯಭಾಗದಲ್ಲಿ ಏನಾಗುತ್ತದೆ ಅಂದರೆ, ಏನೂ ಮಾಡಿದರೂ ನನ್ನ ಅದೃಷ್ಟವೇ ಸರಿಯಿಲ್ಲ ಎಂದು ನಿಮ್ಮನ್ನು ನೀವೇ ಹಳಿದುಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗುತ್ತದೆ. ಏಕೆಂದರೆ ಅನಿವಾರ್ಯ ಕಾರಣಗಳಿಂದಾಗಿ ನೀವು ಬಹಳ ಇಷ್ಟಪಟ್ಟು ತೆರಳಬೇಕು ಎಂದುಕೊಂಡಿದ್ದ ಸ್ಥಳ, ಖರೀದಿ ಮಾಡಬೇಕು ಎಂದಿದ್ದ ವಸ್ತುಗಳು ಇವೆಲ್ಲವನ್ನು ಸದ್ಯಕ್ಕೆ ಬೇಡ ಎಂದುಕೊಳ್ಳಬೇಕಾಗುತ್ತದೆ. ನೀವು ತುಂಬ ಪ್ರೀತಿಸುವ ಅಥವಾ ಗೌರವಿಸುವ ವ್ಯಕ್ತಿಯ ಮಾತಿನ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು ನಿಮ್ಮ ಸಮಯ, ಹಣ, ಅಧಿಕಾರ ಇವೆಲ್ಲವನ್ನೂ ಇತರರಿಗಾಗಿ ಮೀಸಲಿಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಇನ್ನು ಈಗ ಮಾಡುವುದು ಬೇಡ ಎಂದುಕೊಂಡಿದ್ದ ಕೆಲಸಗಳನ್ನು ಸಹ ಇತರರಿಗಾಗಿ ಮಾಡಲೇಬೇಕಾದ ಸ್ಥಿತಿ ನಿರ್ಮಾಣ ಆಗಲಿದೆ. ಹಣಕಾಸು ವ್ಯವಹಾರಗಳಲ್ಲಿ ತೊಡಗಿಕೊಂಡವರು, ನಿತ್ಯವೂ ಬ್ಯಾಂಕಿಂಗ್ ವ್ಯವಹಾರ ಮಾಡುವವರು ಆಗಿದ್ದಲ್ಲಿ ಹೆಚ್ಚಿನ ಏಕಾಗ್ರತೆಯನ್ನು ವಹಿಸಿ, ಕೆಲಸ ಮಾಡಬೇಕಾಗುತ್ತದೆ. ಅಷ್ಟೇ ಅಲ್ಲ, ಇತರರ ಹಣಕಾಸಿನ ವಿಚಾರಗಳಿಗೆ ಜಾಮೀನು ಸಹ ನಿಲ್ಲದಿರುವುದು ಕ್ಷೇಮ ಹಾಗೂ ಶ್ರೇಯಸ್ಕರ. ಬಹಳ ಸಲೀಸಾಗಿ ಮಾಡಿ ಮುಗಿಸಬಹುದು ಎಂಬ ವಿಶ್ವಾಸದಲ್ಲಿ ಯಾವುದೇ ಕೆಲಸ ಮಾಡುವುದಕ್ಕೆ ಡೆಡ್ ಲೈನ್ ತನಕ ಕಾಯುತ್ತಾ ಕೂರುವುದರಿಂದ ಒತ್ತಡ ಹೆಚ್ಚಾಗಲಿದೆ. ಕೃಷಿಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಹೆಚ್ಚುವರಿ ಆದಾಯಕ್ಕಾಗಿ ಹೊಸ ವ್ಯವಹಾರಗಳನ್ನು ಆರಂಭಿಸುವಂತಹ ಯೋಗ ಇದೆ. ಇದಕ್ಕೆ ಸ್ನೇಹಿತರ ಸಹಾಯ, ಬೆಂಬಲ ದೊರೆಯಲಿದೆ. ಕುಟುಂಬದೊಳಗೆ ಪ್ರಮುಖವಾದ ತೀರ್ಮಾನದ ಬಗ್ಗೆ ಅಭಿಪ್ರಾಯ ಭೇದಗಳು ಏರ್ಪಡಬಹುದು. ಆದರೆ ನಾನು ಹೇಳಿದ್ದೇ ಆಗಬೇಕು ಎಂದು ಆಲೋಚನೆ ಮಾಡದಿರಿ. ಈ ಹಿಂದೆ ಯಾವಾಗಲೋ ನಿಮ್ಮ ವಿರುದ್ಧ ದಾಖಲಾಗಿದ್ದ ದೂರು, ಆಕ್ಷೇಪಗಳಿಗೆ ಈ ಅವಧಿಯಲ್ಲಿ ಜೀವ ಬಂದು, ನಿಮಗೆ ಚಿಂತೆಯನ್ನು ತಂದೊಡ್ಡಬಹುದು ಅಥವಾ ನಿಮಗೆ ಸಿಗಬೇಕಾದ ಗೌರವ- ಸಮ್ಮಾನಗಳು ಬಾರದಂತೆ ಆಗಬಹುದು. ವೃತ್ತಿನಿರತರಾಗಿದ್ದಲ್ಲಿ ಪ್ರತಿಷ್ಠಿತ ಕಂಪನಿಗಳವರು ನಿಮ್ಮ ಜತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುವುದಕ್ಕೆ ಬರುವ ಅವಕಾಶಗಳಿವೆ. ಕೆಲವು ಲಾಭ ಮಾಡುವಂಥ ಅವಕಾಶಗಳು ಅನಾಯಾಸವಾಗಿ ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನಿಮ್ಮ ಮೇಲಿನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದಿರಿ. ದೊಡ್ಡ ವ್ಯವಹಾರ ಎಂಬ ಹಿಂಜರಿಕೆ ಇಲ್ಲದಂತೆ ಮುಂದುವರಿಯುವ ಕಡೆಗೆ ಗಮನ ಇರಲಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧ್ಯವಾಗದೇ ಅವಮಾನಕ್ಕೆ ಗುರಿ ಆಗುವಂಥ ಯೋಗ ಇದೆ. ಗುರು ಆರಾಧನೆ ಮಾಡುವುದರಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ಮಹಿಳೆಯರಿಗೆ ಅನಗತ್ಯವಾಗಿ ಖರ್ಚು ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಇತರರು ಆಡಿದ ಮಾತನ್ನು ಗಂಭೀರವಾಗಿ ಪರಿಗಣಿಸಿ, ನಿಮಗೆ ಬೇಕೋ- ಬೇಡವೋ ಇದ್ಯಾವುದನ್ನೂ ನೋಡದೆ ಖರ್ಚು ಮಾಡುವುದಕ್ಕೆ ಮುಂದಾಗಲಿದ್ದೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಬಳಿ ಇರುವಂಥದ್ದು ಏನು ಎಂಬುದನ್ನು ಗುರುತಿಸದೇ ಹೋದಲ್ಲಿ ಅಮೂಲ್ಯವಾದದ್ದು ನಿಮ್ಮ ಬಳಿ ಇದ್ದರೂ ಅಗತ್ಯ ಸಮಯದಲ್ಲಿ ಅದನ್ನು ಬಳಸುವುದು ಸಾಧ್ಯವಾಗದೇ ಹೋಗಬಹುದು. ಇನ್ನು ನೀವು ಬಳಸುವ ಕೋಣೆಯಲ್ಲಿ ಗಾಳಿ- ಬೆಳಕು ಸರಿಯಾಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ನಿಮ್ಮದೇ ಬೇಸರವೋ ಚಿಂತೆಯ ಕಾರಣಕ್ಕೆ ಆಡಿದ್ದ ಮಾತುಗಳು ಹಗಲಿರುಳು ಯೋಚನೆಯಾಗಿ ನಿಮ್ಮನ್ನು ಬಿಟ್ಟೂ ಬಿಡದೆ ಕಾಡಲಿದೆ. ಮುಖ್ಯವಾದ ಎಚ್ಚರಿಕೆ ನಿಮಗೆ ಏನೆಂದರೆ, ನೀವು ಮಲಗಿಕೊಳ್ಳುವ ಸುತ್ತಮುತ್ತಲೂ ವಸ್ತುಗಳನ್ನು ಹರಡಿಕೊಳ್ಳದೇ ಇರುವಂತೆ ನೋಡಿಕೊಳ್ಳಿ. ಏಕೆಂದರೆ ನಿದ್ದೆಗೆ ಸಂಬಂಧಿಸಿದಂತೆ ಸಮಸ್ಯೆ ಕಾಡಬಹುದು. ಮನಸ್ಸಿನಲ್ಲಿ ಪದೇಪದೇ ಕೆಟ್ಟದ್ದೇನೋ ನಡೆಯಬಹುದು ಎಂಬ ಭಯ ಕಾಡಲಿದೆ. ಇನ್ನು ತಂದೆಯ ಅಥವಾ ತಾಯಿಯ ಸೋದರರ ಅನಾರೋಗ್ಯ ಸಮಸ್ಯೆಯು ನಿಮ್ಮನ್ನು ಚಿಂತೆಗೆ ಗುರಿ ಮಾಡಲಿದೆ. ಏಕಾಏಕಿ ಹಣಕಾಸಿನ ಮುಗ್ಗಟ್ಟು ತಲೆದೋರಬಹುದು. ಯಾರದೋ ತಪ್ಪಿಗೆ ನೀವು ಬೆಲೆ ಕಟ್ಟಬೇಕಾದಂಥ ಸನ್ನಿವೇಶ ಎದುರಾಗಬಹುದು. ವಿಲಾಸಿ ವಸ್ತುಗಳ ಬಗ್ಗೆ ನಿಮಗೆ ಆಕರ್ಷಣೆ ಹೆಚ್ಚಾಗಿ, ಸಾಲ ಮಾಡಿಯಾದರೂ ಖರೀದಿಸುವಂಥ ಸಾಧ್ಯತೆಗಳಿವೆ. ಪ್ರತಿಷ್ಠೆ ಕಾರಣಕ್ಕಾಗಿಯಾದರೂ ಕೊಳ್ಳುತ್ತೇನೆ ಎಂದು ಹೊರಟು ನಿಲ್ಲಬೇಡಿ. ಇನ್ನು ನಿಮ್ಮಲ್ಲಿ ಯಾರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾ ಇದ್ದೀರೋ ಅಂಥವರು ಖರ್ಚು ಮಾಡುವಾಗ ಹತೋಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಕೆಲಸ ನಾನು ಮಾಡುತ್ತೇನೆ ಎಂದು ಹೊರಡಬೇಡಿ. ಹಾಗೆ ಮಾಡಿದಲ್ಲಿ ಒಂದೋ ಅಚ್ಚುಕಟ್ಟಾಗಿ ಕೆಲಸ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು ಅಥವಾ ಸಮಯಕ್ಕೆ ಸರಿಯಾಗಿ ಕೆಲಸ ಆಗದಿರಬಹುದು. ಕೃಷಿಕರು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ವಿಚಾರವನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ದಾಟಿಸುವುದು ಮುಖ್ಯವಾಗುತ್ತದೆ. ಸಂಕೋಚ ಪಟ್ಟುಕೊಂಡೋ ಅಥವಾ ನಿಮ್ಮ ಮಾತಿನಿಂದ ಎದುರಿನವರೇ ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡು ಸುಮ್ಮನಾದಲ್ಲಿ ಏನೂ ಪ್ರಯೋಜನ ಆಗುವುದಿಲ್ಲ. ವೃತ್ತಿನಿರತರು ಈಗಿನ ವೃತ್ತಿಗೆ ಸಂಬಂಧಿಸಿದಂತೆಯೇ ಹೊಸ ಕೋರ್ಸ್ ಗಳನ್ನು ತೆಗೆದುಕೊಳ್ಳುವಂಥ ಯೋಗ ಇದೆ. ಇದಕ್ಕಾಗಿ ಸಾಲ ಮಾಡುವುದಕ್ಕೋ ಅಥವಾ ಕ್ರೆಡಿಟ್ ಕಾರ್ಡ್ ಇಎಂಐ ಹಾಕಿಸುವುದಕ್ಕೋ ಆಲೋಚನೆ ಮಾಡಲಿದ್ದೀರಿ. ಕುಟುಂಬ ಸದಸ್ಯರೊಬ್ಬರು ನಿಮ್ಮದೇ ವೃತ್ತಿಗೆ ಸಹಾಯಕರಾಗಿ ಅಥವಾ ಕೆಲಸಗಾರರಿಗೆ ಸೇರ್ಪಡೆ ಆಗುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ತುಂಬ ಆಪ್ತರು ಎನಿಸಿಕೊಂಡವರ ಜತೆಗೇ ಮನಸ್ತಾಪಗಳು, ಅಸಮಾಧಾನಗಳು ಕಾಣಿಸಿಕೊಳ್ಳಬಹುದು. ಸಾಧ್ಯವಾದಷ್ಟೂ ಮಾತು ಬೆಳೆಯದಂತೆ ಎಚ್ಚರಿಕೆಯನ್ನು ವಹಿಸಿ. ಇದು ತಾತ್ಕಾಲಿಕವಾದ ಸಮಸ್ಯೆಯಾದ್ದರಿಂದ ವಿಷಯ ಹಿಗ್ಗುತ್ತಾ ಹೋಗದಂತೆ ನೋಡಿಕೊಳ್ಳಿ. ಮಹಿಳೆಯರಿಗೆ ತಾಯಿಯ ಅಥವಾ ತಾಯಿಗೆ ಸಮಾನರಾದವರ ಅನಾರೋಗ್ಯವು ಆತಂಕಕ್ಕೆ ಕಾರಣ ಆಗಬಹುದು. ನೀವು ನೀಡಿದ ಸಲಹೆ- ಸೂಚನೆಗಳೇ ಸಮಸ್ಯೆಗಳನ್ನು ತಂದೊಡ್ಡಬಹುದು. ಆದ್ದರಿಂದ ಈ ಬಗ್ಗೆ ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ನೀವು ಎಷ್ಟು ಚುರುಕಾಗಿ ಇರುತ್ತೀರೋ ಅಷ್ಟು ದೊಡ್ಡ ಪ್ರಮಾಣದ ಆದಾಯ ಅಥವಾ ಲಾಭವೊಂದರ ಮಾರ್ಗ ತೆರೆದುಕೊಳ್ಳಲಿದೆ. ನಿಮಗೆ ಗೊತ್ತಿರಲೇಬೇಕಾದ ವಿಚಾರ ಏನೆಂದರೆ ಇದು ತಾತ್ಕಾಲಿಕವಾದದ್ದಷ್ಟೇ ಅಲ್ಲ, ಶಾಶ್ವತವಾದದ್ದು. ಸಾರಾಂಶ ಏನೆಂದರೆ, ದೊಡ್ಡದೊಂದು ಆದಾಯವೋ ಲಾಭವೋ ಅಥವಾ ನಿರಂತರವಾಗಿ ಆದಾಯ ತರುವಂಥ ಕೆಲಸವೋ ಕಣ್ಣೆದುರು ತೆರೆದುಕೊಳ್ಳಲಿದೆ. ಇದೇ ಕಾರಣದಿಂದಾಗಿ ಈ ವಾರ ನಿಮ್ಮಲ್ಲಿ ಮಹತ್ವಾಕಾಂಕ್ಷೆ ಜಾಸ್ತಿ ಆಗಲಿದೆ. ನೀವು ಯಾವುದನ್ನು ಬಹಳ ಸಮಯದಿಂದ ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದೀರೋ ಅದೇ ಥರದ ಕೆಲಸ ನಿಮಗೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ದೀರ್ಘಾವಧಿಯ ಒಪ್ಪಂದ ಸಹ ಮಾಡಿಕೊಳ್ಳಬಹುದು. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು, ಅದರಲ್ಲೂ ಹಣಕಾಸು ಸಂಸ್ಥೆಗಳಲ್ಲಿ, ಗಾರ್ಮೆಂಟ್, ಎಐ- ಮಶೀನ್ ಲರ್ನಿಂಗ್ ಕ್ಷೇತ್ರಗಳಲ್ಲಿ ಇರುವಂಥವರಿಗೆ ಭವಿಷ್ಯದಲ್ಲಿ ದೊಡ್ಡ ಹುದ್ದೆಯೊಂದಕ್ಕೆ ನೀವು ಆಯ್ಕೆ ಆಗುವ ಬಗ್ಗೆ ಸುಳಿವು ದೊರೆಯಲಿದೆ. ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಳ್ಳುವಂತೆ ಮೇಲಧಿಕಾರಿಗಳು ಸೂಚನೆ ನೀಡಬಹುದು. ಇಂಥ ವಿಚಾರವನ್ನು ಗಂಭೀರವಾಗಿ ತೆಗೆದುಕೊಳ್ಳಿ. ಅವಿವಾಹಿತರಾಗಿದ್ದು, ಮದುವೆಗಾಗಿ ಗಟ್ಟಿ ಪ್ರಯತ್ನಗಳನ್ನು ಮಾಡುತ್ತಾ ಇದ್ದಲ್ಲಿ ತಾತ್ಕಾಲಿಕವಾಗಿ ಅಡೆತಡೆಗಳು ಎದುರಾಗಬಹುದು. ಇತರರ ಹೇಳಿಕೆ ಮಾತುಗಳಿಗೆ ಕಿವಿಗೊಡಬೇಡಿ. ಈಗಾಗಲೇ ನಿಶ್ಚಿತಾರ್ಥ ಆಗಿದೆ ಎಂದಾದಲ್ಲಿ ಅತಿಯಾದ ಸಲುಗೆಯಿಂದ ಮಾತುಕತೆ ಬೇಡ. ಮೂರನೇ ವ್ಯಕ್ತಿಗಳ ಮಾತಿನಿಂದಾಗಿ ಸಂಬಂಧದಲ್ಲಿ ಅನುಮಾನ ಹಾಗೂ ಅಭಿಪ್ರಾಯ ಭೇದಗಳು ಸೃಷ್ಟಿ ಆಗಬಹುದು. ಕೃಷಿಕರಾಗಿದ್ದಲ್ಲಿ ಹೊಸದಾಗಿ ಜಮೀನು ಖರೀದಿಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ಕಾಣಲಿದ್ದೀರಿ. ಇನ್ನು ಜಮೀನಿನಲ್ಲಿ ಗೋದಾಮು ನಿರ್ಮಿಸಬೇಕು, ಕೊಳವೆಬಾವಿ ತೋಡಿಸಬೇಕು, ತಂತಿ ಬೇಲಿ ನಿರ್ಮಾಣ ಮಾಡಬೇಕು ಎಂದುಕೊಳ್ಳುತ್ತಿದ್ದಲ್ಲಿ ಅದನ್ನು ಮಾಡಿಸುವುದಕ್ಕೆ ಇದು ಸೂಕ್ತವಾದ ಸಮಯ ಆಗಲಿದೆ. ಇನ್ನು ಅಗತ್ಯವಾದ ಹಣಕಾಸು ಸಹ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನಿಮಗೆ ಬರಬೇಕಾದ ಹಣಕ್ಕೆ ಸ್ವಲ್ಪ ಮಟ್ಟಿಗಿನ ಪ್ರಯತ್ನ ಮಾಡಿದರೂ ಅದು ನಿಮಗೆ ದೊರೆಯುವಂಥ ಅವಕಾಶ ಇದೆ. ವೃತ್ತಿನಿರತರು ವಿದೇಶ ಪ್ರಯಾಣಕ್ಕೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ವೀಸಾ ಇತ್ಯಾದಿ ವಿಚಾರವಾಗಿ ಅಡೆತಡೆಗಳು ಎದುರಾಗಿದ್ದಲ್ಲಿ ಅವು ನಿವಾರಣೆ ಆಗಲಿವೆ. ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಅದಕ್ಕೆ ಪೂರಕವಾದ ಕೋರ್ಸ್ ಗೆ ಸೇರ್ಪಡೆ ಆಗುವಂಥ ಯೋಗ ಇದೆ. ಇದರಿಂದ ಭವಿಷ್ಯದಲ್ಲಿ ಅನುಕೂಲ ಆಗಲಿದೆ. ನಿಮ್ಮ ಆಯ್ಕೆಗೆ ಇತರರ ಬೆಂಬಲ ದೊರೆಯುತ್ತದೆ. ಯುವತಿಯರು ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಇನ್ನೂ ಸ್ವಲ್ಪ ಕಾಲ ಪ್ರಯತ್ನ ಮಾಡುವುದು ಬೇಡ ಎಂದು ನಿರ್ಧಾರ ಮಾಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದು. ಉದ್ಯೋಗ ಅಥವಾ ವೃತ್ತಿ- ವ್ಯಾಪಾರದಲ್ಲಿ ತುಂಬ ಒಳ್ಳೆ ಬೆಳವಣಿಗೆಗಳಿಂದ ಹೀಗೆ ಎನಿಸಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಬಹು ಸಮಯದಿಂದ ನಿಮಗೆ ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರಗಳು ದೊರೆಯಲಿವೆ. ಕನಸಿನ ಮೂಲಕವಾಗಿಯೂ ಸೂಚನೆಗಳು ದೊರೆಯಲಿವೆ. ಇನ್ನು ನಿಮಗೆ ಆಗಬಹುದಾದ ಕೆಲವು ಅನುಭವಗಳನ್ನು ಹೇಳಿಕೊಳ್ಳುವುದು ಸಹ ಇತರರು ನಂಬುತ್ತಾರೋ ಇಲ್ಲವೋ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಲಿದೆ. ಆದರೆ ಆಧ್ಯಾತ್ಮಿಕವಾಗಿ ಈ ವಾರ ನಿಮ್ಮ ಜೀವನದಲ್ಲಿ ಅತಿ ಮುಖ್ಯ ಎನಿಸಿದಂಥ ಬೆಳವಣಿಗೆಗಳು ಆಗಬಹುದು. ಪೂಜೆ- ಅನುಷ್ಠಾನದಲ್ಲಿ ಇದ್ದೀರಿ ಅಂತಾದರೆ ಆ ಪ್ರಮಾಣವು ಇನ್ನೂ ದೊಡ್ಡ ಮಟ್ಟದಲ್ಲಿ ಆಗಲಿದೆ. ಕುಟುಂಬ ಅಥವಾ ನೀವು ಇರುವಂಥ ಸಮುದಾಯದ ಏಳ್ಗೆಗಾಗಿಯೇ ಕೆಲವು ದೇವತಾ ಕಾರ್ಯಗಳನ್ನು ಮಾಡಲಿದ್ದೀರಿ. ದೀರ್ಘ ಸಮಯದಿಂದ ನೀವು ಅಂದುಕೊಂಡಿದ್ದ ಅಥವಾ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ದೊಡ್ಡ ಯೋಜನೆಗಳನ್ನು ಜಾರಿಗೆ ತರುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಮನೆಯಲ್ಲಿ ಇದಕ್ಕಾಗಿ ಬೇಕಾದ ವಸ್ತುಗಳನ್ನು ಹೊಂದಿಸುವುಕ್ಕೆ ಹಣ ಖರ್ಚು ಮಾಡುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ಉದ್ಯಮ- ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡಲಿದ್ದೀರಿ. ಬಹಳ ಸಮಯದಿಂದ ಪ್ರಯತ್ನ ಮಾಡುತ್ತಿದ್ದ ಕೆಲಸವೊಂದು ಸುಲಭವಾಗಿ ಮುಗಿಸುವುದಕ್ಕೆ ವೇದಿಕೆ ಸಿದ್ಧವಾಗಲಿದೆ. ಹಳೆಯ ಸ್ನೇಹಿತರೊಬ್ಬರ ಭೇಟಿಯಿಂದ ಮನಸ್ಸಿಗೆ ಉಲ್ಲಾಸ, ಉತ್ಸಾಹ ಇರಲಿದೆ. ಹೊಸ ಕಾರು ಅಥವಾ ದ್ವಿಚಕ್ರ ವಾಹನ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಹಣಕಾಸಿನ ಹೊಂದಾಣಿಕೆ ಆಗಲಿದೆ. ಇದಕ್ಕಾಗಿ ಅಡ್ವಾನ್ಸ್ ನೀಡುವಂಥ ಯೋಗ ಸಹ ಇದೆ. ಮನೆಯಲ್ಲಿ ಕುಟುಂಬದ ಜತೆಗೆ ಸಂತೋಷವಾಗಿ ಸಮಯ ಕಳೆಯಲಿದ್ದೀರಿ. ಕೃಷಿಕರಿಗೆ ರಾಜಕೀಯ ವ್ಯಕ್ತಿಗಳ ಜತೆಗೆ ಗುರುತಿಸಿಕೊಂಡು, ಇತರರಿಂದ ವಿರೋಧ ಎದುರಿಸಬೇಕಾದ ಅಥವಾ ಮಾತಿಗೆ ಮಾತು ಬೆಳೆದು, ವಾಗ್ವಾದ ಆಗುವಂಥ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಅನುಕೂಲ ಆಗುತ್ತದೆ ಎಂಬ ಕಾರಣದಿಂದ ಆಪ್ತರನ್ನು ದೂರ ಮಾಡಿಕೊಳ್ಳಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಆಗುವಂಥ ಸಾಧ್ಯತೆಗಳಿವೆ. ವೃತ್ತಿ ನಿರತರಿಗೆ ಏಕಾಏಕಿ ಆಸಕ್ತಿ ಕಡಿಮೆ ಆಗಲಿದೆ. ಡೆಡ್ ಲೈನ್ ಒಳಗಾಗಿ ಒಪ್ಪಿಕೊಂಡ ಕೆಲಸ- ಕಾರ್ಯಗಳನ್ನು ಮುಗಿಸುವುದು ಸವಾಲಾಗಿ ಪರಿಣಮಿಸುತ್ತದೆ. ಇದರಿಂದ ನಿಮಗೆ ಕೆಲಸ ವಹಿಸುವಂಥವರು ಇನ್ನು ಮುಂದೆ ಹೊಸ ಕೆಲಸಗಳನ್ನು ನೀಡುವ ಮುಂಚೆ ಆಲೋಚಿಸುವಂಥ ಸ್ಥಿತಿ ಎದುರಾಗಬಹುದು. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿ ನಾಯಕತ್ವ ಜವಾಬ್ದಾರಿಗಳನ್ನು ವಹಿಸಿಕೊಳ್ಳುವ ಮೂಲಕ ಜನಪ್ರಿಯರಾಗಲಿದ್ದಾರೆ. ಮಹಿಳೆಯರಿಗೆ ಕಿವಿ- ಗಂಟಲು, ಮೂಗಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಕಡ್ಡಾಯವಾಗಿ ವೈದ್ಯರನ್ನು ಭೇಟಿ ಆಗಿ ಚಿಕಿತ್ಸೆ ಪಡೆಯುವುದು ಉತ್ತಮ. ಒಂದು ವೇಳೆ ಹೆಲ್ತ್ ಇನ್ಷೂರೆನ್ಸ್ ಖರೀದಿ ಮಾಡಬೇಕು ಹಾಗೂ ಅದು ಯಾವ ಮೊತ್ತಕ್ಕೆ ಮಾಡಿಸಬೇಕು ಎಂಬ ತೀರ್ಮಾನವು ನಿಮ್ಮದೇ ಆದಲ್ಲಿ ಒಳಮನಸ್ಸು ಹೇಳುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಸರ್ಕಾರದಿಂದ ನಿಮ್ಮಲ್ಲಿ ಕೆಲವರಿಗೆ ನೋಟಿಸ್ ಬರಬಹುದು ಅಥವಾ ದಂಡ ಶುಲ್ಕವನ್ನು ಪಾವತಿ ಮಾಡುವಂತೆಯೂ ತಿಳಿಸುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಯಾರಿಗೆ ರಕ್ತದೊತ್ತಡ ಸಮಸ್ಯೆ ಇದೆಯೋ ಅಂಥವರು ಸಾಮಾನ್ಯಕ್ಕಿಂತ ಜಾಸ್ತಿ ಜಾಗ್ರತೆಯನ್ನು ವಹಿಸಿ. ಮನೆ ನಿರ್ಮಾಣ ಮಾಡುತ್ತಿದ್ದೀರಿ ಅಂತಾದಲ್ಲಿ ನಿರೀಕ್ಷೆಗೂ ಮೀರಿದ ಖರ್ಚುಗಳು ಆಗಲಿವೆ. ಆದ್ದರಿಂದ ನೀವು ಹಾಕಿಕೊಂಡಂಥ ಮೂಲ ಯೋಜನೆಯನ್ನು ಬದಲಿಸಿಕೊಳ್ಳುವುದಕ್ಕೆ ಹೋಗಬೇಡಿ. ಅಷ್ಟೇ ಅಲ್ಲ, ನಿಮ್ಮ ಕೈ ಅಳತೆಯನ್ನು ಮೀರಿ ಯಾವುದೇ ಸಾಲ ತೆಗೆದುಕೊಳ್ಳಬೇಡಿ. ಅದೇ ರೀತಿ ಇನ್ನೂ ಕೈ ಸೇರದ ಹಣ ಹಾಗೂ ನಿಮಗೆ ಬಾರದ ಕೆಲಸದ ವಿಚಾರವನ್ನೇ ನೆಚ್ಚಿಕೊಂಡು ಯಾವುದೇ ಮುಖ್ಯ ತೀರ್ಮಾನಗಳನ್ನು ಮಾಡುವುದಕ್ಕೆ ಹೋಗಬೇಡಿ. ನೀವು ಒಂದು ವೇಳೆ ಉದ್ಯೋಗಸ್ಥರಾಗಿದ್ದಲ್ಲಿ ಅಂದುಕೊಂಡಂತೆ ಕೆಲವು ಆರ್ಥಿಕ ಬೆಳವಣಿಗೆಗಳು ಆಗುವುದಿಲ್ಲ. ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳುವ ಕಡೆಗೆ ಮಾಡಿದ ಪ್ರಯತ್ನ ಸಾಕಾಗುವುದಿಲ್ಲ ಅಥವಾ ಈಗ ನಿಮ್ಮ ಕೈ ಹಿಡಿಯುವುದಿಲ್ಲ. ನಿಮ್ಮಲ್ಲಿ ಕೆಲವರು ಈಗಿನ ಕೆಲಸದ ಜತೆಗೆ ವ್ಯಾಪಾರ- ವ್ಯವಹಾರಗಳನ್ನು ಆರಂಭಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಇನ್ನು ಸ್ನೇಹಿತರು, ಸಂಬಂಧಿಕರು ಆರಂಭಿಸುವ ವ್ಯವಹಾರದಲ್ಲಿ ಹಣ ಹೂಡುವ ಸಾಧ್ಯತೆಗಳು ಕೂಡ ಇವೆ. ಒಟ್ಟಾರೆ ಈಗಿರುವುದರ ಜತೆಗೆ ಹೆಚ್ಚುವರಿ ಆದಾಯ ಮೂಲ ಮಾಡಿಕೊಳ್ಳುವ ಬಗ್ಗೆ ಗಮನ ನೀಡಲಿದ್ದೀರಿ. ಸರ್ಕಾರಿ ಯೋಜನೆಗಳಲ್ಲಿ ದೊರೆಯುವ ಸಾಲಕ್ಕಾಗಿ ಪ್ರಯತ್ನ ಮಾಡಿದ್ದಲ್ಲಿ ಅದು ದೊರೆಯುವ ಅವಕಾಶಗಳು ಹೆಚ್ಚಿವೆ. ಆದರೆ ಅದಕ್ಕಾಗಿ ತೀವ್ರ ಪ್ರಯತ್ನ ಮಾಡಬೇಕಾಗುತ್ತದೆ. ಇತರರ ವೈಯಕ್ತಿಕ ಬದುಕಿನ ಬಗ್ಗೆ ವಿಪರೀತ ಆಸಕ್ತಿ ತೋರಿಸದಿದ್ದಲ್ಲಿ ಉತ್ತಮ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಇರುವ ಗೌರವವನ್ನು ಈ ಕಾರಣದಿಂದಾಗಿಯೇ ಕಳೆದುಕೊಳ್ಳುವಂತಾಗುತ್ತದೆ. ಕೃಷಿಕರಿಗೆ ನಿರಾಸಕ್ತಿ ಕಾಡಲಿದೆ. ಸ್ವಲ್ಪ ಸಮಯ ಬಿಡುವು ತೆಗೆದುಕೊಳ್ಳೋಣ ಎಂದು ಸಹ ಆಲೋಚನೆ ಬರಬಹುದು. ಮುಖ್ಯವಾಗಿ ಈಗಿನ ರೀತಿಯಲ್ಲಿ ಅಲ್ಲದೆ ಬೇರೆ ರೀತಿಯಲ್ಲಿ ಬದುಕು ಸಾಗಿಸಬೇಕು ಎಂದು ಬಲವಾಗಿ ಅನಿಸುವುದಕ್ಕೆ ಆರಂಭವಾಗುತ್ತದೆ. ದೂರ ಪ್ರಯಾಣಕ್ಕೆ ಹೋಗುವ ಆಲೋಚನೆ ಇದ್ದಲ್ಲಿ ಸರಿಯಾದ ಸಿದ್ಧತೆ ಮಾಡಿಕೊಂಡು, ಹೋಗಿ. ದಿಢೀರ್ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಬೇಡ. ವೃತ್ತಿನಿರತರಿಗೆ ಖರ್ಚಿನ ಪ್ರಮಾಣವು ಹೆಚ್ಚಾಗಲಿದೆ. ನಿಮ್ಮ ತೀರ್ಮಾನಗಳ ಕಾರಣದಿಂದಲೇ ಖರ್ಚು ಜಾಸ್ತಿ ಆಗಲಿದೆ. ಆತುರದ ನಿರ್ಧಾರಗಳು ತೆಗೆದುಕೊಳ್ಳುವುದು ಬೇಡ. ವಿದ್ಯಾರ್ಥಿಗಳಿಗೆ ಅನಾರೋಗ್ಯ ಸಮಸ್ಯೆ ಕಾಡಬಹುದು. ಜ್ವರ, ಶೀತ, ಕೆಮ್ಮು ಇತ್ಯಾದಿ ಸಮಸ್ಯೆಗಳು ಕಾಡಬಹುದು. ಮಹಿಳೆಯರು ನಿಮ್ಮ ಕೆಲವು ಜಂಜಾಟದಿಂದ ಹೊರಬರುವುದಕ್ಕೆ ಮಾನಸಿಕವಾಗಿ ನೆಮ್ಮದಿ ಸಿಗುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದುಕ್ಕೆ ತೀರ್ಮಾನಿಸುತ್ತೀರಿ. ಆದ್ದರಿಂದ ಅದರ ಭಾಗವಾಗಿ ಸ್ನೇಹಿತರು- ಸಂಬಂಧಿಕರ ಜತೆಗೂಡಿ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ತೀರ್ಥಯಾತ್ರೆ, ಬೆಟ್ಟ-ಗುಡ್ಡ ಇರುವಂಥ ಪ್ರದೇಶಗಳಿಗೆ ಹೋಗುವ ಸಾಧ್ಯತೆಯೂ ಇದೆ.