Numerology Prediction: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 26ರಿಂದ ಫೆಬ್ರವರಿ 1ರ ತನಕ ವಾರಭವಿಷ್ಯ
ಸಂಖ್ಯೆಗಳು ನಮ್ಮ ಜೀವನದಲ್ಲಿ ನಾವು ಊಹಿಸುವುದಕ್ಕಿಂತ ಹೆಚ್ಚಿನ ಸ್ಥಳವನ್ನು ಆಕ್ರಮಿಸಿಕೊಳ್ಳುತ್ತವೆ. ನಮ್ಮ ಜನ್ಮ ದಿನಾಂಕಗಳಿಂದ ಹಿಡಿದು ನಮ್ಮ ಅದೃಷ್ಟ ಸಂಖ್ಯೆಗಳವರೆಗಿನ ಸಂಖ್ಯೆಗಳ ಜಾಲದ ನಡುವೆ ನಮ್ಮ ಜೀವನದ ವಿವಿಧ ಅಂಶಗಳನ್ನು ಪ್ರತಿನಿಧಿಸುವ ವಿಧಾನಗಳನ್ನು ಬಳಸಿಕೊಳ್ಳುತ್ತೇವೆ. ಜನವರಿ 26ರಿಂದ ಫೆಬ್ರವರಿ 1ರ ತನಕ ವಾರಭವಿಷ್ಯ ಇಲ್ಲಿದೆ.
Weekly Numerology: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 26ರಿಂದ ಫೆಬ್ರವರಿ 1ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಎಲ್ಲ ಕಡೆಯಿಂದಲೂ ಸಂತೋಷ ತರುವಂಥ ಸುದ್ದಿ ಬರಲಿದೆ. ಹೊಸದಾಗಿ ಉದ್ಯೋಗಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಇಂಟರ್ ವ್ಯೂ ಬರಬಹುದು, ಹಾಗೆ ಬಂದಂಥ ಇಂಟರ್ ವ್ಯೂದಲ್ಲಿ ಯಶಸ್ಸು, ಅಂದುಕೊಂಡಂಥ ಸಂಬಳ, ಸ್ಥಾನ ಹೀಗೆ ಎಲ್ಲವೂ ಸಿಗಲಿದೆ. ನೀವು ಮಾಡಬೇಕಾದದ್ದೆಲ್ಲ ಇಷ್ಟೆ; ಗುರುವಾರದ ದಿನ ಸಾಯಿಬಾಬ ದೇವಸ್ಥಾನಕ್ಕೆ ತೆರಳಿ, ದರ್ಶನ ಪಡೆಯಿರಿ. ಅಲ್ಲಿ ನಿಮಗೆ ಮಾಡಿಸಬೇಕು ಎಂದೆನಿಸುವ ಸೇವೆಯೊಂದನ್ನು ಮಾಡಿಸುವುದರಿಂದ ಒಳಿತಾಗಲಿದೆ. ಗೃಹಾಲಂಕಾರ ವಸ್ತುಗಳು, ಫ್ಯಾನ್, ಗೀಸರ್, ಏಸಿ, ಸ್ಟೌ ಹೇಗೆ ಹಲವು ವಸ್ತುಗಳನ್ನು ಖರೀದಿಸುವ ಯೋಗ ಈ ವಾರ ನಿಮ್ಮ ಪಾಲಿಗೆ ಇದೆ. ಉದ್ಯೋಗ ಸ್ಥಳದಲ್ಲಿ ಇತರರಿಂದ ಬಗೆಹರಿಸುವುದಕ್ಕೆ ಸಾಧ್ಯವಾಗದಿದ್ದ ಸಮಸ್ಯೆಯೊಂದನ್ನು ನೀವು ಬಗೆಹರಿಸಲಿದ್ದೀರಿ. ಇದರಿಂದ ನಿಮ್ಮ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಲಿವೆ. ಇನ್ನು ಉದ್ಯೋಗದ ನಿಮಿತ್ತವಾಗಿಯೇ ಕೆಲವು ಸಮಯ ವಿದೇಶಕ್ಕೆ ತೆರಳಬೇಕಾದ ಸನ್ನಿವೇಶಗಳು ಉದ್ಭವಿಸಲಿವೆ. ಬೇರೆ ಯಾರನ್ನೋ ಕಳಿಸಬೇಕು ಎಂದಿದ್ದದ್ದು ಕಾರಣಾಂತರಗಳಿಂದ ಅವರಿಗೆ ಹೋಗುವುದಕ್ಕೆ ಸಾಧ್ಯವಾಗದೆ ಅಲ್ಲಿಗೆ ನಿಮ್ಮನ್ನು ಕಳಿಸಬೇಕು ಎಂದು ತೀರ್ಮಾನ ಆಗುವ ಸಾಧ್ಯತೆ ಇದೆ. ಕೃಷಿಕರು ದೇವಸ್ಥಾನಕ್ಕೆ ಅಂತಲೋ ಶಾಲೆಗೆ ಅಂತಲೋ ಅಥವಾ ಊರ ಜನರು ಓಡಾಡಲಿಕ್ಕೆ ಅಂತಲೋ ತಮ್ಮ ಜಾಗವನ್ನು ಬಿಟ್ಟುಕೊಡುವುದಕ್ಕೆ ತೀರ್ಮಾನಿಸುವ ಸಾಧ್ಯತೆಗಳಿವೆ. ಈ ಸಂದರ್ಭದಲ್ಲಿ ಕುಟುಂಬದ ಎಲ್ಲರನ್ನೂ ಒಪ್ಪಿಸುವುದಕ್ಕೆ ನೀವು ಯಶಸ್ವಿ ಆಗಲಿದ್ದೀರಿ. ನಿಮ್ಮ ಬಳಿಯಿರುವ ಅಥವಾ ನೀವು ಬೆಳೆದಿರುವ ಕೃಷಿ ಉತ್ಪನ್ನಕ್ಕೆ ಉತ್ತಮ ಬೆಲೆ ದೊರೆಯಲಿದೆ. ಅದಕ್ಕೆ ಬೇಡಿಕೆ ಹೆಚ್ಚಳ ಆಗಲಿದೆ. ನೀವು ಅಂದುಕೊಂಡೇ ಇರದೆ ಆದಾಯವು ಹೆಚ್ಚಳ ಆಗುವ ಯೋಗ ಇದೆ. ಪ್ರಭಾವಿಗಳ ಸಂಪರ್ಕ ದೊರೆತು, ರಾಜಕೀಯದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು ಹಾಗೂ ಇದೇ ವೇಳೆ ಹುದ್ದೆಗೆ ನೇಮಿಸುವಂಥ ಸಾಧ್ಯತೆಗಳು ಇವೆ. ಹಲ್ಲಿನ ವಸಡಿಗೆ ಸಂಬಂಧಿಸಿದಂತೆ ಕೆಲವು ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅಥವಾ ಈಗಾಗಲೇ ಇದೆ ಎಂದಾದಲ್ಲಿ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳುವುದು ಉತ್ತಮ. ಇಲ್ಲದಿದ್ದರೆ ಈ ಪರಿಸ್ಥಿತಿ ಬಿಗಡಾಯಿಸಿ, ಆ ನಂತರ ಪರಿತಪಿಸುವಂತೆ ಆಗುತ್ತದೆ. ವೃತ್ತಿನಿರತರಿಗೆ ಪದೋನ್ನತಿ ದೊರೆಯುವಂಥ ಅವಧಿ ಇದಾಗಿರುತ್ತದೆ. ನಿಮ್ಮದೇ ವೃತ್ತಿಯ ಸಂಘ- ಸಂಸ್ಥೆಗಳಲ್ಲಿ ಯಾವುದಾದರೂ ಮುಖ್ಯ ಹಾಗೂ ಪ್ರಭಾವಿ ಹುದ್ದೆಗೆ ನಿಮ್ಮ ಹೆಸರನ್ನು ಸೂಚಿಸಲಿದ್ದಾರೆ. ಇನ್ನು ತಾತ್ಕಾಲಿಕವಾಗಿ ಅಥವಾ ಪ್ರಭಾರಿಯಾಗಿ ಅಂತ ನೇಮಕ ಮಾಡಿದ್ದು ಕಾಯಂ ಆಗುವ ಅವಕಾಶಗಳು ಹೆಚ್ಚಿವೆ. ಸ್ವಂತ ಕಚೇರಿಗಾಗಿ ಸ್ಥಳ ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ವಿದ್ಯಾರ್ಥಿಗಳಿಗೆ ಮಾನಸಿಕ ಖಿನ್ನತೆ ಕಾಡಬಹುದು. ಅದಕ್ಕೆ ಮುಖ್ಯ ಕಾರಣ ಏನೆಂದರೆ, ನಿಮ್ಮ ಮೇಲೆ ನಿಮಗೇ ಇರುವ ನಿರೀಕ್ಷೆಯು ಭಾರವಾಗಿ ಪರಿಣಮಿಸಬಹುದು. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ. ಮೌನವಾಗಿದ್ದರೆ ನೆಮ್ಮದಿ ಇರುತ್ತದೆ. ಆದರೆ ಹಾಗಿರುವುದಕ್ಕೆ ಮಾನಸಿಕ ನಿಯಂತ್ರಣ ತುಂಬ ಮುಖ್ಯವಾಗುತ್ತದೆ. ಸಾಧ್ಯವಾದಲ್ಲಿ ದಿನಕ್ಕೆ ಹತ್ತು ನಿಮಿಷ ಧ್ಯಾನವನ್ನು ಮಾಡಿ. ಮಹಿಳೆಯರು ಸರ್ಕಾರಿ ಕೆಲಸಗಳಲ್ಲಿ ಇದ್ದಲ್ಲಿ ಹೆಚ್ಚುವರಿ ಜವಾಬ್ದಾರಿ ಹೆಗಲೇರಲಿದೆ. ಒಂದು ವೇಳೆ ವರ್ಗಾವಣೆಗೆ ಪ್ರಯತ್ನ ಪಡುತ್ತಿದ್ದಲ್ಲಿ ನಿಮಗೆ ಬೇಕಾದಂಥ ಸ್ಥಳಕ್ಕೆ ವರ್ಗಾ ಆಗಲಿದೆ. ಮಕ್ಕಳ ಶೈಕ್ಷಣಿಕ ಸಾಧನೆಯು ಹೆಮ್ಮೆಯನ್ನು ಮೂಡಿಸುತ್ತದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಸಂಗಾತಿಯ ವರ್ತನೆ ಮುಜುಗರ, ಬೇಸರ ಹಾಗೂ ಆತಂಕವನ್ನು ಮೂಡಿಸಲಿದೆ. ತಂದೆ- ತಾಯಿಗಳ ಜತೆಗೆ ಮನಸ್ತಾಪ ಮೂಡಲಿದ್ದು, ಈ ಹಿಂದೆ ನೀವು ತೆಗೆದುಕೊಂಡ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ತೀರ್ಮಾನಗಳ ಬಗ್ಗೆ ಆಕ್ಷೇಪ ವ್ಯಕ್ತವಾಗಲಿದೆ. ನಿಮ್ಮ ಕಡೆಯಿಂದ ಯಾವ ಉದ್ದೇಶ ಇಟ್ಟುಕೊಂಡು ಆ ನಿರ್ಧಾರ ಕೈಗೊಂಡಿರಿ ಎಂಬುದನ್ನು ಹೇಳುವುದಕ್ಕೆ ಸಹ ಅವಕಾಶ ಇಲ್ಲದಂತಾಗುತ್ತದೆ. ಇನ್ನು ಇದೇ ವೇಳೆ ಇಷ್ಟು ಕಾಲ ಉಳಿಸಿಕೊಂಡು ಬಂದಿದ್ದ ವರ್ಚಸ್ಸು, ಹೆಸರಿಗೆ ಕಳಂಕ ತರುವಂತೆ ಕೆಲವರು ನಿಮ್ಮ ವಿರುದ್ಧ ಅಪಪ್ರಚಾರ ಮಾಡಲಿದ್ದಾರೆ. ಮಾನಸಿಕವಾಗಿ ಇದರಿಂದ ಕುಗ್ಗಲಿದ್ದೀರಿ. ನಿಮ್ಮಲ್ಲಿ ಯಾರು ಈಗಾಗಲೇ ಅನಾರೋಗ್ಯದ ಕಾರಣಕ್ಕೆ ಮಾತ್ರೆ- ಔಷಧದಂಥದ್ದನ್ನು ತೆಗೆದುಕೊಳ್ಳುತ್ತಿದ್ದೀರೋ ಅಂಥವರಿಗೆ ಅಲರ್ಜಿ ಆಗಬಹುದು. ಮುಖ ಊದಿಕೊಳ್ಳುವುದು, ದದ್ದು ಏಳುವುದು, ಚರ್ಮದ ಮೇಲೆ ಮರಿಮರಿಯಂತೆ ಏಳುವುದು ಇಂಥದ್ದು ಆಗಬಹುದು. ಇಂಥ ಸನ್ನಿವೇಶ ಕಾಣಿಸಿಕೊಂಡಲ್ಲಿ ಕೂಡಲೇ ಸೂಕ್ತ ವೈದ್ಯೋಪಚಾರವನ್ನು ಪಡೆದುಕೊಳ್ಳಿ. ಇಲ್ಲದಿದ್ದರೆ ಆಸ್ಪತ್ರೆಗೆ ಅಡ್ಮಿಟ್ ಆಗಲೇಬೇಕಾದ ಸನ್ನಿವೇಶ ಉದ್ಭವಿಸಲಿದೆ. ನಿಮ್ಮ ರಿಟೈರ್ ಮೆಂಟ್ ಗಾಗಿ ಎಂದು ಹೂಡಿಕೆ ಮಾಡುತ್ತಾ ಬಂದಿದ್ದ ಹಣವನ್ನು ತೆಗೆಯಬೇಕಾದ ಸನ್ನಿವೇಶ ಎದುರಾಗಬಹುದು. ಕೃಷಿಕರು ಯಂತ್ರೋಪಕರಣದ ಖರೀದಿ ಮಾಡಬಹುದು. ಅದೇ ವೇಳೆ ಟ್ರಾಕ್ಟರ್, ಟಿಲ್ಲರ್, ಅಡಿಕೆ ಸುಲಿಯುವ ಯಂತ್ರ ಇಂಥವುಗಳು ಹಳೆಯದಾಗಿದ್ದಲ್ಲಿ ಅದನ್ನು ವಿನಿಮಯ ಮಾಡಿಸಿ, ಹೊಸದನ್ನು ಖರೀದಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಕುಟುಂಬದಲ್ಲಿ ದೇವತಾ ಕಾರ್ಯಗಳನ್ನು ಆಯೋಜಿಸುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ನಿಮಗೆ ಬರಬೇಕಾದ ಬಾಕಿ ಹಣದ ವಸೂಲಿಗೆ ಹೆಚ್ಚಿನ ಶ್ರಮವನ್ನು ಹಾಕಲಿದ್ದೀರಿ. ಇನ್ನು ಮುಂದುವರಿಸುವುದು ಬೇಡ ಅಂದುಕೊಂಡಿದ್ದ ಕೆಲವು ಹೆಚ್ಚುವರಿಗೆ ವ್ಯಾಪಾರ- ವ್ಯವಹಾರಗಳನ್ನು ಇನ್ನೂ ಕೆಲವು ಸಮಯ ಮುಂದುವರಿಸಿಕೊಂಡು ಹೋಗುವುದಕ್ಕೆ ನಿರ್ಧರಿಸಲಿದ್ದೀರಿ. ವೃತ್ತಿನಿರತರಿಗೆ ಉತ್ಸಾಹವೇ ಇಳಿದುಹೋಗುವಂತಹ ಕೆಲವು ಬದಲಾವಣೆಗಳು ಆಗಲಿವೆ. ನೀವು ರೂಪಿಸಿದ ಯೋಜನೆ, ಕಾರ್ಯತಂತ್ರ, ಲೆಕ್ಕಾಚಾರಗಳನ್ನು ಜೊತೆಯಲ್ಲಿಯೇ ಕೆಲಸ ಮಾಡುವ ವ್ಯಕ್ತಿಯೊಬ್ಬರು ಪ್ರತಿಸ್ಪರ್ಧಿಗಳಿಗೆ ಸೋರಿಕೆ ಮಾಡುತ್ತಿದ್ದಾರೆ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಕೆಲವು ವ್ಯಾವಹಾರಿಕ ಒಪ್ಪಂದಗಳು ಕೊನೆಗೊಂಡು, ಆದಾಯದಲ್ಲಿ ಇಳಿಕೆ ಆಗುವುದರಿಂದ ಒತ್ತಡ ಸೃಷ್ಟಿಯಾಗಲಿದೆ. ವಿದ್ಯಾರ್ಥಿಗಳಿಗೆ ಅಂಗೈ ತೋರಿಸಿ ಅವಲಕ್ಷಣವಾಯಿತು ಎಂಬಂಥ ಅನುಭವ ಆಗಲಿದೆ. ನೆರವು ನೀಡಬಹುದು ಎಂದುಕೊಂಡು, ಒಬ್ಬ ವ್ಯಕ್ತಿಯ ಬಳಿ ಕೇಳಿದರೆ ಅವರು ಸಹಾಯ ಮಾಡದಿದ್ದರೆ ಪರವಾಗಿಲ್ಲ, ಆದರೆ ನಿಮ್ಮ ಸಾಮರ್ಥ್ಯವನ್ನು ಹೀಗಳೆದು, ಮೂದಲಿಸಿ, ಅವಮಾನ ಮಾಡಬಹುದು. ಇದು ನಿಮಗೆ ಮರೆಯಲಾಗದಂಥ ಗಾಯ ಮಾಡಬಹುದು ಹಾಗೂ ಇದೇ ವೇಳೆ ಇನ್ಯಾವತ್ತೂ ಯಾರ ಬಳಿಯೂ ಸಹಾಯ ಕೇಳಬಾರದು ಎನಿಸಲಿದೆ. ಮಹಿಳೆಯರಿಗೆ ಬೇರೆ ಯಾರೋ ಮಾಡಿದ ತಪ್ಪಿಗೆ ನಿಮಗೆ ಅವಮಾನವನ್ನು ಮಾಡಲಿದ್ದಾರೆ. ಎಷ್ಟು ಸಮರ್ಥನೆ ಮಾಡಿಕೊಂಡರೂ ಸಾಕ್ಷ್ಯಾಧಾರದ ಸಹಿತವಾಗಿ ಸಾಬೀತು ಮಾಡಿದರೂ ನೀವು ಏನು ಹೇಳಬೇಕು ಅಂದುಕೊಂಡಿರುತ್ತೀರೋ ಅದನ್ನು ಕೇಳಿಸಿಕೊಳ್ಳುವುದಕ್ಕೆ ನಿಮ್ಮ ಎದುರಿಗೆ ಇರುವವರು ಸಿದ್ಧರಿರುವುದಿಲ್ಲ. ಯಾವುದೇ ಕೆಲಸದಲ್ಲಿ ಆಸಕ್ತಿ ಕುದುರದೆ ಕೆಲವು ತಪ್ಪು- ಅವಘಡಗಳು ಸಹ ಸಂಭವಿಸಬಹುದು, ಎಚ್ಚರದಿಂದ ಇರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಸಂಭಾವಿತರಾಗಿ ಇರುವುದು ಬೇರೆ, ಸಂಭಾವಿತರಂತೆ ನಟಿಸುವುದು ಬೇರೆ. ಈ ವಾರ ನೀವು ಸ್ವಭಾವತಃ ಏನಾಗಿದ್ದೀರೋ ಅದೇ ಆಗಿದ್ದಲ್ಲಿ ಒಳ್ಳೆಯದು. ಒಂದು ವೇಳೆ ಎದುರಿಗೆ ಇರುವವರನ್ನು ಮೆಚ್ಚಿಸಬೇಕು ಎಂದೇನಾದರೂ ನಟನೆ ಮಾಡಿದಿರೋ ಅವಮಾನಕ್ಕೆ ಗುರಿ ಆಗಬೇಕಾಗುತ್ತದೆ. ಊಟ- ತಿಂಡಿ ವಿಚಾರದಲ್ಲಿ ಆಹಾರ ಪಥ್ಯವನ್ನು ಪಾಲಿಸುವುದಕ್ಕೆ ಪ್ರಯತ್ನಿಸಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹಕ್ಕೆ ಒಗ್ಗದ ಆಹಾರ ಪದಾರ್ಥಗಳನ್ನು ಸೇವಿಸಿದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವ್ಯವಸ್ಥೆಯ ಬಗ್ಗೆಯೋ ವ್ಯಕ್ತಿಯ ಬಗ್ಗೆಯೋ ಸಿಟ್ಟು ಬಂದಲ್ಲಿ ಅದನ್ನು ಆ ತಕ್ಷಣವೇ ಹೊರಗೆ ಹಾಕಿಬಿಡಬೇಕು ಎಂಬ ಆತುರ ಅಥವಾ ಚಡಪಡಿಕೆ ಬೇಡ. ಏಕೆಂದರೆ ನಿಮ್ಮ ಆಲೋಚನಾ ವಿಧಾನದಲ್ಲಿಯೇ ತಪ್ಪುಗಳಿರುವ ಅವಕಾಶಗಳು ಇರುತ್ತವೆ. ಆದ್ದರಿಂದ ಒಟ್ಟಾರೆಯಾಗಿ ನಿಮ್ಮ ಸಿಟ್ಟಿಗೆ ಕಾರಣ ಆದ ಅಂಶ ಯಾವುದು ಹಾಗೂ ಅದು ನಿಜವಾಗಿಯೂ ಆ ವ್ಯವಸ್ಥೆಯ ಅಥವಾ ವ್ಯಕ್ತಿಯ ತಪ್ಪಾಗಿದೆಯಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿ, ಆ ನಂತರ ಮುಂದುವರಿಯಿರಿ. ಕೃಷಿಕರಾಗಿದ್ದಲ್ಲಿ ನಿಮ್ಮ ಬಳಿ ಇರುವಂಥ ಭೂಮಿಗೆ ದಿಢೀರನೆ ಬೆಲೆ ಬಂದಿದೆ ಎಂಬ ಸಂಗತಿಯನ್ನು ಗೆಳೆಯರೋ ಅಥವಾ ಕುಟುಂಬ ಸದಸ್ಯರೋ ಹೀಗೆ ಯಾರಾದರೊಬ್ಬರು ಕಿವಿಗೆ ಹಾಕಲಿದ್ದಾರೆ. ಅಥವಾ ನೀವಾಗಿಯೇ ತೆರಳಿದ ಕಚೇರಿಯೊಂದರಲ್ಲಿಯೋ ಸಂಸ್ಥೆಯಲ್ಲಿಯೋ ತಿಳಿದುಬರಲಿದೆ. ಒಂದು ವೇಳೆ ನಿಮ್ಮ ಜಮೀನಿಗೆ ಒಳ್ಳೆ ಬೆಲೆಯೇ ಬಂದಿದೆ ಎಂದುಕೊಂಡು, ಮಾರಾಟ ಮಾಡುತ್ತೇನೆ ಎಂದು ನಿಮಗೆ ನೀವೇ ಹೇಳಿಕೊಂಡರೂ ಮಾರಾಟ ಆಗಿಬಿಡುವ ಸಾಧ್ಯತೆಗಳು ಹೆಚ್ಚಿವೆ. ನಿಮ್ಮ ನೆಮ್ಮದಿ ಇರುವುದು ಯಾವುದರಲ್ಲಿ ಎಂಬ ಸ್ಪಷ್ಟತೆ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇತರರ ಸಾಮರ್ಥ್ಯವನ್ನಾಗಲೀ ಅಥವಾ ಉದ್ದೇಶವನ್ನಾಗಲೀ ಪರೀಕ್ಷೆ ಮಾಡುವುದಕ್ಕೆ ಹೋಗಬೇಡಿ. ಎಂಥ ಸಂದಿಗ್ಧ ಸ್ಥಿತಿಯಲ್ಲೋ ಮಾತು ಬದಲಿಸುವುದಕ್ಕೆ ಹೋಗದಿರಿ. ಆದ್ದರಿಂದ ಏನು ಮಾತನಾಡುತ್ತಿದ್ದೀರಿ ಎಂಬ ಬಗ್ಗೆ ಪ್ರಜ್ಞೆ ಇಟ್ಟುಕೊಂಡಿರುವುದು ಮುಖ್ಯ. ಕೆಲಸ- ಕಾರ್ಯಗಳಲ್ಲಿ ಮುಂಚಿನ ಉತ್ಸಾಹದಲ್ಲಿ ತೊಡಗಿಕೊಳ್ಳುವುದು ಕಷ್ಟವಾಗಲಿದೆ. ವೃತ್ತಿನಿರತರು ಇತರರ ಕೆಲಸ- ಕಾರ್ಯಗಳನ್ನು ಮಾಡುವುದಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಲಿದ್ದಾರೆ. ಒಂದೇ ಕೆಲಸವನ್ನು ಇಬ್ಬರಿಗೆ ಮಾಡುವುದಕ್ಕೆ ಹೇಳಿ, ನಿಮ್ಮದೇ ಮರೆವಿನ ಕಾರಣಕ್ಕೆ ಜೊತೆಯಲ್ಲಿ ಕೆಲಸ ಮಾಡುವವರ ಕಣ್ಣಿನಲ್ಲಿ ಸಣ್ಣವರಾಗಲಿದ್ದೀರಿ. ಆದ್ದರಿಂದ ಯಾರಿಗೆ ಯಾವ ಕೆಲಸ ವಹಿಸಿದ್ದೀರಿ ಎಂಬುದನ್ನು ಒಂದು ಕಡೆ ದಾಖಲಿಸಿಕೊಳ್ಳಿ. ಒಂದು ವೇಳೆ ಆ ವಿಚಾರದಲ್ಲಿ ಅನುಮಾನ ಬಂದರೆ ಸಂಬಂಧಪಟ್ಟವರ ಬಳಿಯೇ ಮಾತನಾಡಿ, ಸಂದೇಹ ಬಗೆಹರಿಸಿಕೊಳ್ಳಿ. ವಿದ್ಯಾರ್ಥಿಗಳು ಭಾರೀ ಮುಜುಗರಕ್ಕೆ ಗುರಿ ಆಗುವ ಸನ್ನಿವೇಶಗಳು ಎದುರಾಗಲಿವೆ. ನಿಮಗೆ ಗೊತ್ತಿರುವ ವಿಚಾರಗಳೇ ಸಮಯಕ್ಕೆ ಸರಿಯಾಗಿ ನೆನಪಿಗೆ ಬಾರದೆ ಹೋಗಲಿದೆ. ಅಥವಾ ನಿಮಗೆ ವಹಿಸಿದ ಜವಾಬ್ದಾರಿಯನ್ನು ಲಕ್ಷ್ಯ ನೀಡಿ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಇನ್ನು ಇತರರನ್ನು ನಿಮ್ಮ ಜೊತೆಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಿಕೊಳ್ಳಬೇಡಿ. ಮಹಿಳೆಯರಿಗೆ ಮನೆಯಲ್ಲಿನ ವಸ್ತುಗಳನ್ನು ಹುಡುಕುವುದಕ್ಕೆ, ಮನೆ ಸ್ವಚ್ಛ ಮಾಡುವುದಕ್ಕೆ, ಬೇಡಿರುವುದು ಹಾಗು ಬೇಕಿರುವುದು ಎಂದು ವಸ್ತುಗಳನ್ನು ವರ್ಗೀಕರಿಸುವುದಕ್ಕೆ ಹೆಚ್ಚಿನ ಸಮಯ ಹೋಗಲಿದೆ. ನಿಮಗೆ ಸಹಾಯ ಮಾಡುವುದಾಗಿ ಮಾತು ನೀಡಿದವರು ನೆರವು ನೀಡುವುದಕ್ಕೆ ಸಾಧ್ಯವಾಗದೆ, ನಿಮ್ಮ ಒಬ್ಬರ ಮೇಲೇ ಒತ್ತಡ ಹೆಚ್ಚಾಗಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನೀರಸವಾಗಿ ವಾರದ ಶುರುವಿನಲ್ಲಿ ಇದ್ದರೂ ನಿಮಗೆ ಅಂದಾಜು ಕೂಡ ಸಿಗದಂಥ ಎನರ್ಜಿವೊಂದು ನಿಮ್ಮಲ್ಲಿ ಕಾಣಿಸಿಕೊಳ್ಳುತ್ತಾ ಹೋಗುತ್ತದೆ. ಈ ಅವಧಿಯಲ್ಲಿ ನಿಮ್ಮಲ್ಲಿ ಅಂದುಕೊಳ್ಳದೆ ಕೆಲವರು ಹೊಸ ವ್ಯವಹಾರ- ವ್ಯಾಪಾರಗಳನ್ನು ದಿಢೀರನೆ ಶುರು ಮಾಡುವ ಸಾಧ್ಯತೆಗಳಿವೆ. ಇನ್ನೂ ಅಚ್ಚರಿಯ ವಿಷಯ ಏನೆಂದರೆ ಹಣಕಾಸಿನ ಹೊಂದಾಣಿಕೆಗೆ ಸ್ವಲ್ಪ ಪ್ರಯತ್ನ ಮಾಡಿದರೂ ಸಾಕು, ಅದರಲ್ಲಿ ಯಶಸ್ವಿ ಕೂಡ ಆಗಿಬಿಡುತ್ತೀರಿ. ಯಾವ ಕೆಲಸವನ್ನು ಮಾಡುವುದಕ್ಕೆ ಕುಟುಂಬ ಸದಸ್ಯರು ಅಥವಾ ನಿಮ್ಮ ಆಪ್ತರು ತಡೆಯುತ್ತಾ ಬಂದಿರುತ್ತಾರೋ ಅದನ್ನು ಮುಂದುವರಿಸುವುದಕ್ಕೆ ಒಂದು ಮಾತು ಕೂಡ ಅಡ್ಡ ಹೇಳದೆ ಸುಮ್ಮನಾಗಿ ಬಿಡುವ ಸಾಧ್ಯತೆಗಳಿವೆ. ಇನ್ನು ಯಾರು ನಿಮ್ಮದೇ ಹಣ ಒಂದು ಕಡೆ ತಗುಲಿ ಹಾಕಿಕೊಂಡು, ಅದನ್ನು ಅಲ್ಲಿಂದ ಹೊರಗೆ ತೆಗೆದುಕೊಳ್ಳುವುದಕ್ಕೆ ಹರಸಾಹಸ ಮಾಡುತ್ತಿರುವಿರೋ ಅಂಥವರಿಗೆ ಹಣವನ್ನು ತೆಗೆದುಕೊಳ್ಳುವುದು ಸಾಧ್ಯವಾಗಲಿದೆ. ಏಕಾಏಕಿ ಏನೇನೋ ಐಡಿಯಾಗಳು ಬರುವುದಕ್ಕೆ ಆರಂಭಿಸಲಿದೆ. ಕೃಷಿಕರಿಗೆ ನಿಮ್ಮ ಗೆಳೆಯರು, ಆಪ್ತರ ಅನಾರೋಗ್ಯ ಸಮಸ್ಯೆಗಳು ಅಥವಾ ಆರ್ಥಿಕ ಸಮಸ್ಯೆಗಳು ಮಾನಸಿಕವಾಗಿ ಚಿಂತೆಗೆ ಗುರಿ ಆಗುವಂತೆ ಮಾಡುತ್ತವೆ. ನಿಮ್ಮ ಮೂಲ ಸ್ವಭಾವ ಏನಿದೆಯೋ ಅದನ್ನೇ ಬದಲಾಯಿಸಿಕೊಂಡು, ಅವರ ಸಲುವಾಗಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಿದ್ದೀರಿ. ಇನ್ನು ಇಷ್ಟು ಸಮಯ ಏನು ಬೆಳೆಯುತ್ತಿದ್ದರೋ ಅವೆಲ್ಲವನ್ನು ಬಿಟ್ಟು, ಹೊಸತನ್ನು ಬೆಳೆಯುವ ಕಡೆಗೆ ಮನಸ್ಸು ವಾಲಲಿದೆ. ನಿಮ್ಮಲ್ಲಿ ಕೆಲವರು ಸ್ವಲ್ಪ ಪ್ರಮಾಣದ ಭೂಮಿಯನ್ನು ಗುತ್ತಿಗೆಗೆ ನೀಡುವುದಕ್ಕಾಗಿ ನಿರ್ಧಾರ ಮಾಡಬಹುದು. ಒಂದು ವೇಳೆ ನೀವು ಯಾವುದಾದರೂ ವ್ಯಕ್ತಿ ಅಥವಾ ಸಂಸ್ಥೆ ಜೊತೆಗೆ ಒಪ್ಪಂದ ಏನಾದರೂ ಮಾಡಿಕೊಂಡಿದ್ದಲ್ಲಿ ಅದರಿಂದ ಹೊರಬರಬೇಕು ಎಂದು ಗಟ್ಟಿಯಾಗಿ ಅಂದುಕೊಳ್ಳಲಿದ್ದೀರಿ, ನಿಮ್ಮಲ್ಲಿ ಕೆಲವರು ಆಚೆಯೇ ಬರಲಿದ್ದೀರಿ. ಒಂದರ ಹಿಂದೆ ಒಂದು ಎಂಬಂತೆ ನಿಮ್ಮ ನಿರ್ಧಾರಗಳು ಹಾಗೂ ಸ್ವಭಾವದಲ್ಲಿನ ಬದಲಾವಣೆಗಳು ಕುಟುಂಬಸ್ಥರಲ್ಲಿ ಆತಂಕಕ್ಕೆ ಕಾರಣವಾಗಲಿದೆ. ವೃತ್ತಿನಿರತರಿಗೆ ಇತ್ತೀಚೆಗೆ ಅಳವಡಿಸಿಕೊಂಡ ಪದ್ಧತಿಗಳು ಅಥವಾ ಕೆಲಸಕ್ಕಾಗಿ ನೇಮಿಸಿಕೊಂಡ ವ್ಯಕ್ತಿಗಳು ಅಥವಾ ಒಂದು ವೇಳೆ ಸೇವಾಶುಲ್ಕದಲ್ಲಿ ಮಾಡಿದ ಬದಲಾವಣೆಗಳು ಹೀಗೆ ಯಾವುದಾದರೂ ಒಂದರಲ್ಲಿ ಅಸಮಾಧಾನ ಮೂಡಲಿದೆ. ಮುಂಚಿನಂತೆಯೇ ನಡೆದುಕೊಂಡು ಹೋಗಲಿ ಎಂದು ಪದೇಪದೇ ಅನಿಸಲಿದೆ. ಈ ಬಗ್ಗೆ ನಿಮ್ಮ ಸಂಗಾತಿ ಅಥವಾ ಬಹಳ ಆಪ್ತ ವಲಯದವರ ಜತೆಗೆ ಚರ್ಚೆ ಕೂಡ ಮಾಡಲಿದ್ದೀರಿ. ಆದರೆ ಅವರು ನೀಡುವ ಸಲಹೆ- ಸೂಚನೆಗಳು ಮನಸ್ಸಿಗೆ ಸಮಾಧಾನ ತರುವುದಿಲ್ಲ. ವಿದ್ಯಾರ್ಥಿಗಳು ಈಗ ಸೇರಿರುವ ಅಥವಾ ಮಾಡುತ್ತಿರುವ ಕೋರ್ಸ್ ಬಗ್ಗೆ ಆಸಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಮುಖ್ಯವಾಗಿ ಆ ಕೋರ್ಸ್ ಗೆ ಬೇಡಿಕೆ ಇಲ್ಲ ಎಂದು ಹಲವರು ನಿಮ್ಮೆದುರು ಪದೇಪದೇ ಹೇಳುತ್ತಾರೋ ಅಥವಾ ಆ ವಿಷಯದ ಬಗ್ಗೆ ಕಲಿಕೆಯ ಆಸಕ್ತಿಯೇ ಹೋಗಿಬಿಡುತ್ತದೋ ಒಟ್ಟಿನಲ್ಲಿ “ಇದು ನನಗೆ ಬೇಕಾ?” ಎಂಬ ಪ್ರಶ್ನೆ ಒಳಗಿಂದ ಗುದ್ದಿಕೊಂಡು ಬರಲಿದೆ. ಈ ಬಗ್ಗೆ ನಿಮ್ಮ ಪೋಷಕರ ಜತೆಗೆ ಮಾತುಕತೆ ನಡೆಸುವ ಮುಂಚೆ ಸಾವಿರ ಬಾರಿ ಆಲೋಚಿಸುವುದು ಉತ್ತಮ, ಗಮನದಲ್ಲಿರಲಿ. ಮಹಿಳೆಯರು ಕುಟುಂಬದ ಒಳಗಿನ ಗುಟ್ಟನ್ನು ಎಷ್ಟೇ ಆಪ್ತರಾದವರ ಬಳಿಯೂ ಹೇಳಿಕೊಳ್ಳಬೇಡಿ. ಏಕೆಂದರೆ ಈ ವಾರ ನೀವು ಏನು ಹೇಳಿಕೊಂಡಿರುತ್ತೀರೋ ಅದು ಯಥಾವತ್ತಾಗಿ ಕುಟುಂಬದ ಹಿರಿಯರ ಬಳಿಯೇ ಬರುವ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನೀವು ವಿಪರೀತ ವಾಚಾಳಿಗಳಾಗಿದ್ದಲ್ಲಿ ಇದು ನಿಮಗೆ ಹೆಚ್ಚು ಅನ್ವಯ ಆಗಲಿದೆ. ಈ ವಾರ ಮಾತಿಗೆ ಬಿಡುವು ನೀಡಿ. ಎದುರಿಗೆ ಇರುವ ವ್ಯಕ್ತಿಗೆ ಬೇಕಿದೆಯೋ ಬೇಡವೋ ಸಲಹೆ- ಸೂಚನೆಗಳನ್ನು ನೀಡುವುದು, ಯಾವುದೇ ಕೆಲಸ ಆಗಲಿ ನಾನು ಮಾಡಿಕೊಂಡು ಬರ್ತೀ ಅಂತ ನೀವಾಗಿಯೇ ಮೇಲು ಬಿದ್ದು ಹೋಗುವುದು ಇಂಥವನ್ನೆಲ್ಲ ಮಾಡಬೇಡಿ. ನಿಮ್ಮ ಹುದ್ದೆಯ ಘನತೆ- ಗೌರವವನ್ನು ಕಾಪಾಡಿಕೊಳ್ಳುವುದಕ್ಕೆ ಹೆಚ್ಚಿನ ಮುಖ್ಯತ್ವವನ್ನು ನೀಡಿ. ಪ್ರೀತಿ- ಪ್ರೇಮದಲ್ಲಿ ಇರುವವರು ಭಾವನಾತ್ಮಕ ಕ್ಷಣಗಳಲ್ಲಿಯೋ ಅಥವಾ ಬಹಳ ಸಂತೋಷವಾಗಿ ಇರುವಾಗಲೋ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಭರವಸೆ- ಮಾತುಗಳನ್ನು ಯಾರಿಗೂ ನೀಡಬೇಡಿ. ಅಥವಾ ನಿಮಗೆ ಯಾವುದೋ ಹಣ ಬರುವುದರಲ್ಲಿದೆ, ಅದು ಬಂದ ತಕ್ಷಣ ದೊಡ್ಡ ಮೊತ್ತವನ್ನು ನಿನಗೇ ಕೊಡುತ್ತೀನಿ ಎಂಬ ಮಾತನ್ನೆಲ್ಲ ಹೇಳುವುದಕ್ಕೆ ಹೋಗಬೇಡಿ. ಅದರಲ್ಲೂ ಸ್ತ್ರೀಯರಿಗೆ ಮಾತು ಕೊಡುವುದಕ್ಕೆ ಹೋಗಬೇಡಿ. ಇದು ಪುರುಷರು- ಸ್ತ್ರೀಯರಿಗೂ ಇಬ್ಬರಿಗೂ ಅನ್ವಯ ಆಗುತ್ತದೆ. ಕೃಷಿಕರು ಜಮೀನಿನಲ್ಲಿ ಹಲವು ಕೆಲಸಗಳನ್ನು ಮಾಡಿಸಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ಕೃಷಿ ಕೂಲಿ ಕಾರ್ಮಿಕರನ್ನು ಹುಡುಕುತ್ತಿದ್ದಲ್ಲಿ ದೊರೆಯಲಿದ್ದಾರೆ. ಇನ್ನು ಯಾರು ಗುತ್ತಿಗೆಗೋ ಅಥವ ಇಷ್ಟು ಅವಧಿಗೆ ಅಂತ ಭೋಗ್ಯಕ್ಕೋ ಭೂಮಿಯನ್ನು ಪಡೆದು, ಆರಂಭ ಮಾಡಿಸಬೇಕು ಎಂದು ಇರುತ್ತೀರೋ ಅಂಥವರ ಉದ್ದೇಶ ಈಡೇರುವ ಸಾಧ್ಯತೆಗಳು ಹೆಚ್ಚಲಿವೆ. ಹಳೆ ಸ್ನೇಹಿತರು ಅಥವಾ ಸಂಬಂಧಿಕರು ನಿಮ್ಮ ಕೆಲಸ- ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುವುದಾಗಿ ಮಾತು ನೀಡಲಿದ್ದಾರೆ. ಕುಟುಂಬದಲ್ಲಿ ಇಷ್ಟು ಸಮಯ ನಾನಾ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದ ವಿಷಯಕ್ಕೆ ಒಮ್ಮತ ಮೂಡುವುದು ಸಹ ಸಾಧ್ಯವಿದೆ. ಕೃಷಿ ಉತ್ಪನ್ನಗಳ ರಫ್ತು ವ್ಯವಹಾರದಲ್ಲೂ ತೊಡಗಿಕೊಂಡವರಿಗೆ ಆದಾಯ ಹೆಚ್ಚಳ ಆಗಬಹುದು. ಮನೆಗೆ ರಾಸುಗಳನ್ನು ಖರೀದಿಸಿ, ತರುವ ಸಾಧ್ಯತೆಗಳಿವೆ, ಜೊತೆಗೆ ಕೊಟ್ಟಿಗೆ ನಿರ್ಮಾಣ ಅಥವಾ ಆಧುನೀಕರಣ ಮಾಡುವುದಕ್ಕೆ ಸಹ ಮುಂದಾಗಲಿದ್ದೀರಿ. ವೃತ್ತಿನಿರತರು ಈ ವಾರ ದೊಡ್ಡ ದೊಡ್ಡ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಕಚೇರಿ ನವೀಕರಣ, ಸ್ಥಳಾಂತರ ಅಥವಾ ಭೋಗ್ಯಕ್ಕೆ ಹಾಕಿಕೊಳ್ಳುವುದು ಅಥವಾ ಖರೀದಿಯನ್ನೇ ಮಾಡುವುದು ಹೀಗೆ ಮುಖ್ಯವಾದ ನಿರ್ಧಾರ ಅದಾಗಿರಲಿದೆ. ನಿಮ್ಮ ಕೆಲಸ ಹಾಗೂ ವೈಖರಿಯನ್ನು ಮೆಚ್ಚಿಕೊಂಡು, ಹೊಸ ಕ್ಲೈಂಟ್ ಗಳು ಒಪ್ಪಂದದ ಅವಧಿ ಹೆಚ್ಚಿಸುವುದಕ್ಕೋ ಅಥವಾ ಈಗ ನೀಡುತ್ತಿರುವ ಮೊತ್ತಕ್ಕಿಂತ ಹೆಚ್ಚು ನೀಡುವುದಕ್ಕೋ ಮುಂದಾಗಲಿದ್ದಾರೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗಲಿದೆ. ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳುವ ಯೋಗ ಕಂಡುಬರುತ್ತಿದೆ. ಅದರಲ್ಲೂ ಅಧ್ಯಯನ ಪ್ರವಾಸಗಳಿಗೆ ತೆರಳಬಹುದು. ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ವಿಶ್ವಾಸ ಹೆಚ್ಚಾಗಲಿದೆ. ಆಲೋಚನಾ ಧಾಟಿ, ಧೋರಣೆ, ವೈಖರಿ ಇವುಗಳ ಬಗ್ಗೆ ಎಲ್ಲ ಇತರರು ಮೆಚ್ಚುಗೆಯ ಮಾತುಗಳನ್ನು ಆಡಲಿದ್ದಾರೆ. ಇನ್ನು ನಿಮ್ಮಲ್ಲಿ ಕೆಲವರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಚಿತ್ರಕಲೆ, ಸಂಗೀತ, ವಾದನಗಳನ್ನು ನುಡಿಸುವಂಥ ತರಬೇತಿಗೆ ಸೇರ್ಪಡೆ ಆಗುವ ಅವಕಾಶಗಳು ಹೆಚ್ಚಿವೆ. ಮಹಿಳೆಯರು ಸಂಘ- ಸಂಸ್ಥೆಗಳಲ್ಲಿ ಬಹಳ ಉತ್ಸಾಹದಿಂದ ತೊಡಗಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರು ಪದಾಧಿಕಾರಿಗಳಾಗಿ, ಅಧ್ಯಕ್ಷೆ-ಉಪಾಧ್ಯಕ್ಷೆ ಅಥವಾ ಕಾರ್ಯದರ್ಶಿಯಂಥ ಹುದ್ದೆಗಳಿಗೆ ನೇಮಕ ಆಗುವ ಅವಕಾಶಗಳಿವೆ. ಈ ಹಿಂದೆ ನೀವು ಯಾರಿಗೆ ಸಹಾಯ ಮಾಡಿದ್ದಿರೋ ಅವರು ಉಪಕಾರ ಸ್ಮರಣೆ ಎಂಬಂತೆ ನಿಮಗೆ ಕೆಲವು ಸಹಾಯಗಳನ್ನು ಮಾಡಲಿದ್ದಾರೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನೀವೇನಾದರೂ ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾರ್ಯ ನಿರ್ವಹಿಸುವವರಾಗಿದ್ದಲ್ಲಿ ಬಿಡುವಿಲ್ಲದಷ್ಟು ಕೆಲಸಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವಾಗಿಯೇ ಆ ಕೆಲಸವನ್ನು ಮಾಡಲಿಕ್ಕೆ ಸಾಧ್ಯವಿಲ್ಲ ಎಂದು ಕೈ ಬಿಟ್ಟಿದ್ದಲ್ಲಿ ಅವೇ ಕೆಲಸಗಳು ನಿಮ್ಮನ್ನು ಅರಸಿ ಬರಲಿವೆ. ಇನ್ನು ನಿಮ್ಮಲ್ಲಿ ರೆಕಾರ್ಡಿಂಗ್ ಸ್ಟುಡಿಯೋ ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಗೆ ಸಾಲಕ್ಕಾಗಿ ಪ್ರಯತ್ನವನ್ನು ಪಡುತ್ತಿದ್ದೀರಿ ಎಂದಾದಲ್ಲಿ ಇಲ್ಲಿವರೆಗಿನ ಅಡೆ-ತಡೆಗಳು ನಿವಾರಣೆ ಆಗಲಿವೆ. ಸಣ್ಣ- ಪುಟ್ಟ ಸಂಗತಿಗಳ ಮೇಲೂ ನೀವು ಕೊಡುವ ಗಮನ ಹಾಗೂ ತೆಗೆದುಕೊಳ್ಳುವ ಮುಂಜಾಗ್ರತೆಯಿಂದಾಗಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಮೇಲೆ ಇತರರಿಗೆ ಇರುವಂಥ ಗೌರವ ಹೆಚ್ಚಾಗುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರಿಗೆ ಅತ್ಯುತ್ತಮ ಉದ್ಯೋಗಿ ಎಂಬ ಗುರುತು ಹಾಗೂ ಪ್ರಶಸ್ತಿ ಸಹ ಸಿಗಬಹುದು. ಕೃಷಿಕರಿಗೆ ಸಣ್ಣ- ಪುಟ್ಟ ಅಪಘಾತಗಳಾಗುವ ಯೋಗ ಇದೆ. ಆದ್ದರಿಂದ ಸಾಮಾನ್ಯವಾಗಿ ತೆಗೆದುಕೊಳ್ಳುವುದಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ. ಶಾರ್ಟ್ ಸರ್ಕೀಟ್, ವಿದ್ಯುತ್ ಅವಘಡ ಇಂಥದ್ದು ಏನಾದರೂ ಆಗಬಹುದು. ಮನೆಯಲ್ಲಿ ಇರಲಿ ಅಥವಾ ಜಮೀನಿನಲ್ಲಿ ಇರಲಿ ವೈರಿಂಗ್, ಅರ್ಥಿಂಗ್ ಇವೆಲ್ಲ ಸರಿಯಾಗಿವೆಯಾ ಎಂಬುದನ್ನು ಒಂದಕ್ಕೆ ನಾಲ್ಕು ಬಾರಿಗೆ ಪರೀಕ್ಷಿಸಿಕೊಳ್ಳುವುದು ಕ್ಷೇಮ. ನಿಮ್ಮದು ಎಂದಿರುವಂಥ ಯಾವ ಜವಾಬ್ದಾರಿಯನ್ನು ಇತರರಿಗೆ ವಹಿಸುವುದಕ್ಕೆ ಹೋಗಬೇಡಿ. ಅವರು ಎಷ್ಟೇ ನಂಬಿಕಸ್ತರೇ ಇರಲಿ, ನಿಮ್ಮ ಪಾಲಿನ ಕೆಲಸವನ್ನು ನೀವೇ ಮಾಡಿ. ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದ ಸಾಲ ಸಿಗುತ್ತದೆ ಎಂಬ ಸನ್ನಿವೇಶ ಇದ್ದರೂ ಈ ವಾರ ಯಾವುದೇ ಹೊಸ ಸಾಲ ಮಾಡುವುದಕ್ಕೆ ಹೋಗಬೇಡಿ. ಈಗಾಗಲೇ ಕೇಳಿದ್ದಿರಿ, ಮುಂದಿನ ವಾರ ನೀಡುವುದಾಗಿ ಹೇಳಿದ್ದರು ಅಂತಾದಲ್ಲಿ ಮಾತ್ರ ಹಣವನ್ನು ಸಾಲವಾಗಿ ಪಡೆಯಿರಿ. ವೃತ್ತಿನಿರತರಿಗೆ ವಿಪರೀತ ಅಲೆದಾಟ ಇರುತ್ತದೆ. ನೀವೇ ಗೊಂದಲ ಮಾಡಿಕೊಂಡು, ಪದೇಪದೇ ಓಡಾಡುತ್ತೀರೋ ಅಥವಾ ಆ ಸಂದರ್ಭ ಹಾಗೆ ಒದಗಿಬರುತ್ತದೋ ಒಟ್ಟಾರೆಯಾಗಿ ವಿನಾಕಾರಣದ ಸುತ್ತಾಟ ನಿಮ್ಮ ಪಾಲಿಗೆ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಹಿಂಜರಿಕೆ ಅಥವಾ ಧೈರ್ಯಗೆಡುವಂಥ ಪರಿಸ್ಥಿತಿ ಎದುರಾಗುತ್ತದೆ. ಲಾಯಕ್ಕಾದ ನಿರ್ಧಾರ ಅಂತ ನೀವು ಅಂದುಕೊಂಡಿದ್ದನ್ನು ಕೊನೆ ಕ್ಷಣದಲ್ಲಿ ಬದಲಾಯಿಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿ ಆಗಿಬಿಡುತ್ತದೆ. ಈ ಸ್ಥಿತಿ ಇದು ಒಂದು ವಾರ ಮಾತ್ರ. ಇದನ್ನೇ ಮುಂದು ಮಾಡಿಕೊಂಡು, ಒಟ್ಟಾರೆಯಾಗಿ ನಿಮ್ಮ ಸ್ವಭಾವದಲ್ಲಿ ಇಂಥದ್ದೊಂದು ಬದಲಾವಣೆ ಆಗಿದೆ ಎಂದು ಭಾವಿಸಬೇಡಿ. ವಿದ್ಯಾರ್ಥಿಗಳಿಗೆ ವಿಧಿಯಾಟದ ಮೇಲೆ ನಂಬಿಕೆ ಸಿಕ್ಕಾಪಟ್ಟೆ ಆಗಿಬಿಡುತ್ತದೆ. ನಾವು ಏನು ಅಂದುಕೊಂಡರೆ ಏನು ಬಂತು, ಅದನ್ನು ನಿರ್ಧರಿಸುವ ಶಕ್ತಿ ಬೇರೆ ಯಾವುದೋ ಇದೆ ಎಂಬುದು ಬಲವಾಗಿ ನಿಮ್ಮ ಒಳಗೆ ಬೇರೂರುತ್ತದೆ. ದೇವಸ್ಥಾನಗಳಿಗೆ, ತೀರ್ಥಕ್ಷೇತ್ರಗಳಿಗೆ ಅಚಾನಕ್ ಆಗಿ ತೆರಳುವ ಸಾಧ್ಯತೆಗಳಿವೆ. ನಿಮ್ಮಲ್ಲಿ ಕೆಲವರು ಪ್ರತಿಭಾ ಪ್ರದರ್ಶನಗಳಲ್ಲಿ ಭಾಗೀ ಆಗಿ, ಜನಪ್ರಿಯತೆಯನ್ನು ಪಡೆಯುವ ಯೋಗ ಇದೆ. ಮಹಿಳೆಯರು ಟ್ರೆಕ್ಕಿಂಗ್ ತೆರಳುವ, ಬೆಟ್ಟ- ಗುಡ್ಡಗಳು ಇರುವಂಥ ಪ್ರದೇಶಗಳಿಗೆ ಹೋಗುವ ಸಾಧ್ಯತೆಗಳಿವೆ. ಅದರಲ್ಲೂ ಮಹಿಳಾ ಸಂಘಗಳು, ಗುಂಪುಗಳು, ಕ್ಲಬ್ ಇಂಥವುಗಳಲ್ಲಿ ಸಕ್ರಿಯರಾಗಿ ಇರುವವರಿಗೆ ಈ ಸಾಧ್ಯತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿದೆ. ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಶಸ್ತ್ರಚಿಕಿತ್ಸೆ ಆಗಬಹುದು ಅಥವಾ ಫಿಜಿಯೋಥೆರಪಿ ಆರಂಭಿಸುವ ಅವಕಾಶಗಳಿವೆ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಆಸ್ತಿ, ವಾಹನಗಳು, ಅಡ್ವಾನ್ಸ್ ಅಗ್ರಿಮೆಂಟ್ ಈ ರೀತಿಯ ಕಾಗದ- ಪತ್ರ- ದಾಖಲಾತಿಗಳಿಗೆ ಸಂಬಂಧಿಸಿದಂತೆ ಹುಡುಕಾಟ ನಡೆಸುತ್ತಿದ್ದೀರಿ, ಎಷ್ಟು ಹುಡುಕಿದರೂ ಮನೆಯಲ್ಲಿ ಅದು ಸಿಗುತ್ತಿಲ್ಲ ಅಂತಾದಲ್ಲಿ ಅವು ಸಿಗಬಹುದು ಅಥವಾ ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬ ಮಾರ್ಗ ಗೋಚರ ಆಗಲಿದೆ. ವಾಹನ ಕಲಿಯುತ್ತಿರುವವರು ಈ ವಾರ ಒಂದು ಬಗೆಯ ಆತ್ಮವಿಶ್ವಾಸವನ್ನು ಪಡೆದುಕೊಳ್ಳಲಿದ್ದೀರಿ. ಎಲ್ಲ ವಿಚಾರಗಳಲ್ಲೂ ಪಾರದರ್ಶಕವಾಗಿರಿ, ಯಾವುದೇ ವಿಚಾರವನ್ನು ಮುಚ್ಚಿಡುವುದಕ್ಕೆ ಹೋಗಬೇಡಿ. ನೀವು ಈಗಾಗಲೇ ಕೈಗೆತ್ತಿಕೊಂಡಿರುವ ಪ್ತಾಜೆಕ್ಟ್ ಗೆ ಸಂಬಂಧಿಸಿದಂತೆ ಪ್ಲಾನ್ ಬಿ ಎಂಬುದು ಸಹ ಇಟ್ಟುಕೊಳ್ಳಿ. ನಿಮ್ಮ ಬಗ್ಗೆ ಯಾರಾದರೂ ವಿಮರ್ಶತ್ಮಾಕವಾಗಿ ಮಾತನಾಡಿದಲ್ಲಿ ಅವರನ್ನು ಶತ್ರುವಂತೆ ಕಾಣುವುದಕ್ಕೆ ಹೋಗಬೇಡಿ, ಬದಲಿಗೆ ಅವರು ಹೇಳಿದ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆ ಹಾಗೂ ನೀವು ಬದಲಾವಣೆ ಮಾಡಿಕೊಳ್ಳಬೇಕಾದ ಸಂಗತಿಗಳೇನು ಎನ್ನುವ ಕಡೆಗೆ ಲಕ್ಷ್ಯವನ್ನು ನೀಡಿ. ಕೃಷಿಕರು ಸಂಘ- ಸಂಸ್ಥೆಗಳ ಮೂಲಕವಾಗಿ ಸಾಲಕ್ಕೆ ಪ್ರಯತ್ನವನ್ನು ಪಡುತ್ತಿದ್ದೀರಿ ಅಂತಾದಲ್ಲಿ ಅದು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಅಥವಾ ಚೀಟಿ ಹಾಕಿದ್ದೀರಿ, ಅದರ ಹಣವನ್ನು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೀರಿ ಅಂತಾದರೂ ಅದು ಸಾಧ್ಯವಾಗಲಿದೆ. ಹಣವನ್ನು ಎಲ್ಲಿ ವಿನಿಯೋಗ ಮಾಡಬೇಕು ಅಂದುಕೊಂಡಿದ್ದೀರೋ ಅಲ್ಲಿಗೇ ವಿನಿಯೋಗಿಸಿ. ಈ ವಾರ ನಿಮ್ಮಲ್ಲಿ ಕೆಲವರಿಗೆ ಐಷಾರಾಮಿ ವಸ್ತು- ವಿಷಯಗಳ ಕಡೆಗೆ ಹೆಚ್ಚಿನ ಆಕರ್ಷಣೆ ಇರುತ್ತದೆ. ಒಮ್ಮೆ ತೆಗೆದುಕೊಂಡು ಬಿಡೋಣ ಅಥವಾ ಹೇಗಿದ್ದರೂ ಸಾಲ ಕಟ್ಟುತ್ತೇನೆ, ಆ ಹಣವನ್ನು ಇಲ್ಲಿಗೆ ಬಳಸಿಕೊಳ್ಳೋಣ ಅಂತೆಲ್ಲ ಆಲೋಚಿಸುವುದಕ್ಕೆ ಹೋಗಬೇಡಿ. ಏಕೆಂದರೆ ನಿಮ್ಮ ಸ್ವಭಾವಕ್ಕೆ ಕುಟುಂಬ ಸದಸ್ಯರೇ ಆಕ್ಷೇಪಣೆಯನ್ನು ಮಾಡಬಹುದು ಅಥವಾ ಜೋರು ಧ್ವನಿಯಲ್ಲಿ ಜಗಳವನ್ನೇ ಆಡಬಹುದು. ಆದ್ದರಿಂದ ಆತುರದ ನಿರ್ಧಾರಗಳು ಯಾವುದೇ ಕಾರಣಕ್ಕೂ ಬೇಡ. ವೃತ್ತಿನಿರತರಿಗೆ ನಿಧಾನಕ್ಕೆ ನಿಮ್ಮ ಕೆಲವು ತಪ್ಪು ತೀರ್ಮಾನಗಳು, ನಿರ್ಧಾರಗಳು ಹಾಗೂ ವ್ಯಕ್ತಿಗಳ ಜತೆಗಿನ ಸ್ನೇಹ- ಸಂಬಂಧದಿಂದ ಕಳೆದುಕೊಂಡಿದ್ದು ಏನು ಇವೆಲ್ಲವೂ ಒಂದೊಂದಾಗಿ ಅರಿವಿಗೆ ಬರುತ್ತಾ ಸಾಗುತ್ತದೆ. ಏಕಾಏಕಿ ಕೆಲವು ವ್ಯಕ್ತಿಗಳ ಜತೆಗೆ ಮಾತುಕತೆಯನ್ನೇ ನಿಲ್ಲಿಸಿಬಿಡುವ ಅವಕಾಶಗಳಿವೆ. ಕಾರಣವೇ ಹೇಳದಂತೆ ಕೆಲವು ಸ್ಥಳಗಳಲ್ಲಿ ಮೌನವಾಗಿ ಇದ್ದುಬಿಡಲಿದ್ದೀರಿ. ನಿಮಗೆ ಅನಿಸುವುದರಲ್ಲೋ ಆತ್ಮವಿಮರ್ಶೆ ಮಾಡಿಕೊಳ್ಳುವುದೋ ಖಂಡಿತಾ ತಪ್ಪಲ್ಲ. ಆದರೆ ಏಕಾಏಕಿ ಎಲ್ಲ ನಿರ್ಧಾರಗಳನ್ನು ಜಾರಿಗೆ ತಂದುಬಿಡುವುದು ಅನಾಹುತಕಾರಿ, ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಸಣ್ಣ- ಪುಟ್ಟದಾದ್ದರೂ ಅನಾರೋಗ್ಯ ಸಮಸ್ಯೆಗಳು ಕಾಡಬಹುದು. ಅದರಲ್ಲೂ ಆಸ್ತಮಾ, ಕಫ, ಕೆಮ್ಮು ಈ ರೀತಿಯಾದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಹೈರಾಣ ಮಾಡಿಬಿಡುತ್ತವೆ. ಬಾಯಿ ಚಪಲವನ್ನು ಕಡಿಮೆ ಮಾಡಿಕೊಳ್ಳಿ. ವೈದ್ಯರು ಈಗಾಗಲೇ ನೀಡಿರುವ ಆಹಾರ ಪಥ್ಯದ ಎಚ್ಚರಿಕೆಗಳನ್ನು ಕಡ್ಡಾಯವಾಗಿ ಪಾಲಿಸಿ. ಇತರರು ಪುಸಲಾಯಿಸಿದರು ಅನ್ನೋ ಕಾರಣಕ್ಕೆ ನಿಮಗೇನೂ ಸಮಸ್ಯೆಯೇ ಇಲ್ಲವೇನೋ ಎಂಬಂತೆ ನಡೆದುಕೊಳ್ಳಬೇಡಿ. ಮಹಿಳೆಯರು ಗಟ್ಟಿ ನಿರ್ಧಾರಗಳನ್ನು ಮಾಡುವ ಅವಧಿ ಇದಾಗಿರುತ್ತದೆ. ನಿಮ್ಮನ್ನು ಭಾವನಾತ್ಮಕವಾಗಿ ಕುಗ್ಗಿಸಿ, ಅದರ ಲಾಭವನ್ನು ಪಡೆಯುವುದಕ್ಕೆ ಕೆಲವರು ಯತ್ನಿಸುತ್ತಿದ್ದಾರೆ ಅಥವಾ ಮುಂಚಿನಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದರು ಎಂಬುದು ನಿಮ್ಮ ಅರಿವಿಗೆ ಬರಲಿದೆ. ಕೆಲವು ವಿಚಾರಗಳನ್ನು ಮರೆಯುವುದಕ್ಕೆ, ಹೊಸ ವ್ಯಕ್ತಿಯಾಗಿ ಕಾಣಿಸಿಕೊಳ್ಳುವುದಕ್ಕಾಗಿ ನಿಮ್ಮಲ್ಲಿ ಕೆಲವರು ಏಕಾಂಗಿಯಾಗಿ ಪ್ರವಾಸಕ್ಕೆ ತೆರಳುವುದಕ್ಕೆ ಸಹ ನಿರ್ಧಾರ ಮಾಡಬಹುದು.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಚಿತ್ರರಂಗದಲ್ಲಿ ಇರುವವರಿಗೆ, ಅದರಲ್ಲೂ ನಟನೆ, ನಿರ್ದೇಶನದ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಹಳ ಮುಖ್ಯವಾದ ಅವಧಿ ಇದಾಗಿರುತ್ತದೆ. ಇನ್ನು ನೀವು ಉಪಯೋಗಕ್ಕೆ ಬಾರದು ಎಂದುಕೊಂಡಿದ್ದ ಕಥೆಯೋ ಅಥವಾ ನೀವು ಮಾಡಿಟ್ಟುಕೊಂಡಿರುವ ಹಾಡುಗಳ ಸಾಹಿತ್ಯವೋ ನಿಮ್ಮ ಕೈ ಹಿಡಿಲಿವೆ. ಅದಕ್ಕೆ ಕಾರಣ ಆಗುವ ಸಂಗತಿ ಏನೆಂದರೆ, ನಿಮಗೆ ಗುರುಗಳು ಅಥವಾ ಗುರು ಸಮಾನರಾದವರು ಕೆಲವು ಅವಕಾಶಗಳ ಬಗ್ಗೆ ಹೇಳಬಹುದು ಅಥವಾ ಕೊಡಿಸುವ ಸಾಧ್ಯತೆಗಳಿವೆ. ಆದ್ದರಿಂದ ಇಂಥ ವ್ಯಕ್ತಿಗಳು ನಿಮ್ಮನ್ನು ಭೇಟಿ ಆಗುವಂತೆ ಹೇಳಿದಲ್ಲಿ ಕಡ್ಡಾಯವನ್ನು ಅಂಥವರನ್ನು ಭೇಟಿ ಆಗಿ, ಅವರ ಜೊತೆಗೆ ಸಮಾಧಾನವಾಗಿ ಮಾತನಾಡುವುದಕ್ಕೆ ಪ್ರಯತ್ನಿಸಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ಹುಡುಕಿಕೊಂಡು ಬರಲಿವೆ. ಈ ಹಿಂದೆ ಒಮ್ಮೆ ನೋಡಿದ್ದೆ, ಆದರೆ ಆ ನಂತರ ಮಾತುಕತೆ ಮುಂದುವರಿದಿರಲಿಲ್ಲ ಎಂಬಂತಹ ಸಂಬಂಧಗಳು ಮತ್ತೆ ಹುಡುಕಿಕೊಂಡು ಬರಬಹುದು. ಇನ್ನು ಪ್ರೀತಿ- ಪ್ರೇಮದಲ್ಲಿ ಇರುವವರು ಅದನ್ನು ಮದುವೆ ಹಂತಕ್ಕೆ ಒಯ್ಯುವುದಕ್ಕೆ ತೀರ್ಮಾನಿಸಿ, ಮನೆಯಲ್ಲಿ ಆ ಬಗ್ಗೆ ಪ್ರಸ್ತಾವವನ್ನು ಮಾಡಲಿದ್ದೀರಿ. ಕೃಷಿಕ ವೃತ್ತಿಯಲ್ಲಿ ಇರುವವರು ನಿಮಗೆ ಆಗಬೇಕಾದ ಕೆಲಸಗಳನ್ನು ನಯವಾಗಿ ಮಾಡಿ, ಮುಗಿಸಿಕೊಳ್ಳಲಿದ್ದೀರಿ. ಕೆಲವು ಸಮಯದಿಂದ ಲಕ್ಷ್ಯವೇ ಕೊಡುವುದಕ್ಕೆ ಆಗಿರಲಿಲ್ಲ ಎಂಬಂಥ ವಿಚಾರಗಳ ಕಡೆಗೆ ನಿಮ್ಮ ಗಮನವು ಹೋಗಲಿದೆ. ಮಕ್ಕಳ ಶಿಕ್ಷಣ, ಮದುವೆ, ಉದ್ಯೋಗ, ಆರೋಗ್ಯ ಹೀಗೆ ಏಕಕಾಲಕ್ಕೆ ಹಲವು ವಿಚಾರಗಳು ನಿಮಗೆ ಆದ್ಯತೆ ಆಗಲಿವೆ. ನಿಮ್ಮ ಪ್ರಭಾವವನ್ನು ಬಳಸಿ, ಏನೆಲ್ಲ ಅನುಕೂಲವನ್ನು ಪಡೆದುಕೊಳ್ಳಬಹುದು ಎಂಬ ಬಗ್ಗೆ ಗಂಭೀರವಾಗಿ ಆಲೋಚನೆಯನ್ನು ಮಾಡಲಿದ್ದೀರಿ. ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಕೋರ್ಟ್ ನಲ್ಲಿ ನಡೆಯುತ್ತಿದ್ದಲ್ಲಿ ಅದನ್ನು ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಚಿಂತಿಸಿ, ಕೆಲವು ವ್ಯಕ್ತಿಗಳನ್ನು ಅದಕ್ಕಾಗಿ ನೇಮಿಸಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನವನ್ನು ಮಾಡಲಿದ್ದೀರಿ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರಬೇಕಾದ ಅನುದಾನ, ಹಣಕಾಸು ಬಾಕಿ ಇದ್ದಲ್ಲಿ ಈ ವಾರ ಅದನ್ನು ಪಡೆದುಕೊಳ್ಳುವ ಅಥವಾ ಅದು ಬಾರದಂತೆ ಆಗಲು ಎದುರಾಗಿರುವ ಸಮಸ್ಯೆ ಬಗೆಹರಿಸುವ ದಾರಿ ಗೊತ್ತಾಗುತ್ತದೆ. ವೃತ್ತಿನಿರತರು ನಿಮ್ಮ ಪ್ರತಿಸ್ಪರ್ಧಿಗಳಿಗಿಂತ ಬಹಳ ಚುರುಕಾಗಿ ಇದ್ದು, ಕೆಲವು ಆರ್ಡರ್ ಗಳನ್ನು ನಿಮ್ಮ ಕಡೆಗೆ ಸೆಳೆದುಕೊಳ್ಳಲಿದ್ದೀರಿ. ಈ ಹಿಂದೆ ಯಾರು ನಿಮಗೆ ಸಹಾಯ ಮಾಡುವ ನೆಪದಲ್ಲಿ ದಾರಿ ತಪ್ಪಿಸಿದ್ದರೋ ಅಂಥವರಿಗೆ ಪಾಠವನ್ನು ಕಲಿಸಲಿದ್ದೀರಿ. ನಿಮಗೆ ಹೊಳೆಯುವಂಥ ಹೊಸ ಸಂಗತಿಗಳನ್ನು ತಕ್ಷಣವೇ ಅಳವಡಿಸಿಕೊಳ್ಳುವುದರಿಂದ ಹಲವು ಬಗೆಯಲ್ಲಿ ಅನುಕೂಲಗಳು ಆಗಲಿವೆ. ವಿದ್ಯಾರ್ಥಿಗಳು ಗ್ಯಾಜೆಟ್, ಟ್ಯಾಬ್ ಲೆಟ್, ಸ್ಮಾರ್ಟ್ ವಾಚ್, ಲ್ಯಾಪ್ ಟಾಪ್ ಇಂಥವನ್ನು ಏನನ್ನಾದರೂ ಖರೀದಿಸುವ ಯೋಗ ಕಂಡುಬರುತ್ತಿದೆ. ನೀವು ಈ ಹಿಂದೆ ಹಲವು ಸಲ ಹಠ ಮಾಡಿ ಕೇಳಿದ್ದರೂ ತಂದುಕೊಡದಿದ್ದ ವಸ್ತುಗಳನ್ನು ಈ ವಾರ ನಿಮ್ಮ ಪೋಷಕರು ತಂದುಕೊಡುವ ಅವಕಾಶಗಳು ಹೆಚ್ಚಿವೆ. ಇಷ್ಟು ಸಮಯ ನಿಮಗೆ ಹಿಂಜರಿಕೆಯಾಗಿ ಕಾಡುತ್ತಿದ್ದ ಸಬ್ಜೆಕ್ಟ್ ಗಳನ್ನು ತುಂಬ ಚೆನ್ನಾಗಿ ಕಲಿಸುವಂಥ ವ್ಯಕ್ತಿಗಳು ನಿಮಗೆ ದೊರೆಯಲಿದ್ದಾರೆ. ಮಹಿಳೆಯರು ಉದ್ಯೋಗ ವಿಚಾರಕ್ಕೆ ಆದ್ಯತೆ ಕೊಡಲಿದ್ದೀರಿ. ಈಗ ನೀವು ಮಾಡುತ್ತಿರುವ ಉದ್ಯೋಗದಿಂದ ಬದಲಾವಣೆಗೆ ಮುಂದಾಗಬಹುದು ಅಥವಾ ನೀವು ಕೆಲಸ ಮಾಡುತ್ತಿರುವ ಸ್ಥಳದಲ್ಲೇ ಬಡ್ತಿ ಪಡೆಯುವುದಕ್ಕೆ ಮೇಲಧಿಕಾರಿಗಳ ಜೊತೆಗೆ ಚರ್ಚೆ ಕೂಡ ನಡೆಸಬಹುದು. ಆದರೆ ನಿಮ್ಮ ಯಾವುದೇ ಪ್ರಯತ್ನವಾಗಲೀ ಫಲಪ್ರದವಾಗಲಿದೆ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನಿಮ್ಮ ಈ ಮುಂಚಿನ ಕೆಲವು ತೀರ್ಮಾನಗಳು ಹಾಗೂ ಕುಟುಂಬದ ಸದಸ್ಯರಿಗೂ ಗೊತ್ತಿರದಂತೆ ಮಾಡಿದ್ದ ವ್ಯವಹಾರಗಳಲ್ಲಿ ಸಮಸ್ಯೆಗಳು ತಲೆದೋರಲಿವೆ. ಒಂದು ವೇಳೆ ನಿಮ್ಮ ಆಸ್ತಿ ಯಾವುದಾದರೂ ಮಾರಿದ್ದರಿಂದ ಬಂದಿದ್ದ ಹಣದಲ್ಲಿ ಏನಾದರೂ ಹೂಡಿಕೆ ಮಾಡಿದ್ದೀರಿ ಅಂತಾದಲ್ಲಿ ಅದರ ಮೌಲ್ಯದಲ್ಲಿ ಇಳಿಕೆ ಆಗಲಿದೆ. ಒಂದು ಕಡೆ ಮನೆಯಲ್ಲಿ ಇದನ್ನು ಹೇಳಲಿಕ್ಕೆ ಆಗದಂಥ ಪರಿಸ್ಥಿತಿ, ಇನ್ನೊಂದು ಕಡೆ ಮಾನಸಿಕವಾಗಿ ಗಟ್ಟಿಯಾಗಿ ಇರುವುದಕ್ಕೆ ಆಗದ ಸನ್ನಿವೇಶದಲ್ಲಿ ಸಿಲುಕಿಕೊಂಡು ಪರಿತಪಿಸುವಂಥ ಸನ್ನಿವೇಶ ನಿಮ್ಮದಾಗಲಿದೆ. ಎಲ್ಲಿಯದೋ ಕೋಪ, ನಿರಾಶೆ ಇನ್ನೆಲ್ಲಿಯೋ ತೋರಿಸಿಕೊಳ್ಳುವಂತೆ ಆಗಲಿದೆ. ನಿಮ್ಮ ಬಗ್ಗೆ ಮನೆಯಲ್ಲಿ ಮುಂಚೆ ತೋರಿಸಿದಂತೆ ಗೌರವಾದರಗಳನ್ನು ತೋರಿಸುತ್ತಿಲ್ಲ ಎಂದು ನಿಮ್ಮ ಒಳಮನಸ್ಸು ಹೇಳುವುದಕ್ಕೆ ಆರಂಭಿಸಲಿದೆ. ಇನ್ನು ನೀವೇನಾದರೂ ಮನೆ ಕಾಂಟ್ರಾಕ್ಟ್ ಸೇರಿದಂತೆ ಬೇರೆ ಯಾವುದೇ ಕೆಲಸದ ಕಾಂಟ್ರಾಕ್ಟ್ ತೆಗೆದುಕೊಳ್ಳುವವರೇನಾದರೂ ಆಗಿದ್ದಲ್ಲಿ ಅದನ್ನು ಕೊಟ್ಟ ಮಾತಿನಂತೆ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನಿಮಗೆ ಇರುವಂಥ ಹೆಸರು- ವರ್ಚಸ್ಸಿಗೆ ತಕ್ಕಂತೆ ಗುಣಮಟ್ಟವನ್ನು ಅದರನ್ನು ತರುವುದಕ್ಕೆ ಸಾಧ್ಯವಾಗುವುದಿಲ್ಲ. ಕೃಷಿಕರು ತಲೆಸುತ್ತು, ಕಣ್ಣು ಕತ್ತಲೆ ಬಂದಂತಾಗುವುದು, ಕಾಲು ಊತ ಇಂಥ ಸಮಸ್ಯೆಗಳಿಂದ ಬಳಲುವಂತಾಗುತ್ತದೆ. ಯಾವ ವ್ಯಕ್ತಿಯ ಬಗ್ಗೆ ನಿಮಗೆ ಸಂಪೂರ್ಣ ಗೊತ್ತಿದೆ ಎಂದು ನೀವು ಅಂದುಕೊಂಡಿರುತ್ತೀರೋ ಆತ ನೀವಂದುಕೊಂಡಂತೆ ಅಲ್ಲ ಎಂಬುದು ಗಮನಕ್ಕೆ ಬರಲಿದೆ. ನಿಮ್ಮ ಅಕ್ಕಪಕ್ಕದ ಜಮೀನಿನವರೋ ಅಥವಾ ಮನೆಯವರ ಜೊತೆಗೋ ಗಡಿಯ ವಿಚಾರಕ್ಕೆ ಮಾತಿಗೆ ಮಾತು ಬೆಳೆದು, ಜಗಳ ಆಗುವ ಸಾಧ್ಯತೆಗಳು ಹೆಚ್ಚಿವೆ. ಇತರರ ಮಾತಿಗೆ ಏಕಾಏಕಿ ಸಿಟ್ಟಿಗೇಳುವುದರಿಂದ ಕೆಲವು ಸಮಸ್ಯೆಗಳನ್ನು ನೀವು ಮಾಡಿಕೊಳ್ಳಲಿದ್ದೀರಿ. ಆದ್ದರಿಂದ ಕಾಗದ-ಪತ್ರಗಳು ಏನು ಹೇಳುತ್ತವೋ, ಸರ್ಕಾರಿ ಅಧಿಕಾರಿಗಳು ಏನನ್ನೋ ಹೇಳುತ್ತಾರೋ ಅದನ್ನು ಗಂಭೀರವಾಗೊ ಪರಿಗಣಿಸುವುದರಿಂದ ಹಲವು ಸಮಸ್ಯೆಗಳನ್ನು ಆರಂಭದಲ್ಲಿಯೇ ಬಗೆಹರಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ವೃತ್ತಿನಿರತರು ನಿಮಗೆ ಇರುವಂಥ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ನಿರ್ಧಾರ ಮಾಡುತ್ತೀರಿ. ಕೆಲವು ಕ್ಲೈಂಟ್ ಗಳ ಬಳಿ ಇನ್ನು ಮುಂದೆ ಕೆಲಸಗಳನ್ನು ಬೇರೆಯವರಿಗೆ ವಹಿಸಿ ಎಂದು ನೀವಾಗಿಯೇ ಹೇಳುವಂಥ ಸಾಧ್ಯತೆಗಳಿವೆ. ಇನ್ನು ನಿಮ್ಮ ಉಳಿತಾಯವೋ ಅಥವಾ ಹೂಡಿಕೆಯ ಹಣವನ್ನೋ ತೆಗೆದು, ಅದರಿಂದ ಕೆಲವು ಸಾಲವನ್ನು ಮರುಪಾವತಿ ಮಾಡುವ ತೀರ್ಮಾನವನ್ನು ಮಾಡಲಿದ್ದೀರಿ. ನಿಮ್ಮದೇ ಆರೋಗ್ಯದ ಸಂಗತಿಯು ಆದ್ಯತೆಯನ್ನು ಪಡೆದುಕೊಳ್ಳುತ್ತದೆ. ನಿಮ್ಮಲ್ಲಿ ಕೆಲವರು ಪ್ರಕೃತಿ ಚಿಕಿತ್ಸಾ ಕೇಂದ್ರಗಳಿಗೆ ದಾಖಲಾಗಿ, ಚಿಕಿತ್ಸೆಗಳನ್ನು ಪಡೆದುಕೊಳ್ಳುವ ನಿರ್ಧಾರ ಕೈಗೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಜಾಸ್ತಿ ಆಗಲಿದೆ. ನೀವಾಯಿತು ಹಾಗೂ ನಿಮ್ಮ ಓದಾಯಿತು ಎಂಬಂತೆ ಇರುವವರು ಸಹ ಉತ್ಸಾಹದಿಂದ ಕ್ರೀಡೆ ಮೊದಲಾದವುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿದ್ದೀರಿ. ಮನೆಯಲ್ಲಿ ನಿಮ್ಮ ಮೇಲೆ ಪ್ರೀತಿ- ಅಕ್ಕರಾಸ್ಥೆ ಹೆಚ್ಚಾಗಲಿದೆ. ಒಂದು ವೇಳೆ ನೀವು ವಾಹನ ಓಡಿಸುವ ವಯಸ್ಸಿನವರಾಗಿದ್ದಲ್ಲಿ ನಿಮಗೆ ವಾಹನವನ್ನು ಕೊಡಿಸುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ನಿಮಗೆ ಬಹಳ ಸಂತೋಷ ಆಗಲಿದೆ. ಮಹಿಳೆಯರು ಸ್ವಂತವಾಗಿ ವ್ಯವಹಾರ- ವ್ಯಾಪಾರ ಆರಂಭಿಸಬೇಕು ಎಂದುಕೊಳ್ಳುತ್ತಾ ಇದ್ದೀರಿ ಅಂತಾದಲ್ಲಿ ಈ ವಾರ ನಿಮ್ಮ ಉದ್ದೇಶಕ್ಕೆ ಪೂರಕವಾದ ಬೆಳವಣಿಗೆಗಳು ಆಗಲಿವೆ. ಕೆಲವರು ನಿಮ್ಮ ಜೊತೆ ಪಾರ್ಟನರ್ ಆಗುವುದಕ್ಕೆ ಮುಂದೆ ಬರಬಹುದು. ಮತ್ತೆ ಕೆಲವರು ತಾವು ಹಣ ಹೂಡುವುದಾಗಿಯೂ, ನೀವು ವ್ಯವಹಾರ ಮಾಡಿಕೊಂಡು ಹೋಗಿ ಎಂದು ಕೇಳಿಕೊಳ್ಳಬಹುದು.