Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 12ರಿಂದ 18ರ ತನಕ ವಾರಭವಿಷ್ಯ  

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 11, 2023 | 11:00 PM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 12ರಿಂದ ನವೆಂಬರ್ 18ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. 

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 12ರಿಂದ 18ರ ತನಕ ವಾರಭವಿಷ್ಯ  
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 12ರಿಂದ 18ರ ತನಕ ವಾರಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಕೆಲಸಗಳಲ್ಲಿ ಬೇಕೆಂತಲೇ ತಪ್ಪು ಹುಡುಕುತ್ತಿದ್ದಾರೆ ಎಂಬ ಭಾವನೆ ಈ ವಾರ ನಿಮ್ಮಲ್ಲಿ ಗಟ್ಟಿಯಾಗಿ ಬೇರೂರಲಿದೆ. ಕೆಲವು ಜವಾಬ್ದಾರಿಯನ್ನು ನಿಮಗೆ ಬಲವಂತವಾಗಿ ವಹಿಸಿ, ಆಯಿತಾ ಆಯಿತಾ ಎಂದು ಬೆನ್ನು ಬಿದ್ದು, ಕೇಳುವುದರಿಂದ ಒತ್ತಡ ಅನುಭವಿಸಲಿದ್ದೀರಿ. ಭವಿಷ್ಯದಲ್ಲಿ ಹಣಕಾಸಿನ ಅಗತ್ಯ ಕಂಡುಬರಲಿದೆ ಎಂಬ ಕಾರಣಕ್ಕೆ ನೀವು ಈಗಾಗಲೇ ಮಾಡಿದಂಥ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಕೃಷಿಕರು ಆದಾಯದ ವಿಚಾರದಲ್ಲಿ ಎಲ್ಲರಿಗೂ ಆಗಿದ್ದೇ ನನಗೂ ಆಗಲಿದೆ ಎಂಬ ಉಡಾಫೆ ಮಾಡದೆ ಮುಂಜಾಗ್ರತೆ ಏನು ತೆಗೆದುಕೊಳ್ಳಬೇಕು ಎಂಬುದನ್ನು ತೀರ್ಮಾನಿಸಿ. ಕಚೇರಿಗಳಿಗೆ ಕೆಲಸ- ಕಾರ್ಯಗಳಿಗೆ ತೆರಳಿದಾಗ ಮನೆಯ ಹೊರಗಿನ ಊಟ- ತಿಂಡಿಗಳನ್ನು ಮಾಡುವವರಿಗೆ ಗ್ಯಾಸ್ಟ್ರಿಕ್, ಎದೆಯುರಿ ಇಂಥ ಸಮಸ್ಯೆಗಳು ಕಾಡಬಹುದು. ಜತೆಗೆ ಇರಲಿ ಎಂದು ನೀವು ಅಂದುಕೊಂಡು ಕರೆದುಕೊಂಡ ಹೋದ ಕೆಲವರು ನಿಮಗೆ ಹೇಳಿದ್ದನ್ನೇ ಹೇಳಿ ತಲೆ ಚಿಟ್ಟು ಹಿಡಿಯುವಂತೆ ಮಾಡಲಿದ್ದಾರೆ. ನಿಮ್ಮ ಕೆಲಸ ಮಾಡಿಕೊಡುತ್ತೀನಿ ಎಂದು ಇತರರಿಗೆ ಮಾತು ನೀಡುವ ಮೊದಲು ಅವರ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ. ವೃತ್ತಿನಿರತರಾಗಿದ್ದು ಹಣಕಾಸಿನ ಮುಗ್ಗಟ್ಟನ್ನು ಎದುರಿಸುತ್ತಿದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗಲಿವೆ. ನಿಮ್ಮ ಬಳಿ ಇರುವಂತಹ ಬಜೆಟ್ ಒಳಗೆ ತುಂಬಾ ಅದ್ಭುತವಾಗಿದ್ದನ್ನು ಸಾಧಿಸಿ ತೋರಿಸಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳು ಅಥವಾ ವಸ್ತುಗಳನ್ನು ಖರೀದಿಸುವುದರಿಂದ ಲಾಭ ಆಗಲಿದೆ. ಇಷ್ಟು ಸಮಯ ನಿಮ್ಮ ಪಾರ್ಟನರ್ ಗಳಿಗೆ ಅಥವಾ ಕೈ ಕೆಳಗೆ ಕೆಲಸ ಮಾಡುವವರಿಗೆ ಹೇಳಬೇಕು ಅಂದುಕೊಂಡು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ ವಿಚಾರ ಒಂದನ್ನು ಈ ವಾರ ಹೇಳಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಸಮಾಧಾನವಾಗಲಿದೆ. ಈಗಿರುವ ಕಚೇರಿಯಿಂದ ಬೇರೆ ಕಡೆಗೆ ಬದಲಾವಣೆ ಆಗಬೇಕು ಎಂದು ಪ್ರಯತ್ನ ಮಾಡುತ್ತಿರುವವರಿಗೆ ಸ್ನೇಹಿತರ ಮೂಲಕ ಕೆಲವು ರೆಫರೆನ್ಸ್ ದೊರೆಯಲಿದೆ. ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡುವಂತಹವರು ಬಹಳ ಎಚ್ಚರಿಕೆಯಿಂದ ಇರಬೇಕು. ಸಣ್ಣ- ಪುಟ್ಟ ವಿಚಾರಗಳಿಗೆ ವೈಮನಸ್ಯ, ಅಭಿಪ್ರಾಯ ಭೇದಗಳು ಸೃಷ್ಟಿಯಾಗಲಿವೆ. ಆಪ್ತರೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವೇ ದೊಡ್ಡ ತೊಂದರೆ ಸಿಕ್ಕಿ ಬೀಳಲಿದ್ದೀರಿ. ಯಾವುದೇ ವಿಚಾರದಲ್ಲೂ ಸಂಪೂರ್ಣ ಮಾಹಿತಿ ಪಡೆಯುವ ತನಕ ಅಂತಿಮ ನಿರ್ಧಾರಕ್ಕೆ ಬರಬೇಡಿ. ಕಡಿಮೆ ಮೊತ್ತಕ್ಕೆ ಸಿಗುತ್ತಿದೆ ಅಂತಲೋ ಅಥವಾ ಹಣವನ್ನು ನಿಧಾನಕ್ಕೆ ಪಾವತಿಸಬಹುದು ಎಂಬ ಕಾರಣದಿಂದಲೋ ನಿಮಗೆ ಅಗತ್ಯವಿಲ್ಲದಿದ್ದರೂ ವಸ್ತುವನ್ನು ಖರೀದಿಸುವ ಸಾಧ್ಯತೆಗಳಿವೆ. ಮಹಿಳೆಯರಿಗೆ ನಿಮ್ಮ ಒಳಿತನ್ನು ಬಯಸುವವರು ಯಾರು ಅಥವಾ ಕೆಡುಕನ್ನು ಮಾಡುವುದಕ್ಕೆ ಹವಣಿಸುತ್ತಿರುವವರು ಯಾರು ಎಂದು ತಿಳಿಯಲಾರದಂತಹ ಗೊಂದಲದ ಸನ್ನಿವೇಶದಲ್ಲಿ ಈ ವಾರ ಇರಲಿದ್ದೀರಿ. ಸುಖಾಸುಮ್ಮನೆ ಯಾರೊಂದಿಗೂ ವಾದ- ವಾಗ್ವಾದಕ್ಕೆ ಇಳಿಯಬೇಡಿ. ಯಾರ ವಾದ ಸರಿ ಎಂಬುದನ್ನು ಸಾಬೀತು ಮಾಡಲೇಬೇಕು ಎಂಬ ಹಟ ಬೇಡ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಮೂರನೇ ವ್ಯಕ್ತಿಯ ಮಧ್ಯಪ್ರವೇಶದಿಂದ ಇಷ್ಟು ಕಾಲ ನಿಮಗೆ ಆಪ್ತರಾಗಿದ್ದವರ ಜತೆಗೆ ಇದ್ದ ಅಭಿಪ್ರಾಯ ಭೇದಗಳು ನಿವಾರಣೆ ಆಗುವಂಥ ಅವಕಾಶಗಳು ಇವೆ. ಆದ್ದರಿಂದ ಮಾತುಕತೆ ಮೂಲಕ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ಯಾವುದನ್ನೂ ಸಣ್ಣ- ಪುಟ್ಟ ವಿಚಾರಗಳು ಎಂದು ನೀವು ನಿರ್ಲಕ್ಷ್ಯ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಪಾಲಿನ ಜವಾಬ್ದಾರಿಯನ್ನು ಬೇರೆಯವರಿಗೆ ವರ್ಗಾವಣೆ ಮಾಡುವುದಕ್ಕೆ ಹೋಗಬೇಡಿ. ಮನೆಗೆ ವಿಲಾಸಿ ವಸ್ತುಗಳನ್ನು ಖರೀದಿಸುವಂಥ ಯೋಗ ಈ ವಾರ ನಿಮಗೆ ಇದೆ. ನಿಮ್ಮಲ್ಲಿ ಕೆಲವರು ಮನೆಗೆ ಅಗತ್ಯ ಎಂಬ ಕಾರಣಕ್ಕೆ ಹೆಚ್ಚುವರಿ ಕೋಣೆಗಳ ನಿರ್ಮಾಣಕ್ಕೆ ಮುಂದಾಗಬಹುದು. ಅದರಲ್ಲೂ ಮಕ್ಕಳ ಸಲುವಾಗಿ ಕೆಲವು ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಖಾಸಗಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೊಸ ಪ್ರಾಜೆಕ್ಟ್ ನಲ್ಲಿ ಪ್ರಮುಖ ಜವಾಬ್ದಾರಿ ವಹಿಸುವ ಅವಕಾಶಗಳಿವೆ. ಕೃಷಿಕರಿಗೆ ಜಮೀನು- ಭೂಮಿಗೆ ಸಂಬಂಧಿಸಿದಂತೆ ನೀವು ಅಂದುಕೊಂಡ ಮೊತ್ತಕ್ಕೆ, ನಿರೀಕ್ಷೆ ಮಾಡಿದ್ದ ರೀತಿಯಲ್ಲಿ ಸಮಯಕ್ಕೆ ವ್ಯವಹಾರ ಇತ್ಯರ್ಥ ಮಾಡುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಇನ್ನು ಇತ್ತೀಚೆಗಷ್ಟೇ ಹೊಸದಾಗಿ ಪರಿಚಯ ಆದವರ ಮೇಲೆ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ವಿಪರೀತವಾದ ಅವಲಂಬನೆ ಬೇಡ. ಅದು ಯಾವುದೇ ವಿಷಯ ಇರಬಹುದು, ನಿಮಗೆ ಗೊತ್ತಿಲ್ಲ ಎಂದಾದಲ್ಲಿ ಅನುಭವಿಗಳು, ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಳ್ಳುವುದು ಉತ್ತಮ. ಈ ವಾರ ಇನ್ನೊಂದು ವಿಚಿತ್ರ ಏನೆಂದರೆ, ಬೇರೆಯವರಿಗೆ ಸಹಾಯ ಮಾಡಿದ ನಂತರವೂ ಆಕ್ಷೇಪದ, ಅಸಮಾಧಾನದ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಮನೆ ಅಥವಾ ವಾಹನ ದುರಸ್ತಿಗಾಗಿ ನೀವು ಏನು ಅಂದಾಜು ಮಾಡಿರುತ್ತೀರೋ ಅದಕ್ಕಿಂತ ಬಹಳ ದೊಡ್ಡ ಪ್ರಮಾಣದ ಖರ್ಚು ಆಗಲಿದೆ. ಸಿಟ್ಟಿನ ಭರದಲ್ಲಿ ಯಾರ ಜೊತೆಗೂ ವಾದ, ವಾಗ್ವಾದಗಳನ್ನು ಮಾಡಿಕೊಳ್ಳಲು ಹೋಗಬೇಡಿ. ವೃತ್ತಿನಿರತರು ಆತ್ಮಗೌರವಕ್ಕೆ ಪೆಟ್ಟು ಬೀಳುವಂತಹ ಮಾತುಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ನಿಮಗೆ ಆಹ್ವಾನ ಇಲ್ಲ ಎಂದ ಕಡೆ ಯಾವುದೇ ಕಾರಣಕ್ಕೂ ಹೋಗಬೇಡಿ. ಸ್ವಂತಕ್ಕಾಗಿ ಖರೀದಿ ಮಾಡಿದ ವಸ್ತುಗಳನ್ನು ಇತರರಿಗೆ ಕೊಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಲಿದೆ. ನೀವು ನೀಡಿದ ಮಾಹಿತಿ ಅಥವಾ ಸಲಹೆಯನ್ನು ಬಳಸಿಕೊಂಡು ಕೆಲವರು ಲಾಭ ಮಾಡಿಕೊಳ್ಳಲಿದ್ದಾರೆ. ಆದ್ದರಿಂದ ನಿಮ್ಮ ತಲೆಯಲ್ಲಿ ಆಲೋಚನೆಯ ಮಟ್ಟದಲ್ಲಿ ಇರುವಂಥದ್ದನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಹೀಗೆ ಮಾಡಿದಲ್ಲಿ ನಿಮಗೆ ಸಿಗಬೇಕಾದ ಯಶಸ್ಸಿನ ಪಾಲು ಇತರರಿಗೆ ಸಿಗಲಿದೆ. ವಿದ್ಯಾರ್ಥಿಗಳು ನಿಮ್ಮ ಸಾಮರ್ಥ್ಯ ಮತ್ತು ಮಿತಿ ಎರಡನ್ನೂ ಅರಿತಲ್ಲಿ ಒಳ್ಳೆಯದು. ನಿಮಗೆ ಮಾಡಲು ಆಗದಂತಹ ಕೆಲಸಗಳನ್ನು ಸಹ ಯಾವುದಾದರೂ ಕಾರಣಗಳಿಂದಾಗಿ ಒಪ್ಪಿಕೊಂಡು ಬಿಟ್ಟರೆ ಅವಮಾನದ ಪಾಲಾಗುವ ಸಾಧ್ಯತೆಗಳಿವೆ. ಮಹಿಳೆಯರು ಎಲ್ಲರನ್ನೂ ಒಪ್ಪಿಸಿಯೇ ನಿರ್ಧಾರ ಕೈಗೊಳ್ಳುತ್ತೀನಿ ಎಂಬ ನಿಮ್ಮ ಪ್ರಯತ್ನ ಪೂರ್ಣ ಪ್ರಮಾಣದಲ್ಲಿ ಕೈಗೂಡುವುದಿಲ್ಲ. ನೀವು ಒಪ್ಪಿಕೊಂಡ ಕೆಲಸದಲ್ಲೋ ಅಥವಾ ಮಾಡುತ್ತಿರುವ ಕಾರ್ಯದಲ್ಲೋ ಲಾಭದ ಪ್ರಮಾಣ ನಿಮಗೆ ಹೆಚ್ಚಿಗೆ ಸಿಗಲಿದೆ ಎಂಬ ಆರೋಪ ಅಥವಾ ಗುಮಾನಿಗಳು ಕೇಳಿಸಿಕೊಳ್ಳಬೇಕಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಹೌಸಿಂಗ್ ಸೊಸೈಟಿಗಳಲ್ಲಿ ನಿವೇಶನಕ್ಕಾಗಿ ಅರ್ಜಿ ಹಾಕಿಕೊಂಡು, ಬಹಳ ಸಮಯದಿಂದ ಕಾಯುತ್ತಿದ್ದಲ್ಲಿ ಈ ವಾರ ಯಾವಾಗ ನೋಂದಣಿ ಆಗಲಿದೆ ಎಂಬ ಬಗ್ಗೆ ಮಾಹಿತಿ ದೊರೆಯಲಿದೆ. ಇದರಿಂದ ನಿಮ್ಮ ಮನಸ್ಸಿಗೆ ಸಮಾಧಾನ ಆಗಲಿದೆ. ವಿದೇಶಕ್ಕೆ ಉದ್ಯೋಗ ಅಥವಾ ವ್ಯಾಸಂಗದ ಸಲುವಾಗಿ ತೆರಳಬೇಕು ಎಂದುಕೊಂಡು ಇಷ್ಟು ಸಮಯ ವೀಸಾ ಸೇರಿದಂತೆ ಇತರ ಅಡೆತಡೆಗಳು ಎದುರಾಗಿದ್ದಲ್ಲಿ ಅವು ನಿವಾರಣೆ ಆಗಲಿವೆ. ಯಾರಿಗೆ ಕಾಲು ಅಥವಾ ತೀವ್ರ ಸ್ವರೂಪದ ಬೆನ್ನು ಹುರಿ ಅಥವಾ ಹೊಟ್ಟೆ ನೋವು ಕಾಡುತ್ತಿದೆಯೋ ಅಂಥವರಿಗೆ ಸೂಕ್ತ ವೈದ್ಯೋಪಚಾರ ದೊರೆಯಲಿದ್ದು, ದೈಹಿಕ ಸ್ಥಿತಿಯಲ್ಲಿ ಚೇತರಿಕೆ ಕಾಣಿಸಿಕೊಳ್ಳಲಿದೆ. ಕೃಷಿಕರು ಯಾರು ಮನೆಯನ್ನೋ ಅಥವಾ ಜಮೀನನ್ನೋ ಮಾರಾಟಕ್ಕೆ ಇಟ್ಟಿದ್ದೀರಿ ಅಂಥವರಿಗೆ ವಾರದ ಮೊದಲ ಮೂರು ಅಥವಾ ನಾಲ್ಕು ದಿನ ಒತ್ತಡದ ಸನ್ನಿವೇಶಗಳು ಎದುರಾಗಲಿವೆ. ಏಕೆಂದರೆ ಕೆಲವರು ಬಂದು ಈ ಕೂಡಲೇ ಅದನ್ನು ಮಾರಿದರೆ ನಿಮಗೆ ಲಾಭ ದೊರೆಯಲಿದೆ ಅಂದರೆ, ಮತ್ತೆ ಕೆಲವರು ಇನ್ನೊಂದಿಷ್ಟು ಸಮಯ ಕಾಯ್ದು ಮಾರಿದರೆ ಒಳ್ಳೆಯ ಲಾಭ ನಿಮ್ಮದಾಗಲಿದೆ ಎಂದು ತಲೆ ಕೆಡಿಸಲಿದ್ದಾರೆ. ಆದರೆ ವಾರದ ಕೊನೆಯ ಮೂರು ದಿನದಲ್ಲಿ ನೀವು ನಿರೀಕ್ಷೆ ಮಾಡಿದಂಥ ಬೆಲೆಗೆ ಆಸ್ತಿ ಖರೀದಿಗೆ ಜನರು ಸಿಗುವ ಸಾಧ್ಯತೆಗಳಿವೆ. ಇನ್ನು ಮಕ್ಕಳ ಸಲುವಾಗಿ ದ್ವಿಚಕ್ರ ವಾಹನಗಳನ್ನು ಖರೀದಿಸುವ ಸಾಧ್ಯತೆ ಕಂಡುಬರುತ್ತಿದೆ. ಇದಕ್ಕಾಗಿ ನಿಮ್ಮಲ್ಲಿ ಕೆಲವರು ಅಲ್ಪ ಪ್ರಮಾಣದಲ್ಲಿ ಸಾಲ ಕೂಡ ಮಾಡಬಹುದು. ವೃತ್ತಿನಿರತರು ಹೊಸದಾಗಿ ಮಾಡಿದ ಹೂಡಿಕೆಗಳು ಅಥವಾ ಹೊಸದಾಗಿ ಆರಂಭಿಸಿದ ಶಾಖೆ ಅಥವಾ ಸೇವೆಗಳಲ್ಲಿ ತಕ್ಷಣದಿಂದಲೇ ಒಳ್ಳೆಯ ರಿಟರ್ನ್ ಬರಲು ಆರಂಭಿಸುತ್ತವೆ. ನೀವೇನು ಲೆಕ್ಕಾಚಾರ ಹಾಕಿಕೊಂಡಿರುತ್ತೀರೋ ಹಣಕಾಸಿನ ವ್ಯವಹಾರಗಳು ಅದೇ ದಿಕ್ಕಿನಲ್ಲಿ ಸಾಗುತ್ತವೆ. ನಿಮ್ಮನ್ನು ಅವಮಾನ ಮಾಡುವುದಕ್ಕೆ ಪ್ರಯತ್ನಿಸಿದ ವಿರೋಧಿಗಳೇ ಸ್ವತಃ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ. ಕಡ್ಡಿ ತುಂಡು ಮಾಡಿದಂತೆ ಆಡುವ ನಿಮ್ಮ ಮಾತುಗಳಿಂದ ಲಾಭವಾಗುತ್ತದೆ. ವಿದ್ಯಾರ್ಥಿಗಳಿಗೆ ಈ ವಾರ ಒಂದು ಬಗೆಯ ಆಕರ್ಷಣಾ ಶಕ್ತಿ ಇರುತ್ತದೆ. ತುಂಬಾ ಪ್ರಭಾವಿಗಳನ್ನು ಹಾಗೂ ಮಾನಸಿಕವಾಗಿ ಬಹಳ ಗಟ್ಟಿಯಾಗಿ ಇರುವವರನ್ನು ಸಹ ನಿಮ್ಮ ಮಾತಿನ ಮೂಲಕ ಸೆಳೆದಿಟ್ಟುಕೊಳ್ಳುವಂತಹ ಸಾಮರ್ಥ್ಯ ನಿಮಗಿರುತ್ತದೆ. ಇದರ ಸದ್ಬಳಕೆಯನ್ನು ಹೇಗೆ ಮಾಡಿಕೊಳ್ಳುವುದು ಎಂಬ ಬಗ್ಗೆ ಸರಿಯಾದ ಯೋಜನೆಯನ್ನು ಹಾಕಿಕೊಳ್ಳಿ. ಮಹಿಳೆಯರಿಗೆ ಯಾರು ಏನಾದರೂ ಅಂದುಕೊಳ್ಳಲಿ, ನನಗೆ ಬೇಕಾದಂತೆ ಬದುಕುತ್ತೇನೆ ಎಂಬ ಮನೋಭಾವ ಈ ವಾರ ನಿಮ್ಮನ್ನು ಪ್ರಬಲವಾಗಿ ಆವರಿಸಲಿದೆ. ಸಣ್ಣ- ಸಣ್ಣ ಸಂಗತಿಗಳಿಗೂ ಹೆಚ್ಚಿನ ಗಮನ ಕೊಟ್ಟು, ಅರ್ಥ ಮಾಡಿಕೊಳ್ಳುವುದಕ್ಕೆ ಹಾಗೂ ವ್ಯಾಖ್ಯಾನಿಸುವುದಕ್ಕೆ ಪ್ರಯತ್ನ ಮಾಡಲಿದ್ದೀರಿ. ಒಂದು ಸಲಕ್ಕೆ ಬಾಕಿ ಉಳಿದಿರುವ ಕೆಲಸಗಳನ್ನೆಲ್ಲ ಪೂರ್ಣಗೊಳಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮಲ್ಲಿ ಯಾರು ಉದ್ಯೋಗ ಬದಲಾವಣೆಗೆ ಪ್ರಯತ್ನ ಮಾಡುತ್ತಿದ್ದೀರಿ ಅಂಥವರಿಗೆ ಬಹಳ ಸಮಯದ ಹಿಂದೆ ಸಲ್ಲಿಸಿದ್ದ ಅರ್ಜಿಗೆ ಈಗ ಇಂಟರ್ ವ್ಯೂಗೆ ಕರೆ ಬರಲಿದ್ದು, ಅದರಲ್ಲಿ ಯಶಸ್ಸು ಸಹ ಕಾಣುವಂಥ ಯೋಗ ನಿಮಗಿದೆ. ಆದರೆ ಇದನ್ನು ಒಪ್ಪಿಕೊಳ್ಳುವುದಾ ಅಥವಾ ಬೇಡವಾ ಎಂಬ ಪ್ರಶ್ನೆಯೊಂದು ಎದುರಾಗಲಿದೆ. ಆದ್ದರಿಂದ ಯಾವುದೇ ನಿರ್ಧಾರ ಅಥವಾ ತೀರ್ಮಾನವನ್ನು ಇತರರು ಆತುರ ಮಾಡಿದರು ಎಂಬ ಕಾರಣಕ್ಕೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಹೀಗೆ ಮಾಡಿದಲ್ಲಿ ಆರ್ಥಿಕ ನಷ್ಟಕ್ಕೆ ಒಳಗಾಗುವ ಅವಕಾಶಗಳಿವೆ. ಖಾಸಗಿ ಕಂಪನಿಗಳಿಗೆ ವೃತ್ತಿಗೆ ಸಂಬಂಧಿಸಿದಂಥ ಸೇವೆ ಒದಗಿಸುತ್ತಿರುವವರಿಗೆ ಅಲ್ಲಿಂದ ಇನ್ನಷ್ಟು ಹೊಸ ಕೆಲಸಗಳು ಹುಡುಕಿಕೊಂಡು ಬರಲಿವೆ. ಆರಂಭದಲ್ಲಿ ಇದು ಒತ್ತಡ ಎನಿಸಬಹುದಾದರೂ ಧೈರ್ಯ ಮಾಡಿ ಇದನ್ನು ಒಪ್ಪಿಕೊಂಡಲ್ಲಿ ಭವಿಷ್ಯದಲ್ಲಿ ದೊಡ್ಡ ಮಟ್ಟದಲ್ಲಿ ನಿಮಗೆ ಅನುಕೂಲವಾಗಲಿದೆ. ಕೃಷಿಕರಿಗೆ ದಾಖಲೆ- ಪತ್ರಗಳ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿಚ್ಚಳವಾಗಿ ಕಾಣುವಂಥ ವಿಚಾರಗಳ ಬಗ್ಗೆ ಅಭಿಪ್ರಾಯ ಹೇಳುವಾಗ ಕೂಡ ಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. ಹೊಸದಾಗಿ ಸ್ನೇಹಿತರಾದವರ ಜತೆಗೆ ಏಕಾಏಕಿ ವ್ಯವಹಾರ ನಡೆಸುವುದು ಒಳ್ಳೆಯದಲ್ಲ. ನಿಮ್ಮ ನೇರವಂತಿಕೆಯ ಮಾತುಗಳಿಂದಾಗಿ ಅಹಂಕಾರಿ ಎಂದು ಹಣೆಟ್ಟಿ ಕಟ್ಟುವ ಸಾಧ್ಯತೆ ಇದೆ. ಇತರರು ಹಂಗಿಸುವ, ಛೇಡಿಸುವ, ಮೂದಲಿಸುವ ಮಾತುಗಳನ್ನು ಆಡಿದಲ್ಲಿ ತೀರಾ ಮನಸ್ಸಿಗೆ ತೆಗೆದುಕೊಳ್ಳಬೇಡಿ. ಇದನ್ನು ಹೇಳುತ್ತಿರುವವರಿಗೆ ನಿಮ್ಮ ಬಗ್ಗೆ ಪ್ರಾಮಾಣಿಕವಾದ ಕಾಳಜಿ, ಸ್ನೇಹವೋ ಅಥವಾ ಪ್ರೀತಿ ಇದೆಯೇ ಎಂಬ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿಕೊಳ್ಳಿ. ಆ ನಂತರ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ತೀರ್ಮಾನಿಸಿ. ವೃತ್ತಿನಿರತರು ನೀವಾಗಿಯೇ ಹೇಳಿದ ವಿಚಾರವೊಂದು ಕೊರಳಿಗೆ ಉರುಳಾಗಿ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಮೊದಲಿಗೆ ನಿಮ್ಮ ಜತೆಗೆ ಬಹಳ ಚೆನ್ನಾಗಿ, ಗೌರವಯುತವಾಗಿ ಮಾತನಾಡುತ್ತಿದ್ದವರು ಏಕಾಏಕಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಆಸ್ತಿ- ಹಣಕಾಸಿನ ವಿಚಾರವು ಪ್ರಾಶಸ್ತ್ಯ ಪಡೆದುಕೊಳ್ಳುತ್ತದೆ. ನಿರ್ಭಯವಾಗಿ ಯಾವುದಾದರೂ ಕೆಲಸ ಒಪ್ಪಿಕೊಳ್ಳುವುದಕ್ಕೆ ಧೈರ್ಯ ಸಾಕಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಈ ವಾರ ಬಹಳ ಮೂಡ್‌ ಸ್ವಿಂಗ್‌ಗಳಿರುತ್ತವೆ. ಒಂದು ವೇಳೆ ಈಗಾಗಲೇ ಮಾನಸಿಕ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಪರಿಸ್ಥಿತಿ ಉಲ್ಬಣಿಸುವ ಸಾಧ್ಯತೆಗಳಿರುತ್ತವೆ. ಯಾವುದಾದರೂ ನಿಯಮಿತವಾದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದಲ್ಲಿ ಅದನ್ನು ಯಾವ ಕಾರಣಕ್ಕೂ ಮರೆಯದಿರಿ. ಒಂದು ವೇಳೆ ಈಗಿನ ವೈದ್ಯರಿಗಿಂತ ಬೇರೆಯವರಲ್ಲಿ ತೆರಳಬೇಕು ಎಂದಾದಲ್ಲಿ ಒಂದಕ್ಕೆ ಎರಡು ಬಾರಿ ಆಲೋಚನೆ ಮಾಡಿ. ಈ ವಾರ ಪ್ರಯತ್ನಪಟ್ಟಾದರೂ ದಿನದಲ್ಲಿ ಸ್ವಲ್ಪ ಸಮಯ ಧ್ಯಾನ ಮಾಡಿ. ಮಹಿಳೆಯರಿಗೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಪ್ರಗತಿ ಇದೆ. ಮನೆ ನಿರ್ಮಾಣಕ್ಕೆ ಅಥವಾ ವಾಹನ ಖರೀದಿಗೆ ಸಾಲಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಮೇಲಧಿಕಾರಿಗಳು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಮುಖ್ಯ ಕೆಲಸಕ್ಕೆ ಸಂಬಂಧಿಸಿದಂತೆ ಓಡಾಟಗಳು ಏನಾದರೂ ಮಾಡಬೇಕಿದ್ದಲ್ಲಿ ನೀವು ಮಾಡಿದರೇನೇ ಉತ್ತಮ. ಇತರರಿಗೆ ಕೆಲಸ ವಹಿಸಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿರ್ದಾಕ್ಷಿಣ್ಯವಾಗಿ ನೀವಾಡುವ ಮಾತುಗಳಿಂದ ಹಲವರಿಗೆ ಬೇಸರಕ್ಕೆ ಕಾರಣ ಆಗಬಹುದು. ಅದರಲ್ಲೂ ಸೈಟು ಖರೀದಿ, ಮನೆ ಕಟ್ಟುವ ವಿಚಾರಕ್ಕೆ ಸಂಗಾತಿಯ ಜತೆಗೆ ಮಾತಿಗೆ ಮಾತು ಬೆಳೆದು, ಮನಸ್ಸಿಗೆ ಹಿಂಸೆ ಆಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಅಂತಲೇ ನೀವು ಕೂಡಿಟ್ಟಿದ್ದ ದುಡ್ಡನ್ನು ಬೇರೆ ಕಾರಣಕ್ಕೆ ಬಳಸಿಕೊಳ್ಳುವಂತಾಗಬಹುದು. ಈಗ ಇರುವಂಥ ಕೆಲವು ಚಿನ್ನದ ಒಡವೆಗಳನ್ನು ವಾಪಸ್ ಕೊಟ್ಟು ಅಥವಾ ಕರಗಿಸಿ ಹೊಸದಾಗಿ ಬೇರೆ ಒಡವೆಗಳನ್ನು ಮಾಡಿಸಿಕೊಳ್ಳುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಇನ್ನು ಚೀಟಿಯಲ್ಲಿ ಹಣ ತೊಡಗಿಸಿರುವವರು ಅದನ್ನು ವಾಪಸ್ ಪಡೆದುಕೊಳ್ಳುವ ಅವಕಾಶ ಇದೆ. ಏನೇ ಭಿನ್ನಾಭಿಪ್ರಾಯ ಅಂತ ಇದ್ದರೂ ಸಣ್ಣ ಅಳತೆಯ ಸೈಟು ಖರೀದಿ ಮಾಡಬೇಕು ಎಂದು ಹುಡುಕಾಡುತ್ತಿರುವವರಿಗೆ ಮನಸ್ಸಿಗೆ ಮೆಚ್ಚುವಂಥ ಸ್ಥಳ ದೊರೆಯಲಿದ್ದು, ಈ ವಾರವೇ ಅಡ್ವಾನ್ಸ್ ಕೂಡ ಮಾಡುವಂಥ ಯೋಗ ಇದೆ. ಕೃಷಿಕರಿಗೆ ಅಂದುಕೊಂಡ ಸಮಯಕ್ಕೆ ಹಾಗೂ ಅಂದುಕೊಂಡ ರೀತಿಯಲ್ಲಿ ಸರ್ಕಾರದ ಕೆಲಸಗಳು ಮುಗಿಯದೆ ಬಹಳ ಒತ್ತಡ ಸೃಷ್ಟಿ ಆಗಲಿದೆ. ನಿಮಗೆ ಬಹಳ ಕೆಲಸ ಇದೆ ಎಂಬ ಕಾರಣಕ್ಕೆ ನೀವು ಇತರರಿಗೆ ವಹಿಸಿದ ಜವಾಬ್ದಾರಿಗಳನ್ನು ಸಹ ಒಮ್ಮೆ ಸಾದ್ಯಂತವಾಗಿ ಪರೀಕ್ಷೆ ಮಾಡಬೇಕಾದಂತಹ ಅಗತ್ಯ ಕಂಡುಬರಲಿದೆ. ನಿಮ್ಮದೇ ವೃತ್ತಿಯರಲ್ಲಿ ಇರುವಂಥ ಸ್ನೇಹಿತರು ತಮ್ಮ ಕೆಲಸಗಳನ್ನು ಪೂರ್ತಿ ಮಾಡುವ ಸಲುವಾಗಿ ನಿಮ್ಮ ಹೆಸರನ್ನು ಹಾಗೂ ಪ್ರಭಾವವನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಲಿದ್ದಾರೆ. ಏನನ್ನೂ ವಿಚಾರಿಸದೆ ನೀವು ಅವರಿಗೆ ಹೂಂ ಎನ್ನುವ ಮೊದಲಿಗೆ ಆ ಕೆಲಸ ಯಾವುದು ಎಂಬುದನ್ನು ಕೇಳಿ, ತಿಳಿದುಕೊಂಡು ಆ ನಂತರ ನಿಮ್ಮ ಅಭಿಪ್ರಾಯವನ್ನು ಹೇಳುವುದು ಒಳ್ಳೆಯದು. ಇಲ್ಲದಿದ್ದರೆ ನೀವು ಮುಜುಗರಕ್ಕೆ ಒಳಗಾಗಲಿದ್ದೀರಿ. ವೃತ್ತಿನಿರತರು ಇದ್ದಲ್ಲಿ ಯಾರು ನಿಮ್ಮ ಸಾಮರ್ಥ್ಯದ ಮೇಲೆ ಅನುಮಾನ ವ್ಯಕ್ತಪಡಿಸುತ್ತಾರೋ ಅವರೇ ನಿಮ್ಮ ಸಹಾಯವನ್ನು ಕೇಳಿಕೊಂಡು ಬರುವಂತಹ ಪರಿಸ್ಥಿತಿ ಉದ್ಭವಿಸಲಿದೆ. ಹಣಕಾಸಿನ ವಿಚಾರವಾಗಿ ಅಥವಾ ಆಸ್ತಿ ವಿಚಾರವಾಗಿ ತಂದೆಯೊಂದಿಗೆ ಅಥವಾ ತಂದೆ ಸಮಾನರಾದವರೊಂದಿಗೆ ಅಭಿಪ್ರಾಯ ಭೇದಗಳು ಅಥವಾ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಇತರರಿಗೆ ಸಹಾಯ ಮಾಡಲು ಹೋಗಿ ನೀವೇ ಸಮಸ್ಯೆಗೆ ಸಿಲುಕಿಕೊಳ್ಳಲಿದ್ದೀರಿ. ದೂರ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲಿ ಇತರರ ವೈಯಕ್ತಿಕ ವಿಚಾರಗಳನ್ನು ಪೋಸ್ಟ್ ಮಾಡುವುದಕ್ಕೆ ಹೋಗಬೇಡಿ, ಒಂದು ವೇಳೆ ಮಾಡಿದಲ್ಲಿ ವಿವಾದಕ್ಕೆ ಸಿಲುಕಿಕೊಳ್ಳುತ್ತೀರಿ. ಮಹಿಳೆಯರಿಗೆ ಒಂದೇ ಸಮಯಕ್ಕೆ ಹಲವು ಕೆಲಸಗಳು ನಿಮ್ಮ ಮೈ ಮೇಲೆ ಬೀಳಲಿವೆ. ಒತ್ತಡದಲ್ಲಿ ನೀವು ತೆಗೆದುಕೊಂಡ ತೀರ್ಮಾನಗಳು ಕೆಲವು ಬೂಮ್ ರಾಂಗ್ ಆಗಬಹುದು. ನಿಮ್ಮ ಬಾಯಿತಪ್ಪಿ ಬರುವಂತಹ ಮಾತಿನಿಂದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳಲಿದ್ದೀರಿ. ನೀವಿರುವ ಸ್ಥಳ, ಸಮಯ ಹಾಗೂ ಜನರನ್ನು ಗಮನದಲ್ಲಿ ಇಟ್ಟುಕೊಂಡು ಮಾತನಾಡುವ ಕಡೆಗೆ ಲಕ್ಷ್ಯ ಕೊಡಿ. ಒಂದು ವೇಳೆ ಅನುಭವಿಗಳು, ಹಿರಿಯರ ಮಾರ್ಗದರ್ಶನ ಅಗತ್ಯವಿದೆ ಎಂದಾದಲ್ಲಿ ಯಾವುದೇ ಸಂಕೋಚ ಪಡೆದಂತೆ ಕೇಳಿ ಪಡೆಯಿರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಒಡವೆ, ವಸ್ತುಗಳು, ಬ್ರಾಂಡೆಡ್ ಬಟ್ಟೆಗಳು, ಶೂಗಳು, ವಾಚ್ ಗಳ ಖರೀದಿಗಾಗಿ ಈ ವಾರ ಹಣವನ್ನು ಖರ್ಚು ಮಾಡಲಿದ್ದೀರಿ. ಇನ್ನು ನಿಮ್ಮ ಪ್ರೀತಿಪಾತ್ರರ ಜತೆಗೆ ಕಿರು ಪ್ರವಾಸಕ್ಕಾದರೂ ತೆರಳುವಂಥ ಯೋಗ ನಿಮಗೆ ಇದೆ. ಸಾಲ ತೀರಿಸುವುದಕ್ಕಾಗಿ ಸೈಟ್ ಅಥವಾ ಅಪಾರ್ಟ್ ಮೆಂಟ್ ಮಾರಾಟ ಮಾಡಬೇಕು ಎಂದು ಅಂದುಕೊಂಡಿರುವವರಿಗೆ ಖರೀದಿಗೆ ಒಳ್ಳೆ ಗ್ರಾಹಕರು ದೊರೆಯಲಿದ್ದಾರೆ. ಆದರೆ ನೆನಪಿನಲ್ಲಿ ಇಟ್ಟುಕೊಳ್ಳಿ, ಯಾವ ಉದ್ದೇಶಕ್ಕಾಗಿ ಆಸ್ತಿಯನ್ನು ಮಾರಾಟ ಮಾಡುತ್ತಿದ್ದೀರೋ ಅದಕ್ಕಾಗಿಯೇ ಹಣವನ್ನು ಬಳಸಿಕೊಳ್ಳಿ. ಸ್ನೇಹಿತರು ಅಥವಾ ನಿಮಗೆ ಬಹಳ ಹತ್ತಿರದವರು ಸಲಹೆ ನೀಡಿದರು ಎಂಬ ಕಾರಣಕ್ಕೆ ಬೇರೆ ಎಲ್ಲಿಯೂ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ನೀವು ಪ್ರಯತ್ನವೇ ಮಾಡದಂತೆ ಕೆಲವು ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ಈ ಹಿಂದೆ ನೀವು ಸಹಾಯ ಮಾಡಿದ ಗೆಳೆಯ ಅಥವಾ ಗೆಳತಿ ಈ ವಿಚಾರದಲ್ಲಿ ನಿಮಗೆ ಸಹಾಯ ಕೂಡ ಮಾಡಲಿದ್ದಾರೆ. ಕೃಷಿಕರು ನಿಮ್ಮ ಏಕಾಗ್ರತೆ, ಪಟ್ಟು ಹಿಡಿದ ಕೆಲಸ ಮಾಡುವ ರೀತಿಗೆ ಮೆಚ್ಚುಗೆಗೆ ಪಾತ್ರವಾಗಲಿದ್ದೀರಿ. ಇನ್ನೇನು ಈ ಕೆಲಸ ಆಗುವುದಿಲ್ಲ ಎಂದು ಇತರರು ಕೈ ಬಿಟ್ಟು ಸುಮ್ಮನಾದಂಥದ್ದನ್ನು ನೀವು ಮುಗಿಸಿ, ಇತರರಲ್ಲಿ ಬೆರಗು ಮೂಡಿಸಲಿದ್ದೀರಿ. ಜಮೀನು ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಆದರೆ ಹಣಕಾಸು ವಿಚಾರದಲ್ಲಿ ಇತರರಿಗೆ ಮಾತು ನೀಡುವ ಮುನ್ನ ನಿಮ್ಮ ಬಳಿ ಎಷ್ಟು ಮೊತ್ತ ಇದೆ, ಎಷ್ಟು ಹಣ ಹೊಂದಿಸಬಹುದು ಎಂಬ ಲೆಕ್ಕಾಚಾರ ಸರಿಯಾಗಿ ಹಾಕಿಕೊಳ್ಳುವುದು ಉತ್ತಮ. ನಿಮ್ಮಲ್ಲಿ ಕೆಲವರು ದೊಡ್ಡ ವಾಹನವನ್ನು ಖರೀದಿ ಮಾಡುವಂಥ ಯೋಗ ಕಂಡುಬರುತ್ತಿದೆ. ಅದು ನಿಮ್ಮ ಕೃಷಿ ಕೆಲಸಕ್ಕಾಗಿಯಾದರೂ ಆಗಬಹುದು ಅಥವಾ ಕುಟುಂಬದ ಬಳಕೆಗಾದರೂ ಆಗಬಹುದು. ಒಟ್ಟಿನಲ್ಲಿ ವಾಹನ ಖರೀದಿ ಯೋಗ ಕಂಡುಬರುತ್ತಿದೆ. ವೃತ್ತಿನಿರತರು ಆದಾಯವನ್ನು ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೊಸ ಯೋಜನೆಗಳ ಬಗ್ಗೆ ಸ್ನೇಹಿತರು ಅಥವಾ ನಿಮ್ಮದೇ ವೃತ್ತಿಯಲ್ಲಿ ಇರುವವರ ಜತೆಗೆ ಮಾತುಕತೆ ಆಡಬಹುದು. ನೀವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತದ ಪ್ರಾಜೆಕ್ಟ್ ವೊಂದರ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಮುಖ್ಯವಾಗುತ್ತದೆ. ಮತ್ತು ಗಟ್ಟಿಯಾಗಿ ಸರಿಯಾದ ಪ್ರಯತ್ನವನ್ನು ಸಹ ಮಾಡುವುದು ಒಳ್ಳೆಯದು. ನಿಮ್ಮ ಯಾರು ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಂಥವರು ಇದ್ದೀರಿ, ಅಂಥವರು ಈ ವಾರ ಹೆಚ್ಚು ಜಾಗ್ರತೆಯಿಂದ ಇರಬೇಕಾಗುತ್ತದೆ. ಸಂಬಂಧಿಕರೋ ಅಥವಾ ಸ್ನೇಹಿತರೋ ನಿಮ್ಮ ಪರಿಚಿತರ ಮೂಲಕ ಹಣವನ್ನು ಸಾಲವನ್ನಾಗಿ ಕೊಡಿಸುವಂತೆ ಕೇಳಬಹುದು. ಅದಕ್ಕೆ ಏನು ಉತ್ತರ ನೀಡಬೇಕು ಎಂಬುದಕ್ಕೆ ಸರಿಯಾದ ಆಲೋಚನೆ ಮಾಡಿಟ್ಟುಕೊಳ್ಳಿ. ವಿದ್ಯಾರ್ಥಿಗಳು ತಂದೆ- ತಾಯಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಿ. ನಿಮಗೆ ಸಂಬಂಧಪಡದ ವಿಚಾರಗಳಿಗೆ ತಲೆ ಹಾಕದಿರುವುರು ಉತ್ತಮ. ಸಂಬಂಧಿಕರ ಮನೆಯಲ್ಲಿನ ಕಾರ್ಯಕ್ರಮಗಳಿಗೆ ನೀವು ಹೆಚ್ಚಿನ ಓಡಾಟ ನಡೆಸಲಿದ್ದೀರಿ. ಮಹಿಳೆಯರು ಕುಟುಂಬ ಸದಸ್ಯರ ಜತೆಗೆ ಪ್ರವಾಸ ತೆರಳುವಂಥ ಯೋಗ ಇದೆ. ದಂಪತಿ ಮಧ್ಯೆ ಸಣ್ಣ- ಪುಟ್ಟ ಮನಸ್ತಾಪಗಳು ಇದ್ದಲ್ಲಿ ಬಗೆಹರಿಸಿಕೊಳ್ಳುವುದಕ್ಕೆ ಉತ್ತಮ ವೇದಿಕೆ ದೊರೆಯಲಿದೆ. ನಿಮ್ಮಲ್ಲಿ ಕೆಲವರು ಮನೆಯನ್ನು ಬದಲಿಸಿ, ಬೇರೆಡೆ ತೆರಳುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಈ ಓಡಾಟದಲ್ಲಿ ಹೆಚ್ಚಿನ ಸಮಯ ಹೋಗಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಈ ಹಿಂದೆ ನೀವು ಯಾವ ನಿರ್ಧಾರಕ್ಕೆ ಹೆಮ್ಮೆ, ಸಂತೋಷ ಪಟ್ಟಿದ್ದೀರೋ ಅದಕ್ಕಾಗಿ ಈ ವಾರ ಬೇಸರ, ಚಿಂತೆ ಕಾಡಲಿದೆ. ಯಾವ ಹಣ ಬಂದರೆ ನಿಮ್ಮ ಎಲ್ಲ ಸಮಸ್ಯೆಗಳು ಪರಿಹಾರ ಎಂದುಕೊಂಡಿರುತ್ತೀರೋ ಅದರಿಂದಲೇ ಸವಾಲುಗಳು ಶುರು ಆಗಲಿವೆ. ಈಗಾಗಲೇ ಕೆಲಸ ಬಿಟ್ಟಿದ್ದೀರಿ ಅಥವಾ ಕೆಲಸ ಕಳೆದುಕೊಂಡಿದ್ದೀರಿ ಅಂತಾದರೆ ಹೊಸ ಅವಕಾಶವೊಂದು ಬರಲಿದೆ. ಆದರೆ ಇದಕ್ಕೆ ಹೇಗೆ ಸ್ಪಂದಿಸಬೇಕು ಎಂಬುದು ಗೊಂದಲಕ್ಕೆ ಕಾರಣ ಆಗಲಿದೆ. ಅಲ್ಲಿನ ವೇತನವೋ ಕೆಲಸದ ಅವಧಿಯೋ ಅಥವಾ ಬೇರೆ ಯಾವುದಾದರೂ ನಿಯಮ ಅಥವಾ ನಿಬಂಧನೆ ಬಗ್ಗೆ ಸಮಾಧಾನ ಆಗುವುದೇ ಇಲ್ಲ. ಕೆಲವು ಕಾಂಟ್ಯಾಕ್ಟ್ ಗಳನ್ನು ಬೆಳೆಸಿಕೊಳ್ಳುವುದಕ್ಕಾಗಿ ಪಾರ್ಟಿ, ಗೆಟ್ ಟು ಗೆದರ್ ಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಹೀಗೆ ಮಾಡುವುದರಿಂದ ನಿಮ್ಮಲ್ಲಿ ಕೆಲವರಿಗೆ ಬಂಡವಾಳ ಹೂಡುವಂಥ ಆಸಕ್ತರು ಕೆಲವರು ಸಂಪರ್ಕಕ್ಕೆ ದೊರೆಯುವ ಅವಕಾಶಗಳು ಹೆಚ್ಚಿವೆ. ಕೃಷಿಕರಿಗೆ ಬೇರೆ ಯಾರದೋ ಖರ್ಚು ನಿಮ್ಮ ತಲೆ ಮೇಲೆ ಬೀಳಲಿದೆ. ಇದಕ್ಕೆ ತಕ್ಕ ಹಾಗೆ ಊರವರ ಮದುವೆಗೆಲ್ಲ ನಂದೇ ಪೌರೋಹಿತ್ಯ ಎಂದು ಎಲ್ಲ ವಿಚಾರಗಳಿಗೆ ಮೂಗು ತೂರಿಸದಿರಿ. ಲೋಕಜ್ಞಾನದಿಂದ ಮುಂದುವರಿದಲ್ಲಿ – ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಿದರೆ ಉತ್ತಮ. ಅತಿಯಾದ ಲಾಭ ಅಥವಾ ಆದಾಯದ ಆಸೆಗೆ ಬಿದ್ದು, ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುವಂತಾಗಲಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಅಥವಾ ನಿಮ್ಮದೇ ಅತಿಯಾದ ಆತ್ಮವಿಶ್ವಾಸದ ಕಾರಣಕ್ಕೆ ಕೆಲವು ಎಡವಟ್ಟುಗಳನ್ನು ಮಾಡಿಕೊಳ್ಳಲಿದ್ದೀರಿ. ಯಾವುದೇ ನಿರ್ಧಾರವನ್ನು ಆತುರವಾಗಿ ಮಾಡದಿರಿ. ವೃತ್ತಿನಿರತರು ಇತರರ ಕೆಲಸಕ್ಕಾಗಿ ನೀವು ಎದ್ದು- ಬಿದ್ದು ಕೆಲಸ ಮಾಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಒಂದೋ ಅಭಿಮಾನಕ್ಕೆ ಅಥವಾ ಸ್ನೇಹಕ್ಕೆ ಅಥವಾ ಇವೆರಡೂ ಅಲ್ಲದಿದ್ದಲ್ಲಿ ಮನವೊಲಿಕೆಗಾಗಿ ಹೀಗೆ ಮಾಡುವಂಥ ಸಾಧ್ಯತೆಗಳಿವೆ. ವಾಹನಗಳನ್ನು ಖರೀದಿ ಮಾಡುವಂತೆ ಆಪ್ತರು- ಸ್ನೇಹಿತರಿಂದ ಸಲಹೆಗಳು ಬರಲಿವೆ. ಇದಕ್ಕಾಗಿ ಸಾಲ ಪಡೆಯುವ ಬಗ್ಗೆಯೂ ಆಲೋಚಿಸಲಿದ್ದೀರಿ. ನಿಮಗೆ ಮಾಹಿತಿ ಇಲ್ಲದ ಅಥವಾ ಅರೆಬರೆ ತಿಳಿದಿರುವ ಸಂಗತಿಗಳ ಬಗ್ಗೆ ಅಧಿಕಾರಯುತವಾಗಿ ಅಭಿಪ್ರಾಯ ಹೇಳದಿರುವುದು ಈ ವಾರ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಸಂಬಂಧಿಕರು, ಸ್ನೇಹಿತರ ಮನೆಗೆ ಹೋಗುವಂತಿದ್ದರೆ ಹಣಕಾಸು ಅಥವಾ ಬೆಲೆಬಾಳುವ ವಸ್ತುಗಳನ್ನು ಇಡುವ ಕಡೆಗಳಲ್ಲಿ ಓಡಾಟ ನಡೆಸದಿರಿ. ಅಥವಾ ಅವರಾಗಿಯೇ ಅಂಥ ಬೆಲೆಬಾಳುವ ವಸ್ತುಗಳು, ಹಣಕಾಸಿನ ಜವಾಬ್ದಾರಿಯನ್ನು ನೀಡುವುದಕ್ಕೆ ಮುಂದಾದಲ್ಲಿ ನಯವಾಗಿಯೇ ತಿರಸ್ಕರಿಸುವುದು ಎಲ್ಲ ರೀತಿಯಲ್ಲೂ ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ವಿರುದ್ಧ ಆರೋಪಗಳು ಬರಲಿವೆ. ಮಹಿಳೆಯರು ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಹೇಳಿದ್ದೇ ಹೇಳಿ ಎದುರಿನಲ್ಲಿ ಇರುವವರಿಗೆ ನಿಮ್ಮ ಮೇಲೆ ಗೌರವ ಕಡಿಮೆ ಆಗುವಂತೆ ಮಾಡಿಕೊಳ್ಳಲಿದ್ದೀರಿ. ಒಳ್ಳೆ ಮೊತ್ತವೇ ನೀಡಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು, ಮಾಡಿದ ಕೆಲಸ ಅಥವಾ ಪ್ರಾಜೆಕ್ಟ್ ನಿಂದ ಬಹಳ ಕಡಿಮೆ ಹಣ ಸಿಗಬಹುದು ಅಥವಾ ಏನೇನೂ ಸಿಗದೆಯೇ ಹೋಗಬಹುದು.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಯಾವುದಾದರೂ ಕೆಲಸಕ್ಕೆ ಈಗಾಗಲೇ ದುಡ್ಡು ನೀಡಿಯಾಗಿದೆ, ಆದರೆ ಈಗ ಮಾಡಿಕೊಡುತ್ತೇನೆ, ಆಗ ಮಾಡಿಕೊಡುತ್ತೇನೆ ಎಂದು ಆಟವಾಡಿಸುತ್ತಿದ್ದಲ್ಲಿ ಈ ವಾರ ಅದನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿದಂತೆ ಪ್ರಭಾವಶಾಲಿಯೊಬ್ಬರು ನಿಮ್ಮ ಬೆನ್ನಿಗೆ ನಿಲ್ಲಲಿದ್ದಾರೆ. ಖಡಾಖಂಡಿತವಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ ಗಟ್ಟಿಯಾದ ಧ್ವನಿಯಲ್ಲೂ ಹಣವನ್ನು ಕೇಳುವ ಸ್ಥಿತಿಯಲ್ಲಿ ನೀವು ಇರಲಿದ್ದೀರಿ. ಇಷ್ಟು ಸಮಯ ನಿಮ್ಮೆದುರು ಸಂಭಾವಿತರಂತೆ ವರ್ತಿಸತ್ತಾ, ನಿಮ್ಮ ಬೆನ್ನ ಹಿಂದೆ ಹಗುರವಾಗಿ ಮಾತನಾಡುತ್ತಿದ್ದವರ ಬಣ್ಣ ಕಳಚಲಿದೆ. ನಿಮ್ಮಲ್ಲಿ ಕೆಲವರು ಮನೆಗೆ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಸರ್ಕಾರಿ ಮಟ್ಟದಲ್ಲಿ ಆಗಬೇಕಾದ ಕೆಲಸ- ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಸಹ ಅಂದುಕೊಂಡ ಅವಧಿಯೊಳಗಾಗಿ ಅವುಗಳು ಮುಗಿಯುವ ಸಾಧ್ಯತೆಗಳಿವೆ. ದೊಡ್ಡ ಯೋಜನೆಗಳನ್ನು ವಹಿಸಿಕೊಳ್ಳುವ ಅವಕಾಶ ಬಂದಲ್ಲಿ ಯಾವುದಕ್ಕೂ ಅಂಜದೆ ಒಪ್ಪಿಕೊಳ್ಳಿ, ಇದರಿಂದ ನಿಮಗೆ ಖಂಡಿತಾ ಅನುಕೂಲ ಆಗಲಿದೆ.
ಕೃಷಿಕರಿಗೆ ನಿಂತು ಹೋಗಿದ್ದ ಕೆಲಸ- ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಅಷ್ಟೇ ಅಲ್ಲ, ವೇಗ ಕೂಡ ಸಿಗಲಿದೆ. ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಕೆಲವರು ನಿಮಗೆ ಬೆಂಬಲ ನೀಡಲಿದ್ದಾರೆ. ಮನೆ ನಿರ್ಮಾಣಕ್ಕಾಗಿ ಸೈಟು- ನಿಮ್ಮ ಜಮೀನಿಗೆ ಹೊಂದಿಕೊಂಡಂತೆ ಇರುವ ಕೃಷಿ ಜಮೀನು ಖರೀದಿ ಮಾಡುವುದಕ್ಕೆ ಪ್ರಯತ್ನವನ್ನು ಮಾಡುತ್ತಿದ್ದಲ್ಲಿ ಮನಸ್ಸಿಗೆ ಒಪ್ಪುವಂಥದ್ದು ದೊರೆಯುವ ಯೋಗ ಇದೆ. ಈ ವಾರ ನಿಮ್ಮ ಕಿವಿಗಳನ್ನು ತೆರೆದಿರಿ, ಸಾಧ್ಯವಾದಷ್ಟೂ ಕಡಿಮೆ ಮಾತನಾಡಿದರೆ ಉತ್ತಮ. ಏಕೆಂದರೆ ನಿಮ್ಮ ಕಿವಿಗೆ ಬೀಳುವ ಮಾತುಗಳಿಂದ ಅವಕಾಶಗಳು ತೆರೆದುಕೊಳ್ಳುತ್ತವೆ. ಲಾಭ ಆಗುತ್ತದೆ. ವೃತ್ತಿನಿರತರಿಗೆ ಈ ಹಿಂದೆ ನೀವು ಮಾಡಿದ ಸಹಾಯ, ನೀಡಿದ ಸಲಹೆ- ಸೂಚನೆಗಳಿಂದ ಲಾಭವಾದಂಥವರು ಈಗ ಮತ್ತೆ ನಿಮ್ಮನ್ನು ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ನೀಡಲಿದ್ದಾರೆ. ವಾಹನ ಖರೀದಿ ಮಾಡಬೇಕು ಎಂಬ ಕಾರಣಕ್ಕೆ ಹಣಕಾಸಿಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಅದು ಒದಗಿ ಬರುವ ಸಾಧ್ಯತೆ ಇದೆ. ನೀವು ತೆಗೆದುಕೊಂಡ ಕೆಲವು ನಿರ್ಧಾರಗಳು ತಕ್ಷಣವೇ ಫಲ ನೀಡುವುದಕ್ಕೆ ಆರಂಭಿಸಲಿವೆ. ಈ ವಾರದ ಮಟ್ಟಿಗೆ ನಿಮಗೆ ನೀಡುವಂಥ ಎಚ್ಚರಿಕೆ ಏನೆಂದರೆ, ನಿಮಗೆ ಸಣ್ಣ- ಪುಟ್ಟ ಅನಾರೋಗ್ಯ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೂಡಲೇ ವೈದ್ಯರನ್ನು ಭೇಟಿ ಮಾಡಿ. ವಿದ್ಯಾರ್ಥಿಗಳು ಮನೆಯಲ್ಲಿ ತಮ್ಮ ಮೇಲೆ ನಂಬಿಕೆ ಉಳಿಸಿಕೊಳ್ಳುವುದು ಹರಸಾಹಸ ಆಗಲಿದೆ. ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಅನುಮಾನಗಳನ್ನು ಪರಿಹರಿಸುವ ರೀತಿಯಲ್ಲಿ ಉತ್ತರವನ್ನು ನೀಡಿ. ಮಹಿಳೆಯರು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಲಿವೆ. ನಿಮ್ಮಲ್ಲಿ ಕೆಲವರಿಗೆ ಪದೋನ್ನತಿ ಆಗುವ ಬಗ್ಗೆ ಸುಳಿವು ಕೂಡ ದೊರೆಯಬಹುದು. ನಿಮಗೆ ಬೇಡದ ಸ್ಥಳಕ್ಕೆ ಈಗಾಗಲೇ ವರ್ಗಾವಣೆ ಆಗಿದೆ ಎಂದಾಗಿದ್ದಲ್ಲಿ ಅದು ರದ್ದಾಗುವಂಥ ಎಲ್ಲ ಸಾಧ್ಯತೆಗಳು ಕಾಣುತ್ತಿವೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಕುಟುಂಬದ ವಿಚಾರಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಎಂಬುದು ಗಮನಕ್ಕೆ ಬರುತ್ತಿದೆ. ನಿಮಗೆ ವರ್ಷಗಳ ಹಿಂದೆ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗಳು ಮರುಕಳಿಸುವ ಸಾಧ್ಯತೆಗಳು ಕಂಡುಬರುತ್ತಿದೆ. ಹೀಗೇನಾದರೂ ಆದಲ್ಲಿ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರಗಳನ್ನು ಪಡೆದುಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ ಪರಿಸ್ಥಿತಿ ಬಿಗಡಾಯಿಸಿ, ಆತಂಕ ಹೆಚ್ಚಾಗುವ ಸಾಧ್ಯತೆಗಳಿವೆ. ನಾನು ಯಾರನ್ನು ಬೇಕಾದರೂ ಒಪ್ಪಿಸುತ್ತೇನೆ ಎಂಬ ಧೋರಣೆ ಈ ವಾರ ಬೇಡ. ಇನ್ನು ಗಡುವಿನೊಳಗೆ ಮಾಡಬೇಕಾದ ಕೆಲಸಗಳು ಯಾವುವು ಎಂಬುದರ ಬಗ್ಗೆ ಕೂಡ ಹೆಚ್ಚಿನ ಗಮನವನ್ನು ನೀಡಿ. ಆಮೇಲೆ ಮಾಡಿದರಾಯಿತು, ಇನ್ನೂ ಸಮಯವಿದೆ ಎಂದೆಲ್ಲ ಅಂದುಕೊಂಡು ಮುಂದಕ್ಕೆ ಹಾಕಿದಲ್ಲಿ ಆ ನಂತರ ವಿಪರೀತವಾದ ಒತ್ತಡ ಎದುರಿಸಬೇಕಾಗುತ್ತದೆ. ನಿಮ್ಮ ನಿಷ್ಠೆ, ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಮಾಡುತ್ತಾ ನಿಮ್ಮನ್ನು ಕೆರಳಿಸುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ಅಂಥವರಿಗೆ ಮಾತಿನ ಮೂಲಕವೇ ಉತ್ತರ ಹೇಳಬೇಕು ಎಂದು ಹೊರಡಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಮಾನಸಿಕ ನೆಮ್ಮದಿ ಸಹ ಹಾಳಾಗುತ್ತದೆ. ಕೃಷಿಕರಿಗೆ ನಿಮ್ಮ ಸ್ವಭಾವದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಿದೆ ಎಂದು ಅನ್ನಿಸುವುದಕ್ಕೆ ಶುರು ಆಗುತ್ತದೆ. ಹಣಕಾಸಿನ ವಿಷಯಕ್ಕೆ ಪ್ರಾಮುಖ್ಯ ಹೆಚ್ಚಾಗಲಿದೆ. ನಿಮ್ಮದೇ ಕೈಯಿಂದ ಹಣ ಹಾಕಿಕೊಂಡು ಮಾಡಿದ ಕೆಲಸವೊಂದರಲ್ಲಿ ಬಾಕಿ ಉಳಿದ ಮೊತ್ತ ಈ ವಾರ ನಿಮ್ಮ ಕೈ ಸೇರಬಹುದು. ದೂರಾಲೋಚನೆಯಿಂದ ತೆಗೆದುಕೊಂಡ ನಿರ್ಧಾರದಿಂದ ದೀರ್ಘ ಕಾಲದಲ್ಲಿ ಉತ್ತಮ ಫಲಿತಾಂಶ ದೊರೆಯಲಿದೆ ಎಂಬುದು ನಿಮಗೆ ಖಾತ್ರಿ ಆಗುತ್ತದೆ. ನಿಮ್ಮ ನೆನಪಿನ ಶಕ್ತಿ ಈ ವಾರ ಬಹಳ ಮುಖ್ಯವಾಗುತ್ತದೆ. ಯಾವುದಾದರೂ ಕೆಲಸ ಬಾಕಿ ಉಳಿಸಿ, ಮರೆತೆ ಕ್ಷಮಿಸಿ ಎಂದೆಲ್ಲ ಹೇಳುವ ಸನ್ನಿವೇಶ ಎದುರಾಗದಂತೆ ನೋಡಿಕೊಳ್ಳಿ. ಕೃಷಿಯ ಜತೆಗೆ ಲೇವಾದೇವಿ ವ್ಯವಹಾರವನ್ನೂ ಮಾಡುವವರಿಗೆ ಮುಖ್ಯ ದಾಖಲೆ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕಾಗುತ್ತದೆ. ವೃತ್ತಿನಿರತರಿಗೆ ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ನಿಮ್ಮಿಂದ ಕೆಲವರಿಗೆ ಸಂಬಳಕ್ಕೆ ಕತ್ತರಿ ಬೀಳಬಹುದು ಅಥವಾ ನೀವು ಕೆಲವರನ್ನು ಹುದ್ದೆಯಿಂದಲೇ ತೆಗೆಯುವಂಥ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯ ವರ್ತನೆ, ಧೋರಣೆ ನಿಮ್ಮಲ್ಲಿ ಚಿಂತೆ ಹಾಗೂ ಸಿಟ್ಟು ಉಂಟು ಮಾಡಬಹುದು. ಇದನ್ನು ಎಲ್ಲರ ಮೇಲೂ ತೋರಿಸದಿರಿ. ವಿದ್ಯಾರ್ಥಿಗಳು ನೀವು ಈ ಕೂಡಲೇ ತೀರ್ಮಾನವನ್ನು ಹೇಳಿಬಿಡಬೇಕು ಎನ್ನುವಂಥ ಯಾವ ವಿಚಾರಕ್ಕೂ ನಿರ್ಧಾರವನ್ನು ಹೇಳದಿರುವುದು ಉತ್ತಮ. ಇದರಿಂದ ಲಾಭ ಸಿಕ್ಕೀತು ಎಂದು ಮೇಲ್ನೋಟಕ್ಕೆ ಕಾಣುವ ವಿಚಾರಗಳನ್ನೇ ನೆಚ್ಚಿಕೊಂಡರೆ ಸಮಸ್ಯೆಗೆ ಸಿಕ್ಕಿ ಬೀಳುತ್ತೀರಿ. ಇನ್ನು ಲೋಕಾಭಿರಾಮದ ಮಾತುಗಳನ್ನೇ ಆಡುವಾಗಲೂ ಈ ಹಿಂದಿನ ಇತರರ ತಪ್ಪು- ಅಪಸವ್ಯಗಳನ್ನು ಎತ್ತಾಡಬೇಡಿ. ಮಹಿಳೆಯರು ಹಳೇ ಘಟನೆಗಳನ್ನು, ಸನ್ನಿವೇಶಗಳು, ಈ ಹಿಂದೆ ಆಗಿದ್ದ ಅವಮಾನಗಳು ಇದನ್ನು ಸಾಧ್ಯವಾದಷ್ಟು ಮಟ್ಟಿಗೆ ನೆನಪಿಸಿಕೊಳ್ಳದಿರುವುದು ಉತ್ತಮ. ಏಕೆಂದರೆ ದ್ವೇಷ ಸಾಧನೆ ಎಂಬುದು ಈ ವಾರ ನಿಮಗೆ ಬಹಳ ಕಾಡಲಿದೆ. ಆದ್ದರಿಂದ ಮನಸ್ಸನ್ನು ಪ್ರಶಾಂತವಾಗಿ ಇರಿಸಿಕೊಳ್ಳಿ. ಏನೇನೋ ನೆನಪುಗಳು ಕಾಡುತ್ತಿದ್ದಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ.

ಲೇಖನ- ಎನ್‌.ಕೆ.ಸ್ವಾತಿ