ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಅಕ್ಟೋಬರ್ 22ರಿಂದ 28ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ಸಿಸಿಟಿವಿ ಕ್ಯಾಮೆರಾ ಖರೀದಿಸುವ ಬಗ್ಗೆ, ಬಾಗಿಲಿನ ಮುಂದೆ ಕಬ್ಬಿಣದ ಮತ್ತೊಂದು ಬಾಗಿಲನ್ನು ಹಾಕಿಸುವುದಕ್ಕೆ ಅಥವಾ ಕಾಂಪೌಂಡ್ ಸುತ್ತ ಗ್ರಿಲ್ ಹಾಕಿಸುವುದರ ಬಗ್ಗೆ ಈ ವಾರ ತೀರ್ಮಾನವನ್ನು ಮಾಡಲಿದ್ದೀರಿ ಅಥವಾ ಇನ್ನೂ ಸ್ಪಷ್ಟವಾಗಿ ಹೇಳಬೇಕು ಅಂದರೆ, ಮನೆಯ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಬೇರೆ ಏನಾದರೂ ಮಾಡುವಂಥ ಸಾಧ್ಯತೆ ಇದೆ. ಹೀಗೆ ಮಾಡುತ್ತೀರಿ ಎಂದಾದಲ್ಲಿ ಖರ್ಚು ನೀವಂದುಕೊಂಡಿದ್ದಕ್ಕಿಂತ ಕೈ ಮೀರಿ ಹೋಗಲಿದೆ. ಆದ್ದರಿಂದ ಬಜೆಟ್ ಲೆಕ್ಕಾಚಾರ ಸರಿಯಾಗಿ ಹಾಕಿಕೊಳ್ಳಿ. ನಿಮ್ಮ ಸ್ನೇಹಿತರೋ ಅಥವಾ ಸಂಬಂಧಿಕರೋ ನಿಮ್ಮ ಹೆಸರಲ್ಲಿ ಸಾಲ ಕೊಡಿಸುವಂತೆ ಕೇಳಬಹುದು ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ, ಸಾಲ ತೆಗೆದುಕೊಂಡು, ಅದನ್ನು ಇಎಂಐ ಆಗಿ ಪರಿವರ್ತಿಸುವುದಾಗಿ ಹೇಳಬಹುದು. ಒಪ್ಪಿಗೆ ಕೊಡುವ ಮುಂಚೆ ಒಂದಕ್ಕೆ ನಾಲ್ಕು ಸಲ ಆಲೋಚಿಸಿ. ಕೃಷಿಕರಾದವರು ಕುಟುಂಬದ ಸಲುವಾಗಿ ಹೆಚ್ಚಿನ ಸಮಯವನ್ನು ಇಡಬೇಕು ಎಂದು ಆಲೋಚನೆ ಮಾಡಲಿದ್ದೀರಿ. ಇನ್ನು ಮನೆಯಲ್ಲಿನ ಸದಸ್ಯರಿಗಾಗಿ ಬಟ್ಟೆ ಖರೀದಿಸುವುದಕ್ಕೆ ಹಣ ಖರ್ಚು ಮಾಡಲಿದ್ದೀರಿ. ಇದರಿಂದ ನಿಮ್ಮ ಮನಸ್ಸಿಗೆ ಸಂತೋಷ ಸಿಗಲಿದೆ. ಬೆಳ್ಳಿ ಒಡವೆ ಅಥವಾ ದೀಪ, ತಟ್ಟೆ ಇಂಥದ್ದನ್ನು ಖರೀದಿಸುವಂಥ ಯೋಗ ಸಹ ಇದೆ. ಅಚ್ಚರಿ ಎಂಬಂತೆ ನಿಮ್ಮ ಹಳೇ ಸ್ನೇಹಿತ ಅಥವಾ ಸ್ನೇಹಿತೆಯರನ್ನು ಭೇಟಿ ಆಗಲಿದ್ದೀರಿ. ವೃತ್ತಿನಿರತರು ಇತರರನ್ನು ನಂಬಿ ಕೆಲಸ ವಹಿಸಲೇಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ಮನಸ್ಸಿಲ್ಲದ ಮನಸ್ಸಲ್ಲಿ ವಹಿಸಿದ ಜವಾಬ್ದಾರಿ ಅಥವಾ ಕೆಲಸಗಳಿಗೆ ಒಂದಕ್ಕೆ ಎರಡರಷ್ಟು ಖರ್ಚು, ಜತೆಗೆ ಸಮಯ ಸಹ ವ್ಯರ್ಥ ಆಗಿ, ಬೇಸರ ಆಗಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಕೂಡಿಸಿಟ್ಟಿದ್ದ ಹಣವನ್ನು ತೆಗೆದು, ಬೇರೆಯದ್ದಕ್ಕೆ ಬಳಸಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ನೀವು ಕೊಟ್ಟಿರುವ ಸಾಲವನ್ನು ವಾಪಸ್ ಕೇಳಲೇಬೇಕಾದ ಸನ್ನಿವೇಶ ಎದುರಾಗಲಿದ್ದು, ಹೇಗೆ ಕೇಳಬೇಕು ಎಂದು ಗೊಂದಲಕ್ಕೆ ಬೀಳುತ್ತೀರಿ. ವಿದ್ಯಾರ್ಥಿಗಳಿಗೆ ನಿಮ್ಮನ್ನು ಬಹಳ ಹತ್ತಿರದವರೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದೆನಿಸುವುದಕ್ಕೆ ಶುರುವಾಗುತ್ತದೆ. ಹಳೇ ಘಟನೆಗಳನ್ನು ತಳುಕು ಹಾಕಿಕೊಂಡು ಆಲೋಚಿಸುವುದಕ್ಕೆ ಶುರು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಹೀಗೆ ಮಾಡುತ್ತಿರುವವರ ಬಳಿಯೇ ನೇರವಾಗಿ ಕೇಳಿಯೂ ಬಿಡುವ ಸಾಧ್ಯತೆ ಇದೆ. ಮಹಿಳೆಯರಿಗೆ ನಿಮ್ಮ ಸ್ವಂತ ವಿಷಯಗಳಲ್ಲಿ ಇತರರು ವಿಪರೀತ ಆಸಕ್ತಿ ತೋರಿಸುತ್ತಿದ್ದಾರೆ, ಮೂಗು ತೂರಿಸುತ್ತಿದ್ದಾರೆ ಎಂದು ಎನಿಸುವುದಕ್ಕೆ ಶುರುವಾಗುತ್ತದೆ. ಇದೇ ಕಾರಣಕ್ಕೆ ನೀವು ಕೂಗಾಟ- ಕಿರುಚಾಟ ಕೂಡ ಮಾಡಬಹುದು. ಸಾಧ್ಯವಾದಷ್ಟು ಎದುರಿನವರ ಮನಸ್ಸಿಗೆ ನೋವಾಗದಂತೆ ಹೇಳುವುದಕ್ಕೆ ಪ್ರಯತ್ನಿಸಿ.
ಹಣದ ದೃಷ್ಟಿಯಿಂದ, ಜವಾಬ್ದಾರಿ ಕಾರಣದಿಂದ ಈಗಿರುವುದಕ್ಕಿಂತ ಭಾರೀ ಏರಿಕೆ ಆಗುವಂಥ ಕೆಲಸ ನಿಮಗೆ ಸ್ನೇಹಿತರು ಅಥವಾ ಗುರು ಸಮಾನರಾದವರು ಹೇಳುವ ಸಾಧ್ಯತೆ ಇದೆ. ಒಪ್ಪಿಕೊಳ್ಳುವ ಮುನ್ನ ನಿಮ್ಮ ವೈಯಕ್ತಿಕ ಜವಾಬ್ದಾರಿ ಹಾಗೂ ಸವಾಲುಗಳನ್ನು ಒಮ್ಮೆ ಪರಾಮರ್ಶೆ ಮಾಡಿಕೊಳ್ಳಿ. ಸಂಗಾತಿಯ ಜತೆಗೆ ಮಾತುಕತೆ ಆಡುವಾಗ ಹೊಳೆಯುವ ಹೊಸ ಆಲೋಚನೆಗಳನ್ನು ಜಾರಿಗೆ ತರುವುದಕ್ಕೆ ಯತ್ನಿಸಿದರೆ ಭವಿಷ್ಯದಲ್ಲಿ ಅನುಕೂಲ ಇದೆ. ಆಹಾರ ಪಥ್ಯ, ದೇಹದ ತೂಕ, ಆರೋಗ್ಯದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನಿಮ್ಮಲ್ಲಿ ಕೆಲವರು ಮನೆಗೆ ಹೋಮ್ ಥಿಯೇಟರ್ ಅಂಥದ್ದನ್ನು ಖರೀದಿ ಮಾಡುವಂಥ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಿ ಎಂದಾದರೆ ಮನಸ್ಸಿನ ಮೇಲೆ ಹತೋಟಿ ಇರುವುದು ಮುಖ್ಯ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಇನ್ನೇನು ಸಂಬಂಧ ಗಟ್ಟಿಯಾಯಿತು ಎಂದೆನಿಸುವುದು ಕೈ ತಪ್ಪಿ ಹೋಗುವಂಥ ಸಾಧ್ಯತೆಯಿದೆ. ಕೃಷಿಕರಾಗಿದ್ದಲ್ಲಿ ಇತರರ ಪಾಲಿಗೆ ನೀವು ಬೆರಗು ಮೂಡಿಸುವಂಥ ವ್ಯಕ್ತಿ ಆಗುತ್ತೀರಿ. ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮಗಾಗಿ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ವೃತ್ತಿನಿರತರಾಗಿದ್ದಲ್ಲಿ ಹಲವರು ಬೇಡ ಅಂದಾಗಲೂ ನೀವು ಪಟ್ಟು ಹಿಡಿದು ಮಾಡಿದ ಕೆಲಸದ ಶುಭ ಫಲವನ್ನು ಈ ವಾರ ನೀವು ಕಾಣಲಿದ್ದೀರಿ. ದೊಡ್ಡ ದೊಡ್ಡ ಜವಾಬ್ದಾರಿಗಳು ಹೆಗಲಿಗೆ ಬೀಳುವಂಥ ಸಮಯ ಇದು. ಮನೆ ಬದಲಾವಣೆಗೆ ಅಥವಾ ಮಕ್ಕಳ ಶಾಲೆಯನ್ನು ಬದಲಾಯಿಸಬೇಕು ಎಂದುಕೊಳ್ಳುತ್ತಿರುವವರಿಗೆ ನಿಮ್ಮ ನಿರೀಕ್ಷೆಯಂತೆಯೇ ಬೆಳವಣಿಗೆಗಳು ಕಾಣಲಿವೆ. ದ್ವಿಚಕ್ರ ವಾಹನ ಅಥವಾ ಕಾರು ಖರೀದಿ ಮಾಡುವುದಕ್ಕೆ ಹಣಕಾಸು ಹೊಂದಿಸಲು ಪ್ರಯತ್ನಿಸುತ್ತಿದ್ದಲ್ಲಿ ಅನುಕೂಲ ಆಗಲಿದೆ. ವಿದ್ಯಾರ್ಥಿಗಳು ನಿಮ್ಮ ಬಳಿ ಇರುವ ವಸ್ತುಗಳನ್ನು, ಅದರಲ್ಲೂ ಗ್ಯಾಜೆಟ್, ಟ್ಯಾಬ್ ಲೆಟ್ ಈ ಥರದ ವಸ್ತುಗಳನ್ನು ಜಾಗ್ರತೆಯಿಂದ ನೋಡಿಕೊಳ್ಳಿ. ಒಂದು ವೇಳೆ ಒಂದು ಊರಿಂದ ಮತ್ತೊಂದು ಊರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಏನಾದರೂ ಪ್ರಯಾಣಿಸಬೇಕು ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ನಿಗಾ ಮಾಡಿ. ಇಲ್ಲದಿದ್ದಲ್ಲಿ ನಷ್ಟ ಅನುಭವಿಸುತ್ತೀರಿ. ಮಹಿಳೆಯರಿಗೆ ದೈಹಿಕ ಪರಿಶ್ರಮ ಹೆಚ್ಚಾಗಲಿದೆ. ಯಾವುದೇ ಕೆಲಸ ಮಾಡುವ ಮುಂಚೆ ಸರಿಯಾದ ಯೋಜನೆ ಮಾಡುವುದು ಮುಖ್ಯ. ಎದುರಿಗಿರುವ ವ್ಯಕ್ತಿಯ ಸಾಮರ್ಥ್ಯವನ್ನು ತಿಳಿದುಕೊಳ್ಳದೆ ಯಾವುದೇ ಆತುರದ ತೀರ್ಮಾನವನ್ನು ತೆಗೆದುಕೊಳ್ಳದಿರಿ. ವಾಹನಗಳು ಇದ್ದಲ್ಲಿ ದುರಸ್ತಿಗಾಗಿ ಹಣ ಖರ್ಚಾಗುವಂಥ ಯೋಗ ಇದೆ. ಇತರರಿಂದ ಶಿಫಾರಸು ಮಾಡಿಸುವ ಮೂಲಕ ಕೆಲವು ಅನುಕೂಲಗಳು ದೊರೆಯಲಿವೆ. ಸಂಗಾತಿ ಜತೆಗೆ ಮಾತುಕತೆ ಆಡುವಾಗ ಎಚ್ಚರಿಕೆ ಇರಲಿ.
ತುಂಬ ಕಠಿಣ ಎಂದು ಇತರರು ನಿರ್ಧಾರ ಮಾಡಿಯೇ ಬಿಟ್ಟಿದ್ದ ಸಂಗತಿಗಳನ್ನು ಬಹಳ ಸರಳವಾಗಿ ವಿವರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ. ಹೊಸ ಬಟ್ಟೆ, ಆಭರಣ- ಅದರಲ್ಲೂ ಬೆಳ್ಳಿ ಆಭರಣವನ್ನು ಖರೀದಿಸುವಂಥ ಯೋಗ ನಿಮಗಿದೆ. ಇನ್ನು ನಿಮಗೆ ಕೆಲವರು ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಗೇಟೆಡ್ ಕಮ್ಯುನಿಟಿಯಲ್ಲಿ ನಿವೇಶನ ಹುಡುಕುತ್ತಿರುವವರಿಗೆ ಮನಸ್ಸಿಗೆ ಒಪ್ಪುವಂಥದ್ದು ದೊರೆಯಲಿದೆ. ಪ್ರಯಾಣದ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದೇ ಸಮಯದಲ್ಲಿ ಹಣವನ್ನು ಉತ್ತಮ ರಿಟರ್ನ್ ಬರುವ ಕಡೆಗೆ ಹೂಡಿಕೆ ಸಹ ಮಾಡುವ ಕಡೆಗೆ ಚಿಂತಿಸಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ. ಸ್ನೇಹಿತರು- ಸಂಬಂಧಿಕರು ನೀಡುವ ಮಾಹಿತಿ ಬಹಳ ಉಪಯುಕ್ತವಾಗಲಿದೆ. ಕೃಷಿಕರಿಗೆ ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಯಾವುದಕ್ಕೆ ಹೌದು ಎನ್ನಬೇಕು ಹಾಗೂ ಯಾವುದಕ್ಕೆ ಇಲ್ಲ ಎನ್ನಬೇಕು ಎಂಬ ಬಗ್ಗೆ ಸ್ಪಷ್ಟತೆಯನ್ನು ಇರಿಸಿಕೊಳ್ಳಿ. ಇತರರ ಸಾಮರ್ಥ್ಯವನ್ನು ನಂಬಿಕೊಂಡು, ಹೂಂ ಅಂದುಬಿಡಬೇಡಿ. ಯಾವ ವಿಚಾರವಾದರೂ ದುಡ್ಡು- ಕಾಸಿನ ವಿಚಾರವನ್ನು ಆರಂಭದಲ್ಲಿಯೇ ಮಾತನಾಡಿಕೊಂಡು, ಮುಂದುವರಿಯಿರಿ. ವೃತ್ತಿನಿರತರಾಗಿದ್ದಲ್ಲಿ ನಿಮ್ಮ ಸಾಮರ್ಥ್ಯದ ಬಗ್ಗೆ ಅನುಮಾನ ಇರುವಂಥವರು ಅಥವಾ ಈಗಾಗಲೇ ಅದೇ ಕಾರಣಕ್ಕೆ ಹೀಗಳೆದವರಿಗೆ ಸರಿಯಾದ ಉತ್ತರವನ್ನು ಕೆಲಸದ ಮೂಲಕವೇ ನೀಡಲಿದ್ದೀರಿ. ಯಾವುದಾದರೂ ಪ್ರಾಜೆಕ್ಟ್ ಗೆ ನಿಮ್ಮನ್ನು ಮುಖ್ಯಸ್ಥರನ್ನಾಗಿ ಮಾಡುವ ಕುರಿತಂತೆ ಸೂಚನೆ ನೀಡಲಿದ್ದಾರೆ. ಅದೇ ವೇಳೆ ಅಲ್ಪಾವಧಿಗಾದರೂ ತರಬೇತಿ ಪಡೆದುಕೊಳ್ಳಬೇಕು ಎಂಬ ವಿಚಾರವನ್ನು ಸಹ ಹೇಳಲಿದ್ದಾರೆ. ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ. ವಿದ್ಯಾರ್ಥಿಗಳು ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ. ಇಷ್ಟು ಸಮಯ ಹವ್ಯಾಸ ಎಂದಿರುವುದು ನಿಮ್ಮ ಪಾಲಿಗೆ ದೊಡ್ಡ ಆದಾಯ ತರುವಂತೆ ಮಾರ್ಪಡುವ ಸಾಧ್ಯತೆಗಳಿವೆ. ಮಹಿಳೆಯರು ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಉದ್ಯೋಗಸ್ಥರಾಗಿದ್ದಲ್ಲಿ ಕೆಲಸದ ಸ್ಥಳದಲ್ಲಿ ಈ ಹಿಂದೆ ನಡೆದಿದ್ದ ಘಟನೆಯೊಂದಕ್ಕೆ ಬೇರೆಯದೇ ವ್ಯಾಖ್ಯಾನ ಸಿಕ್ಕಿ, ನಿಮಗೆ ಮುಜುಗರ ಮಾಡುವುದಕ್ಕೆ ಪ್ರಯತ್ನಿಸಬಹುದು. ಇಂಥ ಸನ್ನಿವೇಶದಲ್ಲಿ ಆತುರಕ್ಕೆ ಬಿದ್ದು, ಪ್ರತಿಕ್ರಿಯೆ ನೀಡುವುದಕ್ಕೆ ಹೋಗಬೇಡಿ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಸವಾಲುಗಳು ಎದುರಾಗಲಿವೆ.
ಪುಷ್ಕಳವಾದ ಊಟ- ತಿಂಡಿಗಳನ್ನು ಸವಿಯುವಂಥ ಯೋಗ ಇದೆ. ನೀವು ನಿರೀಕ್ಷೆ ಕೂಡ ಮಾಡದ ರೀತಿಯಲ್ಲಿ ಹಳೇ ಗೆಳೆಯ- ಗೆಳತಿಯರು ಭೇಟಿ ಆಗಲಿದ್ದಾರೆ. ದೂರ ಪ್ರಯಾಣಕ್ಕೆ ತೆರಳಿದವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಅನುಕೂಲಗಳು ಒದಗಿ ಬರಲಿವೆ. ವಿವಾಹ ವಯಸ್ಕರಾಗಿದ್ದಲ್ಲಿ ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರು, ಸ್ನೇಹಿತರ ನೆರವಿನಿಂದ ಸಂಬಂಧಗಳು ಗಟ್ಟಿಯಾಗುವಂಥ ಸಾಧ್ಯತೆ ಇದೆ. ಖರ್ಚಿನ ವಿಚಾರಕ್ಕೆ ಸಂಗಾತಿ ಜತೆಗೆ ಅಭಿಪ್ರಾಯ ಭೇದಗಳು ಮೂಡಬಹುದು. ಒಬ್ಬರೇ ಎಲ್ಲ ತೀರ್ಮಾನಗಳನ್ನು ಕೈಗೊಳ್ಳುತ್ತೀರಿ ಎಂದು ನಿಮ್ಮ ಬಗ್ಗೆ ಆಕ್ಷೇಪಗಳು ಕೇಳಿಬರಲಿವೆ. ಹೊಸ ಬಟ್ಟೆ, ಆಭರಣಗಳನ್ನು ಕಂತುಗಳಲ್ಲಿ ಖರೀದಿಸುವುದಕ್ಕೆ ಮನಸ್ಸಿಲ್ಲದಿದ್ದರೂ ಕೊಳ್ಳಲೇಬೇಕಾದ ಸನ್ನಿವೇಶ ಎದುರಾಗಲಿದೆ. ಕುಟುಂಬದ ಕೆಲವು ಸದಸ್ಯರಿಗಾಗಿ ಹೆಲ್ತ್ ಇನ್ಷೂರೆನ್ಸ್ ಖರೀದಿ ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೀರಿ. ಕೃಷಿಕರಾಗಿದ್ದಲ್ಲಿ ಒಂದೇ ಆದಾಯ ಮೂಲವನ್ನು ನೆಚ್ಚಿಕೊಂಡಿದ್ದರೆ ಆಗಲ್ಲ ಎಂದೆನಿಸುವುದಕ್ಕೆ ಶುರು ಆಗುತ್ತದೆ. ನಿಮ್ಮ ಬಳಿ ಈ ಹಿಂದೆಯೇ ಪ್ರಸ್ತಾವ ಏನಾದರೂ ಬಂದಿದ್ದಲ್ಲಿ ಆ ಬಗ್ಗೆ ಆಲೋಚಿಸಲಿದ್ದೀರಿ. ಉದ್ಯಮಿಗಳು, ವ್ಯವಹಾರಸ್ಥರು ಸದ್ಯಕ್ಕೆ ಟ್ರೆಂಡ್ ನಲ್ಲಿರುವಂಥ ಸಂಗತಿಗಳ ಬಗ್ಗೆ ಚರ್ಚೆ, ಅಧ್ಯಯನ ಮಾಡುವುದಕ್ಕೆ ಆರಂಭಿಸಲಿದ್ದೀರಿ. ಇತರರ ಮೂಲಕ ಹಣದ ಹೂಡಿಕೆ ಮಾಡಿಸುವ ಸಲುವಾಗಿ ಬಲವಾದ ಪ್ರಯತ್ನಗಳನ್ನು ಹಾಕಲಿದ್ದೀರಿ. ಯಾವುದೇ ಕೆಲಸಕ್ಕೂ ನೀವೇ ಮಾತುಕತೆಗೆ ಮುಂದಾಗಿ. ಇತರರನ್ನು ನೆಚ್ಚಿಕೊಂಡು ಏನೂ ಮಾಡುವುದಕ್ಕೆ ಹೋಗಬೇಡಿ. ನಿಮ್ಮ ಯೋಜನೆಗಳನ್ನು ಯಾರ ಜತೆಗೆ ಚರ್ಚೆ ಮಾಡುವುದಕ್ಕೆ ಹೋಗದಿರಿ. ವೃತ್ತಿನಿರತರಾಗಿದ್ದಲ್ಲಿ ಎಲ್ಲವೂ ಆರಾಮವಾಗಿ ಸಾಗುತ್ತಿದೆ ಎಂಬ ಭಾವ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಜತೆಯಲ್ಲಿ ಕೆಲಸ ಮಾಡುವವರು ಅಥವಾ ನಿಮ್ಮ ಕೈ ಕೆಳಗೆ ಕೆಲಸ ಮಾಡುವವರು ಹಣಕಾಸಿನ ನೆರವು ಕೇಳುವಂಥ ಸಾಧ್ಯತೆಗಳಿವೆ. ಸೈಟು, ಮನೆ ಅಥವಾ ಕೃಷಿ ಜಮೀನು ಖರೀದಿ ಮಾಡಬೇಕು ಎಂದಿರುವವರು ಗೊಂದಲಕ್ಕೆ ಬೀಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಕಾನೂನು ವ್ಯಾಜ್ಯಗಳು ಇರುವ ಬಗ್ಗೆ ಮಾಹಿತಿ ಕೂಡ ಲಭ್ಯ ಆಗಬಹುದು. ಇತರರು ನೀಡುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ. ವಿದ್ಯಾರ್ಥಿಗಳು ಮಾತನಾಡುವಾಗ ಎದುರಿಗಿನ ವ್ಯಕ್ತಿಯ ಉದ್ದೇಶವೇನು ಎಂಬುದನ್ನು ಅರಿಯುವುದಕ್ಕೆ ಪ್ರಯತ್ನಿಸಿ. ಕೆಲವು ಸಂಗತಿಗಳು ಮೇಲುನೋಟಕ್ಕೆ ಕಾಣಿಸುವಷ್ಟು ಸಲೀಸಾಗಿರುವುದಿಲ್ಲ. ರಹಸ್ಯವಾಗಿ ಮಾಡಬೇಕಾದ ಕೆಲಸಗಳು ಯಾವುವು ಎಂಬುದಕ್ಕೆ ವಿವೇಚನೆಯನ್ನು ಬಳಸಿ. ಇತರರು ನಿಮ್ಮ ಬಳಿ ಹೇಳಿದ ಸಂಗತಿಯನ್ನು ಇನ್ನೊಬ್ಬರಿಗೆ ಹೇಳದಂತೆ ಜಾಗ್ರತೆಯನ್ನು ವಹಿಸಿ. ಬಾಯಿ ಹುಣ್ಣಿನಂಥ ಸಮಸ್ಯೆಗಳು ಕಾಡಬಹುದು. ಉಷ್ಣ ಪದಾರ್ಥಗಳ ಸೇವನೆಯಿಂದ ದೂರ ಇರಿ. ಮಹಿಳೆಯರು ಉದ್ಯೋಗಕ್ಕಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅಥವಾ ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅವಕಾಶಗಳು ದೊರೆಯಲಿವೆ. ಈ ಹಿಂದೆ ಅರ್ಜಿ ಹಾಕಿಕೊಂಡಿದ್ದಿರಿ ಎಂದಾದಲ್ಲಿ ಇಂಟರ್ ವ್ಯೂಗೆ ಕರೆ ಬರಬಹುದು. ಮೊದಲ ಬಾರಿಗೆ ಎಂದು ಪ್ರಯತ್ನ ಮಾಡಿದ್ದ ಕೆಲಸಗಳು ಯಶಸ್ವಿ ಆಗಲಿವೆ. ಕುಟುಂಬಸ್ಥರು ಹೆಮ್ಮೆ ಪಡುವಂಥ ಸಹಾಯವನ್ನು ಇತರರಿಗೆ ಮಾಡಲಿದ್ದೀರಿ.
ನಿಮ್ಮ ಕೆಲಸ ಆಗಬೇಕು ಎಂಬ ಕಾರಣಕ್ಕೆ ಕೆಲವು ರಾಜೀ ಮಾಡಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮದು ಎಂಬಂಥ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ನೀವಾಗಿಯೇ ಮಾತು ಕೊಟ್ಟು ಅಸಾಧ್ಯ ಎನಿಸುವಂಥ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳದಿರಿ. ಸಿನಿಮಾ ರಂಗದಲ್ಲಿ ಇರುವವರಿಗೆ ಆಯ್ಕೆಯ ವಿಚಾರದಲ್ಲಿ ಗೊಂದಲಗಳು ಎದುರಾಗಬಹುದು. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಭಾವನಾತ್ಮಕವಾಗಿ ಸಿಲುಕಿಕೊಳ್ಳದಿರಿ. ದೂರ ಪ್ರಯಾಣಗಳು ದಿಢೀರ್ ಒಪ್ಪಿಕೊಳ್ಳಬೇಡಿ. ಇನ್ನು ಮನೆಯ ಹೊರಗಿನ ಊಟ- ತಿಂಡಿಗಳನ್ನು ಸಾಧ್ಯವಾದಷ್ಟೂ ತೆಗೆದುಕೊಳ್ಳಬೇಡಿ. ಮನೆಯ ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಹಣಕಾಸಿನ ಹರಿವಿನಲ್ಲಿ ಹಿನ್ನಡೆ ಆಗಬಹುದು. ನೀವು ನಿರೀಕ್ಷೆ ಮಾಡಿದ್ದ ಅಥವಾ ಪ್ರಯತ್ನ ಮಾಡಿದ್ದ ಮೂಲದಿಂದ ಹಣ ಬಾರದೇ ಹೋಗಬಹುದು. ನೀವು ಇದೆ ಅಂದುಕೊಂಡಿದ್ದ ದಾಖಲೆಗಳು ಸಮಯಕ್ಕೆ ದೊರೆಯದೇ ಆತಂಕಕ್ಕೆ ಕಾರಣ ಆಗಬಹುದು. ಸರ್ಕಾರಕ್ಕೆ ಸಲ್ಲಿಸಬೇಕಾದ ದಾಖಲಾತಿಗಳನ್ನು ಡೆಡ್ ಲೈನ್ ಒಳಗಾಗಿ ಸಲ್ಲಿಸುವ ಕಡೆಗೆ ಗಮನ ನೀಡಿ. ಕೃಷಿಕರು ನಿಮಗೆ ಸರಿ ಎನಿಸಿದ್ದನ್ನು ಖಂಡಿತವಾಗಿಯೂ ಈ ವಾರ ಅನುಸರಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಮನಸ್ಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅದರಿಂದ ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸಂಸಾರದ ಅಥವಾ ವೈಯಕ್ತಿಕ ವಿಚಾರವನ್ನು ಯಾರ ಜತೆಗೆ ಹಂಚಿಕೊಳ್ಳುತ್ತಿದ್ದೀರಿ ಎಂಬ ಬಗ್ಗೆ ಜಾಗ್ರತೆಯಿಂದ ಇರಬೇಕಾಗುತ್ತದೆ. ನಿಮ್ಮ ಹೆಸರನ್ನು ಇತರರು ದುರುಪಯೋಗ ಮಾಡಿಕೊಳ್ಳಬಹುದು, ಆದ್ದರಿಂದ ಇದಕ್ಕೆ ಅವಕಾಶ ಆಗುವಂಥ ಸನ್ನಿವೇಶ ಸೃಷ್ಟಿ ಮಾಡಿಕೊಳ್ಳದಿರಿ. ವೃತ್ತಿನಿರತರಿಗೆ ವಿವಿಧ ಮೂಲಗಳಿಂದ ಧನಪ್ರಾಪ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಹೂಡಿಕೆ ಮಾಡಿ, ಲಾಭದ ಪ್ರಮಾಣ ಕಡಿಮೆ ಆಗಿರುತ್ತದೋ ಅಥವಾ ಬರುವುದೇ ಅನುಮಾನ ಎಂದುಕೊಂಡಿರುವಂಥ ಮೊತ್ತ ನಿಮ್ಮ ಕೈ ಸೇರುವಂಥ ಯೋಗ ಇದೆ. ಅದೇ ರೀತಿ ವಿವಾಹಿತರಿಗೆ ಸಂತೋಷವಾಗಿ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಮಾತಿಗೆ ತೂಕ ಬರಲಿದೆ. ಶಿಫಾರಸುಗಳನ್ನು ಮಾಡಿ, ಇತರರಿಗೆ ಅನುಕೂಲ ಮಾಡಿಕೊಡಲಿದ್ದೀರಿ. ನಿಮ್ಮ ವೃತ್ತಿಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ಮಾಡಬೇಕು ಎಂದಿರುವವರು, ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎಂದುಕೊಂಡು ಪ್ರಯತ್ನಿಸುತ್ತಿರುವವರಿಗೆ ಅನುಕೂಲಗಳು ಕೂಡಿಬರಲಿವೆ. ವಿದ್ಯಾರ್ಥಿಗಳಿಗೆ ಆಪ್ತರ ಜತೆಗೇ ಭಿನ್ನಾಭಿಪ್ರಾಯ, ಮನಸ್ತಾಪ ಸೃಷ್ಟಿ ಆಗಬಹುದು. ಬಂಧುಗಳಿಂದ ಅವಮಾನ, ಪ್ರಾಣಿಗಳ ಕಡಿತ ಅನುಭವಿಸಬೇಕಾಗುತ್ತದೆ. ವಾಹನಗಳ ದುರಸ್ತಿ, ಸರ್ವೀಸ್ ಇಂಥದ್ದಕ್ಕೆ ಕೈ ಮೀರಿದ ಖರ್ಚುಗಳು ಬರಲಿವೆ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸಬೇಕು ಎಂದಿದ್ದಲ್ಲಿ ಆ ಆಲೋಚನೆಯನ್ನು ಕೈ ಬಿಡುವುದು ಉತ್ತಮ. ಮಹಿಳೆಯರು ನನಗ್ಯಾಕೆ ಬೇಕು ಇನ್ನೊಬ್ಬರು ವಿಚಾರ ಎಂದು ನಿಮ್ಮಷ್ಟಕ್ಕೆ ನೀವಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ನಿಮ್ಮ ಹೆಸರನ್ನು ಎಳೆದು ತಂದು, ಮಾತನಾಡಲೇ ಬೇಕಾದ ಸನ್ನಿವೇಶ ಎದುರಾಗಲಿದೆ. ಇಬ್ಬರಲ್ಲಿ ಒಬ್ಬರ ಬಗ್ಗೆ ಮಾತ್ರ ಅಭಿಪ್ರಾಯ ವ್ಯಕ್ತಪಡಿಸಬೇಕಾಗುತ್ತದೆ ಎಂಬ ಪರಿಸ್ಥಿತಿ ಬಂದಲ್ಲಿ ಸುಮ್ಮನಿರುವುದು ಉತ್ತಮ.
ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಇದು ಬಹಳ ಮುಖ್ಯವಾದ ವಾರವಾಗಿರುತ್ತದೆ. ಮನೆಯಲ್ಲಿ ಮಾತುಕತೆಯಾಗಿ, ನಿಮ್ಮ ಮದುವೆಗೆ ಒಪ್ಪಿಗೆ ಸಿಕ್ಕಿಯೂ ಬಿಡಬಹುದು. ಅಚಾನಕ್ ಆಗಿ ಸಿಕ್ಕಂಥ ಕಾಂಟ್ಯಾಕ್ಟ್ ನಿಂದ ಬಹಳ ದೊಡ್ಡ ಮಟ್ಟದ ಅನುಕೂಲ ಒದಗಿಬರಲಿದೆ. ನಿಮ್ಮ ವಾಹನ ನಿಲ್ಲಿಸುವಾಗ ಮಾಮೂಲಿಗಿಂತ ಹೆಚ್ಚಿನ ಲಕ್ಷ್ಯ ವಹಿಸಬೇಕಾಗುತ್ತದೆ. ಏಕೆಂದರೆ ಇತರ ವಾಹನಗಳು ತಾಗಿ ಅಥವಾ ಬೇರೆ ಎಲ್ಲಾದರೂ ವಾಹನದ ಪೇಂಟ್ ಹೋಗುವುದೋ ಅಥವಾ ಡೆಂಟ್ ಆಗುವುದೋ ಇಂಥ ಬೆಳವಣಿಗೆ ಆಗಲಿದೆ. ಇತರರ ವ್ಯವಹಾರಕ್ಕೆ ಮಧ್ಯವರ್ತಿಗಳಿಗೆ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಫಲ ದೊರೆಯಲಿದೆ. ನಿಮ್ಮಲ್ಲಿ ಕೆಲವರಿಗೆ ಚಿನ್ನದ ಒಡವೆಯೋ ಅಥವಾ ಗ್ಯಾಜೆಟ್ ಗಳೋ ಉಡುಗೊರೆಯಾಗಿ ಪಡೆದುಕೊಳ್ಳುವಂಥ ಯೋಗ ಸಹ ಇದೆ. ಸಾಧ್ಯವಾದಷ್ಟೂ ಆಡುವ ಮಾತಿನ ಮೇಲೆ ಒಂದಿಷ್ಟು ನಿಗಾ ಇರಿಸಿಕೊಳ್ಳಿ. ಕಡಿಮೆ ಮಾತನಾಡಿದಷ್ಟೂ ಲಾಭ ಹೆಚ್ಚಿಗೆ ದೊರೆಯಲಿದೆ. ಕಾರು ಅಥವಾ ಆಟೋ ಚಾಲಕರಿಗೆ ಸ್ವಂತ ವಾಹನವನ್ನು ಖರೀದಿಸುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಕೃಷಿಕರಿಗೆ ಈ ವಾರ ಏನನ್ನೋ ಸಾಧಿಸಿದಂಥ ಮಾನಸಿಕ ಸಮಾಧಾನ ಇರುತ್ತದೆ. ವೈಯಕ್ತಿಕವಾಗಿ ಬಹಳ ಮುಖ್ಯವಾಗಿದ್ದ ಜವಾಬ್ದಾರಿಯೊಂದು ನೀವಂದುಕೊಂಡ ರೀತಿಯಲ್ಲೇ ಪೂರ್ತಿ ಆಗುವಂಥ ಯೋಗ ಇದೆ. ಈ ಹಿಂದೆ ಮಾತುಕತೆ ಆಡಿ, ಅರ್ಧದಲ್ಲೇ ನಿಂತು ಹೋಗಿದ್ದ ಜಮೀನು ಖರೀದಿ ಅಥವಾ ಭೋಗ್ಯಕ್ಕೆ ಪಡೆಯುವಂಥ ಮಾತುಕತೆಗಳು ಮತ್ತೆ ಮುಂದುವರಿಯುವ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಒಮ್ಮತದಿಂದ ಆಗಬಹುದು ಎಂದು ನೀವಂದುಕೊಂಡಿದ್ದ ಕೆಲ ವಿಚಾರಗಳ ಬಗ್ಗೆ ಪರ- ವಿರೋಧ ಅಭಿಪ್ರಾಯಗಳು ವ್ಯಕ್ತ ಆಗಬಹುದು. ವೃತ್ತಿನಿರತರು ಸುಮ್ಮನೆ ಒಂದು ಪ್ರಯತ್ನ ಅನ್ನೋ ಹಾಗೆ ಭೇಟಿ ಮಾಡುವ ವ್ಯಕ್ತಿಯಿಂದ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ. ನಿಮ್ಮ ಸಂವಹನ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಇನ್ನೊಬ್ಬರ ಮೇಲೆ ಪ್ರಭಾವ ಬೀರಿ, ಕೆಲಸಗಳನ್ನು ಸಲೀಸಾಗಿ ಮಾಡಿಸಿಕೊಳ್ಳಲಿದ್ದೀರಿ. ಆಪ್ತರಿಗೆ ಅಥವಾ ಹತ್ತಿರದ ಬಂದುವೊಬ್ಬರಿಗೆ ಉಡುಗೊರೆಗಳನ್ನು ನೀಡುವಂಥ ಸಾಧ್ಯತೆ ಇದೆ. ಆದರೆ ನೆನಪಿಟ್ಟುಕೊಳ್ಳಿ, ಒಮ್ಮೆ ಹೇಳಿ ಸುಮ್ಮನಾಗಬೇಕಾದ ವಿಚಾರಗಳಿದ್ದಲ್ಲಿ ಪದೇಪದೇ ಹೇಳುವುದಕ್ಕೆ ಹೋಗದಿರಿ. ವಿದ್ಯಾರ್ಥಿಗಳಿಗೆ ಹತ್ತಾರು ವಿಚಾರಗಳು ತಲೆಯಲ್ಲಿ ಸುಳಿದಾಡುವುದಕ್ಕೆ ಆರಂಭವಾಗುತ್ತದೆ. ಘಟನೆಗಳೋ ಸನ್ನಿವೇಶಗಳೋ ಇಂಥದ್ದರ ಕಾರಣಕ್ಕೆ ಜನರ ಗುಣವನ್ನು ಅಳೆಯುವುದಕ್ಕೆ ಆರಂಭಿಸುತ್ತೀರಿ. ನೀವು ಹೌದೋ ಅಲ್ಲವೋ ಎಂದು ಇತರರು ಅಚ್ಚರಿ ಪಡುವ ಮಟ್ಟಿಗೆ ನಿಮ್ಮ ವರ್ತನೆ ಇರಲಿದೆ. ಯಾವುದೇ ವಿಚಾರವನ್ನು ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಮಹಿಳೆಯರಿಗೆ ನಿಮ್ಮ ಮಾತಿನಲ್ಲಿ ಒಂದು ಬಗೆಯ ಆಕರ್ಷಣೆ ಇರುತ್ತದೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳು ದೊರೆಯುವಂಥ ಸಾಧ್ಯತೆ ಇದೆ. ಈ ಹಿಂದೆ ನೀವು ಪಟ್ಟ ಕಷ್ಟದ ಫಲವಾಗಿ ದೊರೆತ ಯಶಸ್ಸನ್ನು ಗುರುತಿಸಿ, ನಿಮಗೆ ಉದ್ಯೋಗದ ಆಫರ್ ನೀಡಬಹುದು.
ನೀವು ಅಂದುಕೊಂಡಂತೆ ಏನೂ ಸಾಗುತ್ತಿಲ್ಲ ಎಂಬುದು ಆತಂಕದ ಸಂಗತಿ ಆಗಿರುತ್ತದೆ. ಸಾವಧಾನವಾಗಿ ಆಗುತ್ತಿದ್ದ ಕೆಲಸಗಳಲ್ಲಿ ದಿಢೀರನೆ ಅಡೆತಡೆಗಳು ಎದುರಾಗಬಹುದು. ನಿಮ್ಮ ಕೆಲಸದ ವೇಗಕ್ಕೆ ತಡೆ ಆಗುವಂಥ ಸನ್ನಿವೇಶಗಳು ಸಹ ಎದುರಾಗಲಿವೆ. ಮೊದಲೇ ಹೇಳಿಟ್ಟಿದ್ದರೂ ಅಗತ್ಯ ಇರುವಷ್ಟು ಸಂಖ್ಯೆಯ ಕೆಲಸಗಾರರು ಬಾರದಿರಬಹುದು, ಅಥವಾ ಏನಾದರೂ ನೆಪವೊಡ್ಡಿ ಇಡೀ ತಂಡವೇ ಚಕ್ಕರ್ ಹಾಕಿಬಿಡಬಹುದು. ಆದ್ದರಿಂದ ಯಾವುದೇ ಯೋಜನೆಗಳಿದ್ದರೂ ಅದನ್ನು ಸರಿಯಾಗಿ ಜಾರಿ ಮಾಡುವುದಕ್ಕೆ ಬೇಕಾದ ಸಂಪನ್ಮೂಲಗಳನ್ನು ಸರಿಯಾಗಿ ಕ್ರೋಡೀಕರಿಸುವ ಬಗ್ಗೆ ನಿಮ್ಮ ಆದ್ಯತೆ ಇರಲಿ. ಕುಟುಂಬದಲ್ಲಿ ಒಂದು ಬಗೆಯ ಒತ್ತಡದ ವಾತಾವರಣ ಕಂಡುಬರುತ್ತದೆ. ಹಣಕಾಸಿನ ವಿಚಾರಕ್ಕೆ ಜೋರುಜೋರಿನ ಮಾತುಕತೆಗಳಾಗಬಹುದು. ತಾಳ್ಮೆಯಿಂದ ಇರುವುದು ಮುಖ್ಯವಾಗುತ್ತದೆ. ಕೃಷಿಕರಿಗೆ ಸಂಬಂಧಿಕರು ಯಾಕಾದರೂ ಕರೆ ಮಾಡುತ್ತಾರೋ ಅಥವಾ ಯಾಕಾದರೂ ಮನೆಗೆ ಬರುತ್ತಾರೋ ಎಂದು ಬಹಳ ಬೇಸರ ಮಾಡಿಕೊಳ್ಳುವಂತಾಗುತ್ತದೆ. ಸಂಗಾತಿ ಜತೆಗೆ ಮಾತನಾಡುವಾಗ ಸಣ್ಣ ಸಂಗತಿಗೂ ಸಿಟ್ಟು ಮಾಡಿಕೊಂಡು, ನಿಮ್ಮ ಮೇಲೆ ರೇಗಾಡುವಂಥ ಸಾಧ್ಯತೆಗಳಿವೆ. ಇದೇ ವೇಳೆ ಸ್ನೇಹಿತರು ನಿಮ್ಮಿಂದ ನಿರೀಕ್ಷೆ ಮಾಡುವುದು ವಿಪರೀತ ಆಗುತ್ತದೆ. ಕೆಲಸವೇ ಇಲ್ಲದಿದ್ದರೂ ಬಹಳ ಕೆಲಸ ಮಾಡುತ್ತಿರುವಂತೆ ತೋರಿಸಿಕೊಳ್ಳುತ್ತಿದ್ದೀರಿ ಎಂಬ ರೀತಿಯಲ್ಲಿ ನಿಮ್ಮನ್ನು ಮೂದಲಿಸಬಹುದು. ಹೊಸ ಬಟ್ಟೆಯೋ ಅಥವಾ ಗೃಹ ಬಳಕೆ ವಸ್ತುವನ್ನೋ ಇತರರಿಗಾಗಿ ಖರೀದಿಸಿದ್ದಕ್ಕೆ ನೀವೇ ಹಣ ಕೊಟ್ಟು, ಇಟ್ಟುಕೊಳ್ಳಬೇಕಾಗುತ್ತದೆ. ವೃತ್ತಿನಿರತರಿಗೆ ದಮ್ಮಯ್ಯಗುಡ್ಡೆ ಹಾಕಿ ನಿಮ್ಮ ಬಳಿ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕೆಲವರು ಪ್ರಯತ್ನಿಸಲಿದ್ದಾರೆ. ಇದು ಈ ಕ್ಷಣದ ಅಗತ್ಯ. ಹಣಕಾಸಿನ ವಿಚಾರದಲ್ಲಿ ಯಾವುದೇ ರಾಜೀ ಮಾಡಿಕೊಳ್ಳದೆ ನೇರಾನೇರವಾಗಿ ಮಾತನಾಡಿ. ಏಕೆಂದರೆ, ನೀವು ಹಣಕ್ಕೆ ಬೇಡಿಕೆ ಇಡುವ ಸ್ಥಿತಿಯಲ್ಲಿ ಇರುತ್ತೀರಿ. ಇನ್ನು ನಿಮ್ಮ ವೃತ್ತಿಗೆ ಅಗತ್ಯ ಇರುವ ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಸಲಕರಣೆಗಳನ್ನು ಖರೀದಿ ಮಾಡುವಂಥ ಸಾಧ್ಯತೆ ಇದೆ. ಇವುಗಳನ್ನು ಕಡಿಮೆ ದುಡ್ಡಲ್ಲಿ ಖರೀದಿಸುವುದಕ್ಕೆ ಸ್ನೇಹಿತರು, ಸಂಬಂಧಿಕರು ಸಹಾಯ ಮಾಡುವುದಕ್ಕೆ ಸಾಧ್ಯತೆ ಇದೆ. ಅಥವಾ ಇದಕ್ಕೆ ಸಂಬಂಧಿಸಿದಂತೆ ಯಾರಾದರೂ ಪರಿಚಿತರು ಇದ್ದಾರಾ ಎಂಬುದನ್ನು ನೆನಪಿಸಿಕೊಳ್ಳಿ. ವಿದ್ಯಾರ್ಥಿಗಳಿಗೆ ನಿಮ್ಮ ಸ್ನೇಹಿತರ ವಲಯದಲ್ಲಿ ಅವಮಾನ, ನಿಮ್ಮ ಮೇಲೆ ವೃಥಾ ಆರೋಪಗಳು, ವಾದ- ವಿವಾದ ಆಗುವಂಥ ಸಾಧ್ಯತೆಗಳು ಹೆಚ್ಚು. ನಿಮ್ಮ ಬಗ್ಗೆ ಪೋಷಕರ ಬಳಿ ದೂರುಗಳು ಹೇಳುವವರ ಸಂಖ್ಯೆ ಹೆಚ್ಚಾಗಲಿವೆ. ದುರಭ್ಯಾಸಗಳು ಇವೆ ಅಂತಲೋ ದುಷ್ಟ ಜನರ ಸಹವಾಸ ಮಾಡುತ್ತಿದ್ದಾರೆ ಅಂತಲೋ ದೂರುಗಳು ಹೇಳುತ್ತಾರೆ. ನೀವೇನೂ ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಮಾಡುವಷ್ಟರಲ್ಲಿ ಹೈರಾಣಾಗುತ್ತೀರಿ. ಮಹಿಳೆಯರಿಗೆ ನರಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಡಲಿವೆ. ಈಗಾಗಲೇ ಅಂಥ ಸಮಸ್ಯೆಗಳು ಇದ್ದಲ್ಲಿ ಉಲ್ಬಣ ಆಗಲಿದೆ. ಯಾವುದೇ ಕೆಲಸ ಮಾಡುವಾಗ ಗಾಬರಿ ಗಾಬರಿ ಆಗುತ್ತದೆ. ಮುಖ್ಯ ಮಾಹಿತಿಯನ್ನು ನೀವೇ ಮಿಸ್ ಮಾಡಿಕೊಂಡು ಬಯ್ಯಿಸಿಕೊಳ್ಳುವ, ನಿಮ್ಮ ಕೈಯಿಂದಲೇ ಹಣ ಕಳೆದುಕೊಳ್ಳುವ ಯೋಗ ಸಹ ಇದೆ. ನಿಮ್ಮ ಅರಿವಿಗೆ ಬಾರದಂತೆಯೇ ಕೆಟ್ಟ ಬೈಗುಳ ಬಂದು, ಇತರರಿಗೆ ನಿಮ್ಮ ಬಗ್ಗೆ ಗೌರವ ಹೋಗಬಹುದು. ಸ್ನೇಹಿತರ ಜತೆಗೆ ಜಗಳ- ಕದನಗಳಾಗಿ, ಸ್ನೇಹ ಕಳೆದುಕೊಳ್ಳುವ ಯೋಗ ಇದೆ.
ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬಹಳ ಸಮಯದಿಂದಲೂ ಪ್ರಯತ್ನ ಮಾಡುತ್ತಿದ್ದ ಕೆಲಸವೊಂದರ ಬಗ್ಗೆ ಶುಭ ಸುದ್ದಿ ಕೇಳಿಬರಲಿದೆ. ವಸ್ತ್ರಾಭರಣ ಖರೀದಿ ಮಾಡುವಂಥ ಸಾಧ್ಯತೆಗಳಿವೆ. ಸೋದರ ಸಂಬಂಧಿಗಳಿಗಾಗಿ ನೀವು ಹಣ ಹಾಕಿ, ಕೆಲವು ವಸ್ತುಗಳನ್ನು ಕೊಡಿಸುವ ಸಾಧ್ಯತೆ ಇದೆ. ಷೇರು, ಮ್ಯೂಚುವಲ್ ಫಂಡ್ಸ್ ಗಳನ್ನು ಮಾರಾಟ ಮಾಡಬೇಕು ಎಂದು ಮುಂದಾದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಲಾಭ ದೊರೆಯುವ ಅವಕಾಶಗಳಿವೆ. ತಂದೆ ಅಥವಾ ತಂದೆಗೆ ಸಮಾನರಾದವರಿಗೆ ನೆರವಾಗಲಿದ್ದೀರಿ. ಈ ಹಿಂದೆ ಬಹಳ ಸಮಯದಿಂದ ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಗೆ ಸೂಕ್ತ ವೈದ್ಯೋಪಚಾರ ದೊರೆಯಲಿದೆ. ಕೂಡಿಟ್ಟಿದ್ದ ಹಣವನ್ನು ಸೂಕ್ತವಾದ ಕಡೆ ಹೂಡಿಕೆ ಮಾಡುವುದಕ್ಕೆ ಸ್ನೇಹಿತರು, ಪರಿಣತರ ನೆರವನ್ನು ಕೇಳುವಂಥ ಸಾಧ್ಯತೆ ಇದೆ. ಹೊಸ ರುಚಿಯ ಅಹಾರ ಪದಾರ್ಥವನ್ನೋ ಅಥವಾ ಮನೆಯಿಂದ ಹೊರಗೆ ಏನಾದರೂ ತಿನ್ನುವಂಥ ಪರಿಸ್ಥಿತಿಯಲ್ಲಿ ಗುಣಮಟ್ಟದ ಬಗ್ಗೆ ಲಕ್ಷ್ಯ ನೀಡಿ. ಕೃಷಿಕರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ಮಾರ್ಗ ಗೋಚರ ಆಗಲಿದೆ. ಬಹಳ ಸಮಯದಿಂದ ಕಾಡುತ್ತಿದ್ದ ದೈಹಿಕ ಬಾಧೆಗಳು ನಿವಾರಣೆ ಆಗುವುದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ. ವಾಹನಗಳ ಖರೀದಿಗಾಗಿ ಹಣಕಾಸು ಮತ್ತಿತರ ವಿವರಗಳನ್ನು ಕಲೆಹಾಕಲಿದ್ದೀರಿ. ನೀವು ಬರಲಾರದು ಎಂದುಕೊಂಡಿದ್ದ ಹಣವೊಂದು ಕೈ ಸೇರುವ ಸಾಧ್ಯತೆಗಳಿವೆ. ಸಂಪೂರ್ಣವಾಗಿ ಬರುತ್ತದೆ ಅಂತಲ್ಲದಿದ್ದರೂ ಸ್ವಲ್ಪವಾದರೂ ದೊರೆಯಬಹುದು. ವೃತ್ತಿನಿರತರಿಗೆ ಒಂದು ರೀತಿಯ ನೆಮ್ಮದಿ ನೆಲೆಸಲಿದೆ. ಅಂದುಕೊಂಡಿದ್ದನ್ನು ಮಾಡಿದ, ಹೇಳಬೇಕೆಂದಿದ್ದನ್ನು ಹೇಳಿದ ಸಮಾಧಾನ ನಿಮಗೆ ದೊರೆಯಲಿದೆ. ದೂರದ ಬಂಧುಗಳು ಹೊಸ ಸಂಗತಿಯೊಂದು ತಿಳಿಸಲಿದ್ದಾರೆ. ಇದು ನಿಮಗೆ ಭವಿಷ್ಯದಲ್ಲಿ ಹೇಗಾದರೂ ನೆರವಿಗೆ ಬರಲಿದೆ. ಇನ್ನು ನಿಮ್ಮ ಆಲೋಚನೆ, ನಡವಳಿಕೆ, ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ನಿಮ್ಮ ಶ್ರಮಕ್ಕೂ ದೊರೆಯುತ್ತಿರುವ ಪ್ರತಿಫಲಕ್ಕೂ ತಾಳೆಯೇ ಆಗದಷ್ಟು ಕಡಿಮೆ ಇದೆ ಎಂದು ಬಲವಾಗಿ ನಿಮ್ಮ ಮನಸಿಗೆ ಅನಿಸಲಿದೆ. ವಿದ್ಯಾರ್ಥಿಗಳು ನೀವು ಯಾರನ್ನೋ ಸ್ಪರ್ಧಿ ಅಂತ ಅಂದುಕೊಂಡು ಬಿಟ್ಟಿದ್ದರೆ ಅದನ್ನು ತಲೆಯಿಂದ ತೆಗೆದು ಹಾಕಬೇಕಾದ ವಾರ ಇದು. ಏಕೆಂದರೆ, ದೊಡ್ಡ ಅವಕಾಶ ನಿಮ್ಮೆದುರು ಕಾಯುತ್ತಾ ಇದೆ. ಆ ಕಡೆಗೆ ಲಕ್ಷ್ಯ ನೀಡಬೇಕು. ಸಣ್ಣ- ಪುಟ್ಟ ವಿಚಾರಗಳು, ಅನುಮಾನಗಳು, ಕೀಳರಿಮೆ ನಿಮ್ಮ ಅವಕಾಶದಿಂದ ದೂರಕ್ಕೆ ತಳ್ಳಬಾರದು. ವಿಷ್ಣು ಸಹಸ್ರನಾಮ ಶ್ರವಣ ಅಥವಾ ಪಠಣ ಮಾಡಿ, ಇದರಿಂದ ಮನಸ್ಸಿಗೆ ನೆಮ್ಮದಿ ದೊರೆಯಲಿದೆ. ಮಹಿಳೆಯರು ಸಾಮಾಜಿಕ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲಿದ್ದೀರಿ. ಕೆಲಸ- ಕಾರ್ಯಗಳು ತುಂಬ ಅಚ್ಚುಕಟ್ಟಾಗಿ ಮುಗಿಯಲಿವೆ. ನಿಮ್ಮ ಮಾತಿನ ಮೂಲಕ ಮಾಡುವ ಶಿಫಾರಸುಗಳಿಗೆ ತೂಕ ಸಿಗಲಿದೆ. ರಾಜಕಾರಣವನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ಸವಾಲಿನ ವಾರವಾಗಿರುತ್ತದೆ. ನಿಮ್ಮ ಧೈರ್ಯದ ನಿರ್ಧಾರಗಳಿಂದ ನಾಲ್ಕಾರು ಜನರಿಗೆ ಅನುಕೂಲ ಆಗಲಿದೆ. ವಿವಾಹಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧದಲ್ಲೇ ವರ ದೊರೆಯುವ ಸಾಧ್ಯತೆ ಇದೆ.
ಹಳೆಯ ನೆನಪುಗಳನ್ನು ನಿಮ್ಮನ್ನು ಬಹಳ ಕಾಡಲಿದೆ. ಅದರಲ್ಲೂ ಪ್ರೇಮ ಪ್ರಕರಣಗಳು ಕಾಡುವಂಥ ಸಾಧ್ಯತೆ ಇದೆ. ಆದ್ದರಿಂದ ನಿಮ್ಮಿಂದ ಸಾಧ್ಯವಾದಷ್ಟೂ ಕೆಲಸಗಳಲ್ಲಿ ತೊಡಗಿಕೊಂಡಲ್ಲಿ ಉತ್ತಮ. ಮನೆಯಲ್ಲಿ ಹಿರಿಯರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಈ ದಿನ ಕೆಲವು ಅವಕಾಶಗಳ ಬಗ್ಗೆ ಮಾಹಿತಿ ದೊರೆಯಲಿದೆ. ಉದ್ಯೋಗಸ್ಥರು, ಅದರಲ್ಲೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಅಥವಾ ಮಶೀನ್ ಲರ್ನಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವಂಥವರು ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಸೋದರ ಸಂಬಂಧಿಗಳ ಭೇಟಿಯಿಂದ ಮನಸ್ಸಿಗೆ ಖುಷಿ ಇದೆ. ಭಾರವಾದ ವಸ್ತುಗಳನ್ನು ಎತ್ತಬೇಕಾಗುತ್ತದೆ ಎಂದಾದಲ್ಲಿ ಮಾಮೂಲಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ. ಕಡಿಮೆ ಬಡ್ಡಿಗೆ ಸಾಲ ದೊರೆಯಲಿದೆ ಅಥವಾ ಝೀರೋ ಕಾಸ್ಟ್ ಇಎಂಐ ದೊರೆಯಲಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯ ಇಲ್ಲದ ವಸ್ತುಗಳನ್ನು ಖರೀದಿಸಬೇಡಿ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಹಾಕಬೇಕು ಎಂದಿರುವವರಿಗೆ ನಾನಾ ಬಗೆಯಲ್ಲಿ ಸಮಸ್ಯೆಗಳು ಎದುರಾಗಬಹುದು ಅಥವಾ ಕೈಯಿಂದ ಹೆಚ್ಚಿನ ಹಣ ಖರ್ಚಾಗಲಿದೆ. ಕೃಷಿಕರಿಗೆ ಮನೆ ಅಥವಾ ಜಮೀನಿನ ವಿಚಾರಕ್ಕೆ ಸಂಗಾತಿ ಜತೆಗೆ ಅಭಿಪ್ರಾಯ ಭೇದ ಎದುರಾಗಬಹುದು. ಆದಾಯ- ವೆಚ್ಚದ ವಿಚಾರದಲ್ಲಿ ಲೆಕ್ಕಾಚಾರ ಸರಿಯಾಗಿರುವಂತೆ ನೋಡಿಕೊಳ್ಳಿ. ಮನೆಯ ದುರಸ್ತಿ ಮಾಡಬೇಕು ಎಂದಿರುವವರು ಈ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಹಳೇ ಸ್ನೇಹಿತರ ಜತೆಗೆ ಭೇಟಿ ಆಗುವ ಸಾಧ್ಯತೆ ಇದೆ. ಹಾಗೂ ಇದೇ ವೇಳೆ ರುಚಿಕಟ್ಟಾದ ಊಟ- ತಿಂಡಿ ಮಾಡುವ ಯೋಗ ಇದೆ. ವೃತ್ತಿನಿರತರು ಏಕಾಂಗಿಯಾಗಿ ಇರುವ ಬಗ್ಗೆ ಆಲೋಚನೆ ಮೂಡಲಿದೆ. ಈ ಹಿಂದಿನ ಘಟನಾವಳಿಗಳು ನಿಮ್ಮನ್ನು ಕಾಡಲಿವೆ. ತೆಗೆದುಕೊಂಡ ನಿರ್ಧಾರಗಳಲ್ಲಿ ಎಲ್ಲಿ ತಪ್ಪಾಯಿತೋ ಎಂದು ವಿಮರ್ಶೆ ಮಾಡಲಿದ್ದೀರಿ. ಊಟ- ತಿಂಡಿ ವಿಚಾರದಲ್ಲಿ ಪಥ್ಯವನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ. ಇತರ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಅಭಿಪ್ರಾಯ ಹೇಳುವುದೋ ಅಥವಾ ಇನ್ಯಾರದೋ ಜತೆಯಲ್ಲಿ ಮಾತನಾಡುವುದೋ ಮಾಡಬೇಡಿ. ವಿದ್ಯಾರ್ಥಿಗಳು ಇನ್ನೊಬ್ಬರ ಪರವಾಗಿ ನಿರ್ಧಾರ ತೆಗೆದುಕೊಳ್ಳುವಂಥ ಸನ್ನಿವೇಶಗಳಲ್ಲಿ ಅತ್ಯುತ್ಸಾಹ ತೋರಿಸುವಂಥ ಅಗತ್ಯ ಇಲ್ಲ. ನಿಮ್ಮ ಕೈಯಿಂದ ಹಣ ಕಳೆದುಕೊಳ್ಳುವಂಥ ಸಾಧ್ಯತೆಗಳಿರುತ್ತವೆ. ಇತರರ ವೈಯಕ್ತಿಕ ವಿಚಾರಗಳ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ವಿನಾಕಾರಣ ವಾಗ್ವಾದಗಳಿಗೆ ಕಾರಣ ಆಗಬಹುದು. ಮಹಿಳೆಯರು ದಾಖಲೆ- ಪತ್ರಗಳ ವ್ಯವಹಾರಗಳಲ್ಲಿ ತೊಡಗಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನಿಚ್ಚಳವಾಗಿ ಕಾಣುವಂಥ ವಿಚಾರಗಳ ಬಗ್ಗೆ ಅಭಿಪ್ರಾಯ ಹೇಳುವಾಗ ಕೂಡ ಪೂರ್ಣವಾಗಿ ಮಾಹಿತಿಯನ್ನು ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. ಹೊಸದಾಗಿ ಸ್ನೇಹಿತರಾದವರ ಜತೆಗೆ ಏಕಾಏಕಿ ವ್ಯವಹಾರ ನಡೆಸುವುದು ಒಳ್ಳೆಯದಲ್ಲ. ನಿಮ್ಮ ನೇರವಂತಿಕೆಯ ಮಾತುಗಳಿಂದಾಗಿ ಅಹಂಕಾರಿ ಎಂದು ಹಣೆಟ್ಟಿ ಕಟ್ಟುವ ಸಾಧ್ಯತೆ ಇದೆ.
ಲೇಖನ- ಎನ್.ಕೆ.ಸ್ವಾತಿ