ಸಂಖ್ಯಾಶಾಸ್ತ್ರದ ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಮೊದಲಿಗೆ ಜನ್ಮ ಸಂಖ್ಯೆ 1 ಯಾರದು ಇರುತ್ತದೋ ಅಂಥವರಿಂದ ಇದು ಆರಂಭವಾಗುತ್ತದೆ. ಯಾರ ಜನ್ಮ ಸಂಖ್ಯೆ 1 ಎಂಬುದನ್ನು ತಿಳಿಯಬೇಕು ಅಂತಾದರೆ, ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ರವಿ ಗ್ರಹ ಆಗಿರುತ್ತದೆ. ಸ್ವಭಾವತಃ ಇವರಲ್ಲಿ ನಾಯಕತ್ವ ಗುಣ ಬಹಳ ಚೆನ್ನಾಗಿರುತ್ತದೆ. ತಾವಾಗಿಯೇ ಮುನ್ನುಗ್ಗಿ, ಮೈ ಮೇಲೆ ಜವಾಬ್ದಾರಿಯನ್ನು ಎಳೆದುಕೊಂಡು ಕೆಲಸ ಮಾಡುವಂಥವರ ಜನ್ಮ ಸಂಖ್ಯೆ ಒಂದು ಆಗಿರುತ್ತದೆ. ಇವರು ಬೇರೆಯವರಿಗೆ ಮಾರ್ಗದರ್ಶನ, ಸಲಹೆ, ಸೂಚನೆ ನೀಡುತ್ತಾ, ಕೆಲಸ ಮಾಡಿಸುವಂಥ ಜಾಯಮಾನದವರು. ಈ ಸಂಖ್ಯೆಯಲ್ಲಿ ಜನಿಸಿದವರ ಪೈಕಿ ಹಲವರು ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಇದ್ದಲ್ಲಿ ಸಲೀಸಾಗಿ ಮಾಡಿಕೊಂಡು ಬರಬಲ್ಲ ಚಾಕಚಕ್ಯತೆ ಇರುವಂಥವರಾಗಿರುತ್ತಾರೆ. ಈ ಜನರ ಮುಖ್ಯ ಗುಣ ಏನೆಂದರೆ, ಎಲ್ಲೇ ಹೋದರೂ ತಮಗೆ ಪ್ರಾಮುಖ್ಯ ಸಿಗಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಅಷ್ಟೇ ಅಲ್ಲ, ಆ ಗೌರವ ದಕ್ಕಿಸಿಕೊಳ್ಳುವುದಕ್ಕೆ ಶ್ರಮ ಸಹ ಪಡುತ್ತಾರೆ. ಉಳಿದೆಲ್ಲ ಸಂಖ್ಯೆಗಿಂತ ಇವರಿಗೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು. ಆದರೆ ಇವರು ಯಶಸ್ಸು ಪಡೆದಂತೆಲ್ಲ ತಗ್ಗಿ-ಬಗ್ಗಿ ನಡೆದುಕೊಳ್ಳಬೇಕು. ಕನಿಷ್ಠ ಪಕ್ಷ ಹಾಗೆ ನಟನೆಯನ್ನಾದರೂ ಮಾಡಬೇಕು. ಸಾರ್ವಜನಿಕ ಸಂಪರ್ಕಾಧಿಕಾರಿ, ರಾಜಕಾರಣಿ, ಸಮನ್ವಯಾಧಿಕಾರಿ, ಟಾಪ್ ಮ್ಯಾನೇಜ್ ಮೆಂಟ್ ನಲ್ಲಿ ಮುಖ್ಯ ಹುದ್ದೆಯಲ್ಲಿ ಇವರು ಕಂಡುಬರುತ್ತಾರೆ. ಈ ಸಂಖ್ಯೆಯಲ್ಲಿ ಜನಿಸಿದವರು ತಮ್ಮ ಸಾಮಾಜಿಕ ಸ್ಥಾನ- ಮಾನಕ್ಕೆ ವಿಪರೀತ ಆದ್ಯತೆ ನೀಡುತ್ತಾರೆ. ಅದನ್ನು ಕಾಪಾಡಿಕೊಳ್ಳುವುದು ಇವರಿಗೆ ಒತ್ತಡವಾಗಿ ಪರಿಣಮಿಸುತ್ತದೆ.
ಈ ವರ್ಷ ಆರೋಗ್ಯ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ದೊಡ್ಡ ವ್ಯವಹಾರಗಳನ್ನು ಮಾಡುವಾಗ ಕಾಗದ- ಪತ್ರಗಳು, ದಾಖಲೆಗಳು ಇಂಥದ್ದರ ಬಗ್ಗೆ ಕಾನೂನು ಸಂಗತಿಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ನಿಮ್ಮನ್ನು ಬಹಳ ನಂಬಿಸಿ, ವಂಚನೆ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಯಾವುದೇ ವ್ಯಾಪಾರ, ವ್ಯವಹಾರ, ಉದ್ಯಮವೇ ಆಗಿರಲಿ ಎಷ್ಟೇ ಆಪ್ತರಾದರೂ ಇತರರನ್ನು ನಂಬಿ, ಅವರಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡಬಾರದು. ಇನ್ನು ಬೇಡ ಅಂದುಕೊಂಡ ವಿಚಾರಕ್ಕೆ ಮತ್ತೆ ಕೈ ಹಾಕಲು ಹೋಗಬಾರದು. ನಿಮ್ಮ ಖಾಸಗಿ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ. ಸೈಟು- ಮನೆ ಖರೀದಿ ಮಾಡಬೇಕು ಎಂದಿರುವವರಿಗೆ ನಿಮ್ಮ ಮನಸ್ಸಿಗೆ ಒಪ್ಪುವಂಥದ್ದು ಸಿಗುವ ಸಾಧ್ಯತೆ ಕಡಿಮೆ ಇದೆ. ಅಂಥವರು ಭೂ ವರಾಹ ಸ್ವಾಮಿ ದೇವರ ದರ್ಶನ ಮಾಡಿದರೆ ಉತ್ತಮ. ಅಡೆತಡೆಗಳು ನಿವಾರಣೆ ಆಗುತ್ತವೆ.
ಇನ್ನೇನು ಕೆಲಸ ಆಗಿಯೇ ಹೋಯಿತು ಅಂದುಕೊಂಡದ್ದು ಕೊನೆ ಕ್ಷಣದಲ್ಲಿ ನಿಂತುಹೋಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಅದರಲ್ಲೂ ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರು ಪೂರ್ತಿ ಕೆಲಸ ಖಾತ್ರಿ ಆಗುವ ತನಕ ಯಾವುದೇ ತೀರ್ಮಾನ ಮಾಡುವುದಕ್ಕೆ ಹೋಗಬೇಡಿ. ಮೇಲಧಿಕಾರಿಗಳು ತಮ್ಮ ತಪ್ಪನ್ನು ನಿಮ್ಮ ಮೇಲೆ ಹಾಕಿ, ತಾವು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಲಿದ್ದಾರೆ. ಆದ್ದರಿಂದ ಯಾವುದೇ ಸಂವಹನ ಇದ್ದರೂ ಮೇಲ್ ಅಥವಾ ಸಾಕ್ಷ್ಯ ಇರುವಂತೆ ನೋಡಿಕೊಳ್ಳಿ. ಯಾರು ಸ್ವಂತ ವ್ಯವಹಾರ ಮಾಡುತ್ತಿದ್ದೀರಿ ಅಂಥವರಿಗೆ ಸಾಲದ ಪ್ರಮಾಣ ಜಾಸ್ತಿ ಆಗಬಹುದು. ಮುಖ್ಯವಾಗಿ ಉದ್ಯಮದ ವಿಸ್ತರಣೆಗೆ ಅಂತ ಪ್ರಯತ್ನ ಮಾಡುವುದರಿಂದ ಹೀಗಾಗಲಿದೆ. ನಿಮ್ಮಲ್ಲಿ ಕೆಲವರು ವ್ಯಾಪಾರ- ವ್ಯವಹಾರದಲ್ಲಿನ ಸ್ವಲ್ಪ ಭಾಗವನ್ನು ಮಾರಿಕೊಳ್ಳುವ ಸಾಧ್ಯತೆಗಳಿವೆ.
ಮನೆಯವರ ಒತ್ತಡಕ್ಕೆ ಮಣಿದು, ನೀವು ಮನಸ್ಸಿಗೆ ಒಪ್ಪಿಗೆ ಇಲ್ಲದಿದ್ದರೂ ಮದುವೆಗೆ ಹೂಂ ಎನ್ನಬೇಕಾಗುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ತಂದೆ- ತಾಯಿಯ ಆರೋಗ್ಯ ಸ್ಥಿತಿ ಒತ್ತಡಕ್ಕೆ ತಳ್ಳಲಿದೆ. ಆದ್ದರಿಂದ ನಿಮಗೆ ಒಪ್ಪಿಗೆ ಇಲ್ಲದಿದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ. ಪ್ರೀತಿ- ಪ್ರೇಮದಲ್ಲಿ ಈಗಾಗಲೇ ಇರುವವರಿಗೆ ಹಣಕಾಸಿನ ವಿಚಾರದಲ್ಲಿ ಮನಸ್ತಾಪಗಳು ಎದುರಾಗಲಿದೆ. ಒಬ್ಬರಿಗೊಬ್ಬರು ಹೇಳದೆ ಕೈಗೊಂಡ ತೀರ್ಮಾನಗಳಿಂದ ಭಾರೀ ಅಂತರ ಸೃಷ್ಟಿ ಆಗಲಿದೆ. ಕೆಲ ಸಮಯ ಮಾತು ಬಿಟ್ಟು, ಪರಸ್ಪರ ಸಂಪರ್ಕದಿಂದ ದೂರ ಇರುವ ಸನ್ನಿವೇಶಗಳು ಸಹ ಸೃಷ್ಟಿ ಆಗಬಹುದು. ಆದ್ದರಿಂದ ಸಾಧ್ಯವಾದಷ್ಟೂ ಪಾರದರ್ಶಕವಾಗಿ ನಡೆದುಕೊಳ್ಳಿ. ಯಾವ ವಿಚಾರವನ್ನು ಮುಚ್ಚಿಟ್ಟುಕೊಳ್ಳಬೇಡಿ.
ಪಿತ್ರಾರ್ಜಿತ ಆಸ್ತಿಗಳ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಕಾಣಿಸಿಕೊಳ್ಳಬಹುದು. ಸೋದರ ಸಂಬಂಧಿಕರು ಕೋರ್ಟ್- ಕಚೇರಿ ಮೆಟ್ಟಿಲು ಹತ್ತುವ ಸಾಧ್ಯತೆಗಳಿವೆ. ಕೂತು- ಮಾತನಾಡಿ ಬಗೆಹರಿಸಿಕೊಳ್ಳಬಹುದಾದ ಸಂಗತಿಗಳನ್ನು ಪ್ರತಿಷ್ಠೆಗೆ ಬಿದ್ದು, ಸಮಸ್ಯೆ ಮಾಡಿಕೊಳ್ಳಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಭೂಮಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಬರಬೇಕಾದ ಪರಿಹಾರ ಹಣ ಇದ್ದಲ್ಲಿ ವರ್ಷದ ಮೊದಲಾರ್ಧದಲ್ಲಿ ಸಿಗುವ ಸಾಧ್ಯತೆಗಳು ಹೆಚ್ಚಿವೆ.
ತಂದೆ- ತಾಯಿಯಿಂದ ಕೆಲ ಸಮಯ ದೂರ ಇರಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮಗೆ ಸಂಬಂಧ ಇಲ್ಲದ ವಿಷಯಗಳಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ. ಈ ಹಿಂದೆ ನೀವು ಯಾವಾಗಲೋ ಆಡಿದ್ದ ಮಾತಿಗೆ ಈಗ ಬೆಲೆ ತೆರಬೇಕಾಗಲಿದೆ. ಸ್ನೇಹಿತರ ಜತೆಗೆ ಮಾತನಾಡುವಾಗ ತಮಾಷೆ ಎಂಬಂತೆ ಆರಂಭವಾದ ವಿವಾರಗಳು ಸಹ ಗಂಭೀರ ಸ್ವರೂಪ ಪಡೆದುಕೊಂಡು, ಅಸಮಾಧಾನಕ್ಕೆ ಕಾರಣ ಆಗಬಹುದು. ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡುವುದಕ್ಕೆ ಹೋಗಬೇಡಿ. ಈ ವರ್ಷ ಮೈಗ್ರೇನ್ ಅಥವಾ ಕಣ್ಣಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.
ಸಂಬಂಧಿಗಳು ನಿಮ್ಮ ಮೇಲೆ ವೃಥಾ ಆರೋಪಗಳನ್ನು ಹೊರಿಸುವ ಸಾಧ್ಯತೆಗಳಿವೆ. ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಪ್ರಯತ್ನ ಮಾಡುವವರಿಗೆ ನಾನಾ ರೀತಿ ಅಡೆತಡೆಗಳು ಎದುರಾಗಬಹುದು. ಯಾರು ಥೈರಾಯ್ಡ್, ಪಿಸಿಒಡಿ ಅಥವಾ ಪಿಸಿಒಎಸ್ ಸಮಸ್ಯೆಗಳಿಂದ ಬಳಲುತ್ತಿದ್ದೀರಿ ಅಂಥವರಿಗೆ ಅನಾರೋಗ್ಯ ಸಮಸ್ಯೆ ಉಲ್ಬಣ ಆಗಬಹುದು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಬೇಕು ಎಂದಿದ್ದಲ್ಲಿ ಒಂದಕ್ಕೆ ನಾಲ್ಕು ಬಾರಿ ಚೆನ್ನಾಗಿ ಆಲೋಚಿಸಿ, ನಿರ್ಧಾರ ಮಾಡುವುದು ಒಳಿತು.
ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ