ಸಂಖ್ಯಾಶಾಸ್ತ್ರದ (Numerology ) ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಜನ್ಮ ಸಂಖ್ಯೆ 5 ಯಾರದು ಇರುತ್ತದೋ ಅಂಥವರ ವರ್ಷ ಭವಿಷ್ಯ ಇಲ್ಲಿದೆ. ಯಾರ ಜನ್ಮ ಸಂಖ್ಯೆ 5 ಎಂಬುದನ್ನು ತಿಳಿಯಬೇಕು ಅಂತಾದರೆ, ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಜನ್ಮ ಸಂಖ್ಯೆ 5ರ ಗುಣ- ಸ್ವಭಾವ
ಈ ಸಂಖ್ಯೆಯ ಜನರ ಅಧಿಪತಿ ಬುಧ. ಸವಾಲುಗಳನ್ನು ಎದುರಿಸುವುದು, ಅಪಾಯಗಳನ್ನು ಮೈ ಮೇಲೆ ಎಳೆದುಕೊಂಡು ಕೆಲಸ ಮಾಡುವುದು ಅಂದರೆ ಇವರಿಗೆ ಒಂದು ಬಗೆಯ ಕಿಕ್ ಹಾಗೂ ಥ್ರಿಲ್. ಕಲ್ಲನ್ನಾದರೂ ಮಾತನಾಡಿಸಿಕೊಂಡು ಬರ್ತಾರೆ ಅನ್ನುವ ಹೋಲಿಕೆಯೊಂದು ಇದೆಯಲ್ಲಾ, ಅದು ಇವರಿಗೆ ಬಹಳ ಚೆನ್ನಾಗಿ ಒಪ್ಪುತ್ತದೆ. ಉಳಿದವರಿಗಿಂತ ಇವರಿಗೆ ಹೊಗಳಿಕೆ ಅಚ್ಚುಮೆಚ್ಚು. ಏನನ್ನಾದರೂ ಕೆಲಸವನ್ನು ಇವರಿಂದ ಮಾಡಿಸಬೇಕು ಎಂದಾದಲ್ಲಿ ಒಂದಿಷ್ಟು ಹೊಗಳಿಕೆ, ಜತೆಗಿಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೆ ಸಲೀಸಾಗಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ತಮ್ಮ ಜತೆಗೆ ಇರುವವರು ಯಾವುದೇ ದೂರನ್ನು ಹೇಳಬಾರದು ಅಥವಾ ಆಕ್ಷೇಪವನ್ನು ಮಾಡಬಾರದು ಎಂಬ ಕಾರಣಕ್ಕೆ ತಮಗೆ ಏನೂ ಬೇಡ, ಯಾವುದನ್ನೂ ಕೊಡುವುದು ಬೇಡ ಅಂತಲೇ ಸದಾ ಮಾತಿಗೆ ಇಳಿಯುವಂಥವರು. ಇನ್ನು ಇವರು ವಾಗ್ಮಿಗಳು. ತಮ್ಮ ಮಾತಿನ ಮೂಲಕ ಏನನ್ನಾದರೂ ಸಾಧಿಸಬಲ್ಲವರು. ದಲ್ಲಾಳಿಗಳು, ಕಮಿಷನ್ ಏಜೆಂಟ್ ಗಳು, ಮಾಧ್ಯಮಗಳಲ್ಲಿ, ಬುದ್ಧಿಯನ್ನು ಬಳಸಿ ಮಾಡುವಂಥ ಕೆಲಸ, ವ್ಯಾಪಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟ್ರಾನ್ಸ್ ಪೋರ್ಟ್ ವ್ಯವಹಾರಗಳಲ್ಲೂ ಯಶಸ್ಸು ಸಾಧಿಸುತ್ತಾರೆ. ಕೈ ಹಿಡಿದ ಕೆಲಸವನ್ನು ಮಾಡುವುದರಲ್ಲಿ ಏಕಾಗ್ರತೆ ಕೊರತೆ ಅಥವಾ ಚಂಚಲಚಿತ್ತತೆ ಬಹುವಾಗಿ ಇವರನ್ನು ಕಾಡುತ್ತದೆ. ಅದನ್ನು ಮೀರಿದಲ್ಲಿ ದೊಡ್ಡದನ್ನು ಸಾಧಿಸಬಲ್ಲವರು.
ವರ್ಷ ಭವಿಷ್ಯ
ಈ ವರ್ಷ ನೀವಾಗಿಯೇ ಒತ್ತಡವನ್ನು ತಲೆ ಮೇಲೆ ಹಾಕಿಕೊಳ್ಳಲಿದ್ದೀರಿ. ಬೇಡ ಅನ್ನಬೇಕಾದ ಕಡೆಯಲ್ಲಿ ಬೇಕು ಅಂತಲೂ, ಆಗಲ್ಲ ಎಂದು ಹೇಳಬೇಕಾದ ಕಡೆಯಲ್ಲಿ ಆಗುತ್ತದೆ ಅಂತಲೂ, ಮಾಡುವುದಿಲ್ಲ ಎಂದು ಹೇಳಬೇಕಾದಲ್ಲಿ ಮಾಡುತ್ತೇನೆ ಅಂತಲೂ ಹೇಳಿ ಸಮಸ್ಯೆ ಮಾಡಿಕೊಳ್ಳುತ್ತೀರಿ. ನಿಮ್ಮ ಉತ್ಸಾಹ ಎಲ್ಲ ಸನ್ನಿವೇಶಗಳಲ್ಲೂ ಉಪಯೋಗಕ್ಕೆ ಬರಬಹುದು ಎಂಬ ಯಾವ ಖಾತ್ರಿಯೂ ಇಲ್ಲ. ಆದ್ದರಿಂದ ಇತರರ ವೈಯಕ್ತಿಕ ವಿಚಾರಗಳಲ್ಲಿ ಅತ್ಯುತ್ಸಾಹ ತೋರಿಸುವ ಅಗತ್ಯ ಇಲ್ಲ. ಈ ವರ್ಷ ನಿಮಗೆ ಗೊತ್ತಾಗಲೇ ಬೇಕಾದ ಸಂಗತಿ ಏನೆಂದರೆ, ಆಲಸ್ಯ ಅಮೃತಂ ವಿಷಂ ಹಾಗೂ ಆತುರಗಾರನಿಗೆ ಬುದ್ಧಿ ಮಟ್ಟ ಈ ಎರಡರ ವ್ಯತ್ಯಾಸವನ್ನು ತಿಳಿದುಕೊಳ್ಳಿ. ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ಕಾನೂನು ವ್ಯಾಜ್ಯಗಳನ್ನು ಎದುರಿಸುವಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಅತಿಯಾದ ಲಾಭದ ಆಸೆಗೆ ಬಿದ್ದು, ಕಾಗದ- ಪತ್ರದ ಸಮಸ್ಯೆ ಇರುವಂಥ ಆಸ್ತಿ ಖರೀದಿಸಿ, ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆಗಳು ಕಾಣುತ್ತಿವೆ. ಇನ್ನು ಎಚ್ಚರಿಕೆ ವಿಚಾರಕ್ಕೆ ಬಂದರೆ, ಅಪಘಾತ ಆಗುವ, ಬಿದ್ದು ಗಾಯವಾಗುವ, ಮೂಳೆ ಮುರಿತಕ್ಕೆ ಒಳಗಾಗುವ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.
ಉದ್ಯೋಗ- ವೃತ್ತಿ
ನಿಮ್ಮ ಗೊಂದಲದ ಕಾರಣಕ್ಕೆ ಉದ್ಯೋಗದಲ್ಲಿ ಕಿರಿಕಿರಿ ಆಗಲಿದೆ. ಇತರರು ನಿಮ್ಮ ಬಳಿ ಹೇಳುವಂಥ ವಿಚಾರಗಳನ್ನು ನಂಬಿಕೊಂಡು, ಮೇಲಧಿಕಾರಿಗಳ ಜತೆಗೆ ಮನಸ್ತಾಪವನ್ನು ಮಾಡಿಕೊಳ್ಳಬೇಡಿ. ಉದ್ಯೋಗ ಬದಲಾವಣೆಯನ್ನು ಮಾಡಬೇಕು ಎಂದಿರುವವರಿಗೆ ನಿರೀಕ್ಷೆ ಮಾಡಿದಂತೆ ವೇತನದಲ್ಲಿ ಹೆಚ್ಚಳ ಸಿಗದೆ ಹೋಗಬಹುದು. ಸದ್ಯಕ್ಕೆ ಸೇರಿಕೊಂಡು ಬಿಡಿ, ಮುಂದೆ ವೇತನ ಹೆಚ್ಚಳ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದರು ಎಂಬ ಕಾರಣಕ್ಕೆ ಕೆಲಸ ಬದಲಾಯಿಸಿದಿರಿ ಅಂತಾದರೆ ಮುಂದೆ ಪರಿತಪಿಸುವಂತಾಗುತ್ತದೆ. ಈಗ ಉದ್ಯೋಗ ಜೀವನವನ್ನು ಆರಂಭಿಸಿದವರಿಗೆ ಇನ್ನೇನು ಕೆಲಸ ಸಿಕ್ಕೇಬಿಟ್ಟಿತು ಅಂದುಕೊಳ್ಳುವ ಹೊತ್ತಿಗೆ ಏನಾದರೂ ಕಾರಣದಿಂದ ಕೈ ತಪ್ಪಿ ಹೋಗಬಹುದು, ಜಾಗ್ರತೆ. ಉದ್ಯೋಗ ಪ್ರಯತ್ನ ಆರಂಭ ಮಾಡುವ ಮುನ್ನ ಸೋಮವಾರದಂದು ಶಿವನ ಆರಾಧನೆಯನ್ನು ಮಾಡಿ. ಸರ್ಕಾರಿ ಉದ್ಯೋಗದಲ್ಲಿ ಪ್ರಮುಖ ಸ್ಥಾನದಲ್ಲಿ ಇರುವವರ ವಿರುದ್ಧ ಇಲಾಖೆ ವಿಚಾರಣೆಗಳಿಗೆ ಆದೇಶ ಆಗಬಹುದು, ಇದರಿಂದ ಮಾನಸಿಕವಾಗಿ ಒತ್ತಡ ಹೆಚ್ಚಾಗಲಿದೆ. ವೃತ್ತಿನಿರತರಿಗೆ ಆದಾಯ ಇಳಿಕೆ ಆಗಲಿದ್ದು, ಸಾಲದ ಪ್ರಮಾಣ ಜಾಸ್ತಿ ಆಗಲಿದೆ. ಸ್ವಂತ ವ್ಯವಹಾರ- ಉದ್ಯಮ ಮಾಡುತ್ತಿರುವವರು ಸ್ವಲ್ಪ ಪ್ರಮಾಣವನ್ನು ಮಾರಾಟ ಮಾಡಲಿದ್ದೀರಿ.
ಪ್ರೀತಿ- ಪ್ರೇಮ, ವಿವಾಹ
ಈ ಹಿಂದೆ ಯಾವಾಗಲೋ ಆಡಿದ ಮಾತಿನಿಂದಾಗಿ ಈ ವರ್ಷದ ಏಪ್ರಿಲ್- ಮೇ ತಿಂಗಳಲ್ಲಿ ಪ್ರೇಮಿಗಳ ಮಧ್ಯೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿವೆ. ಕೆಲ ಸಮಯ ಮಾತು ಬಿಡುವಂತೆ ಸಹ ಆಗಬಹುದು. ಸಾಧ್ಯವಾದಷ್ಟೂ ಹಳೇ ಘಟನೆಗಳನ್ನು ಎಳೆದುತರುವುದಕ್ಕೆ ಹೋಗಬೇಡಿ. ಇದರಿಂದ ನಿಮ್ಮ ಮನಸ್ಸಿಗೇ ಬೇಸರ. ಇನ್ನು ಯಾರು ವಿವಾಹ ವಯಸ್ಕರಾಗಿದ್ದು, ಮದುವೆಗಾಗಿ ಪ್ರಯತ್ನ ಮಾಡುತ್ತಿದ್ದೀರಿ ಅಂಥವರು ನಿಮ್ಮ ಬಗೆಗೆ ತಪ್ಪು ಮಾಹಿತಿಗಳು ನೀಡದಂತೆ ಎಚ್ಚರಿಕೆ ವಹಿಸಿ. ಅದು ನೀವು ಮಾಡುತ್ತಿರುವ ಕೆಲಸದ ವಿಚಾರ ಇರಬಹುದು ಅಥವಾ ಸಂಬಳದ ಬಗ್ಗೆಯೇ ಆಗಿರಬಹುದು ಅಥವಾ ಇನ್ಯಾವುದೇ ವಿಷಯ ಆಗಿದ್ದರೂ ತಪ್ಪು ಮಾಹಿತಿ ನೀಡಲಿಕ್ಕೆ ಹೋಗಬೇಡಿ. ಒಂದು ವೇಳೆ ಈಗಾಗಲೇ ಹಾಗೆ ಮಾಡಿ, ನಿಶ್ಚಿತಾರ್ಥ ಆಗಿಹೋಗಿದೆ ಎಂದಾದಲ್ಲಿ ಈ ವಿಚಾರ ಗೊತ್ತಾಗಿ, ಮದುವೆ ಮುರಿದು ಬೀಳುವ ಸಾಧ್ಯತೆಗಳು ಹೆಚ್ಚಿವೆ. ವಿವಾಹಿತರಿಗೆ ಸಂಗಾತಿ ಕಡೆಯ ಸಂಬಂಧಿಕರ ಕಾರಣಕ್ಕೆ ಒಂದೋ ಖರ್ಚು ವಿಪರೀತ ಆಗಬಹುದು ಅಥವಾ ಅವರ ಒತ್ತಾಯಕ್ಕೆ ಮಣಿದು ನಷ್ಟ ಅನುಭವಿಸುವಂತಾಗುತ್ತದೆ. ಇದರ ಸಿಟ್ಟನ್ನು ಸಂಗಾತಿಯ ಮೇಲೆ ತೋರಿಸಿಕೊಳ್ಳುವಂತಾಗುತ್ತದೆ, ಎಚ್ಚರ.
ಇದನ್ನೂ ಓದಿ: Numerology Yearly Horoscope 2024: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 2ರ 2024ನೇ ಇಸವಿ ವರ್ಷ ಭವಿಷ್ಯ
ಕೃಷಿಕರು
ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಸಲಹೆಯನ್ನು ನಂಬಿಕೊಂಡು ಮಾಡಿದ ಹೂಡಿಕೆ ಅಥವಾ ವ್ಯವಹಾರದಲ್ಲಿ ನಷ್ಟ ಕಾಣುವಂತಾಗುತ್ತದೆ. ಒಂದು ವೇಳೆ ಇತರರ ಸಲಹೆ- ಸೂಚನೆಯನ್ನು ನಂಬಿಕೊಂಡು, ಯಾವುದಾದರೂ ನಿರ್ದಿಷ್ಟ ಕಂಪನಿಯ ಉತ್ಪನ್ನಗಳ ಖರೀದಿ ಅಥವಾ ನಿರ್ದಿಷ್ಟ ಸಂಸ್ಥೆಯ ಜತೆಗೆ ಮಾಡಿಕೊಂಡಂಥ ಒಪ್ಪಂದಗಳು ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ತರುವುದಿಲ್ಲ. ಆದ್ದರಿಂದ ನಿಮ್ಮ ವೃತ್ತಿಗೆ ಅಥವಾ ವ್ಯವಹಾರಕ್ಕೆ ಹೆಚ್ಚು ಲಕ್ಷ್ಯ ನೀಡಿ, ಇತರರನ್ನು ಹಾಗೇ ನಂಬಲಿಕ್ಕೆ ಹೋಗಬೇಡಿ. ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕೆ ನೀವು ಮುಂದಾದಲ್ಲಿ ಅದರಿಂದ ಸಂಕಷ್ಟಗಳು ಎದುರಾಗಿ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ವಿದ್ಯಾರ್ಥಿಗಳು
ನೀವು ಮಾಡದ ತಪ್ಪಿಗೆ ಅಪರಾಧಿ ಸ್ಥಾನದಲ್ಲಿ ನಿಲ್ಲುವಂತಾಗುತ್ತದೆ. ಇನ್ನು ಮನೆಯಲ್ಲಿ ನಿಮಗೆ ವಹಿಸಿದ ಕೆಲವು ಜವಾಬ್ದಾರಿಗಳು, ಅದರಲ್ಲೂ ಹಣಕಾಸಿಗೆ ಸಂಬಂಧಿಸಿದ್ದಾಗಿದ್ದಲ್ಲಿ ಖರ್ಚು- ವೆಚ್ಚಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಈ ವರ್ಷ ನರಕ್ಕೆ ಸಂಬಂಧಿಸಿದಂತೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಒಂದು ವೇಳೆ ಈಗಾಗಲೇ ಆ ರೀತಿಯಾಗಿ ಏನಾದರೂ ತೊಂದರೆ ಇದೆ ಎಂದಾದಲ್ಲಿ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಳ್ಳಿ. ಕ್ರೀಡೆಗಳಲ್ಲಿ ಭಾಗವಹಿಸುವಂಥವರು ನಿರೀಕ್ಷಿತ ಪ್ರಮಾಣದ ಅಥವಾ ಹಾಕಿದ ಶ್ರಮಕ್ಕೆ ತಕ್ಕಂತೆ ಫಲಿತಾಂಶ ಪಡೆಯುವುದು ಕಷ್ಟವಾಗಲಿದೆ.
ಮಹಿಳೆಯರು
ವಿವಾಹಿತ ಸ್ತ್ರೀಯರಿಗೆ ಮಕ್ಕಳ ಶಿಕ್ಷಣ, ಆರೋಗ್ಯ ಹಾಗೂ ಅವರ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ನಿಮ್ಮಲ್ಲಿ ಕೆಲವರು ಮಕ್ಕಳನ್ನು ಹಾಸ್ಟೆಲ್ ಗಳಲ್ಲಿ ಬಿಟ್ಟು, ಓದಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ ಅಥವಾ ಸೇರಿಸಿಯೇ ಬಿಡುತ್ತೀರಿ. ಆದರೆ ನೆನಪಿನಲ್ಲೀಡಿ, ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಬೇಡಿ. ಸಂಗಾತಿಯ ಅಭಿಪ್ರಾಯ ಏನಿದೆ ಎಂಬುದರ ಬಗ್ಗೆ ಕೂಡ ಕೇಳಿ, ತಿಳಿಯಿರಿ. ಇನ್ನು ಉದ್ಯೋಗಸ್ಥ ಮಹಿಳೆಯರು ಕೆಲ ಸಮಯ ಬಿಡುವು ಅಥವಾ ರಜಾ ತೆಗೆದುಕೊಳ್ಳಬೇಕು ಎಂಬಂಥ ಪರಿಸ್ಥಿತಿ ಉದ್ಭವಿಸಬಹುದು. ಅದರಲ್ಲೂ ಐವಿಎಫ್ ರೀತಿ ವೈದ್ಯಕೀಯ ಪದ್ಧತಿಗಳ ನೆರವಿನಿಂದ ಸಂತಾನಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಒಂದಿಷ್ಟು ಗೊಂದಲದ ವಾತಾವರಣ ಇರಲಿದೆ. ಜಠರ, ಅನ್ನಾಂಗ, ಕರುಳಿಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಲ್ಲಿ ಕೂಡಲೇ ಚಿಕಿತ್ಸೆಯನ್ನು ಪಡೆದುಕೊಳ್ಳುವ ಕಡೆಗೆ ಗಮನವನ್ನು ನೀಡಿ.
ಹಯಗ್ರೀವ ಸ್ತೋತ್ರ ಪಠಣ ಅಥವಾ ಶ್ರವಣವನ್ನು ಮಾಡಿ.
ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ