Numerology Yearly Horoscope 2024: ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮಸಂಖ್ಯೆ 2ರ 2024ನೇ ಇಸವಿ ವರ್ಷ ಭವಿಷ್ಯ
ಸಂಖ್ಯಾಶಾಸ್ತ್ರದ ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಸಂಖ್ಯಾಶಾಸ್ತ್ರದ ಆಧಾರದಲ್ಲಿ 2024ನೇ ಇಸವಿಯ ವರ್ಷ ಭವಿಷ್ಯ ಇಲ್ಲಿದೆ. ಜನ್ಮ ಸಂಖ್ಯೆ 2 ಯಾರದು ಇರುತ್ತದೋ ಅಂಥವರಿಂದ ಇದು ಆರಂಭವಾಗುತ್ತದೆ. ಯಾರ ಜನ್ಮ ಸಂಖ್ಯೆ 2 ಎಂಬುದನ್ನು ತಿಳಿಯಬೇಕು ಅಂತಾದರೆ, ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2 ಎಂದಾಗುತ್ತದೆ. ಅಂಥವರಿಗೆ ವರ್ಷ ಭವಿಷ್ಯ, ಅಂದರೆ 2024ರ ಜನವರಿಯಿಂದ ಡಿಸೆಂಬರ್ ತನಕ ಹೇಗಿರುತ್ತದೆ ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಜನ್ಮ ಸಂಖ್ಯೆ 2ರ ಗುಣ- ಸ್ವಭಾವ
ಈ ಸಂಖ್ಯೆಯಲ್ಲಿ ಜನಿಸಿದವರ ಅಧಿಪತಿ ಚಂದ್ರ ಆಗಿರುತ್ತದೆ. ಈ ದಿನ ಜನಿಸಿದವರಿಗೆ ಸ್ವಭಾವದಲ್ಲಿ ತಾಯಿಯ ಕರುಳು ಇರುತ್ತದೆ. ಹಾಗೆಂದರೆ ಇವರಿಗೆ ಅನುಕಂಪ, ಕರುಣೆ, ಮಮತೆ ಜಾಸ್ತಿ. ಎಲ್ಲಿ ತಮ್ಮಿಂದ ಬೇರೆಯವರಿಗೆ ಸಮಸ್ಯೆ ಆಗಿಬಿಡುತ್ತದೋ ಎಂದು ಆಲೋಚಿಸುವಂಥ ಜನ ಇವರು. ಇತರರ ಮೇಲೆ ಅನುಕಂಪ ತೋರಿಸುವ ವ್ಯಕ್ತಿತ್ವ ಹೊಂದಿರುತ್ತಾರೆ. ಇನ್ನು ಯಾವುದೇ ಕೆಲಸದ ಬಗ್ಗೆ ಆಲೋಚನೆ ಮಾಡುವಷ್ಟು ಚೆನ್ನಾಗಿ ಅದರ ಅನುಷ್ಠಾನವನ್ನು ಇವರು ಮಾಡಲಾರರು. ಆದ್ದರಿಂದ ಇವರಿಗೆ ಆಪ್ತ ವಲಯದಲ್ಲಿ ಇರುವಂಥವರು ಅಥವಾ ಇತರರು ಪ್ರಭಾವ ಬೀರಿ ಮುಂದಕ್ಕೆ ತಳ್ಳಬೇಕಾಗುತ್ತದೆ. ತಮ್ಮಿಂದ ಏನು ಮಾಡುವುದಕ್ಕೆ ಸಾಧ್ಯ ಎಂಬುದನ್ನು ತೀರ್ಮಾನಿಸುವುದರಲ್ಲಿ ಬಹಳ ಸಹ ಇವರು ಸೋಲುತ್ತಾರೆ. ತಮ್ಮ ಸಾಮರ್ಥ್ಯದ ಬಗ್ಗೆಯೇ ಒಂದು ಬಗೆಯ ಅನುಮಾನ ಇವರಲ್ಲಿ ಇರುತ್ತದೆ. ಬೇರೆಯವರು ಕೆಲಸ, ವೃತ್ತಿ, ವ್ಯಾಪಾರ- ವ್ಯವಹಾರಗಳಿಗೆ ನೆರವನ್ನು ನೀಡಿ, ಅವರು ಎತ್ತರಕ್ಕೆ ಇರುವುದಕ್ಕೆ ಸಹಾಯ ಮಾಡುವ ಎರಡನೇ ಸಂಖ್ಯೆಯ ಜನರಿಗೆ ತಮ್ಮದೇ ಕೆಲಸದ ಬಗ್ಗೆ ಉತ್ಸಾಹ ಹಾಗೂ ವಿಶ್ವಾಸ ಎರಡೂ ಕಡಿಮೆ. ವೈದ್ಯಕೀಯ ಹಾಗೂ ಸೇವಾ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡುಬರುವವರು ಈ ಸಂಖ್ಯೆಯ ಜನರೇ. ಹೊಂದಾಣಿಕೆ ಸ್ವಭಾವ ಇವರಿಗೆ ಜಾಸ್ತಿ ಇರುತ್ತದೆ. ಕೃಷಿ- ಡೇರಿ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬಲ್ಲಂಥ ಜನ ಇವರು.
ವರ್ಷ ಭವಿಷ್ಯ
ಈ ವರ್ಷ ನಿಮ್ಮ ಕುಟುಂಬ ವಿಚಾರಗಳು ಪ್ರಾಮುಖ್ಯ ಪಡೆಯುತ್ತವೆ. ಬಹಳ ಆಪ್ತರು, ಕುಟುಂಬ ಸದಸ್ಯರು ಹಾಗೂ ನಿಮಗೆ ಹತ್ತಿರದ ಸ್ನೇಹಿತರ ಅಗತ್ಯಗಳಿಗಾಗಿ ಹಣದ ನೆರವು ನೀಡಬೇಕಾಗುತ್ತದೆ. ಒಂದೋ ನಿಮ್ಮದೇ ಉಳಿತಾಯದಿಂದ ತೆಗೆದು ಕೊಡಬೇಕಾಗಬಹುದು ಅಥವಾ ಸಾಲವಾದರೂ ತೆಗೆದುಕೊಡಬೇಕಾಗಬಹುದು. ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಸಂಕೋಚಕ್ಕೋ ಅಥವಾ ಲಾಭ ದೊರೆಯುತ್ತದೆ ಅಂದುಕೊಂಡು ಒಪ್ಪಿಕೊಂಡಲ್ಲಿ ನಂತರ ಪರಿತಪಿಸಬೇಕಾಗುತ್ತದೆ. ಹೊಸದಾಗಿ ವ್ಯಾಪಾರ- ವ್ಯವಹಾರ ಶುರು ಮಾಡುವವರು ಕಾನೂನು ವಿಚಾರಗಳ ಕಡೆಗೆ ಹೆಚ್ಚಿನ ಲಕ್ಷ್ಯವನ್ನು ನೀಡಿ. ರಾತ್ರಿ ವೇಳೆ ನಿದ್ರೆ ಕೆಟ್ಟು, ಕೆಲಸ ಮಾಡುವವರಿಗೆ ಜೀರ್ಣಾಂಗ ಸಮಸ್ಯೆಗಳು ಕಾಡಬಹುದು ಹಾಗೂ ಮಂಡಿಯ ಕೆಳಭಾಗದಲ್ಲಿ ತೊಂದರೆಗಳಾಗಬಹುದು. ಆಸ್ತಿ ಮಾಡಬೇಕು ಎಂದಿರುವವರು ಅಳತೆಗೆ ಮೀರಿದ ಸಾಲ ಮಾಡಬೇಡಿ. ಸ್ವಾತಿ ನಕ್ಷತ್ರ ಇರುವ ದಿನ ನರಸಿಂಹ ದೇವರಿಗೆ ಅಭಿಷೇಕವನ್ನು ಮಾಡಿಸಿ.
ಉದ್ಯೋಗ- ವೃತ್ತಿ
ಉದ್ಯೋಗ ಬದಲಾವಣೆ ಮಾಡಬೇಕು ಎಂದಿರುವವರಿಗೆ ಅಂದುಕೊಂಡಂಥ ಸೌಕರ್ಯ, ವೇತನ ದೊರೆಯದೇ ಹೋಗಬಹುದು. ಸರಿಯಾದ ಮಾತುಕತೆ ಆಡಿ, ಕಾಗದ- ಪತ್ರಗಳ ಮೂಲಕ ನಿಮಗೆ ಸಿಗುವ ವೇತನ, ಸೌಕರ್ಯಗಳ ಬಗ್ಗೆ ಖಾತ್ರಿ ಆಗದ ಹೊರತು ಒಪ್ಪಿಗೆ ಸೂಚಿಸುವುದಕ್ಕೆ ಹೋಗಬೇಡಿ. ಯಾರು ಸರ್ಕಾರಿ ಸೌಕರಿಯಲ್ಲಿದ್ದೀರಿ ಹಾಗೂ ಈ ಹಿಂದಿನ ವರ್ಷದ ವಿಚಾರಣೆ, ಆರೋಪಗಳನ್ನು ಎದುರಿಸುತ್ತಿದ್ದೀರಿ ಅಂಥವರು ಆರೋಪದಿಂದ ಮುಕ್ತರಾಗುವ ಅವಕಾಶಗಳಿದ್ದು, ಅದರ ಜತೆಗೆ ಇದುವರೆಗೆ ತಡೆಹಿಡಿಯಲಾದ ಬಡ್ತಿ, ವೇತನ ಹೆಚ್ಚಳ ಸಹ ದೊರೆಯುವಂಥ ಯೋಗ ಇದೆ. ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲ ವೃತ್ತಿಯಲ್ಲಿರುವವರು ಅಥವಾ ವೈದ್ಯರು ಹೊಸದಾಗಿ ಕಚೇರಿಯನ್ನು ಆರಂಭಿಸುವ ಸಾಧ್ಯತೆಗಳಿವೆ. ಈ ನಿರ್ಧಾರದಿಂದ ನಿಮಗೆ ಉತ್ತಮ ಆದಾಯ ಕೂಡ ದೊರೆಯಲಿದೆ.
ಪ್ರೀತಿ- ಪ್ರೇಮ, ವಿವಾಹ
ಉದ್ಯೋಗಸ್ಥರಿಗೆ ತಾವು ಕೆಲಸ ಮಾಡುವ ಸ್ಥಳದಲ್ಲಿಯೇ ಪ್ರೇಮಾಂಕುರ ಆಗುವ ಯೋಗ ಇದೆ. ಇದನ್ನು ಹೇಳಿಕೊಂಡಲ್ಲಿ ಎದುರಿನಿಂದ ಒಪ್ಪಿಗೆ ಸಹ ಸಿಕ್ಕುವ ಸಾಧ್ಯತೆಗಳು ಹೆಚ್ಚಿವೆ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ವರ್ಷದ ಮೊದಲಾರ್ಧದಲ್ಲಿಯೇ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದರೆ ವಿವಾಹಿತರಿಗೆ ಒಂದಿಷ್ಟು ಸಮಸ್ಯೆಗಳು ಎದುರಾಗಬಹುದು. ಅತ್ತೆ- ಮಾವನನ್ನು ನೋಡಿಕೊಳ್ಳುವ ವಿಚಾರವಾಗಿ ಅಥವಾ ಯಾವುದಾದರೂ ಸಂದರ್ಭದಲ್ಲಿ ಗೌರವದಿಂದ ಮಾತನಾಡಲಿಲ್ಲ ಅಂತಲೋ ಅಥವಾ ಅವರಿಗೆ ಬೇಸರ ಆಗುವಂತೆ ನಡೆದುಕೊಂಡಿರಿ ಎಂಬ ಕಾರಣಕ್ಕೆ ಅಸಮಾಧಾನ ಕಾಣಿಸಿಕೊಳ್ಳಬಹುದು. ಅಸಮಾಧಾನವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಪ್ರಯತ್ನಿಸಿ. ಮೂರನೇ ವ್ಯಕ್ತಿ ನಿಮ್ಮ ಸಂಸಾರದಲ್ಲಿ ಮಧ್ಯಪ್ರವೇಶಿಸದಂತೆ ನೋಡಿಕೊಳ್ಳಿ.
ಕೃಷಿಕರು
ಈ ವರ್ಷ ನಿಮ್ಮ ಕೃಷಿ ಜಮೀನಿನ ವ್ಯಾಪ್ತಿಯನ್ನು ಜಾಸ್ತಿ ಮಾಡಿಕೊಳ್ಳಲಿದ್ದೀರಿ. ನಿಮ್ಮದೇ ಜಮೀನಿನ ಅಕ್ಕಪಕ್ಕದ ಸ್ಥಳವನ್ನು ಖರೀದಿ ಮಾಡಬಹುದು ಅಥವಾ ಈಗಿರುವ ನಿಮ್ಮ ಭೂಮಿಗಳನ್ನು ಮಾರಿ, ಒಂದೇ ಸ್ಥಳದಲ್ಲಿ ದೊಡ್ಡದಾಗಿ ಜಮೀನು ಮಾಡಿಕೊಳ್ಳುವ ಸಾಧ್ಯತೆಗಳಿವೆ. ಇನ್ನು ಯಾರು ಹೈನುಗಾರಿಕೆ, ಪಶುಸಾಕಣೆ, ಜೇನು ಸಾಕಣೆಯಂಥದ್ದನ್ನು ಮಾಡುತ್ತಿರುವಿರೋ ಅಂಥವರು ಇನ್ನಷ್ಟು ಅತ್ಯಾಧುನಿಕವಾಗಿ ಹಾಗೂ ಹೆಚ್ಚಿನ ಬಂಡವಾಳವನ್ನು ಹೂಡಿ, ದೊಡ್ಡ ಪ್ರಮಾಣದಲ್ಲಿ ಮಾಡುವಂಥ ಯೋಗ ಇದೆ.
ವಿದ್ಯಾರ್ಥಿಗಳು
ಈ ವರ್ಷ ಪಠ್ಯೇತರ ಚಟುವಟಿಕೆಗಳಲ್ಲಿ ನಿಮ್ಮ ಸಾಧನೆ ಅದ್ಭುತವಾಗಿರುತ್ತದೆ. ಚೆಸ್, ಕ್ವಿಜ್, ಚರ್ಚಾ ಸ್ಪರ್ಧೆ, ಗಾಯನ, ನಾಟಕ ಇಂಥವುಗಳಲ್ಲಿ ಭಾಗವಹಿಸುವವರಿಗೆ ಜನಪ್ರಿಯತೆ ಹೆಚ್ಚಾಗಲಿದೆ. ಇದರ ಜತೆಗೆ ಬಹುಮಾನ- ಸನ್ಮಾನಗಳು ಆಗಲಿವೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸುವಂಥವರಿಗೆ ಪ್ರಾಯೋಜಕರು ದೊರೆತು, ಅತ್ಯುತ್ತಮ ಸಾಧನೆಗಳಾಗುವ ಅವಕಾಶಗಳಿವೆ. ಕೊನೆ ಕ್ಷಣದಲ್ಲಿ ನಿಮ್ಮ ನಿರ್ಧಾರಗಳನ್ನು ಬದಲಿಸಿಕೊಂಡಲ್ಲಿ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಹಾಗೆ ಮಾಡಿಕೊಳ್ಳಬೇಡಿ.
ಮಹಿಳೆಯರು
ಹೊಸಬರ ಜತೆಗೆ ವ್ಯವಹರಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಇನ್ನು ಸಂಬಂಧಿಕರಲ್ಲಿಯೇ ಕೆಲವರು ನೀವು ಆಡದ ಮಾತುಗಳನ್ನು ಆಡಿದ್ದೀರಿ, ತಾವು ಕೇಳಿಸಿಕೊಂಡಿದ್ದೇವೆ ಎಂದು ಜೋರು ಧ್ವನಿಯಲ್ಲಿ ವಾದ ಮಾಡುವ ಮೂಲಕ ನಿಮ್ಮನ್ನು ಗೊಂದಲಕ್ಕೆ ಸಿಲುಕಿಸಬಹುದು. ಹಳೇ ಪ್ರೀತಿ- ಪ್ರೇಮ ಪ್ರಕರಣಗಳು ಮತ್ತೆ ತಲೆ ಎತ್ತುವುದರಿಂದ ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಉದ್ಯೋಗ ಮಾಡುತ್ತಿರುವವರಿಗೆ ಕೆಲಸ ಬಿಟ್ಟು, ಕೆಲ ಸಮಯ ವಿಶ್ರಾಂತಿ ಪಡೆಯಬೇಕು ಎನಿಸಬಹುದು. ನಲವತ್ತರ ಮೇಲೆ ವಯಸ್ಸಾಗಿರುವ ಮಹಿಳೆಯರಿಗೆ ಮರೆವಿನ ಪ್ರಮಾಣ ಹೆಚ್ಚಾಗಿ, ಆತಂಕ ಕಾಡುತ್ತದೆ.
ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:24 pm, Mon, 18 December 23