
ಕ್ರಾಂತಿವೃತ್ತದ ಸಮೀಪದಲ್ಲಿ ಕಾಣಿಸುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಅನೂರಾಧಾ ನಕ್ಷತ್ರ ಹದಿನೇಳನೆಯದು. ಇದರ ದೇವತೆ ಮಿತ್ರ. ಸೂರ್ಯನ ಅಂಶದ ದೇವತೆಯಾಗಿದೆ. ಸರ್ಪದ ಆಕೃತಿಯಲ್ಲಿ ಕಾಣುವ ಏಳು ನಕ್ಷತ್ರಗಳ ಸಮೂಹ ಇದು. ವೃಶ್ಚಿಕ ರಾಶಿಯಲ್ಲಿ ಇದರ ಸ್ಥಾನ. ನಾಲ್ಕೂ ಪಾದಗಳುಯ ವೃಶ್ಚಿಕ ರಾಶಿಯಲ್ಲಿ ಇರಲಿದೆ. ಇದು ದೇವ ಗಣಕ್ಕೆ ಸೇರಿದ್ದಾಗಿದೆ. ಪಿತ್ತಪ್ರಕೃತಿ ಇದರ ಗುಣ. ನಕ್ಷತ್ರದ ಅಕ್ಷರಗಳು ನ ನಿ ನು ನ.
ಈ ರಾಶಿಯವರು ಸಂಪತ್ತು ಅಥವಾ ಚರ ಹಾಗೂ ಸ್ಥಿರಾಸ್ತಿಯನ್ನು ಇಟ್ಟುಕೊಂಡಿರುವವರು. ಧನವು ಗುಪ್ತವಾಗಿ ಇರುತ್ತದೆ, ತೋರಿಸಿಕೊಳ್ಳಲಾರರು.
ಇವರ ವಾಸ ಬೇರೆ ದೇಶದಲ್ಲಿಯೂ ಆಗಬಹುದು ಅಥವಾ ತಾವು ಹುಟ್ಟಿದ ಮನೆಯಿಂದ ದೂರ ಪ್ರದೇಶದಲ್ಲಿ ವಾಸವನ್ನೂ ಮಾಡಬಹುದು. ಜನನವಾದ ಸ್ಥಾನದಲ್ಲಿ ಆಮರಣಾಂತ ಇರಲಾರರು.
ಇವರಿಗೆ ಅಧಿಕ ಹಸಿವು. ಪಿತ್ತಪ್ರಕೃತಿಯಾದ ಕಾರಣ ಜಠರಾಗ್ನಿ ತುಂಬ ತೀಕ್ಷ್ಣವಾಗಿರುವುದು. ಆಹಾರವನ್ನು ಆಗಾಗ ಸೇವಿಸುತ್ತಿರಬೇಕು. ಆಹಾರದಲ್ಲಿ ರುಚಿಯ ಅವಶ್ಯಕತೆ ಇಲ್ಲದಿದ್ದರೂ ಏನಾದರೂ ಬೇಕು.
ನಿಂತಲ್ಲಿ ನಿಲ್ಲುವುದು ಇವರಿಗೆ ಆಗದು. ರಜೋಗುಣ ಇವರಲ್ಲಿ ಇರುವ ಕಾರಣ ಏಕಾಗ್ರತೆ, ಸಾವಧಾನತೆಗಳು ಕಡಿಮೆ. ಯೋಚಿಸದೇ ಕಾರ್ಯ ಮಾಡುವರು. ಏನಾದರೂ ಚಟುವಟಿಕೆಗಳನ್ನು ಮಾಡುತ್ತಲೇ ಇರುವವರು.
ಒಳ್ಳೆಯ ಕಾರ್ಯದಿಂದ ಒಳ್ಳೆಯ ಯಶಸ್ಸನ್ನು ಇವರು ಸಂಪಾದಿಸುವರು. ಸದಾ ಕಾಂತಿಯಿಂದ ಕಂಗೊಳಿಸುವರು. ಯಶಃಕಾಯವಾಗಿ ಜಗತ್ತಿನಲ್ಲಿ ಉಳಿಯುವರು.
ಏನೇ ಆದರೂ ನಿತ್ಯವೂ ಸಂತೋಷದಿಂದ ಕಾಲ ಕಳೆಯುವವರು. ಇವರು ತಮ್ಮ ಜೀವನದಲ್ಲಿ ನಕಾರಾತ್ಮಕ ಅಂಶಗಳಿಗೆ ಪ್ರಮುಖ ಸ್ಥಾನವನ್ನು ಕೊಡಲಾರು. ಒಮ್ಮೆ ಕೊಟ್ಟರೂ ಎಲ್ಲವನ್ನೂ ಪಕ್ಕಕ್ಕೆ ಸರಿಸಿ ಎದ್ದುಬರಬಲ್ಲರು. ಕ್ಷಣಿಕ ದುಃಖಕ್ಕೆ ವ್ಯಥೆಪಡುವುದಿಲ್ಲ.
ಅನೇಕ ಲಲಿತಕಲೆಗಳಲ್ಲಿ ಆಸಕ್ತಿ ಹೆಚ್ಚು. ಯಾವುದಾದರೂ ಒಂದು ಅಥವಾ ಅನೇಕ ಕಲೆಗಳನ್ನು ತಮ್ಮದಾಗಿಸಿಕೊಳ್ಳುವರು. ಹೆಸರಾಂತ ಕಲಾವಿದರೂ ಆಗುವರು. ಕಲೆಯ ಸಂರಕ್ಷಕರೂ ಆಗುವರು.
ಪ್ರಾಚೀನರ ವಿಜ್ಞಾನದ ಆಳ ಅಗಲಗಳು ಸಾಮಾನ್ಯರ ಬುದ್ಧಿಗೆ ಸಿಲುಕದ್ದಾಗಿದೆ. ಭೂಮಿಯಲ್ಲಿ ನಿಂತು ಆಕಾಶಕಾಯಗಳ ಬಗ್ಗೆ ಮಾತಾನಾಡಲು ಅವರ ಬಳಿ ಯಾವ ಸಾಧನವಿತ್ತು ಎಂದು ಹುಬ್ಬೇರಿಸಬಹುದು. ಆದರೆ ಇಂತಹ ಮಹತ್ತ್ವದ ವಿಚಾರಗಳೂ ಅಂದಿಗೂ ಇಂದಿಗೂ ಮುಂದೆಯೂ ಸತ್ಯವಾಗಿ ಉಳಿಯುವುದಾಗಿದೆ. ಇದನ್ನು ವಿಜ್ಞಾನ ಎನ್ನಬೇಕೆ, ಕಾಲಕಾಲಕ್ಕೆ ಬದಲಾಗುವ ಆಧುನಿಕ ಶೋಧನೆಯನ್ನು ವಿಜ್ಞಾನ ಎಂದು ಕರೆಯಬೇಕೇ? ದೂರದರ್ಶಕ ಯಂತ್ರಗಳಿಲ್ಲದೇ ನಕ್ಷತ್ರ ಹಾಗು ರಾಶಿಗಳ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಾದುದ್ದು ಹೇಗೆ? ಇಂತಹ ಮಹೋನ್ನತ ಶೋಧನೆಗಳ ಬಗ್ಗೆ ಕಣ್ಣಾಡಿಸಿದರೆ ಪ್ರಾಚೀನ ವಿಜ್ಞಾನಿಗಳು ಕೊಡುಗೆ ಎಂಥದ್ದು ಎನ್ನುವುದು ಗೊತ್ತಾಗುತ್ತದೆ.
– ಲೋಹಿತ ಹೆಬ್ಬಾರ್ – 8762924271