Rahul Gandhi Horoscope: ಅಧಿಕಾರವಿರಲಿ ಇರುವುದನ್ನು ಉಳಿಸಿಕೊಂಡರೆ ರಾಹುಲ್ ಗಾಂಧಿ ಗೆದ್ದಂತೆಯೇ ಸರಿ

Rahul Gandhi Astrology Prediction: ಲೋಕಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರ ಜಾತಕ ವಿಶ್ಲೇಷಣೆಯನ್ನು ಮಾಡಲಾಗಿದೆ. ಅದರ ಜೊತೆಜೊತೆಗೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಜಾತಕ ವಿಶ್ಲೇಷಣೆಯನ್ನೂ ತೆಗೆದುಕೊಳ್ಳಲಾಗಿದೆ. ಫಲಿತಾಂಶ ಏನು ಹಾಗೂ ಭವಿಷ್ಯ ಏನು ಎಂಬುದನ್ನು ಒಮ್ಮೆ ಓದಿಕೊಳ್ಳಿ. ಆ ನಂತರ ವಾಸ್ತವದ ಜೊತೆಗೆ ಹೋಲಿಸಿಕೊಳ್ಳಿ. ಇದು ನಿಜವೇ ಆದಲ್ಲಿ ಅದು ಜ್ಯೋತಿಷ್ಯದ ಸಾಮರ್ಥ್ಯ. ಒಂದು ವೇಳೆ ಸುಳ್ಳಾದಲ್ಲಿ ನನ್ನದೇ ಲೆಕ್ಕಾಚಾರದಲ್ಲಿನ ತಪ್ಪು.

Rahul Gandhi Horoscope: ಅಧಿಕಾರವಿರಲಿ ಇರುವುದನ್ನು ಉಳಿಸಿಕೊಂಡರೆ ರಾಹುಲ್ ಗಾಂಧಿ ಗೆದ್ದಂತೆಯೇ ಸರಿ
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 03, 2024 | 12:33 PM

ಒಂದು ರಾಷ್ಟ್ರೀಯ ಪಕ್ಷದ ಪ್ರದರ್ಶನ- ಯಶಸ್ಸಿನ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ಮಾಡುವಾಗ ಅದರ ಅಧ್ಯಕ್ಷರ ಜಾತಕದ ವಿಶ್ಲೇಷಣೆ ಮಾಡಬೇಕು ಎಂಬುದು ಶೇಕಡಾ ತೊಂಬತ್ತರಷ್ಟು ಸಂದರ್ಭಗಳಲ್ಲಿ ಸರಿಯಾಗಿರುತ್ತದೆ. ಆದರೆ ಉಳಿದ ಹತ್ತರಷ್ಟು ಕಡೆ ಅನ್ವಯಿಸಲ್ಲ. ಈಗ ಹೇಳಹೊರಟಿರುವುದು ಅಂಥ ಪಕ್ಷವೊಂದರ ಮುಖಂಡನ ಬಗ್ಗೆ. ಲೋಕಸಭಾ ಚುನಾವಣೆ ನಂತರದ ಕಾಲಘಟ್ಟದಲ್ಲಿ ಕಾಂಗ್ರೆಸ್ ಸಂಸದ (ವಯನಾಡು ಲೋಕಸಭಾ ಕ್ಷೇತ್ರ) ರಾಹುಲ್ ಗಾಂಧಿ (Rahul Gandhi )ಅವರ ಭವಿಷ್ಯ ಹೇಗಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ. ರಾಹುಲ್ ಗಾಂಧಿಯನ್ನು ಕೈ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೇ ಪ್ರಧಾನಿ ಅಭ್ಯರ್ಥಿ ಎಂದು ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಈ ಲೇಖನವನ್ನು ಓದುತ್ತಿದ್ದೀರಿ. ಲೇಖನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಜಾತಕವನ್ನು ಮೊದಲು ನೋಡಿಬಿಡೋಣ. ಏಕೆಂದರೆ, ಬೇಕು- ಬೇಡ ಅಂದರೂ ಭಾರತದ ಈ ಪುರಾತನ ಪಕ್ಷದ ಅಧ್ಯಕ್ಷರು ಅವರೇ. ಆ ಹುದ್ದೆಯಲ್ಲಿ ಕೂತ ವ್ಯಕ್ತಿಯ ಪ್ರಭಾವ ಸಹ ಫಲಿತಾಂಶದ ಮೇಲೆ ಇದ್ದೇ ಇರುತ್ತದೆ.

ಮಲ್ಲಿಕಾರ್ಜು ಖರ್ಗೆ ಅವರದ್ದು ಮಿಥುನ ರಾಶಿ. ಗೋಚಾರದಲ್ಲಿ ಸದ್ಯಕ್ಕೆ ಹನ್ನೆರಡನೇ ಮನೆ (ವೃಷಭ), ಅಂದರೆ ವ್ಯಯ ಸ್ಥಾನದಲ್ಲಿ ಗುರು ಗ್ರಹದ ಸಂಚಾರ ಆಗುತ್ತಿದೆ. ಆಧಿಪತ್ಯದ ಫಲ ಶೂನ್ಯ. ಶುಕ್ರದಶೆ ನಡೆಯುತ್ತಿದ್ದು, ಶುಕ್ರನ ಚತುರ್ಥಕ್ಕೆ ರಾಹು ಇದ್ದರೆ ಶುಕ್ರದಶಾ ಶುಭ ಫಲ ಹರಣವಾಗುತ್ತದೆ. ಅಲ್ಲದೆ ಅಷ್ಟಮಾಧಿಪತಿ, ಖರ ದ್ರೇಕ್ಕಾಣಾಧಿಪತಿ ಶನಿಯೊಡನೆ ಚಂದ್ರರಾಶಿ ಮಿಥುನಕ್ಕೆ ವ್ಯಯದಲ್ಲಿದೆ. ಇದೂ ಕಾಂಗ್ರೆಸ್ಸಿಗೆ ಬಲ ಹರಣ ಮಾಡುತ್ತದೆ. ನಮ್ಮವರು, ಅಂದರೆ ಕನ್ನಡಿಗರಾದ ಖರ್ಗೆ ಅವರಿಗೆ ಪ್ರಧಾನಿ ಹುದ್ದೆಯೇ ಸಿಕ್ಕಿಬಿಡಬಹುದು ಎಂಬ ಆಸೆ ಕೋಟ್ಯಂತರ ಮಂದಿಗೆ ಇತ್ತು ಎನ್ನುವ ವರ್ಗ ಒಂದಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಬಲಿಪಶು ಅಂತಲೂ ಅನ್ನುವವರು ಸಹ ಇದ್ದಾರೆ. ಖರ್ಗೆ ಅವರ ಗ್ರಹ ಸ್ಥಿತಿ ಗಮನಿಸಿದರೆ ಅವರು ಬಹಳ “ಕಳೆದುಕೊಳ್ಳುತ್ತಾರೆ”, ನಷ್ಟ ಕಾಣುತ್ತಾರೆ ಅಂತ ಬೇಸರದಿಂದಲೇ ಹೇಳಬೇಕಾಗಿದೆ.

ಇನ್ನು ಸ್ವತಃ ಖರ್ಗೆಯವರೂ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ತನಕ ಪ್ರಧಾನಿ ಅಭ್ಯರ್ಥಿ ಎಂದು ಕರೆಸಿಕೊಳ್ಳುವ ರಾಹುಲ್ ಗಾಂಧಿಯವರಿಗೆ ಗ್ರಹಗಳ ಬಲ ಇದೆಯಾ ಅಂತ ನೋಡೋಣ. ಜಾತಕದ ಬಲ ಇದೆಯೋ? ರಾಹುಲ್ ಗಾಂಧಿಗೆ ಕರ್ಕ ಲಗ್ನ, ವೃಶ್ಚಿಕ ರಾಶಿ. ಲಗ್ನಾಷ್ಟಮದಲ್ಲಿ ಶನಿ ಸಂಚಾರ ಆಗುತ್ತಿದ್ದು, ಈ ಕಾಲವು ದುಃಖದಾಯಕ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸಿದೆ. ಇದಕ್ಕೆ ಬಲ ಕೊಡುವಂತೆ ಚಂದ್ರನಿಗೂ ಅರ್ಧಾಷ್ಟಮ (ವೃಶ್ಚಿಕ ರಾಶಿಯಿಂದ ಚತುರ್ಥ) ಶನಿ. ಹೀಗಿರುವ ಶನಿಯ ಸ್ಥಿತಿಯಿಂದ ರಾಜ ಗದ್ದುಗೆಯ ಅಧಿಪತ್ಯ ಚಿಂತನೆ ಮಾಡಬೇಕಿದೆ. ಯೋಗ ಪ್ರಾಪ್ತಿಗೆ ಚಂದ್ರ ಏಕಾದಶ ಸ್ಥಾನದಲ್ಲಿ ಗುರು, ಲಗ್ನ ಏಕಾದಶದಲ್ಲಿ ಗುರು ಅಥವಾ ಈ ಸ್ಥಾನಕ್ಕೆ ವೀಕ್ಷಣೆಯ ಕಾಲ ಯೋಗ ಪ್ರಾಪ್ತಿಯ ಕಾಲ.

ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್ ಅತಿಬುದ್ಧಿವಂತ, ಆರಂಭ ಉತ್ಸಾಹಿ, ಆತುರಕ್ಕೆ ಬೆಲೆ ತೆರಬೇಕಾದೀತು

ಆದರೆ, ಗೋಚರದ ಶನಿಯು ಅನಿಷ್ಟ ಸೂಚಕನಾದಾಗ ಯೋಗ ಭಂಗ ಎಂದೇ ಹೇಳಬೇಕಾಗುತ್ತದೆ. ನೀಚಗ್ರಹ ಚಂದ್ರನ ದಶೆಯೂ ನಡೆಯುತ್ತಿದೆ. ಆದರೂ ಪರವಾಗಿಲ್ಲ ಎನ್ನಬಹುದು. ಆದರೆ ಚಂದ್ರ ಚತುರ್ಥದಲ್ಲಿ ರಾಹು ಇರುವುದರಿಂದ ಫಲ ನಷ್ಟ ಎಂದೇ ಹೇಳಬೇಕಾಗುತ್ತದೆ. ಮತ್ತೊಂದೆಡೆ ಇದೇ ವಂಶವು, ಅಂದರೆ ಜವಾಹರ್ ಲಾಲ್ ನೆಹರು ಪ್ರಥಮ ಪ್ರಧಾನಿಯಾಗಿ (ಕಾಂಗ್ರೇಸ್ ನೇತೃತ್ವ) ದೇಶದಲ್ಲಿ ಅಧಿಕಾರ ಸ್ವೀಕರಿಸುವಾಗ ಕರ್ಕದಲ್ಲೇ ಶನಿ ಇತ್ತು. ಈಗ ಆಗಿನ ಸ್ಥಿತಿಗೆ ಶನಿಯಿಂದ ಶನಿಯು ಅಷ್ಟಮದಲ್ಲಿದೆ. ಇಂಥ ಸ್ಥಿತಿಯಲ್ಲಿ ಅಧಿಕಾರ ಚುಕ್ಕಾಣಿ ಸಿಗುತ್ತದೆ ಎಂದು ಹೇಳುವುದು ಶಾಸ್ತ್ರಕ್ಕೆ ವಿರೋಧವಾದಂತೆಯೇ ಆಗುತ್ತದೆ.

ಹೀಗಿದ್ದಾಗ ಈ ಪಕ್ಷದ ಪ್ರತಿಸ್ಪರ್ಧಿ ಪಕ್ಷಕ್ಕೆ (ಒಕ್ಕೂಟಕ್ಕೆ) ವಿಜಯ ಮಾಲೆ ಲಭಿಸಲೇ ಬೇಕು. ಒಂದು ವೇಳೆ ಈ ಪಕ್ಷದಲ್ಲೇ (INDIA) ಬಲಿಷ್ಟ ಜಾತಕದ ಅಭ್ಯರ್ಥಿಯನ್ನು ಪ್ರಧಾನಮಂತ್ರಿ ಹುದ್ದೆಗೆ ಘೋಷಣೆ ಮಾಡಿದ್ದರೆ ಅದು ಬೇರೆ ಮಾತು. ಸದ್ಯಕ್ಕೆ ಹಾಗೇನೂ ಘೋಷಣೆ ಆಗಿಲ್ಲ.

ಕೊನೆಯದಾಗಿ ಒಂದು ಮಾತು: ಜ್ಯೋತಿಷ್ಯದಲ್ಲಿ ಶಕುನಗಳು ಬಹಳ ಮುಖ್ಯವಾಗುತ್ತದೆ. ಅದೇ ರೀತಿ ಕೆಲವು ಸುಳಿವು- ಸೂಚನೆ ಹಾಗೂ ಲಕ್ಷಣಗಳನ್ನು ಸಹ ಗಮನಿಸಬೇಕಾಗುತ್ತದೆ. ಆರಂಭದಲ್ಲೇ ಹೇಳಿದಂತೆ, ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಪಾಲಿಗೆ ಈ ಸದ್ಯಕ್ಕೆ ಶ್ರೇಷ್ಠರೂ- ಜೇಷ್ಠರೂ ಆಗಿರುತ್ತಾರೆ. ಸ್ವತಃ ಇವರೇ, “ಬಿಜೆಪಿಗೆ 400 ಸೀಟು” ಬರುತ್ತದೆ ಎಂಬ ನಿರೀಕ್ಷೆಯಲ್ಲಿ ತೇಲುತ್ತಿದೆ ಎಂದು ಸಂಸತ್ತಿನ ಒಳಗೆ ಹೇಳಿದ್ದಾರೆ. ಇದು ಅವರು ಹೀಯಾಳಿಸುವ- ಮೂದಲಿಸುವ ಅಥವಾ ಛೇಡಿಸುವ ಧ್ವನಿಯಲ್ಲೇ ಹೇಳಿರಬಹುದು. ಆದರೆ ಸಮಯ- ಸಂದರ್ಭ ನೋಡುವಾಗ, “ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ” ಎಂಬುದು ಸೂಚನೆ ನೀಡಿದಂತಾಗುತ್ತದೆ.

ರಾಹುಲ್ ಗಾಂಧಿ ಅವರಿಗೆ ಭಾವನಾತ್ಮಕ ಸಂಘರ್ಷಗಳು ಬಹಳ ಹೆಚ್ಚಾಗುವ ಸಮಯ ಇನ್ನು ಒಂದು ವರ್ಷದ ಅವಧಿಗೆ ಜಾಸ್ತಿ ಆಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿಯ ಗೆಲುವು ಅಥವಾ ಸೋಲು ಇರುವುದು ಮಾನಸಿಕ ಸ್ಥೈರ್ಯದಲ್ಲಿ. ವೈಯಕ್ತಿಕ ಬದುಕಿನಲ್ಲಿ ನಡೆಯಬಹುದಾದ ಕೆಲವು ಘಟನೆಗಳು ಅವರನ್ನು ಅಧೀರರನ್ನಾಗಿ ಮಾಡಬಹುದು. ಇನ್ನು “ಇಂಡಿಯಾ” ಹಾಗೂ ಸ್ವತಃ ಕಾಂಗ್ರೆಸ್ ಛಿದ್ರವಾಗುವುದಕ್ಕೆ ಇವರ ಮಾತು ಕಾರಣವಾಗಲಿದೆ. ಕನಿಷ್ಠ ಪಕ್ಷದ ನೇತೃತ್ವ- ಹಿಡಿತವನ್ನಾದರೂ ಅವರು ಉಳಿಸಿಕೊಳ್ಳಬೇಕಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)

Published On - 11:11 am, Mon, 3 June 24