Arvind Kejriwal Horoscope: ಅರವಿಂದ್ ಕೇಜ್ರಿವಾಲ್ ಅತಿಬುದ್ಧಿವಂತ, ಆರಂಭ ಉತ್ಸಾಹಿ, ಆತುರಕ್ಕೆ ಬೆಲೆ ತೆರಬೇಕಾದೀತು

Arvind Kejriwal Astrology Prediction: ಈ ಲೇಖನದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾತಕ ವಿಶ್ಲೇಷಣೆ ಮಾಡಲಾಗಿದೆ. ಯೋಗಗಳು ಇದ್ದರೂ ಅದಕ್ಕೆ ಅಡೆತಡೆಗಳು, ಭಂಗ ತರುವಂಥ ಗ್ರಹ ಸ್ಥಿತಿ ಇದ್ದಲ್ಲಿ ವ್ಯಕ್ತಿ ಏನಾಗಬಹುದು ಎಂಬುದಕ್ಕೆ ಈ ಜಾತಕ ಪಾಠದ ರೀತಿಯಲ್ಲಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರದಲ್ಲಿ ಏನೇನಾಗುತ್ತದೆ ಎಂಬುದನ್ನು ಈ ವಿಶ್ಲೇಷಣೆ ಮೂಲಕ ತಿಳಿಯಬಹುದು.

Arvind Kejriwal Horoscope: ಅರವಿಂದ್ ಕೇಜ್ರಿವಾಲ್ ಅತಿಬುದ್ಧಿವಂತ, ಆರಂಭ ಉತ್ಸಾಹಿ, ಆತುರಕ್ಕೆ ಬೆಲೆ ತೆರಬೇಕಾದೀತು
Follow us
ಅಕ್ಷಯ್​ ಪಲ್ಲಮಜಲು​​
|

Updated on:Jun 03, 2024 | 9:55 AM

ಜ್ಯೋತಿಷ್ಯ ಎಂಬುದು ಎಂಥ ಅದ್ಭುತವಾದ ಜ್ಞಾನ, ವಿದ್ಯೆ ಎಂಬುದನ್ನು ಪ್ರತಿ ದಿನ- ಪ್ರತಿ ಕ್ಷಣ ಅನುಭವಕ್ಕೆ ಬರುವಂತೆ ಮಾಡುತ್ತಲೇ ಇರುತ್ತದೆ. ಅದೆಷ್ಟು ಥರದ ಜನರು, ಅವರ ಸಂತೋಷ- ಸಂಕಟಗಳು, ಅನುಭವಗಳು… ಇವೆಲ್ಲವನ್ನೂ ಸಾವಿರಾರು ವರ್ಷದ ಹಿಂದೆಯೇ ನಮ್ಮ ಋಷಿ- ಮುನಿಗಳು ದಾಖಲಿಸಿದ್ದಾರಲ್ಲಾ, ಅವರೆಲ್ಲರನ್ನೂ ಸ್ಮರಿ ಸುತ್ತಾ, ಅಭಿವಂದಿಸುತ್ತಾ ಈ ಲೇಖನವನ್ನು ಆರಂಭಿಸುತ್ತಿದ್ದೇನೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಜಾತಕವನ್ನು ವಿಶ್ಲೇಷಿಸುತ್ತಿದ್ದೇನೆ. ಮತ್ತೊಮ್ಮೆ ತುಂಬ ವಿನಮ್ರನಾಗಿ ನಿಮ್ಮಲ್ಲಿ ಕೇಳಿಕೊಳ್ಳುವುದಿಷ್ಟೇ; ಇದನ್ನು ಮುಕ್ತವಾಗಿ ತೆಗೆದುಕೊಳ್ಳಿ. ನನ್ನಲ್ಲಿ ಇಲ್ಲದ ಪೂರ್ವಗ್ರಹಗಳು ಲೇಖನದಲ್ಲಿ ಹುಡುಕುವುದು ವ್ಯರ್ಥ. ಆದ್ದರಿಂದ ಆರಂಭದಲ್ಲಿಯೇ ತಿಳಿಸುತ್ತೇನೆ; ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವಂಥ ಯಾವುದೇ ಅಂಶದ ವಿರುದ್ಧವಾಗಿ ಒಂದು ತುಣುಕನ್ನು ಸಹ ಇಲ್ಲಿ ಸೇರಿಸುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಜ್ಯೋತಿಷ್ಯ ಬಲ್ಲ ವ್ಯಕ್ತಿ ತನ್ನದೇ ಮನಸ್ಸಾಕ್ಷಿ ವಿರುದ್ಧವಾಗಿ, ಶಾಸ್ತ್ರ- ವಿದ್ಯೆಗೆ ವಿರುದ್ಧವಾಗಿ ಏನೂ ಹೇಳುವುದಕ್ಕೆ ಸಾಧ್ಯವಾಗದು.

ಅರವಿಂದ್ ಕೇಜ್ರಿವಾಲ್ ಅವರದು ಭರಣಿ ನಕ್ಷತ್ರ, ಮೇಷ ರಾಶಿ ಹಾಗೂ ವೃಷಭ ಲಗ್ನ. ಅವರು ರಾಜಕಾರಣಕ್ಕೆ ಬರುವ ಮುಂಚಿನ ಸನ್ನಿವೇಶವನ್ನು ನೆನಪಿಸಿಕೊಂಡು ಬಿಡೋಣ. ಇದು ನಿಮಗೂ ಗೊತ್ತಿರುತ್ತದೆ; ಯಾವುದೂ ವಿಪರೀತಕ್ಕೆ ಹೋದಾಗ ಅದನ್ನು ನಿಯಂತ್ರಿಸುವ ಭರವಸೆ ನೀಡುವವನು ಬಂದರೆ ಜನರು ಅವನನ್ನು ಇಷ್ಟಪಡುವರು. ಲೋಕಾ ಮಸೂದೆ ಜಾರಿಗಾಗಿ ಅಣ್ಣಾ ಹಜಾರೆಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವಿರುದ್ಧ ಮಾಡಿದ ಉಪವಾಸ ಸತ್ಯಾಗ್ರಹವು ತಾರಕಕ್ಕೇರಿದಾಗ ಇಡೀ ದೇಶವೇ ಅಣ್ಣಾ ಹಜಾರೆಯವರನ್ನು ನೋಡುತ್ತಿತ್ತು. ಅಧಿಕಾರ ವ್ಯಾಮೋಹ ಇಲ್ಲದ ಸಜ್ಜನ ವ್ಯಕ್ತಿ ಅಣ್ಣಾ ಹಜಾರೆ ಅವರ ಜತೆಗೆ ಹಲವು ವಿದ್ಯಾವಂತರು ಇದ್ದರು. ಅದರಲ್ಲಿ ಒಬ್ಬರು ಅರವಿಂದ ಕೇಜ್ರಿವಾಲ್.

ಯಾವ ಪಕ್ಷದ ಚುಕ್ಕಾಣಿಯನ್ನು ವಿರೋಧಿಸಿ, ತಮ್ಮ ರಾಜಕೀಯ ನೆಲೆಯನ್ನು ಕಂಡುಕೊಂಡರೋ ಈಗ ಅದೇ ಕಾಂಗ್ರೆಸ್ ಪಕ್ಷದ ಜತೆಗಿನ ಮೈತ್ರಿಕೂಟದಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಇದೆ. ವೈರುಧ್ಯಗಳು ಎಲ್ಲ ಕಡೆ ಇವೆ. ಈ ವಿಚಾರಕ್ಕೆ ಅರವಿಂದ್ ಕೇಜ್ರಿವಾಲರನ್ನು ನಿರ್ಧರಿಸುವುದು ಬೇಡ. ಈಗ ಅರವಿಂದ ಕೇಜ್ರಿವಾಲರಿಗೆ ಅಷ್ಟಮಾಧಿಪತಿ ಗುರುದಶೆಯ ಅಂತ್ಯದ ಸಮಯ. 2026ನೇ ಇಸವಿಗೆ ಈ ದಶೆಯು ಮುಗಿಯುತ್ತದೆ. ‌ನೀಗಡ ದ್ರೇಕ್ಕಾಣಾಧಿಪತಿ ಶನಿಯ ಕರ್ಮ (ಹತ್ತನೇ ಮನೆಯದು) ದೃಷ್ಟಿ ಅದೇ ದ್ರೇಕ್ಕಾಣಕ್ಕೂ ಅದೇ ಅಷ್ಟಮಾಧಿಪತಿಗೂ ಇರುವುದು ವಿಶೇಷ ಯೋಗ.

ಯಾವ ಯೋಗ? ಬಂಧನ ಯೋಗ. ಆ ನಂತರ ಅದೇ ದ್ರೇಕ್ಕಾಣಾಧಿಪತಿ ಶನಿಯ ದಶೆಯೂ ಇದೆ. ಅವರಿಗೆ ಶನಿಯು ನೀಚ- ದುರ್ಬಲನೂ ಆರುವುದರಿಂದ ಬಹಳ ಕಷ್ಟದ ಕಾಲ ಇದು. ಆರಂಭದ ದಿನಗಳಲ್ಲಿ ಅವರ ನೇತೃತ್ವದ ಪಕ್ಷಕ್ಕೆ ಭವಿಷ್ಯ ಇತ್ತು. ಆದರೆ ಅವರ ಜಾತಕದಲ್ಲಿಯೇ ಎದ್ದು ಕಾಣುವ ಅವಸರ ಸ್ವಭಾವವು ಹಲವು ಅನಾಹುತಗಳನ್ನು ಮಾಡಿವೆ. ಇನ್ನು ಈಗಿನ ಗ್ರಹಸ್ಥಿತಿ ನೋಡಿದರೆ ಬಹುತೇಕ ತಮ್ಮ ರಾಜಕೀಯ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಾರೆ ಎಂಬಂತೆ ಕಾಣುತ್ತಿದೆ.

ಇದನ್ನೂ ಓದಿ: ನರೇಂದ್ರ ಮೋದಿಗೆ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ನಿಶ್ಚಿತ; ಇದು ಅತ್ಯಂತ ಕಠಿಣ ಸವಾಲುಗಳ ಸಮಯ

ಅದು ಹೇಗೆಂದರೆ, ಚಂದ್ರ ರಾಶ್ಯಾಧಿಪತಿ (ಮೇಷ ರಾಶಿ) ಕುಜನಿಗೆ ತೃತೀಯದಲ್ಲಿ ಕೇತು ಇರುವುದರಿಂದ ಈ ವ್ಯಕ್ತಿಗೆ ವಿಪರೀತ ಆತುರ, ಅವಸರ ಎಂಬುದು ತಿಳಿಯುತ್ತದೆ. ತನಗೆ ದೊರೆಯುವ ಮಾಹಿತಿಯನ್ನು ಸಂಪೂರ್ಣವಾಗಿ ಪರಾಮರ್ಶಿಸುವುದಕ್ಕೆ ಹೋಗುವುದಿಲ್ಲ. ಅದೂ ಅಲ್ಲದೆ ಲಗ್ನಾಧಿಪ ಶುಕ್ರನ ದ್ವಿತೀಯದಲ್ಲಿ ಕೇತು ಇರುವುದರಿಂದ ಹೇಳಿದ್ದನ್ನು ಕೇಳಿಸಿಕೊಳ್ಳುವ ತಾಳ್ಮೆ ಸಹ ಇಲ್ಲದಂತೆ ಆಗುತ್ತದೆ. ಈ ವ್ಯಕ್ತಿ ಯಾವುದೇ ಕೆಲಸ ಮಾಡಿದರೂ ಆರಂಭ ಕಾಲವು ಅದ್ಭುತವಾಗಿರುತ್ತದೆ. ಜತೆಗೆ ಇವರ ಉತ್ಸಾಹ ಹಾಗೂ ಚಿಂತನೆ ಆರಂಭ ಘಟ್ಟದಲ್ಲಿ ಮಾತ್ರ ಗಮನ ಸೆಳೆಯುತ್ತದೆ. ಆ ನಂತರದಲ್ಲಿ ಅದನ್ನು ಮುನ್ನಡೆಸುವುದಕ್ಕೆ ಬೇಕಾದ ತಾಳ್ಮೆ- ಸಂಯಮ ಇವರಲ್ಲಿ ಇರುವುದಿಲ್ಲ. ಆ ಕಾರಣಕ್ಕೆ ಸೈದ್ಧಾಂತಿಕವಾಗಿ ಅರವಿಂದ್ ಕೇಜ್ರಿವಾಲ್ ಅವರ ಜತೆಗೆ ಮೈತ್ರಿ ಕಷ್ಟಸಾಧ್ಯ, ವ್ಯಕ್ತಿಗಳಿಗೆ ಸ್ನೇಹವಂತೂ ದೂರದ ಮಾತಾಯಿತು.

ಈ ರೀತಿಯ ಗ್ರಹ ಸ್ಥಿತಿ ಇರುವವರಿಗೆ ತಮ್ಮ ಸಾಧನೆಗಿಂತ ಇತರರ ವರ್ತನೆಯು ಅವಕಾಶದಂತೆ ಕಾಣುತ್ತದೆ. ಪರಿಣಾಮವನ್ನು ಲೆಕ್ಕಿಸದೆ ಅಥವಾ ನಿರ್ಲಕ್ಷಿಸಿ, ಆರೋಪ- ವಾದ- ವಾಗ್ವಾದಗಳಿಗೆ ಇವರು ಇಳಿದುಬಿಡುತ್ತಾರೆ. ತಾನು ಸದಾ ಸುದ್ದಿಯಲ್ಲಿ ಇರಬೇಕು ಎಂಬ ಇವರ ಪ್ರಯತ್ನವೂ ಕೆಲವು ಸಮಸ್ಯೆಗಳನ್ನು ತರುತ್ತದೆ.

ಈಗಿನ ಸ್ಥಿತಿಯಲ್ಲಿ ಇವರ ಲಗ್ನಾಧಿಪತಿಯ ಷಷ್ಟ (ಆರನೇ ಮನೆ) ಸ್ಥಾನ ಕೋರ್ಟು- ಋಣ ಇವನ್ನು ತೋರಿಸುತ್ತದೆ ಮತ್ತು ಚಂದ್ರನ ಕರ್ಮ ಸ್ಥಾನ (ಹತ್ತನೇ ಮನೆ), ಚಂದ್ರ ರಾಶ್ಯಾಧಿಪತಿ (ಮೇಷಕ್ಕೆ) ನೀಚತ್ವ ಆರೋಹಿ ಕುಜನ ವ್ಯವಹಾರ, ನಿವೃತ್ತಿ ಸ್ಥಾನಕ್ಕೆ (ಬಂಧನ ದ್ರೇಕ್ಕಾಣ ಇರುವ ಮಕರ ರಾಶಿ) ಗುರು ದೃಷ್ಟಿ ಇದ್ದು, ಆ ನಿರ್ದಿಷ್ಟ ಭಾವದ ವೃದ್ಧಿ ಆಗುತ್ತದೆ. ಕೆಲವೊಮ್ಮೆ ಜಾಗರೂಕರಾಗಿ ಇದ್ದರೆ ಭಾವ ವೃದ್ಧಿಯೂ ಒಳಿತನ್ನು ಮಾಡಬಹುದು. ಆದರೆ ಆರಂಭದಲ್ಲಿಯೇ ಹೇಳುತ್ತಾ ಬಂದಂತೆ ಇವರಿಗೆ ಅವಸರ, ನಿರ್ಲಕ್ಷ್ಯ ಹಾಗೂ ಕರ್ಮ ತಲ್ಲೀನತೆ ಇತ್ಯಾದಿ ಗುಣಗಳಿವೆ. ಆ ಕಾರಣಕ್ಕಾಗಿ ಕೊಟ್ಟ ಮಾತಿನಂತೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವುದಕ್ಕೆ ಆಗುತ್ತಾ ಇಲ್ಲ. ಇನ್ನು ಶನಿಯು ಉತ್ತಮವಾಗಿ ಇಲ್ಲದ ಕಾರಣಕ್ಕೆ ಮುತ್ಸದಿತನ ಸಾಲದು. ಶನಿಯು ಕೇವಲ 2° (ಡಿಗ್ರಿ) ಇರುವುದರಿಂದ ಈ ಸಮಸ್ಯೆ.

ಇದನ್ನೂ ಓದಿ: ಅಮಿತ್ ಶಾ ಪ್ರಧಾನ ಮಂತ್ರಿ ಹುದ್ದೆ ಆಕಾಂಕ್ಷಿಯೇ?

ಕೆಲವರು “ಕಾರ್ಯಾಂತೇ ನಿಷ್ಪ್ರಯೋಜಕಃ”. ಈ ಮಾತು ಹೇಳುವುದಾ್ರೆ, ಅರವಿಂದ್ ಕೇಜ್ರಿವಾಲ್ ತಾವೇ ಆಯ್ಕೆ ಮಾಡಿಕೊಳ್ಳುವ ಸನ್ನಿವೇಶ. ಯೋಗ ಎಲ್ಲರಿಗೂ ಒಮ್ಮೆಯಾದರೂ ಬರುತ್ತದೆ. ಆದರೆ ಅದರ ರಕ್ಷಣೆ, ವೃದ್ಧಿ ಮಾಡಿಕೊಳ್ಳುವುದಕ್ಕೆ ಅನುಗ್ರಹ ಬೇಕು. ಅದರ ಕೊರತೆ ಈ ಜಾತಕದಲ್ಲಿ ಕಾಣಿಸುತ್ತಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)

Published On - 9:45 am, Mon, 3 June 24