Narendra Modi Horoscope: ನರೇಂದ್ರ ಮೋದಿಗೆ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ನಿಶ್ಚಿತ; ಇದು ಅತ್ಯಂತ ಕಠಿಣ ಸವಾಲುಗಳ ಸಮಯ

Narendra Modi Astrology Prediction: ಲೋಕಸಭೆ ಚುನಾವಣೆಯ ಫಲಿತಾಂಶ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಜಾತಕ ವಿಶ್ಲೇಷಣೆಯನ್ನು ಮಾಡಲಾಗಿದೆ. ಜನ್ಮ ಜಾತಕದಲ್ಲಿನ ಗ್ರಹ ಸ್ಥಿತಿ ಹಾಗೂ ಗೋಚಾರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದ್ದು, ಭವಿಷ್ಯ ಹೇಗಿದೆ ಎಂಬುದರ ವಿವರಣೆ ನಿಮ್ಮ ಮುಂದಿದೆ, ಒಪ್ಪಿಸಿಕೊಳ್ಳಿ.

Narendra Modi Horoscope: ನರೇಂದ್ರ ಮೋದಿಗೆ ಮೂರನೇ ಅವಧಿಗೆ ಪ್ರಧಾನಿ ಹುದ್ದೆ ನಿಶ್ಚಿತ; ಇದು ಅತ್ಯಂತ ಕಠಿಣ ಸವಾಲುಗಳ ಸಮಯ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 02, 2024 | 9:30 AM

ಈ ಬಾರಿಯ ಲೋಕಸಭೆ ಚುನಾವಣೆಯ ನಂತರ ಪ್ರಧಾನಮಂತ್ರಿ ನರೇಂದ್ರ ದಾಮೋದರ್ ದಾಸ್ ಮೋದಿ (Narendra Modi) ಅವರ ಭವಿಷ್ಯ ಹೇಗಿರಲಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗುತ್ತಿದೆ. ಇದು ಜ್ಯೋತಿಷ್ಯ ಆಧಾರಿತವಾದ ವಿಶ್ಲೇಷಣೆ. ಇದಕ್ಕಾಗಿ ನರೇಂದ್ರ ಮೋದಿ ಅವರ ಜನ್ಮ ಜಾತಕದಲ್ಲಿನ ಗ್ರಹಸ್ಥಿತಿ ಹಾಗೂ ಪ್ರಮುಖ ಗ್ರಹಗಳ ಗೋಚಾರ ಸ್ಥಿತಿಯನ್ನು ಪರಿಗಣಿಸಲಾಗಿದ್ದು, ಅದರ ಮೂಲಕ ಏನು ತಿಳಿದುಕೊಳ್ಳಬಹುದು ಎಂಬುದನ್ನು ಮುಂದಕ್ಕೆ ಓದಿ. ಮೋದಿ ಅವರದು ಅನೂರಾಧಾ ನಕ್ಷತ್ರ, ವೃಶ್ಚಿಕ ರಾಶಿ ಹಾಗೂ ವೃಶ್ಚಿಕ ಲಗ್ನ. ಇನ್ನು ಈ ವರ್ಷದ ಯುಗಾದಿ ಫಲದ ಪ್ರಕಾರ, ಅಧಿಪತಿ (ರಾಜ) ಆಗಿ ಶನಿ ಮಹಾರಾಜರು ಇದ್ದಾರೆ. ಅದರಲ್ಲೂ ತನ್ನ ಮೂಲ ತ್ರಿಕೋಣದಲ್ಲಿದ್ದು (ಕುಂಭ ರಾಶಿಯಲ್ಲಿ), ಬಲಿಷ್ಠರಾಗಿದ್ದಾರೆ. ಶನಿ ಗ್ರಹದ ಗುಣ ಹೇಗೆಂದರೆ, ಜನ್ಮ ಜಾತಕದಲ್ಲಿ ಶನಿ ಗ್ರಹ ಯಾರಿಗೆ ಬಲಿಷ್ಠವೋ ಅಂಥವರ ರಕ್ಷಣೆ ಮಾಡುತ್ತಾರೆ.

ಈಗ ಅದು ಎಷ್ಟರ ಮಟ್ಟಿಗೆ ಸತ್ಯ ಸಿದ್ಧವಾದದ್ದು ಎಂಬುದನ್ನು ಉದಾಹರಣೆ ಸಹಿತ ವಿವರಿಸುತ್ತೇನೆ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಮೊದಲ ಬಾರಿಗೆ ಪದಸ್ವೀಕಾರ ಮಾಡಿದಾಗ (2014) ಶನಿಯು ತುಲಾ ರಾಶಿಯಲ್ಲಿ ಉಚ್ಚನಾಗಿ (ಶನಿಯು ತುಲಾ ರಾಶಿಯಲ್ಲಿ ಇರುವಾಗ ಉಚ್ಚ ಸ್ಥಿತಿ) ಬಲವನ್ನು ಕೊಟ್ಟ. ಈಗ ಮೂರನೆಯ ಬಾರಿ ಉಚ್ಚಕ್ಕಿಂತಲೂ ಬಲಿಷ್ಟವಾದ ಮೂಲ ತ್ರಿಕೋಣ ಕುಂಭದಲ್ಲಿ ಇದ್ದಾನೆ. ಮೋದಿ ಮೊದಲ ಬಾರಿಗೆ ಪ್ರಧಾನಿಯಾದಾಗ ತುಲಾದಲ್ಲಿ 24° (ಡಿಗ್ರಿ) ಇದ್ದ; ಉಚ್ಚ ಆರೋಹಿಯಾಗಿ. ಇನ್ನು 27° (ಡಿಗ್ರಿ) ಪರಮೋಚ್ಚ. ಈಗ ಅದೇ ಶನಿಯು ಅಂದರೆ 120° ಅಂತರದಲ್ಲಿ ಮೂಲ ತ್ರಿಕೋಣದಲ್ಲಿ ಇದ್ದಾನೆ. ಶನಿಯು ಮುತ್ಸದಿತನದ ರಾಜ. ಮೋದಿಯವರ ಜನ್ಮ ಜಾತಕದಲ್ಲಿ ಸಿಂಹ ರಾಶಿಯಲ್ಲಿ 29° (ಡಿಗ್ರಿ) ಇದ್ದು, ಮಹಾ ಚಾಣಾಕ್ಷ ಆಗಿದ್ದುದರಿಂದಲೇ ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿ, ನಂತರ ದೆಹಲಿಗೆ ತಲುಪಲು ಕಾರಣವಾಯಿತು.

ಶನಿಯೇ ರಾಜನಾಗಿರುವ ಸಂವತ್ಸರ

ಈ ವರ್ಷದ ವಿಶೇಷ ಏನೆಂದರೆ, ಅದೇ ಮೂಲ ತ್ರಿಕೋಣ ಸ್ಥಿತಿಯಲ್ಲಿ ವರ್ಷದ ಅಧಿಪತಿ ಆಗಿ ಶನಿ ಇದ್ದಾನೆ. ಇದು ಮತ್ತೊಮ್ಮೆ ಪೀಠಾರೋಹಣದ ಸೂಚನೆ. ಅಂದರೆ ಅವರಿಗೆ ಮತ್ತೆ ಪ್ರಧಾನಿ ಆಗುವ ಯೋಗ. ಸಾಮಾನ್ಯವಾಗಿಯೇ ವಿಶ್ಲೇಷಕರಿಂದ ಜನ ಸಾಮಾನ್ಯರ ತನಕ ನರೇಂದ್ರ ಮೋದಿ ಅವರು ಈ ಸಲ ಮೂರನೆಯ ಬಾರಿ ಪ್ರಧಾನ ಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಜ್ಯೋತಿಷ್ಯದ ಪ್ರಕಾರವೂ ಇದನ್ನೇ ಸೂಚಿಸುತ್ತದೆ. ಆದರೆ ಈ ಸಲದ ಆಡಳಿತ ಹೇಗಿರಬಹುದು? ಇದು ವರ್ಷ ಭವಿಷ್ಯದ ಆಧಾರದಲ್ಲಿ ವಿಶ್ಲೇಷಣೆ ಮಾಡಲಾಗಿದೆ.

ಪ್ರಾಮಾಣಿಕತೆ ಅಂತ ಬಂದಾಗ ನೂರಾ ನಲವತ್ತು ಕೋಟಿ ಜನಸಂಖ್ಯೆಯ ಈ ದೇಶದಲ್ಲಿ ಪ್ರಾಮಾಣಿಕರಿಗೆ ಏನೇನೂ ಕೊರತೆ ಇಲ್ಲ. ಆದರೆ ಒಬ್ಬ ವ್ಯಕ್ತಿಯ ಜನ್ಮ ಜಾತಕದ ಗ್ರಹ ಸ್ಥಿತಿ, ಪೂರ್ವ ಜನ್ಮದಲ್ಲಿ ಮಾಡಿರುವಂಥ ಪಾಪ- ಪುಣ್ಯಗಳ ಫಲಿತ ಹಾಗೂ ಈ ಜನ್ಮದಲ್ಲಿ ಆತನಿಗೆ ಸಿಕ್ಕಿರುವ ಸಂಸ್ಕಾರ ಹಾಗೂ ಆತ್ಮೋದ್ಧಾರದ ಮಾರ್ಗ ಇವೆಲ್ಲವೂ ಮುಖ್ಯವಾಗುತ್ತದೆ. ಮೇಲುನೋಟಕ್ಕೆ ಈ ಎಲ್ಲವೂ ಮೋದಿ ಅವರಿಗೆ ಸಿಕ್ಕಂತೆ ಕಾಣುತ್ತದೆ. ಇನ್ನು ಈ ಬಾರಿ ನರೇಂದ್ರ ಮೋದಿ ಅವರು ಗದ್ದುಗೆಗೆ ಏರಿದರೂ ಪ್ರತಿ ಕ್ಷಣವೂ ಯುದ್ಧ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಇದು ಆಂತರಿಕವಾಗಿಯೂ ಹೌದು, ಬಾಹ್ಯವಾಗಿಯೂ ಹೌದು. ಮುಂದಿನ ಮಾರ್ಚ್ ಹೊತ್ತಿಗೆ ಇದು ವಿಪರೀತಕ್ಕೆ ಹೋಗಿ ನಿಲ್ಲುತ್ತದೆ.

ಸಿಂಹಸ್ಥ ಶನಿಗೆ ಅಷ್ಟಮದಲ್ಲಿ ಗೋಚಾರ ಶನಿ

ಹೀಗೆ ಹೇಳುತ್ತಿರುವುದು ಏಕೆಂದರೆ, ನರೇಂದ್ರ ಮೋದಿ ಅವರ ಜನ್ಮ ಜಾತಕದಲ್ಲಿ ಇರುವಂಥ ಸಿಂಹಸ್ಥ ಶನಿಗೆ ಮುಂದಿನ ಮಾರ್ಚ್ ನಂತರ, ಗೋಚಾರದಲ್ಲಿ ಮೀನ ರಾಶಿಗೆ ಪ್ರವೇಶಿಸುವ ಶನಿಯು ಅಷ್ಟಮ ಸ್ಥಾನವಾಗುತ್ತದೆ. ಅಂಥ ಗ್ರಹ ಸ್ಥಿತಿ ಬಂದಾಗ ನರೇಂದ್ರ ಮೋದಿ ಅವರಿಗೆ ತಮ್ಮ ರಾಜಕೀಯ ಜೀವನದ ಬಹುದೊಡ್ಡ ಸಂಕಷ್ಟಗಳು ಎದುರಾಗುತ್ತವೆ. ಆಕ್ರಮಣಕಾರಿಯಾದ ನಿರ್ಧಾರಗಳನ್ನು ಅನಿವಾರ್ಯವಾಗಿ ತೆಗೆದುಕೊಳ್ಳಲೇ ಬೇಕಾಗುತ್ತದೆ. ಅದೆಂಥ ಸ್ಥಿತಿ ಎಂಬುದನ್ನು ಎರಡು ಯೋಗಗಳ ಉದಾಹರಣೆಯನ್ನು ನೀಡಿ, ವಿವರಿಸುತ್ತೇನೆ. ಒಂದು ಜಾತಕದಲ್ಲಿ ನೀಚಭಂಗ ರಾಜಯೋಗ ಮತ್ತು ಅಖಂಡ ಸಾಮ್ರಾಜ್ಯ ಯೋಗ ಈ ಎರಡಕ್ಕೂ ಒಂದೇ ಗ್ರಹ ಸ್ಥಿತಿ ಕಾರಣ ಆಗುತ್ತದೆ. ಹೇಗೆ ರಾಮನಿಗೆ ಸೀತೆಯನ್ನು ಪರಿತ್ಯಾಗ ಮಾಡಬೇಕಾಯಿತೋ ಮತ್ತು ಲಕ್ಷ್ಮಣನಿಗೆ ರಾಜದಂಡ ವಿಧಿಸಬೇಕಾಯಿತೋ ಅದೇ ರೀತಿಯ ಸ್ಥಿತಿ ಮೋದಿ ಅವರಿಗೆ ಬರಲಿದೆ. ಇದನ್ನು ನೀವು ಪದಶಃ ಗ್ರಹಿಸಬೇಕಿಲ್ಲ. ಸನ್ನಿವೇಶ ಅಷ್ಟು ಕಠಿಣ ಎಂಬುದನ್ನು ಹೇಳುವುದಕ್ಕಾಗಿ ಈ ಉದಾಹರಣೆಯನ್ನು ನೀಡಬೇಕಾಯಿತು. ಅಂಥ ಕಠಿಣ ಸವಾಲನ್ನು ಮೀರಿದ್ದರಿಂದಲೇ ಶ್ರೀರಾಮನು ದೈವತ್ವಕ್ಕೆ ಏರಿದ್ದು.

ಇಲ್ಲಿ ಒಂದು ಸಾಲಿನ ಸುಳಿವು ನೀಡುತ್ತೇನೆ: ಈ ದೇಶದಲ್ಲಿ ಬಹುತೇಕ ಕುಟುಂಬ ರಾಜಕಾರಣದ ಅಂತ್ಯವಾಗುತ್ತದೆ. ಅಂದರೆ ಕುಟುಂಬಗಳ ಹಿಡಿತದಲ್ಲಿ ಯಾವೆಲ್ಲ ರಾಜಕೀಯ ಪಕ್ಷಗಳಿವೆ, ಅವುಗಳಿಗೆ ಬಂಧ ಮುಕ್ತಿ. ಇಂಥ ಸನ್ನಿವೇಶದಲ್ಲಿ ತಿಕ್ಕಾಟ- ಅಪಪ್ರಚಾರ, ಹೋರಾಟ- ಹಾರಾಟಗಳಿಗೆ ಸಾಕ್ಷಿ ಆಗಬೇಕಾಗುತ್ತದೆ. ಇದನ್ನು ವೈಯಕ್ತಿಕ ಮಟ್ಟದಲ್ಲಿ ನರೇಂದ್ರ ಮೋದಿಯವರು ಎದುರಿಸಬೇಕಾಗುತ್ತದೆ. ಕೆಲವು ಕುಟುಂಬಗಳು ರಾಜಕೀಯದಿಂದಲೇ ನಿವೃತ್ತಿಯಾಗುವ ಸೂಚನೆ ಇದೆ.

ಇದನ್ನೂ ಓದಿ: ಜೂನ್ ಮಾಸ ಭವಿಷ್ಯ, ಈ ರಾಶಿಗಳಿಗೆ ಉತ್ತಮ ಫಲ, ಕೆಲವರಿಗೆ ಮಧ್ಯಮ, ಅಧಮ ಫಲವು ಪ್ರಾಪ್ತವಾಗಲಿದೆ

ಗುರು ಬಲ ದೊರೆಯುತ್ತದೆ

ಗೋಚಾರದ ರೀತಿಯಲ್ಲಿ ಹೇಗಿದೆ ಅಂತ ಹೇಳುವುದಾದರೆ, ನರೇಂದ್ರ ಮೋದಿಗೆ ಲಗ್ನ, ಲಗ್ನಾಧಿಪತಿ, ಚಂದ್ರ ಕ್ಷೇತ್ರಕ್ಕೆ ನಿವೃತ್ತಿ ಸ್ಥಾನ, ಜನಪದ ಕ್ಷೇತ್ರ ಸಪ್ತಮದಲ್ಲಿ ಪೂರ್ಣ ಗುರುಬಲ ನೀಡುತ್ತಾನೆ. ಇನ್ನು ಹನ್ನೊಂದನೇ ಮನೆಯ ವೀಕ್ಷಣೆಯಿಂದಾಗಿ ಅವರಿಗೆ ಮತ್ತೆ ಪ್ರಧಾನಿ ಪಟ್ಟ ನಿಶ್ಚಿತ. ಇನ್ನು ತೃತೀಯಕ್ಕೆ ನವಮ ದೃಷ್ಟಿ. ತೃತೀಯವು (ಮಕರ 10°) ಶನಿಯ ನೀಗಡ (ಬಂಧನ) ದ್ರೇಕ್ಕಾಣ ಆಗಿರುವುದರಿಂದ ಕೆಲವರನ್ನು ಸೆರೆಮನೆಗೆ ಕಳುಹಿಸುವ ಸಮಯ ಇದಾಗಿರುತ್ತದೆ. ಇದು ಸೆರೆಮನೆಗೆ ಹೋಗುವ ಯೋಗವೂ ಹೌದು. ಆದರೆ ಮೋದಿಗೆ ನೀಗಡ ದ್ರೇಕ್ಕಾಣಾಧಿಪತಿ ಬಲಿಷ್ಠ ದ್ವಿತೀಯ, ಪಂಚಮಾಧಿಪತಿ, ಅಖಂಡ ಸಾಮ್ರಾಜ್ಯ ಯೋಗದ ಗುರುವಿನ ವೀಕ್ಷಣೆ ಇರುವುದರಿಂದ ಸೆರೆಮನೆಗೆ ತಳ್ಳುವ ಯೋಗವಾಗುತ್ತದೆ.

ಜನ್ಮ ಜಾತಕದಲ್ಲಿನ ದಶಾ ರೀತಿ ನೋಡುವುದಾದರೆ ರುಚಕ ಮಹಾಪುರುಷ ಯೋಗದ ಕುಜ ದಶೆ, ಅದರಲ್ಲಿ ಬಲಿಷ್ಠ ಶನಿ ಭುಕ್ತಿ 2025ರ ವರೆಗಿದೆ. ಇದು ಕೂಡಾ ಬಲಿಷ್ಠವೇ. ಇವರಿಗೆ 1985ರಿಂದ 2005ರ ವರೆಗೆ ಶುಕ್ರದಶೆ ನಡೆಯುತ್ತಿದ್ದಾಗ ವಿಪರೀತ ಕಷ್ಟಗಳಿತ್ತು. ಯಾಕೆಂದರೆ ಶುಕ್ರನು ಲಗ್ನ ಮತ್ತು ಚಂದ್ರರಾಶಿಗೆ ಖರದ್ರೇಕ್ಕಾಣಾಧಿಪತಿ ಆಗಿದ್ದ. ಇದು ಮರಣ ಸಮಾನ ಯೋಗ. ಅಲ್ಲಿಯೂ ಇವರು ಬಚಾವಾಗಿ ಬಂದು, ಇಷ್ಟು ದೊಡ್ಡ ಹುದ್ದೆಗೇರಿ, ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ ಎಂದರೆ ಅದು ದೇವರ ದಯೆಯಿಂದ ಮಾತ್ರ. ಆ ಅಖಂಡ ಸಾಮ್ರಾಜ್ಯ ಯೋಗ ಮರು ಜೀವ ನೀಡಿದೆ. ಮುಂದೆ ಸವಾಲುಗಳಿವೆ, ದೇವರ ದಯೆ ಇದ್ದರೆ ಖಂಡಿತಾ ಅವುಗಳನ್ನು ಮೀರುತ್ತಾರೆ. ಇದು ಮೋದಿಗೆ ಎದುರಾದ ಕಷ್ಟವಲ್ಲ, ತಪ್ಪು ದಾರಿಯಲ್ಲಿ ಇರುವವರಿಗೆ ಸಂಕಷ್ಟ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)